ದೇವತೆಗಳಿಗೆ ತಾರಕಾಸುರನ ಕಾಟವನ್ನು ತಡೆಯಲು ಇನ್ನು ಸಾಧ್ಯವಿರಲಿಲ್ಲ. ಬ್ರಹ್ಮನಿಂದ ವರವನ್ನು ಪಡೆದಿದ್ದ ತಾರಕಾಸುರನು ದೇವತೆಗಳನ್ನು ವಿಶೇಷವಾಗಿ ಪೀಡಿಸಿದ್ದ. ರೋಸಿಹೋಗಿದ್ದ ದೇವತೆಗಳು ಈಗ ಪರಿಹಾರಕ್ಕಾಗಿ ಬ್ರಹ್ಮನ ಬಳಿಯೇ ಬಂದಿದ್ದರು. ವಾಗೀಶನನ್ನು ಉಚಿತ ವಾಕ್ಕುಗಳಿಂದ ಸ್ತುತಿಸಿದ ದೇವತೆಗಳನ್ನು ನೋಡಿ ಪ್ರಸನ್ನನಾದ ಚತುರ್ಮುಖ ಬ್ರಹ್ಮ ಕಣ್ಣು ತೆರೆದು ಕೃಶರಾದ ದೇವತೆಗಳನ್ನು ನೋಡಿದ. ವಜ್ರಾಯುಧವನ್ನು ಹಿಡಿಯುವ ಇಂದ್ರನ ಮುಖ ಕಳೆಗುಂದಿತ್ತು. ವಜ್ರಾಯುಧಕ್ಕೆ ಬಲವಿಲ್ಲದಂತಾಗಿತ್ತು. ಯಮನ ಪಾಶವು ಮಂತ್ರಹಾಕಿದ ಹಾವಿನಂತಾಗಿತ್ತು. ಕುಬೇರನ ಮುಖ ಸೋತಭಾವದಿಂದ ಕೂಡಿತ್ತು. ಸೂರ್ಯನಿಗೆ ತೇಜಸ್ಸೇ ಇರಲಿಲ್ಲ. ವಾಯುವಿನ ವೇಗ ಭಂಗವಾಗಿತ್ತು. ಅವರನ್ನು ನೋಡಿ ಕನಿಕರದಿಂದ ಬ್ರಹ್ಮ, “ಇದೇನು ನೀವು ಹೀಗಿದ್ದೀರ, ನಿಮಗೇನಾಯಿತು?” ಎಂದು ಪ್ರಶ್ನಿಸಿದ. ಇಂದ್ರನು ಬೃಹಸ್ಪತಿಯ ಕಡೆಗೆ ಕಣ್ಣು ಹಾಯಿಸಿದಾಗ, ಬೃಹಸ್ಪತಿ ಬ್ರಹ್ಮನಿಗೆ ತಾರಕಾಸುರನ ಕಾಟವನ್ನು ತಿಳಿಸಿ, ಅವನಿಗೆ ವರಕೊಟ್ಟವನು ಬ್ರಹ್ಮನೇ ಆದ್ದರಿಂದ ಈಗ ಬ್ರಹ್ಮನೇ ಅದಕ್ಕೆ ಪರಿಹಾರ ಸೂಚಿಸಬೇಕೆಂದು ಕೇಳಿಕೊಂಡ. ಬ್ರಹ್ಮನು ಕೆಲಕಾಲ ಯೋಚಿಸಿ ಅವರಿಗೆ ಒಂದು ಪರಿಹಾರವನ್ನು ಸೂಚಿಸಿದ:
“ತಾರಕಾಸುರನನ್ನು ಸಂಹರಿಸಲು ಕೇವಲ ನಿಮ್ಮ ಶಕ್ತಿ ಸಾಲದು. ಶಿವನು ಪಾರ್ವತಿಯನ್ನು ಮದುವೆಯಾದರೆ, ಅವರಿಗೆ ಹುಟ್ಟುವ ಮಗುವಿಗೆ ಶಿವನಷ್ಟೇ ಶಕ್ತಿಯಿರುತ್ತದೆ. ಆ ಮಗು ದೊಡ್ಡವನಾದ ಮೇಲೆ ಅವನನ್ನು ಸೇನಾಧಿಪತಿಯನ್ನಾಗಿ ಮಾಡಿಕೊಂಡು ನೀವು ತಾರಕಾಸುರನ ಮೇಲೆ ಯುದ್ಧಕ್ಕೆ ಹೋದರೆ, ನಿಮಗೆ ಖಂಡಿತವಾಗಿ ಜಯವಾಗುತ್ತದೆ. ಆದರೆ ಈಗ ಶಿವನು ದಾಕ್ಷಾಯಿಣಿಯನ್ನು ಕಳೆದುಕೊಂಡು ಬ್ರಹ್ಮಚರ್ಯವ್ರತದಿಂದ ಹಿಮಾಲಯದಲ್ಲಿ ತಪಸ್ಸನ್ನಾಚರಿಸುತ್ತಿದ್ದಾನೆ. ನೀವು ಏನಾದರೂ ಮಾಡಿ ಶಿವನ ಮನಸ್ಸನ್ನು ಬದಲಾಯಿಸಿದರೆ ನಿಮ್ಮ ಕಾರ್ಯವನ್ನು ಸಾಧಿಸಿಕೊಳ್ಳಬಹುದು.” ಬ್ರಹ್ಮನ ಮಾತನ್ನು ಕೇಳಿದ ತಕ್ಷಣ ಇಂದ್ರನು ಮನ್ಮಥನನ್ನು ಕುರಿತು ಚಿಂತಿಸುತ್ತಿದ್ದ.
————
ಪೂರ್ವ ಪಶ್ಚಿಮ ಸಮುದ್ರಗಳನ್ನು ಮುಟ್ಟುಂತೆ ವಿಶಾಲವಾಗಿ ಹರಡಿಕೊಂಡು ಭಾರತದೇಶದ ಉತ್ತರಭಾಗದಲ್ಲಿ ಹಿಮಾಲಯನು ಇಡೀ ಭೂಮಿಗೇ ಮಾನದಂಡವಾಗಿ ನಿಂತಿದ್ದ. ಹಿಮಾಲಯನ ಪತ್ನಿಯ ಹೆಸರು ಮೈನಾ. ಅವರಿಗೆ ಇಬ್ಬರು ಮಕ್ಕಳು. ಹಿರಿಯ ಮಗನನ್ನು ಮೈನಾಕನೆಂದು ಕರೆದಿದ್ದರು. ಕಿರಿಯ ಮಗಳು ಹುಟ್ಟಿನಿಂದಲೂ ವಿಶೇಷವಾದ ಕಾಂತಿಯನ್ನು ಪಡೆದಿದ್ದಳು. ಅವಳನ್ನು ಎಲ್ಲರೂ ತಂದೆಯ ಹೆಸರಿನಂತೆ - ಅಂದರೆ ಪಾರ್ವತಿ - ಎಂದು ಕರೆದಿದ್ದರು. ಚಿಕ್ಕಂದಿನಿಂದಲೇ ಆಧ್ಯಾತ್ಮದಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡಿದ್ದ ಪಾರ್ವತಿಯು ತಪಸ್ಸನ್ನಾಚರಿಸಲು ಹೋದಾಗ ಅವಳ ತಾಯಿ ತಪಸ್ಸಿಗೆ ಹೋಗಬೇಡವೆಂದು ತಡೆದಿದ್ದರು. ಪಾರ್ವತಿಗೆ ಅದೇ ಅನ್ವರ್ಥವಾಗಿ “ಉಮಾ” ಎಂಬ ಹೆಸರೂ ಬಂದಿತ್ತು. ಸಂಸ್ಕೃತದಲ್ಲಿ ‘ಉ’ ಎಂದರೆ ತಪಸ್ಸು ಎಂಬ ಅರ್ಥವೂ, ‘ಮಾ’ ಎಂದರೆ ಬೇಡ ಎಂಬ ಅರ್ಥವೂ ಬರುತ್ತದೆ. ಪಾರ್ವತಿಗೆ ವಿದ್ಯಾಭ್ಯಾಸವು ಪೂರ್ವಜನ್ಮದಲ್ಲೇ ಕಲಿತಂತೆ ಸರಾಗವಾಗಿ ನಡೆದಿತ್ತು. ದಿನದಿನವೂ ಅವಳ ತೇಜಸ್ಸು ಹೆಚ್ಚಾಗುತ್ತಲೇ ಸಾಗಿತ್ತು. ಯೌವನವನ್ನು ಪಡೆಯುವಷ್ಟರಲ್ಲಿ ಪಾರ್ವತಿ ಅಪ್ರತಿಮ ಸೌಂದರ್ಯವತಿಯಾಗಿದ್ದಳು. ಪ್ರಪಂಚದಲ್ಲಿರುವ ಸೌಂದರ್ಯವನ್ನೆಲ್ಲಾ ಒಂದೇ ಕಡೆ ನೋಡಬಯಸಿದ ಸೃಷ್ಟಿಕರ್ತನು, ತನ್ನ ಆಸೆಯನ್ನು ಪಾರ್ವತಿಯ ರೂಪದಲ್ಲಿ ತೀರಿಸಿಕೊಂಡಿದ್ದನು.
ವಿವಾಹದ ಸಮಯವು ಪ್ರಾಪ್ತವಾದಾಗ ಹಿಮಾಲಯನು ಪಾರ್ವತಿಗೆ ಅನುರೂಪನಾದ ವರನನ್ನು ಹುಡುಕುವ ಚಿಂತೆಯಲ್ಲಿದ್ದನು. ಅದೇ ಸಮಯಕ್ಕೆ ದೇವರ್ಷಿ ನಾರದರು ಹಿಮಾಲಯನ ಮನೆಗೆ ಬಂದರು. ಅರ್ಘ್ಯ, ಪಾದ್ಯ, ಮಧುಪರ್ಕಾದಿಗಳಾದ ನಂತರ ಉಭಯ ಕುಶಲೋಪರಿಯ ಸಮಯದಲ್ಲಿ ಹಿಮಾಲಯನು ಮಗಳ ಮದುವೆಯ ಪ್ರಸ್ತಾಪವನ್ನು ಮಾಡಿದನು. ನಾರದರು ಪಾರ್ವತಿಯ ಜನನ ಶಿವನಿಗಾಗಿಯೇ ಎಂದು ಹೇಳಿ ಪಾರ್ವತಿಯನ್ನು ಶಿವನಿಗೇ ಕೊಡಬೇಕೆಂದು ಆದೇಶಿಸಿದರು. ಹಿಮಾಲಯನಿಗೆ ಸಂತೋಷವಾದರೂ, ಅವನಿಗೆ ಶಿವನು ದಾಕ್ಷಾಯಿಣಿಯನ್ನು ಕೆಳೆದುಕೊಂಡು ಘೋರ ತಪಸ್ಸಿನಲ್ಲಿರುವುದು ತಿಳಿದಿತ್ತು. ಸಂಪ್ರದಾಯದಂತೆ ಶಿವನೇ ಬಂದು ಪಾರ್ವತಿಯನ್ನು ಕೇಳುವ ಸಂಭವವಿರಲಿಲ್ಲ. ತಾನೇ ಹೋಗಿ ಕೇಳಲು ತಿರಸ್ಕರಿಸಲ್ಪಡುವ ಭಯವಿತ್ತು. ಆದ್ದರಿಂದ ತನ್ನ ಮಗಳನ್ನೇ ಶಿವನ ಬಳಿಗೆ ಅವನನ್ನು ಒಲಿಸಿಕೊಳ್ಳಲು ಕಳಿಸಲು ಹಿಮಾಲಯನು ತೀರ್ಮಾನಿಸಿದ. ಅಂತೆಯೇ ಕೆಲವು ಸಖಿಯರ ಜೊತೆ ತನ್ನಲ್ಲೇ ತಪಸ್ಸನ್ನಾಚರಿಸುತ್ತಿದ್ದ ಶಿವನ ಬಳಿಗೆ ಉಪಚಾರಕ್ಕಾಗಿ ಪಾರ್ವತಿಯನ್ನು ಕಳಿಸಿದ. ಜಟಾಧಾರಿಯಾದ ಶಿವನು, ನಂದೀ ಸಮೇತ ಶಿವಗಣಗಳ ಜೊತೆ ಹಿಮಾಲಯದ ಗಹ್ವರದ ಬಳಿ ದೇವದಾರು ಮರದ ಕೆಳಗೆ ಕುಳಿತುಕೊಂಡು ತಪಸ್ಸನ್ನು ಮಾಡುತ್ತಿದ್ದ. ಹಿಮಾಲಯದ ಚಳಿಗೆ ತನ್ನ ಬೆನ್ನು ಪೂರ್ಣವಾಗಿ ಮುಚ್ಚಿ ಎದೆಯ ಮೇಲೆ ಬಿಗಿಯಾಗಿ ಬರುವಂತೆ ಜಿಂಕೆಯ ಚರ್ಮವನ್ನು ಕಟ್ಟಿಕೊಂಡಿದ್ದ. ಒಂದೊಂದೇ ಸಮಿತ್ತನ್ನು ತೆಗೆದುಕೊಂಡು ಅಗ್ನಿಯಲ್ಲಿ ಹೋಮಿಸುತ್ತಾ ತಪಸ್ಸು ಮಾಡುತ್ತಿದ್ದ. ಅವನನ್ನು ನೋಡಿದ ಪಾರ್ವತಿಯು ಆಶ್ಚರ್ಯದಿಂದ ತಪಸ್ಸುಗಳಿಗೆಲ್ಲಾ ಫಲಗಳನ್ನು ವಿಧಿಸುವವನು ಶಿವನೇ ಆದ್ದರಿಂದ ಈಗ ತಾನು ಯಾವ ಫಲಕ್ಕಾಗಿ ತಪಸ್ಸನ್ನಾಚರಿಸುತ್ತಿದ್ದಾನೆ ಎಂದುಕೊಂಡು ಅವನ ಉಪಚಾರಕ್ಕೆ ನಿಂತಳು.
