Tuesday, November 16, 2021

ರಾಮೋತ್ಸವ

ಧಾರ್ಮಿಕ ಕಾಯಕ್ರಮಗಳು ಶ್ರದ್ದಾವಂತ ಮನಸ್ಸುಗಳ ಮೇಲೆ ಬೀರುವ ಪರಿಣಾಮಗಳು ಅಪರಿಮಿತ. ಅವು  ಗೂಢವಾಗಿ, ಶಾಶ್ವತವಾಗಿ ನಮ್ಮ ಮನಸ್ಸಿನಲ್ಲಿ ನಿಂತುಬಿಡುತ್ತವೆ. ಧಾರ್ಮಿಕ ಆಚರಣೆಗಳನ್ನು ಕುರಿತು ಯೋಚಿಸುವ ವಯಸ್ಸು ಬಂದಾಗಿನಿಂದಲೂ ನನಗೆ ದೇವರ ಕಲ್ಯಾಣೋತ್ಸವದ ಅರ್ಥ ತಿಳಿಯುತ್ತಿರಲಿಲ್ಲ. ದೇವರಿಗೆ ವಿವಾಹವೆಂದರೇನು? ಅವರ ವಿವಾಹ ಮಾಡಲು ನಾವು ಯಾರು? ಈ ಪ್ರಶ್ನೆಗಳೇ ನನ್ನ ಮನಸ್ಸಿನಲ್ಲಿರುತ್ತಿತ್ತು. ಎರಡು ದಿನಗಳ ಹಿಂದೆ ನಮ್ಮ ಕುಟುಂಬದಲ್ಲಿ ನಡೆದ ಸೀತಾರಾಮ ಕಲ್ಯಾಣ ಮತ್ತು ರಾಮ ಪಟ್ಟಾಭಿಷೇಕಗಳು ನನ್ನ ಅಭಿಪ್ರಾಯವನ್ನು ಶಾಶ್ವತವಾಗಿ ಬಲಾಯಿಸಿಬಿಟ್ಟಿವೆ. ದೇವರ ಕಲ್ಯಾಣೋತ್ಸವಕ್ಕಿಂತಲೂ ಮಿಗಿಲಾದ, ಅದಕ್ಕಿಂತಲೂ ಮನಸ್ಸಿಗೆ ಸಂತೋಷ ಕೊಡುವ ಧಾರ್ಮಿಕ ಕಾರ್ಯಕ್ರಮ ಬಹುಶಃ ಇರಲಾರದು.

