ನಾನು ನೆನ್ನೆ ಎಸ್.ಎಲ್. ಭೈರಪ್ಪನವರ ಸಾರ್ಥ ಕಾದಂಬರಿಯನ್ನು ಎರಡನೆಯ ಬಾರಿ ಓದಿ ಮುಗಿಸಿದೆ. ಸುಮಾರು ಎರೆಡು ವರ್ಷದ ಹಿಂದೆ ಮೊದಲ ಬಾರಿಗೆ ಕಾದಂಬರಿಯನ್ನು ಓದಲು ಶುರು ಮಾಡಿದಾಗ ಮೊದಲ ಐವತ್ತು ಪುಟಗಳನ್ನು ಓದಿದಮೇಲೆ ಬೇಸರವಾಗಿ ನಿಲ್ಲಿಸಿಬಿಟ್ಟಿದ್ದೆ - ಆದರೆ ಯಾವುದೋ ಕಾರಣದಿಂದ ಮತ್ತೆ ಆಸಕ್ತಿ ಹುಟ್ಟಿ ಓದಿ ಮುಗಿಸಿದೆ. ನಂತರ ಎಷ್ಟೋ ದಿನಗಳವರೆಗೆ ಕಾದಂಬರಿಯ ಕಥಾವಸ್ತು ನನ್ನಲ್ಲಿ ಅಚ್ಚೊತ್ತಿ ಕುಳಿತಿತ್ತು. ಇತ್ತೀಚೆಗೆ ಸಾರ್ಥ ಕಾದಂಬರಿ ನನ್ನ ಅಕ್ಕನ ಮನೆಯಲ್ಲಿ ಮತ್ತೆ ಸಿಕ್ಕಿತು. ಮೊದಲ ಬಾರಿ ಓದಿದಾಗ ಕಾದಂಬರಿಯ ಸೂಕ್ಷ್ಮಗಳು - ಅದರಲ್ಲಿಯೂ ತತ್ವಶಾಸ್ತ್ರಕ್ಕೆ ಸಂಬಂಧಿಸಿದುವು - ಸರಿಯಾಗಿ ಅರ್ಥವಾಗಿರಲಿಲ್ಲ. ಆದ್ದರಿಂದ ಮತ್ತೆ ಓದಬೇಕೆನಿಸಿತು. ನೆನ್ನೆ ಓದಿ ಮುಗಿಸಿದೆ. ಈಗ ಅದರ ಬಗ್ಗೆ ಒಂದೆರೆಡು ಮಾತುಗಳನ್ನು ಬರೆಯಬೇಕೆನಿಸುತ್ತಿದೆ!
ನನಗೆ 'ಸಾರ್ಥ' ಪದದ ಪರಿಚಯವಾದದ್ದೇ ಈ ಕಾದಂಬರಿಯಿಂದ. ಕಾದಂಬರಿಯ ಹೆಸರನ್ನು ಮೊದಲು ಕೇಳಿದಾಗ ಇದು ಭೈರಪ್ಪನವರ ಗೃಹಭಂಗ, ವಂಶವೃಕ್ಷ, ದಾಟು ಮುಂತಾದವುಗಳಂತೆ ಸಮಕಾಲೀನ ಸಾಮಾಜಿಕ ಕಾದಂಬರಿ ಎನಿಸಿತು. ಮೊದಲ ಪುಟದಲ್ಲಿನ 'ಸಾರ್ಥ' ಪದದ ಅರ್ಥವನ್ನು ಓದಿದ ಮೇಲೆ ಇದು ಒಂದು ಐತಿಹಾಸಿಕ ಕಾದಂಬರಿ ಎಂದು ಅರ್ಥವಾಯಿತು. ಸಾರ್ಥದ ಕಾಲ ಆವರಣದ ಕಾಲಕ್ಕಿಂತ ಸುಮಾರು ೭೦೦ ವರ್ಷಗಳ ಹಿಂದಿನದು. ಭಾರತಕ್ಕೆ ಮಧ್ಯ ಪ್ರಾಚ್ಯದ ಆಕ್ರಮಣಕಾರರು ಆಕ್ರಮಣ ಮಾಡಿದ ಕಾಲದ ಆಸುಪಾಸು. ತಾತ್ವಿಕವಾಗಿ ಭಾರತ ಸ್ಥಿತ್ಯಂತರಗೊಂಡ ಕಾಲ. ಬೌದ್ಧಮತ ಭಾರತದಲ್ಲಿ ಪ್ರಾಮುಖ್ಯತೆ ಕಳೆದುಕೊಳ್ಳುವ ಒಂದೆರಡು ಶತಮಾನಗಳ ಹಿಂದೆ. ಉತ್ತರಮೀಮಾಂಸಾ ತತ್ವ - ಅಥವಾ ವೇದಾಂತ ತತ್ವ - ಭಾರತದಲ್ಲಿ ಪ್ರಸಿದ್ದಿಯಾದ ಕಾಲ.