—————
ಬ್ರಹ್ಮನಿಂದ ತಾರಕಾಸುರನನ್ನು ಸಂಹರಿಸುವ ಉಪಾಯವನ್ನು ಪಡೆದಿದ್ದ ಇಂದ್ರನು ಮನ್ಮಥನ ಬಳಿ ಬಂದಿದ್ದ. ಕಳೆಗುಂದಿದ್ದ ತನ್ನ ಸ್ವಾಮಿಯ ಮುಖವನ್ನು ನೋಡಿದ ಮನ್ಮಥನು ಚಿಂತೆಯ ಕಾರಣವನ್ನು ಕೇಳಿದ: “ಸ್ಮಾಮಿ, ನಿನ್ನ ಈ ಅವಸ್ಥೆಗೆ ಕಾರಣವೇನು? ನೀನು ಆಜ್ಞೆ ಮಾಡಿದ್ದನ್ನು ನಾನು ಶಿರಸಾ ವಹಿಸಿ ಮಾಡುತ್ತೇನೆ. ಯಾವ ಋಷಿಯಾದರೂ ಘೋರವಾದ ತಪಸ್ಸನ್ನಾಚರಿಸಿ ನಿನ್ನ ಅಧಿಕಾರಕ್ಕೆ ಸ್ಪರ್ಧಿಸುತ್ತಿದ್ದಾನೆಯೇ? ಅವನ ತಪಸ್ಸನ್ನು ಒಂದು ಕ್ಷಣದಲ್ಲೇ ಕೆಡಿಸಿಬಿಡುತ್ತೇನೆ. ನಿನಗೆ ಯಾರಾದರೂ ದ್ವೇಷಿಗಳಿದ್ದಾರೆಯೇ? ಹಾಗೇನಾದರೂ ಇದ್ದರೆ ಅವನ ಧರ್ಮಾರ್ಥಗಳನ್ನು ನದಿಯು ತನ್ನ ಪ್ರವಾಹಿದಿಂದ ದಡವನ್ನು ನಾಶಮಾಡುವಂತೆ ನಾಶ ಮಾಡಿಬಿಡುತ್ತೇನೆ. ನಿನಗೆ ಯಾರಾದರೂ ಪತಿವ್ರತೆಯ ಮೇಲೆ ಮನಸ್ಸಾಗಿದೆಯೇ? ಅವಳನ್ನು ಅವಳಾಗಿಯೇ ನಿನ್ನ ಬಳಿ ಬರುವಂತೆ ಮಾಡುತ್ತೇನೆ. ನೀನು ಏನು ಬೇಕಾದರೂ ಕೇಳು. ವಜ್ರಾಯುಧದಂತೆಯೇ ನಾನೂ ನಿನ್ನ ಒಂದು ಆಯುಧವೆಂದು ತಿಳಿದುಕೋ.”
ಪ್ರಸನ್ನನಾದ ಇಂದ್ರನು ಮನ್ಮಥನಿಗೆ, “ನಿನ್ನ ಮಾತು ಕೇಳಿ ನನಗೆ ತುಂಬಾ ಸಂತೋಷವಾಯಿತು. ಈಗ ನನಗೆ ನೀನು ಹೇಳಿದ್ದಾವುದೂ ಬೇಡ. ತಾರಕನನ್ನು ಸಂಹರಿಸಲು ನಮಗೊಬ್ಬ ಸೇನಾಧಿಪತಿಯು ಬೇಕಾಗಿದ್ದಾನೆ. ಅವನು ಶಿವನ ಮಗನೇ ಆಗಬೇಕು. ಆದರೆ ಶಿವನು ಈಗ ಘೋರ ತಪಸ್ಸಿನಲ್ಲಿದ್ದಾನೆ. ನೀನು ಏನಾದರೂ ಮಾಡಿ ಅವನ ತಪಸ್ಸನ್ನು ಕೆಡಿಸಬೇಕು. ಇಷ್ಟು ಮಾಡಿದರೆ ನಮಗೆ ತುಂಬಾ ಉಪಕಾರವಾಗುತ್ತದೆ” ಎಂದ. ಮನ್ಮಥನು ಇದು ಕಷ್ಟದ ಕೆಲಸವೇ ಅಲ್ಲವೆಂದು ಒಪ್ಪಿಕೊಂಡ. ತನ್ನ ಸ್ನೇಹಿತ ವಸಂತನ ಸಹಾಯದಿಂದ ಈ ಕೆಲಸವನ್ನು ಮಾಡಿಕೊಡುವೆನೆಂದು ಮಾತುಕೊಟ್ಟ.
ಹಿಮಾಲಯದಲ್ಲಿ ಅಕಾಲದಲ್ಲಿ ವಸಂತಕಾಲ ಆರಂಭವಾಗಿಬಿಟ್ಟಿತ್ತು. ದುಂಬಿಗಳು ಮಧುವಿಗಾಗಿ ಹೂಗಳನ್ನು ಮುತ್ತಿಕೊಂಡಿದ್ದವು. ಮಾವಿನ ಮರಗಳು ಹೊಸ ಚಿಗುರಿನಿಂದ ಕಂಗೊಳಿಸುತ್ತಿದ್ದವು. ಪ್ರತಿಯೊಂದು ಗಿಡದಲ್ಲಿಯೂ ಸುಗಂಧಭರಿತವಾದ ಹೂಗಳು ಬಿಟ್ಟಿದ್ದವು. ಪ್ರಾಣಿಗಳು ತಮ್ಮ ಸಂಗಾತಿಗಳ ಜೊತೆ ಸೇರಿಕೊಂಡಿದ್ದವು. ಗಾಳಿ ತಂಪಾಗಿ ಬೀಸಲು ಶುರುಮಾಡಿತ್ತು. ವಸಂತನ ಪರಿಣಾಮ ಎಷ್ಟು ಘೋರವಾಗಿತ್ತೆಂದರೆ ಋಷಿಗಳಿಗೂ ತಮ್ಮ ತಪಸ್ಸನ್ನು ಮುಂದುವರಿಸಲು ಕಷ್ಟವಾಗಿತ್ತು. ಶಿವಗಣಗಳೂ ವಸಂತನ ಕಾರಣದಿಂದ ತಮ್ಮ ಮನಃಸ್ಥಿಮಿತವನ್ನು ಕಳೆದುಕೊಳ್ಳುವುದರಲ್ಲಿದ್ದಾಗ ನಂದಿಯೇ ಅವರನ್ನು ತಡೆಯಬೇಕಾಯಿತು. ವಸಂತನ ಆಗಮನ ಶಿವನ ಮೇಲೆ ಕಿಂಚಿತ್ತು ಪರಿಣಾಮವನ್ನೂ ಬೀರಿರಲಿಲ್ಲ. ವಸಂತನಿಗೊಬ್ಬನಿಗೇ ಶಿವನ ಸಮಾಧಿಭಂಗವನ್ನು ಮಾಡುವುದು ಸಾಧ್ಯವಿಲ್ಲವೆಂದುಕೊಂಡ ಮನ್ಮಥನು ರತೀಸಮೇತನಾಗಿ ಹಿಮಾಲಯದ ಬಳಿಗೆ ಬಂದ. ಅವನ ಬರುವಿಗೆ ಸರಿಯಾಗಿ ಪಾರ್ವತಿ ಶಿವನಿಗೆ ಹೂಗಳನ್ನು ಕೊಡಲು ಬರುವುದು ಅವನ ಕಣ್ಣಿಗೆ ಕಾಣಿಸಿತು.