ಕಾರ್ಯಕ್ರಮವು ಮೊದಲನೆಯ ದಿನ ಕಲಶ ಸ್ಥಾಪನೆಯ ನಂತರ ಆರಂಭವಾಯಿತು. ಸೀತಾರಾಮ ಲಕ್ಷ್ಮಣ, ಭರತ, ಶತ್ರುಘ್ನ, ಹನುಮ, ಸುಗ್ರೀವ, ವಿಭೀಷಣ ಮುಂತಾದವರನ್ನು ಕಲಶಗಳಲ್ಲಿ ಆವಾಹನ ಮಾಡಿ ಪೂರ್ಣ ಕುಂಭಗಳನ್ನು ಸ್ಥಾಪಿಸಲಾಯಿತು. ನಂತರ, "ಶ್ರೀರಾಮ ಜಯರಾಮ, ಜಯಜಯರಾಮ" ಎಂಬ ರಾಮ ತಾರಕ ಹೋಮ. ಅಂದಿನ ಸಂಜೆ ಸೀತಾಕಲ್ಯಾಣ. ಮನೆಯ ಹತ್ತಿರದ ಗಾಯಿತ್ರಿ ದೇವಸ್ಥಾನದಲ್ಲಿ ರಾಮನಿಗೆ ವರಪೂಜೆ ಮಾಡಿ, ಬಾಸಿಂಗ ಕಟ್ಟಿ, ರಾಮನನ್ನು ಲಕ್ಷ್ಮಣ, ಹನುಮ ಸಮೇತ ಪಲ್ಲಕ್ಕಿಯಲ್ಲಿ ಕೂರಿಸಿ, ಪುರುಷ ಸೂಕ್ತ, ವಿಷ್ಣು ಸಹಸ್ರನಾಮಗಳನ್ನು ಪಠಿಸುತ್ತಾ ಮನೆಗೆ ಕರೆತಂದೆವು. ಪುರೋಹಿತರು ವಸಿಷ್ಠ, ಗೌತಮ ಗೋತ್ರದ ರಾಮ ಸೀತೆಯರ ಪ್ರವರಗಳನ್ನು ಪಠಿಸಿದರು. ನಂತರ ನಮ್ಮ ದೇವರ ಮನೆಯಲ್ಲಿದ್ದ ಸೀತೆಯನ್ನು ಪಲ್ಲಕ್ಕಿಯಲ್ಲಿ ಕೊರಿಸಿ, ರಾಮನ ಮುಂದೆ ಪರದೆ ಹಿಡಿದು ಕೂರಿಸಲಾಯಿತು. ಆ ಸಮಯದಲ್ಲಿ ಪಠಿಸಿದ ವಿವಾಹ ಮಂಗಳಾಷ್ಟಕ ನನ್ನ ಮನಸ್ಸಿನಿಂದ ಎಂದೂ ಮರೆಯಾಗುವುದಿಲ್ಲ - "ಸೀತಾರಾಮಯೋರ್ವಿವಾಹ ಸಮಯೇ ಕುರ್ಯಾದ್ ಸದಾ ಮಂಗಲಂ". ಆ ಶಾರ್ದೂಲವಿಕ್ರೀಡಿತದ ಗತಿ ನನಗೆ ತಿಳಿಯದೆಯೇ ನನ್ನ ಮನಸ್ಸನ್ನು ಖುಷಿಯಾಗಿಸಿಬಿಡುತ್ತದೆ. ಅದರ ಮೇಲೆ ಹೋಳಿಗೆಗೆ ತುಪ್ಪ ಸುರಿದಂತೆ ಮಂಗಳದ ಕರ್ತೃ ನನ್ನ ಕಾಳಿದಾಸ! ನಂತರ ವಿವಾಹ. ಅಲ್ಲಿ, "ಮಾಂಗಲ್ಯಮ್ ತಂತುನಾನೇನ ಮಾಮ ಜೀವನ ಹೇತುನಾ" ಅಲ್ಲ, ಬದಲಾಗಿ "ಮಾಂಗಲ್ಯಮ್ ತಂತುನಾನೇನ ಲೋಕಕಲ್ಯಾಣ ಹೇತುನಾ". ನಂತರ ಅನ್ನಮಯ್ಯನ "ತಲಂಬ್ರಾಲ ಪೆಂಡಿಕೂತುಲು" ಹಾಡಿನ ವಾದ್ಯದ ನಡುವೆ ಮಂತ್ರಾಕ್ಷತೆಯ ವಿನಿಮಯ. ಕೊನೆಯಲ್ಲಿ ಸೀತಾರಾಮರಿಗೆ ಷೋಡಶೋಪಚಾರ ಪೂಜೆ. ಇದೊಂದು ವಿಶಿಷ್ಟವಾದ ಮದುವೆ. ಏಕೆಂದರೆ ಈ ಕಲ್ಯಾಣದಲ್ಲಿ ಸಭಾಸದರು ವಧೂವರರ ರೂಪಗುಣಗಳನ್ನು ಕುರಿತು ಮಾತನಾಡುವುದಿಲ್ಲ. ಬದಲಾಗಿ ವಧೂವರರನ್ನು ದೂರದಿಂದ ಕೈಮುಗಿಯುತ್ತಾರೆ. ವಧುವರರು ತಮಗೆ ಅದು ಬೇಕು, ಇದು ಬೇಕು ಎಂದು ಕೇಳುವುದಿಲ್ಲ. ಸಂತೋಷದಿಂದ ನಮಗೆ ಸಹಕರಿಸುತ್ತಾರೆ. ಇಲ್ಲಿ ವಧುವಿನ ತಂದೆಗೆ ಮಗಳನ್ನು ಬೇರೆಕಡೆ ಕಳಿಸಬೇಕೆಂಬ ಚಿಂತೆಯಿಲ್ಲ. ಅವರಿವರ ಕೊಂಕಿಲ್ಲ. ಎಲ್ಲಾ ನಮ್ಮವರೇ. ವಧುವಿನ ಕಣ್ಣಲ್ಲಿ ನೀರಿಲ್ಲ. ಸರ್ವರ ಕಣ್ಣುಗಳಲ್ಲೂ ಒಂದು ರೀತಿಯ ಭಕ್ತಿ ಅಥವಾ ವಿಸ್ಮಯ. ಇದು ಸರ್ವರೀತಿಯಲ್ಲಿಯೂ "ಕಲ್ಯಾಣ" ಪದ ಸಾರ್ಥಕವಾಗುವಂತಹ ಕಾಯಕ್ರಮ. ಕೊನೆಗೆ ವಧುವರರ ಮುಂದೆ ಕುಳಿತು ಶುಭಭೋಜನ.