ಸಾರ್ಥ ಕಾದಂಬರಿ ಪ್ರಥಮ ಪುರುಷ ನಿರೂಪಣಾ ಕಾದಂಬರಿ. ಕಾದಂಬರಿಯು ನಾಯಕ ನಾಗಭಟ್ಟ ತನ್ನ ಜೀವನದಲ್ಲಿ ನಡೆದ ಘಟನೆಗಳನ್ನು ಕಥೆಯಾಗಿ ಬರೆದಿಟ್ಟಿರುವ ರೂಪದಲ್ಲಿದೆ. ನಾಗಭಟ್ಟ ಪೂರ್ವಮೀಮಾಂಸಾ ಪಂಡಿತರಾದ ಮಂಡನಮಿಶ್ರರ ಆಶ್ರಮದಲ್ಲಿ ವ್ಯಾಸಂಗ ಮಾಡಿದವ. ಕರ್ಮಠ ಬ್ರಾಹ್ಮಣ. ತಾರಾವತಿಯ ಅಮರುಕ ರಾಜನ ಸ್ನೇಹಿತ. ತನ್ನ ರಾಜ್ಯದ ಅರ್ಥ ಸಂಪತ್ತನ್ನು ಬೆಳೆಸಲು ಅಮರುಕನ ಸಲಹೆಯಂತೆ ಸಾರ್ಥದ ಮರ್ಮ ತಿಳಿಯಲು ಉನ್ನತ ವ್ಯಾಸಂಗಕ್ಕಾಗಿ ಕಾಶಿಗೆ ಹೋಗುವ ನೆಪದಲ್ಲಿ ತಾರಾವತಿಗೆ ಬಂದ ಒಂದು ಸಾರ್ಥದ ಜೊತೆ ಹೋಗುತ್ತಾನೆ. ಇಲ್ಲಿ ಭೈರಪ್ಪನವರು ಆಗಿನ ಕಾಲದ ಸಾರ್ಥಗಳ ಪರಿಚಯ ಮಾಡಿಕೊಟ್ಟಿದ್ದಾರೆ. ಸಾರ್ಥಗಳು ಎದುರಿತಿದ್ದ ಸಮಸ್ಯೆಗಳು, ಸಾರ್ಥ ಪ್ರಮುಖರು ಅವನ್ನು ಬಗೆಹರಿಸುತ್ತಿದ್ದ ರೀತಿಗಳು, ಸಾರ್ಥಗಳ ಜೊತೆ ಪ್ರಯಾಣ ಮಾಡುವ ಅನೇಕ ರೀತಿಯ ಜನಗಳು ಮುಂತಾದ ವಿವರಣೆಗಳಿವೆ.