ಶಿವನ ಸೇವೆಯನ್ನು ಪಾರ್ವತಿ ನಿಷ್ಟೆಯಿಂದ ಮಾಡುತ್ತಿದ್ದಳು. ಹೂಗಳನ್ನು ತಂದುಕೊಡುವುದು, ಪೂಜೆಗೆ ಪವಿತ್ರಜಲವನ್ನು ಒದಗಿಸುವುದು, ಯಾಜ್ಞವೇದಿಯನ್ನು ಶುದ್ಧಿಮಾಡುವುದು ಹೀಗೆ ಎಲ್ಲ ಕೆಲಸಗಳಲ್ಲಿಯೂ ಸಹಾಯ ಮಾಡುತ್ತಿದ್ದಳು. ಮನ್ಮಥನು ಬಂದಾಗ ಪಾರ್ವತಿ ಶಿವನಿಗೆ ಹೂಗಳನ್ನು ಕೊಡಲು ಬಂದಿದ್ದಳು. ಬಾಗಿಲ ಬಳಿ ಬಂದ ಪಾರ್ವತಿಯನ್ನು ಒಳಗೆ ಬಿಡಲು ಶಿವನು ನಂದಿಗೆ ಕಣ್ಣಿನ ಸಂಜ್ಞೆಯಿಂದಲೇ ತಿಳಿಸಿದ. ಒಳಗೆ ಬಂದ ಪಾರ್ವತಿ ಹೂಗಳನ್ನು ಶಿವನ ಪಾದದ ಬಳಿ ಅರ್ಪಿಸಿದಳು. ಅವಳು ಹೊರಡುವ ಕ್ಷಣದಲ್ಲಿ ಶಿವನು ತನ್ನ ಕಣ್ಣು ಬಿಟ್ಟು ಅವಳನ್ನು ನೋಡಿದ. ಅದೇ ಸರಿಯಾದ ಸಮಯವೆಂದು ತಿಳಿದ ಮನ್ಮಥನು ತನ್ನ ಬಾಣವನ್ನು ಶಿವನ ಮೇಲೆ ಬಿಟ್ಟ. ಪಾರ್ವತಿಯ ಕಣ್ಣಿನಲ್ಲಿ ಕಣ್ಣಿಟ್ಟು ನೋಡಿದ ಶಿವನಿಗೆ ಒಂದು ಕ್ಷಣ ಮನಸ್ಸು ವಿಚಲಿತವಾಯಿತು. ಮರುಕ್ಷಣದಲ್ಲಿ ಸಾವರಿಸಿಕೊಂಡು ತನ್ನ ಮನಃಶೈಥಿಲ್ಯಕ್ಕೆ ಕಾರವೇನೆಂದು ಸುತ್ತಮುತ್ತಲೂ ನೋಡಿದ. ಮನ್ಮಥನು ಕಂಡ ತಕ್ಷಣ ಶಿವನ ಮೂರನೇ ಕಣ್ಣು ಅವನನ್ನು ಸುಟ್ಟು ಬೂದಿ ಮಾಡಿತ್ತು. ಪಾರ್ವತಿ ಮನ್ಮಥನನ್ನು ನೋಡಿ ಶಿವನ ಬಳಿ ತಿರುಗುವಷ್ಟರಲ್ಲಿ ಶಿವನು ತನ್ನ ಗಣಗಳ ಸಮೇತ ಅದೃಶ್ಯನಾಗಿದ್ದ!
——————
ಮನ್ಮಥನನ್ನು ಕಳೆದುಕೊಂಡ ರತಿಯ ರೋದನ ಮುಗಿಲುಮುಟ್ಟಿತ್ತು. ಯಾವಾಗಲೂ ಮನ್ಮಥನ ಜೊತೆಯಲ್ಲಿಯೇ ಕಾಲ ಕಳೆಯುತ್ತಿದ್ದ ರತಿಗೆ ತನ್ನ ಪತಿಯು ಈಗ ಕೇವಲ ಭಸ್ಮವಾಗಿ ಕಾಣುತ್ತಿದ್ದ. ತನಗೆ ಅಷ್ಟು ಪ್ರಿಯನಾಗಿದ್ದ ಪತಿಯು ತಾನ್ನ ಪ್ರಾಣವನ್ನು ಬಿಟ್ಟಮೇಲೂ ಅವಳು ಇನ್ನೂ ಬದುಕಿದ್ದದ್ದು ಅವಳಗೇ ಆಶ್ಚರ್ಯ ತಂದಿತ್ತು. ತನ್ನ ಗಂಡನ ಪಾರ್ಥಿವ ಶರೀರವನ್ನು ಮುಟ್ಟಲೂ ಸಾಧ್ಯವಾಗದ ತನ್ನ ಅದೃಷ್ಟವನ್ನು ಹಳಿದುಕೊಳ್ಳುತ್ತಿದ್ದಳು. ಬಗೆಬಗೆಯಾಗಿ ಹಳೆಯದನ್ನೆಲ್ಲಾ ನೆನಸಿಕೊಂಡು ಭೂಮಿಯನ್ನು ಹಿಡಿದು ಅಳುತ್ತಿದ್ದ ರತಿಯನ್ನು ಮನ್ಮಥನ ಸ್ನೇಹಿತ ವಸಂತ ಸಮಾಧಾನಪಡಿಸಲು ಎಷ್ಟು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಕೊನೆಗೆ ರತಿಯು ಶೋಕವನ್ನು ತಡೆಯಲಾರದೆ ತನ್ನ ಜೀವನವನ್ನೇ ಕಳೆದುಕೊಳ್ಳಲು ನಿರ್ಧರಿಸಿದಾಗ ಒಂದು ಆಕಾಶವಾಣಿಯಾಯಿತು: “ಶಿವನು ಪಾರ್ವತಿಯ ಕೈಹಿಡಿದಾಗ ಮನ್ಮಥನು ಹಿಂದಿನ ಶರೀರವನ್ನು ಪಡೆಯುತ್ತಾನೆ”. ಆಕಾಶವಾಣಿಯ ಭರವಸೆಯಿಂದ ಸ್ವಲ್ಪ ಸಮಾಧಾಗೊಂಡ ರತಿ ವಸಂತನ ಜೊತೆ ಅಲ್ಲಿಂದ ಹೊರಟಳು.
ಇತ್ತ ಶಿವನು ಇದ್ದಕ್ಕಿದ್ದಂತೆ ಅಪ್ರತ್ಯಕ್ಷವಾದದ್ದು ಪಾರ್ವತಿಗೆ ತನ್ನ ಸ್ನೇಹಿತೆಯರ ಮುಂದೆ ಅವಮಾನವಾದಂತಾಯಿತು. ತನ್ನ ರೂಪವನ್ನೇ ಅವಳು ಬೈದುಕೊಂಡಳು. ತಾನು ಇಷ್ಟಪಟ್ಟವನನ್ನು ಒಲಿಸಿಕೊಳ್ಳಲು ತನ್ನ ಸೌಂದರ್ಯ ಯಾವುದೇ ಸಹಾಯ ಮಾಡದಿದ್ದಾಗ ಈಗ ತಪಸ್ಸೊಂದೇ ಅವಳ ಮುಂದಿರುವ ದಾರಿಯೆಂದು ನಿರ್ಧರಿಸಿಕೊಂಡಳು. ತನ್ನ ನಿರ್ಧಾರವನ್ನು ತಾಯಿಗೆ ತಿಳಿಸಿದಾಗ ಅವರು ಅವಳ ಶರೀರ ತಪಸ್ಸಿನ ಘೋರತೆಯನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲವೆಂದು ಪಾರ್ವತಿಯ ಕೋರಿಕೆಯನ್ನು ನಿರಾಕರಿಸಿದರು. ಆದರೆ ಅದಾಗಲೇ ನಿರ್ಧಾರವಾಗಿದ್ದ ಮನಸ್ಸು ತನ್ನ ನಿರ್ಧಾರವನ್ನು ಬದಲಿಸಿಕೊಳ್ಳಲು ಸಾಧ್ಯವೇ ಇರಲಿಲ್ಲ. ಪಾರ್ವತಿ ಅವಳ ನಿರ್ಧಾರವನ್ನು ಸ್ನೇಹಿತೆಯರ ಮೂಲಕ ತಂದೆಗೆ ತಿಳಿಸಿ, ಅವರನ್ನು ಒಪ್ಪಿಸಿ, ಶಿವನನ್ನು ಒಲಿಸಿಕೊಳ್ಳಲು ಗೌರೀಶಿಖರ ಪರ್ವತಕ್ಕೆ ತಪಸ್ಸಿಗಾಗಿ ತೆರಳಿದಳು.
