ವಸುದೈವ ಕುಟುಂಬಕಂ - ಇಡೀ ವಿಶ್ವವೇ ಒಂದು ಕುಟುಂಬ - ಇದು ಇತ್ತೀಚೆಗೆ ಪ್ರಾಮುಖ್ಯತೆ ಪಡೆದುಕೊಳ್ಳುತ್ತಿರುವ ವಾಕ್ಯ. ಮಹಾ ಉಪನಿಷತ್ತಿನ ಈ ವಾಕ್ಯ, ಭಾರತದ ಸಾಮಾನ್ಯ ಜನತೆಯಿಂದ ಹಿಡಿದು ಅಂತರಾಷ್ಟ್ರೀಯ ಮಟ್ಟದವರೆಗೂ ಪ್ರಚಲಿತದಲ್ಲಿದೆ. ಆರ್ಥಿಕವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಎಲ್ಲರೂ ಒಂದಾಗಿ ಬಾಳೋಣವೆಂದು ದೇಶ-ವಿದೇಶಗಳ ನಾಯಕರು ಅಂತರಾಷ್ಟ್ರಿಯ ಸಭೆಗಳಲ್ಲಿ ಹೇಳುತ್ತಿದ್ದಾರೆ. ಆದರೆ ಆ ಎರಡು ಪದಗಳ ಹಿಂದಿನ ಮತ್ತೆರಡು ಪದಗಳು ಯಾರಿಗೂ ಬೇಕಿಲ್ಲ. “ಉದಾರ ಚರಿತಾನಾಂತು ವಸುದೈವ ಕುಟುಂಬಕಂ” - ಉದಾರ ಮನಸ್ಸಿದ್ದವನಿಗೆ ಇಡೀ ವಿಶ್ವವೇ ಒಂದು ಕುಟುಂಬ - ಇದು ಪೂರ್ಣವಾಕ್ಯ. ಉದಾರತೆಯಿಲ್ಲದಿದ್ದರೆ ೧೦ ಮಂದಿಯ ಗುಂಪು ಕೂಡ ಕುಟುಂಬವಾಗುವುದಿಲ್ಲ. ಇದು ಯಾರಿಗೂ ತೋಚಿದಂತಿಲ್ಲ. ಪ್ರಾಣಿ ಸಂರಕ್ಷಣೆ, ಪರಿಸರ ಸಂರಕ್ಷಣೆಗಳಂತಹ ವಿಷಯಗಳ ಕುರಿತಾಗಿ - ಅವನ್ನು ಪಾಲಿಸದಿದ್ದರೂ - ಅನೇಕ ಒಪ್ಪಂದಗಳನ್ನು ಮಾಡಿಕೊಂಡಿದ್ದೇವೆ. ಮಾನವ ಸಂರಕ್ಷಣೆಗಾಗಿ ವಿಶ್ವಸಂಸ್ಥೆ ಎಂದು ಕರೆಸಿಕೊಳ್ಳುವ ಸಂಘದ ಒಂದು ಮುಖ್ಯ ಅಂಗವೇ ಇದೆ. ಆದರೆ ಸುಮಾರು ೬ ವರ್ಷಗಳಿಂದ ಮಧ್ಯ ಪ್ರಾಚ್ಯ ದೇಶಗಳಲ್ಲಿ ನಡೆದ, ನಡೆಯುತ್ತಿರುವ ನರಮೇಧ ವಿಶ್ವಸಂಸ್ಥೆಯಲ್ಲಿರುವ “ವಿಶ್ವವನ್ನು” ಎತ್ತಿತೋರಿಸುತ್ತಿದೆ. ಟ್ಯುನೇಶಿಯಾ ದೇಶದಲ್ಲಿ ಮಾನವ ಹಕ್ಕು, ಪ್ರಜಾಪ್ರಭುತ್ವ, ಸ್ವಾತಂತ್ರಗಳಿಗಾಗಿ ಅಲ್ಲಿನ ರಾಜನ ವಿರುದ್ಧ ೨೦೧೦ರಲ್ಲಿ ಆರಂಭವಾದ ಪ್ರಜಾದಂಗೆಗಳು, ಇಜಿಪ್ಟ್, ಇರಾಕ್, ಲಿಬಿಯಾ, ಯೆಮೆನ್, ಬಹ್ರೇನ್ ಮುಂತಾದ ದೇಶಗಳಿಗೆ ಹರಡಿ, ಇಂದು ಸಿರಿಯಾದಲ್ಲಿ ಮಾರಣಹೋಮ ಮಾಡುತ್ತಿದೆ. ಅಲ್ಲಿನ ಘಟನೆಗಳನ್ನು ಸ್ಥೂಲವಾಗಿ ನೋಡೋಣ.