ನಾಗಭಟ್ಟ ಜೊತೆಗೆ ಬಂದ ಸಾರ್ಥ ಅವನನ್ನು ಮಥುರೆಗೆ ಬಿಟ್ಟು, ಅವನಿಗೆ ಕಾಶಿಗೆ ಹೋಗುವ ಇನ್ನೊಂದು ಸಾರ್ಥವನ್ನು ಕೂಡಿಕೊಳ್ಳಲು ಹೇಳಿ ಹೋಗುತ್ತದೆ. ಕಾಶಿಗೆ ಹೋಗುವ ಸಾರ್ಥ ಬರುವುದು ತಡವಾಗಿ ನಾಗಭಟ್ಟನಿಗೆ ಒಂದು ಬೌದ್ಧ ವಿಹಾರದಲ್ಲಿ ತಂಗುವ ಪ್ರಸಂಗ ಬರುತ್ತದೆ. ತಿಂಗಳುಗಳಾದರೂ ಕಾಶಿಯ ಕಡೆಗಿನ ಸಾರ್ಥ ಬಾರದ ಕಾರಣ ಹೊತ್ತು ಕಳೆಯಲು ನಗರದ ಸ್ನೇಹ ಬೆಳಸುತ್ತಾನೆ. ಮಥುರೆಯ ನಾಟಕದ ಗುಂಪೊಂದು ಪರಿಚಯವಾಗಿ ಅವನ ಮನಸ್ಸು ನಾಟಕದ ಮೇಲೆ ಹರಿಯುತ್ತದೆ. ಅವನ ರೂಪು ಮೈಕಟ್ಟುಗಳನ್ನು ನೋಡಿ ನಾಟಕದ ಸೂತ್ರಧಾರರು ಅವನನ್ನು ಕೃಷ್ಣನ ಪಾತ್ರಕ್ಕೆ ಆರಿಸುತ್ತಾರೆ. ನಾಟಕಾಭ್ಯಾಸ ಮಾಡುವಾಗ ನಾಟಕದ ನಾಯಕಿ ಪಾತ್ರ ಮಾಡುತ್ತಿದ್ದ ಚಂದ್ರಿಕೆಯ ಮೇಲೆ ಅವನಿಗೆ ಪ್ರೇಮವುಂಟಾಗುತ್ತದೆ. ಅವಳಿಗೂ ಅವನ ಮೇಲೆ ಪ್ರೀತಿಯುಂಟಾದರೂ ತನ್ನ ಬ್ರಹ್ಮಚರ್ಯ ವ್ರತಕ್ಕೆ ಕಟ್ಟುಬಿದ್ದು ಅವನೊಡನೆ ದೈಹಿಕ ಸಂಪರ್ಕವನ್ನು ನಿರಾಕರಿಸುತ್ತಾಳೆ. ಅಷ್ಟರಲ್ಲಿ ತಾರಾವತಿಯ ಕಡೆಯಿಂದ ಬಂದ ಪಂಡಿತರೊಬ್ಬರಿಂದ ನಾಗಭಟ್ಟನಿಗೆ ಅಮರುಕನಿಂದ ತನಗಾದ ಮೋಸ ತಿಳಿಯುತ್ತದೆ. ಇತ್ತ ಚಂದ್ರಿಕೆ ನಾಗಭಟ್ಟನ ತಾನಿದ್ದರೆ ನಾಗಭಟ್ಟ ಇನ್ನಾರೊಡನೆಯೂ ದೈಹಿಕ ಸಂಪರ್ಕವನ್ನಿಟ್ಟುಕೊಳ್ಳುವುದಿಲ್ಲವೆಂದು ತಿಳಿದು ನಾಟಕದ ಗುಂಪನ್ನೇ ಬಿಟ್ಟು ಹೋಗುತ್ತಾಳೆ. ನಾಗಭಟ್ಟನಿಗೆ ಖಿನ್ನತೆಯುಂಟಾಗಿ ಒಂದು ರೀತಿಯ ಶೂನ್ಯಭಾವವು ಆವರಿಸಿಬಿಡುತ್ತದೆ. ತಾರಾವತಿಯಲ್ಲಿ ತನಗಾದ ಮೋಸವನ್ನು ತಿಳಿಯಲು ತಂತ್ರದ ಮೊರೆ ಹೋಗುತ್ತಾನೆ. ಎರೆಡು ವರ್ಷಗಳ ಕಾಲ ತಾಂತ್ರಿಕನಾಗಿದ್ದು ಕೊನೆಗೆ ಚಂದ್ರಿಕೆಯೇ ಅವನನ್ನು ಪುನಾ ಮೊದಲಿನ ಸ್ಥಿತಿಗೆ ತರುತ್ತಾಳೆ. ಆದರೆ ಈಗಲೂ ಅವಳು ಅವನೊಡನೆ ದೈಹಿಕ ಸಂಪರ್ಕಕ್ಕೆ ಒಪ್ಪುವುದಿಲ್ಲ. ನಾಗಭಟ್ಟನಿಗೆ ಮತ್ತೆ ಶೂನ್ಯಭಾವ ಆವರಿಸುತ್ತದೆ. ಬೌದ್ಧ ಭಿಕ್ಕು ವಜ್ರಪಾದರ ಸಲಹೆಯಂತೆ ಅವನು ವ್ಯಾಸಂಗಕ್ಕಾಗಿ ನಾಲಂದಕ್ಕೆ ಹೋಗುತ್ತಾನೆ.
