ಪ್ರತಿವರ್ಷ ನವೆಂಬರ ತಿಂಗಳಿನ ಮೊದಲ ದಿನವನ್ನು ಕರ್ನಾಟಕದಾದ್ಯಂತ ಕನ್ನಡ ರಾಜ್ಯೋತ್ಸವವೆಂದು ಆಚರಿಸುತ್ತೇವೆ. ಈ ದಿನ ಕರ್ನಾಟಕದ ಉದಯವಾಯಿತು ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಕರ್ನಾಟಕ ಉದಯವಾಯಿತು ಎಂದರೇನು? ಅಂದಿನವರೆಗೂ ಅದು ಎಲ್ಲಿತ್ತು? ನಾವು ಇಂದು ಕರ್ನಾಟಕ ಎಂದು ಕರೆಯುತ್ತಿರುವ ರಾಜ್ಯದ ಹಿನ್ನಲೆಯೇನು? ನೋಡೋಣ.
ಕನ್ನಡ ನಾಡಿನ ಭವ್ಯ ಸಾಮ್ರಾಜ್ಯಗಳಲ್ಲೊಂದಾದ ವಿಜಯನಗರದ ಪತನಾನಂತರ ಕನ್ನಡ ಭಾಷಿಕರು ಹಂಚಿಹೋದರು. ಬಿಜಾಪುರದ ಸುಲ್ತಾನರು, ಮರಾಠರು, ಹೈದರಾಬಾದಿನ ನಿಜಾಮರು, ಶ್ರೀರಂಗಪಟ್ಟಣದ ಸುಲ್ತಾನರು, ಕೊಡಗಿನ ನಾಯಕರು ವಿವಿಧ ಭಾಗಗಳ ಕನ್ನಡಿಗರನ್ನು ಆಳಿದರು. ಬ್ರಿಟೀಷರ ಅಗಮನಾನಂತರ ಅವು ಬಾಂಬೆ, ಮದರಾಸು, ಹೈದರಾಬಾದು, ಮೈಸೂರು, ಕೊಡಗುಗಳಾದವು. ಮೈಸೂರು, ಹೈದರಾಬಾದು ಮತ್ತು ಕೊಡಗುಗಳು ಪ್ರತ್ಯೇಕ ಸಂಸ್ಥಾನಗಳಾದರೆ ಬಾಂಬೆ ಮತ್ತು ಮದರಾಸು ಬ್ರಿಟೀಷರ ನೇರ ಆಳ್ವಿಕೆಯಲ್ಲಿದ್ದವು.
೧೯ನೇ ಶತಮಾನದ ಕೊನೆಯ ವರ್ಷಗಳಲ್ಲಿ ಭಾರತದಲ್ಲಿ ಆರಂಭವಾದ ರಾಷ್ಟೀಯ ಪರಿಕಲ್ಪನೆಗಳು ಕನ್ನಡಿಗರಿಗೂ ಹಬ್ಬಿ ಕರ್ನಾಟಕ ಪ್ರಾದೇಶಿಕ ಕಾಂಗ್ರೆಸ್ಸಿನ ಉದಯವಾಯಿತು. ಅದಕ್ಕೂ ಮುಂಚೆ ೧೮೯೦ರಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಗಳನ್ನು ಕಾಪಾಡಲು ರಾವ್ ಬಹುದ್ದೂ್ ದೇಶಪಾಂಡೆಯವರ ಮುಂದಾಳತ್ವದಲ್ಲಿ ಬಾಂಬೆ ಪ್ರಾಂತ್ಯದ ಧಾರವಾಡದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘವು ಸ್ಥಾಪಿಸಲ್ಪಟ್ಟಿತು. ಇದೇ ಸಂಘ ಮುಂದೆ ಕರ್ನಾಟಕ ಏಕೀಕರಣದಲ್ಲಿ ಪ್ರಮುಖ ಪಾತ್ರವನ್ನು ವಹಿಸಿತು.
