“ರಮ್ಯಾಣಿ ವೀಕ್ಷ್ಯ
ಮಧುರಾಂಶ್ಚ ನಿಶಮ್ಯ ಶಬ್ದಾನ್ ಪರಯುತ್ಸುಕೀ ಭವತಿ ಯತ್ಸುಖಿತೋಪಿ ಜಂತುಃ” - ಎನ್ನುತ್ತಾನೆ
ಕಾಳಿದಾಸ. ಯಾವುದಾದರೂ ಸುಂದರವಾದದ್ದನ್ನು ನೋಡಿದಾಗ ಅಥವಾ ಮಧುರವಾದದನ್ನು ಕೇಳಿಸಿಕೊಂಡಾಗ
ಮನಸ್ಸು ಎಷ್ಟು ಸಂತೋಷವಾಗಿದ್ದರೂ ಒಂದು ರೀತಿಯ ವೇದನೆಗೆ ಒಳಗಾಗುತ್ತದಂತೆ. ಅದಕ್ಕೆ ಅವನು ಕೊಡುವ
ಕಾರಣ ಯಾವುವೋ ಅಬೋಧವಾದ ಭಾವನಾತರಂಗಗಳು. ಆದರೆ
ನನಗನ್ನಿಸುವಂತೆ ಪೂರ್ವ ಭಾವನೆಗಳಿಗಿಂತಲೂ ಆ ರಮ್ಯ ಅಥವಾ ಮಧುರ ಕಾಲಗಳು ಕೊನೆಯಾದವೆಂದೇ ಮನಸ್ಸು
ಮೊದಲು ಪರ್ಯುತ್ಸುಕಿಯಾಗುತ್ತದೆ. ಇಂತಹವು ಒಬ್ಬೊಬ್ಬರಿಗೆ ಒಂದೊಂದು ರೀತಿಯವು. ಕೆಲವು ಕೊಂಚ
ಹೂತ್ತು ಇದ್ದು ಮಾಯಾವಾಗುತ್ತದೆ, ಕೆಲವು ಬಹುಕಾಲ ಉಳಿಯುತ್ತವೆ. ನನಗೆ ಬಹುಕಾಲ
ಉಳಿದವುಗಳು ಎರೆಡು - ಮಹಾಭಾರತ ಮತ್ತು ರಾಮಾಯಣ ಮಹಾಕಾವ್ಯಗಳು. ಮಹಾಭಾರತವನ್ನು ನಾನು ಮೂಲದಲ್ಲಿ
ಓದಿಲ್ಲ. ಕೆ. ಎಸ್. ನಾರಾಯಣಾಚಾರ್ಯರ ಮಹಾಭಾರತದ ಕಾದಂಬರಿ ರೂಪವೇ ನನಗೆ ಅದರ ಪಾಠ. ಆ ಕಾದಂಬರಿಗಳ
ಮಹಾಭಾರತದ ಘಟನೆಗಳು ನನಗೆ ಎಷ್ಟೋ ದಿನಗಳವರಗೆ ನನ್ನ ಮಾನಸಪಟಲದಲ್ಲಿ ಉಳಿದಿದ್ದವು - ಇಂದಿಗೂ
ಉಳಿದಿವೆ.
ನಾರಾಯಣಾಚಾರ್ಯರ ಮಹಾಭಾರತದಂತೆ ನಾನು ರಾಮಾಯಣದ ಕಾದಂಬರೀಕರಣವನ್ನು ಓದಿಲ್ಲ - ಅದು ಇದ್ದರೆ
ಓದಬೇಕೆಂಬ ಆಸೆಯಿದೆ. ರಾಮಾಯಣದ ಪರಿಚಯ ನನಗೆ ಕೇವಲ ಕಥೆಗಳಿಂದಲೇ. ಕಥೆಗಳಲ್ಲಿ ನನಗೆ
ರಾಮಸೀತೆಯರ ಬಗ್ಗೆ ಭಕ್ತಿ ಹುಟ್ಟಿದ್ದು ಬಿಟ್ಟರೆ,
ಕಥೆಯು ನಿತ್ಯವೂ ನೆನಸಿಕೊಳ್ಳುವಷ್ಟು ಆತ್ಮೀಯವಾಗಿರಲಿಲ್ಲ.
ಈ ನಡುವೆ ನನಗೆ ಮೂಲ ರಾಮಾಯಣವನ್ನು ಓದಲು ಪ್ರೇರೇಪಿಸಿದ ಘಟನೆಗಳು ಎರೆಡು. ಮೊದಲನೆಯದು, ಡಿ.ವಿ. ಗುಂಡಪ್ಪನವರು ವಿದ್ವಾನ್ ರಂಗನಾಥಶರ್ಮರ ರಾಮಾಯಣದ ಅನುವಾದಕ್ಕೆ ಬರೆದ
ಮುನ್ನುಡಿಗಳು. ಎರೆಡನೆಯದು, ವಿದ್ವಾನ್ ರಂಗನಾಥಶರ್ಮರ ವಾಕ್ಯಗಳೆಂದು ನಾನು
ಕೇಳಿದ ಈ ಸಾಲುಗಳು: ಶರ್ಮರು ತಾವು ಕೊನೆಯುಸಿರೆಯುವಾಗ ತಮ್ಮ ಕೈಯಲ್ಲಿ ಪಾಣಿನಿಯ ವ್ಯಾಕರಣ ಸೂತ್ರಗಳು,
ತಲೆಯ ಮೇಲೆ ಶಾಂಕರಭಾಷ್ಯಗಳು, ಮತ್ತು ತಮ್ಮ ಹೃದಯದ ಮೇಲೆ ವಾಲ್ಮೀಕಿ ರಾಮಾಯಣದ ಪುಸ್ತಕವಿರಬೇಕೆಂದು ಬಯಸಿದ್ದರಂತೆ! ಈ
ಎರೆಡು ನನಗೆ ರಾಮಾಯಣ ಕೇವಲ ದೇವರ ಕಥೆಯಲ್ಲವೆಂದು ಮನದಟ್ಟು ಮಾಡಿಸಿತು. ಅಷ್ಟರಲ್ಲಿ ಐ.ಐ.ಟಿ.