ಇಲ್ಲಿಂದ ಮುಂದಿನ ಕಥೆಯಲ್ಲಿ ಭಾರತ ತತ್ವಶಾಸ್ತ್ರದ ದಿಗ್ಗಜರಾದ ಕುಮಾರಿಲಭಟ್ಟ, ಮಂಡನ ಮಿಶ್ರ, ಶಂಕರಾಚಾರ್ಯರು ಪಾತ್ರಗಳಾಗಿ ಬರುತ್ತಾರೆ. ಕುಮಾರಿಲರು ಗುರುದ್ರೋಹ ಮಾಡಿದೆನೆಂದು ಆತ್ಮಹತ್ಯೆ ಮಾಡಿಕೊಂಡಿದ್ದು, ಶಂಕರರು ಮಂಡನರನ್ನು ವಾಕ್ಯಾರ್ಥದಲ್ಲಿ ಸೋಲಿಸಿ ಶುದ್ಧ ಕರ್ಮಠರಾದ ಅವರನ್ನು ಸನ್ಯಾಸಿಗಳಾಗಿ ಪರಿವರ್ತಿಸಿ, ಅದ್ವೈತ ಸಿದ್ಧಾಂತವನ್ನು ಪ್ರಚುರಪಡಿಸಿದ್ದು ಮುಂತಾದ ಘಟನೆಗಳಿಗೆ ನಾಗಭಟ್ಟ ಸಾಕ್ಷಿಯಾಗುತ್ತಾನೆ.
ಕಾದಂಬರಿಯ ಕೊನೆಯಲ್ಲಿ ಭಾರತಕ್ಕೆ ಅರಬ್ಬರ ಆಕ್ರಮಣದ ಸನ್ನಿವೇಶ ಬರುತ್ತದೆ. ಮಂಡನರು ಶಂಕರರ ವಿರುದ್ಧ ಸೋತ ನಂತರ ನಾಗಭಟ್ಟ ಮತ್ತೆ ಮಥುರೆಗೆ ಬಂದು ಚಂದ್ರಿಕೆಯನ್ನು ಭೇಟಿಮಾಡುತ್ತಾನೆ. ಮೂಲಸ್ಥಾನದಲ್ಲಿನ (ಈಗಿನ ಮುಲ್ತಾನ್) ಅರಬ್ಬರ ಆಕ್ರಮಣವನ್ನು ತಿಳಿದು ಗುರ್ಜರರು ನಾಗಭಟ್ಟ ಮತ್ತು ಚಂದ್ರಿಕೆಯರನ್ನು ಅಲ್ಲಿನ ಜನರನ್ನು ಹುರಿದುಂಬಿಸಲು ಕೃಷ್ಣನ ನಾಟಕವಾಡುವುದಕ್ಕಾಗಿ ಕಳಿಸುತ್ತಾರೆ. ಅದನ್ನು ತಿಳಿದ ಅರಬ್ಬರು ಇವರಿಬ್ಬರನ್ನು ಬಂಧಿಸುತ್ತಾರೆ. ಚಂದ್ರಿಕೆ ತನ್ನನ್ನೇ ಅರಬ್ಬನ ಅಧಿಕಾರಿಗೆ ಒಪ್ಪಿಸಿಕೊಂಡು ತನ್ನನ್ನೂ ನಾಗಭಟ್ಟನನ್ನೂ ಅವರಿಂದ ಬಿಡಿಸಿಕೊಂಡು ಮರಳಿ ಮಥುರೆಗೆ ಬರುತ್ತಾಳೆ. ಕೊನೆಗೆ ತನ್ನ ಗುರುಗಳ ಸಲಹೆಯಂತೆ ನಾಗಭಟ್ಟನ್ನು ಮದುವೆಯಾಗಲು ಒಪ್ಪುತ್ತಾಳೆ. ಇಲ್ಲಿಗೆ ಕಾದಂಬರಿ ಮುಗಿಯುತ್ತದೆ.
ತಮ್ಮ ಇತರ ಕಾದಂಬರಿಗಳಂತೆ ಸಾರ್ಥದಲ್ಲಿಯೂ ಭೈರಪ್ಪನವರು ಮಾನವ ಜೀವನದ ಸಂಕೀರ್ಣತೆಯನ್ನು ನಾಗಭಟ್ಟ ಮತ್ತು ಚಂದ್ರಿಕೆಯರ ಪಾತ್ರಗಳ ಮೂಲಕ ತುಂಬಾ ಸೊಗಸಾಗಿ ಚಿತ್ರಿಸಿದ್ದಾರೆ. ಆದರೆ ಕಾದಂಬರಿಯ ವಸ್ತು ಎಂಟು-ಒಂಭತ್ತನೇ ಶತಮಾನಗಳ ಸಾಮಾಜಿಕ ಜೀವನ ಮತ್ತು ಮುಖ್ಯವಾಗಿ ಅಂದಿನ ತಾತ್ವಿಕ ಸಂಘರ್ಷಗಳು. ಕಾದಂಬರಿಯಲ್ಲಿ ತಂತ್ರಗಾರರ ಜೀವನ, ಬೌದ್ಧ ಧರ್ಮ, ಪೂರ್ವ ಮೀಮಾಂಸ ಮತ್ತು ಉತ್ತರ ಮೀಮಾಂಸಗಳ ವಿಷಯಗಳು ಪದೇ ಪದೇ ಬರುತ್ತವೆ. ನಾಗಭಟ್ಟ ಇವುಗಳ ಬಗ್ಗೆ ಹಲವಾರು ಬಗೆಗಳಲ್ಲಿ ಚಿಂತಿಸುತ್ತಾನೆ.
ಬೌದ್ಧ ಧರ್ಮದ ಅಂದಿನ ಪರಿಸ್ಥಿತಿಯನ್ನು ಒಬ್ಬ ವೈದಿಕನ ದೃಷ್ಟಿಯಲ್ಲಿ ವಿವರಿಸಿದ್ದಾರೆ. ೮ನೇ ಶತಮಾದ ಹೊತ್ತಿಗೆ ಬೌದ್ಧ ಧರ್ಮ ಸುಮಾರು ಸಾವಿರ ವರ್ಷಗಳ ಹಳೆಯದು. ಆದರೆ ಮುಂದಿನ ಎರೆಡು ಮೂರು ಶತಮಾನಗಳಲ್ಲಿ ಅದು ಭಾರತದಲ್ಲಿ ತನ್ನ ನೆಲೆಯನ್ನು ಬಹುಮಟ್ಟಿಗೆ ಕಳೆದುಕೊಳ್ಳುತ್ತದೆ. ಈ ಹಿನ್ನಲೆಯಲ್ಲಿ ಕಾದಂಬರಿಯಲ್ಲಿನ ಬೌದ್ಧ ಮತದ ವಿಷಯ ತುಂಬಾ ಮುಖ್ಯವಾಗುತ್ತದೆ. ಕಾದಂಬರಿಯ ಬಹುತೇಕ ಬೌದ್ಧ ಪಾತ್ರಗಳು ಸ್ವಲ್ಪ 'ಅಹಂಕಾರಿ'ಗಳೆನಿಸುತ್ತವೆ. ನಳಂದದಲ್ಲಿ ಬೌದ್ಧರು ಕುಮಾರಿಲರನ್ನು ನಡೆಸಿಕೊಂಡ ರೀತಿ, ವಜ್ರಪಾದ ಭಿಕ್ಕುವಿನ ವರ್ತನೆ ಇದನ್ನು ಸಮರ್ಥಿಸುತ್ತವೆ. ಬೌದ್ಧರು ಮತ ಪರಿವರ್ತನೆ ಮಾಡುವ, ಅಥವಾ ಮಾಡಲು ಪ್ರಯತ್ನಿಸುವ ಪ್ರಸಂಗಗಳಿವೆ. ವಜ್ರಪಾದ ಭಿಕ್ಕುಗಳು ಅನೇಕಬಾರಿ ನಾಗಭಟ್ಟನನ್ನು ಅನೇಕ ಬಾರಿ ಬೌದ್ಧನಾಗಿ ಪರಿವರ್ತನೆಗೊಳ್ಳಲು ಪ್ರಯತ್ನಿಸುತ್ತಾರೆ. ಮಥುರೆಯಲ್ಲಿ ಬೌದ್ಧ ಚೈತ್ಯವನ್ನು ಕಟ್ಟಲು ಬಂದ ಸ್ಥಪತಿಯನ್ನು ಪರಿವರ್ತನೆ ಮಾಡುವುದರಲ್ಲಿ ಯಶಸ್ವಿಯೂ ಆಗುತ್ತಾರೆ. ಬುದ್ಧಗಯೆಯಲ್ಲಿ ನಾಗಭಟ್ಟನು ಪ್ರಸ್ತುತ ಬೌದ್ಧರನ್ನು ಬುದ್ಧನ ಸಂದೇಶಗಳ ಜೊತೆ ಹೋಲಿಸುತ್ತಾನೆ. ಬುದ್ಧನ ಸರಳ ಉಪದೇಶಗಳಾದ ಅಹಿಂಸೆ, ಆಸೆಯೇ ದುಃಖಕ್ಕೆ ಮೂಲ ಮುಂತಾದವುಗಳ ಜೊತೆಗೆ ಅಂದಿನ ಬೌದ್ಧರ ತರ್ಕಗಳನ್ನು, ವೈದಿಕ ಧರ್ಮದ ಜೊತೆಗಿನ ಸಂಘರ್ಷವನ್ನು ತುಲನೆಮಾಡಿ, ಬುದ್ಧನ ಚಿಂತನೆಗಳು ಉಪನಿಷತ್ತುಗಳ ಸಂದೇಶಕ್ಕಿಂತ ಬೇರೆಯಾದುವೇ ಎಂಬ ಪ್ರಶ್ನೆಗಳನ್ನು ತನಗೆ ತಾನೇ ಕೇಳಿಕೊಳ್ಳುತ್ತಾನೆ. ಇವೆಲ್ಲವೂ ವೈದಿಕನಾದ ನಾಗಭಟ್ಟನ ದೃಷ್ಟಿಯಲ್ಲಿ ತೋರಿಸಿರುವುದರಿಂದ ಸಂದರ್ಭದ ಔಚಿತ್ಯಕ್ಕೆ ಸರಿಯಾಗಿ ಕಾಣುತ್ತವೆ. ಬೌದ್ಧ ಬಿಕ್ಕುವಿನ ದೃಷ್ಟಿ ಬೇರೆಯದೇ ಆಗಿರಬಹುದು.