ರಾಜಕುಮಾರಿಯ ವೇಷಭೂಷಣಗಳನ್ನು ತೆಗೆದ ಪಾರ್ವತಿ ಕೇವಲ ವಲ್ಕಲಗಳನ್ನುಟ್ಟು, ಅರಣ್ಯದಲ್ಲಿ ತಪಸ್ಸಿಗೆ ಕುಳಿತಳು. ದಿನದಿಂದ ದಿನಕ್ಕೆ ಅವಳು ತಪಸ್ಸು ಮಾಡುವ ಸಮಯ ಹೆಚ್ಚಾಗುತ್ತಾ ಹೋಯಿತು. ಅವಳ ಆಹಾರ ಗೆಡ್ಡೆಗೆಣಸುಗಳಿಂದ ಎಲೆಗಳಿಗೆ ಹೋಯಿತು. ಕೆಲವುದಿನಗಳ ನಂತರ ಅದು ಕೇವಲ ಗಾಳಿಗೆ ಹೋಯಿತು. ಈಗ ತಪಸ್ಸಿಗೆ ಬೇಕಾದ ಪರಿಕರಗಳನ್ನು ಹೊಂದಿಸುವ ಸಮಯದ ಹೊರತಾಗಿ ದಿನದ ಪೂರ್ಣಭಾಗವನ್ನು ಪಾರ್ವತಿ ತಪಸ್ಸಿನಲ್ಲಿಯೇ ಕಳೆಯುತ್ತಿದ್ದಳು. ಅವಳ ತಪಸ್ಸನ್ನು ನೋಡಿದ ಅಲ್ಲಿಯೇ ತಪಸ್ಸು ಮಾಡುತ್ತಿದ್ದ ಬೇರೆ ಹಿರಿಯ ಋಷಿಗಳು ಅವಳಿಗೆ ವಿಶೇಷವಾದ ಗೌರವವನ್ನು ಕೊಡಲು ಶುರುಮಾಡಿದರು. ಧರ್ಮವೃದ್ಧತ್ವವಿದ್ದಲ್ಲಿ ವಯಸ್ಸನ್ನು ನೋಡಲಾಗುವುದಿಲ್ಲವಲ್ಲ. ತಪಸ್ಸು ಮಾಡುತ್ತಾ ಮಾಡುತ್ತಾ ಪಾರ್ವತಿಯ ಮನೋಹರವಾದ ಶರೀರವು ಕಠಿಣತೆಗೆ ತಿರುಗಿತ್ತು.
ಕೆಲದಿನಗಳನಂತರ ಪಾರ್ವತಿ ತಪಸ್ಸುಮಾಡುತ್ತಿದ್ದ ಸ್ಥಳಕ್ಕೆ ಬ್ರಹ್ಮಚರ್ಯಾಶ್ರಮವೇ ದೇಹಧರಿಸಿಬಂದಂತೆ ಜಟಾಧಾರಿಯಾಗಿ ವಲ್ಕಲಗಳನ್ನುಟ್ಟಿದ್ದ ಬ್ರಹ್ಮಚಾರಿಯೊಬ್ಬ ಬಂದ. ಅವನ ಮುಖ ಅಪ್ರತಿಮ ತೇಜಸ್ಸಿನಿಂದ ಕೂಡಿತ್ತು. ತನ್ನ ಬಳಿಗೆ ಬಂದ ಅತಿಥಿಯನ್ನು ವಿಶೇಷವಾದ ಗೌರವಗಳಿಂದ ಪಾರ್ವತಿ ಆದರಿಸಿದಳು. ಕೆಲಕಾಲ ಅವಳನ್ನು ನೋಡಿದ ಆ ಬ್ರಹ್ಮಚಾರಿಯು ಪಾರ್ವತಿಯನ್ನು, “ನಿಮ್ಮ ತಪಸ್ಸಿಗೆ ಬೇಕಾದ ಸಮಿತ್ತುಗಳು ನಿಮಗೆ ಸರಿಯಾಗಿ ಸಿಗುತ್ತಿವೆಯೇ? ಜಲಕ್ಕೇನೂ ತೊಂದರೆಯಿಲ್ಲವಲ್ಲ? ಕಾಡಿನ ಪ್ರಾಣಿಗಳಿಂದೇನಾದರೂ ನಿಮಗೆ ತೊಂದರೆಯಾಗಿಲ್ಲವಲ್ಲ? ನೀವು ಬೆಳಸುತ್ತಿರುವ ಗಿಡಗಳು ಚೆನ್ನಾಗಿ ಬೆಳೆಯುತ್ತಿವೆಯೇ?” ಎಂದು ಅವಳ ತಪಸ್ಸಿನ ಕುರಿತಾಗಿ ವಿಚಾರಿಸಿದ. ಪಾರ್ವತಿ ಎಲ್ಲವೂ ಸರಿಯಾಗಿದೆಯೆಂದು ಉತ್ತರಿಸಿದಳು. ನಂತರ ಬ್ರಹ್ಮಚಾರಿಯೇ ಮುಂದುವರೆಸಿದ: “ದೇವಿ, ಸೌಹಾರ್ದದಿಂದ ಏಳು ಮಾತನ್ನಾಡಿದರೂ ಅವರ ನಡುವೆ ಸ್ನೇಹ ಏರ್ಪಡುತ್ತದೆ ಎಂದು ಕೇಳಿದ್ದೇನೆ. ನೀನು ಪರ್ವತರಾಜನ ಮಗಳು. ನಿನಗೆ ಬೇಕಾದವುಗಳೆಲ್ಲವೂ ನೀನು ಕೇಳಿದ ತಕ್ಷಣ ಸಿಕ್ಕುತ್ತದೆ. ನೀನು ಸ್ವರ್ಗಕ್ಕಾಗಿ ತಪಸ್ಸು ಮಾಡುತ್ತಿರುವೆಯೆಂದುಕೊಂಡರೆ ನೀನಿರುವುದೇ ಸ್ಚರ್ಗದಲ್ಲಿ. ನಿನ್ನಂತಹ ಸೌಂದರ್ಯವತಿಗೆ ಇಷ್ಟು ಶೋಕ ಸಲ್ಲ. ನನಗೆ ಹೇಳಬಾರದ ರಹಸ್ಯವಲ್ಲದಿದ್ದರೆ, ನಿನ್ನ ಈ ತಪಸ್ಸಿಗೆ ಕಾರಣವೇನೆಂದು ಕೇಳಬಹುದೇ?”
ಪಾರ್ವತಿಗೆ ತನ್ನ ಮನೋರಥವನ್ನು ನೇರವಾಗಿ ಬ್ರಹ್ಮಚಾರಿಗೆ ತಿಳಿಸಲಾಗಲಿಲ್ಲ. ಅವಳು ತನ್ನ ಸಖಿಯ ಕಡೆ ನೋಡಿದಳು. ಪಾರ್ವತಿಯ ಸಖಿಯೇ ಆ ಬ್ರಹ್ಮಚಾರಿಗೆ ಅವಳಿಗೆ ಶಿವನ ಮೇಲೆ ಮನಸ್ಸಾಗಿದೆಯೆಂದೂ, ಅವನನ್ನು ಒಲಿಸಿಕೊಳ್ಳಲೆಂದೇ ಪಾರ್ವತಿ ಈಗ ಅವಳ ತಂದೆಯ ಅನುಮತಿಯನ್ನು ಪಡೆದು ತಪಸ್ಸಿಗೆ ಕುಳಿತಿದ್ದಾಳೆಂದು ವಿವರಿಸಿದಳು. ಕೊನೆಗೆ, “ಆ ಶಿವನಿಗೆ ಪಾರ್ವತಿಯ ಮೇಲೆ ಯಾವಾಗ ಮನಸ್ಸಾಗುತ್ತದೆಯೋ ನಮಗೆ ತಿಳಿಯದು” ಎಂದಳು.
ಪಾರ್ವತಿಯ ಸಖಿಯ ಮಾತನ್ನು ಕೇಳಿದ ಬ್ರಹ್ಮಚಾರಿಯ ಮುಖದ ಮೇಲೆ ಹರ್ಷದ ಚಿಹ್ನೆಗಳು ಮಾಯವಾದವು. ಅವನು ಪಾರ್ವತಿಯ ಕಡೆ ನೋಡಿ ಅವಳೇನಾದರೂ ಪರಿಹಾಸ ಮಾಡುತ್ತಿದ್ದಾಳೆಯೇ ಎಂದು ಕೇಳಿದ. ಭೂಮಿಯನ್ನು ನೋಡುತ್ತಾ ಕೈಯಲ್ಲಿ ಮಣಿಗಳನ್ನು ಎಣಿಸುತ್ತಾ ಪಾರ್ವತಿ, “ನನ್ನ ಸಖಿಯು ಹೇಳಿದ ಮಾತುಗಳು ನಿಜ. ಪ್ರಪಂಚದಲ್ಲಿ ಯಾವ ವಸ್ತುವು ಎಲ್ಲದಕ್ಕಿಂತ ಬೆಲೆಯುಳ್ಳದ್ದೋ ಅದನ್ನು ಪಡೆಯಲು ನಾನು ತಪಸ್ಸು ಮಾಡುತ್ತಿದ್ದೇೆನೆ” ಎಂದಳು.
ಬ್ರಹ್ಮಚಾರಿ ನಿಟ್ಟುಸಿರು ಬಿಟ್ಟು, “ಶಿವನು ಎಲ್ಲರಿಗೂ ಗೊತ್ತಿರುವವನು. ಗೊತ್ತಿದ್ದೂ ಗೊತ್ತಿದ್ದೂ ನೀನು ಅವನನ್ನು ವರಿಸುವುದು ನನಗೆ ಒಪ್ಪಿಗೆಯಿಲ್ಲ. ಯಾರಾದರೂ ಬಯಸಿ ಅಶುಭವನ್ನು ಬಯಸುತ್ತಾರೆಯೇ? ನಿನ್ನ ಮೃದುವಾದ ಕೈಯನ್ನು, ಹಾವುಗಳನ್ನು ಹಿಡಿದ ಶಿವನಿಗೆ ಕೊಡುವೆಯಾ? ನಿನ್ನ ರೇಷ್ಮೆ ಬಟ್ಟೆಗಳನ್ನು ಆನೆಯ ಚರ್ಮ ಹೊದ್ದ ಶಿವನ ದುಕೂಲಕ್ಕೆ ಕಟ್ಟಬೇಕೇ? ಸೌಂದರ್ಯವತಿಯಾದ ನೀನು ಮೂರು ಕಣ್ಣುಗಳುಳ್ಳ ಕುರೂಪಿಯನ್ನು ಮದುವೆಯಾಗುವುದೆಂದರೇನು? ಈ ಕೆಟ್ಟ ಬಯಕೆಯಿಂದ ನೀನು ದೂರಳಾಗು. ಹುಟ್ಟಿನ ಮೂಲವೇ ಗೊತ್ತಿಲ್ಲದೆ ಸ್ಮಶಾನದಲ್ಲಿ ತಿರುಗುವವನಿಗೆ ಯಜ್ಞವೇದಿಯ ಪೂಜೆಯ ಯೋಗ್ಯತೆಯಿಲ್ಲ” ಎಂದ.
ಬ್ರಹ್ಮಚಾರಿಯ ಮಾತನ್ನು ಕೇಳಿ ಪಾರ್ವತಿಗೆ ವಿಪರೀತ ಕೋಪ ಬಂದಿತ್ತು. ಅವಳ ಹುಬ್ಬುಗಳು ಗಂಟಿಕ್ಕಿದ್ದವು. “ನಿನಗೆ ಶಿವನ ಬಗ್ಗೆ ಗೊತ್ತಿಲ್ಲದಂತಿದೆ. ಆದ್ದರಿಂದಲೇ ಹೀಗೆ ಮಾತನಾಡುತ್ತಿದ್ದೀಯ. ಮಂದರು ಮಹಾತ್ಮರ ಕುರಿತು ದ್ವೇಷದ ಮಾತುಗಳನ್ನಾಡುವುದು ಹೊಸದೇನಲ್ಲ. ನೀನಷ್ಟು ಮಾತಾಡಿದ್ದರಲ್ಲಿ ಒಂದು ನಿಜವಿದೆ. ಹೌದು, ಶಿವನ ಹುಟ್ಟಿನ ಮೂಲವೇ ತಿಳಿದಿಲ್ಲ. ಬ್ರಹ್ಮನ ಹುಟ್ಟಿಗೇ ಕಾರಣನಾದವನಿಗೆ, ತನ್ನ ಮೂಲವಿರುವುದಕ್ಕೆ ಹೇಗೆ ಸಾಧ್ಯ? ನಿನಗಿಷ್ಟವಿಲ್ಲದಿದ್ದರೆ ತೊಂದರೆಯಿಲ್ಲ. ನನ್ನ ಮನಸ್ಸು ಮಾತ್ರ ಶಿವನ ಮೇಲೆಯೇ ಇದೆ” ಎಂದು ಹೇಳಿ ತನ್ನ ಸಖಿಯ ಕಡೆ ತಿರುಗಿ, “ಈ ಬ್ರಹ್ಮಚಾರಿಗೆ ಇನ್ನೂ ಏನೋ ಹೇಳಬೇಕೆಂದೆನಿಸುತ್ತಿದೆ. ಅವನ ಮಾತನ್ನು ಕೇಳುವುದೂ ಪಾಪವಾಗುತ್ತದೆ. ದಯವಿಟ್ಟು ಅವನನ್ನು ಕಳಿಸಿಬಿಡು. ನಾನಿನ್ನು ಹೊರಡುತ್ತೇನೆ” ಎಂದಳು. ಹೊರಡಲು ಸಿದ್ಧಳಾದ ಪಾರ್ವತಿಯ ಕೈಯನ್ನು ಯಾರೋ ಹಿಡಿದಂತಾಯಿತು. ತಿರುಗಿ ನೋಡಿದ ಪಾರ್ವತಿಯ ಮೈಬೆವರಿತು. ಮುಗುಳ್ನಗುತ್ತಿದ್ದ ಶಿವನನ್ನು ನೋಡಿದ ಪಾರ್ವತಿಗೆ ಮುಂದಕ್ಕೆ ಹೋಗುವುದಕ್ಕೂ ಆಗಲಿಲ್ಲ. ಅಲ್ಲೇ ನಿಲ್ಲುವುದಕ್ಕೂ ಆಗಲಿಲ್ಲ.
————————
ಬ್ರಹ್ಮಚಾರಿಯ ವೇಶದಲ್ಲಿದ್ದ ಶಿವನು ತನ್ನ ಸ್ವರೂಪವನ್ನು ತಳೆದು ಪಾರ್ವತಿಯನ್ನು, “ದೇವೀ! ಇಂದಿನಿಂದ ನಾನು ನಿನ್ನ ದಾಸ. ನನ್ನನ್ನು ಮದುವೆಯಾಗುವೆಯಾ?” ಎಂದು ಕೇಳಿದ. ಶಿವನ ಮಾತನ್ನು ಕೇಳಿ ಪಾರ್ವತಿಗೆ ಅಷ್ಟುದಿನದ ಕ್ಲೇಷವೆಲ್ಲವೂ ಹೋಗಿ ಹೊಸತನವು ಬಂದಿತ್ತು. ಅವಳು ತನ್ನ ಸಖಿಯಿಂದ ವಿಧಿಯಂತೆ ತನ್ನ ತಂದೆಯು ಬಳಿ ಮಾತನಾಡಬೇಕೆಂದು ಶಿವನಿಗೆ ಹೇಳಿಸಿದಳು. ಶಿವನು ಸರಿಯೆಂದು ಹೊರಟ. ಪಾರ್ವತಿಯೂ ವಾಪಸ್ಸು ತನ್ನ ಮನೆಗೆ ಬಂದಳು.
ಶಿವನು ಸಪ್ತರ್ಷಿಗಳನ್ನು ನೆನಸಿಕೊಂಡ. ತಕ್ಷಣ ಪ್ರತ್ಯಕ್ಷರಾದ ಸಪ್ತರ್ಷಿಗಳು ಶಿವನನ್ನು ಪ್ರಾರ್ಥಿಸಿ, “ಸ್ವಾಮಿ ಈಗ ನಮ್ಮಿಂದ ಆಗಬೇಕಾದ ಕೆಲಸವೇನು?” ಎಂದು ಕೇಳಿದರು. ಪ್ರತಿಯಾಗಿ ಶಿವನು, “ನಿಮಗೆ ತಿಳಿಯದೇನಿಲ್ಲ. ನಾನು ಪಾರ್ವತಿಯನ್ನು ವರಿಸಲು ಇಚ್ಛಿಸುತ್ತೇನೆ. ನೀವು ನನ್ನ ಕಡೆಯಿಂದ ಹಿಮಾಲಯನ ಬಳಿಗೆ ಹೋಗಿ ಮದುವೆಯ ಮಾತುಕತೆಯನ್ನಾಡಿಕೊಂಡು ಬರಬೇಕು. ಆರ್ಯೆ ಅರುಂಧತಿಯು ಅಲ್ಲಿ ನಮ್ಮ ಪರವಾಗಿ ಮಾತನ್ನಾಡಲಿ. ಹೆಂಗಸರಿಗೆ ಇಂಥವುದರಲ್ಲಿ ಕೌಶಲ್ಯ ಹೆಚ್ಚು” ಎಂದ. ಸಪ್ತರ್ಷಿಗಳು ವರನ ಕಡೆಯವರಾಗಿ ಹಿಮಾಲಯನ ಮನೆಗೆ ಹೊರಟರು.
ಮನೆಗೆ ಬಂದ ಸಪ್ತರ್ಷಿಗಳನ್ನು ಹಿಮಾಲಯನು ಅರ್ಘ್ಯಾದಿಗಳಿಂದ ಆದರಿಸಿದ. ಉಭಯ ಕುಶಲೋಪರಿಯಾದ ಮೇಲೆ ಹಿಮಾಲಯನು, “ನಿಮ್ಮ ಆಗಮನದಿಂದ ನಮ್ಮ ಮನೆಯು ಪಾವನವಾಯಿತು. ನೀವು ಬಂದ ಕಾರಣವನ್ನು ದಯವಿಟ್ಟು ತಿಳಿಸಬೇಕು” ಎಂದು ವಿನಯವಾಗಿ ಕೇಳಿದ. ಸಪ್ತರ್ಷಿಗಳ ಪರವಾಗಿ ಅಂಗೀರಸರು ಮಾತನಾಡಿದರು: “ಇಷ್ಟು ದೊಡ್ಡವನಾದ ನಿನಗೆ ಈ ವಿನಯವು ಸಾಧುವಾದದ್ದೇ. ನಾವು ಚಂದ್ರಶೇಖರನಾದ ಶಿವನಿಗೆ ನಿನ್ನ ಮಗಳನ್ನು ಕೇಳಲು ಬಂದಿದ್ದೇವೆ. ಶಿವನನ್ನು ಯೋಗಿಗಳೂ ಪೂಜಿಸುತ್ತಾರೆ. ಅವನನ್ನು ವಾಕ್ಕಿಗೆ ಅರ್ಥವು ಸೇರಿದಂತೆ ಪಾರ್ವತಿಯು ಸೇರಿದರೆ ಲೋಕಕಲ್ಯಾಣವಾಗುತ್ತದೆ. ಸತ್ಪಾತ್ರನಾದ ವರನಿಗೆ ನಿನ್ನ ಮಗಳನ್ನು ಕೊಡುವುದರಿಂದ ನಿನಗೆ ಚಿಂತೆಯಿರುವುದಿಲ್ಲ. ಜಗತ್ತಿಗೇ ತಂದೆಯಾದ ಶಿವನನ್ನು ಮದುವೆಯಾದರೆ ಪಾರ್ವತಿಯು ಎಲ್ಲರಿಗೂ ತಾಯಿಯಾಗುತ್ತಾಳೆ. ಅಷ್ಟೇ ಅಲ್ಲದೆ ನೀನು ವಿಶ್ವದ ತಂದೆಗೇ ತಂದೆಯಾಗುತ್ತೀಯೆ. ಆದ್ದರಿಂದ ಶಿವನಿಗೆ ಪಾರ್ವತಿಯನ್ನು ಕೊಡಬೇಕೆಂದು ನಾವು ಕೇಳುತ್ತಿದ್ದೇವೆ.” ಹಿಮಾಲಯನಿಗೆ ಈ ಸಂಬಂಧವು ಸಂಪೂರ್ಣವಾಗಿ ಇಷ್ಟವಾಗಿತ್ತು. ಅವನು ಒಮ್ಮೆ ಮೇನೆಯ ಮುಖವನ್ನು ನೋಡಿದ. ಅವಳ ಮುಖದಲ್ಲಿಯೂ ಸಮ್ಮತಿಯಿತ್ತು. ಪಾರ್ವತಿಯನ್ನು ಕೇಳುವ ಅವಶ್ಯಕತೆಯೇ ಇರಲಿಲ್ಲ. ಹಿಮಾಲಯನು ಸಮ್ಮತಿಯ ದ್ಯೋತಕವಾಗಿ ಪಾರ್ವತಿಯನ್ನು ಸಪ್ತರ್ಷಿಗಳಿಗೆ ನಮಸ್ಕರಿಸಲು ಹೇಳಿದ. ಪಾರ್ವತಿಯು ನಮಸ್ಕರಿಸಿದ ಮೇಲೆ ಅರುಂಧತಿ ದೇವಿಯು ತಮ್ಮ ತೊಡೆೆಯ ಮೇಲೆ ಕೂರಿಸಿಕೊಂಡು ಮಾತನಾಡಿಸಿದರು. ಹಿಮಾಲಯನು ವಿವಾಹದ ಮುಹೂರ್ತವನ್ನು ಕುರಿತು ಕೇಳಲಾಗಿ, ವರನ ಕಡೆಯವರು ಇನ್ನು ಮೂರು ದಿನಗಳಲ್ಲಿರುವ ಒಳ್ಳೆಯ ಮುಹೂರ್ತದಲ್ಲಿ ವಿವಾಹವನ್ನು ನಿಶ್ಚಯಿಸಿಕೊಂಡು ಹೊರಟರು. ಶಿವನು ಪಾರ್ವತಿಯ ನೆನಪಿನಲ್ಲಿ ದಿನಗಳನ್ನು ಕಳೆಯುತ್ತಿದ್ದ.
————
ವಿವಾಹದ ದಿನ ಹಿಮಾಲಯನು ಬಂಧುಸಮೇತನಾಗಿ ಪಾರ್ವತಿಗೆ ವಿವಾಹದೀಕ್ಷೆಯನ್ನು ಕೊಟ್ಟ. ಹಿಮಾಲಯದ ಓಷಧಿಪ್ರಸ್ತವು ಮದುವೆಯ ಸಂಭ್ರಮಕ್ಕೆ ಸಿಂಗಾರಗೊಂಡಿತ್ತು. ಪಾರ್ವತಿ ಬೆಳೆಗ್ಗೆಯೇ ಮಂಗಳ ಸ್ನಾನವನ್ನು ಮಾಡಿ, ಕುಲದೇವತೆಯ ಪೂಜೆಮಾಡಿ, ಅಲಂಕಾರವನ್ನು ಮಾಡಿಕೊಂಡಳು. ಇತ್ತ ವರನ ಕಡೆಯವರು ಕೈಲಾಸದಿಂದ ಹೊರಡಲು ಸಿದ್ಧರಾದರು. ಶಿವನು ಸಿಂಗರಿಸಿಕೊಂಡು ನಂದಿಯ ಭುಜದ ಮೇಲೆ ಕುಳಿತುಕೊಂಡ. ಸಪ್ತರ್ಷಿಗಳು ವರನ ಮೆರವಣಿಗೆಯ ಮುಂಚೂಣಿಯಲ್ಲಿದ್ದರು. ಶಿವನ ಪಕ್ಕದಲ್ಲಿ ಬ್ರಹ್ಮ ವಿಷ್ಣುಗಳು ಬಂದರು. ವರನ ದಿಬ್ಬಣವನ್ನು ಎದುರು ನೋಡುತ್ತಾ ಹಿಮಾಲಯನು ಓಷಧಿಪ್ರಸ್ತದ ಹೆಬ್ಬಾಗಿಲಿನಲ್ಲಿ ನಿಂತಿದ್ದ. ರಾಜಬೀದಿಯಲ್ಲಿ ಶಿವನು ಬರುತ್ತಿದ್ದಾಗ ಅವನನ್ನು ನೋಡಲು ಅಲ್ಲಿದ್ದ ಮನೆಗಳಿದ್ದವರೆಲ್ಲರೂ ಹೊರಬಂದಿದ್ದರು. ದಿಬ್ಬಣವು ಮದುವೆ ಮನೆಯ ಹತ್ತಿರಕ್ಕೆ ಬಂದಾಗ ಶಿವನನ್ನು ಹಿಮಾಲಯನೇ ಕೈಹಿಡಿದು ಕೆಳಗಿಳಿಸಿದ. ಮದುವೆ ಅಗ್ನಿಸಾಕ್ಷಿಯಾಗಿ, ಲಾಜಾಹೋಮದ ಸಮೇತ ಸಪ್ತರ್ಷಿಗಳ ಸಮಕ್ಷದಲ್ಲಿ ನಡೆಯಿತು. ಮದುವೆಯ ನಂತರ ಶಿವನು ಹಿಮಾಲಯನಲ್ಲೇ ಮೂರು ದಿನವಿದ್ದು, ನಂತರ ಪಾರ್ವತಿಯನ್ನು ಕರೆೆದುಕೊಂಡು ಕೈಲಾಸಕ್ಕೆ ಹೋದ.
ಮನ್ಮಥನು ಪುನಃ ರತಿಗೆ ಸಿಕ್ಕಿದ್ದ.
———
ಉಜ್ಜಯಿನಿಯ ಮಹಾಕಾಳನ ದೇವಸ್ಥಾನದಲ್ಲಿ ಕಳೆದ ಒಂದು ಘಂಟೆಯಿಂದ ಧ್ಯಾನಸ್ಥನಾಗಿ ಕುಳಿತಿದ್ದ ಕಾಳಿದಾಸ ನಿಧಾನವಾಗಿ ಕಣ್ಣು ತೆರೆದ. ಅವನ ಕಣ್ಣುಗಳಲ್ಲಿ ವಿಶೇಷವಾದ ಕಾಂತಿಯಿತ್ತು. ಮುಖದಲ್ಲಿ ನೆಮ್ಮದಿಯ ಮಂದಹಾಸವಿತ್ತು. ಹಲವು ದಿನಗಳಿಂದ ತನ್ನ ಮನಸ್ಸಿನಲ್ಲಿ ಅಸ್ಪಷ್ಟವಾಗಿ ಮೂಡುತ್ತಿದ್ದ ವಸ್ತುವಿಗೆ ಸರಿಯಾದ ಚಿತ್ರಣವನ್ನು ಕೊಡಲು ಈ ಬೆಳಿಗ್ಗೆ ಮಹಾಕಾಳನೇ ತನ್ನ ಕಥೆಯನ್ನು ಕಾಳಿದಾಸನಿಗೆ ಹೇಳಿದಂತಿತ್ತು. ಇನ್ನು ಅದನ್ನು ಕಾವ್ಯವನ್ನಾಗಿ ಬರೆಯುವುದು ಕಾಳಿದಾಸನಿಗೆ ಅಷ್ಟು ಕಷ್ಟವಿರಲಿಲ್ಲ. ನಿಧಾನವಾಗಿ ಎದ್ದು, ತನ್ನ ಆರಾಧ್ಯ ದೈವ ಮಹಾಕಾಳನನ್ನು ತನ್ನದೇ ಆದ, ತನಗಿಷ್ಟವಾದ, “ವಾಗರ್ಥಾವಿವ…” ಶ್ಲೋಕದಿಂದ ನಮಸ್ಕರಿಸಿ ತನ್ನ ಮನೆಗೆ ಹೋದ. ಭರತಭೂಮಿ ಮತ್ತೊಂದು ಮಹಾಕಾವ್ಯವನ್ನು ಎದುರುನೋಡುತ್ತಿತ್ತು.