ಕನ್ನಡಿಗರ ಏಕೀಕರಣ ಚಳುವಳಿಯಲ್ಲಿ ಮೈಸೂರಿಗಿಂತಲೂ ಬಾಂಬೆ ಪ್ರಾಂತ್ಯದ ಕನ್ನಡಿಗರು ಮುಖ್ಯ ಪಾತ್ರ ವಹಿಸಿದರು. ಅವರಲ್ಲಿ ಮುಂಚೂಣಿಯ ಹೆಸರು ಧಾರವಾಡದ ಆಲೂರು ವೆಂಕಟರಾಯರು. ಕನ್ನಡ ವಿದ್ಯಾವರ್ಧಕ ಸಂಘವನ್ನು ಕನ್ನಡ ಏಕೀಕರಣ ಸಮಿತಿಯನ್ನಾಗಿ ಮಾರ್ಪಡಿಸುವಲ್ಲಿ ಆಲೂರರು ವಹಿಸಿದ ಪಾತ್ರ ತುಂಬಾ ಪ್ರಮುಖವಾದುದು. ಕನ್ನಡಿಗರ ಇತಿಹಾಸವನ್ನು ಜನರಿಗೆ ತಿಳಿಸಲು ಆಲೂರರು ೧೯೧೪ರಲ್ಲಿ ‘ಕರ್ನಾಟಕ ಗತವೈಭವ’ ಎಂಬ ಪುಸ್ತಕವನ್ನು ಬರೆದರು. ಅವರು ವಿವಿಧ ಭಾಗಗಳಲ್ಲಿ ಸಂಚರಿಸಿ ಕನ್ನಡಿಗರು ಒಂದಾಗಬೇಕಾದ ಮಹತ್ವವನ್ನು, ಅವಶ್ಯಕತೆಯನ್ನು ಸಾರಿದರು. ಅದೇ ಸಮಯದಲ್ಲಿ ಹುಯಿಲುಗೋಳ ನಾರಾಯಣರಾಯರು ಬರೆದ ‘ಉದಯವಾಗಲಿ ನಮ್ಮ ಚಲುವ ಕನ್ನಡನಾಡು’ ಹಾಡು ಕನ್ನಡಿಗರ ನಾಡಗೀತೆಯಾಯಿತು. ಮೈಸೂರಿನಲ್ಲಿ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರ ಆಸಕ್ತಿಯ ಫಲವಾಗಿ ಕರ್ನಾಟಕ ಸಾಹಿತ್ಯ ಪರಿಷತ್ತು ಆರಂಭವಾಯಿತು. ನಿಧಾನವಾಗಿ ಅದು ಬಾಂಬೆ, ಮದರಾಸು, ಹೈದರಾಬಾದು ಪ್ರಾಂತ್ಯಗಳಿಗೂ ಹರಡಿತು.
ಕರ್ನಾಟಕ ಕಾಂಗ್ರೆಸ್ಸು ಸಮಿತಿ ೧೯೨೪ರ ಅಖಿಲ ಭಾರತ ಕಾಂಗ್ರೆಸ್ಸಿನ ಸಮ್ಮೇಳನವನ್ನು ಬೆಳಗಾವಿಗೆ ತರಲು ಸಫಲವಾಯಿತು. ಮಹಾತ್ಮ ಗಾಂಧಿಯವರು ಆ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದರು. ಅದೇ ಸಮಯದಲ್ಲಿ ಮೊಟ್ಟಮೊದಲ ಬಾರಿಗೆ ಸಿದ್ದಪ್ಪ ಕಾಂಬ್ಳಿಯವರ ಅಧ್ಯಕ್ಷತೆಯಲ್ಲಿ ಕರ್ನಾಟಕ ಏಕೀಕರಣ ಸಮ್ಮೇಳನವೂ ನಡೆಯಿತು. ಈ ಸಮ್ಮೇಳದ ನಂತರ ಕಾಂಗ್ರೆಸ್ಸು ಸಮಿತಿ ಮತ್ತು ಏಕೀಕರಣ ಸಮಿತಿ ಕನ್ನಡ ಭಾಷಿಕರ ಪ್ರತ್ಯೇಕ ರಾಜ್ಯಕ್ಕಾಗಿ ಒಟ್ಟಾಗಿ ಹೋರಾಡಲು ನಿರ್ಧರಿಸಿದವು. ಸ್ವಾತಂತ್ರ್ಯಾನಂತರ ಭಾರತವನ್ನು ಭಾಷಾವಾರು ಪ್ರಾಂತಗಳಾಗಿ ವಿಂಗಡಿಸಲು ಶಿಫಾರಸ್ಸು ಮಾಡಿದ ೧೯೨೮ರ ನೆಹರೂ ಸಮಿತಿಯ ವರದಿಗೆ ಎಲ್ಲ ಕನ್ನಡಿಗರಿಂದಲೂ ಬೆಂಬಲ ವ್ಯಕ್ತವಾಯಿತು.