ಮಾರನೆಯ ದಿನ ರಾಮಪಟ್ಟಾಭಿಷೇಕ. ಹಾಲು, ಮೊಸರು, ತುಪ್ಪ, ಜೇನುತ್ತುಪ್ಪ, ಸಕ್ಕರೆ, ಕಬ್ಭಿನ ಹಾಲು, ಹಣ್ಣುಗಳು, ಸಪ್ತ ಪ್ರದೇಶಗಳ ಮೃತ್ತಿಕೆಗಳಿಂದ, ಅನೇಕ ನದಿ, ಸಮುದ್ರಗಳಿಂದ ತಂದಿದ್ದ ನೀರುಗಳಿಂದ, ಹಿಂದಿನ ದಿನ ಸ್ಥಾಪಿಸಿದ ಕಲಶಗಳ ನೀರಿನಿಂದ ರಾಮನಿಗೆ ಕುಂಭಾಭಿಷೇಕ. ಅರುಣ ಪ್ರಶ್ನದ ನಡುವೆ, ತುಳಸೀ ಮಾಲೆ ಹಾಕಿಕೊಂಡು ಅಭಿಷೇಕ ಮಾಡಿಸಿಕೊಳ್ಳುತ್ತಿದ್ದ ಸೀತಾರಾಮ, ಲಕ್ಷ್ಮಣ, ಹನುಮರನ್ನು ನೋಡಲು ಎರಡು ಕಣ್ಣು ಸಾಲುತ್ತಿರಲಿಲ್ಲ. ಇಪ್ಪತ್ತೆದು ವರ್ಷ ತುಂಬದ ಪುರೋಹಿತರ ಸಸ್ವರವಾದ ತೈತ್ತಿರೀಯ ಅರಣ್ಯಕದ ಅರುಣಪ್ರಶ್ನವನ್ನು ಕೇಳಲು ಎರಡು ಕಿವಿಗಳು ಸಾಲುತ್ತಿರಲಿಲ್ಲ. ನಾನು ಇಲ್ಲಿಯವರೆಗೂ ನೇರವಾಗಿ ಕೇಳಿರುವ ವೇದಮಂತ್ರಗಳಲ್ಲಿ ಅವರ ಅರುಣ ಪ್ರಶ್ನದ ಮಂತ್ರಘೋಷ ಅತ್ಯಂತ ಸುಶ್ರಾವ್ಯವಾದವುಗಳಲ್ಲಿ ಒಂದು. ಆ ಪ್ರತಿಭೆಗೆ ದಾಸೋಹಂ. ಅಭಿಷೇಕಾನಂತರ ವಿಷ್ಣುಸಹಸ್ರನಾಮ ಪಾರಾಯಣದ ನಡುವೆ ಅಲಂಕಾರ. ಕೊನೆಗೆ ಮೂಲರಾಮಾಯಣದ ಪಟ್ಟಾಭಿಷೇಕ ಸರ್ಗ ಪಾರಾಯಣ. ಸರ್ಗದಲ್ಲಿ ಬರುವಂತೆಯೇ ರಾಮನಿಗೆ ಸಾರ್ವಭೌಮಾಭಿಷೇಕ. ಶ್ವೇತಚ್ಛತ್ರ, ಕಿರೀಟಗಳ ಧಾರಣೆ. ಸೀತೆ ಹನುಮನಿಗೆ ಉಡುಗೊರೆ ಕೊಡುವ ಸಂದರ್ಭ ರಾಮಾಯಣದಲ್ಲಿ ನನಗೆ ಅತ್ಯಂತ ಇಷ್ಟವಾಗುವ ಸಂದರ್ಭಗಳಲ್ಲಿ ಒಂದು. ಅದನ್ನು ಅದರಲ್ಲಿರುವಂತೆಯೇ ಕಾರ್ಯಕ್ರಮದಲ್ಲಿ ನಡೆಸಿದ್ದೊಂದು ಅದ್ಭುತ. ಅಷ್ಟಾವಧಾನದಲ್ಲಿ ನಾದಸ್ವರದಿಂದ ಸರ್ವ ರಾಗಗಳ ಮೇಳ, ಭರತನಾಟ್ಯ ಪ್ರದರ್ಶನ. ಪಟ್ಟಾಭಿಷಿಕ್ತನಾದ ರಾಮನ ಸಮಕ್ಷದಲ್ಲಿ ಭೋಜನ. 

ಒಟ್ಟಿನಲ್ಲಿ ಕಾರ್ಯಕ್ರಮ ಸಂಭ್ರಮ ಪದದ ಮೂರ್ತಿರೂಪವಾಗಿತ್ತು. ರಾಮ ಎಲ್ಲಿ ಬಂದರೂ ಒಬ್ಬನೇ ಬರುವುದಿಲ್ಲ. ಸಕುಟುಂಬ ಸಮೇತನಾಗಿ ಬರುತ್ತಾನೆ. ಆದ್ದರಿಂದಲೇ ಅವನನ್ನು ಕಂಡರೆ ನಮ್ಮ ಮನಸ್ಸಿಗೆ ಆಹ್ಲಾದ. ಅವನು ಇಂತಹ ಸಂದರ್ಭದಲ್ಲಿ ನಮ್ಮ ಜೊತೆಯಿದ್ದರಂತೂ ಸಮ್ಮ ಸಂತೋಷಕ್ಕೆ ಪಾರವೇ ಇರುವುದಿಲ್ಲ. ಈ ಕಾರ್ಯಕ್ರಮಗಳು ಪದೇ ಪದೇ ನಡೆಯುವುದಿಲ್ಲ. ನಡೆದ ಕಾರ್ಯಕ್ರಮಕ್ಕೆ ನಾನು ಸಾಕ್ಷಿಯಾದದ್ದು ನನ್ನ ಸುಕೃತ. ಮರುಭೂಮಿಯಲ್ಲಿ ಬಾಯಾರಿ ನಡೆಯುತ್ತಿದವನಿಗೆ ಸುಂದರವಾದ ಸಿಹಿನೀರಿನ ಸರೋವರ ಸಿಕ್ಕಂತಾಯಿತು. ಕಾರ್ಯಕ್ರಮಕ್ಕೆ ಪ್ರೇರಣೆಯಾಗಿ ರಾಮಕೋಟಿಯನ್ನು ಬರೆದ ನನ್ನ ದೊಡ್ಡಮ್ಮನಿಗೆ ಅನೇಕಾನೇಕ ನಮಸ್ಕಾರಗಳು. ಕರ್ತೃಗಳನ್ನು ಎಷ್ಟು ಕೊಂಡಾಡಿದರೂ ಸಾಧ್ಯವಿಲ್ಲ. ಅಸೌ ಯಜಮಾನನಿಗೆ :

ಆಶಾಸ್ತೇಯಮ್ | ಆಯುರಾಶಾಸ್ತೇ |  ಸುಪ್ರಜಾಮಾಶಾಸ್ತೇ | ಸಜಾತವನಶ್ಯಾಮಾಸ್ತೇ | ಉತ್ತರಾಂ ದೇವಯಜ್ಯಮಾಶಾಸ್ತೇ | ಭೂಯೋ ಹವಿಷ್ಕರಣಮಾಶಾಸ್ತೇ |

ಸರ್ವಂ ಶಿವಂ.

Sunday, July 18, 2021

ಸಾಹಿತ್ಯ

    "Sanskrit Studies" ಎಂಬ ಸಂಸ್ಕೃತದ ಕುರಿತಾದ ಆಂಗ್ಲ ಲೇಖನ ಸಂಗ್ರಹದಲ್ಲಿ ಮೈಸೂರು ಹಿರಿಯಣ್ಣನವರು ಸಾಹಿತ್ಯದ ಕುರಿತು ಹೇಳುತ್ತಾ "ಒಂದು ಒಳ್ಳೆಯ ಸಾಹಿತ್ಯವು ತನ್ನ ಓದುಗನಿಗೆ ಕೆಲಕಾಲಕ್ಕಾದರೂ ಒಂದು ಅನಿರ್ವಚನೀಯ ಆನಂದವನ್ನು ನೀಡುತ್ತದೆ. ಆ ಸಮಯದಲ್ಲಿ ನಾವು ಮಿಕ್ಕೆಲ್ಲವನ್ನೂ ಮರೆಯುತ್ತೇವೆ" ಎಂದು ಹೇಳುತ್ತಾರೆ. ಈ ಅನುಭವವು ನನಗೆ ಹಲವು ಬಾರಿ ಆಗಿದ್ದರೂ, ಅದನ್ನು ನಾನು ಸೂಕ್ಷ್ಮವಾಗಿ ಅವಲೋಕಿಸಿರಲಿಲ್ಲ. ಇತ್ತೀಚೆಗೆ ನಾನು ಓದಿದ, "If Tomorrow Comes" ಮತ್ತು "To Kill A Mockingbird" ಎಂಬ ಎರೆಡು ಆಂಗ್ಲ ಕಾದಂಬರಿಗಳ ಬಗ್ಗೆ ಯೋಚಿಸಿದಾಗ ಈ ಸೂಕ್ಷ್ಮ ಮನವರಿಕೆಯಾಯಿತು. 

"If Tomorrow Comes" ಕಾದಂಬರಿ ಮೋಸಕ್ಕೆ ಒಳಗಾದ ಒಬ್ಬ ಮಹಿಳೆಯ ಸೇಡಿನ ಕಥನ. ತಾನು ಮಾಡದ ತಪ್ಪಿಗೆ ಜೈಲು ಶಿಕ್ಷೆ ಅನುಭವಿಸಿದ ಒಬ್ಬ ಹೆಣ್ಣು ಮಗಳು, ಜೈಲಿನಿಂದ ಬಿಡುಗಡೆಯಾದ ಮೇಲೆ ತನಗೆ ಮೋಸಮಾಡಿದವರ ಮೇಲೆ ಮೋಸದಿಂದಲೇ ಸೇಡು ತೀರಿಸಿಕೊಳ್ಳುತ್ತಾಳೆ. ಜೈಲಿನಿಂದ ಬಂದವಳೆಂಬ ಕಾರಣಕ್ಕೆ ಅವಳಿಗೆ ಯಾರೂ ಕೆಲಸ ಕೊಡದಿದ್ದಾಗ, ಕೊನೆಗೆ ಮೋಸ ಮಾಡುವುದರಲ್ಲಿಯೇ ತನ್ನ ನಿಪುಣತೆಯೆಂದು ತಿಳಿದು ಅವಳು ಒಂದಾದ ಮೇಲೊಂದು ದೊಡ್ಡ ಪ್ರಮಾಣದ ಕಳ್ಳತನಗಳನ್ನು ಮಾಡಲು ತೊಡಗುತ್ತಾಳೆ. ೬೦ರಷ್ಟು ಕಾದಂಬರಿ ಅವಳ ಡಕಾಯತಿಗಳ ಬಗ್ಗೆಯೇ ವಿವರಿಸುತ್ತದೆ. ಅವಳು ಹೇಗೆ ಉಪಾಯಮಾಡುತ್ತಾಳೆ, ಹೇಗೆ ಗಾಳ ಹಾಕುತ್ತಾಳೆ, ಹೇಗೆ ಪೋಲೀಸಿನವರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಾಳೆ ಎಂಬ ಕಥನವನ್ನು ಲೇಖಕರು ತುಂಬಾ ರಂಜಕವಾಗಿ ವಿವರಿಸುತ್ತಾರೆ. ಕಾದಂಬರಿ ಓದುವಾಗ ಮುಂದೇನಾಗುವುದೋ ಎಂದು ಓದುಗನನ್ನು ಹಿಡಿಟ್ಟುಕೊಳ್ಳುತ್ತದೆ. ಕೆಲವು ಬಾರಿ ಓದುಗರು ಮುಂದೇನಾಗಬಹುದೆಂದು ಊಹಿಸಲೂಬಹುದು. ಕಥೆ ಬಹುತೇಕ ಕುದುರೆಯಂತೆ ಓಡುತ್ತದೆ.