ಖರಗ್ಪುರದವರು ನಮ್ಮ ಪೂರ್ವ ಶಾಸ್ತ್ರ ಕಾವ್ಯಗಳನ್ನು ಕನ್ನಡವೂ ಸೇರಿದಂತೆ ಇತರ ದೇಶೀ ಭಾಷೆಗಳಿಗೆ
ಅನುವಾದ ಮಾಡಿದ್ದರು. ಕಾವ್ಯ ವ್ಯಾಸಂಗ ಮಾಡುವಷ್ಟು ಸಂಸ್ಕೃತ ಬಾರದ ನನಗೆ ಇದು ವರದಾನವಾಯಿತು.
ವ್ಯಾಸಂಗಕ್ಕೆ ಮುನ್ನ ನನಗೆ ಬರುತ್ತಿದ್ದ ಅಷ್ಟಿಷ್ಟು ಸಂಸ್ಕೃತವನ್ನು ಪುನಾ ಮನನ ಮಾಡಿಕೊಂಡು ೨೪
ಸಾವಿರದ ಮೂಲ ರಾಮಾಯಣದ ಸಮೇತ ಅದರ ಅನುವಾದವನ್ನು ಓದಲು ಶುರು ಮಾಡಿದೆ.
ಮುಗಿಸುವ ಹೊತ್ತಿಗೆ ನನಗೆ ಸುಮಾರು ೬ ತಿಂಗಳು ಹಿಡಿದವು - ಕಾವ್ಯ ಮುಗಿಯುವ
ಹೊತ್ತಿಗೆ ನನಗೆ ಫಣಿರಾಯ ರಾಮಾಯಣದ ಕವಿಗಳ ಭಾರಕ್ಕೆ ಏಕೆ ತಿಣುಕಿದ ಎನ್ನುವುದು ತಿಳಿಯಿತು.
ರಾಮಾಯಣದ ಕೆಲವು ಘಟನೆಗಳು, ಕೆಲವು ಶ್ಲೋಕಗಳು ನನ್ನ ಮನಸ್ಸಿನಲ್ಲಿ
ಗಟ್ಟಿಯಾಗಿ ಕುಳಿತಿವೆ. ಯಾವ ಕಾರಣಕ್ಕಾದರೂ ಮನಸ್ಸು ವ್ಯಾಕುಲವಾದರೆ ರಾಮಾಯಣದ
ಸನ್ನಿವೇಶವೊಂದನ್ನು ನೆನಪಿಸಿಕೊಂಡರೆ ಶಾಂತವಾಗುತ್ತದೆ. ಸೀತಾರಾಮರ ಪಟವನ್ನು ನೋಡಿದರೆ ಮೈ
ರೋಮಾಂಚನವಾಗುತ್ತದೆ. ಭಾವನೆಗಳನ್ನು ಹೊರಗೆ ತೋರಿಸಲು ಸಾಧ್ಯವಿಲ್ಲ. ಆದರೆ ಕಾವ್ಯವನ್ನು ಓದುವಾಗ
ನನ್ನ ಮನಸ್ಸಿಗೆ ವಿಶೇಷವಾಗಿ ತಟ್ಟಿದ ಕೆಲವು ಶ್ಲೋಕಗಳನ್ನು ಇಲ್ಲಿ ಪ್ರಸ್ತಾಪಿಸುತ್ತೇನೆ.
೧. "ಕ್ಷಮಾ ದಾನಂ ಕ್ಷಮಾ ಯಜ್ಞಃ ಕ್ಷಮಾ ಸತ್ಯಂ ಹಿ ಪುತ್ರಿಕಾ:
ಕ್ಷಮಾ ಯಶ: ಕ್ಷಮಾ ಧರ್ಮ:
ಕ್ಷಮಯಾ ನಿಷ್ಠಿತಂ ಜಗತ್", ಬಾಲಕಾಂಡ, ಸರ್ಗ ೩೩, ಶ್ಲೋಕ ೮.
(ಮಕ್ಕಳೇ, ಕ್ಷಮೆಯೇ ದಾನ, ಯಜ್ಞ, ಸತ್ಯ, ಯಶಸ್ಸು, ಧರ್ಮ. ಕ್ಷಮೆಯಿಂದಲೇ ಜಗತ್ತು
ನಡೆಯುತ್ತಿದೆ.)
ಬಾಲಕಾಂಡದ ಮುಖ್ಯ ಆಕರ್ಷಣೆ ವಿಶ್ವಾಮಿತ್ರರು ರಾಮಲಕ್ಷ್ಮಣರಿಗೆ ಹೇಳುವ
ಉಪಕಥೆಗಳು. ವಸಿಷ್ಠ-ವಿಶ್ವಾಮಿತ್ರರ ಕಥೆ, ಗಂಗಾವತರಣ,
ಗೌತಮ-ಅಹಲ್ಯೆಯರ ಕಥೆ, ಕುಶನಾಭನ ಕಥೆ - ಇವೆಲ್ಲವೂ ಒಂದೊಂದೂ ಪ್ರತ್ಯೇಕ ಕಾವ್ಯಗಳಾಗುವಷ್ಟು
ಅದ್ಭುತವಾದವು. ಮನುಷ್ಯರಿಗೆ ಅವು ಕೊಡುವ ಗುಪ್ತ ಸಂದೇಶಗಳು ಅನೇಕ. ಮೇಲಿನ ಶ್ಲೋಕ ಕುಶನಾಭ ತನ್ನ
ಪುತ್ರಿಯರು ವಾಯುವಿನ ಮೇಲೆ ಕೋಪಗೊಂಡಾಗ ಅವರಿಗೆ ಕೊಡುವ ಸಲಹಾರೂಪವಾದ ಶ್ಲೋಕ. ಇದು ಕೇವಲ ಕ್ಷಮೆಯ
ಮಹತ್ವವನ್ನು ಸಾರುವುದಕ್ಕಿಂತ ಹೆಚ್ಚಾಗಿ ಅವನು ತನ್ನ ಪುತ್ರಿಯರಿಗೆ ಅದನ್ನು ಬೋಧಿಸುವ ಸನ್ನಿವೇಶ
ಸುಂದರವಾಗಿದೆ. ತಮಗೆ ವಾಯುವಿನಿಂದ ಇನ್ನೂ ತೊಂದರೆಯಾಗುತಿದ್ದರೂ, ಕ್ಷಮೆಯನ್ನು ಬೋಧಿಸುವ ಈ ಶ್ಲೋಕ ರಾಮಾಯಣದಲ್ಲಷ್ಟೇ ಸಿಗುತ್ತದೆ.