ಸ್ವಾತಂತ್ರ್ಯಾ ಪೂರ್ವದಲ್ಲಿ ಅಖಿಲ ಭಾರತ ಕಾಂಗ್ರೆಸ್ಸು ಕನ್ನಡಿಗರ ಪ್ರತ್ಯೇಕ ರಾಜ್ಯಕ್ಕೆ ಸಮ್ಮತಿಸಿದ್ದರೂ ಸ್ವಾತಂತ್ರ್ಯಾ ನಂತರದ ‘ಜೆ.ವಿ.ಪಿ.’ (ನೆಹರು, ವಲ್ಲಭಭಾಯಿ ಪಟೇಲ್, ಪಟ್ಟಾಭಿ ಸೀತಾರಾಮಯ್ಯ ನಮಿತಿ) ಕಮಿಟಿ ಆಂಧ್ರ ರಾಜ್ಯಕ್ಕೆ ಸಮ್ಮತಿಸಿ, ಕನ್ನಡ ರಾಜ್ಯವನ್ನು ನಿರಾಕರಿಸಿತು. ಇದರಿಂದ ಅಸಮಾಧಾನಗೊಂಡ ಕನ್ನಡಿಗರು ನಿಜಲಿಂಪ್ಪ, ಕೆಂಗಲ್ ಹನುಮಂತಯ್ಯ, ಗುಂಡಪ್ಪ ಹಾಲ್ಕೇರಿ ಮುಂತಾದವರ ಮುಂದಾಳತ್ವದಲ್ಲಿ ಕರ್ನಾಟಕ ಏಕೀಕರಣ ಪಕ್ಷವನ್ನು ಸ್ಥಾಪಿಸಿದರು. ೧೯೫೧ರ ಚುನಾವಣೆಯಲ್ಲಿ ಅನೇಕ ಸ್ಥಳಗಳಲ್ಲಿ ಕರ್ನಾಟಕ ಏಕೀಕರಣ ಪಕ್ಷ ಕಾಂಗ್ರೆಸ್ಸನ್ನು ಸೋಲಿಸಿತು. ಕನ್ನಡ ಸಾಹಿತಿಗಳೂ ಅಖಂಡ ಕರ್ನಾಟಕಕ್ಕಾಗಿ ಒತ್ತಾಯಿಸಿರು. ಏಕೀಕರಣಕ್ಕಾಗಿ ಹೆಚ್ಚಾಗುತ್ತಿದ್ದ ಚಳುವಳಿಗಳಿಗೆ ಮಣಿದು ಕೇಂದ್ರ ಸರ್ಕಾರ ಫಸಲ್ ಅಲಿ ಸಮಿತಿಯನ್ನು ನೇಮಿಸಿತು. ಕೊನೆಗೆ ಫಸಲ್ ಅಲಿ ಸಮಿತಿಯ ಶಿಫಾರಸ್ಸಿನಂತೆ ಮೈಸೂರು, ಹೈದರಾಬಾದು, ಮದರಾಸು, ಕೊಡಗು, ಬಾಂಬೆ ಪ್ರಾಂತ್ಯಗಳ ಕನ್ನಡಿಗರನ್ನು ಒಗ್ಗೂಡಿಸಿ ೧೯೫೬ ನವೆಂಬರಿನ ಮೊದಲನೇ ದಿನ ’ಮೈಸೂರು ರಾಜ್ಯವನ್ನು’ ಸ್ಥಾಪಿಸಲಾಯಿತು. ಅದೇ ದಿನವನ್ನು ನಾವು ಕನ್ನಡ ರಾಜ್ಯೋತ್ಸವವೆಂದು ಇಂದಿಗೂ ಆಚರಿಸುತ್ತೇವೆ. ದೇವರಾಜ ಅರಸರು ಮುಖ್ಯಮಂತ್ರಿಯಾದಾಗ ೧೯೭೨ರಲ್ಲಿ ಮೈಸೂರು ರಾಜ್ಯವನ್ನು ‘ಕರ್ನಾಟಕ’ವೆಂದು ಮರುನಾಮಕರಣ ಮಾಡಿದರು.