ಇನ್ನು ಪೂರ್ವ ಮೀಮಾಂಸೆ ಮತ್ತು ಉತ್ತರ ಮೀಮಾಂಸೆಗಳ ಕುರಿತ ನಾಗಭಟ್ಟನ ಚಿಂತನೆಗಳು ಉತ್ತಮವಾಗಿವೆ. ಮಂಡನ ಮಿಶ್ರರ ಸಂಸ್ಯಾಸಿಗಳ ಕುರಿತಾದ ಅಭಿಪ್ರಾಯಗಳು, ಕರ್ಮದ ಪ್ರಾಮಖ್ಯತೆಯ ಬಗೆಗಿನ ಧೋರಣೆ ತುಂಬಾ ಚೆನ್ನಾಗಿದೆ. ಶಂಕರ ಯತಿಗಳ ಸನ್ಯಾಸವೇ ವೇದಾಂತ ವಿಜ್ಞಾದ ಸುನಿಶ್ಚಿತ ಅರ್ಥವೆಂಬ ಸಿದ್ಧಾಂತವನ್ನೂ, ಮಂಡನಮಿಶ್ರರ ಕರ್ಮಯೋಗವೇ ವೇದಗಳ ಸಾರವೆಂಬುದನ್ನೂ ನಾಗಭಟ್ಟನ ತುಮುಲಗಳ ಮೂಲಕ ಸುಂದರವಾಗಿ ಭೈರಪ್ಪನವರು ಮೂಡಿಸಿದ್ದಾರೆ. ಇಲ್ಲಿ ಕೆಲವು ಸೂಕ್ಷ್ಮ ಸಂಭಾಷಣೆಗಳು, ಪ್ರಸಂಗಗಳು ಓದುಗರ ಮನಸ್ಸನ್ನು ಯೋಚಿಸಿದಷ್ಟೂ ಆಳಕ್ಕೆ ಕರೆದುಕೊಂಡು ಹೋಗುತ್ತವೆ. "ಮಂಡನರು ಶಂಕರರ ವಿರುದ್ಧ ಸೋತ ನಂತರ, ಜನಗಳು ಸಂಸ್ಯಾಸವೇ ಜನರ ಮೂಲ ಧ್ಯೇಯವಾದಮೇಲೆ ನಾವೇಕೆ ಕೆಲಸಮಾಡಬೇಕು ಎಂದುಕೊಳ್ಳುತ್ತಿದ್ದಾರೆ", "ಬ್ರಹ್ಮಚರ್ಯೆಯಿಂದ ನೇರವಾಗಿ ಸನ್ಯಾಸಕ್ಕೆ ಜಿಗಿಯುವ ಶಕ್ತಿ ಇರುವವರು ವಿರಳ. ಜಗತ್ತಿನ ಸಂಸಾರ ಭಾಗವತ್ಸಂಕಲ್ಪದಂತೆ ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಆದರೂ ಸಕಲರೂ ಪರಬ್ರಹ್ಮದಲ್ಲಿ ಲೀನವಾಗಿ ಅಭಿವ್ಯಕವಾಗುವ ಸ್ಥಿತಿಯನ್ನು ಮಾತ್ರವೇ ನಾವು ಎದುರು ನೋಡಬೇಕಾಗಿರುವುದು", "ಯುದ್ಧ ಮಾಡಲೇಬೇಕು. ಅದು ನಿನ್ನ ಕರ್ತವ್ಯ ಎಂಬ ಮಾತು ಬುದ್ಧನ ಬಾಯಿಯಲ್ಲಿ ಬಂದೀತೆ? ಎಂದು ನನ್ನಲ್ಲಿ ನಾನು ಯೋಚಿಸುತ್ತಿದ್ದೆ" ಮುಂತಾದ ವಾಕ್ಯಗಳು ಮನಸ್ಸಿನ ಆಳಕ್ಕೆ ಕರೆದುಕೊಂಡು ಹೋಗುತ್ತವೆ.
ಇಡೀ ಕಾದಂಬರಿಯಲ್ಲಿ ನನಗೆ ಇಷ್ಟವಾದ ಎರೆಡು ಸಂದರ್ಭಗಳಿವೆ, ಒಂದು: ಪ್ರಜ್ಞಾಘನರ ವಿಚಾರ. ಪ್ರಜ್ಞಾಘನರೇ ಕುಮಾರಿಲಭಟ್ಟರೆಂದು ತಿಳಿಸುವ ಸಂದರ್ಭ. ಇತಿಹಾಸ ತಿಳಿದವರು ಇದನ್ನು ಊಹಿಸಬಹುದಾದರೂ ಕಾದಂಬರಿಯ ನಾಟಕೀಯ ಬೆಳವಣಿಗೆ ಈ ವಿಚಾರವನ್ನು ರೋಮಾಂಚನಗೊಳಿಸುತ್ತದೆ. ಎರಡು: ಶಂಕರ ಯತಿಗಳ ಮತ್ತು ಮಂಡನ ಮಿಶ್ರರ ಮೊದಲ ಭೇಟಿಯ ಸಂದರ್ಭ. ಕರ್ಮಯೋಗದ ಸಾಕಾರಮೂರ್ತಿಯಾದ ಮಂಡನರನ್ನು ಜ್ಞಾನಯೋಗದ ಸಾಕಾರಮೂರ್ತಿಯಾದ ಶಂಕರ ಯತಿಗಳು ಕರ್ಮಯೋಗದ ಮುಖ್ಯ ಕರ್ಮವಾದ ಶ್ರಾದ್ಧದ ಸಮಯದಲ್ಲಿ, "ಭವಾನ್ ಭಿಕ್ಷಾಂ ದದಾತು" ಎನ್ನುತ್ತಾ ಕಾಣಿಸಿಕೊಳ್ಳುವುದು. ಇದು ಭೈರಪ್ಪನವರ ಸೃಷ್ಟಿಯಲ್ಲದಿದ್ದರೂ ಸಂದರ್ಭ ಓದುಗರಿಗೆ ಪ್ರಸ್ತುತಪಡಿಸಿರುವ ಪರಿ ಶ್ಲಾಘನೀಯವಾಗಿದೆ.
ಭೈರಪ್ಪನವರ ಶಕ್ತಿ ಮಾನವನ ಮನಸ್ಸಿನ ತುಮುಲಗಳನ್ನು ಅದ್ಭುತವಾಗಿ ಚಿತ್ರಿಸುವುದು. ಇವುಗಳ ಬಗ್ಗೆ ಹೇಳುವುದಕ್ಕೆ ಏನೂ ಇಲ್ಲ, ನಾಗಭಟ್ಟನ ಮೂಲಕ ಅದನ್ನು ತೋರಿಸಿದ್ದಾರೆ. ೮ನೇ ಶತಮಾನದ ಭಾರತೀಯ ತತ್ವಶಾಸ್ತ್ರದ 'ಸಾರ್ಥ'ವನ್ನು ಒಂದು ಕಡೆ, ನಾಗಭಟ್ಟನ ಜೀವನದ 'ಸಾರ್ಥ'ವನ್ನು ಇನ್ನೊಂದು ಕಡೆ ಚಿತ್ರಿಸಿರುವ ಭೈರಪ್ಪನವರ ಸೃಜನಶೀಲತೆ ಅದ್ವಿತೀಯ.
ನನ್ನ ಅಭಿಪ್ರಾಯದಲ್ಲಿ ಸಾರ್ಥ ಭೈರಪ್ಪನವರ ಅತ್ಯುನ್ನತ ಕೃತಿಗಳಲ್ಲಿ ಮೊದಲಿನ ಸಾಲಿನಲ್ಲಿ ನಿಲ್ಲುತ್ತದೆ. ನಾನು ಎರೆಡು ಬಾರಿ ಓದಿರುವ ಎರಡೇ ಕಾದಂಬರಿಗಳಲ್ಲಿ ಸಾರ್ಥವೂ ಒಂದು (ಇನ್ನೊಂದು ಮಾಸ್ತಿ ವೆಂಕಟೇಶ ಅಯ್ಯಂಗಾರರ 'ಸುಬ್ಬಣ್ಣ' ಎಂಬ ನೀಳ್ಗತೆ). ಜನ ಮನ್ನಣೆಯಲ್ಲಿ ಆವರಣ ವಂಶವೃಕ್ಷಗಳಿಗೆ ಸಿಕ್ಕಿದ ಮನ್ನಣೆ ಸಾರ್ಥಕ್ಕೆ ಸಿಕ್ಕಿಲ್ಲವೆಂದೆನಿಸುತ್ತದೆ (ನನ್ನ ತಪ್ಪು ಕಲ್ಪನೆಯೂ ಇರಬಹುದು). ಆದರೂ, ಸಾರ್ಥವು ಭೈರಪ್ಪನವರು ಕನ್ನಡ ಸಾಹಿತ್ಯಕ್ಕೆ ಕೊಟ್ಟ ಅಪೂರ್ವ ಕೊಡುಗೆ.