ಮತ್ತೊಂದೆಡೆ "To Kill A Mockingbird" ಕಾದಂಬರಿ ಮೊದಲಲ್ಲಿ ಸಪ್ಪೆಯಿನಿಸುವ ಕಾದಂಬರಿ. ಕಾದಂಬರಿಯ ವಸ್ತು ೧೯೩೦ರ ದಶಕದ ಅಮೆರಿಕಾ ದೇಶದ ದಕ್ಷಿಣದಲ್ಲಿರುವ ಒಂದು ತಾಲ್ಲೂಕು ಕೇಂದ್ರದಂತಹ ಊರಿನ ಬಗ್ಗೆ. ಲೇಖಕಿ ಹತ್ತು ವರ್ಷದ ಹುಡುಗಿಯ ಕಣ್ಣಿನಲ್ಲಿ ಆ ಊರಿನ ಆಗುಹೋಗುಗಳನ್ನು ವಿವರಿಸುತ್ತಾರೆ. ಕಾದಂಬರಿಯ ಮಧ್ಯಭಾಗದಲ್ಲಿ ಊರಿನಲ್ಲಿ ಬರುವ ಒಂದು ಘಟನೆಯ ಬಗೆಗಿನ ವಿವರಣೆಯಿದೆ. ಒಬ್ಬ ಕಪ್ಪುವರ್ಣೀಯ ಅದೇ ಊರಿನ ಒಂದು ಬಿಳೀ ವರ್ಣೀಯ ಹೆಣ್ಣುಮಗಳ ಮೇಲೆ ಮಾಡಿದ ಎನ್ನಲಾದ ಒಂದು ಅತ್ಯಾಚಾರ ಪ್ರಕರಣದ ವಿಚಾರಣೆ. ಕಥೆ ನಿರೂಪಿಸುವ ಮಗುವಿನ ತಂದೆಯೇ ಕಪ್ಪುವರ್ಣೀಯನ ಪರ ವಾದಮಾಡಲು ನಿಲ್ಲುತ್ತಾರೆ. ಕೊನೆಗೆ ಕಪ್ಪುವರ್ಣೀಯನ ಮಾತುಗಳಿಗಿಂತಲೂ ಬಿಳಿವರ್ಣೀಯರ ಮಾತುಗಳೇ ಸರಿಯೆನಿಸಿ ಅವನಿಗೆ ಶಿಕ್ಷೆಯಾಗುತ್ತದೆ. ಕಥೆ ಓದುವಾಗ ಓದುಗನು ಕುದುರೆಸವಾರಿಯಂತೆ ಜೋರಾಗಿ ಓಡಲಾರ. ನಿಧಾನವಾಗಿ ನಡೆಯುತ್ತಾ ಅಲ್ಲಲ್ಲಿ ನಿಂತು ಸಾವರಿಸಿಕೊಂಡು ಹೋಗಬೇಕು. ಕಥೆ ಪ್ರತಿಯೊಂದು ಪಾತ್ರದ ಬಗ್ಗೆಯೂ ಯೋಚಿಸುವಂತೆ ಮಾಡುತ್ತದೆ. ಜೋರಾಗಿ ಓದಲು ಹೋದರೆ ಕಥೆ ಸ್ವಾರಸ್ಯವಿಲ್ಲವೆಂದೆನಿಸುತ್ತದೆ. ಬೇಜಾರಾಗಿ ಅರ್ಧಕ್ಕೆ ನಿಲ್ಲಿಸುವಂತೆಯೂ ಆಗಬಹುದು. ಪೂರ್ಣವಾಗಿ ಓದಿದ ನಂತರ ಪಾತ್ರಗಳು ಸುಲಭವಾಗಿ ಮನಸ್ಸಿನಿಂದ ದೂರವಾಗುವುದಿಲ್ಲ. ಎಲ್ಲರ ಬಗ್ಗೆಯೂ ಯೋಚಿಸಬೇಕೆಂದೆನಿಸುತ್ತದೆ. ಆದರೆ ಕಥೆ ಓದಲು ಸ್ವಲ್ಪ ಪೂರ್ವ ತಿಳುವಳಿಕೆಯಿರಬೇಕು. ಅಮೆರಿಕಾ ದೇಶದ ಇಪ್ಪತ್ತನೇ ಶತಮಾನದ ಪೂರ್ವಾರ್ಧದ ವರ್ಣವ್ಯವಸ್ಥೆಯ ಅರಿವಿರಬೇಕು. ಆಗ ಕಥೆಯ ಪೂರ್ಣ ಅರ್ಥ ಮನವರಿಕೆಯಾಗುತ್ತದೆ.

"If Tomorrow Comes" ಕಾದಂಬರಿ ಓದಿದ ವಾರ ಹತ್ತು ದಿನಗಳಲ್ಲಿ ಮನಸ್ಸಿನಿಂದ ಮರೆಯಾಗಬಹುದು, ಆದರೆ "To Kill A Mockingbird" ಕಾದಂಬರಿ ಬಹುಕಾಲ ನಿಲ್ಲುತ್ತದೆ. ಅದಕ್ಕೆ ಕಾರಣ ಅದರಲ್ಲಿರುವ ಕರುಣಾ ಮತ್ತು ಶಾಂತ ರಸಗಳು ಮನಸ್ಸಿನ ಮೇಲೆ ಮಾಡುವ ಪರಿಣಾಮಗಳು. ಮನಸ್ಸನ್ನು ಕೆಲಕಾಲ ರಂಜನೆ ಮಾಡುವ ಸಾಹಿತ್ಯಕ್ಕಿಂತಲೂ ಮನಸ್ಸನ್ನು ಹಿಡಿದಿಡುವ ಸಾಹಿತ್ಯ ಉಚ್ಚವಾದುದುದು ಎಂಬುದು ನನ್ನ ಅಭಿಪ್ರಾಯ. ಅಂತಹ ಸಾಹಿತ್ಯ ನಮಗೇ ತಿಳಿಯದಂತೆ ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತದೆ.