Tuesday, September 18, 2018

ಸಾಯಣಾಚಾರ್ಯ

ಪ್ರತಿಯೊಂದು ಪ್ರಯೋಗವೂ (practice) ತತ್ವದ (theory) ಮೇಲೆಯೇ ಅವಲಂಬಿತವಾಗಿರುತ್ತದೆ. ಕೆಲವರನ್ನು ಹೊರತುಪಡಿಸಿ, ಬಹುತೇಕ ಜನರು ಪ್ರಯೋಗಕ್ಕೆ ಕೊಡುವ ಪ್ರಾಮುಖ್ಯತೆಯನ್ನು ತತ್ವಕ್ಕೆ ಕೊಡುವುದಿಲ್ಲ. "ತತ್ವ ನಮಗಲ್ಲ" - ಎಂಬ ಮನೋಭಾವವೇ ಹೆಚ್ಚು. ಅಲೌಕಿಕ (ಅಥವಾ ಆಧ್ಯಾತ್ಮಿಕ) ವಿಷಯಗಳಿಗೆ ಇದು ಕೊಂಚ ಹೆಚ್ಚಾಗಿಯೇ ಅನ್ವಯಿಸುತ್ತದೆ. ಮಂತ್ರಗಳಿಗಿಂತ ತಂತ್ರಕ್ಕೆ ಹೆಚ್ಚು ಪ್ರಾಧಾನ್ಯತೆ. 

ಮಾನ್ಯ ಡಿ.ವಿ. ಗುಂಡಪ್ಪನವರು, ತಮ್ಮ ವೇದ-ವೇದಾಂತ ಪುಸ್ತಕದಲ್ಲಿ, ವಿದ್ಯಾರ್ಥಿಗೆ ಶ್ರದ್ದೆ-ತರ್ಕ ಎರೆಡೂ ಇರಬೇಕು ಎಂದು ಬರೆಯುತ್ತಾರೆ. ಶ್ರದ್ಧೆ ಬೇಕೇ ಬೇಕು, ಆದರೆ ತರ್ಕವೂ ಅಷ್ಟೇ ಮುಖ್ಯ. ತರ್ಕವಿಲ್ಲದ ಶ್ರದ್ದೆ ನಿಂತ ನೀರಾಗುತ್ತದೆ. ಅಲೌಕಿಕ ಅಥವಾ ಸಾಮಾಜಿಕ ವಿಷಯಗಳಲ್ಲಿ ನಾವು ಇದನ್ನು ಮನಗಂಡಿದ್ದೇವೆ. ಕೇವಲ ಪುಸ್ತಕ ಓದಿದರೆ ಸಾಲದು. ಓದಿದ್ದರ ಪ್ರಯೋಗವೂ ತಿಳಿದಿರಬೇಕು. ಆದರೆ ಅಲೌಕಿಕ/ಆಧ್ಯಾತ್ಮದ ವಿಷಯಗಳಲ್ಲಿ ಶ್ರದ್ಧೆ ತರ್ಕಕ್ಕೆ ಇಳಿಯುವುದಿಲ್ಲ(ಹಲವಾರು ಬಾರಿ ಶ್ರದ್ಧೆಯೇ ಇರುವುದಿಲ್ಲ. ಅದು ಬೇರೆ ಮಾತು). ತರ್ಕ ಸಂಪ್ರದಾಯವನ್ನು ಹಾಳುಮಾಡಬಹುದು ಎಂಬ ಭಯ. ಈ ಭಯಕ್ಕೆ ಮೂಲ ಕಾರಣವೇನು? ತತ್ವದ ಮೇಲೆ ನಮಗಿರುವ ಅಲಕ್ಷ್ಯ ಎಂಬುದು ನನ್ನ ಅಭಿಮತ. ಮೂಲತತ್ವನ್ನು ಆಮೂಲಾಗ್ರವಾಗಿ ತಿಳಿಯಬೇಕೆಂದು ಇಲ್ಲಿನ ಅಭಿಪ್ರಾಯವಲ್ಲ. ತತ್ವಶಾಸ್ತ್ರ ನಮ್ಮ ಮುಖ್ಯ ವಿಷಯವಾಗಬೇಕಿಲ್ಲ. ನಾವು ಗಣಿತಶಾಸ್ತ್ರಜ್ಞರಾಗದಿದ್ದರೂ ನಮ್ಮ ದೈನಂದಿನ ವ್ಯವಹಾರಕ್ಕೆ ಬೇಕಾಗುವಷ್ಟಾದರೂ ಗಣಿತ ತಿಳಿದಿರಲೇಬೇಕು. ಅಂತಯೇ ಅಧ್ಯಾತ್ಮ ಸಂಸ್ಕೃತಿಯಲ್ಲಿನ ನಮ್ಮ ಶ್ರದ್ದೆ ಅಚಲವಾಗಿಯೂ, ದೀರ್ಘವಾಗಿಯೂ ಇರಬೇಕಾದರೆ, ಅದರ ಹಿಂದಿನ ತತ್ವಗಳ ಸ್ಥೂಲ ಪರಿಚಯ ಅತ್ಯವಶ್ಯಕ. (ಸಂಸ್ಕೃತಿ ದೀರ್ಘವಾಗಿ ಉಳಿಯಬೇಕಾದ ಅವಶ್ಯಕತೆಯೇನು - ಎಂಬ ಪ್ರಶ್ನೆ ಏಳಬಹುದು. ಅದಕ್ಕೆ ಉತ್ತರ ಕೊಡುವುದು ಈ ಲೇಖನದ ಉದ್ದೇಶವಲ್ಲ. ಹೆಚ್ಚಾಗಿ, ಆ ಪ್ರಶ್ನೆಯಿರುವವರಿಗೆ ಈ ಲೇಖನದಿಂದ ಸಮಯ ವ್ಯರ್ಥವಲ್ಲದೆ ಇನ್ನಾವ ಉಪಯೋಗವೂ ಇಲ್ಲ.)

"ವೇದವೆಂದರೆ ಜ್ಞಾನ" - ಭಾರತದಲ್ಲಿ ಏಳನೆಯ ತರಗತಿಲ್ಲಿ ಓದುವ ಬಹುತೇಕ ಎಲ್ಲ ವಿದ್ಯಾರ್ಥಿಗಳಿಗೂ ತಿಳಿದ ವಿಷಯವಿದು. ನಾಲ್ಕು ವೇದಗಳ ಹೆಸರನ್ನು ತಿಳಿದ ಮೇಲೆ ಅದರ ಗೋಜಿಗೆ ನಾವು ಹೋಗುವುದಿಲ್ಲ. ನಾವು ವೇದಗಳ ಗೂಡಾರ್ಥಗಳನ್ನೂ, ಪ್ರಯೋಗಗಳನ್ನೂ ತಿಳಿಯಬೇಕಿಲ್ಲ. ಆದರೆ ಸ್ಥೂಲಾರ್ಥವನ್ನು ತಿಳಿಯಬೇಕು. ಋಷಿಗಳ ಹೆಸರುಗಳು, ವೇದ ಭಾಷ್ಯಕಾರರು, ಬ್ರಾಹ್ಮಣ, ಅರಣ್ಯಕ, ಉಪನಿಷತ್ತು, ಸೂತ್ರ, ಶಾಖೆ, ವೇದಾಂಗ ಮುಂತಾದವುಗಳ ಅರ್ಥಗಳನ್ನು ತಿಳಿಯುವುದು ಅವಶ್ಯಕ. ಭೌತಶಾಸ್ತ್ರಜ್ಞರಾಗದಿದ್ದರೂ ನ್ಯುಟನ್ನು ಮತ್ತು ಅವನ ಸೂತ್ರಗಳನ್ನು ತಿಳಿಯುವಂತೆ. 

ನಮ್ಮ ಪರಂಪರೆಯಲ್ಲಿ ವೇದಗಳಿಗೆ ಭಾಷ್ಯ (ಭಾಷ್ಯ = ಅರ್ಥ, ಸ್ಥೂಲವಾಗಿ) ಬರೆದಿರುವವರು ಬಹಳ ಕಡಿಮೆ ಮಂದಿ. ಆಚಾರ್ಯತ್ರಯರಾದ ಶಂಕರ, ರಾಮಾನುಜ, ಮಧ್ವರು ಉಪನಿಷತ್ತುಗಳಿಗೆ, ಬ್ರಹ್ಮಸೂತ್ರಗಳಿಗೆ ಭಾಷ್ಯಗಳನ್ನು ಬರೆದ್ದಿದ್ದಾರೆ. ನಾಲ್ಕೂ ವೇದಗಳ ಸಂಹಿತೆ, ಬ್ರಾಹ್ಮಣ, ಅರಣ್ಯಕಗಳಿಗೆ ಭಾಷ್ಯವನ್ನು ಬರೆದಿರುವುದು ಬಹುಶಃ ಒಬ್ಬರೇ (ಅಥವಾ ನಮಗೆ ಸಿಕ್ಕಿರುವುದು ಒಬ್ಬರದೇ) - ಆ ಭಾಷ್ಯವೇ ವೇದವಿದ್ಯಾರ್ಥಿಗಳಿಗೆ ದಾರಿದೀಪ - ಆ ಮಹಾನುಭಾವರ ಪರಿಚಯವೇ ಈ ಲೇಖನ.

ಸಾಯಣಾಚಾರ್ಯರು ಹುಟ್ಟಿದ್ದು ಸುಮಾರು ಕ್ರಿ.ಶ. ೧೩೧೫ರಲ್ಲಿ. ೧೨-೧೫ನೇ ಶತಮಾನ ದಕ್ಷಿಣ ಭಾರತದ ವಿಜಯನಗರ ಸಾಮ್ರಾಜ್ಯದಲ್ಲಿ. ತಂದೆ ಮಾಯಣ, ತಾಯಿ ಶ್ರೀಮತಿ. ಭಾರದ್ವಾಜ ಗೋತ್ರ, ಕೃಷ್ಣ ಯಜುರ್ವೇದ, ಬೋಧಾಯನ ಶಾಖೆ. ಸಾಯಣರಿಗೆ ಇಬ್ಬರು ಸಹೋದರರು, ಹಿರಿಯ ಸಹೋದರರು ಮಾಧವರು. ಇವರು ವಿಜಯನಗರ ಸಾಮ್ರಾಜ್ಯ ಸ್ಥಾಪಕರಾದ ಹರಿಹರ-ಬುಕ್ಕರ ಗುರುಗಳು. ವಿದ್ಯಾರಣ್ಯರೆಂಬ ಹೆಸರಿನಿಂದ ಮುಂದೆ ಶೃಂಗೇರಿ ಮಠದ ಪೀಠಾಧಿಪತಿಗಳಾದವರು. ಸಾಯಣರ ತಮ್ಮ ಭೋಗನಾಥರು ಕವಿಗಳು. ಸಾಯಣರಿಗೆ ಮಾಯಣ, ಕಂಪಣ ಮತ್ತು ಸಿಂಗಣರೆಂಬ ಮೂವರು ಪುತ್ರರು. ಅವರ ಪತ್ನಿಯ ಹೆಸರು ತಿಳಿದಿಲ್ಲ.

ಸಾಯಣರು ವಿಜಯನಗರ ಸಾಮ್ರಾಜ್ಯದ ಕಂಪಣ, ಎರಡನೆಯ ಸಂಗಮ, ಒಂದನೆಯ ಬುಕ್ಕ ಮತ್ತು ಎರಡನೆಯ ಹರಿಹರ, ಎಂಬ ನಾಲ್ಕು ರಾಜರಿಗೆ ಮಂತ್ರಿಗಳಾಗಿದ್ದರು. ತರ್ಕ, ನ್ಯಾಯ, ವೇದಾಂತ, ಮೀಮಾಂಸಾ ಶಾಸ್ತ್ರಗಳಲ್ಲಿ ಪಂಡಿತರು. ಅಷ್ಟೇ ಅಲ್ಲದೆ ಸಮರ್ಥ ಯೋಧರೂ ಆಗಿದ್ದರು. ಅಣ್ಣ ಮಾಧವರೊಡನೆ ವಿಜಯನಗರಕ್ಕೆ ಸಾಯಣರ ಕೊಡುಗೆ ಅಪಾರ.

ಭಾರತೀಯ ಶಾಸ್ತ್ರ ಪ್ರಪಂಚಕ್ಕೆ ಸಾಯಣಾಚಾರ್ಯರ ಆಶೀರ್ವಾದವೆಂದರೆ ಅವರ ಚತುರ್ವೇದ ಭಾಷ್ಯಗಳು. ರಾಜ ಹರಿಹರನ ಆಶ್ರಯದಲ್ಲಿ, ಅಣ್ಣ ಮಾಧವರ ಮಾರ್ಗದರ್ಶನದಲ್ಲಿ, ಸಾಯಣರು ವೇದಗಳಿಗೆ ಭಾಷ್ಯಗಳನ್ನು ಬರೆದರು. ಮೊದಲು ಸ್ವಶಾಖೆಯಾದ ತೈತ್ತಿರೀಯ ಸಂಹಿತೆಗೆ ಭಾಷ್ಯ ಬರೆದು ನಂತರ ಋಗ್ವೇದ, ಸಾಮವೇದ ಮತ್ತು ಅಥರ್ವ ವೇದ ಸಂಹಿತೆಗಳಿಗೆ ಭಾಷ್ಯಗಳನ್ನು ಬರೆದಿದ್ದಾರೆ. ಸಂಹಿತೆಗಳಷ್ಟೇ ಅಲ್ಲದೆ, ಋಗ್ವೇದದ ಐತರೇಯ ಬ್ರಾಹ್ಮಣ, ಐತರೇಯ ಅರಣ್ಯಕ, ಕೃಷ್ಣ ಯಜುರ್ವೇದದ ತೈತ್ತಿರೀಯ ಬ್ರಾಹ್ಮಣ ಮತ್ತು ಅರಣ್ಯಕ, ಸಾಮವೇದದ ತಾಂಡ್ಯ, ಷಡ್ವಿಂಶ ಮೊದಲಾದ ೮ ಬ್ರಾಹ್ಮಣಗಳು ಮತ್ತು ಶುಕ್ಲ ಯಜುರ್ವೇದದ ಶತಪಥ ಬ್ರಾಹ್ಮಣಗಳಿಗೂ ಭಾಷ್ಯಗಳನ್ನು ಬರೆದಿದ್ದಾರೆ. ತಮ್ಮ ಭಾಷ್ಯದಲ್ಲಿ ಹಿಂದಿನ ಋಷಿಗಳ ಅಭಿಪ್ರಾಯಗಳನ್ನೂ, ವ್ಯಾಕರಣ ಪ್ರಕ್ರಿಯೆಗಳನ್ನು ಸಾಂಗವಾಗಿ ವಿವರಿಸಿದ್ದಾರೆ. ಸಾಯಣರ ಭಾಷ್ಯಗಳು ಪ್ರತಿಯೊಬ್ಬ ವೇದವಿದ್ಯಾರ್ಥಿಗೂ ಮೂಲ ಪುಸ್ತಕಗಳು. ೧೯-೨೦ ಶತಮಾನಗಳಲ್ಲಿ ವೇದಾರ್ಥ ಯತ್ನ ಮಾಡಿದ ಅನೇಕ ಐರೋಪ್ಯ ವಿದ್ವಾಂಸರಿಗೂ ಸಾಯಣರ ಭಾಷ್ಯಗಳೇ ಮೂಲ.

ಸಾಯಣರು ವೇದಾರ್ಥವನ್ನಷ್ಟೇ ಅಲ್ಲದೆ ಸುಭಾಷಿತ ಸುಧಾನಿಧಿ, ಪ್ರಾಯಶ್ಚಿತ್ತ ಸುಧಾನಿಧಿ, ಧಾತು ವೃತ್ತಿ, ಅಲಂಕಾರ ಸುಧಾನಿಧಿ (ಇವೆರಡು ವ್ಯಾಕರಣ ಪುಸ್ತಕಗಳು), ಆಯುರ್ವೇದ ಸುಧಾನಿಧಿ ಎಂಬ ಪುಸ್ತಕಗಳನ್ನೂ ಬರೆದಿದ್ದಾರೆ. ಸಾಯಣರು ಸುಮಾರು ೧೩೮೭ರಲ್ಲಿ ದೇವೈಕ್ಯರಾದರೆಂದು ತಿಳಿದು ಬರುತ್ತದೆ.

ಭಾರತದ ಆಧ್ಯಾತ್ಮಿಕ ಪ್ರಪಂಚದಲ್ಲಿ ಸಾರಾಯಣರು ಅಗ್ರಪಂಕ್ತಿಯಲ್ಲಿ ನಿಲ್ಲುವವರು. ವೇದ ಸಾಹಿತ್ಯಕ್ಕೆ ಅವರ ಕೊಡುಗೆ ಊಹಾತೀತ. ಸಾಯಣರು ಪ್ರಾತಃಸ್ಮರಣೀಯರು. ನಾವು ಅವರ ಭಾಷ್ಯಗಳನ್ನು ಓದದಿದ್ದರೂ ಅವರ ಹೆಸರನ್ನಾದರೂ ತಿಳಿದುಕೊಳ್ಳುವುದು ಅವಶ್ಯಕ. ನಾವು ಪಠಿಸುವ ಮಂತ್ರಗಳಿಗೆ ಅರ್ಥವನ್ನು ಬರೆದವರಲ್ಲವೆ!

Tuesday, April 10, 2018

ಅಗ್ನಿಪರೀಕ್ಷೆ

ಸಮರ ಮುಗಿಯಲ್ ರಾಮನೆದು-
ರಿಗೆ ಸೀತೆಯನ್ ತಂದಿರಿಸಿದಂ ವಿಭೀಷಣಂ |
ಸೂರ್ಯಕಾಂತಿ ರವಿಯ ನೋಡು-
ವವೊಲರವಿಂದವದನನ ಜಾನಕಿ ನೋಡಿದಳ್ ||

ದೇವ ನೋಡೈ ಶ್ರೀರಾಮ
ವೈದೇಹಿ ಕರುಣಾರ್ದ್ರತೆಯಿಂದೀಕ್ಷಿಸುತಿಹಳ್ |
ಆರಿಗಾಗಿ ಈಯನುವರ-
ವ ಗೈಯ್ದೆವೋ ಆ ತಾಯ್ ನಿಂತಿಹಳೆಮ್ಮೆದುರಿಗೆ ||

ಪನ್ನೆರೆಡು ಮಾಸದಿಂ ಮೈ-
ಥಿಲಿ ದುರ್ಲಭ ಚಿಂತೋದಧಿಯಲ್ ಮಿಂದಿರ್ಪಳ್ |
ಸಂತಸದಿ ಸ್ವೀಕರಿಸೈ
ಪ್ರಭೋ ದಾಶರಥಿಯೆಂದನಂಜನೀಪುತ್ರಂ ||

ಬಾಷ್ಪಗಳುದುರಿದವ್ ಪ್ರಥಮ-
ದಲಿ ಮರುಚಣದೊಳ್ ವದನ ಗಂಭೀರವಾಯ್ತುಂ |
ಲಂಕೇಶ್ವರನ ಮೊಗನೋಡಿ
ರಾಮಂ ಸೀತೆಯನಲಂಕರಿಸಿ ತಾರೆಂದಂ ||

ಲಲನಾವ್ರಜದೊಳಿದ್ದ ಸೀ-
ತೆಯ ಬಳಿಸಾರ್ದು ವಿಭೀಷಣಂ ಕೈಮುಗಿದು ತಾಯ್ |
ನಿನ್ನ ಪ್ರಭು ಸರ್ವಾಲಂಕಾ-
ರಭೂಷಿತೆಯಾಗೀಕ್ಷಿಸಬೇಕೆಂದನೆಂದನ್ ||

ತೊಟ್ಟುಡುಗೆಯೊಳ್ ತಾನ್ ನಾಥ-
ನಂ ನೋಡಬೇಕೈ ರಾಕ್ಷಸಾಧಿಪನೆಂದಳ್ |
ಜಾನಕಿ ಮೇಣ್ ರಾಜಾಜ್ಞೆಗೆ
ತಲೆಬಾಗಿಯೊಪ್ಪಿದೆನೆಂದರಮನೆಗೆಪೋದಳ್ ||

ಪೊಳೆಯುವ ಪಲ್ಲಕ್ಕಿ ರೇಷಿ-
ಮೆಯ ವಸ್ತ್ರ ಫಳಫಳನೆ ಮಿಂಚುವಾಭರಣಗಳ್ |
ಮೊಗದೊಳ್ ಮಂದಹಾಸದಿಂ
ಬಂದಳ್ ವೈದೇಹಿ ರಾಮಚಂದ್ರನ ಕಾಣಲ್ ||

ಪೆರ್ಗಾಳಿ ಬೀಸಲಬ್ಬರಿ-
ಸುವಾಂಬುಧಿಯವೊಲಿದ್ದ  ವಾನರ ಭಲ್ಲೂಕಾ- |
ಸುರ ನಿವಹಂ ಸೀತೆಯ ನೋ-
ಡಲ್ತ್ವರೆಪಡುತ್ತಿರಲವರನ್ ಹರೆಯುತಿರ್ದರ್ ||

ಕಾರ್ಪಣ್ಯದೊಳ್ ಸಮರದೊಳ್
ಪತಿಸಮಕ್ಷದೊಳ್ ವಿವಾಹ ಯಾಗಾದಿಗಳೊಳ್ |
ನಾರಿಯನ್ ನೋಡುವುದನುಚಿ-
ತವಲ್ಲವರಂ ತಡೆಯದಿರೆಂದನಾ ರಾಮಂ ||

ಹಾಸಮೊಗದಿಂದಲ್ ಬೆರಗು
ಸಂಭ್ರಮ ವಾತ್ಸಲ್ಯದಿಂದಲ್ ನಾಥನಂ ಕಾ- |
ಣ್ಬ ಹೆಬ್ಬಯಕೆಯಿಂದಲ್ ಅರ-
ವಿಂದವದನನೆದುರು ಜಾನಕಿ ಬಂದುನಿಂತಳ್ ||

ಭದ್ರೆ ಮಾನುಷ ಯತ್ನದೊಳ್
ಲಂಕೇಶಂ ವಧಿಸಿ ನಿನ್ನಂ ನಾಂ ಗೆಲ್ವಿಹೆಂ |
ಲೋಕವೀಕ್ಷಿಸಿತು ನನ್ನೀ
ಬಾಹುಬಲಮಂ ಫಲಕೊಟ್ಟಿತೀಪರಿಶ್ರಮಂ ||

ಅಮಾನುಷದಿಂದಾದನ-
ರ್ಥವನ್ ಮಾನುಷದಿಂ ಪರಿಹರಿಸಿದೆನೈ ಧರಿ- |
ತ್ರೀಸುತೆ ಹನುಮ ಸುಗ್ರೀವ
ವಿಭೀಷಣ ಕಪಿಭಲ್ಲೂಕಾದಿಳ ನೆರವಿನೊಳ್ ||

ಆನುಡಿಯಕೇಳ್ದಾ ಧರಿ-
ತ್ರೀಸುತೆಯಮುಖಕಮಲವರಳಿತು ಹರಿಣದವೊಲ್ |
ರಾಮನಂತರಂಗವದುರಿ-
ತಿತ್ತಂ ಲೋಕೋಪವಾದದಾಲೋಚನೆಯೊಳ್ ||

ಜನಕರಾಜಪುತ್ರಿ ಕೇಳೆ
ನ್ನಪಮಾನಂ ಕಳೆಯಲೀಯನುವರಮೆಸಗಿದೆನ್ |
ವಂಶದ ಕೀರುತಿಯಂ ಮೆರೆ-
ಯಿಸಲಂ ಲೋಕಶೋಕನಾಶಕಂ ಲಂಕಾವಿನಾಶಂ ||

ಕ್ಷೀಣಾಕ್ಷಿಗಂ ಪರಂಜ್ಯೋ-
ತಿಯೊಪ್ಪದವೊಲ್ ಸತ್ಕುಲಜಾತಗಂ ನೀನೆಂ- |
ತೊಪ್ಪುವೆಯೈ ನೀಂ ಪೋಗುಂ
ನಿನ್ನಿಚ್ಛೆ  ನಿನ್ನಿಂದುಪಕಾರವಿಲ್ಲೆನಗಂ |

ರಾವಣಾಧೀನಳಾದವ-
ಳಿಗಂ ಎನ್ನವಾತ್ಸಲ್ಯವಿಲ್ಲಂ ಪೋಗು ನೀಂ |
ದಶದೆಸೆಯೊಳ್ ಭರತಶತೃ
ಘ್ನ ವಿಭೀಷಣರಬಳಿಗೋ ಲಕ್ಷ್ಮಣನಬಳಿಗೋ ||

ಆಗಂತುಕ ಮಾತುಗಳಿಂ
ಸರ್ವರೆದುರಿಗಾದಪಮಾನದಿಂ ಹೊನಲಿನಂ- |
ತೊರಲಿ ಬರುತಿರ್ಪಶ್ರು ಧಾ-
ರೆಯಿಂ ಸೀತೆ ಮೆಲ್ಲನೆಯಿಂತು ಗದ್ಗದಿಸಿದಳ್ ||

ರಾಕ್ಷಸನಿಗೆ ದೊರಕಿದುದೆನ-
ತಪ್ಪಲ್ಲೆನ್ನ ಮನ ನಿನ್ನನ್ನಗಲಿಲ್ಲ ಎ- |
ನ್ನಲ್ಲವಿಶ್ವಾಸ ನಿನಗುಚಿ-
ತವಲ್ಲ ಕೋಸಲೇಂದ್ರ  ಎಮ್ಮ ದಾಂಪತ್ಯದೊಳ್ ||

ಶೋಕವೇಕೆ ಹನುಮನ ಸಾ
ಗರೋಲ್ಲಂಘನವೇಕೆ ಸಖರ ಕಾರ್ಪಣ್ಯವೇ- |
ಕೆ ಮೇಣೇಕೀ ನಿಷ್ಫಲ
ಪ್ರಾಣಹರಣ ರಾವಣ ಲಂಕಾವಿನಾಶಮಂ ||

ಅಂದೇ ಪ್ರಾಣ ತೊರೆಯುತಿ-
ರ್ದೆನ್ ಹನುಮನಿಂ ಪೇಳ್ಪೊಡೆ ಎನ್ನಭಕ್ತಿಯಲ- |
ಕ್ಷಿಸಲ್ಪಟ್ಟಿತೀಗ ಚಿತೆಯಂ
ಪೇರಿಸು ಸೌಮಿತ್ರಿ ಅಗ್ನಿಗಾಹುತಿಯಾಗೆಪೆನ್ ||

ಹೋಹೋ ಹಾಹಾ ಎಂದಳ-
ಲಿದರ್ ಸುರಾಸುರರ್ ಸೀತೆ ಯಜ್ಞಾಹುತಿಯಾ- |
ಗಲ್ ದೇವ ದಾನವ ಯಕ್ಷ
ಗಂಧರ್ವ ಋಷಿ ಕಿನ್ನರಾದಿ ಸಮಕ್ಷಮದೊಳ್ ||

ಭದ್ರಬಾಹುಗಳೊಳ್ ಜನಕ
ಸುತೆಯಂ ಪಿಡಿದು ಮೂರ್ತನಾದನಗ್ನಿದೇವನ್ |
ಪಾಪರಹಿತಳಿವಳ್ ಸ್ವೀಕ
ರಿಸೈ ರಾಮ ಮನೋವಾಕ್ಕಾಯ ಶುದ್ಧಳಿವಳ್ ||

ಜಾನಕಿ ಪರಿಶುದ್ದಳ್ ಮೇಣ್
ಲೋಗರಲ್ವರ್ ಸ್ವಪ್ನದೊಳಾಗಲ್ ದುಷ್ಟಾತ್ಮನ್ |
ಸೀತೆಯಂ ತಾಕಲಾರನ್
ಹವ್ಯವಾಹನಿವಳನೀಗ ಸ್ವೀಕರಿಸಿಹೆನ್ ||

[ಪುಷ್ಪಗಳುದುರಿದವ್ ವ್ಯೋಮ-
ದೊಳ್ ಕಪಿ ಕೇಕೆಗಳಾದವ್ ಪೃಥ್ವಿಯೊಳ್ ಹಸ- |
ನ್ಮೊಗವಾಯ್ತು ಸಕಲರೊಳ್ಮ-
ತ್ತೊಂದಾದರ್ ಲಂಕೆಯೊಳ್ ಜಾನಕೀರಾಮರ್ ||]