"Sanskrit Studies" ಎಂಬ ಸಂಸ್ಕೃತದ ಕುರಿತಾದ ಆಂಗ್ಲ ಲೇಖನ ಸಂಗ್ರಹದಲ್ಲಿ ಮೈಸೂರು ಹಿರಿಯಣ್ಣನವರು ಸಾಹಿತ್ಯದ ಕುರಿತು ಹೇಳುತ್ತಾ "ಒಂದು ಒಳ್ಳೆಯ ಸಾಹಿತ್ಯವು ತನ್ನ ಓದುಗನಿಗೆ ಕೆಲಕಾಲಕ್ಕಾದರೂ ಒಂದು ಅನಿರ್ವಚನೀಯ ಆನಂದವನ್ನು ನೀಡುತ್ತದೆ. ಆ ಸಮಯದಲ್ಲಿ ನಾವು ಮಿಕ್ಕೆಲ್ಲವನ್ನೂ ಮರೆಯುತ್ತೇವೆ" ಎಂದು ಹೇಳುತ್ತಾರೆ. ಈ ಅನುಭವವು ನನಗೆ ಹಲವು ಬಾರಿ ಆಗಿದ್ದರೂ, ಅದನ್ನು ನಾನು ಸೂಕ್ಷ್ಮವಾಗಿ ಅವಲೋಕಿಸಿರಲಿಲ್ಲ. ಇತ್ತೀಚೆಗೆ ನಾನು ಓದಿದ, "If Tomorrow Comes" ಮತ್ತು "To Kill A Mockingbird" ಎಂಬ ಎರೆಡು ಆಂಗ್ಲ ಕಾದಂಬರಿಗಳ ಬಗ್ಗೆ ಯೋಚಿಸಿದಾಗ ಈ ಸೂಕ್ಷ್ಮ ಮನವರಿಕೆಯಾಯಿತು.
"If Tomorrow Comes" ಕಾದಂಬರಿ ಮೋಸಕ್ಕೆ ಒಳಗಾದ ಒಬ್ಬ ಮಹಿಳೆಯ ಸೇಡಿನ ಕಥನ. ತಾನು ಮಾಡದ ತಪ್ಪಿಗೆ ಜೈಲು ಶಿಕ್ಷೆ ಅನುಭವಿಸಿದ ಒಬ್ಬ ಹೆಣ್ಣು ಮಗಳು, ಜೈಲಿನಿಂದ ಬಿಡುಗಡೆಯಾದ ಮೇಲೆ ತನಗೆ ಮೋಸಮಾಡಿದವರ ಮೇಲೆ ಮೋಸದಿಂದಲೇ ಸೇಡು ತೀರಿಸಿಕೊಳ್ಳುತ್ತಾಳೆ. ಜೈಲಿನಿಂದ ಬಂದವಳೆಂಬ ಕಾರಣಕ್ಕೆ ಅವಳಿಗೆ ಯಾರೂ ಕೆಲಸ ಕೊಡದಿದ್ದಾಗ, ಕೊನೆಗೆ ಮೋಸ ಮಾಡುವುದರಲ್ಲಿಯೇ ತನ್ನ ನಿಪುಣತೆಯೆಂದು ತಿಳಿದು ಅವಳು ಒಂದಾದ ಮೇಲೊಂದು ದೊಡ್ಡ ಪ್ರಮಾಣದ ಕಳ್ಳತನಗಳನ್ನು ಮಾಡಲು ತೊಡಗುತ್ತಾಳೆ. ೬೦ರಷ್ಟು ಕಾದಂಬರಿ ಅವಳ ಡಕಾಯತಿಗಳ ಬಗ್ಗೆಯೇ ವಿವರಿಸುತ್ತದೆ. ಅವಳು ಹೇಗೆ ಉಪಾಯಮಾಡುತ್ತಾಳೆ, ಹೇಗೆ ಗಾಳ ಹಾಕುತ್ತಾಳೆ, ಹೇಗೆ ಪೋಲೀಸಿನವರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಾಳೆ ಎಂಬ ಕಥನವನ್ನು ಲೇಖಕರು ತುಂಬಾ ರಂಜಕವಾಗಿ ವಿವರಿಸುತ್ತಾರೆ. ಕಾದಂಬರಿ ಓದುವಾಗ ಮುಂದೇನಾಗುವುದೋ ಎಂದು ಓದುಗನನ್ನು ಹಿಡಿಟ್ಟುಕೊಳ್ಳುತ್ತದೆ. ಕೆಲವು ಬಾರಿ ಓದುಗರು ಮುಂದೇನಾಗಬಹುದೆಂದು ಊಹಿಸಲೂಬಹುದು. ಕಥೆ ಬಹುತೇಕ ಕುದುರೆಯಂತೆ ಓಡುತ್ತದೆ.