ನಿರುದ್ಯೋಗ, ಕಂಗೆಟ್ಟ ಆರ್ಥಿಕ ಪರಿಸ್ಥಿತಿ, ಸರ್ಕಾರದ ಭ್ರಷ್ಟಾಚಾರ, ದುರಾಡಳಿತಗಳ ವಿರುದ್ಧ ೨೦೧೦ರ ಡಿಸೆಂಬರಿನಲ್ಲಿ ಟ್ಯುನೇಶಿಯಾ ದೇಶದಲ್ಲಿನ ಯುವಜನತೆ ದಂಗೆಯೇಳುತ್ತದೆ. ಆ ದಂಗೆಗೆ ಹೆದರಿ ಅಲ್ಲಿನ ರಾಜ ರಾಜೀನಾಮೆ ನಿಡುತ್ತಾನೆ. ಅನಂತರ ಅಲ್ಲಿ ಪ್ರಜಾಪ್ರಭುತ್ವ ವ್ವವಸ್ಥೆ ಶುರುವಾಗುತ್ತದೆ. ಇದನ್ನೇ ಮಾದರಿಯಾಗಿಕೊಂಡು ಸಿರಿಯಾದ ಅಸ್ಸಾದ್, ಇಜಿಪ್ಟ್‌ನ ಹೊಸ್ನಿ ಮುಬಾರಕ್, ಲಿಬಿಯಾದ ಮೊಹಮ್ಮದ್ ಗಡಾಫಿ, ಯೆಮನ್ನಿನ ಅಲಿ ಅಬ್ದುಲ್ಲ ಸಲೇಹ್ ಸರ್ಕಾರಗಳ ವಿರುದ್ಧ ಅಲ್ಲಲ್ಲಿನ ಜನಗಳು ತಿರುಗಿಬೀಳುತ್ತಾರೆ. ಸುಮಾರು ದಿನಗಳ ಪ್ರತಿಭಟನೆಗಳ ನಂತರ ಆ ದೇಶಗಳ ಸರ್ವಾಧಿಕಾರಿಗಳು ರಾಜೀನಾಮೆ ನೀಡುತ್ತಾರಾದರೂ, ನೀಡುವ ಮುನ್ನ ನೂರಾರು ಜನರ ಹತ್ಯೆ ಮಾಡುತ್ತಾರೆ. ಮುಂದೆ ಅದು ಸಿರಿಯಾಕ್ಕೂ ಹರಡುತ್ತದೆ. ಸಿರಿಯಾ ದೇಶದ ನಾಗರೀಕ ಜೀವನ ಸಂಪೂರ್ಣ ಹದಗೆಡುತ್ತದೆ. ೨೦೧೧ನೇ ಮಾರ್ಚ್ ತಿಂಗಳಿನಲ್ಲಿ ಸಿರಿಯಾ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ೧೫ ಮಕ್ಕಳನ್ನು ಆ ಸರ್ಕಾರ ಬಂಧಿಸುವುದೇ ಅಲ್ಲದೆ ಅವರಿಗೆ ಚಿತ್ರಹಿಂಸೆ ನಿಡುತ್ತದೆ. ಇದರ ವಿರುದ್ಧ ಸಿರಿಯಾದ ಅನೇಕ ನಗರಗಳಲ್ಲಿ ಜನ ಪ್ರತಿಭಟನೆಗೆ ಧುಮುಕುತ್ತಾರೆ. ಕೆಲವೇ ದಿನಗಳಲ್ಲಿ ಆ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿ ಅನೇಕ ಜನರ ಪ್ರಾಣಹಾನಿಯಾಗುತ್ತದೆ. ಸಿರಿಯಾ ಸರ್ಕಾರ ಪ್ರತಿಭಟನೆ ಹತ್ತಿಕ್ಕಲು ಸೇನೆ ಬಳಸುತ್ತದೆ. ೨೦೧೨ರ ವೇಳೆಗೆ ವಿಶ್ವಸಂಸ್ಥೆ ಸಿರಿಯಾದಲ್ಲಿನ ಪರಿಸ್ಥಿತಿಯನ್ನು ನಾಗರೀಕ ಕದನವೆಂದು ಘೋಷಿಸುತ್ತದೆ. ಬರುವ ದಿನಗಳಲ್ಲಿ ಸಿರಿಯಾದ ಪರಿಸ್ಥಿತಿ ನಾಗರೀಕ ಕದನದಿಂದ ಸೂಫಿ ಸರ್ಕಾರ ಮತ್ತು ಬಹುಸಂಖ್ಯಾತ ಸನ್ನಿ ಪಂಗಡಗಳ ನಡುವಿನ ಕದನವಾಗಿ ಮಾರ್ಪಡುತ್ತದೆ. ಸನ್ನಿ ಪಂಗಡ ದೇಶಗಳಾದ ಸೌದಿ ಅರೇಬಿಯಾ, ಟರ್ಕಿ ಮತ್ತು ಕತಾರ ದೇಶಗಳ ಜತೆಗೆ ಅಮೇರಿಕ ಸಿರಿಯಾದ ಸನ್ನಿ ಉಗ್ರಗಾಮಿಗಳಿಗೆ ಬೆಂಬಲ ಸೂಚಿಸಿದರೆ, ಇರಾನ್ ಮತ್ತು ರಷ್ಯಾ ದೇಶಗಳು ಸಿರಿಯಾ ಸರ್ಕಾರಕ್ಕೆ ಬೆಂಬಲ ನಿಡುತ್ತವೆ. ಸಿರಿಯಾದ ಪರಿಸ್ಥಿತಿಯನ್ನು ತನ್ನ ಲಾಭಕ್ಕಾಗಿ ಬಳಸಿಕೊಂಡ ಆಲ್ ಖೈದದಂತಹ ಭಯೋತ್ಪಾದಕ ಸಂಘಟನೆಗಳು ಸನ್ನಿ ಪ್ರತ್ಯೇಕ ರಾಷ್ಟ್ರಕ್ಕೆ ಒತ್ತಾಯಿಸಿ ಪ್ರತಿಭಟನೆಯ ನೆಪದಲ್ಲಿ ಜನರ ಮಾರಣ ಹೋಮ ಶುರುಮಾಡುತ್ತದೆ. ಅದೇ ಮುಂದೆ “ಐಸಿಸ್” ಎಂಬ ಪ್ರತ್ಯೇಕ ಸಂಘಟನೆಯಾಗುತ್ತದೆ. ಅಂತರಾಷ್ಟೀಯ ಬೆಂಬಲ ಆಯುಧಗಳ ಪೂರೈಕೆಯನ್ನು ಸುಲಭಮಾಡುತ್ತದೆ. ಅಲ್ಲಿಗೆ ಆಧುನಿಕ ಜಗತ್ತಿನ ಅತ್ಯಂತ ಕ್ರೂರ ದಿನಗಳ ಶಕೆ ಆರಂಭವಾಗುತ್ತದೆ. ಐಸಿಸ್ ಸಂಘಟನೆ ಜನರನ್ನು ಹಿಂಸಿಸಿ ಕೊಲ್ಲವುದೇ ಅಲ್ಲದೆ ಅದರ ವೀಡಿಯೋ ಚಿತ್ರೀಕರಣ ಮಾಡಿ ಸಾಮಾಜಿಕ ತಾಣಗಳಲ್ಲಿ ಹರಿಬಿಡುತ್ತದೆ. ಒಂದು ಕಡೆ ಸರ್ಕಾರ, ಮತ್ತೊಂದು ಕಡೆ ಭಯೋತ್ಪಾದಕರು - ಇವರ ನಡುವೆ ಸಿರಿಯಾ ದೇಶದ ಸಾಮಾನ್ಯ ಜನತೆ ನಲುಗಿಹೋಗುತ್ತದೆ. ಸಿರಿಯಾದ ಅರ್ಧದಷ್ಟು ಜನ ದೇಶದಿಂದ ಹೊರಹೋಗುತ್ತದೆ. ಸಿರಿಯಾದಲ್ಲಿ ಇನ್ನೂ ಅರಾಜಕತೆ ನಡೆಯುತ್ತಲೇ ಇದೆ.
ಈ ೫-೬ ವರ್ಷಗಳ ಮಧ್ಯ ಪ್ರಾಚ್ಯದ ಪರಿಸ್ಥಿತಿ ನಮ್ಮ ವಸುದೈವ ಕುಟುಂಬದ ಕ್ರೂರ ಮುಖದ ಪರಿಚಯ ಮಾಡಿಕೊಡುತ್ತದೆ. ಸುಮಾರು ೪,೫೦,೦೦೦ ಕ್ಕಿಂತಲೂ ಹೆಚ್ಚು ಜನರನ್ನು ಬಲಿ ಪಡೆದ ಈ ಘಟನೆಗಳಿಗೆ ಕಾರಣ ಯಾರು? ೯೯ರಷ್ಟು ದೇಶಗಳು ಅನುಕಂಪ ಸೂಚಿಸಿ ಕಳಚಿಕೊಂಡರೆ, ಅಮೇರಿಕಾ, ರಷ್ಯಾ, ಸೌದಿ ಅರೇಬಿಯಾ, ಫ್ರಾನ್ಸ್ ನಂತಹ ರಾಷ್ಟ್ರಗಳು ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ಬೆಂಬಲ ಸೊಚಿಸುತ್ತವೆ. ಕದನಕ್ಕೆ ಬೆಂಬಲ ಸೂಚಿಸುವ ಬದಲು ತಮ್ಮ ಶಕ್ತಿಯನ್ನು ಉಪಯೋಗಿಸಿ ಶಾಂತಿಗೆ ಒತ್ತುಕೊಟ್ಟಿದ್ದರೆ ಅದೆಷ್ಟು ಜನರ ಪ್ರಾಣ ಉಳಿಯುತ್ತಿತ್ತೋ. ಒಂದು ಉಗ್ರಗಾಮಿ ಸಂಘಟನೆಯ ಉಗಮವೇ ನಿಲ್ಲುತ್ತಿತ್ತು. ಆದರೆ ಆ ದೇಶಗಳು ಆರ್ಥಿಕ ಲಾಭವಿಲ್ಲದ ಸಿರಿಯಾ, ಲಿಬಿಯಾದಂತಹ ದೇಶಗಳಲ್ಲಿ ತಮ್ಮ ಪ್ರಭುತ್ವ ಸ್ಥಾಪಿಸುವುದಕಷ್ಟೇ ಪ್ರಯತ್ನ ಪಟ್ಟವು. ನೋಬೆಲ್ ಶಾಂತಿ ಪುರಸ್ಕಾರ ಕೊಡುವ ಅಧಿಕಾರ ಪಡೆದ ನಾರ್ವೆ, ಅಮೇರಿಕಾದ ಅಧ್ಯಕ್ಷರಿಗೆ ಆ ಪ್ರಶಸ್ತಿ ನೀಡುತ್ತದೆ. ನಾರ್ವೆ ಪ್ರಜೆಯೊಬ್ಬ ಈ ಘಟನೆಯನ್ನು ತನ್ನ ದೇಶದ ಕರಾಳ ಘಟನೆಯೆಂದು ಬರೆಯುತ್ತಾನೆ. ಲಕ್ಷಾಂತರ ನಿರಾಶ್ರಿತರಿಗೆ ಅಷ್ಟೇನು ಸದೃಢವಲ್ಲದ ದೇಶಗಳಾದ ಜೋರ್ಡಾನ್, ಟರ್ಕಿಗಳು ಆಶ್ರಯ ನೀಡಿದರೆ, ಯೂರೋಪಿನ ಬಲಾಢ್ಯ ದೇಶಗಳು ಅವರನ್ನು ಹೊರದಬ್ಬುತ್ತವೆ.
ಈ ಎಲ್ಲಾ ಘಟನೆಗಳು ಪ್ರಸ್ತುತ ಪ್ರಪಂಚದ ತೊಟ್ಟಿಲು ತೂಗಿ ಮಗು ಜಿಗುಟುವ ವ್ಯಕ್ತಿತ್ವದ ಪರಿಚಯ ಮಾಡಿಕೊಡುತ್ತವೆ. ವಿಜ್ಞಾನ ತಂತ್ರಜ್ಞಾನಗಳು ಎಷ್ಟೇ ಮುಂದುವರಿದಿದ್ದರೂ ರಾಜಕೀಯದ ಪ್ರಾಬಲ್ಯವೇ ನಿರ್ಣಾಯಕ ಎಂಬುದನ್ನು ಎತ್ತಿ ತೋರಿಸುತ್ತದೆ. ರಾಷ್ಟ್ರಗಳಿಗೆ ಹಣ, ಅಧಿಕಾರಗಳೇ ಮುಖ್ಯ; ಶಾಂತಿ, ಸುವ್ಯವಸ್ಥೆ, ಅಭಿವೃದ್ಧಿಗಳಲ್ಲ ಎಂಬುದಕ್ಕೆ ಮಧ್ಯ ಪ್ರಾಚ್ಯದ ಘಟನೆಗಳೇ ಸಾಕ್ಷಿ.
ಇದು ಕೇವಲ ರಾಷ್ಟ್ರಗಳಿಗಷ್ಟೇ ಅಲ್ಲ, ಮನುಷ್ಯರಿಗೂ ಅನ್ವಯವಾಗುತ್ತದೆ. ಒಂದು ಜನ ಜೀವನದ ಅಭಿವೃದ್ಧಿ ಆ ಜನರ ಕಠಿಣ ಪರಿಶ್ರಮದ ಜತೆಗೆ ಅವರ ನೈತಿಕತೆಯ ಮೇಲೂ ಅವಲಂಬಿತವಾಗುತ್ತದೆ. ಭ್ರಷ್ಟಾಚಾರ ನಿರ್ಮೂಲನೆಗಾಗಿ ಸರ್ಕಾರ ಯೋಜನೆ ತಂದರೆ, ಅದನ್ನು ತಮ್ಮ ಸ್ವಂತ ಲಾಭಕ್ಕಾಗಿ ಉಪಯೋಗಿಸುವ ಜನರಿರುವವರೆಗೂ ಅಭಿವೃದ್ಧಿ ಸಾಧ್ಯವಿಲ್ಲ!