ಇಂದು ಕನ್ನಡಕ್ಕೆ ೨ ಭಾರತರತ್ನ ಪ್ರಶಸ್ತಿಗಳು, ೮ ಜ್ಞಾನಪೀಠ ಪ್ರಶಸ್ತಿಗಳು ಸಂದಿವೆ. ಕನ್ನಡವನ್ನು ಶಾಸ್ತ್ರೀಯ ಭಾಷೆಯನ್ನಾಗಿ ಘೋಷಿಸಲಾಗಿದೆ. ಎಷ್ಟೋ ಮಹನೀಯರು ವಿವಿಧ ರಂಗಗಳಲ್ಲಿ ಭಾರತಕ್ಕೆ ತಮ್ಮದೇ ಆದ ಕೊಡುಗೆ ಕೊಟ್ಟಿದ್ದಾರೆ. ಮೋಕ್ಷಗುಂಡಂ ವಿಶ್ವೇಶ್ವರಯ್ಯ, ಬೆನಗಲ್ ನರಸಿಂಗ ರಾವ್ (ಇವರು ಭಾರತ ಸಂವಿಧಾನ ಸಭೆಯ ಮುಖ್ಯ ಕಾರ್ಯದರ್ಶಿಗಳು. ಭಾರತದ ಸಂವಿಧಾನಕ್ಕೆ ಇವರ ಕೊಡುಗೆ ಅಪಾರ), ಬಿ.ಡಿ. ಜತ್ತಿ, ಸಿ.ಎನ್.್ ರಾವ್… ಹೀಗೆ ಪಟ್ಟಿ ಇನ್ನೂ ಮುಂದುವರೆಯುತ್ತದೆ. ಭಾರತದ ರಾಜಕೀಯ, ಆರ್ಥಿಕತೆ, ಸಾಹಿತ್ಯ, ಸಂಸ್ಕೃತಿಗಳಿಗೆ ಕನ್ನಡಿಗರ ಕೊಡುಗೆ ಅಪಾರ.
ಹಾಗಾದರೆ ಇಂದು ನಮ್ಮ ಕರ್ತವ್ಯವೇನು? ‘ನವೆಂಬರ ಕನ್ನಡಿಗರು’ - ಇದು ಕನ್ನಡಿಗರಿಗೆ ಕನ್ನಡ ನವೆಂಬರಿನಲ್ಲಿ ಮಾತ್ರ ಜ್ಞಾಪಕ ಬರುತ್ತದೆಂದು ಟೀಕಿಸುವ ರೀತಿ. ಇದು ಒಂದು ಕಡೆಯ ಸತ್ಯವಾದರೆ, ಮತ್ತೊಂದು ತುದಿಯಲ್ಲಿ ಅತಿಯಾದ ಪ್ರೇಮವೂ ನಮಗೆ ಅಷ್ಟೇ ತೊಂದರೆ ಕೊಡುತ್ತಿದೆ. ಕನ್ನಡ ಇಂಗ್ಲೀಷಿನ ತುಳಿತಕ್ಕೆ ಸಿಗುತ್ತಿದೆ, ಬೆಂಗಳೂರಿನಲ್ಲಿ ಕನ್ನಡಿಗರೇ ಇಲ್ಲ, ಕನ್ನಡಿಗರಿಗೆ ಕನ್ನಡವೇ ಬೇಕಿಲ್ಲ… ಇವು ಎಲ್ಲರೂ ಹೇಳುತ್ತಿರುವ ಮಾತುಗಳು. ಆದರೆ ನಾವು ಕೆಲವು ಮೂಲಭೂತ ಪ್ರಶ್ನೆಗಳ ಬಗ್ಗೆ ಯೋಚಿಸಬೇಕಾಗುತ್ತದೆ. ಒಂದು ಭಾಷೆ ಯಾವಾಗ ಬೆಳೆಯುತ್ತದೆ? ಏಕೆ ಬೆಳೆಯಬೇಕು? ಈ ಪ್ರಶ್ನೆಗಳನ್ನು ನಾವು ನಮಗೇ ಕೇಳಿಕೊಳ್ಳಬೇಕಾಗುತ್ತದೆ. ಇಂದು ಕನ್ನಡಕ್ಕಿರುವ ತೊಂದರೆ ಬೇರೆ ಭಾಷೆಗಳಿಂದಲ್ಲ, ಕನ್ನಡಿಗರಿಂದಲೇ!
ಭಾಷೆಯ ಬೆಳವಣಿಗೆಗೆ ಭಾಷಿಕರಷ್ಟೇ ಮುಖ್ಯವಾದುದು ಆ ಭಾಷೆಯಲ್ಲಿ ನಡೆಯವ ಸಾಹಿತ್ಯ, ಸಂಗೀತ, ಕಲೆ, ಸಂಶೋಧನೆಗಳು, ಚಿಂತನೆಗಳು. ಇಂದು ಕನ್ನಡಕ್ಕಿರುವ ಮುಖ್ಯವಾದ ತೊಂದರೆ ಅದರ ತತ್ವ, ಇತಿಹಾಸ, ಸಾಹಿತ್ಯಗಳ ಅಲಕ್ಷ್ಯ. ಬೆಂಗಳೂರಿನ ಪರಭಾಷಿಕರ ವಿರುದ್ಧ ಮಾತಾಡುವ ಜನರು, ಕನ್ನಡದ ವೈಭವದ ಪ್ರತೀಕಗಳಾದ ’ಕರ್ನಾಟಕ ಗತವೈಭವ’, ‘ಜೀವನಧರ್ಮಯೋಗ’ ಮುಂತಾದ ಪುಸ್ತಕಗಳು ಕರ್ನಾಟಕದ ಎಷ್ಟೋ ಮುಖ್ಯ ಪುಸ್ತಕ ಭಂಡಾರಗಳಲ್ಲಿ, ಮಾರಾಟ ಮಳಿಗೆಗಳಲ್ಲಿ ಸಿಗದಿರುವುದು ನಮ್ಮ ದೌರ್ಭಾಗ್ಯ ಎಂಬುದನ್ನು ಅರ್ಥಮಾಡಿಕೊಳ್ಳುತ್ತಿಲ್ಲ. ಭಾಷೆ ಒತ್ತಾಯದಿಂದ ಅಭಿವೃದ್ಧಿಯಾಗುವುದಿಲ್ಲ, ಕೃಷಿಯಿಂದ ಅಭಿವೃದ್ಧಿಯಾಗುತ್ತದೆ.
ರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ಆಚರಣೆಯ ಜೊತೆಗೆ, ಇತಿಹಾಸ, ಸಮಸ್ಯೆ, ಪರಿಹಾರಗಳ ಕುರಿತು ಯೋಚಿಸುವುದೂ ಅತ್ಯಂತ ಅವಶ್ಯಕ. ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.