೨. "ವತ್ಸ ರಾಮ ಧನು: ಪಶ್ಯ ಇತಿ ರಾಘವಮಬ್ರವೀತ್", ಬಾಲಕಾಂಡ, ಸರ್ಗ ೬೭, ಶ್ಲೋಕ ೧೨.
("ಮಗು ರಾಮ, ಈ ಧನಸ್ಸನ್ನು ನೋಡು" ಎಂದು ರಾಮನಿಗೆ
ಹೇಳಿದರು)
ರಾಮನಿಗೆ ಈ ವಾಕ್ಯವನ್ನು ಹೇಳುವುದು ವಿಶ್ವಾಮಿತ್ರ ಮುನಿಗಳು. ಈ ವಾಕ್ಯವನ್ನು
ಸಂಸ್ಕೃತದಲ್ಲಿ ಓದಿದರೆ ಅದರ ಸೌಂದರ್ಯ ಇನ್ನೂ ಸುಂದರವಾಗಿ ಕೇಳಿಸುತ್ತದೆ. ರಾಮನಿಗೆ,
"ವತ್ಸ, ಧನು: ಪಶ್ಯ",
ಎಂದು ದಶರಥನೋ, ಕೌಸಲ್ಯೆಯೋ, ಅಥವಾ ಕೊನೆಗೆ ಜನಕನೋ ಹೇಳಿದ್ದರೆ ಅಷ್ಟು
ವಿಶೇಷವೆನಿಸುತ್ತಿರಲಿಲ್ಲ. ಆದರೆ ಇದನ್ನು ಹೇಳಿದ್ದು ವಿಶ್ವಾಮಿತ್ರಮುನಿಗಳು. ವಿಶ್ವಾಮಿತ್ರರು
ಕೋಪಕ್ಕೇ ಹೆಸರುವಾಸಿಯಾಗಿದ್ದವರು. ಈ ಮಾತು ಬರುವಷ್ಟರಲ್ಲಿ ಅವರು ಬ್ರಹ್ಮರ್ಷಿಗಳಾಗಿದ್ದರು. ದ್ವೇಷ, ಅಹಂಕಾರಗಳಿಂದ ತನ್ನ ತಪಸ್ಸನ್ನು ಶುರು ಮಾಡಿ,
ವಸಿಷ್ಠರಿಂದಲೇ ಬ್ರಹ್ಮರ್ಷಿಯೆನಿಸಿಕೊಂಡು, ಕೊನೆಗೆ ತನ್ನ ಅಹಂಕಾರವನ್ನು ಬಿಟ್ಟು ಆ ಕಥೆಯನ್ನು ರಾಮನಿಗೆ ಹೇಳಿದವರು. ಅಂತಹ
ಮಹರ್ಷಿ, ೧೬ ವರ್ಷದ ರಾಮನಿಗೆ, "ವತ್ಸ, ರಾಮ!" ಎನ್ನುವುದರಲ್ಲಿ ತೋರಿಸಿದ
ಪ್ರೀತಿ ಅತಿಶಯ, ಊಹಿಸಲೂ ಕಷ್ಟ. ನನಗೆ ಈ ವಾಕ್ಯದಿಂದ ರಾಮನ
ಪ್ರಸನ್ನತೆ ವಿಶ್ವಾಮಿತ್ರರ ಅಹಂಕಾರವನ್ನು ಸಂಪೂರ್ಣವಾಗಿ ಪರ್ಯಾವಸಾನ ಮಾಡಿತು ಎಂದೆನಿಸುತ್ತದೆ.
೩. "ತಸ್ಯಾಶ್ಚ ಭರ್ತಾ ದ್ವಿಗುಣಂ ಹೃದಯೇ ಪರಿವರ್ತತೇ.
ಅನ್ತರ್ಜಾತಮಪಿ
ವ್ಯಕ್ತಮಾಖ್ಯಾತಿ ಹೃದಯಂ ಹೃದಾ", ಬಾಲಕಾಂಡ, ಸರ್ಗ ೭೭, ಶ್ಲೋಕ ೩೦.
ಸೀತೆ ರಾಮನನ್ನು ಅವನು ಪ್ರೀತಿಸಿದಕ್ಕಿಂತ ಎರೆಡು ಪಟ್ಟು ಹೆಚ್ಚಾಗಿ
ಪ್ರೀತಿಸುತ್ತಿದ್ದಳು. ತಮ್ಮ ಅಂತರಂಗದಲ್ಲಿ ವ್ಯಕ್ತವಾದ ಭಾವನೆಗಳನ್ನು ಸೀತಾರಾಮರು ತಮ್ಮ
ಹೃದಯಗಳಿಂದಲೇ ಒಬ್ಬರಿಗೊಬ್ಬರು ತಿಳಿಸುತ್ತಿದ್ದರಂತೆ. ಸೀತಾರಾಮರ ಅನ್ಯೋನ್ಯತೆಯನ್ನು, ಅವರ ನಡುವೆ ಇದ್ದ ಪ್ರೀತಿಯನ್ನು ಇದಕ್ಕಿಂತ ಹೆಚ್ಚಾಗಿ ಹೇಳಲು ಹೇಗೆ ಸಾಧ್ಯ?
೪. "ಸನ್ನಿಕರ್ಷಾಚ್ಚ ಸೌಹಾರ್ದಂ ಜಾಯತೇ ಸ್ಥಾವರೇಷ್ವಪಿ", ಅಯೋಧ್ಯಾ ಕಾಂಡ, ಸರ್ಗ ೩, ಶ್ಲೋಕ ೨೮.
ಮೇಲಿನ ಮೂರು ಶ್ಲೋಕಗಳು ನನಗೆ ಸನ್ನಿವೇಶದಿಂದ ಇಷ್ಟವಾದರೆ, ಇದು ಕೇವಲ ಶ್ಲೋಕದ ಅರ್ಥದಿಂದ ಇಷ್ಟವಾಯಿತು. ಇದನ್ನು ಹೇಳುವುದು ಮಂಥರೆ! ಮುಂದೆ
ಮಾರೀಚ ಅತ್ಯಂತ ಪ್ರಸಿದ್ದವಾದ, "ರಾಮೋ ವಿಗ್ರವಾನ್ ಧರ್ಮಃ"
ಎನ್ನುತ್ತಾನೆ. ರಾಮಾಯಣದಲ್ಲಿ ಕೆಲವು ಅಪ್ರಸನ್ನ ಪಾತ್ರಗಳು ಪ್ರಸನ್ನ ವಾಕ್ಯಗಳನ್ನು ಆಡುತ್ತವೆ.
ಇದು ವಿಶೇಷವೋ, ವಿಪರ್ಯಾಸವೋ ನನಗೆ ತಿಳಿಯದು.
ಹತ್ತಿರವಿರುವುದರಿಂದ ನಮಗೆ ನಿರ್ಜೀವ ವಸ್ತುಗಳಲ್ಲಿಯೂ ಒಂದು ರೀತಿಯ ಸೌಹಾರ್ದವೇರ್ಪಡುತ್ತದೆ
ಎನ್ನುವುದು ಎಷ್ಟು ಅನುಭವಸಿದ್ಧವಾದ ಮಾತು. ನಾವೆಲ್ಲರೂ ಒಂದಲ್ಲ ಒಂದು ದಿನ ಇದನ್ನು ಅನುಭವಿಸಿಯೇ
ಇರುತ್ತೇವೆ. ಇದನ್ನು ವಾಲ್ಮೀಕಿ ಮಹರ್ಷಿಗಳು ಎಂದೋ ಹೇಳಿದ್ದರು.
೫. "ಯಾ ನ ಶಕ್ಯಾ ಪುರಾ ದ್ರಷ್ಟುಂ ಭೂತೈರಾಕಾಶಗೈರಪಿ.
ತಾಮದ್ಯ ಸೀತಾಂ ಪಶ್ಯನ್ತಿ
ರಾಜಮಾರ್ಗಗತಾ ಜನಾಃ", ಅಯೋಧ್ಯಾ ಕಾಂಡ, ಸರ್ಗ ೩೩, ಶ್ಲೋಕ ೮.
"ಅಸಮಞ್ಜ ಇತಿ
ಖ್ಯಾತಂ ತಥಾಯಂ ಗನ್ತುಮರ್ಹತಿ", ಅಯೋಧ್ಯಾ ಕಾಂಡ, ಸರ್ಗ ೩೬, ಶ್ಲೋಕ ೧೬.
ರಾಮಸೀತೆಯರಿಗೆ ದಶರಥಸಭೆಯಲ್ಲಿ ಆದ ಅವಮಾನವನ್ನು ಈ ಎರೆಡು ಶ್ಲೋಕಗಳು
ತೋರಿಸುತ್ತವೆ. ಮೊದಲ ಶ್ಲೋಕ, "ಯಾವ ಸೀತೆಯನ್ನು ನೋಡಲು ಭೂತಗಳಿಗೂ, ಆಕಾಶಕ್ಕೋ ಸಾಧ್ಯವಾಗಿಲ್ಲವೋ, ಅಂತಹ ಸೀತೆ ಇಂದು
ದಾರಿಯಲ್ಲಿ ನಡೆಯುವಾಗ ಸಾಮಾನ್ಯ ಜನರು ನೋಡಿದರು" ಎನ್ನುತ್ತದೆ. ಎಂತಹ ವಿಪರ್ಯಾಸ! ಎರಡನೆಯ
ಶ್ಲೋಕವನ್ನು ಕೈಕೆ ಸಭೆಗೆ ಹೇಳುತ್ತಾಳೆ - "ಸಗರನ ಮಗನಾದ ಅಸಮಂಜನಂತೆ ಈ ರಾಮನೂ ಕಾಡಿಗೆ
ಹೋಗಲಿ". ಎದು ಎಂತಹ ಹೋಲಿಕೆ! ಚಿಕ್ಕ ಮಕ್ಕಳನ್ನು ನದಿಗೆ ಎಸೆದ ಅಸಮಂಜನ ಗಡಿಪಾರನ್ನು, ಯಾವುದೇ
ತಪ್ಪನ್ನೂ ಮಾಡದ, ಕೇವಲ ತನ್ನ ತಂದೆಯ ಮಾತು ತೀರಿಸಲು ಕಾಡಿಗೆ
ಹೊರಡಲು ಸಿದ್ದನಾದ ರಾಮನಿಗೆ ಹೋಲಿಸುವುದು ಎಂದರೇನು? ಭರತನಿಗೆ ಪಟ್ಟಕಟ್ಟು ಎಂದು ಹೇಳುವ ಕೈಕೆಯ ಮೋಹವನ್ನು ಸಹಿಸಬಹುದಾದರೂ, ಸೀತೆಯನ್ನು ಅಯೋಧ್ಯೆಯ ರಾಜಬೀದಿಯಲ್ಲಿ ನಡೆಸಿದ ಮನೋಭಾವವನ್ನು ಸಹಿಸಬಹುದಾರರೂ,
ತುಂಬಿದ ಸಭೆಯಲ್ಲಿ ರಾಮನನ್ನು ಅಸಮಂಜನಿಗೆ ಹೋಲಿಸುವ
ಮಾತ್ಸರ್ಯದ ಕ್ರೌರ್ಯವನ್ನು ಕೇಳಲೂ ಸಾಧ್ಯವಾಗುವುದಿಲ್ಲ. ಇದು ವಸಿಷ್ಠರಂತಹ ಬ್ರಹ್ಮರ್ಷಿಯೂ
ಕೋಪಿಸಿಕೊಳ್ಳುವಂತೆ ಮಾಡುತ್ತದೆ. ಕೈಕೆಯ ಅಧಃಪತನ ಎಲ್ಲಿಯವರೆಗೂ ಹೋಗಿರಬಹುದು!
೬. "ತಂ ನಿವರ್ತಯಿತುಂ ಯಾಮಿ ಕಾಕುತ್ಸ್ಥಂ ವನವಾಸಿನಮ್.
ಬುದ್ಧಿರನ್ಯಾ ನ ತೇ ಕಾರ್ಯಾ
ಗುಹ ಸತ್ಯಂ ಬ್ರವೀಮಿ ತೇ", ಅಯೋಧ್ಯಾ ಕಾಂಡ, ಸರ್ಗ ೮೫, ಶ್ಲೋಕ ೧೦
ರಾಮನನ್ನು ವಾಪಸ್ಸು ಕರೆತರಲು ತನ್ನ ಸೈನ್ಯ ಸಮೇತನಾಗಿ ಬಂದ ಭರತನ ಮೇಲೆ ಗುಹ
ಶಂಕೆ ಪಟ್ಟು ತನ್ನ ಬಿಲ್ಲುಗಾರರನ್ನು ಸಿದ್ಧವಾಗಿರಲು ತಿಳಿಸುತ್ತಾನೆ. ನಂತರ ತನ್ನ ಸಂದೇಹವನ್ನು
ಭರತನಿಗೆ ತಿಳಿಸಿದಾಗ ಭರತ ಹೇಳುವ ಮಾತುಗಳು ಹೃದಯ ಭೇದಕವಾಗಿವೆ. "ನಾನು ರಾಮನನ್ನು
ವಾಪಸ್ಸು ಕರೆತರಲು ಮಾತ್ರವೇ ಹೋಗುತ್ತಿದ್ದೇನೆ. ನನಗೆ ಬೇರೆ ಯಾವ ಉದ್ದೇಶವೂ ಇಲ್ಲ. ಗುಹ,
ನಾನು ನಿನಗೆ ಸತ್ಯವನ್ನೇ ಹೇಳುತ್ತಿದ್ದೇನೆ".
"ಗುಹ ಸತ್ಯಂ ಬ್ರವೀಮಿ ತೇ" ಎನ್ನುವ ಮಾತುಗಳಲ್ಲಿ ಭರತನ ದೈನ್ಯ ಎಂಥವರ ಮನವನ್ನು
ಕರಗಿಸುತ್ತದೆ. ಇಕ್ಷ್ವಾಕು ವಂಶದ ರಾಜನಾಗಿ ಇಡೀ ಭೂಮಿಯ ಒಡೆತನವೇ ತನ್ನ ಕಾಲ ಕೆಳಗಿದ್ದರೂ,
ಕೇವಲ ನಿಷಾದರ ರಾಜನನ್ನು ನಂಬಿಸಲು ಪ್ರಯತ್ನಿಸುವ ಭರತನ
ಸತ್ಯಪರತೆ, ವಿನಯ ಅನಿರ್ವಚನೀಯ. ರಾಮನ ತ್ಯಾಗ ಹೆಚ್ಚೊ
ಭರತನ ತ್ಯಾಗ ಹೆಚ್ಚೊ ಎಂದು ನಿರ್ಧರಿಸುವುದು ಕಷ್ಟ ಎಂಬ ಡಿ.ವಿ.ಜಿ. ಅವರ ಮಾತು ಎಷ್ಟು ಸತ್ಯ!
೭. "ರಾಜ್ಯಂ ಭ್ರಷ್ಟಂ ವನೇ ವಾಸಸ್ಸೀತಾ ನಷ್ಟಾ ಹತೋ ದ್ವಿಜಃ.
ಈದೃಶೀಯಂ
ಮಮಾಲಕ್ಷ್ಮೀರ್ನಿರ್ದಹೇದಪಿ ಪಾವಕಮ್", ಅರಣ್ಯ ಕಾಂಡ,
ಸರ್ಗ ೬೭, ಶ್ಲೋಕ ೨೪.
ರಾಮನನ್ನು ದೇವರೆಂದೇ ಪೂಜಿಸುವ ನಾವು ಅವನ ಧೈರ್ಯ, ಪರಾಕ್ರಮ, ಧರ್ಮಪರತೆಗಳನ್ನು ಕೊಂಡಾಡುತ್ತೇವೆ. ಅದರ
ನಡುವೆ ನಮಗೆ ಅವನ ನಿಷ್ಕಲ್ಮಶವಾದ, ಭಾವನಾತ್ಮಕವಾದ ಮನಸ್ಸು ಮರೆತುಹೋಗುತ್ತದೆ.
ತನಗೆ ಎಷ್ಟು ಕಷ್ಟ ಬಂದರೂ ಎದೆಗುಂದದೆ, ಸಂಯಮದಿಂದ ಎಲ್ಲವನ್ನೂ ದಾಟುವ ರಾಮನಿಗೂ ದುಃಖ,
ನಿರಾಶೆಗಳು ಕಾಡಬಹುದಲ್ಲವೇ? ಅವನ ದುಃಖದ ಪರಾಕಾಷ್ಠೆ ತನ್ನ ಪ್ರಿಯೆಯನ್ನು ಕಾಪಾಡಲು ಪ್ರಯತ್ನಿಸಿದ ಜಟಾಯುವಿನ
ಮರಣದಲ್ಲಿ ವ್ಯಕ್ತವಾಗುತ್ತದೆ. "ರಾಜ್ಯ ನಷ್ಟವಾಯಿತು, ಕಾಡಿನಲ್ಲಿ ಇದ್ದಿದ್ದಾಯಿತು, ಸೀತೆಯನ್ನು
ಕಳೆದುಕೊಂಡದ್ದಾಯಿತು, ಈ ನಮ್ಮ ಜಟಾಯೂವೂ ಸತ್ತ. ಈ ನನ್ನ ಅಲಕ್ಷ್ಮಿ
ಬೆಂಕಿಯನ್ನೂ ಸುಡಬಲ್ಲಳು!" - ರಾಮನಿಗೂ ಈ ಪರಿಯ ನಿರಾಶೆ! ರಾಮನ ದುರಾದೃಷ್ಟ ಬೆಂಕಿಯನ್ನೂ
ಸುಡಬಲ್ಲಷ್ಟು ಬಲವಾಗಿತ್ತಂತೆ!
೮. "ಸೀತಾ ಕಪೀನ್ದ್ರಕ್ಷಣದಾಚರಾಣಾಂ
ರಾಜೀವಹೇಮಜ್ವಲನೋಪಮಾನಿ
ಸುಗ್ರೀವರಾಮಪ್ರಣಯಪ್ರಸಙ್ಗೇ
ವಾಮಾನಿ ನೇತ್ರಾಣಿ ಸಮಂ
ಸ್ಫುರನ್ತಿ", ಕಿಷ್ಕಿಂದಾ ಕಾಂಡ, ಸರ್ಗ ೪, ಇಂದ್ರವಜ್ರ ೩೨.
ಈ ಇಂದ್ರವಜ್ರ ಪದ್ಯ ವಾಲ್ಮೀಕಿ ಕವಿಗಳ ಕಾವ್ಯ ರಚನಾ ಕೌಶಲ್ಯದ ಉತ್ತಮ ಉದಾಹರಣೆ.
ಕೇವಲ ೪೪ ಅಕ್ಷರಗಳಲ್ಲಿ ತಮ್ಮ ಮುಂದಿನ ಕಥಾವಸ್ತುವನ್ನು ಅದ್ಭುತವಾಗಿ ವರ್ಣಿಸುತ್ತಾರೆ.
"ರಾಮ-ಸುಗ್ರೀವರ ಸ್ನೇಹದ ಪ್ರಸಂಗದಲ್ಲಿ, ಕಮಲದಂತಹ ಸೀತೆಯ,
ಬಿಳುಪಾದ ವಾಲಿಯ, ಜ್ವಲಿಸುವ ರಾವಣನ ಎಡ ಕಣ್ಣುಗಳು ಒಂದೇ ಬಾರಿಗೆ ಅದುರಿದವು." ಮಹಿಳೆಯರಿಗೆ
ಎಡಗಣ್ಣು ಅದುರಿದರೆ ಶುಭವೆನ್ನುವುದೂ, ಅದೇ ಎಡಗಣ್ಣು ಅದುರಿದರೆ ಪುರುಷರಿಗೆ
ಅಶುಭವೆನ್ನುವುದೂ ನಮಗೆ ತಿಳಿದೇ ಇದೆ. ಈ ವಿಷಯವನ್ನು ಸೂಚಿಸಿ ಮುಂದೆ ಸೀತೆಯ ಶುಭವನ್ನೂ,
ವಾಲಿ-ರಾವಣರ ಮರಣವನ್ನೂ ಒಂದೇ ಪದ್ಯದಲ್ಲಿ
ಹೇಳುತ್ತಾರೆ.
೯. "ನಿದ್ರಾ ಶನೈಃ ಕೇಶವಮಭ್ಯುಪೈತಿ
ದ್ರುತಂ ನದೀ
ಸಾಗರಮಭ್ಯುಪೈತಿ.
ಹೃಷ್ಟಾ ಬಲಾಕಾ ಘನಮಭ್ಯುಪೈತಿ
ಕಾನ್ತಾ ಸಕಾಮಾ
ಪ್ರಿಯಮಭ್ಯುಪೈತಿ", ಕಿಷ್ಕಿಂದ ಕಾಂಡ, ಸರ್ಗ ೨೮, ಶಾಲಿನಿ(?) ೨೫
ಕಾವ್ಯಗಳಲ್ಲಿ ಪ್ರಕೃತಿ, ಋತು ವರ್ಣನೆ ಸಾಮಾನ್ಯ. ವಾಲ್ಮೀಕಿ ಕವಿಗಳ
ಪಂಕ್ತಿಯನ್ನೇ ಭಾರತದ ಬೇರೆ ಕವಿಗಳು ಅನುಸರಿಸಿದ್ದಾರೆ. ವಾಲಿಯನ್ನು ಕೊಂದ ಮೇಲೆ ರಾಮ
ಲಕ್ಷ್ಮಣನಿಗೆ ವರ್ಷಾಕಾಲವನ್ನು ಎಷ್ಟು ಮನೋಹರವಾಗಿ ವರ್ಣಿಸಿದ್ದಾನೆ - "(ಈ ಋತುವಿನಲ್ಲಿ)
ನಿದ್ದೆ ನಿಧಾನವಾಗಿ ಕೇಶವನನ್ನು ಆಕ್ರಮಿಸುತ್ತಿದೆ, ವೇಗವಾಗಿ ಓಡುವ ನದಿ ಸಾಗರವನ್ನು ಸೇರುತ್ತಿದೆ, ಸಂತೋಷವಾಗಿ ಬಲಾಕ ಪಕ್ಷಿಗಳು ಮೋಡಕ್ಕೆ ಹಾರುತ್ತಿವೆ, ಕಾಮಿಯಾದ ಪತ್ನಿ ತನ್ನ ಪ್ರಿಯಕರನನ್ನು ಸೇರುತ್ತಿದ್ದಾಳೆ."
೧೦. ನಮೋಸ್ತು ರಾಮಾಯ ಸಲಕ್ಷ್ಮಣಾಯ
ದೇವ್ಯೈ ಚ ತಸ್ಯೈ
ಜನಕಾತ್ಮಜಾಯೈ.
ನಮೋಸ್ತು
ರುದ್ರೇಂದ್ರಯಮಾನಿಲೇಭ್ಯೋ
ನಮೋಸ್ತು
ಚನ್ದ್ರಾರ್ಕಮರುದ್ಗಣೇಭ್ಯಃ, ಸುಂದರಕಾಂಡ, ಸರ್ಗ ೧೩, ಉಪೇಂದ್ರವಜ್ರ ೫೯.
ಸುಂದರಕಾಂಡದಲ್ಲಿ ಎಲ್ಲವೂ ಸುಂದರವೇ. ಇದು ಹನುಮನ ಕಾಂಡ. ಸೀತೆಯನ್ನು ಹುಡುಕಲು
ಲಂಕೆಗೆ ಬರುವ ಹನುಮನಿಗೆ ಎಷ್ಟು ಹುಡುಕಿದರೂ ಅವಳು ಸಿಕ್ಕುವುದಿಲ್ಲ. ಹುಡುಕಿ, ಹುಡುಕಿ ಸಾಕಾಗಿ ವಿಷಣ್ಣನಾಗುತ್ತಾನೆ. ಅವಳು ಸಿಗುವುದೇ ಇಲ್ಲವೋ ಎಂಬಷ್ಟು ಶೋಕ
ಅವರಿಸಿಕೊಂಡುಬಿಡುತ್ತದೆ. ನಂತರ ಕೊನೆಯಲ್ಲಿ ಧೈರ್ಯ ತಂದುಕೊಂಡು ಅಶೋಕ ವನಕ್ಕೆ ಹೋಗುವ ಮುಂಚೆ,
ರಾಮ, ಸೀತೆ, ಲಕ್ಷ್ಮಣ, ರುದ್ರ, ಅನಿಲ, ಸೂರ್ಯ, ಚಂದ್ರ ಎಲ್ಲರಿಗೂ ನಮಸ್ಕಾರ ಮಾಡುತ್ತಾನೆ. ಸಾಧ್ಯವಾದಷ್ಟೂ ಮನುಷ್ಯ ಪ್ರಯತ್ನ
ಮುಗಿದ ನಂತರವೇ ದೈವಕ್ಕೆ ಮೊರೆಹೋಗಬೇಕು ಎನ್ನುವ ಈ ಉಪೇಂದ್ರವಜ್ರ ಛಂದಸ್ಸಿನ ಶ್ಲೋಕ ಎಲ್ಲರಿಗೂ
ಅನ್ವಯವಾಗುವಂಥದು.
೧೧. "ಪ್ರದೀಯತಾಂ ದಾಶರಥಾಯ ಮೈಥಿಲೀಮ್", ಯುದ್ಧಕಾಂಡ.
"ಸೀತೆಯನ್ನು ರಾಮನಿಗೆ ಕೊಟ್ಟುಬಿಡೋಣ" - ಈ ಮಾತು ಕಿಷ್ಕಿಂಧಾಕಾಂಡದಿಂದ
ಯುದ್ಧಕಾಂಡದವರೆಗೂ ಸುಮಾರು ನೂರಕ್ಕಿಂತಲೂ ಹೆಚ್ಚು ಬಾರಿ ಬರುತ್ತದೆ. ಮಾರೀಚನಿಂದ
ಕುಂಭಕರ್ಣವರೆಗೂ ಎಲ್ಲರೂ ರಾವಣನಿಗೆ ಈ ಸಲಹೆಯನ್ನು ಕೊಡುತ್ತಾರೆ. ರಾವಣನ ಪಾಪದ ಕೆಲಸವನ್ನು
ಇಷ್ಟು ಬಾರಿ ವಾಲ್ಮೀಕಿಗಳು ಒತ್ತಿ ಒತ್ತಿ ಬರೆದಿದ್ದರೆ. ಎಲ್ಲರೂ ಇಷ್ಟು ಹೇಳಿದರೂ ಜಗ್ಗದ ರಾವಣನ
ವರ್ತನೆಗೆ ಕಾರಣ ಧರ್ಮವಿರುದ್ದವಾದ ಕಾಮವೋ, ಅಹಂಕಾರವೋ,
ಮೂರ್ಖತ್ವವೋ - ಅವನಿಗೇ ತಿಳಿಯಬೇಕು.
೧೨. "ಪ್ರದೇಹಿ ಸುಭಗೇ ಹಾರೇ ಯಸ್ಯ ತುಷ್ಟಾಸಿ ಭಾಮಿನೀ
ದದೌ ಸಾ ವಾಯುಪುತ್ರಯ
ತಮ್ ಹಾರಮಾಸಿತೇಕ್ಷಣಾ", ಯುದ್ಧಕಾಂಡ.
ಯುದ್ದವೆಲ್ಲ ಮುಗಿದ ಮೇಲೆ ಎಲ್ಲರೂ ಅಯೋಧ್ಯೆಗೆ ಬಂದು, ರಾಮನಿಗೆ ಪಟ್ಟಾಭಿಷೇಕವಾಗುತ್ತದೆ. ನಂತರ ತುಂಬಿದ ಸಭೆಯಲ್ಲಿ ರಾಮ
ಸುಗ್ರೀವಾದಿಯಾಗಿ ಎಲ್ಲರಿಗೂ ಯಥೋಚಿತವಾಗಿ ಬಹುಮಾನಗಳನ್ನು ಕೊಡುತ್ತಾನೆ. ಕೊನೆಗೆ ಸೀತೆ ತನ್ನ
ಕತ್ತಿನಲ್ಲಿದ್ದ ಹಾರವನ್ನೇ ಕೊಡಬೇಕೆಂದು ಅದನ್ನು ತೆಗೆಯುತ್ತಾಳೆ. ರಾಮ ಮುಗುಳ್ನಗೆಯಿಂದ ಅವಳಿಗೆ,
"ಭಾಮಿನಿ, ನಿನಗಿಷ್ಟವಾದವರಿಗೆ ಈ ಹಾರವನ್ನು ಕೊಡು" ಎನ್ನುತ್ತಾನೆ. ಆಗ ಅವಳು ಅದನ್ನು
ಹನುಮನಿಗೆ ಕೊಡುತ್ತಾಳೆ. ಇದು ಎಷ್ಟು ಸುಂದರ! ಸೀತಾರಾಮರಿಗೆ ಹನುಮ ಎಷ್ಟು ಮುಖ್ಯವಾಗಿದ್ದ! ಸೀತೆ
ಅವನಿಗೆ ಎಷ್ಟು ಋಣಿಯಾಗಿದ್ದಳು. ಸೀತೆ ತನ್ನ ಕಂಠದ ಹಾರವನ್ನು ಹನುಮನಿಗೆ ಕೊಡುವ ಸನ್ನಿವೇಶವನ್ನು
ಎಷ್ಟು ಬಾರಿ ಊಹಿಸಿಕೊಂಡರೂ ನನಗೆ ಮೈ ರೋಮಾಂಚನವಾಗುತ್ತದೆ. ಆ ಸಂದರ್ಭದಲ್ಲಿ ಸೀತೆ, ರಾಮ, ಹನುಮರ ಮುಖಗಳ ಭಾವನೆಗಳು ಹೇಗಿದ್ದವು -
ಅದನ್ನು ನೋಡಿದವರೇ ಪುಣ್ಯವಂತರು. ಯಾರಾದರೂ ಸಹೃದಯ ಚಿತ್ರಕಾರ ಈ ಸಂದರ್ಭವನ್ನು ಚಿತ್ರಿಸಿದರೆ
ಅದನ್ನು ನಮ್ಮ ದೇವರ ಮನೆಯಲ್ಲಿ ಇಟ್ಟುಕೊಳ್ಳುವ ಆಸೆ ನನಗೆ!
ರಾಮಾಯಣವನ್ನು ಓದಲು ಶುರುಮಾಡಿದಾಗಿನಿಂದ ನಾನು ನನ್ನ ಮನಸ್ಸಿಗೆ ಹತ್ತಿರವಾದ ಕೆಲವು
ಶ್ಲೋಕಗಳನ್ನು ಗುರುತುಹಾಕಿಕೊಂಡಿದ್ದೆ. ಅವುಗಳಲ್ಲಿ ಹನ್ನೆರೆಡನ್ನು ಮಾತ್ರ ಮೇಲೆ
ಪ್ರಸ್ತಾಪಿಸಿದ್ದೇನೆ. ಇವುಗಳ ಜೊತೆ ಇನ್ನೂ ಕೆಲವು ನನ್ನ ಸಂಗ್ರಹದಲ್ಲಿವೆ. ನನಗೆ ವಾಲ್ಮೀಕಿ
ರಾಮಾಯಣ ಕರುಣಾ ಮತ್ತು ಶೃಂಗಾರರಸಗಳ ಕಾವ್ಯ. ನನ್ನ ಆಯ್ಕೆಗಳು ಆ ದೃಷ್ಟಿಯಲ್ಲಿ ಇವೆ. ಬಹುಶಃ
ಅನೇಕರಿಗೆ ಇವುಗಳಿಗಿಂತ ಇನ್ನೂ ಬೇರೆ ಶ್ಲೋಕಗಳು ಇಷ್ಟವಾಗಬಹುದು. ನನಗೆ ಅನ್ನಿಸಿದಂತೆ ರಾಮಾಯಣ
ಒಂದು ಮಹಾಸಾಗರ. ಎಲ್ಲರಿಗೂ ಅದರಲ್ಲಿರುವ ಎಲ್ಲ ರತ್ನಗಳನ್ನೂ ಪಡೆಯಲು ಸಾಧ್ಯವಾಗುವುದಿಲ್ಲ.
ಒಬ್ಬೊಬ್ಬರು ತಮಗೆ ಸಿಕ್ಕಿದ, ತಮಗೆ ಇಷ್ಟವಾಗುವ ರತ್ನಗಳನ್ನು
ಆರಿಸಿಕೊಳ್ಳುತ್ತಾರೆ. ನಾನೂ ಕೆಲವನ್ನು ಆರಿಕೊಂಡು ಶ್ರೀಮಂತನಾಗಿದ್ದೇನೆ. ಎಲ್ಲ ರತ್ನಗಳನ್ನೂ
ಆರಿಸಲು ಆ ಸಾಗರವನ್ನು ಸೃಷ್ಟಿಸಿದ ವಾಲ್ಮೀಕಿಗಳಿಗೆ ಮಾತ್ರ ಸಾಧ್ಯ. ರಾಮನನ್ನು 'ಮಾಮಕಾಭೀಷ್ಟದಾಯ' ಎನ್ನುತ್ತಾರೆ. ರಾಮಾಯಣವನ್ನು ಓದಿದ ಮೇಲೆ
ಅದರ ನಿಜವಾದ ಅರ್ಥವಾಗುತ್ತಿದೆ. ಯಾವುದೇ ಸಂದರ್ಭದಲ್ಲಾದರೂ ಈ ಕಾವ್ಯವನ್ನು ಓದಿದರೆ ಆ
ಅಭೀಷ್ಟವನ್ನು ಸಿದ್ಧಿಸಿಕೊಳ್ಳುವ ದಾರಿ ಸಿಗುತ್ತದೆ ಎನ್ನುವುದು ನನ್ನ ನಂಬಿಕೆ.