ಮತ್ತೊಂದೆಡೆ "To Kill A Mockingbird" ಕಾದಂಬರಿ ಮೊದಲಲ್ಲಿ ಸಪ್ಪೆಯಿನಿಸುವ ಕಾದಂಬರಿ. ಕಾದಂಬರಿಯ ವಸ್ತು ೧೯೩೦ರ ದಶಕದ ಅಮೆರಿಕಾ ದೇಶದ ದಕ್ಷಿಣದಲ್ಲಿರುವ ಒಂದು ತಾಲ್ಲೂಕು ಕೇಂದ್ರದಂತಹ ಊರಿನ ಬಗ್ಗೆ. ಲೇಖಕಿ ಹತ್ತು ವರ್ಷದ ಹುಡುಗಿಯ ಕಣ್ಣಿನಲ್ಲಿ ಆ ಊರಿನ ಆಗುಹೋಗುಗಳನ್ನು ವಿವರಿಸುತ್ತಾರೆ. ಕಾದಂಬರಿಯ ಮಧ್ಯಭಾಗದಲ್ಲಿ ಊರಿನಲ್ಲಿ ಬರುವ ಒಂದು ಘಟನೆಯ ಬಗೆಗಿನ ವಿವರಣೆಯಿದೆ. ಒಬ್ಬ ಕಪ್ಪುವರ್ಣೀಯ ಅದೇ ಊರಿನ ಒಂದು ಬಿಳೀ ವರ್ಣೀಯ ಹೆಣ್ಣುಮಗಳ ಮೇಲೆ ಮಾಡಿದ ಎನ್ನಲಾದ ಒಂದು ಅತ್ಯಾಚಾರ ಪ್ರಕರಣದ ವಿಚಾರಣೆ. ಕಥೆ ನಿರೂಪಿಸುವ ಮಗುವಿನ ತಂದೆಯೇ ಕಪ್ಪುವರ್ಣೀಯನ ಪರ ವಾದಮಾಡಲು ನಿಲ್ಲುತ್ತಾರೆ. ಕೊನೆಗೆ ಕಪ್ಪುವರ್ಣೀಯನ ಮಾತುಗಳಿಗಿಂತಲೂ ಬಿಳಿವರ್ಣೀಯರ ಮಾತುಗಳೇ ಸರಿಯೆನಿಸಿ ಅವನಿಗೆ ಶಿಕ್ಷೆಯಾಗುತ್ತದೆ. ಕಥೆ ಓದುವಾಗ ಓದುಗನು ಕುದುರೆಸವಾರಿಯಂತೆ ಜೋರಾಗಿ ಓಡಲಾರ. ನಿಧಾನವಾಗಿ ನಡೆಯುತ್ತಾ ಅಲ್ಲಲ್ಲಿ ನಿಂತು ಸಾವರಿಸಿಕೊಂಡು ಹೋಗಬೇಕು. ಕಥೆ ಪ್ರತಿಯೊಂದು ಪಾತ್ರದ ಬಗ್ಗೆಯೂ ಯೋಚಿಸುವಂತೆ ಮಾಡುತ್ತದೆ. ಜೋರಾಗಿ ಓದಲು ಹೋದರೆ ಕಥೆ ಸ್ವಾರಸ್ಯವಿಲ್ಲವೆಂದೆನಿಸುತ್ತದೆ. ಬೇಜಾರಾಗಿ ಅರ್ಧಕ್ಕೆ ನಿಲ್ಲಿಸುವಂತೆಯೂ ಆಗಬಹುದು. ಪೂರ್ಣವಾಗಿ ಓದಿದ ನಂತರ ಪಾತ್ರಗಳು ಸುಲಭವಾಗಿ ಮನಸ್ಸಿನಿಂದ ದೂರವಾಗುವುದಿಲ್ಲ. ಎಲ್ಲರ ಬಗ್ಗೆಯೂ ಯೋಚಿಸಬೇಕೆಂದೆನಿಸುತ್ತದೆ. ಆದರೆ ಕಥೆ ಓದಲು ಸ್ವಲ್ಪ ಪೂರ್ವ ತಿಳುವಳಿಕೆಯಿರಬೇಕು. ಅಮೆರಿಕಾ ದೇಶದ ಇಪ್ಪತ್ತನೇ ಶತಮಾನದ ಪೂರ್ವಾರ್ಧದ ವರ್ಣವ್ಯವಸ್ಥೆಯ ಅರಿವಿರಬೇಕು. ಆಗ ಕಥೆಯ ಪೂರ್ಣ ಅರ್ಥ ಮನವರಿಕೆಯಾಗುತ್ತದೆ.
"If Tomorrow Comes" ಕಾದಂಬರಿ ಓದಿದ ವಾರ ಹತ್ತು ದಿನಗಳಲ್ಲಿ ಮನಸ್ಸಿನಿಂದ ಮರೆಯಾಗಬಹುದು, ಆದರೆ "To Kill A Mockingbird" ಕಾದಂಬರಿ ಬಹುಕಾಲ ನಿಲ್ಲುತ್ತದೆ. ಅದಕ್ಕೆ ಕಾರಣ ಅದರಲ್ಲಿರುವ ಕರುಣಾ ಮತ್ತು ಶಾಂತ ರಸಗಳು ಮನಸ್ಸಿನ ಮೇಲೆ ಮಾಡುವ ಪರಿಣಾಮಗಳು. ಮನಸ್ಸನ್ನು ಕೆಲಕಾಲ ರಂಜನೆ ಮಾಡುವ ಸಾಹಿತ್ಯಕ್ಕಿಂತಲೂ ಮನಸ್ಸನ್ನು ಹಿಡಿದಿಡುವ ಸಾಹಿತ್ಯ ಉಚ್ಚವಾದುದುದು ಎಂಬುದು ನನ್ನ ಅಭಿಪ್ರಾಯ. ಅಂತಹ ಸಾಹಿತ್ಯ ನಮಗೇ ತಿಳಿಯದಂತೆ ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತದೆ.