Sunday, March 3, 2019

ವೇದ ಪರಿಚಯ

೧. ಪರಿಚಯ
    ೧. ವೇದದ ಕಾಲ
    ೨. 'ವೇದ' ಶಬ್ದ
    ೩. ವೇದಕಾಲದ ಸಮಾಜ
೨. ವೇದ ವಿಭಾಗಗಳು
     ೧. ಸಂಹಿತೆ
     ೨. ಬ್ರಾಹ್ಮಣ
     ೩. ಅರಣ್ಯಕ
     ೪. ಉಪನಿಷತ್ತು
೩. ಚತುರ್ವೇದಗಳು
     ೧. ಋಗ್ವೇದ
     ೨. ಯಜುರ್ವೇದ
          ೧. ಕೃಷ್ಣ
          ೨. ಶುಕ್ಲ
     ೩. ಸಾಮವೇದ
     ೪. ಅಥರ್ವವೇದ
೬. ವೇದ ಶಾಖೆಗಳು
೪. ವೇದಾಂಗಗಳು
     ೧. ಶೀಕ್ಷಾ
           ೧. ವರ್ಣ
           ೨. ಸ್ವರ
           ೩. ಮಾತ್ರೆ
           ೪. ಬಲ
           ೫. ಸಾಮ
           ೬. ಸಂತಾನ
     ೨. ವ್ಯಾಕರಣ
     ೩. ಛಂದಸ್ಸು
     ೪. ನಿರುಕ್ತ
           ೧. ಯಾಸ್ಕರು
     ೫. ಜ್ಯೋತಿಷ
     ೬. ಕಲ್ಪ
          ೧. ನಾಲ್ಕು ಸೂತ್ರ ವಿಭಾಗಗಳು.
          ೨. ಸೂತ್ರಗಳು: ಪರಿಚಯ 
               ೧. ಆಶ್ವೀಲಾಯನ 
               ೨. ಆಪಸ್ಥಂಬ
               ೩. ಬೋಧಾಯನ 
೫. ವೇದಾಭ್ಯಾಸ ಕ್ರಮ
     ೧. ಸಂಹಿತ ಪಾಠ
     ೨. ಪದ ಪಾಠ
     ೩. ಜಟಾ ಪಾಠ
     ೪. ಘನ ಪಾಠ
     ೫. ಇತರ ವಿಕೃತಿಗಳು
೭. ವೇದಾರ್ಥ ಯತ್ನ
     ೧. ಪ್ರಾಚೀನ ಯತ್ನಗಳು
     ೨. ಆಧುನಿಕ ಯತ್ನಗಳು
೮. ಷಡ್ದರ್ಶನಗಳು - ಪರಿಚಯ
    ೧. ಸೂತ್ರ-ಭಾಷ್ಯ-ವಾರ್ತಿಕ-ವ್ಯಾಖ್ಯಾನ ವಿವರಣೆಗಳು
    ೨. ಸಾಂಖ್ಯ 
    ೩. ಯೋಗ 
         ೧. ಯೋಗ ಸೂತ್ರ: ಪತಂಜಲಿ
    ೩. ವೈಶೇಷಿಕ
    ೪. ನ್ಯಾಯ
    ೫. ಮೀಮಾಂಸ 
         ೧. ಜೈಮಿನಿ ಸೂತ್ರಗಳು
         ೨. ಪ್ರಭಾಕರ
         ೩. ಕುಮಾರಿಲ ಭಟ್ಟ
     ೬. ವೇದಾಂತ 
          ೧. ಬ್ರಹ್ಮ ಸೂತ್ರಗಳು
          ೨. ಶಂಕರ
          ೩. ರಾಮಾನುಜ
          ೪. ಪೂರ್ಣಪ್ರಜ್ಞ
೯. ಸ್ಮೃತಿ: ಮುಖ್ಯ ಧರ್ಮ ಸೂತ್ರಗಳು
     ೧. ಮನು
     ೨. ಯಾಜ್ಞವಲ್ಕ್ಯ
೧೦. ಪುರಾಣಗಳು: ಪರಿಚಯ
೧೧. ಉಪವೇದಗಳು: ಪರಿಚಯ
    ೧. ಧನುರ್ವೇದ
    ೨. ಆಯುರ್ವೇದ
    ೩. ಸ್ಥಪತ್ಯವೇದ
    ೪. ಗಾಂಧರ್ವವೇದ  
೧೨. ರಾಮಾಯಣ: ಪರಿಚಯ
೧೩. ಮಹಾಭಾರತ: ಪರಿಚಯ
೧೪. ಉಪಸಂಹಾರ
-------------------------------------------------------------------------------------------------------------------

೧. ಪರಿಚಯ

ವೇದವೆಂದರೆ ಜ್ಞಾನ - ಇದು ನಮ್ಮೆಲ್ಲರಿಗೂ ತಿಳಿದ ಸಂಗತಿ. ಈ ಅರ್ಥಕ್ಕಿಂತ ಹೆಚ್ಚಿನದು ನಮ್ಮಲ್ಲಿ ಅನೇಕರಿಗೆ ತಿಳಿಯದು. ತಿಳಿದಿದ್ದರೂ ವೇದದ ಅನೇಕ ವಿಷಯಗಳು ಅಸ್ಪಷ್ಟ. ಉದಾಹರಣೆಗೆ ವೇದದಲ್ಲೇ ಅತಿ ಮುಖ್ಯವೆಂದು ಪರಿಗಣಿಸಿರುವ ಗಾಯತ್ರಿ ಮಂತ್ರವನ್ನು ಎಲ್ಲರೂ ತಿಳಿದಿದ್ದರೂ ಅದರ ಮಂತ್ರವು ಯಾವ ವೇದದಲ್ಲಿ ಬರುತ್ತದೆ? ಅದರ ದ್ರಷ್ಟಾರರು ಯಾರು? ಅದರ ಸ್ವರ ಮಾತ್ರೆಗಳ ವಿನ್ಯಾಸವೇನು? ಮಂತ್ರದ ಪಾಠವೇನು? ಮುಂತಾದ ವಿಷಯಗಳ ಬಗ್ಗೆ ತಿಳಿದಿರುವುದಿಲ್ಲ. ಇವುಗಳ ವಿಷಯವಾಗಿ ತಿಳಿಸುವುದೇ ಈ ಲೇಖನ ಮಾಲೆಯ ಉದ್ದೇಶ. 

ದೇವುಡು ಸರಸಿಂಹಶಾಸ್ತ್ರಿಗಳು ಹೇಳುವಂತೆ ನಮ್ಮ ಭಾರತೀಯ ಸಂಸ್ಕೃತಿ ವೇದ ಸಂಸ್ಕೃತಿಯ ಪ್ರತಿಬಿಂಬ. ನಮ್ಮ ನಿತ್ಯ ಜೀವನದ ವ್ಯವಹಾರದಿಂದ ಹಿಡಿದು ನಮ್ಮ ತತ್ವ ಜಿಜ್ಞಾಸೆಯವರೆಗೂ ವೇದವೇ ಆಧಾರ. ನಾವು ನಿತ್ಯ ಹಾಡುವ ಭಕ್ತಿಗೀತೆಗಳ ಭಾವ, ಪೂಜಾ ವಿಧಾನಗಳು, ವೇದಾಂತ ಜಿಜ್ಞಾಸೆ, ನಮ್ಮ ಪೂರ್ವಿಜರ ದೇವರ ಶ್ಲೋಕಗಳು, ಜಾನಪದ, ಸೂಕ್ತಿ-ಸುಭಾಷಿತಗಳು, ಮದುವೆ, ಉಪನಯನ, ತಂದೆ - ತಾಯಿ - ಮಕ್ಕಳು - ಸಹೋದರ - ಸಹೋದರಿಯರು -ಪತಿಪತ್ನಿಯರ ಸಂಬಂಧಗಳು, ಒಂದು ಮಟ್ಟಕ್ಕೆ ನಮ್ಮ ಶಿಲ್ಪಿಕಲೆ, ಇವೆಲ್ಲವುಗಳಿಗೂ ವೇದವೇ ಸ್ಫೂರ್ತಿ. ಯಜ್ಞದಲ್ಲಿ ನೆಡುವ ಯೂಪಕ್ಕೆ ಮಾಡುವ ಸ್ತೋತ್ರದಿಂದ ಹಿಡಿದು ತತ್ರ ಕೋ ಮೋಹಃ ಕೋ ಶೋಕಃ ಏಕತ್ವಮನುಪಶ್ಯತ  (ಎಲ್ಲವೂ ಒಂದೇ ಎಂಬ ಭಾವವಿರುವಲ್ಲಿ ಶೋಕ-ಮೋಹಗಳೆಲ್ಲಿ? - ಈಶೋಪನಿಷತ್ತು) ಎನ್ನುವ ಶುದ್ದ ವೇದಾಂತದವರೆಗೆ ಎಲ್ಲವೂ ವೇದಗಳಲ್ಲಿದೆ.

ವೇದ ಮಂತ್ರಗಳು ನಮಗೆ ಧಾರ್ಮಿಕ ದೃಷ್ಟಿಯಿಂದ - ಅಂದರೆ ನಿತ್ಯ (ನಿತ್ಯ ದೇವರಪೂಜೆ, ಸಂಧ್ಯಾವಂದನೆ ಮುಂತಾದವುಗಳು), ನೈಮಿತ್ತಿಕ (ಮದುವೆ, ಉಪನಯನ, ಶ್ರಾದ್ಧ ಮುಂತಾದವುಗಳು) ಮತ್ತು ಕಾಮ್ಯಕ (ವ್ರತ ಪೂಜೆ ಇತ್ಯಾದಿ) ಕರ್ಮಗಳಲ್ಲಿ ಉಪಯೋಗಿಸಿ - ಪರಿಚಯ. ಆದರೆ ವೇದಗಳ ರಚನಾ ವಿಧಾನ, ಅದರ ವಿಷಯಗಳು ಮತ್ತು ತತ್ವದ ಬಗ್ಗೆ ಹೆಚ್ಚಾಗಿ ತಿಳಿದಿರುವುದಿಲ್ಲ. ವೇದದ ತತ್ವದ ವಿಷಯ ಗಹನ ಮತ್ತು ಅದನ್ನು ತಿಳಿಯುವುದು ಕಠಿಣ. ವೇದಗಳ ಕುರಿತಾಗಿ ಸಂಪೂರ್ಣವಾಗಿ ತಿಳಿಯುವುದು ಎಲ್ಲರಿಗೂ ಸಾಧ್ಯವಿಲ್ಲವಾದರೂ, ವೇದದ ಪರಿಚಯ ಎಲ್ಲರಿಗೂ - ಕನಿಷ್ಠಪಕ್ಷ ಆಸ್ತಿಕರಿಗಾದರೂ - ತಿಳಿದಿರಬೇಕು ಎಂಬುದು ನನ್ನ ಅಭಿಪ್ರಾಯ. ಆಗಲೇ ವೇದದ ನಿಜವಾದ ಪ್ರಶಂಸೆ  ಮತ್ತು ಅಧ್ಯಯನ ಸಾಧ್ಯವಾಗುತ್ತದೆ. 

೧.೧. ವೇದದ ಕಾಲ

ವೇದಗಳು ಅಪೌರುಷೇಯವೆಂದು ನಮ್ಮ ನಂಬಿಕೆ. ಅಂದರೆ ವೇದಗಳು ಮನುಷ್ಯರಿಂದ ರಚಿಸಲ್ಪಟ್ಟವಲ್ಲ. ವೇದ ಋಷಿಗಳು ಮಂತ್ರ ದ್ರಷ್ಟಾರರು - ಅಂದರೆ ವೇದಗಳು ಋಷಿಗಳಿಗೆ ಮೊದಲು ಗೋಚರಿಸಿದವು - ಎಂದೇ ನಮ್ಮ ಸನಾತನ ನಂಬಿಕೆ. ಈ ದೃಷ್ಟಿಯಿಂದ ವೇದದ ಕಾಲವೆಂದರೆ ವೇದಗಳು ಋಷಿಗಳಿಗೆ ಗೋಚರಿಸಿದ ಕಾಲ. 

ವೇದದ ಕಾಲದ ಬಗ್ಗೆ ಅನೇಕ ಅಭಿಪ್ರಾಯಗಳಿವೆ. ವಿವಿಧ ವಿದ್ವಾಂಸರು ವಿವಿಧ ಕಾಲಗಳನ್ನು ನಿಷ್ಕರ್ಷೆ ಮಾಡಿದ್ದಾರೆ. ಅವರು ಉಪಯೋಗಿಸಿರುವ ಮಾರ್ಗಗಳೂ ಬೇರೆಯಾಗಿವೆ. ಈ ನಿಟ್ಟಿನಲ್ಲಿ ಕೆಲವು ಪ್ರಯತ್ನಗಳು ಇಂತಿವೆ:
  1. ಬೌದ್ಧ ಮತ್ತು ಜೈನ ಮತಗಳ ಉದಯ: ಬೌದ್ಧ ಮತ್ತು ಜೈನ ಮತಗಳು ಸುಮಾರು ಕ್ರಿ.ಪೂ. ೬೦೦-೪೦೦ರ ನಡುವೆ ತಲೆ ಎತ್ತಿದವು. ಇವುಗಳ ಮುಖ್ಯೋದ್ದೇಶ ವೈದಿಕ ಮತದ ದೋಷಗಳನ್ನು ಖಂಡಿಸುವುದು. ಬೌದ್ಧ ಮತ್ತು ಜೈನ ಮತಗಳ ಉಗಮ ಇಂದಿನ ನೇಪಾಳ ಮತ್ತು ಬಿಹಾರದ ಪ್ರಾಂತ್ಯಗಳು. ನಮಗೆ ತಿಳಿದಂತೆ ವೇದಗಳ ಉಗಮ ಇಂದಿನ ಪಂಜಾಬ್ ಪ್ರಾಂತ್ಯದಲ್ಲಾಯಿತು. ಅಂದರೆ ಈ ಹೊತ್ತಿಗೆ ವೈದಿಕ ಮತ ಸಂಪೂರ್ಣವಾಗಿ ನೆಲೆಗೊಂಡಿರಬೇಕು ಮತ್ತು ಭಾರತದ ಮುಖ್ಯ ಪ್ರದೇಶಗಳಿಗೆ ಹರಡಿರಬೇಕು. ಅಲ್ಲದೆ ಧರ್ಮಸೂತ್ರಗಳ ರಚನೆಯೂ ಮುಗಿದಿರಬೇಕು. ಈ ಹಿನ್ನಲೆಯಲ್ಲಿ ವಿವಿಧ ವೇದ ಭಾಗಗಳನ್ನು ರಚಿಸಲು ಬೇಕಾಗುವ ಕಾಲವನ್ನು ಊಹಿಸಿ ಪಾಶ್ಚಾತ್ಯ ವಿದ್ವಾಂಸರಾದ ಮ್ಯಾಕ್ಸ್ ಮುಲ್ಲರ್ ರವರು ವೇದ ಕಾಲವನ್ನು ಸುಮಾರು ಕ್ರಿ.ಪೂ. ೧೨೦೦ ಎಂದು ಅಂದಾಜಿಸಿದ್ದಾರೆ. ಆದರೆ ವೇದದ ಗ್ರಂಥರಾಶಿಯನ್ನು ನೋಡಿದಾಗ ಕೇವಲ ೬೦೦ ವರ್ಷಗಳಲ್ಲಿ ಅಷ್ಟೆಲ್ಲವನ್ನೂ ರಚಿಸಿ - ಪ್ರಚಾರಪಡಿಸಲು ಸಾಧ್ಯವೇ ಎಂಬ ಪ್ರಶ್ನೆ ಹುಟ್ಟುತ್ತದೆ. ಆದ್ದರಿಂದ ಈ ನಿರ್ಣಯವನ್ನು ಒಪ್ಪುವುದು ಕಷ್ಟ. 
  2. ಜ್ಯೋತಿಷ: ಇದು ವೇದ ಸಾಹಿತ್ಯದಲ್ಲಿ ಬರುವ ಜ್ಯೋತಿಷ ಅಂಶಗಳನ್ನು ಗುರುತಿಸಿ ಮಾಡಿರುವ ಕಾಲ ನಿರ್ಣಯ. ಶತಪಥಬ್ರಾಹ್ಮಣದಲ್ಲಿ ಮೇಷ ಸಂಕ್ರಮಣವು ಕೃತಿಕಾ ನಕ್ಷತ್ರದಲ್ಲಿ ಪ್ರಾರಂಭವಾಯಿತು ಎಂಬ ಸೂಚನೆಯಿದೆ. ಈ ಘಟನೆ ನಡೆದುದು ಸುಮಾರು ಕ್ರಿ.ಪೂ. ೨೫೦೦ರಲ್ಲಿ. ಇಂತಹ ಜ್ಯೋತಿಷದ ಎಳೆಗಳನ್ನು ಹಿಡಿದು ಮತ್ತೊಬ್ಬ ಪಾಶ್ಚಾತ್ಯ ವಿದ್ವಾಂಸರಾದ ಜೆಕೋಬಿಯವರು ವೇದದ ಕಾಲವನ್ನು ಸುಮಾರು ಕ್ರಿ.ಪೂ. ೪೦೦೦ದಿಂದ ಕ್ರಿ.ಪೂ. ೨೫೦೦ ಎಂದು ಹೇಳಿದ್ದಾರೆ. ಲೋಕಮಾನ್ಯ ತಿಲಕರು ಇದೇ ಮಾರ್ಗವನ್ನನುಸರಿಸಿ ಕ್ರಿ.ಪೂ.೬೦೦೦ ಎಂದು ಹೇಳಿದ್ದಾರೆ. ಆದರೆ ಇದರಲ್ಲೂ ಕೆಲವು ದೋಷಗಳಿವೆ. ವಿದ್ವಾಂಸರ ಪ್ರಕಾರ ವೇದಗಳಲ್ಲಿ ಸಂಕ್ರಮಣದ ವಿಷಯವೇ ಬಂದಿಲ್ಲ. ಜೆಕೋಬಿ ಮತ್ತು ತಿಲಕರು ಈ ವೇದಭಾಗದ ಅರ್ಥವನ್ನು ತಪ್ಪಾಗಿ ಅರ್ಥೈಸಿದ್ದಾರೆ ಎಂಬುದು ಅವರ ಅಭಿಪ್ರಾಯ. 
  3. ವೇದ ಪ್ರಚಾರ: ವೇದಗಳು ಕ್ರಿ.ಪೂ. ೩೦೦ರಲ್ಲಿ ದಕ್ಷಿಣ ಭಾರತದಲ್ಲಿ ಪ್ರಚಲಿತದಲ್ಲಿದ್ದವು ಎಂದು ತಿಳಿದು ಬರುತ್ತದೆ. ಉತ್ತರದಲ್ಲಿ ಜನಿಸಿದ ವೇದಗಳು ಅಂದಿನ ಪರಿಸ್ಥಿತಿಗಳಲ್ಲಿ ದಕ್ಷಿಣದಲ್ಲಿ ಹರಡಲು ಬೇಕಾಗುವ ಕಾಲವನ್ನು ಊಹಿಸಿ ಕೆಲವರು ವೇದಗಳು ಸುಮಾರು ಕ್ರಿ.ಪೂ.೧೨೦೦ರಲ್ಲಿ ರಚಿಸಿದವು ಎಂದು ಅಭಿಪ್ರಾಯ ಪಡುತ್ತಾರೆ. ಆದರೆ ಈ ಮಾರ್ಗದಲ್ಲಿ ಅನೇಕ ಊಹೆಗಳಿರುವ ಕಾರಣ ಇದು ಮಾನ್ಯವಾಗಿಲ್ಲ.
  4. ಕೆಲವರು ವೇದ ಭಾಷೆ ಮತ್ತು ಇರಾನಿನ ಜೋರಾಷ್ಟ್ರಿಯನ್ ಭಾಷೆಗೂ ಇರುವ ಕೆಲವು ಸಾಮ್ಯತೆಗಳನ್ನು ಗುರುತಿಸಿ ವೇದ ಕಾಲವನ್ನು ಸುಮಾರು ಕ್ರಿ.ಪೂ. ೩೦೦೦ ಎಂದು ಹೇಳಿದ್ದಾರೆ. ಆದರೆ ಭಾಷಾಸಾಮ್ಯದಿಂದ ಕಾಲವನ್ನು ಗುರುತಿಸಿವುದು ಸಾಧ್ಯವಿಲ್ಲ ಎಂಬ ಅಭಿಪ್ರಾಯವೂ ಇದೆ.
  5. ಭಾರತೀಯ ಧರ್ಮಸೂತ್ರಗಳ ಇತಿಹಾಸವನ್ನು ಸಮಗ್ರವಾಗಿ ಅಧ್ಯಯನ ಮಾಡಿರುವ ವಿದ್ವಾನ್ ಪಾಂಡುರಂಗ ವಾಮನ ಕಾಣೆಯವರು ತಮ್ಮ 'History of Dharmashastras' ಎಂಬ ಗ್ರಂಥದಲ್ಲಿ ವೇದಗಳ ಕಾಲವನ್ನು ಸುಮಾರು ಕ್ರಿ.ಪೂ. ೧೦೦೦೦ - ಕ್ರಿ.ಪೂ. ೪೦೦೦ ಎಂದು ಅಂದಾಜಿಸಿದ್ದಾರೆ.
ಒಟ್ಟಿನಲ್ಲಿ ವೇದಕಾಲವನ್ನು ಗುರುತಿಸಲು ಮಾಡಿದ ಯಾವ ಪ್ರಯತ್ನಗಳೂ ಎಲ್ಲರೂ ಒಪ್ಪುವಂತೆ ಸಂಪೂರ್ಣವಾಗಿ ಸಫಲವಾಗಿಲ್ಲ. ನಮ್ಮ ದೇಶದ ಒಟ್ಟು ಸಾಹಿತ್ಯವನ್ನೂ, ವೇದ ಸಾಹಿತ್ಯದ ಪರಿಮಾಣವನ್ನೂ ಪರಿಶೀಲಿಸಿ, ಬೌದ್ಧ-ಜೈನ ಮತಗಳ ಉಗಮ-ಪ್ರಚಾರಗಳನ್ನು ಗಣನೆಗೆ ತೆಗೆದುಕೊಂಡು ವೇದಕಾಲವನ್ನು ಕ್ರಿ.ಪೂ.೪೫೦೦-೧೨೦೦ ಎಂದು ಪರಿಗಣಿಸಬಹುದು.

೧.೨. ವೇದ ಶಬ್ದದ ಉತ್ಪತ್ತಿ

'ವೇದ' ಸಂಸ್ಕೃತ ಪದ. ವೇದ ಪದದ ಮೂಲ 'ವಿದ್' ಎಂಬ ಧಾತು. ವಿದ್ ಧಾತುವಿಗೆ ಇರುವುದು, ತಿಳಿಯುವುದು, ವಿಚಾರಮಾಡುವುದು ಎಂಬ ಅರ್ಥಗಳಿವೆ. ಅಂತೆಯೇ ವೇದವೆಂದರೆ ತಿಳಿಯುವುದು, ಜ್ಞಾನ ಎಂದರ್ಥ.

ಹಾಗಾದರೆ ಯಾವುದೆಲ್ಲ ವೇದ? ಈ ಪ್ರಶ್ನೆಗೆ ಉತ್ತರವನ್ನು ವೇದದಿಂದಲೇ ತಿಳಿಯಬಹುದು. ಕೃಷ್ಣ ಯಜುರ್ವೇದ  ಹೇಳುತ್ತದೆ:
               
         ವೇದೇನ ವೈ ದೇವಾ ಅಸುರಾಣಾಮ್ ವಿತ್ತಂ ವೇದ್ಯಮವಿಂದಂತ ತದ್ವೇದಸ್ಯ ವೇದತ್ವಮ್ 

ದೇವತೆಗಳು ಅಸುರರ ಸ್ಥಿತಿಗಳನ್ನು ವೇದಗಳಿಂದ ತಿಳಿದರು. ಆದ್ದರಿಂದ ಇದು ವೇದ. 

ಚತುರ್ವೇದಗಳಿಗೂ ಭಾಷ್ಯವನ್ನು ಬರೆದ ಸಾಯಣಾಚಾರ್ಯರು ವೇದದ ಲಕ್ಷಣವನ್ನು ಸ್ಪಷ್ಟವಾಗಿ ತಿಳಿಯುವುದು ಕಷ್ಟವೆಂದು ಅಭಿಪ್ರಾಯ ಪಡುತ್ತಾರೆ. ಅವರ ಪ್ರಕಾರ ವೇದವೆಂದರೆ ಮಂತ್ರ ಮತ್ತು ಬ್ರಾಹ್ಮಣಗಳ ಸಮುಚ್ಚಯ. 
      
        ತಚ್ಚೊದಕೇಷು ಮಂತ್ರಾಖ್ಯಾ। ಶೇಷೇ ಬ್ರಾಹ್ಮಣ ಶಬ್ದಃ।

ಯಜ್ಞಗಳಲ್ಲಿ ಉಪಯೋಗಿಸುವ ದೇವತಾ ಸ್ತೋತ್ರ ರೂಪಕವಾದ ವಾಕ್ಯಗಳು ಮಂತ್ರಗಳು. ಮಿಕ್ಕವೆಲ್ಲ ಬ್ರಾಹ್ಮಣಗಳು. 

ದಯಾನಂದ ಸರಸ್ವತಿಗಳು ಮನುಷ್ಯರು ಯಾವುದರಿಂದ ಎಲ್ಲ ವಿದ್ಯೆಗಳನ್ನು ತಿಳಿದುಕೊಳ್ಳುತ್ತಾರೋ ಅದನ್ನು ವೇದವೆಂದು ಕರೆಯಬಹುದು ಎಂದು ಹೇಳುತ್ತಾರೆ. 

ಒಟ್ಟಿನಲ್ಲಿ ಸಂಪ್ರದಾಯವಾಗಿ ನಮ್ಮ ಪರಂಪರೆಯಿಂದ ಬಂದ ಋಗ್, ಯಜಸ್ಸು, ಸಾಮ ಮತ್ತು ಅಥರ್ವಗಳ ಸಂಹಿತೆ, ಬ್ರಾಹ್ಮಣ, ಅರಣ್ಯಕ ಮತ್ತು ಉಪನಿಷತ್ತಿನ ಗ್ರಂಥ ರಾಶಿಯನ್ನು ವೇದಗಳೆಂದು ಪರಿಗಣಿಸಲಾಗುತ್ತದೆ.

೧. ೩. ವೇದ ಕಾಲದ ಸಾಮಾಜಿಕ ಜೀವನ

ವೇದ ಕಾಲದ ಸಾಮಾಜಿಕ ಜೀವನವನ್ನು ವೇದಗಳಿಂದಲೇ ತಿಳಿಯಬಹುದು. ಕೆಲವರು ವೇದಗಳನ್ನು ಐತಿಹಾಸಿಕ ಗ್ರಂಥಗಳೆಂದೂ ತಿಳಿಯುತ್ತಾರೆ. ವೇದಗಳೇ ತಿಳಿಸುವಂತೆ ಆ ಕಾಲದ ಸಾಮಾಜಿಕ ಜೀವನದ ಮುಖ್ಯಾಂಶಗಳು ಇಂತಿವೆ:
  1. ಋಗ್ವೇದ ಕಾಲದ ವೈದಿಕರು ಸಿಂಧೂ ಮತ್ತು ಅದರ ಉಪನದಿಗಳ ತೀರದಲ್ಲಿ ವಾಸಿಸುತ್ತಿದ್ದು ಕ್ರಮೇಣ ಗಂಗಾ ನದಿಯ ಕಡೆ ಹರಡಿದರು. ಗಂಗಾ ನದಿಯ ಹೆಸರು ಋಗ್ವೇದದ ಕೊನೆಯ ಮಂಡಲದಲ್ಲಿ ಒಂದು ಬಾರಿ ಮಾತ್ರ ಬಂದಿದೆ. ಸಿಂಧೂ ಮತ್ತು ಅದರ ಉಪನದಿಗಳ ಹೆಸರುಗಳು ಅನೇಕ ಬಾರಿ ಬಂದಿದೆ. ಅಂದರೆ ವೈದಿಕರು ಮೊದಲಿಗೆ ಇಂದಿನ ಪಂಜಾಬು ಮತ್ತು ಆಫ್ಗಾನಿಸ್ತಾನ ಪ್ರಾಂತ್ಯದಲ್ಲಿ ವಾಸಿಸುತ್ತಿದ್ದರು ಮತ್ತು ಕ್ರಮೇಣ ಗಂಗಾ ನದಿಯ ಕಡೆ ಹರಡಿದರು.
  2. ಮಂತ್ರಗಳಲ್ಲಿ ಕೋಟೆ, ಹಳ್ಳಿ, ಪಟ್ಟಣ, ಶತ್ರುಗಳಿಂದ ರಕ್ಷಣೆ ಮುಂತಾದ ವಿಷಯಗಳಿವೆ. ಶತೃವಿನಿಂದ ರಕ್ಷಿಸು ಎಂಬ ಮಂತ್ರಗಳು ಸಾಕಷ್ಟಿವೆ. ಇದರಿಂದ ಯುದ್ಧಗಳು ಸಾಮಾನ್ಯವಾಗಿದ್ದವೆಂದು ತೋರುತ್ತದೆ. 
  3. ವೇದ ಜೀವನ ಯಜ್ಞ ಜೀವನ. ಜನರು ಯಾಜ್ಞಿಕವಾದ ಕರ್ಮಗಳನ್ನು ನಿತ್ಯ ಮಾಡುತ್ತಿದ್ದರು. ಯಜ್ಞದ ಪ್ರತಿಯೊಂದು ಕರ್ಮಗಳಿಗೂ ಪ್ರತ್ಯೇಕ ಮಂತ್ರಗಳಿವೆ. 
  4. ಜನರ ಮುಖ್ಯ ಉದ್ಯೋಗಗಳು ಕೃಷಿ ಮತ್ತು ಪಶುಸಂಗೋಪನೆ. ಅನೇಕ ಮಂತ್ರಗಳಲ್ಲಿ ಗೋವು, ಕುರಿ, ಮೇಕೆ, ಕುದುರೆಗಳನ್ನು ಬೇಡುವ ಮಂತ್ರಗಳಿವೆ. ಅದರಲ್ಲಿಯೂ ಗೋವಿಗೆ ವಿಶೇಷ ಸ್ಥಾನವಿದೆ. 
  5. ಯವ, ಹುರಿದ ಧಾನ್ಯಗಳು, ಮೊಸರು, ಹಾಲು, ಮೊಸರು ಅಥವಾ ತುಪ್ಪದೊಡನೆ ಬೆರಸಿದ ಹಿಟ್ಟು ಇವುಗಳ ಪ್ರಸ್ತಾಪ ತುಂಬಾ ಬಂದಿದೆ. ಬಹುಶಃ ಹೋಮಾದಿಗಳಲ್ಲಿ ಪಶು ಖಂಡನವಿದ್ದಿರಬಹುದು. ಮಾಂಸಾಹಾರ ಮತ್ತು ಸೋಮಪಾನಗಳು ರೂಢಿಯಲ್ಲಿದ್ದವು. ಸುರಾ ಪಾನದ ಬಗ್ಗೆಯೂ ಒಂದೆರೆಡು ಕಡೆ ಉಲ್ಲೇಖವಿದೆ. 
  6. ವೇದಕಾಲದ ಜನರಿಗೆ ನೌಕಾಯಾನದ ಬಗ್ಗೆ ತಿಳಿದಿತ್ತು. ರಥಗಳ ತಯಾರಿ, ಬಟ್ಟೆ ನೇಯುವುದು, ಹಗ್ಗ ಹೊಸೆಯುವುದು, ಚರ್ಮದ ಪದಾರ್ಥಗಳನ್ನು ತಯಾರಿಸುವುದು ಇವು ಇತರ ಕಸುಬುಗಳು. ಅಶ್ವಾರೋಹಣ ಸರ್ವೇ ಸಾಮಾನ್ಯವಾಗಿದ್ದಿತು. ಕಳ್ಳರ ಕಾಟಗಳ ಬಗ್ಗೆಯೂ ಕೆಲವೆಡೆ  ಹೇಳಿದೆ.
  7. ಮನೆಗೆ ತಂದೆಯೇ ಯಜಮಾನ. ವಿವಾಹವು ಬಹಳ ಪವಿತ್ರವೆಂಬ ಭಾವನೆಯಿತ್ತು.  ಹೆಂಡತಿಗೆ ಮನೆಯಲ್ಲಿ ವಿಶೇಷ ಸ್ಥಾನವಿತ್ತು. ಮನೆಯವರ ಯೋಗಕ್ಷೇಮಗಳನ್ನು ನೋಡಿಕೊಳ್ಳುವ ಜವಾಬ್ದಾರಿ ಪತ್ನಿಯದು. ಹೋಮ ಹವನಗಳಲ್ಲಿ ಪತ್ನಿಗೆ ಪತಿಗೆ ಸಮನಾದ ಸ್ಥಾನವಿತ್ತು. ಪತಿ ಮನೆಯಲ್ಲಿಲ್ಲದಾಗ ಪತ್ನಿಯೊಬ್ಬಳೇ ಹೋಮ ಮಾಡಬಹುದಾಗಿತ್ತು. ಏಕಪತ್ನೀತ್ವವೇ ರೂಢಿಯಲ್ಲಿತ್ತು. ಕ್ಷತ್ರಿಯರಲ್ಲಿ ಬಹುಪತ್ನಿ ಪದ್ಧತಿಯಿತ್ತೆಂದು ತೋರುತ್ತದೆ. ಔರಸ ಪುತ್ರನಿಗೆ ಹೆಚ್ಚಿನ ಸ್ಥಾನವಿತ್ತು.
  8. ವಿವಾಹವು ಪವಿತ್ರವೆಂಬ ಭಾವನೆಯಿದ್ದಿದ್ದರಿಂದ ಪುನರ್ವಿವಿವಾಹವು ರೂಡಿಯಲ್ಲಿರಲಿಲ್ಲ. ಆದರೆ ವಿಧವೆಯು ತನ್ನ ಮೈದುನನನ್ನು ಗಂಡುಮಗುವಿಗಾಗಿ ವಿವಾಹವಾಗಬಹುದಾಗಿತ್ತು. ಅಥರ್ವವೇದದಲ್ಲಿ ಮಾತ್ರ ಸಹಗಮನವು ಬಹಳ ಹಿಂದೆ ರೂಢಿಯಲ್ಲಿತ್ತು ಎಂದು ಹೇಳಿದೆ. ಬೇರೆ ಕಡೆಯಲ್ಲೆಲ್ಲೂ ಸಹಗಮನದ ಪ್ರಸ್ತಾಪವಿಲ್ಲ. ಇದರಿಂದ ಸಹಗಮನವು ಕಡ್ಡಾಯವಾಗಿರಲಿಲ್ಲವೆಂದು ಊಹಿಸಬಹುದು. ವಿಧವೆಯರಿಗೆ ಆಸ್ತಿಯಲ್ಲಿ ಪಾಲಿತ್ತು. 
  9. ರಾಜರು ತಮ್ಮಲ್ಲಿ ಒಬ್ಬ ಪುರೋಹಿತರನ್ನು ಇಟ್ಟುಕೊಂಡಿರುತ್ತಿದ್ದರು. ಮನೆಯಲ್ಲಿ ನಡೆಯುವ ಎಲ್ಲ ಕರ್ಮಗಳೂ ಪುರೋಹಿತರ ಮೂಲಕವೇ ಮಾಡುತ್ತಿದ್ದರು. ಅವರಿಗೆ ಯಥೇಚ್ಛವಾಗಿ ದಾನಗಳನ್ನೂ ಮಾಡುತ್ತಿದ್ದರು.
  10. ವೇದಕಾಲದಲ್ಲಿ ವಿಗ್ರಹಗಳ ಪ್ರಸ್ತಾಪವೇ ಇಲ್ಲ. ವೇದಕಾಲದ ಜನರ ಪೂಜಾ ರೀತಿ ಯಜ್ಞರೂಪದ್ದು. ಇಂದ್ರ, ಮರುತ್ತುಗಳು, ಅಗ್ನಿ, ವಿಷ್ಣು, ರುದ್ರ, ಅಶ್ವಿನಿ ದೇವತೆಗಳು, ವೃಕ್ಷಗಳು, ಆದಿತ್ಯ, ಉಷೆ ಮುಂತಾದ ದೇವತೆಗಳ ಸ್ತೋತ್ರಗಳು ಬಹಳ ಇವೆ. ಆದರೆ ಇವರೆಲ್ಲರಿಗೂ ಅಗ್ನಿಯೇ ಹವಿರ್ದಾತ. ಮುಖ್ಯವಾಗಿ ವೇದ ಕಾಲದ ಪೂಜೆ ಯಜ್ಞ. 
  11. ವೇದಗಳಲ್ಲಿ ಜಾತಿ ವ್ಯವಸ್ಥೆಯ ಬಗ್ಗೆ ಅಷ್ಟಾಗಿ ಆಧಾರ ಸಿಕ್ಕುವುದಿಲ್ಲ. ಋಗ್ವೇದದ ೧೦ನೆಯ ಮಂಡಲದ ಪುರುಷ ಸೂಕ್ತದ,                                                                                                                                  'ಬ್ರಾಹ್ಮಣೋಸ್ಯ ಮುಖಮಾಸೀತ್ ಬಾಹೂ ರಾಜನ್ಯ ಕೃತಃ 
                             ಊರೂ ತದಸ್ಯ ಯದ್ವೈಷ್ಯ ಪದ್ಭ್ಯಾಮ್ ಶೂದ್ರೋ ಅಜಾಯಥಾ'
    (ವಿರಾಟ್ ಪುರುಷನ ಮುಖದಿಂದ ಬ್ರಾಹ್ಮಣನೂ, ಬಾಹುಗಳಿಂದ ಕ್ಷತ್ರಿಯನೂ, ಉದರದಿಂದ  ವೈಶ್ಯನೂ, ಕಾಲುಗಳಿಂದ ಶೂದ್ರನೂ ಜನಿಸಿದನು.)
            
    ಎಂಬ ಮಂತ್ರದಲ್ಲಿ ಮಾತ್ರ ಜಾತಿಯ ಹೆಸರುಗಳು ಬಂದಿದೆ. ಇದರಲ್ಲಿ ಕೆಲವು ತಕರಾರುಗಳಿವೆ. ಕೆಲವರು ಇದು ಋಗ್ವೇದದಲ್ಲಿ ಮೊದಲಿರಲಿಲ್ಲ. ನಂತರದಲ್ಲಿ ಈ ಮಂತ್ರವನ್ನು ಸೇರಿಸಿದರು ಎನ್ನುತ್ತಾರೆ. ಇನ್ನು ಕೆಲವರು ಆಯಾ ಗುಂಪಿನವರು ಆಯಾ ಅಂಗಗಳನ್ನು ಉಪಯೋಗಿಸಿ ಕೆಲಸ ಮಾಡುವವರು ಎಂದಿದ್ದಾರೆ. ಎಂದರೆ ವಿದ್ಯೆಯಿರುವವನು ಬ್ರಾಹ್ಮಣನಾದನು, ಬಾಹುಬಲದವನು ಕ್ಷತ್ರಿಯ, ಕೃಷಿಕ ವೈಶ್ಯ, ದೇಹಶ್ರಮದಿಂದ ಕೆಲಸಮಾಡುವವನು ಶೂದ್ರ ಎಂಬ ಅಭಿಪ್ರಾಯವಾಗುತ್ತದೆ. ಜಾತಿ ಸಂಬಂಧಿತವಾದ ಮಂತ್ರಗಳನ್ನು ಸೇರಿಸಬೇಕೆಂದಿದ್ದರೆ ಕೇವಲ ಒಂದೇ ಒಂದು ಮಂತ್ರವನ್ನು ಸೇರಿಸುತ್ತಿರಲಿಲ್ಲ. ಅಥರ್ವವೇದ ಮತ್ತು ಕೃಷ್ಣಯಜುರ್ವೇದಗಳಲ್ಲಿ ಕೆಲವೆಡೆ ಚಾತುರ್ವರ್ಣ್ಯಗಳ ಹೆಸರುಗಳು ಬಂದಿದೆ. ಆದರೆ ವೇದೋತ್ತರ ಕಾಲದಲ್ಲಿ ಪ್ರಚಾರದಲ್ಲಿದ್ದಂತೆ ಹುಟ್ಟಿನಿಂದ ಜಾತಿ ಎಂದು ವೇದದಲ್ಲೆಲ್ಲೂ ಹೇಳಿಲ್ಲ. ಆದ್ದರಿಂದ ಈ ವಾದಗಳಲ್ಲಿ ಎರಡನೆಯ ವಾದವನ್ನು ಒಪ್ಪಬಹುದು.
  12. ವೇದ ಕಾಲದ ಜನರು ಕವಿಗಳೂ, ವಾಗ್ಮಿಗಳೂ, ತತ್ವಶಾಸ್ತ್ರಜ್ಞರೂ, ಗಾಯಕರೂ ಆಗಿದ್ದರೆಂಬುದು ನಿರ್ವಿವಾದ. 

೨. ವೇದ ವಿಭಾಗಳು

ನಮ್ಮ ಪ್ರಾಚೀನ ಸಂಸ್ಕೃತ ಸಾಹಿತ್ಯವನ್ನು ಶ್ರುತಿ, ಸ್ಮೃತಿ, ಪುರಾಣಗಳೆಂಬ ಮೂರು ಭಾಗಗಳಾಗಿ ವಿಂಗಡಿಸಿದ್ದಾರೆ. ಕೇಳಿಸಿಕೊಳ್ಳುವುವು ಶ್ರುತಿಗಳು. ನೆನಪಿನಲ್ಲಿಟ್ಟುಕೊಳ್ಳುವುವು ಸ್ಮೃತಿಗಳು. ದೇವ ದೇವತೆಗಳ ಕಥೆಗಳು ಪುರಾಣಗಳು. ವೇದಗಳು ಶ್ರುತಿ ಭಾಗಕ್ಕೆ ಸೇರುತ್ತವೆ.

ಶ್ರುತಿಗಳಾದ ವೇದಗಳು ನಾಲ್ಕು: ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವವೇದ. ಪ್ರತಿಯೊಂದು ವೇದದಲ್ಲಿಯೂ ಸಂಹಿತಾ ಭಾಗ, ಬ್ರಾಹ್ಮಣ, ಅರಣ್ಯಕಗಳೆಂಬ ಉಪವಿಭಾಗಗಳಿವೆ. ಒಂದು ವೇದಕ್ಕೆ ಒಂದೇ ಸಂಹಿತೆಯಿರುತ್ತದೆ. ಆದರೆ ಬ್ರಾಹ್ಮಣ, ಅರಣ್ಯಕಗಳು ಒಂದಕ್ಕಿಂತ ಹೆಚ್ಚಾಗಿರಬಹುದು. ಋಗ್ವೇದ ಸಂಹಿತೆಯನ್ನು ಋಗ್ಸಂಹಿತೆಯೆಂದೂ, ಯಜುರ್ವೇದ ಸಂಹಿತೆಯನ್ನು ಯಜುಸ್ಸಂಹಿತೆಯೆಂದೂ, ಸಾಮವೇದದ್ದನ್ನು ಸಾಮಸಂಹಿತೆಯೆಂದೂ, ಅಥರ್ವವೇದದ್ದನ್ನು ಅಥರ್ವಸಂಹಿತೆಯೆಂದೂ ಕರೆಯುತ್ತಾರೆ.

೨.೧. ಸಂಹಿತೆಗಳು

ಸಂಹಿತೆಗಳು ವೇದಗಳ ಮುಖ್ಯಭಾಗಳು. ಸ್ಥೂಲವಾಗಿ ಸಂಹಿತೆಗಳನ್ನೇ ವೇದಗಳೆನ್ನಬಹುದು. ಬ್ರಾಹ್ಮಣಗಳು ಸಂಹಿತೆಗಳ ಪರಿಶಿಷ್ಟಗಳು(appendix). ಸಂಹಿತೆಯೆಂದರೆ ಬೇರೆಬೇರೆ ಋಷಿಗಳಿಗೆ ದ್ರಷ್ಟವಾದ ಮಂತ್ರಗಳನ್ನು ಒಂದು ಕ್ರಮದಲ್ಲಿ ಸೇರಿಸಿ ಒಂದು ಕಡೆ ಒಟ್ಟುಗೂಡಿಸಿರುವುದು ಎಂದರ್ಥ.

ಹಿಂದೆಯೇ ಹೇಳಿದಂತೆ ಸಂಹಿತೆಗಳು ನಾಲ್ಕು. ಇವು ವೇದದ ಮುಖ್ಯ ಆಶಯಗಳನ್ನು ತೋರಿಸಿಕೊಡುತ್ತವೆ. ಯಜ್ಞಗಳಲ್ಲಿ ಉಪಯೋಗಿಸುವ ಮಂತ್ರಗಳು ಸಂಹಿತಾಭಾಗದ ಮಂತ್ರಗಳು. ಇವು ಮುಖ್ಯವಾಗಿ ದೇವತಾರೂಪವಾಗಿರುತ್ತವೆ. ಪ್ರತಿಯೊಂದು ಮಂತ್ರಕ್ಕೂ ಋಷಿ ಮತ್ತು ದೇವತೆಗಳಿರುತ್ತಾರೆ.  ಸಂಹಿತಾ ಮಂತ್ರಗಳನ್ನು ಆಯಾ ದೇವತೆಗಳ ಸ್ತೋತ್ರಗಳಿಗೆ ತಕ್ಕಂತೆ ಒಟ್ಟಾಗಿ ಸೇರಿಸಿದ್ದಾರೆ ಮತ್ತು ಅಧ್ಯಯನದ ಅನುಕೂಲಕ್ಕಾಗಿ ಕ್ರಮವಾಗಿ ವಿಂಗಡಿಸಿದ್ದಾರೆ.

ವೇದ ಕಾಲದ ಧಾರ್ಮಿಕತೆ ಯಾಜ್ಞಿಕವಾದದ್ದು. ಸಂಹಿತೆಗಳ ಮಂತ್ರಗಳನ್ನು ಮುಖ್ಯವಾಗಿ ಈ ಯಜ್ಞಗಳಲ್ಲಿ ಉಪಯೋಗಿಸಲಾಗುತ್ತದೆ. ಯಾವ ಮಂತ್ರವನ್ನು ಯಾವ ಯಜ್ಞದಲ್ಲಿ ಉಪಯೋಗಿಸಬೇಕು ಎಂಬುದನ್ನು ಬ್ರಾಹ್ಮಣಗಳಿಂದ ಮತ್ತು ಸೂತ್ರ ಗ್ರಂಥಗಳಿಂದ ತಿಳಿಯಬೇಕು (ಸೂತ್ರಗ್ರಂಥಗಳು ಸ್ಮೃತಿಗಳು). ಪ್ರತಿಯೊಂದು ಯಜ್ಞದಲ್ಲಿಯೂ ಹೋತೃ, ಉದ್ಗಾತೃ, ಅಧ್ವರ್ಯು ಮತ್ತು ಬ್ರಹ್ಮರೆಂಬ ನಾಲ್ಕು ಜನ ಮುಖ್ಯ ಋತ್ವಿಕ್ಕುಗಳಿರುತ್ತಾರೆ. ಋಗ್ವೇದದ ಋತ್ವಿಕ್ಕನ್ನು ಹೋತೃವೆಂದೂ, ಸಾಮವೇದದ ಋತ್ವಿಕ್ಕನ್ನು ಉದ್ಗಾತೃವೆಂದೂ, ಯಜುರ್ವೇದದ ಋತ್ವಿಕ್ಕನ್ನು ಅಧ್ವರ್ಯುವೆಂದೂ ಮತ್ತು ನಾಲ್ಕೂ  ವೇದಗಳನ್ನು ತಿಳಿದ ಋತ್ವಿಕ್ಕನ್ನು ಬ್ರಹ್ಮನೆಂದೂ ಕರೆಯುತ್ತಾರೆ. ಹೋತೃ ಋಗ್ವೇದ ಸಂಹಿತಾ ಮಂತ್ರಗಳಿಂದ ದೇವತೆಗಳನ್ನು ಆಹ್ವಾನಿಸುತ್ತಾನೆ. ಆವಾಹನ ಮಾಡುವ ಮಂತ್ರಗಳಿಗೆ ಪುರೋನುವಾಕ್ಯ ಎಂದು ಹೆಸರು. ಆವಾಹನೆಯ ನಂತರ ಯಜ್ಞದಲ್ಲಿ ಹೋಮ ಮಾಡಲು ಋಗ್ವೇದ ಸಂಹಿತೆಯವೇ ಆದ ಮಂತ್ರಗಳನ್ನು ಪಠಿಸುತ್ತಾನೆ. ಇವಕ್ಕೆ ಯಜ್ಯಾ ಮಂತ್ರಗಳೆಂದು ಹೆಸರು. ಹೋತೃವು ದೇವತಾ ಮಂತ್ರಗಳನ್ನು ಮಾತ್ರ ಪಠಿಸುತ್ತಾನೆ. ತಾನೇ ಹೋಗಿ ಯಜ್ಞ ಮಾಡುವುದಿಲ್ಲ. ಉದ್ಗಾತೃ ದೇವತೆಗಳ ತೃಪ್ತಿಗಾಗಿ ಸಾಮಗಾನವನ್ನು ಮಾಡುತ್ತಾನೆ. ಇವು ಸಾಮ ಸಂಹಿತೆಯ ಮಂತ್ರಗಳು. ಅಧ್ವರ್ಯುವು ಯಜುಸ್ಸಂಹಿತೆಯ ಮಂತ್ರಗಳಿಂದ ಹೋಮ ಮಾಡುತ್ತಾನೆ. ಬ್ರಹ್ಮ ಯಜ್ಞದ ಒಟ್ಟಾರೆ ಮೇಲ್ವಿಚಾರಕನಾಗಿರುತ್ತಾನೆ. ಬ್ರಹ್ಮನಾದ ಋತ್ವಿಜನಿಗೆ ನಾಲ್ಕೂ ವೇದಗಳ ಮಂತ್ರಗಳೂ ತಿಳಿದಿರಬೇಕು. ಹೀಗೆ ಸಂಹಿತಾ ಮಂತ್ರಗಳ ವಿನಿಯೋಗ.

೨.೨. ಬ್ರಾಹ್ಮಣಗಳು

ಬ್ರಾಹ್ಮಣಗಳು ಸಂಹಿತಾಭಾಗದ ಪರಿಶಿಷ್ಟಗಳು. ಸಂಹಿತಾ ಮಂತ್ರಗಳನ್ನು ಅರ್ಥಮಾಡಿಕೊಳ್ಳಲು ಕೆಲವು ಬಾರಿ ಕಷ್ಟವಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಬ್ರಾಹ್ಮಣಗಳು ಸಹಾಯವಾಗುತ್ತವೆ. ಇದೇ ಅಲ್ಲದೆ, ಬ್ರಾಹ್ಮಣಗಳಲ್ಲಿ ಸಂಹಿತಾ ಭಾಗದಲ್ಲಿರುವ ಕೆಲವು ಮಂತ್ರಗಳಿಗೆ ವಿನಿಯೋಗಗಳೂ, ಸಂಹಿತಾ ಭಾಗದಲ್ಲಿ ಹೇಳಲ್ಪಟ್ಟಿರುವ ಯಜ್ಞಗಳ ವಿಧಾನವೂ, ಸಂಹಿತಾ ಭಾಗದ ದೇವತೆಗಳ ಕೆಲವು ಉಪಕಥೆಗಳೂ ಇರುತ್ತವೆ. ಯಜ್ಞ ಕರ್ಮಗಳನ್ನು ತಿಳಿಸುವ ಗ್ರಂಥಗಳನ್ನು ಬ್ರಾಹ್ಮಣಗಳು ಎನ್ನಬಹುದು. ಬ್ರಾಹ್ಮಣಗಳು ಸಂಹಿತಾ ಭಾಗಗಳ ನಂತರ ರಚಿಸಲ್ಪಟ್ಟುವು. ಆದ್ದರಿಂದ ಇವುಗಳ ಭಾಷೆ ಸಂಹಿತಾ ಭಾಷೆಗಿಂತ ಸ್ವಲ್ಪ ಭಿನ್ನ.

ಒಂದು ಸಂಹಿತೆಗೆ ಒಂದಕ್ಕಿಂತ ಹೆಚ್ಚಾಗಿ ಬ್ರಾಹ್ಮಣಗಳಿರಬಹುದು. ವೇದಗಳು ಗುರುಮುಖೇನ ಕಲಿಯಬೇಕಾದ್ದರಿಂದ, ಮುಖ್ಯ ಗುರುಗಳ ಪಾಠಗಳು ಶಾಖೆಗಳಾಗಿ ಪ್ರಸಿದ್ಧವಾದವು. ಸಂಹಿತೆಯ ಕೆಲವು ಕ್ಲಿಷ್ಟ ಮಂತ್ರಗಳ ಅರ್ಥಗಳು ವಿವಿಧ ಶಾಖೆಗಳಲ್ಲಿ ಸ್ವಲ್ಪ ಭಿನ್ನವಾದವು. ಯಜ್ಞಗಳ ರೀತಿಯೂ ಬೇರೆಯಾಯಿತು. ಅಂತೆಯೇ ಪ್ರಯೊಂದು ಶಾಖೆಗೂ ಒಂದೊಂದು ಬ್ರಾಹ್ಮಣವಾಯಿತು. ಉದಾಹರಣೆಗೆ, ಋಗ್ವೇದದ ಶಾಕಾಲ ಶಾಖೆಗೆ (ಶಾಕಲ್ಯ ಋಷಿ ಪರಂಪರೆ) ಐತರೇಯ ಬ್ರಾಹ್ಮಣವಿದೆ. ಇಕ್ಷ್ವಾಕು ಶಾಖೆಗೆ ಕೌಷೀತಕಿ ಬ್ರಾಹ್ಮಣವಿದೆ.

೨. ೩. ಅರಣ್ಯಕಗಳು 

ಋಷಿಗಳು ತಮ್ಮ ಶಿಷ್ಯರಿಗೆ ಇವನ್ನು ಅರಣ್ಯದಲ್ಲಿ ಬೋಧಿಸಿದ್ದರಿಂದ ಇವುಗಳಿಗೆ ಅರಣ್ಯಕಗಳೆಂದು ಹೆಸರು. ಅರಣ್ಯಕಗಳೂ ಸಂಹಿತೆಗಳಿಗೆ ಪರಿಶಿಷ್ಟಗಳು. ಬ್ರಾಹ್ಮಣಗಳಂತೆ ಅರಣ್ಯಕಗಳಲ್ಲಿಯೂ ಯಜ್ಞ ಕ್ರಮಗಳನ್ನು ವಿವರಿಸಲಾಗುತ್ತದೆ. ಆದರೆ ಅರಣ್ಯಕಗಳಲ್ಲಿ ತತ್ವಶಾಸ್ತ್ರಕ್ಕೆ ಸಂಬಂಧಿಸಿದ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತವೆ. ಅರಣ್ಯಕಗಳು ಕೆಲವೊಮ್ಮೆ ಬ್ರಾಹ್ಮಣ ಗ್ರಂಥಗಳ ಕೊನೆಯಲ್ಲಿ ಬರುತ್ತವೆ. ಕೆಲವೊಮ್ಮೆ ಪ್ರತ್ಯೇಕವಾಗಿಯೂ ಇರುತ್ತದೆ. ಬ್ರಾಹ್ಮಣ ಮತ್ತು ಅರಣ್ಯಕಗಳು ಸಂಹಿತೆಯ ಪರಿಶಿಷ್ಟಗಳಾದರು ಹಲವು ಕಡೆ ಇವುಗಳಲ್ಲಿ ಸ್ವತಂತ್ರ ವಿಷಯಗಳನ್ನೂ ಹೇಳಲ್ಪಟ್ಟಿದೆ.

ಅರಣ್ಯಕಗಳು ತತ್ವ ಪ್ರಧಾನವಾದದ್ದರಿಂದ ಅವನ್ನು ಎಲ್ಲರಿಗೂ ಬೋಧಿಸುತ್ತಿರಲಿಲ್ಲ. ಮುಖ್ಯವಾಗಿ ವಾನಪ್ರಸ್ಥರಿಗೆ ಮತ್ತು ತಮ್ಮ ಶಿಷ್ಯರಿಗೆ ಋಷಿಗಳು ಅರಣ್ಯಗಳಲ್ಲಿ ಅರಣ್ಯಕಗಳನ್ನು ಬೋಧಿಸುತ್ತಿದ್ದರು. ಅರಣ್ಯಕಗಳು ಬಾಹ್ಮಣಗಳ ನಂತರ ರಚಿಸಲ್ಪಟ್ಟವು. ವೇದಾಂತಗಳೆಂದು ಪರಿಗಣಿಸಲ್ಪಡುವ ಉಪನಿಷತ್ತುಗಳಿಗೂ ಮತ್ತು ಬ್ರಾಹ್ಮಣಗಳಿಗೂ ಅರಣ್ಯಕಗಳು ಕೊಂಡಿಯಂತೆ ಇವೆ. ಗೃಹಸ್ಥನ ಕರ್ಮಗಳನ್ನು ಬ್ರಾಹ್ಮಣಗಳು ತಿಳಿಸಿದರೆ, ಅರಣ್ಯಕಗಳು ಆ ಕರ್ಮಗಳ ಗೂಡಾರ್ಥವನ್ನು ಚಿಂತಿಸುತ್ತದೆ. ಅರಣ್ಯಕಗಳ ಕೊನೆಯ ಭಾಗವೇ ಉಪನಿಷತ್ತುಗಳೆಂದು ಅನೇಕ ವಿದ್ವಾಂಸರು ತಿಳಿಯುತ್ತಾರೆ. ಬ್ರಾಹ್ಮಣಗಳಂತೆಯೇ ಪ್ರತಿಯೊಂದು ಶಾಖೆಗೂ ಅದರದೇ ಆದ ಅರಣ್ಯಕಗಳಿವೆ. ಉದಾಹರಣೆಗೆ ಕೃಷ್ಣಯಜುರ್ವೇದದ ತೈತ್ತಿರೀಯ (ತಿತ್ತಿರಿ ಋಷಿ ಮತ್ತು ಅವರ ಶಿಷ್ಯರು) ಶಾಖೆಗೆ ತೈತ್ತಿರೀಯ ಅರಣ್ಯಕವಿದೆ. ಕಾಠ ಶಾಖೆಗೆ ಕಾಠಕ ಅರಣ್ಯಕವಿದೆ.

೨.೪. ಉಪನಿಷತ್ತುಗಳು 

ಉಪನಿಷತ್ತು 'ಉಪ' ಮತ್ತು 'ನಿಷತ್' ಎಂಬ ಎರೆಡು ಪದಗಳಿಂದ ಮಾಡಲ್ಪಟ್ಟಿದೆ. ಉಪ ಎಂದರೆ ಹತ್ತಿರ, ನಿಷತ್ ಎಂದರೆ ಕೂರುವುದು ಎಂದರ್ಥ. ಶಿಷ್ಯರು ಗುರುಗಳ ಹತ್ತಿರದಲ್ಲಿ ಕೂತು ಪಡೆದ ಜ್ಞಾನವೇ ಉಪನಿಷತ್ತುಗಳು. ವೇದದ ಕಟ್ಟಕಡೆಯಲ್ಲಿ ರಚಿಸಲ್ಪಟ್ಟವು ಉಪನಿಷತ್ತುಗಳು. ಇವುಗಳನ್ನು ವೇದಾಂತ - ವೇದದ ಕೊನೆ - ಎಂದೇ ಪರಿಗಣಿಸುತ್ತಾರೆ. ಉಪನಿಷತ್ತುಗಳು ತತ್ವರಾಶಿ. ಬಹು ಗಹನವಾದ ತತ್ವ ವಿಚಾರಗಳನ್ನು ಉಪನಿಷತ್ತುಗಳಲ್ಲಿ ವಿವರಿಸಲಾಗಿದೆ. ಉಪನಿಷತ್ತುಗಳಿಗೆ ಯಜ್ಞಗಳಲ್ಲಿ ವಿನಿಯೋಗವಿಲ್ಲ. ಸಾಮಾನ್ಯವಾಗಿ ನಾವು ನಮ್ಮ ನಿತ್ಯ ಕರ್ಮಗಳಲ್ಲಿಯೂ ಉಪನಿಷತ್ತುಗಳನ್ನು ಉಪಯೋಗಿಸುವುದಿಲ್ಲ.  ಉಪನಿಷತ್ತುಗಳ ವಿಷಯ ಜೀವವೆಂದರೇನು, ಜೀವ-ಬ್ರಹ್ಮರ ಸಂಬಂಧಗಳು, ಆತ್ಮ,  ಈ ವಿಚಾರಗಳಲ್ಲಿ ಹೊರಡುತ್ತವೆ. ನಮ್ಮ ಇಂದಿನ ಭಾರತದ ತತ್ವ ಉಪನಿಷತ್ತತ್ತ್ವ - ಅಥವಾ ವೇದಾಂತ ತತ್ವ. ಭಾರತದ ತತ್ವದ ಗೂಡೆಂದು ಪರಿಗಣಿಸಲಾದ ಪ್ರಸ್ಥಾನತ್ರಯಗಳೆಂಬ ಮೂರು ಗ್ರಂಥಗಳಲ್ಲಿ ಉಪನಿಷತ್ತುಗಳು ಮೊದಲನೆಯವು (ಬಾದರಾಯಣ ಬ್ರಹ್ಮ ಸೂತ್ರಗಳು ಮತ್ತು ಭಗದ್ಗೀತೆ ಇನ್ನೆರೆಡು).

ಉಪನಿಷತ್ತುಗಳು ಸಾಮಾನ್ಯವಾಗಿ ಅರಣ್ಯಕಗಳಲ್ಲಿ ಬರುತ್ತವೆ. ಆದರೆ ಅವು ಸಂಹಿತೆ ಅಥವಾ ಬ್ರಾಹ್ಮಣ ಭಾಗಗಳಲ್ಲೂ ಬರಬಹುದು. ಉದಾಹರಣೆಗೆ ಬೃಹದಾರಣ್ಯಕ ಉಪನಿಷತ್ತು ಶುಕ್ಲ ಯಜುರ್ವೇದದ ಬೃಹದಾರಣ್ಯಕದಲ್ಲಿ ಬರುತ್ತದೆ. ಈಶಾವಾಸ್ಯ ಉಪನಿಷತ್ತು ಶುಕ್ಲ ಯಜುರ್ವೇದ ಸಂಹಿತೆಯಲ್ಲಿಯೇ ಬರುತ್ತದೆ.

ಒಟ್ಟು ೧೦೮ ಉಪನಿಷತ್ತುಗಳಿವೆ ಎಂದು ಪ್ರತೀತಿಯಿದೆ. ಆದರೆ ಅವುಗಳಲ್ಲಿ ಹತ್ತನ್ನು ಮುಖ್ಯ ಉಪನಿಷತ್ತುಗಳೆಂದು ಪರಿಗಣಿಸಲಾಗಿದೆ. ಇವು ವೇದಾಂತ ತತ್ವವನ್ನು ಪ್ರತಿಪಾದನೆ ಮಾಡುವ ಉಪನಿಷತ್ತುಗಳು. ಇವುಗಳಿಗೆ ಆಚಾರ್ಯತ್ರಯರು ಭಾಷ್ಯಗಳನ್ನು ಬರೆದಿದ್ದಾರೆ. ಇತರ ಉಪನಿಷತ್ತುಗಳು ಯೋಗ, ಶಿವ, ವಿಷ್ಣು, ದೇವಿ, ಗಣಪತಿ, ಸನ್ಯಾಸ ಮುಂತಾದ ವಿಷಯಗಳನ್ನು ಕುರಿತು ಹೇಳುತ್ತವೆ.

೧೦ ಮುಖ್ಯ ಉಪನಿಷತ್ತುಗಳು ಹೀಗಿವೆ: ಐತರೇಯ (ಋಗ್ವೇದ), ಕೇನ, ಛಾಂದೋಗ್ಯ (ಸಾಮವೇದ), ಈಶ, ಕಠ, ತೈತ್ತಿರೀಯ, ಬೃಹದಾರಣ್ಯಕ (ಯಜುರ್ವೇದ), ಪ್ರಶ್ನ, ಮುಂಡಕ, ಮಾಂಡೂಕ್ಯ (ಅಥರ್ವವೇದ). 

ನಾವು ಇಂದು ಈ ಸಂಹಿತಾ, ಬ್ರಾಹ್ಮಣ ಮತ್ತು ಅರಣ್ಯಕ ಮಂತ್ರಗಳನ್ನು ಸಂಧ್ಯಾವಂದನೆ, ದೇವರಪೂಜೆ ಮುಂತಾದ ನಿತ್ಯ ಕರ್ಮಗಳಲ್ಲಿಯೂ, ಮದುವೆ, ಉಪನಯನ, ಶ್ರಾದ್ಧ ಮುಂತಾದ ನೈಮಿತ್ತಿಕ ಕರ್ಮಗಳಲ್ಲಿಯೂ ಉಪಯೋಗಿಸುತ್ತೇವೆ. ಇಂದು ವೇದ ಕಾಲದ ಯಜ್ಞಗಳಿಗೆ ಅಷ್ಟಾಗಿ ಪ್ರಾಶಸ್ತ್ಯವಿಲ್ಲದ ಕಾರಣ ಪೂರ್ವಿಕರು ವೇದಮಂತ್ರಗಳಿಗೆ ಈ ಕರ್ಮಗಳಲ್ಲಿ ವಿನಿಯೋಗವನ್ನು ಹೇಳಿದ್ದಾರೆ. ಕೆಲವು ಬಾರಿ ಮಂತ್ರಕ್ಕೂ ಕರ್ಮಕ್ಕೂ ನೇರವಾಗಿ ಸಂಬಂಧವಿರುವುದಿಲ್ಲ. ಉದಾಹರಣೆಗೆ ನವಗ್ರಹಾರಾಧನೆಯ ಕಾಲದಲ್ಲಿ ಉಪಯೋಗಿಸುವ ನವಗ್ರಹಾವಾಹನೆಯ ಮಂತ್ರಗಳು ಋಗ್, ಯಜುಸ್ಸಂಹಿತೆಗಳಲ್ಲಿ ಬರುತ್ತವೆ. ಆದರೆ ವೇದಗಳಲ್ಲಿ ಎಲ್ಲಿಯೂ ನವಗ್ರಹಗಳ ಪ್ರಸ್ತಾಪವೇ ಇರುವುದಿಲ್ಲ. ಕೇತುಗ್ರಹಾವಾಹನೆಯ, "ಕೇತುಂ ಕೃಣ್ವನ್ನಕೇತವೇ" ಎಂಬ ಮಂತ್ರ ಋಗ್ಸಂಹಿತೆಯದ್ದು. ಇಂದ್ರ ದೇವತೆಯನ್ನು ಕುರಿತಾದದ್ದು. ಇಲ್ಲಿ ಕೇತು ಎಂದರೆ ಪ್ರಜ್ಞೆ ಎಂದರ್ಥ. ಅಂತೆಯೇ ನವಗ್ರಹವಾಹನೆಯ ಇತರ ಮಂತ್ರಗಳೂ ವಿವಿಧ ದೇವತೆಗಳನ್ನುದ್ದೇಶಿಸಿರುವಂತಹವು. ದುರ್ಗಾ ಸೂಕ್ತದ ಅನೇಕ ಮಂತ್ರಗಳು ಅಗ್ನಿದೇವತಾ ಮಂತ್ರಗಳು. ವೇದಮಂತ್ರಗಳ ಉಪಯೋಗ ನಿಲ್ಲದಿರಲಿ ಎಂದು ಹೀಗೆ ವಿಧಿಸಿರಬಹುದು.

೩. ವೇದ ಶಾಖೆಗಳು 

ವೇದಗಳಲ್ಲಿ ಸಂಹಿತಾ ಭಾಗವೇ ಮುಖ್ಯವಾದ್ದರಿಂದ, ಇಲ್ಲಿಂದ ಸುಲಭವಾಗಿ ಅರ್ಥ ಮಾಡಿಕೊಳ್ಳಲು ವೇದ ಸಂಹಿತೆಗಳನ್ನೇ ವೇದಗಳೆಂದು ಕರೆಯಲಾಗಿದೆ. ಬ್ರಾಹ್ಮಣ ಮತ್ತು ಅರಣ್ಯಕಗಳನ್ನು ಸಂದರ್ಭಾನುಸಾರ ಆಯಾ ಹೆಸರಿನಿಂದ ನಿರ್ದೇಶಿಸಲಾಗಿದೆ.

ವೇದಗಳು ನಾಲ್ಕು ಎಂಬುದು ನಮಗೆ ತಿಳಿದ ವಿಷಯ. ಆದರೆ ಇವುಗಳ ವಿಭಾಗ ಹೇಗಾಯಿತು? - ಎಂಬುದು ಮುಖ್ಯ ಪ್ರಶ್ನೆ. ಮೊದಲಿಗೆ ವೇದಗಳು ಅಪಾರವಾದ ಒಂದೇ ಒಂದು ಗ್ರಂಥರಾಶಿಯಾಗಿತ್ತು. ವೇದ ಸಾಹಿತ್ಯ ಬೆಳದಂದಂತೆಲ್ಲ ಎಲ್ಲರೂ ಅದನ್ನು ಸಂಪೂರ್ಣವಾಗಿ ಅಧ್ಯಯನ ಮಾಡುವುದು ಕಷ್ಟಸಾಧ್ಯವೆಂದು ಅಧ್ಯಯನದ ಅನುಕೂಲಕ್ಕಾಗಿ ವೇದವ್ಯಾಸರು ವೇದ ಗ್ರಂಥವನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಿದರು. ಋಗ್, ಯಜಸ್ಸು, ಸಾಮ ಮತ್ತು ಅಥರ್ವ ಎಂಬ ಆ ನಾಲ್ಕು ಭಾಗಗಳನ್ನು ಕ್ರಮವಾಗಿ ಪೈಲ, ವೈಶಂಪಾಯನ, ಜೈಮಿನಿ ಮತ್ತು ಸುಮಂತ ಎಂಬ ಶಿಷ್ಯರಿಗೆ ಬೋಧಿಸಿದರು. ವೇದಗಳು ಈ ಶಿಷ್ಯರ ಮೂಲಕ ಹರಡಿತು. ಗುರುಗಳು ತಮ್ಮ ಶಿಷ್ಯರಿಗೆ ವೇದಪಾಠವನ್ನು ಹೇಳಿಕೊಡುವಾಗ ಅಲ್ಪ-ಸ್ವಲ್ಪ ವ್ಯತ್ಯಾಸಗಳೂ ಆದವು. ಆದರೆ ಈ ವ್ಯತ್ಯಾಸಗಳು ಸ್ವರ, ಮಂತ್ರ ಕ್ರಮದಲ್ಲಿ ಮಾತ್ರ - ಮಂತ್ರ ಸ್ವರೂಪದಲ್ಲಲ್ಲ. ಈ ರೀತಿ ಬೋಧನಾರೂಪದಲ್ಲಾದ - ಅಂದರೆ ಪಾಠರೂಪದಲ್ಲಾದ - ವ್ಯತ್ಯಾಸದಿಂದ ಶಾಖೆಗಳ ಉಗಮವಾಯಿತು. 

ಪ್ರತಿಯೊಂದು ವೇದಕ್ಕೂ ಅನೇಕ ಶಾಖೆಗಳಿವೆ. ಅವೆಲ್ಲ ಇಂದು ಪ್ರಚಾರದಲ್ಲಿಲ್ಲ. ಒಂದು ವೇದಕ್ಕೆ ಒಂದೋ ಎರೆಡೋ ಶಾಖೆಗಳು ಚಾಲ್ತಿಯಲ್ಲಿವೆ. ಕೆಲವು ಶಾಖೆಗಳು ಉತ್ತರ ಭಾರತದಲ್ಲಿದ್ದರೆ ಕೆಲವು ದಕ್ಷಿಣ ಭಾರತದಲ್ಲಿವೆ. ವೇದಗಳ ಮುಖ್ಯ ಶಾಖೆಗಳ ವಿವರ ಇಂತಿದೆ:

ಋಗ್ವೇದ:  ಋಗ್ವೇದಕ್ಕೆ ೨೧ ಶಾಖೆಗಳಿವೆಯೆಂದು ಹೇಳುತ್ತಾರೆ. ಇವುಗಳಲ್ಲಿ ಶಾಕಲ, ಬಾಷ್ಕಲ, ಮತ್ತು ಆಶ್ವೀಲಾಯನ ಶಾಖೆಗಳ ಪ್ರತಿಗಳು ದೊರೆತಿವೆ. ಆಶ್ವೀಲಾಯನ ಶಾಖೆಯ ಸೂತ್ರಗ್ರಂಥಗಳು (ಸ್ಮೃತಿಗಳು - ಇದರ ಬಗ್ಗೆ ಮುಂದೆ ತಿಳಿಸಲಾಗುತ್ತದೆ) ಪ್ರಸಿದ್ಧಿಯಾಗಿವೆ (ಅನೇಕ ಋಗ್ವೇದಿಗಳು - ಅದರಲ್ಲೂ ದಕ್ಷಿಣ ಭಾರತದವರು - ಆಶ್ವೀಲಾಯನ ಶಾಖೆಯವರು. ಅವರು ತಮ್ಮ ಪ್ರವರಗಳಲ್ಲಿ 'ಆಶ್ವೀಲಾಯನ ಸೂತ್ರಃ' ಎಂದೇ ಹೇಳಿಕೊಳ್ಳುತ್ತಾರೆ).   

ಶುಕ್ಲಯಜುರ್ವೇದ: ಶುಕ್ಲ ಯಜುರ್ವೇದಕ್ಕೆ ೧೫ ಶಾಖೆಗಳಿವೆ. ಅವುಗಳಲ್ಲಿ ಮಾಧ್ಯಂದಿನ ಮತ್ತು ಕಾಣ್ವವೆಂಬ ಎರಡು ಶಾಖೆಗಳು ಮಾತ್ರ ಪ್ರಸಿದ್ಧಿಯಾದವು. ಮಾಧ್ಯಂದಿನ ಶಾಖೆ ಉತ್ತರ ಭಾರದಲ್ಲಿಯೂ, ಕಾಣ್ವ ಶಾಖೆ ದಕ್ಷಿಣ ಭಾರತದಲ್ಲಿಯೂ ಚಾಲ್ತಿಯಲ್ಲಿದೆ.

ಕೃಷ್ಣಯಜುರ್ವೇದ: ಕೃಷ್ಣ ಯಜುರ್ವೇದಕ್ಕೆ ದೊರೆತಿರುವ ಶಾಖೆಗಳು ೧೬. ಇವುಗಳಲ್ಲಿ ತೈತ್ತಿರೀಯ, ಬೋಧಾಯನ, ಆಪಸ್ಥಂಬ, ಕಾಠಕ ಎಂಬುವು ಪ್ರಸಿದ್ಧ. ದಕ್ಷಿಣ ಭಾರತದಲ್ಲಿ ತೈತ್ತಿರೀಯ ಶಾಖೆ ಚಾಲ್ತಿಯಲ್ಲಿದೆ. ತಿತ್ತಿರಿ ಮಹರ್ಷಿಗಳು ವ್ಯಾಸರ ನೇರ ಶಿಷ್ಯರಾದ ವೈಶಂಪಾಯನರ ಸಮೀಪ ಬಂಧುಗಳು ಎಂದು ಕೆಲವು ಕಡೆ ಹೇಳಿದೆ. ವೇದ ಭಾಷ್ಯ ಬರೆದ ಸಾಯಣರು ಬೋಧಾಯನ ಶಾಖೆಯವರು. ಆಪಸ್ಥಂಬ ಶಾಖೆಯ ಆಪಸ್ಥಂಬ ಸೂತ್ರ ಪ್ರಸಿದ್ಧವಾಗಿದೆ. 

ಸಾಮವೇದದ: ಸಾಮವೇದಕ್ಕೆ ೧೦೦೦ ಶಾಖೆಗಳಿವೆ. ಆದರೆ ಅವುಗಳಲ್ಲಿ ಕೌತುಮವೆಂಬ ಒಂದು ಶಾಖೆ ಮಾತ್ರ ಪ್ರಸಿದ್ಧ. 

ಅಥರ್ವವೇದ: ಅಥರ್ವ ವೇದಕ್ಕೆ ೯ ಶಾಖೆಗಳಿವೆ. ಅವುಗಳಲ್ಲಿ ಶೌನಕ ಮತ್ತು ಪಿಪ್ಪಲಾದ ಶಾಖೆಗಳು ಪ್ರಸಿದ್ಧ. 

೪. ಚತುರ್ವೇದಗಳು 

ವೇದಗಳು ನಾಲ್ಕು: ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವವೇದ. ಆಯಾ ವೇದಗಳಲ್ಲಿ ಬರುವ ಮಂತ್ರ ಲಕ್ಷಣಗಳಿಂದ ಇವನ್ನು ನಾಲ್ಕು ವಿಭಾಗಗಳಾಗಿ ಮಾಡಿದ್ದಾರೆ. ಋಗ್, ಯಜುಸ್ಸು ಮತ್ತು ಸಾಮವೇದಗಳಿಗಿಂತ ಅಥರ್ವವೇದವು ವಿಷಯದಲ್ಲಿ ಸ್ವಲ್ಪ ಭಿನ್ನವಾಗಿದೆ.

ಋಗ್ವೇದ ಮಂತ್ರಗಳು ಛಂದೋಬದ್ದವಾದವು - ಕವಿತೆಗಳೆಂದೂ ಹೇಳಬಹುದು. ಇವು ಮುಖ್ಯವಾಗಿ ದೇವತಾ ಸ್ತೋತ್ರರೂಪವಾದುವು. ಯಜುರ್ವೇದ ಗದ್ಯರೂಪವಾದುದು. ಯಜುರ್ವೇದದಲ್ಲಿ ಸ್ತೋತ್ರಗಳ ಜೊತೆಗೆ ಯಜ್ಞಗಳು ಮತ್ತು ಅವುಗಳಲ್ಲಿ ಉಪಯೋಗಿಸುವ ಮಂತ್ರಗಳಿವೆ. ಸಾಮವೇದದಲ್ಲಿ ಗಾನಕ್ಕೆ ಯೋಗ್ಯವಾದ ಮಂತ್ರಗಳಿವೆ. ಅಥರ್ವವೇದ ವಿಷಯದಲ್ಲಿ ಬಹಳ ವಿಶಾಲವಾದುದು. ಅದರಲ್ಲಿ ತತ್ವ, ಯಜ್ಞ, ರೋಗ ರುಜಿನಗಳು, ಕರ್ಮ ವಿಧಾನಗಳು, ಮಂತ್ರ-ತಂತ್ರಗಳು ಮುಂತಾಗಿ ಅನೇಕ ವಿಷಯಗಳ ಕುರಿತಾಗಿ ಚರ್ಚಿಸಲಾಗಿದೆ.

ಅನೇಕ ಬಾರಿ ಒಂದು ವೇದದಲ್ಲಿ ಬರುವ ಮಂತ್ರಗಳು ಇನ್ನೊಂದು ವೇದದಲ್ಲಿ ಪುನರಾವರ್ತಿತವಾಗಿವೆ. ಒಂದು ವೇದದ ಸಂಹಿತೆಯಲ್ಲಿ ಬರುವ ಮಂತ್ರಗಳು ಇನ್ನೊಂದು ವೇದದ ಬ್ರಾಹ್ಮಣ  ಅಥವಾ ಅರಣ್ಯಕದಲ್ಲಿ ಬರಬಹುದು. ಸಾಮವೇದದಲ್ಲಿ ೭೫ ಮಂತ್ರಗಳನ್ನು ಹೊರತುಪಡಿಸಿ ಇನ್ನುಳಿದ ಮಂತ್ರಗಳು ಋಗ್ವೇದ ಮಂತ್ರಗಳು. ಅಥರ್ವವೇದದ ಸುಮಾರು ಆರನೇ ಒಂದರಷ್ಟು ಮಂತ್ರಗಳು ಋಗ್ವೇದದವು. ಉದಾಹರಣೆಗೆ, ಋಗ್ವೇದದ ಪುರುಷಸೂಕ್ತದ ಅನೇಕ ಮಂತ್ರಗಳು ತೈತ್ತಿರೀಯ ಅರಣ್ಯಕದಲ್ಲಿವೆ (ಇಂದು ಪ್ರಚಲಿತದಲ್ಲಿರುವ ಪುರುಷಸೂಕ್ತದ ಆವೃತ್ತಿ ತೈತ್ತಿರೀಯ ಅರಣ್ಯಕದ್ದು. ಆದರೆ ಮಾಧ್ವ ಸಂಪದಾಯದಲ್ಲಿ ಋಗ್ವೇದದ ಪುರುಷಸೂಕ್ತವೇ ರೂಢಿಯಲ್ಲಿದೆ).

೪.೧. ಋಗ್ವೇದ

೪.೧.೧. ಸಂಹಿತಾಭಾಗ

ಋಗ್ವೇದವು ವೇದಗಳಲ್ಲೆಲ್ಲ ತುಂಬಾ ಪ್ರಾಚೀನವಾದುದು. ಋಗ್ವೇದ ಸಂಹಿತೆಯು ಸ್ತೋತ್ರ ರೂಪವಾದುದು. ಋಗ್ವೇದ ಮಂತ್ರಗಳು ಛಂದಸ್ಸಿನ ಅಣುಗುಣವಾಗಿ ಇವೆ. ಇದನ್ನು ಕವಿತಾ ಪ್ರಕಾರವೆಂದೂ ಹೇಳಬಹುದು. 

ಋಗ್ವೇದವನ್ನು (ಅಂದರೆ ಸಂಹಿತೆಯನ್ನು) ಹತ್ತು ಭಾಗಗಳಾಗಿ ವಿಂಗಡಿಸಿದ್ದಾರೆ. ಇವುಗಳನ್ನು ಮಂಡಲಗಳೆಂದು ಕರೆಯುತ್ತಾರೆ. ಪ್ರತಿಯೊಂದು ಮಂಡಲವನ್ನೂ ಪುನಾ ಅನುವಾಕ ಮತ್ತು ಸೂಕ್ತಗಳಾಗಿ ವಿಂಗಡಿಸಿದ್ದಾರೆ. ಒಂದೊಂದು ಸೂಕ್ತವೂ ಸಾಮಾನ್ಯವಾಗಿ ಒಂದು ದೇವತೆಯನ್ನು ಕುರಿತಾದದ್ದಾಗಿದೆ. ಕೆಲವೊಮ್ಮೆ ಒಂದು ಸೂಕ್ತದಲ್ಲಿ ಎರೆಡು ಮೂರು ದೇವತೆಗಳೂ ಬರಬಹುದು. ಋಗ್ವೇದದ ೨, ೩, ೪, ೫, ೬, ೭ ಮತ್ತು ೮ನೇ ಮಂಡಲಗಳಿಗೆ ಒಂದೇ ವಂಶದ ಋಷಿಗಳು ದ್ರಷ್ಟಾರರಾಗಿದ್ದಾರೆ. ಅವರು ಕ್ರಮವಾಗಿ ಗ್ರತ್ಸಮದ, ವಿಶ್ವಾಮಿತ್ರ, ವಾಮದೇವ, ಅತ್ರಿ, ಭಾರದ್ವಾಜ, ವಸಿಷ್ಠ ಮತ್ತು ಕಣ್ವರು. ೯ನೇ ಸೂಕ್ತ ಸಂಪೂರ್ಣವಾಗಿ ಪವಮಾನ ಸೋಮ ಎಂಬ ಒಂದೇ ದೇವತೆಯನ್ನು ಕುರಿತಾಗಿದೆ. ಬೇರೆ ಬೇರೆ ಋಷಿಗಳ ಪವಮಾನ ಸೋಮ ದೇವತೆಯ ಮಂತ್ರಗಳನ್ನು ೯ನೇ ಮಂಡಲದಲ್ಲಿ ಸೇರಿಸಿದ್ದಾರೆ. ಒಂದನೇ ಮತ್ತು ಹತ್ತನೇ ಮಂಡಲಗಳು ಬೇರೆ ಮಂಡಲಗಳಿಗೆ ಹೋಲಿಸಿದರೆ ಸ್ವಲ್ಪ ಈಚಿನವು. ಇವುಗಳ ದ್ರಷ್ಟಾರರು ಅನೇಕ ಋಷಿಗಳು. ಈ ಮಂಡಲಗಳಲ್ಲಿ ಹೆಚ್ಚೂ-ಕಡಿಮೆ ೧೦೦ ಮಂತ್ರಗಳಿಗೆ ಒಬ್ಬ ಋಷಿಯಿರುವುದರಿಂದ, ಅವರನ್ನು ಶತರ್ಚಿನರೆಂದು ಕರೆಯುತ್ತಾರೆ. ಒಟ್ಟಾಗಿ ಋಗ್ವೇದದಲ್ಲಿ ೧೦೨೮ ಸೂಕ್ತಗಳಿವೆ. ಒಟ್ಟು ಮಂತ್ರ ಸಂಖ್ಯೆ ೧೦೫೫೨. ಪ್ರತಿಯೊಂದು ಮಂಡಲದಲ್ಲಿಯೂ ಮೊದಲು ಗಾಯತ್ರಿಯಂತಹ ಸಣ್ಣ ಛಂದಸ್ಸಿನ ಮಂತ್ರಗಳಿಂದ ಆರಂಭವಾಗಿ ನಂತರ ದೊಡ್ಡ ಛಂದಸ್ಸುಗಳಾದ ಬೃಹತಿ, ಅನುಷ್ಟುಪ್, ತ್ರಿಷ್ಟುಪ್, ಜಗತೀ ಛಂದಸ್ಸಿನ ಮಂತ್ರಗಳು ಬರುತ್ತವೆ. 

ಋಗ್ವೇದದ ಹತ್ತು ಮಂಡಲಗಳು ಗಾತ್ರದಲ್ಲಿ ಸಮನಾಗಿಲ್ಲ. ಒಂದನೇ ಮತ್ತು ಹತ್ತನೇ ಮಂಡಲದಲ್ಲಿ ೧೯೧ ಸೂಕ್ತಗಳಿವೆ. ಆದರೆ ೪ನೇ ಮಂಡಲದಲ್ಲಿ ೫೮ ಸೂಕ್ತಗಳಿವೆ. ಅಧ್ಯಯನಕ್ಕೆ ಅನುಕೂಲವಾಗುವಂತೆ ಋಗ್ವೇದವನ್ನು ಅಷ್ಟಕಗಳಾಗಿಯೂ, ಅಷ್ಟಕಗಳನ್ನು ಅಧ್ಯಾಯಗಳಾಗಿಯೂ ವಿಂಗಡಿಸಿದ್ದಾರೆ. ಪ್ರತಿಯೊಂದು ಅಧ್ಯಾಯದಲ್ಲಿಯೂ ಸುಮಾರಾಗಿ ಒಂದೇ ಸಂಖ್ಯೆಯ ಸೂಕ್ತಗಳಿವೆ. 

ಋಗ್ವೇದದ ೨೫ರಷ್ಟು ಮಂತ್ರಗಳು ಇಂದ್ರದೇವತಾರಕವಾದುವು. ಎರಡನೆಯ ಸ್ಥಾನ ಅಗ್ನಿಯವು. ಉಳಿದಂತೆ ಮರುತ್ತುಗಳು, ಉಷಸ್ಸು, ಸೂರ್ಯ, ಅಶ್ವಿನಿ ದೇವತೆಗಳು, ಋಭುಗಳು, ವಿಷ್ಣು, ರುದ್ರ, ಸರಸ್ವತಿ, ಇಳಾ ಮುಂತಾದ ದೇವತೆಗಳಿವೆ. ಋಗ್ವೇದದ ೮ನೇ ಮತ್ತು ೯ನೇ ಮಂಡಲಗಳನ್ನು ಹೊರತುಪಡಿಸಿ ಮಿಕ್ಕೆಲ್ಲ ಮಂಡಲಗಳು ಅಗ್ನಿ ದೇವತಾ ಸೂಕ್ತಗಳಿಂದ ಆರಂಭವಾಗುತ್ತವೆ.  ೮ನೇ ಮಂಡಲ ಇಂದ್ರ ದೇವತಾ ಋಕ್ಕಿನಿಂದ ಆರಂಭವಾಗುತ್ತದೆ. ೯ನೇ ಮಂಡಲ ಹಿಂದೆಯೇ ಹೇಳಿದಂತೆ ಸಂಪೂರ್ಣವಾಗಿ ಪವಮಾನ ಸೋಮ ದೇವತೆಗೆ ಸಂಬಂಧಪಟ್ಟವು.

ಮೇಲೆ ಹೇಳಿದ ಸೂಕ್ತಗಳ ಸಂಖ್ಯೆಗಳು ಋಗ್ವೇದದ ಶಾಕಲ ಶಾಖಾ ರೀತಿಯಾದದ್ದು. ಶಾಕಲ ಶಾಖೆಗೂ, ಬಾಷ್ಕಲ ಶಾಖೆಗೂ ಸ್ವಲ್ಪ ವ್ಯತ್ಯಾಸಗಳಿವೆ. ಈ ಎರೆಡು ಶಾಖೆಗಳಿಗೂ ಸಾಮಾನ್ಯವಾದ ಸೂಕ್ತಗಳ ಸಂಖ್ಯೆ ೧೦೧೭. ಶಾಕಲ ಶಾಖೆಯಲ್ಲಿ ೧೧ ಸೂಕ್ತಗಳು ಬೇರೆಯಾಗಿದ್ದರೆ ಬಾಷ್ಕಲ ಶಾಖೆಯ ೩೬ ಸೂಕ್ತಗಳು ಬೇರೆಯಾಗಿವೆ. ಈ ರೀತಿ ಒಂದು ಶಾಖೆಯಲ್ಲಿರುವ ಸೂಕ್ತಗಳು ಬೇರೆ ಶಾಖೆಯಲ್ಲಿಲ್ಲದಿದ್ದರೆ ಅಂತಹ ಸೂಕ್ತಗಳನ್ನು ಖಿಲ ಸೂಕ್ತಗಳೆಂದು ಕರೆಯುತ್ತಾರೆ. ಒಟ್ಟಿನಲ್ಲಿ ಋಗ್ವೇದದ ಸೂಕ್ತಗಳ ಸಂಖ್ಯೆಯನ್ನು ೧೦೧೭ ಎಂದೂ, ಶಾಕಲ ಶಾಖೆಯಲ್ಲಿ ೧೧ ಖಿಲ ಸೂಕ್ತಗಳೆಂದೂ, ಬಾಷ್ಕಲ ಶಾಖೆಯಲ್ಲಿ ೩೬ ಖಿಲ ಸೂಕ್ತಗಳೆಂದೂ ಹೇಳಬಹುದು. ಪ್ರಸಿದ್ದವಾದ ಶ್ರೀ ಸೂಕ್ತ ಬಾಷ್ಕಲ ಶಾಖೆಯ ಖಿಲ ಸೂಕ್ತ.

೪.೧.೨. ಬ್ರಾಹ್ಮಣ-ಅರಣ್ಯಕ-ಉಪನಿಷತ್ತುಗಳು

ಋಗ್ವೇದಕ್ಕೆ ಎರೆಡು ಬ್ರಾಹ್ಮಣಗಳು ಸಿಕ್ಕಿವೆ. ಶಾಕಾಲ ಶಾಖೆಯ ಐತರೇಯ ಬ್ರಾಹ್ಮಣ ಮತ್ತು ಬಾಷ್ಕಲ ಶಾಖೆಯ ಕೌಷೀತಕಿ ಬ್ರಾಹ್ಮಣ. ಇವುಗಳಲ್ಲಿ ಐತರೇಯ ಬ್ರಾಹ್ಮಣವೇ ಪ್ರಸಿದ್ಧವಾಗಿದೆ. ಇದರ ಕರ್ತೃ ಮಹೀದಾಸರೆಂಬ ಮಹರ್ಷಿಗಳೆಂದು ಹೇಳುತ್ತಾರೆ. ಐತರೇಯ ಬ್ರಾಹ್ಮಣದಲ್ಲಿ ೪೦ ಅಧ್ಯಾಯಗಳಿವೆ. ಕೌಷೀತಕೀ ಬ್ರಾಹ್ಮಣದಲ್ಲಿ ೩೦ ಅಧ್ಯಾಯಗಳಿವೆ. ಈ ಬ್ರಾಹ್ಮಣಗಳಲ್ಲಿ ಅಗ್ನಿಷ್ಟೋಮ ಮುಂತಾದ ಯಾಗಗಳ ವಿವರಣೆ, ಕ್ಷತ್ರಿಯ ಮಾಡಬೇಕಾದ ಯಜ್ಞಗಳು, ರಾಜ್ಯಾಭಿಷೇಕ ಕ್ರಮಗಳನ್ನು ವಿವರಿಸಲಾಗಿದೆ. ಈ ಬ್ರಾಹ್ಮಣಗಳಿಗೆ ಹೊಂದಿಕೊಂಡಂತೆ ಐತರೇಯ ಮತ್ತು ಕೌಷೀತಕಿ ಅರಣ್ಯಕಗಳಿವೆ.

ಋಗ್ವೇದದ ಮುಖ್ಯ ಉಪನಿಷತ್ತು ಐತರೇಯ ಬ್ರಾಹ್ಮಣಕ್ಕೆ ಸೇರಿದ ಐತರೇಯ ಉಪನಿಷತ್ತು. ಐತರೇಯ ಉಪನಿಷತ್ತಿನಲ್ಲಿ ಜೀವ, ಪ್ರಪಂಚ ಮತ್ತು ಆತ್ಮಗಳ ವಿಚಾರವಾದ ವಿಷಯಗಳು ಬಂದಿವೆ. ಇದರಲ್ಲಿ ೩ ಅಧ್ಯಾಯಗಳಿವೆ. ಒಟ್ಟು ೩೩ ಋಕ್ಕುಗಳಿವೆ. ಅದ್ವೈತದ ನಾಲ್ಕು ಮಹಾವಾಕ್ಯಗಳಲ್ಲಿ ಋಗ್ವೇದದ ವಾಕ್ಯವಾದ 'ಪ್ರಜ್ಞಾನಂ ಬ್ರಹ್ಮ' (ಶುದ್ಧ-ಪೂರ್ಣವಾದ ಜ್ಞಾನವೇ ಬ್ರಹ್ಮ) ಎಂಬ ವಾಕ್ಯ ಐತರೇಯ ಉಪನಿಷತ್ತಿನ ೩ನೇ ಅಧ್ಯಾಯದಲ್ಲಿ ಬಂದಿದೆ.

೪.೨. ಯಜುರ್ವೇದ 

ಯಜುರ್ವೇದ ಮಿಕ್ಕ ವೇದಗಳಿಗೆ ಹೋಲಿಸಿದರೆ ಹೊಸದಾಗಿ ರಚನೆಯಾದದ್ದು. ಯಜುರ್ವೇದ ಯಜ್ಞರೂಪಿಯಾದ ವೇದ. ಯಜುರ್ವೇದದಲ್ಲಿ ಯಜ್ಞಯಾಗಾದಿಗಳಲ್ಲಿ ಉಪಯೋಗಿಸುವ ಮಂತ್ರಗಳು, ಅವುಗಳ ಕಾಲ, ನಿಯಮ, ಕ್ರಮ ಮುಂತಾದವುಗಳ ಕುರಿತು ವಿವರವಾಗಿ ಚರ್ಚಿಸುತ್ತದೆ. ಗದ್ಯಾತ್ಮಕೋ ಯಜುಃ ಎಂಬಂತೆ ಯಜುರ್ವೇದವು ಗದ್ಯರೂಪಕವಾದುದು. ಅಂದರೆ ಯಜುರ್ವೇದ ಮಂತ್ರಗಳು ಯಾವುದೇ ಛಂದಸ್ಸಿನ ನಿಯಮಕ್ಕೆ ಅನುಗುಣವಾಗಿ ಇಲ್ಲ. ಯಜ್ಞದಲ್ಲಿ ಅಧ್ವರ್ಯು ಎಂಬ ಋತ್ವಿಕ್ಕಿಗೆ ಯಜುರ್ವೇದ ಮಂತ್ರಗಳು ಉಪಯುಕ್ತವಾಗಿವೆ.

ಯಜುರ್ವೇದಗಳಲ್ಲಿ ಎರೆಡು ವಿಭಾಗಗಳಿವೆ: ಕೃಷ್ಣಯಜುರ್ವೇದ ಮತ್ತು ಶುಕ್ಲಯಜುರ್ವೇದ. ಎರಡಕ್ಕೂ ಅದರವೇ ಆದ ಶಾಖೆ, ಬ್ರಾಹ್ಮಣ, ಅರಣ್ಯಕಗಳಿವೆ. ಕೃಷ್ಣಯಜುರ್ವೇದವು ಒಂದು ಕ್ರಮವಾಗಿಲ್ಲ. ಕೃಷ್ಣಯಜುರ್ವೇದದಲ್ಲಿ ಸಂಹಿತಾ ಭಾಗಗಳಲ್ಲಿ ಬ್ರಾಹ್ಮಣ ಭಾಗಗಳೂ ಸೇರಿಕೊಂಡಿವೆ - ಅಂದರೆ ಕೆಲವೆಡೆ ಯಜ್ಞಗಳ ಮಂತ್ರಗಳೂ ಮತ್ತು ಅವುಗಳ ವಿವರಣೆಗಳೂ ಸಂಹಿಯಲ್ಲಿಯೇ ಬಂದಿದೆ. ಶುಕ್ಲಯಜುರ್ವೇದದಲ್ಲಿ ಸಂಹಿತೆ ಮತ್ತು ಬ್ರಾಹ್ಮಣ ಭಾಗಗಳನ್ನು ಕ್ರಮವಾಗಿ ವಿಂಗಡಿಸಲಾಗಿದೆ.

೪.೨.೧. ಕೃಷ್ಣಯಜುರ್ವೇದ

೪.೨.೧.೧. ಸಂಹಿತೆ

ಕೃಷ್ಣಯಜುರ್ವೇದ ಸಂಹಿತೆಯಲ್ಲಿ ಸೋಮ ಯಾಗ, ಅಗ್ನಿಷ್ಟೋಮ ಯಾಗ, ದಶಪೂರ್ಣಮಾಸ ಯಾಗ ಮುಂತಾದ ಯಾಗಗಳ ಮಂತ್ರಗಳಿವೆ. ಕೃಷ್ಣ ಯಜುರ್ವೇದಕ್ಕೆ ಎರೆಡು ಮುಖ್ಯ ಶಾಖೆಗಳಿವೆ: ತೈತ್ತಿರೀಯ ಶಾಖೆ ಮತ್ತು ಕಾಠಕ ಶಾಖೆ. ಇವುಗಳಲ್ಲಿ ತೈತ್ತಿರೀಯ ಶಾಖೆ ಪ್ರಸಿದ್ಧವಾಗಿದೆ. ತೈತ್ತಿರೀಯ ಶಾಖಾ ರೀತ್ಯಾ ಸಂಹಿತೆಯನ್ನು ತೈತ್ತಿರೀಯ ಸಂಹಿತೆಯೆಂದೂ, ಕಾಠಕದದ್ದನ್ನು ಕಾಠಕಸಂಹಿತೆಯೆಂದೂ ಕರೆಯುತ್ತಾರೆ.

ಕೃಷ್ಣಯಜುರ್ವೇದವನ್ನು ಕಾಂಡ - ಪ್ರಶ್ನ ಅಥವಾ ಪ್ರಪಾಠಕ - ಅನುವಾಕಗಳಾಗಿ ವಿಂಗಡಿಸಿದ್ದಾರೆ. ಇದರಲ್ಲಿ ಒಟ್ಟು ೭ ಕಾಂಡಗಳಲ್ಲಿ ೪೪ ಪ್ರಪಾಠಕಗಳಿವೆ. ಪ್ರಸಿದ್ದವಾದ ರುದ್ರ ನಮಕ - ಚಮಕ ಪ್ರಶ್ನಗಳು ಕ್ರಮವಾಗಿ ಕೃಷ್ಣಯಜುರ್ವೇದದ ೪ನೇ ಕಾಂಡದ ೫ ಮತ್ತು ೭ನೇ ಪ್ರಶ್ನಗಳಾಗಿ ಬರುತ್ತವೆ. ಹಿಂದೆಯೇ ಹೇಳಿದಂತೆ ಕೃಷ್ಣಯಜುರ್ವೇದದಲ್ಲಿ ಕೆಲವು ಬ್ರಾಹ್ಮಣ ಮಂತ್ರಗಳು ಸಂಹಿತೆಯಲ್ಲಿ ಬಂದಿವೆ. ಉದಾಹರಣೆಗೆ ಮೊದಲನೇ ಕಾಂಡದ ಎರಡನೇ ಪ್ರಶ್ನದಲ್ಲಿ ಸೋಮಯಾಗದ ಮಂತ್ರಗಳೂ, ೭ನೇ ಕಾಂಡದಲ್ಲಿ ಸೋಮಯಾಗ ಮಾಡುವ ಕಾಲ, ಕ್ರಮಗಳೂ (ಅಂದರೆ ಬ್ರಾಹ್ಮಣವೂ) ಬರುತ್ತದೆ.

೪.೨.೧.೨. ಬ್ರಾಹ್ಮಣ-ಅರಣ್ಯಕ-ಉಪನಿಷತ್ತುಗಳು

ಕೃಷ್ಣಯಜುರ್ವೇದದ ಮುಖ್ಯ ಬಾಹ್ಮಣ ತೈತ್ತಿರೀಯ ಬ್ರಾಹ್ಮಣ. ಇದರಲ್ಲಿ ಸಂಹಿತೆಯಲ್ಲಿಲ್ಲದ ಅನೇಕ ವಿಷಯಗಳಿವೆ. ಆದ್ದರಿಂದ ಕೆಲವರು ತತ್ತಿರೀಯ ಬ್ರಾಹ್ಮಣವನ್ನು ಕೃಷ್ಣಯಜುರ್ವೇದ ಸಂಹಿತೆಯ ಉತ್ತರ ಭಾಗವೆಂದೂ ಕರೆಯುತ್ತಾರೆ. ಇದರಲ್ಲಿ ಮೂರು ಕಾಂಡಗಳು ೨೮ ಅಧ್ಯಾಯಗಳೂ ಇವೆ. ಕಾಠಕ ಶಾಖೆಯ ಕಾಠಕ ಬ್ರಾಹ್ಮಣ ಕೃಷ್ಣಯಜುರ್ವೇದದ ಇನ್ನೊಂದು ಬ್ರಾಹ್ಮಣ. ಇವೆರಡಲ್ಲದೆ ಕೃಷ್ಣಯಜುರ್ವೇದಕ್ಕೆ, ಮೈತ್ರಾಯಣೀ ಬ್ರಾಹ್ಮಣ, ಜಾಬಾಲ ಬ್ರಾಹ್ಮಣ, ಶ್ವೇತಾಶ್ವೇತರ ಬ್ರಾಹ್ಮಣ ಮುಂತಾದ ಬ್ರಾಹ್ಮಣಗಳಿವೆ. ಆದರೆ ಇವಾವುವೂ ನಮಗೆ ಪೂರ್ಣವಾಗಿ ಸಿಕ್ಕಿಲ್ಲ.

ಕೃಷ್ಣಯಜುರ್ವೇದದ ಅರಣ್ಯಕ ತೈತ್ತಿರೀಯ ಅರಣ್ಯಕ. ಇದರಲ್ಲಿ ೭ ಪ್ರಶ್ನಗಳಿವೆ. ಇವುಗಳಲ್ಲಿ ಮಹಾನಾರಾಯಣ ಉಪನಿಷತ್ತು ಮತ್ತು ತೈತ್ತಿರೀಯ ಉಪನಿಷತ್ತು ಮುಖ್ಯವಾದುವು. ತೈತ್ತಿರೀಯ ಅರಣ್ಯಕದಲ್ಲಿ ನಾವು ನಿತ್ಯ ಉಪಯೋಗಿಸುವ ಅನೇಕ ಮಂತ್ರಗಳು ಅಡಕವಾಗಿವೆ. ನಾರಾಯಣ ಸೂಕ್ತ, ದುರ್ಗಾ ಸೂಕ್ತ, ಅಘಮರ್ಷಣ ಸೂಕ್ತ, ಮೃತ್ಯುಂಜಯ ಮಂತ್ರ, ಸಂಧ್ಯಾವಂದನೆ ಮಂತ್ರ, ವಿರಿಜಾ ಹೋಮ ಮಂತ್ರ (ಇವೆಲ್ಲ ಮಹಾನಾರಾಯಣ ಉಪನಿಷತ್ತಿನಲ್ಲಿವೆ), ಮಂತ್ರಪುಷ್ಪದಲ್ಲಿ ಉಪಯೋಗಿಸುವ ಯೋಪಾಮ್ ಪುಷಮ್ ವೇದ, ಅರುಣ ಪ್ರಶ್ನ ಮುಂತಾದ ಮಂತ್ರಗಳು ತೈತ್ತಿರೀಯ ಅರಣ್ಯಕದಲ್ಲಿ ಬರುತ್ತವೆ.

ಕೃಷ್ಣ ಯಜುರ್ವೇದದ ಎರೆಡು ಮುಖ್ಯ ಉಪನಿಷತ್ತುಗಳು ತೈತ್ತಿರೀಯ ಮತ್ತು ಕಾಠಕ. ಹೆಸರೇ ಸೂಚಿಸುವಂತೆ ಇವು ಕ್ರಮವಾಗಿ ಆಯಾ ಶಾಖೆಗಳಿಗೆ ಸೇರುತ್ತವೆ. ತತ್ತಿರೀಯ ಉಪನಿಷತ್ತನ್ನು ಶೀಕ್ಷಾವಲ್ಲಿ, ಬ್ರಹ್ಮಾನಂದವಲ್ಲಿ, ಭೃಗುವಲ್ಲಿಗಳೆಂದು ವಿಂಗಡಿಸಿದ್ದಾರೆ. ಶೀಕ್ಷಾವಲ್ಲಿಯಲ್ಲಿ ಬ್ರಹ್ಮಚಾರಿಯ ಕರ್ತವ್ಯಗಳು, ಸ್ವಾಧ್ಯಾಯ ಪ್ರಶಂಸೆ, ಓಂ ಪ್ರಶಂಸೆ (ಓಂ ಇತಿ ಬ್ರಹ್ಮಾ, ಓಮಿತ್ಯೇದಗುಂ ಸರ್ವಂ) ಮುಂತಾದ ವಿಷಯಗಳಿವೆ. ಭೃಗು-ಬ್ರಹ್ಮಾನಂದವಲ್ಲಿಗಳಲ್ಲಿ ಬ್ರಹ್ಮ ಜಿಜ್ಞಾಸವಿದೆ. 'ಮಾತೃದೇವೋ ಭವ, ಪಿತೃದೇವೋ ಭವ', 'ಸತ್ಯಂ ವದ, ಧರ್ಮಂ ಚರ', ಅನ್ನಸಾಮ ಮುಂತಾದ ವಾಕ್ಯಗಳು ತೈತ್ತಿರೀಯ ಉಪನಿಷತ್ತಿನಲ್ಲಿ ಬರುತ್ತವೆ. ಕಠೋಪನಿಷತ್ತಿನಲ್ಲಿ ಎರೆಡು ಅಧ್ಯಾಯಗಳಿವೆ. ಒಂದೊಂದು ಅಧ್ಯಾಯದಲ್ಲಿಯೂ ೩ ವಲ್ಲಿಗಳಿವೆ. ಪ್ರಸಿದ್ಧವಾದ ನಚಿಕೇತ ಯಮನಿಂದ ಬ್ರಹ್ಮವಿದ್ಯೆಯನ್ನು ಪಡೆದ ಪ್ರಸಂಗವೇ ಕಠೋಪನಿಷತ್ತು.

೪.೨.೨. ಶುಕ್ಲ ಯಜುರ್ವೇದ

೪.೨.೨.೧. ಸಂಹಿತೆ

ಶುಕ್ಲ ಯಜುರ್ವೇದದಲ್ಲಿ ಸಂಹಿತೆ ಮತ್ತು ಬ್ರಾಹ್ಮಣಗಳನ್ನು ಕ್ರಮವಾಗಿ ವಿಂಗಡಿಸಲಾಗಿದೆ. ಈ ಕಾರಣದಿಂದ ಶುಕ್ಲ ಯಜುರ್ವೇದವು ಕೃಷ್ಣಯಜುರ್ವೇದಕ್ಕಿಂತ ಈಚಿನದೆಂದು ಕೆಲವರು ಅಭಿಪ್ರಾಯ ಪಡುತ್ತಾರೆ. ಶುಕ್ಲ ಯಜುರ್ವೇದವನ್ನು ಕ್ರಮವಾಗಿ ವಿಂಗಡಿಸಿದವರು ಯಾಜ್ಞವಲ್ಕ್ಯ ಮಹರ್ಷಿಗಳು. ಯಜ್ಞವಲ್ಕ್ಯರಿಗೆ ಅಶ್ವ(ವಾಜಿ)ರೂಪದ ಸೂರ್ಯನಿಂದ ಉಪದೇಶವಾಯಿತೆಂದು ನಂಬಿಕೆಯಿರುವುದರಿಂದ ಶುಕ್ಲಯಜುರ್ವೇದ ಸಂಹಿತೆಯನ್ನು ವಾಜಿಸನೇಯಿ ಸಂಹಿತೆಯೆಂದೂ ಕರೆಯುತ್ತಾರೆ. ಶುಕ್ಲ ಯಜುರ್ವೇದಕ್ಕೆ ಕಾಣ್ವ, ಮಾಧ್ಯಂದಿನ ಎಂಬ ಎರೆಡು ಶಾಖೆಗಳಿವೆ. ಇವೆರೆಡಕ್ಕೂ ಪಾಠದಲ್ಲಿ ಹೆಚ್ಚು ಭೇದವಿಲ್ಲ. ಕಾಣ್ವ ಮಾಧ್ಯಂದಿನರು ಯಾಜ್ಞವಲ್ಕ್ಯರ ನೇರ ಶಿಷ್ಯರು.

ಶುಕ್ಲ ಯಜುರ್ವೇದದಲ್ಲಿ ೪೦ ಅಧ್ಯಾಯಗಳಿವೆ. ಪ್ರತಿಯೊಂದು ಅಧ್ಯಾಯವನ್ನು ಕಂಡಿಕೆಗಳೆಂಬ ಸಣ್ಣ ಸಣ್ಣ ಭಾಗಗಳಾಗಿ ವಿಂಗಡಿಸಿದ್ದಾರೆ. ಇಂತಹ ೧೯೭೧ ಕಂಡಿಕೆಗಳು ಶುಕ್ಲ ಯಜುರ್ವೇದದಲ್ಲಿದೆ. ಮೊದಲ ೨೫ ಅಧ್ಯಾಯಗಳು ದಶಪೂರ್ಣ ಮಾಸ ಯಾಗ(೧-೨), ಅಗ್ನಿಹೋತ್ರ ಯಾಗ(೩), ಸೋಮಯಜ್ಞ(೪-೮), ವಾಜಪೇಯ ಯಾಗ(೯), ರಾಜಸೂಯ ಯಾಗ(೧೦), ಅಗ್ನಿಚಯನ(೧೧-೧೮), ಶೌತ್ರಮಣಿ (೧೯-೨೧) ಮತ್ತು ಅಶ್ವಮೇಧ ಯಾಗಗಳ (೨೨-೨೫) ಕುರಿತಾಗಿ ಇವೆ. ೨೬-೩೯ನೇ ಅಧ್ಯಾಯಗಳಲ್ಲಿ ಪುರುಷ ಮೇಧ, ಪ್ರವರ್ಗ್ಯ, ಪಿತೃಯಜ್ಞ ಮುಂತಾದ ಯಾಗಗಳನ್ನು ಕುರಿತಾಗಿ ಹೇಳಿದ್ದಾರೆ. ಶುಕ್ಲ ಯಜುರ್ವೇದದ ೪೦ನೇ ಅಧ್ಯಾಯವೇ ಈಶೋಪನಿಷತ್ತು. 

೪.೨.೨.೨. ಬ್ರಾಹ್ಮಣ-ಅರಣ್ಯಕ-ಉಪನಿಷತ್ತು

ಶುಕ್ಲ ಯಜುರ್ವೇದದ ಮುಖ್ಯ ಬ್ರಾಹ್ಮಣ ಶತಪಥಬ್ರಾಹ್ಮಣ. ಇದರಲ್ಲಿ ೧೪ ಕಾಂಡಗಳೂ ೧೦೦ ಅಧ್ಯಾಯಗಳೂ ಇವೆ. ಇದರಿಂದಲೇ ಈ ಬ್ರಾಹ್ಮಣಕ್ಕೆ ಶತಪಥವೆಂದು ಹೆಸರು. ಸಂಹಿತೆಯಲ್ಲಿ ಬರುವ ಎಲ್ಲ ಯಜ್ಞಗಳ ಕಾಲ, ಕ್ರಮವನ್ನು(ಯಜ್ಞ ವೇದಿಯ ನಿರ್ಮಾಣ, ಸೋಮದ ಉತ್ಪಾದನಾ ಕ್ರಮ ಇತ್ಯಾದಿ) ಈ ಬ್ರಾಹ್ಮಣ ವಿವರಿಸುತ್ತದೆ. 

ಶತಪಥಬ್ರಾಹ್ಮಣದ ಕೊನೆಯ ಭಾಗವೇ ಶುಕ್ಲ ಯಜುರ್ವೇದದ ಅರಣ್ಯಕ: ಬೃಹದಾರಣ್ಯಕ. ಬೃಹದಾರಣ್ಯಕ ಉಪನಿಷತ್ತು ಬೃಹದಾರಣ್ಯಕದಲ್ಲಿ ಬರುತ್ತದೆ. 

ಶುಕ್ಲ ಯಜುರ್ವೇದದ ಮುಖ್ಯ ಉಪನಿಷತ್ತುಗಳು - ಈಶೋಪನಿಷತ್ತು ಮತ್ತು ಬೃಹದಾರಣ್ಯಕ ಉಪನಿಷತ್ತು. ಮುಖ್ಯ ಉಪನಿಷತ್ತುಗಳಲ್ಲಿಸಂಹಿತಾ ಭಾಗದಲ್ಲಿ ಬರುವ ಒಂದೇ ಒಂದು ಉಪನಿಷತ್ತು ಈಶೋಪನಿಷತ್ತು. ಗಾತ್ರದಲ್ಲಿ ಈಶೋಪನಿಷತ್ತು ಚಿಕ್ಕದು. ಇದರಲ್ಲಿ ೧೮ ಋಕ್ಕುಗಳು ಮಾತ್ರವಿದೆ. ಆದರೂ 'ಈಶಾವಾಸ್ಯಮಿದಗಂ ಸರ್ವಂ' ಎಂದು ಆರಂಭವಾಗುವ ಈ ಉಪನಿಷತ್ತನ್ನು ಮುಖ್ಯ ಉಪನಿಷತ್ತುಗಳಲ್ಲಿ ಅತಿಮುಖ್ಯವೆಂದು ಪರಿಗಣಿಸುತ್ತಾರೆ. ಅತಿ ಪ್ರಸಿದ್ದವಾದ 'ಸೋಹಂ' ಎಂಬ ವಾಕ್ಯ ಈಶೋಪನಿಷತ್ತಿನದು. ಬೃಹದಾರಣ್ಯಕ ಉಪನಿಷತ್ತು ಬೃಹದಾರಣ್ಯಕದಲ್ಲಿ ಬರುತ್ತದೆ. ಈ ಉಪನಿಷತ್ತಿನಲ್ಲಿ ೬ ಕಾಂಡಗಳಿವೆ. ಅದ್ವೈತದ ಯಜುರ್ವೇದ ಮಹಾವಾಕ್ಯವಾದ 'ಅಹಂ ಬ್ರಹ್ಮಾಸ್ಮಿ' ಎಂಬ ವಾಕ್ಯವು ಬೃಹದಾರಣ್ಯಕ ಉಪನಿಷತ್ತಿನಲ್ಲಿದೆ. 'ಅಸತೋಮಾ ಸದ್ಗಮಯ, ತಮಸೋಮಾ ಜ್ಯೋತಿರ್ಗಮಯ, ಮೃತ್ಯೋಮಾ ಅಮೃತಂಗಮಯ' ಎಂಬ ಪ್ರಸಿದ್ದವಾದ ಮಂತ್ರ ಬೃಹದಾರಣ್ಯಕ ಉಪನಿಷತ್ತಿನ ಮೊದಲನೇ ಕಾಂಡದ ಮೂರನೇ ಅಧ್ಯಾಯದಲ್ಲಿದೆ. 

೪.೩. ಸಾಮವೇದ

೪.೩.೧. ಸಂಹಿತೆ

ಸಾಮವೇದವು ಯಜ್ಞದಲ್ಲಿ ಉದ್ಗಾತೃವೆಂಬ ಋತ್ವಿಜನಿಗೆ ಸಾಮಗಾನ ಮಾಡಲು ಉಪಯುಕ್ತವಾದ ಮಂತ್ರಗಳು. ಸಾಮವೇದ ಸಂಹಿತೆಯು ಸಂಪೂರ್ಣವಾಗಿ ಪ್ರತ್ಯೇಕ ಗ್ರಂಥವಲ್ಲ. ೭೫ ಮಂತ್ರಗಳನ್ನು ಹೊರತುಪಡಿಸಿ ಇನ್ನೆಲ್ಲ ಮಂತ್ರಗಳು ಋಗ್ವೇದಸಂಹಿತೆಯಲ್ಲಿವೆ. ಇವು ಬಹುತೇಕ ಋಗ್ವೇದದ ೮ನೇ ಮಂತ್ತು ೯ನೇ ಮಂಡಲದ ಮಂತ್ರಗಳು. ಸಾಮವೇದಕ್ಕೆ ಕೌಥುಮ, ರಾಣಾಯನೀಯ ಮತ್ತು ಜೈಮಿನೀಯ ಎಂಬ ಮೂರು ಶಾಖೆಯ ಸಂಹಿತೆಗಳು ದೊರತಿವೆ. ಇವುಗಳಲ್ಲಿ ಕೌಥುಮ ಶಾಖೆಯೇ ಪ್ರಸಿದ್ದಿಯಾಗಿದೆ.

ಸಾಮವೇದವನ್ನು ಅರ್ಚಿಕ ಮತ್ತು ಉತ್ತರಾರ್ಚಿಕವೆಂದು ಎರೆಡು ಭಾಗಗಳಾಗಿ ವಿಂಗಡಿಸಿದ್ದಾರೆ. ಅರ್ಚಿಕದಲ್ಲಿ ೫೮೫ ಮಂತ್ರಗಳು ಮತ್ತು ಉತ್ತರಾರ್ಚಿಕದಲ್ಲಿ ೯೬೪ ಮಂತ್ರಗಳು - ಒಟ್ಟಾಗಿ ೧೫೪೯ ಮಂತ್ರಗಳಿವೆ. ಸಾಮಗಾನದಲ್ಲಿ ಗ್ರಾಮ್ಯಗಾನ ಮತ್ತು ಅರಣ್ಯಗಾನಗಳೆಂಬ ಎರೆಡು ವಿಧಗಳಿವೆ. ಗ್ರಾಮ್ಯಗಾನಗಳನ್ನು ಜನಗಳ ಮುಂದೆಯೂ ಅರಣ್ಯಗಾನಗಳನನ್ನು ಅರಣ್ಯಗಳಲ್ಲಿ ಅಥವಾ ವೈಯುಕ್ತಿಕ ಧ್ಯಾನಗಳಿಗಾಗಿ ಹಾಡುತ್ತಿದ್ದರು. ಅರ್ಚಿಕದ ಮಂತ್ರಗಳು ಸಾಮಾನ್ಯವಾಗಿ ದೇವತಾರೂಪಕವಾದ ಮಂತ್ರಗಳು. ಉತ್ತರಾರ್ಚಿಕದ ಮಂತ್ರಗಳು ಯಜ್ಞ ಸಂಬಂಧಿ ಮಂತ್ರಗಳು.

ಸಾಮವೇದ ಮಂತ್ರಗಳು ಸಾಮಾನ್ಯವಾಗಿ ಗಾನಮಾಡಲು ಅನುಕೂಲವಾದ ಗಾಯತ್ರೀ ಮತ್ತು ಪ್ರಗಾಥ ಛಂದಸ್ಸುಗಳ್ಳಲ್ಲಿದೆ. ಸಾಮವೇದಕ್ಕೂ ಇತರ ವೇದಗಳಿಗೂ ಉಚ್ಚಾರದಲ್ಲಿ ಭೇದವಿದೆ. ಋಗ್, ಯಜುಸ್ಸು ಮತ್ತು ಅಥರ್ವವೇದ ಮಂತ್ರಗಳನ್ನು ಉದಾತ್ತ, ಅನುದಾತ್ತ, ಸ್ವರಿತಗಳೆಂಬ ಮೂರು ಸ್ವರಗಳಲ್ಲಿ ಉಚ್ಚರಿಸುತ್ತಾರೆ. ಆದರೆ ಸಾಮಗಾನದಲ್ಲಿ ಸಂಗೀತದ ಪಂಚಮ, ಮಾಧ್ಯಮ, ಗಾಂಧಾರ, ಋಷಭ, ಷಡ್ಜ, ದೈವತ ಮತ್ತು ನಿಷಾದಗಳಿಗನುಸಾರವಾಗಿ ಕ್ರುಷ್ಟ, ಪ್ರಥಮ, ದ್ವಿತೀಯ, ತೃತೀಯ, ಚತುರ್ಥ, ಪಂಚಮ ಮತ್ತು ಷಷ್ಠಗಳೆಂಬ ಸಪ್ತ ಸ್ವರಗಳಿವೆ. ಅನೇಕ ವಿಧವಾದ ಗಾನಗಳೂ, ಅವುಗಳಿಗೆ ವಿವಿಧ ಹೆಸರುಗಳೂ ಇವೆ. ಇಂದಿನ ಶಾಸ್ತ್ರೀಯ ಸಂಗೀತ ಮತ್ತು ನೃತ್ಯ ಶಾಸ್ತ್ರಗಳಿಗೆ ಸಾಮವೇದವೇ ಮೂಲವೆಂದು ಹೇಳುತ್ತಾರೆ.

೪.೩.೨. ಬ್ರಾಹ್ಮಣ-ಅರಣ್ಯಕ-ಉಪನಿಷತ್ತುಗಳು

ಸಾಮವೇದಕ್ಕೆ ತಾಂಡ್ಯ ಬ್ರಾಹ್ಮಣ, ಷಡ್ವಿಂಶತಿ ಬ್ರಾಹ್ಮಣ ಮತ್ತು ಜಮಿನೀಯ ಬ್ರಾಹ್ಮಣಗಳು ಮುಖ್ಯವಾದುವು. ಇವಲ್ಲದೆ ಅನೇಕ ಬ್ರಾಹ್ಮಣಗಳ ಹೆಸರುಗಳು ದೊರೆತಿದ್ದರೂ ಅವುಗಳ ಪ್ರತಿಗಳು ದೊರೆತಿಲ್ಲ. ತಾಂಡ್ಯ ಬ್ರಾಹ್ಮಣದ ಕೊನೆಯ ಭಾಗವು ತಾಂಡ್ಯ ಅರಣ್ಯಕವೆನಿಸಿಕೊಳ್ಳುತ್ತದೆ. ಇದಲ್ಲದೆ ಜೈಮಿನಿ ಬ್ರಾಹ್ಮಣಕ್ಕೆ ಸೇರಿದ ತಲವಕಾರ ಅಥವಾ ಜೈಮಿನಿ ಅರಣ್ಯಕಗಳಿವೆ.  

ಸಾಮವೇದದ ಮುಖ್ಯ ಉಪನಿಷತ್ತುಗಳು ಎರೆಡು: ಛಾಂದೋಗ್ಯ ಮತ್ತು ಕೇನ. ಛಾಂದೋಗ್ಯವು ದೊಡ್ಡ ಉಪನಿಷತ್ತು. ಇದರಲ್ಲಿ ಎಂಟು ಪ್ರಪಾಠಕಗಳಿವೆ. ಅನೇಕ ಉಪಕಥೆಗಳು ಬರುತ್ತವೆ. ಪಂಚಾಗ್ನಿ ವಿದ್ಯೆ, ಆತ್ಮ-ಬ್ರಹ್ಮತತ್ವ ಮುಂತಾದ ಅನೇಕ ಗಹನ ವಿಷಯಗಳನ್ನು ಈ ಉಪನಿಷತ್ತಿನಲ್ಲಿ ಚರ್ಚಿಸಲಾಗಿದೆ. ಅದ್ವೈತದ ಸಾಮವೇದ ಮಹಾವಾಕ್ಯವಾದ 'ಸ ಆತ್ಮಾ ತತ್ವಮಸಿ' ವಾಕ್ಯವು ಛಾಂದೋಗ್ಯ ಉಪನಿಷತ್ತಿನ ೬ನೇ ಪ್ರಪಾಠಕದಲ್ಲಿ ಬರುತ್ತದೆ. ಕೇನೋಪನಿಷತ್ತು ಜೈಮಿನಿ ಅರಣ್ಯಕದಲ್ಲಿ ಬರುತ್ತದೆ. ಇದನ್ನು ತಲವಕಾರ ಉಪನಿಷತ್ತೆಂದೂ ಕರೆಯುತ್ತಾರೆ. ಕೇನೋಪನಿಷತ್ತಿನಲ್ಲಿ ಮೂರು ಭಾಗಗಳಿವೆ. ಮೊದಲ ಭಾಗವು ೧೩ ಮಂತ್ರಗಳ ಪದ್ಯಗಳಾಗಿಯೂ, ಎರಡನೆಯ ಭಾಗವು ೧೫ ಮಂತ್ರಗಳ ಗದ್ಯವಾಗಿಯೂ ಇವೆ. ಮೂರನೇ ಭಾಗದಲ್ಲಿ ಆರು ಮಂತ್ರಗಳಿವೆ. ಕೇನದ ಮೂರು ಭಾಗಗಳನ್ನು ನಾಲ್ಕು ಅಧ್ಯಾಯಗಳಾಗಿ ವಿಂಗಡಿಸಿದ್ದಾರೆ. ಕೇನೋಪನಿಷತ್ತಿನಲ್ಲಿ ಸಗುಣ ಮತ್ತು ನಿರ್ಗುಣ ಬ್ರಹ್ಮಗಳ ಚರ್ಚೆಯಿದೆ. 

೪.೪. ಅಥರ್ವವೇದ 

೪.೪.೧. ಸಂಹಿತೆ

ಅಥರ್ವವೇದವನ್ನು ಅಥರ್ವಾಂಗೀರಸವೇದ, ಭೃಗ್ವಂಗೀರಸವೇದ, ಬ್ರಹ್ಮವೇದವೆಂದೂ ಕರೆಯುತ್ತಾರೆ. ವಿಷಯದಲ್ಲಿ ಮಿಕ್ಕವೇದಗಳಗಿಂತ ಅಥರ್ವವೇದವು ಭಿನ್ನ. ಅಥರ್ವವೇದದ ಭಾಷಾಶೈಲಿ ಋಗ್ವೇದವನ್ನು ಹೋಲುತ್ತದೆ. ಆದರೆ ಛಂದಸ್ಸುಗಳಲ್ಲಿ ಕಟ್ಟುನಿಟ್ಟಾದ ಕ್ರಮವಿಲ್ಲ. ಅಥರ್ವವೇದದಲ್ಲಿ ದೇವತಾ ಸ್ತೋತ್ರಗಳು, ಯಜ್ಞರೂಪ ಮಂತ್ರಗಳಲ್ಲದೆ, ಚಿಕಿತ್ಸಾ ವಿಧಾನಗಳು, ಗಿಡ ಮೂಲಿಕೆಗಳು, ಮನುಷ್ಯನ ವ್ಯಕ್ತಿತ್ವ, ವಿವಿಧ ಕರ್ಮಗಳು, ಭೂತ-ಪ್ರೇತ ಕುರಿತಾದ ವಿಷಯಗಳೂ ಬರುತ್ತವೆ. ಅಥರ್ವವೇದಕ್ಕೆ ೯ ಶಾಖೆಗಳಿವೆ, ಅದರಲ್ಲಿ ಪಿಪ್ಪಲಾದ ಶಾಖೆಯೇ ಮುಖ್ಯವಾದದ್ದು.

ಅಥರ್ವವೇದದಲ್ಲಿ ೨೦ ಭಾಗಗಳಿವೆ. ೨೦ನೇ ಭಾಗದ ಬಹುತೇಕ ಎಲ್ಲ ಮಂತ್ರಗೂ ಋಗ್ವೇದ ಮಂತ್ರಗಳು. ಈ ೨೦ ಭಾಗಗಳಲ್ಲಿ ೭೩೧ ಸೂಕ್ತಗಳೂ, ಸುಮಾರು ೧೨ಸಾವಿರ ಋಕ್ಕುಗಳೂ ಇವೆ. ಅಥರ್ವವೇದದ ಅನೇಕ ಸೂಕ್ತಗಳು ಒಂದರಿಂದ ಐದು ಮಂತ್ರಗಳ ಚಿಕ್ಕ-ಚಿಕ್ಕ ಸೂಕ್ತಗಳು.

೪.೪.೨. ಬ್ರಾಹ್ಮಣ-ಅರಣ್ಯಕ-ಉಪನಿಷತ್ತುಗಳು

ಅಥವಾವೇದದ ಬ್ರಾಹ್ಮಣ ಗೋಪಥ ಬ್ರಾಹ್ಮಣ. ಅರಣ್ಯಕಗಳ ಬಗ್ಗೆ ತಿಳಿದಿಲ್ಲ. ಅಥರ್ವವೇದದಲ್ಲಿ ಮೂರು ಮುಖ್ಯ ಉಪನಿಷತ್ತುಗಳಿವೆ: ಪ್ರಶ್ನ, ಮಾಂಡೂಕ್ಯ, ಮುಂಡಕ. ಪ್ರಶ್ನೋಪನಿಷತ್ತು ಹೆಸರೇ ತಿಳಿಸುವಂತೆ ಪ್ರಶ್ನೋತ್ತರ ರೂಪದಲ್ಲಿದೆ. ಇದರಲ್ಲಿ ೬ ಪ್ರಶ್ನೆಗಳಿವೆ. ಮಾಂಡೂಕ್ಯ ಉಪನಿಷತ್ತು ೧೨ ಮಂತ್ರಗಳ ಮುಖ್ಯೋಪನಿಷತ್ತುಗಳಲ್ಲಿಯೇ ಅತ್ಯಂತ ಸಣ್ಣ ಉಪನಿಷತ್ತು. ಜಾಗ್ರತ್, ಸ್ವಪ್ನ, ಸುಷುಪ್ತಿ, ತುರ್ಯಗಳೆಂಬ ನಾಲ್ಕು ಅವಸ್ಥೆಗಳ ಕುರಿತು ಈ ಉಪನಿಷತ್ತು ವಿವರಿಸುತ್ತದೆ. ಅದ್ವೈತ ಅಥರ್ವವೇದದ ಮಹಾವಾಕ್ಯವಾದ 'ಅಯಮಾತ್ಮಾ ಬ್ರಹ್ಮ' ಎಂಬ ವಾಕ್ಯವು ಮಾಂಡೂಕ್ಯೋಪನಿಷತ್ತಿನ ಎರಡನೇ ಮಂತ್ರದಲ್ಲಿ ಬರುತ್ತದೆ. ಮುಂಡಕೋಪನಿಷತ್ತಿನಲ್ಲಿ ಮೂರು ಮುಂಡಕಗಳು-ಆರು ಕಾಂಡಗಳು-೬೪ ಮಂತ್ರಗಳಿವೆ. ಭಾರತದ ರಾಷ್ಟ್ರ ಲಾಂಛನವಾದ ಅಶೋಕದಲ್ಲಿ ಕೆತ್ತಿರುವ 'ಸತ್ಯಮೇವ ಜಯತೆ' ಎಂಬ ವಾಕ್ಯ ಮುಂಡಕೋಪನಿಷತ್ತಿನದು.

೫. ವೇದಾಂಗಗಳು

ವೇದಾಂಗಗಳು ವೇದಗಳ ಭಾಗಗಳಲ್ಲ. ಇವು ವೇದಗಳನ್ನು ಕಲಿಯಲು, ಅರ್ಥ ಮಾಡಿಕೊಳ್ಳಲು ಉಪಯುಕ್ತವಾದಗ್ರಂಥಗಳು. ವೇದಗಳು ಸಾವಿರಾರು ವರ್ಷಗಳಿಂದ ಶಾಖಾ ಭೇದಗಳನ್ನು ಹೊರತುಪಡಿಸಿ ಸ್ವರ ಮಾತ್ರೆಗಳಲ್ಲಿ ಶಿಥಿಲವಾಗದೆ ಇರುವುದಕ್ಕೆ ಕಾರಣ ವೇದಾಂಗಗಳು. ಆರು ವೇದಾಂಗಗಳಿವೆ: ಶಿಕ್ಷಾ, ವ್ಯಾಕರಣ, ಛಂದಸ್ಸು, ನಿರುಕ್ತ, ಜ್ಯೋತಿಷ ಮತ್ತು ಕಲ್ಪ. ವೇದಾಂಗಗಳು ಸ್ಮೃತಿಗಳು. ಅಂದರೆ ನೆನಪಿನಲ್ಲಿಟ್ಟುಕೊಳ್ಳಬೇಕಾದವು.

೫.೧. ಶಿಕ್ಷಾ 

ಶಿಕ್ಷಾ ಎಂದರೆ ವೇದಗಳನ್ನು ಸ್ವರಸಹಿತವಾಗಿ ಉಚ್ಚಾರಣಾ ದೋಷಗಳಿಲ್ಲದೆ ಪಠಿಸುವುದನ್ನು ಕಲಿಸುವ ಶಾಸ್ತ್ರ. ವೇದದ ಪ್ರತಿಶಾಖೆಗೂ ಅದರದೇ ಆದ ಪ್ರತ್ಯೇಕ ಶಿಕ್ಷಾ ಗ್ರಂಥಗಳಿವೆ. ಈ ಗ್ರಂಥಗಳನ್ನು 'ಪ್ರತಿಶಾಖ್ಯಾ' ಎಂದು ಕರೆಯುತ್ತಾರೆ. ಋಗ್ವೇದದಕ್ಕೆ ಶಾಕಲ ಶಾಖೆಯ ಪ್ರತಿಶಾಖ್ಯೆ ಪ್ರಸಿದ್ಧಿಯಾಗಿದೆ. ಕೃಷ್ಣಯಜುರ್ವೇದಕ್ಕೆ ತೈತ್ತಿರೀಯ ಪ್ರತಿಶಾಖ್ಯೆ, ಶುಕ್ಲ ಯಜುರ್ವೇದಕ್ಕೆ ವಾಜಸನೇಯಿ ಪ್ರತಿಶಾಖ್ಯೆ, ಸಾಮವೇದಕ್ಕೆ ಸಾಮವೇದ ಪ್ರತಿಶಾಖ್ಯೆ, ಅಥರ್ವವೇದಕ್ಕೆ ಅಥರ್ವವೇದ ಪ್ರತಿಶಾಖ್ಯೆ ಇರುವುದು.

ಪ್ರತಿಶಾಖ್ಯ ಗ್ರಂಥ ಲಕ್ಷಣಗಳನ್ನು ಶಾಕಾಲ ಪ್ರತಿಶಾಖ್ಯೆಯ ಉದಾಹರಣೆಯೊಂದಿಗೆ ತಿಳಿಯಬಹುದು. ಶಾಕಾಲ ಪ್ರತಿಶಾಖ್ಯೆಯಲ್ಲಿ ೩ ಅಧ್ಯಾಯಗಳಿವೆ. ಒಂದೊಂದು ಅಧ್ಯಾಯದಲ್ಲಿ ೬ ಪಟಲಗಳೆಂಬ ಉಪವಿಭಾಗಗಳಿವೆ. ಮೊದಲ ಪಟಲದಲ್ಲಿ ಅಕ್ಷರ, ಸ್ವರ, ವ್ಯಂಜನಗಳ ಬಗ್ಗೆ ವಿವರಣೆಯಿದೆ. ಎರಡನೆಯ ಪಟಲದಲ್ಲಿ ಅಕ್ಷರ ಜೋಡಣೆಯ ಬಗ್ಗೆ ವಿವರಿಸಲಾಗಿದೆ. ಮೂರನೆಯ ಪಟಲ ಸ್ವರ ಪಟಲ. ಇದರಲ್ಲಿ ಉಚ್ಛಾರಣಾ ವಿಧಾನಗಳನ್ನು ತಿಳಿಸಲಾಗಿದೆ. ೪-೬ನೇ ಪಟಲಗಳಲ್ಲಿ ವ್ಯಂಜನ ಸಂಧಿಗಳನ್ನೂ,  ೭-೯ನೇ ಪಟಲಗಳಲ್ಲಿ ಸ್ವರಿತ ಸ್ವರದ ಬಗ್ಗೆಯೂ, ಮಿಕ್ಕ ಪಟಲಗಳಲ್ಲಿಅಕ್ಷರ ಉತ್ಪತ್ತಿ ಮತ್ತು ಛಂದಸ್ಸುಗಳನ್ನು ಕೊಡಲಾಗಿದೆ.

ಶಿಕ್ಷಾ ಶಾಸ್ತ್ರದಲ್ಲಿ ಆರು ಭಾಗಗಳಿವೆ: ವರ್ಣ, ಸ್ವರ, ಮಾತ್ರ, ಬಲ, ಸಾಮ ಮತ್ತು ಸಂತಾನ.

ವರ್ಣ: ವರ್ಣ ಎಂದರೆ ಅಕ್ಷರಗಳು. 'ತ್ರಿಶಷ್ಠಿಶ್ಚತುಃಶಷ್ಟಿರ್ವಾ ವರ್ಣಾಃ ಸಂಭವತೋ ಮಶಾಃ' ಎಂಬಂತೆ ಸಂಸ್ಕೃತ ಭಾಷೆಯಲ್ಲಿ ೬೩ ಅಥವಾ ೬೪ ವರ್ಣಗಳಿವೆ.

ಸ್ವರ: ಸ್ವರಗಳು ಅಕ್ಷರಗಳನ್ನು ಉಚ್ಚರಿಸಲು ಸಹಾಯ ಮಾಡುವಂಥಹವು. ಸ್ವರಗಳಲ್ಲಿ ಮೂರು ವಿಧಗಳಿವೆ: ಉದಾತ್ತ, ಅನುದತ್ತ ಮತ್ತು ಸ್ವರಿತ. ಸಾಧಾರಣ ಧ್ವನಿಯಲ್ಲಿ ಉಚ್ಚರಿಸುವ ಅಕ್ಷರಗಳು ಉದಾತ್ತಸ್ವರಗಳು. ಕೊಂಚ ಕಡಿಮೆ ಧ್ವನಿಯಲ್ಲಿ ಉಚ್ಚರಿಸುವ ಅಕ್ಷರಗಳು ಅನುದಾತ್ತ ಸ್ವರಗಳು. ಸ್ವರಿತಗಳನ್ನು ಸ್ವಲ್ಪ ಏರಿನ ಧ್ವನಿಯಲ್ಲಿ ಉಚ್ಚರಿಸುತ್ತಾರೆ. ದೀರ್ಘಾಕ್ಷರ ಸ್ವರಿತಗಳನ್ನು ದೀರ್ಘಸ್ವರಿತಗಳೆಂದು ಕರೆಯುತ್ತಾರೆ. ಮಂತ್ರಗಳನ್ನು ಬರೆಯುವಾಗ ಉದಾತ್ತ ಸ್ವರಗಳಿಗೆ ಯಾವುದೇ ಚಿಹ್ನೆ ಬಳಸುವುದಿಲ್ಲ. ಅನುದಾತ್ತ ಸ್ವರದ ಕೆಳಗೆ '_' ಚಿಹ್ನೆಯನ್ನು ಬಳಸುತ್ತಾರೆ. ಸ್ವರಿತ ಸ್ವರದ ಮೇಲೆ '।' ಚಿಹ್ನೆಯನ್ನು ಬಳಸುತ್ತಾರೆ. ದೀರ್ಘಸ್ವರಿತದ ಮೇಲೆ '।।' ಚಿಹ್ನೆಯನ್ನು ಬಳಸುತ್ತಾರೆ. ಕೆಲವು ಉದಾಹರಣೆಗಳು:

೧. ಋಗ್ವೇದದ ಮೊದಲ ಮಂತ್ರ:

         ।।                      ।                    ।                        ।।
ಅಗ್ನಿಮೀಳೇ ಪುರೋಹಿತಂ ಯಜ್ಞಸ್ಯ ದೇವಮೃತ್ವಿಜಂ ।
_                   _                                       _       _
          ।।                      ।
ಹೋತಾರಂ ರತ್ನ ಧಾತಮಂ  ।।
                        _

ಧ್ವನಿಮುದ್ರಣ:
https://www.aurobindo.ru/workings/matherials/rigveda/01/01-001.htm

ಮೇಲಿನ ಮಂತ್ರವು ಸ್ವರಿತ ದೀರ್ಘ ಸ್ವರಿತಗಳ ಉಚ್ಚಾರಣೆಯನ್ನು ಸ್ಪಷ್ಟಪಡಿಸುತ್ತದೆ.

೨. ಋಗ್ವೇದ ಮೊದಲ ಮಂಡಲ ನಾಲ್ಕನೇ ಸೂಕ್ತದ ಮೊದಲನೇ ಮಂತ್ರ:

                                      ।।               ।।                         ।।
ಸುರೂಪಕೃತ್ನುಮೂತಯೇ ಸುದುಘಾಮಿವ ಗೋದುಹೇ ।
_ _ _ _ _ _ _

।
ಜುಹೂಮಸಿ ದ್ಯವಿದ್ಯವಿ ॥
_    _         _

ಧ್ವನಿಮುದ್ರಣ:
https://www.aurobindo.ru/workings/matherials/rigveda/01/01-004.htm

ಈ ಮಂತ್ರದ ಸಾಲುಗಳ ಮೊದಲ ಪದಗಳು ಅನುದಾತ್ತಗಳ ಉಚ್ಚಾರಣೆಯನ್ನು ಸ್ಪಷ್ಟಪಡಿಸುತ್ತದೆ.

ಮಂತ್ರಗಳಲ್ಲಿ ಉದಾತ್ತ, ಅನುದಾತ್ತ, ಸ್ವರಿತಗಳನ್ನು ತಪ್ಪಾಗಿ ಉಚ್ಚರಿಸಿದರೆ ಅರ್ಥ ವ್ಯತ್ಯಾಸವಾಗುವ ಪ್ರಮಾದವಿರುತ್ತದೆ.

ಮಾತ್ರೆ: 'ಅ' ಎಂಬ ಸ್ವರವನ್ನು ಉಚ್ಚರಿಸಲು ಬೇಕಾಗುವ ಕಾಲವನ್ನು ಮಾತ್ರೆ ಎಂದು ಕರೆಯುತ್ತಾರೆ. ಒಂದು ಮಾತ್ರಾ ಅಕ್ಷರವನ್ನು ಹ್ರಸ್ವಸ್ವರವೆಂದೂ, ಎರೆಡು ಮಾತ್ರಾಕಾಲದಲ್ಲಿ ಉಚ್ಚರಿಸುವ ಅಕ್ಷರವನ್ನು ದೀರ್ಘಸ್ವರವೆಂದೂ, ಮೂರು ಮಾತ್ರಾಕಾಲದಲ್ಲಿ ಉಚ್ಚರಿಸುವ ಸ್ವರವನ್ನು ಪ್ಲುತವೆಂದೂ ಕರೆಯುತ್ತಾರೆ. ಪ್ಲುತವನ್ನು ಸೂಚಿಸಲು ಅಕ್ಷರದ ಮುಂದೆ '೩' ಚಿಹ್ನೆಯನ್ನು ಬರೆಯುತ್ತಾರೆ. ಎರೆಡು ಮಾತ್ರಾ ಪ್ಲುತವೂ ಉಂಟು. ಪ್ಲುತ ಸ್ವರಗಳ ಉಚ್ಚಾರಣಾ ಉದಾಹರಣೆಗಳು ಮೇಲೆ ಕೊಟ್ಟಿರುವ ಧ್ವನಿ ಮುದ್ರಣಿಕೆಗಳಲ್ಲಿಯೇ ಇದೆ. ಮೊದಲ ಮುದ್ರಿಕೆಯು ಋಗ್ವೇದದ ಮೊದಲನೇ ಸೂಕ್ತ. ಅದರ ಎರಡನೆಯ ಮಂತ್ರದಲ್ಲಿ ಎರೆಡು ಮಾತ್ರಾಕಾಲದ ಪ್ಲುತ ಸ್ವರವಿದೆ. ಎರಡನೆಯ ಮುದ್ರಣ ಋಗ್ವೇದದ ನಾಲ್ಕನೇ ಸೂಕ್ತ. ಅದರ ಕೊನೆಯ ಮಂತ್ರದಲ್ಲಿ ಮೂರು ಮಾತ್ರಾಕಾಲದ ಪ್ಲುತ ಸ್ವರವಿದೆ.

ಬಲ: ಬಲವೆಂದರೆ ಉಚ್ಚಾರಣೆಯ ಸ್ಥಾನ ಪ್ರಯತ್ನಗಳು. ಸ್ಥಾನವೆಂದರೆ ನಾಲಿಗೆಯು ಬಾಯಿಯನ್ನು ಸ್ಪರ್ಶಿಸುವ ಸ್ಥಳಗಳು. ಕಂಠ, ದಂತ ಮುಂತಾದ ೮ ಸ್ಥಾನಗಳಿವೆ. ಸ್ವರಗಳನ್ನು ಉಚ್ಚರಿಸುವಾಗ ನಾಲಿಗೆಯು ಬಾಯಿಯನ್ನು ಸ್ಪರ್ಶಿಸುವುದಿಲ್ಲ. ಪ ವರ್ಗದ ಸ್ವರಗಳನ್ನು ಉಚ್ಚರಿಸುವಾಗ ನಾಲಿಗೆಯು ತುಟಿಯನ್ನು ಸ್ಪರ್ಶಸುತ್ತದೆ ಇತ್ಯಾದಿ.

ಸಾಮ: ಸಾಮವು ಯಾವ ಅಕ್ಷರವನ್ನು ಹ್ರಸ್ವವಾಗಿ ಪಠಿಸಬೇಕು ಯಾವುದನ್ನು ದೀರ್ಘವಾಗಿ ಪಠಿಸಬೇಕು ಎಂಬುದನ್ನು ತಿಳಿಸುತ್ತದೆ. ಮಂತ್ರಗಳನ್ನು ಉಚ್ಚರಿಸುವಾಗ ಅತಿ ಮೆಲ್ಲಗೆಯೂ, ಅತಿ ರಾಗವಾಗಿಯೂ ಉಚ್ಛರಿಸಬಾರದು. ಸಾಮಕ್ಕೆ ತಕ್ಕಂತೆ - ಅಂದರೆ ಅಕ್ಷರಗಳನ್ನು ಹ್ರಸ್ವ, ದೀರ್ಘ, ಸಂಯುಕ್ತಾಕ್ಷರಗಳನ್ನು ಸ್ಪಷ್ಟವಾಗಿ ಕೇಳಿಸುವಂತೆ ಉಚ್ಚರಿಸಬೇಕು.

ಸಂತಾನ: ಸಂತಾನವು ವಿವಿಧ ಪದಗಳ ಸಂಧಿ ನಿಯಮಾನುಕ್ರಮವನ್ನು ತಿಳಿಸುತ್ತದೆ.

೫.೨. ವ್ಯಾಕರಣ

ವೇದ ವ್ಯಾಕರಣ ಗ್ರಂಥಗಳ ಬಹುತೇಕ ಭಾಗಗಳು ಈಗ ಲುಪ್ತವಾಗಿದೆ. ಅಲ್ಲಲ್ಲಿ ಕೆಲವು ಅಂಶಗಳು ಸಿಗುತ್ತವೆ. ವ್ಯಾಕರಣ ಗ್ರಂಥಕಾರರಲ್ಲಿ ಶಕಟಯಾನ, ಗಾರ್ಗ್ಯ, ಶಾಕಲ್ಯ ಮತ್ತು ಯಾಸ್ಕರು ಮುಖ್ಯರು. ವೇದಕಾಲದ ಸಂಸ್ಕೃತ ವ್ಯಾಕರಣಕ್ಕೂ ಆಧುನಿಕ ಸಂಸ್ಕೃತ ವ್ಯಾಕರಣಕ್ಕೂ ವ್ಯತ್ಯಾಸಗಳಿವೆ. ನಮಗೆ ಈಗ ಸಿಗುವ ಪಾಣಿನಿಯ ಎಂಟು ಅಧ್ಯಾಯಗಳ ಅಷ್ಟಾಧ್ಯಾಯಿ ಎಂಬ ವ್ಯಾಕರಣ ಗ್ರಂಥವೇ ಪುರಾತನವಾದುದು. ಈ ಗ್ರಂಥವು ಆಧುನಿಕ ಸಂಸ್ಕೃತ ವ್ಯಾಕರಣವನ್ನೇ ಪ್ರಧಾನವಾಗಿ ವಿವರಿಸಿರುವುದರಿಂದ ಇದನ್ನು ವೇದಾಂಗವಾಗಿ ಪರಿಗಣಿಸುವುದಿಲ್ಲ. ಆದರೂ ಪಾಣಿನೀಯ ವ್ಯಾಕರಣ ಗ್ರಂಥದಲ್ಲಿ ವೇದ ವ್ಯಾಕರಣದ ಕೆಲವು ಭಾಗಗಳು ಸಿಗುತ್ತವೆ. 

ವೇದದ ಅರ್ಥವನ್ನು ತಿಳಿಯಲು, ವೇದ ಮಂತ್ರಗಳು ಸ್ವರ, ಮಾತ್ರಾದಿಗಳ ವ್ಯತ್ಯಾಸವಾಗದಂತೆ ಕಾಪಾಡಲು, ಮಂತ್ರಗಳ ಲಿಂಗ, ವಚನಾದಿಗಳನ್ನು ತಿಳಿಯಲು, ಸಂಧಿ ಸಮಾಸಗಳನ್ನು ತಿಳಿಯಲು ವ್ಯಾಕರಣ ಶಾಸ್ತ್ರವೇ ಮುಖ್ಯವಾದುದು.

೫.೩. ಛಂದಸ್ಸು

ಉಚ್ಚ ಸಾಹಿತ್ಯದ ಬಹುತೇಕ ಗ್ರಂಥಗಳು ಛಂದೋಬದ್ದವಾಗಿವೆ. ಛಂದೋಬದ್ಧವಾದ ಪದ್ಯಗಳನ್ನು ನೆನಪಿನಲ್ಲಿಟ್ಟುಕೊಳ್ಳಲು ಅನುಕೂಲವಾದ್ದರಿಂದ ಬರವಣಿಗೆಯಿಲ್ಲದ ಆ ಕಾಲದಲ್ಲಿ ವೇದಗಳನ್ನು ಛಂದೋಬದ್ದವಾಗಿ ರಚಿಸಿರುವುದು ಸ್ವಾಭಾವಿಕವಾಗಿದೆ. 'ಛಂದಃ ಪಾದೌ ತು ವೇದಸ್ಯ' ಎಂಬಂತೆ ಮನುಷ್ಯನಿಗೆ ಕಾಲುಗಳು ಎಷ್ಟು ಮುಖ್ಯವೋ ವೇದಗಳಿದೆ ಛಂದಸ್ಸು ಅಷ್ಟು ಮುಖ್ಯ.  ಛಂದಸ್ಸುಗಳು ವೇದ ಮಂತ್ರಗಳ (ಪದ್ಯರೂಪ ಮಂತ್ರಗಳ) ವೃತ್ತಗಳ ಕುರಿತು ಚರ್ಚಿಸುತ್ತದೆ. ವೇದಗಳಲ್ಲಿ ಋಗ್, ಸಾಮ ಮತ್ತು ಹಲವು ಅಥರ್ವ ವೇದದ ಭಾಗಗಳು ಪದ್ಯರೂಪದಲ್ಲಿವೆ. ಯಜುರ್ವೇದವು ಗದ್ಯ ರೂಪದಲ್ಲಿದೆ. ಪಿಂಗಲರಿಂದ ರಚಿತವಾದ ಛಂದಸ್ಸಿನ ಕುರಿತಾದ ಗ್ರಂಥವೇ ಈಗ ಬಳಕೆಯಲ್ಲಿದೆ. ಇದರಲ್ಲಿ ವೇದ ವೃತ್ತಗಳಲ್ಲದೆ ಆಧುನಿಕ ಸಂಸ್ಕೃತದ ಛಂದಸ್ಸುಗಳೂ ಚರ್ಚಿಸಲ್ಪಟ್ಟಿದೆ. 

ಛಂದಸ್ಸುಗಳು ಋಕ್ಕುಗಳಲ್ಲಿನ ಅಕ್ಷರ ಸಂಖ್ಯೆಯ ಅನುಗುಣವಾಗಿ ವಿಂಗಡಿಸಲ್ಪಟ್ಟಿದೆ. ವೇದ ಛಂದಸ್ಸುಗಳಲ್ಲಿ ಮುಖ್ಯವಾದವು ಇಂತಿವೆ - ಇಲ್ಲಿನ ಉದಾಹರಣಾ ಋಕ್ಕುಗಳಲ್ಲಿ ಸ್ವರ ವಿನ್ಯಾಸವನ್ನು ಕೊಟ್ಟಿಲ್ಲ:

೧. ಗಾಯತ್ರಿ: ಗಾಯತ್ರಿ ಛಂದಸ್ಸಿನಲ್ಲಿ ೮ ಅಕ್ಷರಗಳ ಮೂರು ಪಾದಗಳಿವೆ (ಪಾದ = ಸಾಲು). ಒಟ್ಟು ೨೪ ಅಕ್ಷರಗಳು. ಬರೆಯುವಾಗ ಅಥವಾ ಉಚ್ಚರಿಸುವಾಗ ಮೊದಲ ಎರೆಡು ಪಾದಗಳನ್ನು ಒಟ್ಟಿಗೆ ಹೇಳಲಾಗುತ್ತದೆ. ಮೂರನೇ ಪಾದವನ್ನು ಬೇರೆಯಾಗಿ ಹೇಳಲಾಗುತ್ತದೆ. ಉದಾಹರಣೆ: 

ಋಗ್ವೇದ ಮೊದಲ ಮಂಡಲ, ೪೩ನೇ ಸೂಕ್ತ, ಮೊದಲನೇ ಮಂತ್ರ.

                        ಕದ್ರುದ್ರಾಯ ಪ್ರಚೇತಸೇ ಮೀಳ್ಹುಷ್ಟಮಾಯ ತವ್ಯಸೇ।
                        ವೋಚೇಮ ಶಂತಮಂ ಹೃದೇ ।।
                   
೨. ಉಷ್ಣಿಕ್: ಉಷ್ಣಿಕ್ ಛಂದಸ್ಸಿನಲ್ಲಿ ಒಟ್ಟು ೨೮ ಮಂತ್ರಗಳು. ಇದರಲ್ಲಿ ಮೊದಲೆರೆಡು ಪಾದಗಳಲ್ಲಿ ೮ ಅಕ್ಷರಗಳೂ ಕೊನೆಯ ಪಾದದಲ್ಲಿ೧೨ ಅಕ್ಷರಗಳೂ ಇವೆ. ಉದಾಹರಣೆ:

ಋಗ್ವೇದ ಮೊದಲ ಮಂಡಲ, ೯೨ನೇ ಸೂಕ್ತ, ಹದಿನಾರನೇ ಮಂತ್ರ.

                 ಅಶ್ವಿನಾ ವರ್ತಿರಸ್ಮದಾ ಗೋಮದ್ದಸ್ರಾ ಹಿರಣ್ಯವತ್ ।
                 ಅರ್ವಾಗ್ರಥಂ ಸಮನಸಾ ನಿ ಯಚ್ಛತಮ್ ।।

೩. ಅನುಷ್ಟುಪ್: ಅನುಷ್ಟುಪ್ ಛಂದಸ್ಸು ಬಹಳ ಪ್ರಸಿದ್ದವಾದುದು. ರಾಮಾಯಣ ಮಹಾಭಾರತಗಳು ಅನುಷ್ಟುಪ್ ಛಂದಸ್ಸಿನಲ್ಲಿದೆ. ಅನುಷ್ಟುಪ್ ಛಂದಸ್ಸಿನಲ್ಲಿ ೮ ಅಕ್ಷರಗಳ ನಾಲ್ಕು ಪಾದಗಳಿವೆ. ಒಟ್ಟು ೩೨ ಅಕ್ಷರಗಳು. ಉದಾಹರಣೆ:

ಋಗ್ವೇದ ಹತ್ತನೇ ಮಂಡಲ, ೯೦ನೇ ಸೂಕ್ತ (ಪುರುಷ ಸೂಕ್ತ), ನಾಲ್ಕನೇ ಮಂತ್ರ. 

                 ತ್ರಿಪಾದೂರ್ಧ್ವ ಉದೖತ್ಪುರುಷಃ ಪಾದೋಸ್ಯೇಹಾಭವತ್ಪುನಃ |
                 ತತೋ ವಿಶ್ವಂವ್ಯಕ್ರಾಮತ್ಸಾಶನಾನಶನೇ ಅಭಿ ||

೪. ಬೃಹತೀ: ಬೃಹತೀ ಛಂದಸ್ಸಿನಲ್ಲಿ ಒಟ್ಟು ೩೬ ಅಕ್ಷರಗಳಿವೆ. ಒಂದು, ಎರಡು ಮತ್ತು ನಾಲ್ಕನೇ ಪಾದಗಳಲ್ಲಿ ೮ ಅಕ್ಷರಗಳು ಮತ್ತು ಮೂರನೇ ಪಾದದಲ್ಲಿ ೧೨ ಅಕ್ಷರಗಳೂ ಇರುತ್ತವೆ ಇರುತ್ತವೆ. ಉದಾಹರಣೆ:

ಋಗ್ವೇದ ಮೊದಲ ಮಂಡಲ ೩೬ನೇ ಸೂಕ್ತ, ಮೊದಲ ಮಂತ್ರ.

                        ಪ್ರ ಯದಿತ್ಥಾ ಪರಾವತಃ ಶೋಚಿರ್ನ ಮಾನಸಮಸ್ಯಥ ।
                 ಕಸ್ಯ ಕ್ರತ್ವಾ ಮರುತಃ ಕಸ್ಯ ವರ್ಪಸಾ ಕಂ ಯಾಥ ಕಂ ಹ ಧೂತಯಃ ।।   

೫. ಪಂಕ್ತಿ: ಪಂಕ್ತಿ ಛಂದಸ್ಸಿನಲ್ಲಿ ೮ ಅಕ್ಷರಗಳ ೫ ಪಾದಗಳಿವೆ. ಒಟ್ಟು ೪೦ ಅಕ್ಷರಗಳು. ಉದಾಹರಣೆ:

ಋಗ್ವೇದ ಮೊದಲ ಮಂಡಲ, ೮೦ನೇ ಸೂಕ್ತ, ಮೊದಲ ಮಂತ್ರ.

                 ಇತ್ಥಾ ಹಿ ಸೋಮ ಇನ್ಮದೇ ಬ್ರಹ್ಮಾ ಚಕಾರ ವರ್ಧನಮ್ ।
            ಶವಿಷ್ಠ ವಜ್ರಿನ್ನೋಜಸಾ ಪೃಥಿವ್ಯಾ ನಿಃ ಶಶಾ ಅಹಿಮರ್ಚನ್ನನು ಸ್ವರಾಜ್ಯಮ್ ।।

೬. ತ್ರಿಷ್ಟುಪ್: ತ್ರಿಷ್ಟುಪ್ ಛಂದಸ್ಸಿನಲ್ಲಿ ಒಟ್ಟು ೪೪ ಅಕ್ಷರಗಳಿವೆ. ಇವು ೧೧ ಅಕ್ಷರಗಳ ನಾಲ್ಕು ಪಾದಗಳಾಗಿ ವಿಂಗಡಿಸಲ್ಪಟ್ಟಿದೆ. ಉದಾಹರಣೆ:

ಋಗ್ವೇದ ಮೊದಲ ಮಂಡಲ, ೯೯ನೇ ಸೂಕ್ತ, ಮೊದಲ ಮಂತ್ರ.

               ಜಾತವೇದಸೇ ಸುನವಾಮ ಸೋಮಮರಾತೀಯತೋ ನಿದಹಾತಿ ವೇದಃ ।
               ಸ ನಃ ಪರ್ಷದತಿ ದುರ್ಗಾಣಿ ವಿಶ್ವಾ ನಾವೇವ ಸಿಂಧುಂ ದುರಿತಾತ್ಯಗ್ನಿಃ ।।

೭. ಜಗತೀ: ಜಗತೀ ಛಂದಸ್ಸಿನಲ್ಲಿ ೧೨ ಅಕ್ಷರಗಳ ನಾಲ್ಕು ಪಾದಗಳಿರುತ್ತವೆ. ಒಟ್ಟು ೪೮ ಅಕ್ಷರಗಳು. ಉದಾಹರಣೆ:

ಋಗ್ವೇದ ಮೊದಲ ಮಂಡಲ, ೧೪೧ನೇ ಸೂಕ್ತ (ಬಳಿತ್ಥಾ ಸೂಕ್ತ), ಮೊದಲ ಮಂತ್ರ.

               ಬಳಿತ್ಥಾ ತದ್ವಪುಷೇ ಧಾಯಿ ದರ್ಶತಂ ದೇವಸ್ಯ ಭರ್ಗಃ ಸಹಸೋ ಯತೋ ಜನಿ।
           ಯದೀಮುಪ ಹ್ವರತೇ ಸಾಧತೇ ಮತಿಋತಸ್ಯ ಧೇನಾ ಅನಯಂತ ಸಸೃತಃ ।।

ಈ ೭ ಛಂದಸ್ಸುಗಳಲ್ಲದೆ ೭೬, ೮೦, ೮೪, ೮೮, ೯೨, ೯೬ ಅಕ್ಷರಗಳ ಛಂದಸ್ಸುಗಳೂ ಇವೆ. ಆದರೆ ಅವು ಅಷ್ಟಾಗಿ ಉಪಯೋಗಿಸಲ್ಪಟ್ಟಿಲ್ಲ. ಮೇಲೆ ಹೇಳಿದ ಛಂದಸ್ಸುಗಳಲ್ಲಿಯೂ ವಿವಿಧ ವಿನ್ಯಾಸಗಳಿವೆ. ಆಧುನಿಕ ಸಂಸ್ಕೃತದಲ್ಲಿ ಉಪಯೋಗಿಸುವ ಶಾರ್ದೂಲ ವಿಕ್ರೀಡಿತ, ಸ್ರಗ್ಧರೆ, ಮತ್ತೇಭ ವಿಕ್ರೀಡಿತ ಮುಂತಾದ ಛಂದಸ್ಸುಗಳು ವೇದದಲ್ಲಿಲ್ಲ.

೫.೪. ನಿರುಕ್ತ

ವೇದಾರ್ಥಕ್ಕೆ ಸಹಾಯವಾದ ಶಾಸ್ತ್ರ ನಿರುಕ್ತ. ನಿರುಕ್ತಶಾಸ್ತ್ರವು ಯಾಸ್ಕರಿಂದ ರಚಿಸಲ್ಪಟ್ಟಿದೆ. ಇದರಲ್ಲಿ ಎರಡು ಭಾಗಗಳಿವೆ. ಮೊದಲನೆಯದು ನಿಘಂಟು. ನಿಘಂಟುವಿನಲ್ಲಿ ಕ್ಲಿಷ್ಟ ಪದಗಳ ಅರ್ಥಗಳ ಪಟ್ಟಿಯಿದೆ. ಎರಡನೆಯದು ನಿರುಕ್ತ. ಇದರಲ್ಲಿ ಪದಗಳ ಉತ್ಪತ್ತಿ, ವ್ಯಾಖ್ಯಾನಗಳಿವೆ. ಆಂಗ್ಲದಲ್ಲಿ ನಿರುಕ್ತವನ್ನು etymology ಎಂದು ಕರೆಯುತ್ತಾರೆ. 

ನಿಘಂಟುವಿನಲ್ಲಿ ಮೂರು ಭಾಗಗಳಿವೆ. ಮೊದಲ ಭಾಗದಲ್ಲಿ ಮೂರು ಭಾಗಗಳಿವೆ. ಎರಡನೆಯ ಮತ್ತು ಮೂರನೆಯ ಭಾಗಗಳಲ್ಲಿ ಒಂದೊಂದು ಅಧ್ಯಾಯವಿದೆ. ಮೊದಲ ಅಧ್ಯಾಯದಲ್ಲಿ ನಾನಾರ್ಥಗಳೂ, ಎರಡನೆಯದರಲ್ಲಿ ಪ್ರಾಣಿಗಳ ಹೆಸರುಗಳು, ಮೂರನೆಯದರಲ್ಲಿ ಮೊದಲ ಮತ್ತು ಎರಡನೆಯ ಅಧ್ಯಾಯಗಳಲ್ಲಿ ಬರುವ ಪದಗಳ ಗುಣಗಳನ್ನು ಹೇಳಿದೆ. ಎರಡನೇ ಭಾಗದಲ್ಲಿ ವೇದದಲ್ಲಿ ಮಾತ್ರ ಕಂಡುಬರುವ, ಈಗ ಬಳಕೆಯಲ್ಲಿಲ್ಲದ ಪದಗಳ ಅರ್ಥಗಳನ್ನು ವಿವರಿಸಲಾಗಿದೆ. ಕೊನೆಯ ಅಧ್ಯಾಯದಲ್ಲಿ ದೇವತೆಗಳ ಕುರಿತಾಗಿ ಹೇಳಲಾಗಿದೆ. 

ನಿರುಕ್ತವು ನಿಘಂಟುವಿನ ವ್ಯಾಖ್ಯಾನವು. ಇದು ವೇದಾರ್ಥಕ್ಕೆ ಬಹು ಮುಖ್ಯವಾದ ಗ್ರಂಥ. ಇಲ್ಲಿ ಕೆಲವು ಕಡೆ ವೇದ ಮಂತ್ರಗಳ ಅರ್ಥವೂ ಕೊಡಲ್ಪಟ್ಟಿದೆ. ನಿರುಕ್ತದಲ್ಲಿ ೧೨ ಅಧ್ಯಾಯಗಳಿವೆ. ಈ ಅಧ್ಯಾಯಗಳಲ್ಲಿ ನಿಘಂಟುವಿನ ಎಲ್ಲ ಅಧ್ಯಾಯಗಳಿಗೆ ವ್ಯಾಖ್ಯಾನಗಳಿವೆ. ವ್ಯಾಖ್ಯಾನಗಳಲ್ಲಿ ಪದಗಳ ಉತ್ಪತ್ತಿ, ಅವುಗಳ ವ್ಯಾಕರಣ ರೀತಿ - ನಾಮಪದ, ಕ್ರಿಯಾಪದ, ಲಿಂಗಗಳು, ನಾನಾರ್ಥಗಳು ಮುಂತಾದವುಗಳ ಬಗ್ಗೆ ಹೇಳಲಾಗಿದೆ. 

ವೇದಾರ್ಥಕ್ಕೆ ಯಾಸ್ಕರ ನಿರುಕ್ತವೇ ದಾರಿದೀಪ. ಯಾವುದೇ ವೇದಾರ್ಥಕಾರನೂ ನಿರುಕ್ತವನ್ನು ಮರೆತು ವೇದಾಭ್ಯಾಸ ಮಾಡುವುದು ಸಾಧ್ಯವಿಲ್ಲ. 

೫.೫. ಜ್ಯೋತಿಷ

ಜ್ಯೋತಿಷ ಶಾಸ್ತ್ರವು ವೇದದಲ್ಲಿ ಮಾಡುವ ಯಜ್ಞ-ಯಾಗಾದಿ ಕ್ರಮಗಳನ್ನು ಮಾಡಬೇಕಾದ ಕಾಲ ಮಹೂರ್ತಗಳನ್ನು ಕುರಿತು ಚರ್ಚಿಸುತ್ತದೆ. ಗ್ರಹಗತಿಗಳಿಂದ ಮನುಷ್ಯನ ಶುಭಾಶುಭ ಫಲಗಳನ್ನು ತಿಳಿಸುವ ಜ್ಯೋತಿಷಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. 

೫.೬. ಕಲ್ಪ

ಕಲ್ಪ ಸೂತ್ರಗಳಲ್ಲಿ ಶ್ರೌತಸೂತ್ರ, ಗೃಹ್ಯಸೂತ್ರ, ಧರ್ಮಸೂತ್ರ, ಶುಲ್ವಸೂತ್ರಗಳೆಂದು ನಾಲ್ಕು ವಿಧ. ಇವುಗಳಲ್ಲಿ ಶ್ರೌತಸೂತ್ರ ಮತ್ತು ಶುಲ್ವಸೂತ್ರಗಳು ವೇದಕ್ಕೆ ನೇರವಾಗಿ ಸಂಬಂಧಪಟ್ಟುವು. ಗೃಹ್ಯ ಮತ್ತು ಧರ್ಮಸೂತ್ರಗಳು ವೇದವನ್ನು ಆಶ್ರಯಿಸಿ ರಚಿಸಿದ ಪ್ರತ್ಯೇಕ ಗ್ರಂಥಗಳು. ಆದ್ದರಿಂದ ಶ್ರೌತ ಮತ್ತು ಶುಲ್ವಸೂತ್ರಗಳನ್ನು ಮಾತ್ರ ವೇದಾಂಗಗಳು. 

ಕಲ್ಪ ಸೂತ್ರಗಳು ಬೇರೆ ಬೇರೆ ವೇದಗಳಿಗೆ ಬೇರೆ ಬೇರೆಯಾಗಿವೆ. ಕಲ್ಪಸೂತ್ರಗಳಿಗೆ ಅವನ್ನು ರಚಿಸಿದ ಋಷಿಗಳ ಹೆಸರಿಡಲಾಗಿದೆ. ಕಲ್ಪ ಸೂತ್ರಗಳಲ್ಲಿ ಯಜ್ಞ ಯಾಗಾದಿಗಳ ಕ್ರಮವೂ, ಅವುಗಳಲ್ಲಿ ಉಪಯೋಗಿಸಬೇಕಾದ ವೇದ ಮಂತ್ರಗಳೂ, ಯಜ್ಞದಲ್ಲಿ ಉಪಯುಕ್ತವಾದ ಅಗ್ನಿಕುಂಡ, ವೇದಿಕೆ, ಸಾಮಗ್ರಿ, ಅವುಗಳ ಪ್ರಮಾಣ ಮುಂತಾದ ವಿಷಯಗಳ ಬಗ್ಗೆ ಚರ್ಚಿಸಲಾಗಿದೆ.

ಋಗ್ವೇದಕ್ಕೆ ಅಶ್ವೀಲಾಯನ ಮತ್ತು ಸಾಂಖ್ಯಾಯನ, ಕೃಷ್ಣ ಯಜುರ್ವೇದಕ್ಕೆ ಬೋಧಾಯನ ಮತ್ತು ಆಪಸ್ಥಂಬ, ಶುಕ್ಲ ಯಜುರ್ವೇದಕ್ಕೆ ಕಾತ್ಯಾಯನ, ಸಾಮವೇದಕ್ಕೆ ಲಾಟ್ಯಾಯನ ಶ್ರೌತಸೂತ್ರಗಳಿವೆ. ಇಂದಿಗೂ ಗೋತ್ರ ಪ್ರವರವನ್ನುಚ್ಚರಿಸುವಾಗ ಆಯಾ ಗೋತ್ರದವರು ಆಯಾ ವೇದಗಳಿಗೆ ಸಂಬಂಧಿಸಿದ ಸೂತ್ರಗಳನ್ನು ಉಚ್ಚರಿಸುತ್ತಾರೆ.

ಈ ಆರು ವೇದಾಂಗಗಳಲ್ಲದೆ ವೇದ ಸೂಕ್ತಗಳನ್ನು, ಅವುಗಳಲ್ಲಿರುವ ಮಂತ್ರ ಸಂಖ್ಯೆಗಳನ್ನು, ಸೂಕ್ತಗಳ ಸೇವಾತೆಗಳನ್ನೂ ತಿಳಿಸುವ ಅನುಕ್ರಮಣಿಕೆಗಳೆಂಬ ಗ್ರಂಥಗಳೂ ಇವೆ.

೬. ವೇದಪಾಠಕ್ರಮ

ಸಾವಿರಾರು ವರ್ಷಗಳ ಕಾಲ ವೇದಗಳು ಅಚ್ಚಳಿಯದಂತೆ ಉಳಿದಿರಬೇಕಾದರೆ ಅದನ್ನು ಕಲಿಯಲು ಒಂದು ಕ್ರಮವಿದ್ದೇ ಇರಬೇಕು. ನಮ್ಮ ಋಷಿಗಳು ವೇದಪಾಠಕ್ಕೆ ಕ್ರಮವನ್ನು ಗೊತ್ತುಪಡಿಸಿದ್ದಾರೆ. ವೇದಗಳನ್ನು ಗುರುವಿನ ಅಥವಾ ತಂದೆಯ ಅಭಿಮುಖವಾಗಿ ಕುಳಿತು ಕಲಿಯಬೇಕು. ಈ ಕಲಿಕೆಗೆ ಒಂದು ಕ್ರಮವಿದೆ. ಈ ಕ್ರಮವು ಇಂದಿಗೂ ರೂಢಿಯಲ್ಲಿದೆ.

ಮೊದಲು ವೇದವನ್ನು ಸಂಹಿತಾ ಪಾಠದಲ್ಲಿ - ಅಂದರೆ ಪೂರ್ಣ ವಾಕ್ಯರೂಪದಲ್ಲಿ - ಅಭ್ಯಾಸ ಮಾಡಬೇಕು. ನಂತರ ವಾಕ್ಯದ ಒಂದೊಂದೇ ಪದಗಳನ್ನು ಬಿಡಿಸಿ ಅಧ್ಯಯನ ಮಾಡಬೇಕು. ಇದನ್ನು ಪದಪಾಠವೆನ್ನುತ್ತಾರೆ. ಇವೆರಡಲ್ಲದೆ ಇನ್ನು ೯ ವಿಧಾನಗಳಿವೆ. ಈ ಪಾಠಗಳನ್ನು ಎರೆಡು ವಿಧವಾಗಿ ವಿಂಗಡಿಸಿದ್ದಾರೆ: ಪ್ರಕೃತಿ ಮತ್ತು ವಿಕೃತಿಗಳು. ಪ್ರಕೃತಿ ವಿಧಾನದಲ್ಲಿ ಪದಗಳನ್ನು ಸಂಹಿತೆಯ ಕ್ರಮವಾಗಿಯೇ ಪಠಿಸಲಾಗುತ್ತದೆ. ವಿಕೃತಿಗಳಲ್ಲಿ ಪದಗಳನ್ನು ಹಿಂದು ಮುಂದಾಗಿಯೂ ಪಠಿಸುತ್ತಾರೆ. ಎಲ್ಲ ಪಾಠಗಲ್ಲಿಯೂ ಸ್ವರ, ವ್ಯಾಕರಣ ನಿಯಮಗಳು ಪಾಲಿಸಲ್ಪಡುತ್ತವೆ. ಸಂಹಿತಾ ಪಾಠ, ಪದಪಾಠ, ಕ್ರಮಪಾಠ ಎಂಬುವು ಪ್ರಕೃತಿಗಳು. ವಿಕೃತಿಗಳು ಎಂಟಿವೆ:

           ಜಟಾ ಮಾಲಾ ಶಿಖಾ ರೇಖಾ ಧ್ವಜೋ ದಂಡೋ ರಥೋ ಘನಃ ।
           ಅಷ್ಟೌ ವಿಕೃತಯಃ ಪ್ರೋಕ್ತಾಃ ಕ್ರಮಪೂರ್ವಾ ಮಹರ್ಷಿಭಿಃ ।।

ಜಟಾ, ಮಾಲಾ, ಶಿಖಾ, ರೇಖಾ, ಧ್ವಜ, ದಂಡ, ರಥ ಮತ್ತು ಘನ ಎಂಬುವು ಎಂಟು ವಿಕೃತಿಗಳು. ಇವುಗಳಲ್ಲಿ ಜಟಾಪಾಠ ಮತ್ತು ಘನಪಾಠಗಳು ಮಾತ್ರ ಇಂದು ರೂಢಿಯಲ್ಲಿವೆ. ಪಾಠ ಕ್ರಮದಲ್ಲಿ ವಿವಿಧ ಶಾಖೆಗಳಲ್ಲಿ ಸ್ವಲ್ಪ ವ್ಯತ್ಯಾಸಗಳಿವೆ.

ಉದಾಹರಣೆಗೆ ವೇದಗಳಲೆಲ್ಲ ಅತ್ಯಂತ ಪ್ರಸಿದ್ದವಾದ ಗಾಯತ್ರಿ ಮಂತ್ರವನ್ನು ತೆಗೆದುಕೊಳ್ಳೋಣ. ಗಾಯತ್ರಿ ಮಂತ್ರವು ಋಗ್ವೇದದ ಮೂರನೇ ಮಂಡಲದ ೬೨ನೇ ಸೂಕ್ತದ ೧೦ನೇ ಮಂತ್ರ. ಈ ಮಂತ್ರವು ಸಾಮವೇದದ ೧೪೬೨ನೇ ಮಂತ್ರವಾಗಿಯೂ, ಕೃಷ್ಣಯಜುರ್ವೇದದ ಮೊದಲ ಕಾಂಡ, ಐದನೇ ಪ್ರಶ್ನ ೬ನೇ ಅನುವಾಕದಲ್ಲೂ, ಶುಕ್ಲಯಜುರ್ವೇದದ ಮೂರನೇ ಅಧ್ಯಾಯದಲ್ಲಿಯೂ ಬಂದಿದೆ. ಗಾಯತ್ರಿ ಮಂತ್ರವು ಗಾಯತ್ರಿ ಛಂದಸ್ಸಿನಲ್ಲಿದೆ. ಅಂದರೆ ೮ ಅಕ್ಷರಗಳ ಮೂರು ಪಾದಗಳು. ಒಟ್ಟು ೨೪ ಅಕ್ಷರಗಳು. ಗಾಯತ್ರಿ ಛಂದಸ್ಸಿನಲ್ಲಿರುವ ಎಲ್ಲ ಮಂತ್ರಗಳಲ್ಲಿ ಈ ಮಂತ್ರಕ್ಕೆ ಮಾತ್ರ 'ಗಾಯತ್ರಿ' ಎಂದು ಹೆಸರಿಟ್ಟಿದ್ದಾರೆ.

ಈ ಉದಾಹರಣೆಯ ಪಾಠಕ್ರಮದ ಧ್ವನಿಮುದ್ರಿಕೆಯನ್ನು ಈ ಸ್ಥಳದಲ್ಲಿ ಕೇಳಬಹುದು:
https://www.youtube.com/watch?v=bd8d_tmQoW0

ಸಂಹಿತಾಪಾಠ: ಗಾಯತ್ರಿ ಮಂತ್ರಕ್ಕೆ ವಿಶ್ವಾಮಿತ್ರ ಋಷಿಯೇ ಋಷಿ. ಗಾಯತ್ರಿ ಛಂದಸ್ಸು. ಸವಿತೃ ದೇವತೆ.

   ।                 ।।                ।।                 ।
ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ।
        _                  _                       _

                          ।                      ।।
ಧಿಯೋ ಯೋ ನಃ ಪ್ರಚೋದಯಾತ್ ।।
   _                     _

ಪದಪಾಠ: ಸಂಹಿತಾ ಪಾಠದ ಪ್ರತಿಯೊಂದು ಪದವನ್ನು ಬಿಡಿಸಿ ಪಠಿಸುವುದು ಪದಪಾಠ. ಸಂಹಿತಾ ಪಾಠದ ಸ್ವರಗಳು ಪದಪಾಠದಲ್ಲಿ ಸ್ವಲ್ಪ ವ್ಯತ್ಯಾಸವಾಗಬಹುದು. 

                               ।।                   ।                   ।
ತತ್ । ಸವಿತುಃ । ವರೇಣ್ಯಂ । ಭರ್ಗಃ । ದೇವಸ್ಯ । ಧೀಮಹಿ ।
        _ _                                  _           _ _  _
     ।                                  ।।
ಧಿಯಃ । ಯಃ । ನಃ । ಪ್ರ ಚೋದಯಾತ್ ।
                       _      _   _

ಮೇಲಿನ ಪದಪಾಠದಲ್ಲಿ ೧೦ ಪದಗಳಿವೆ. ಸಂಹಿತಾ ಪಾಠಕ್ಕೂ ಪದಪಾಠಕ್ಕೂ ಇರುವ ಸ್ವರ ವ್ಯತ್ಯಾಸವನ್ನು ಗಮನಿಸಬಹುದು. ಉದಾಹರಣೆಗೆ ಧೀಮಹಿ ಎಂಬ ಪದವು ಇಲ್ಲಿ ಸರ್ವ ಅನುದಾತ್ತವಾಗಿದೆ. ಸಂಹಿತಾ ಪಾಠದಲ್ಲಿ ಧೀಮಹಿ ಪದದ ಎಲ್ಲ ಅಕ್ಷರಗಳೂ ಉದಾತ್ತಗಳು.

ವೇದಪಾಠದಲ್ಲಿ ಮಂತ್ರಾರ್ಥಕ್ಕೆ ತುಂಬಾ ಪ್ರಾಮುಖ್ಯತೆಯಿದೆ. ಅರ್ಥವಿಲ್ಲದ ವೇದಾಭ್ಯಾಸ ವ್ಯರ್ಥವೆಂದು ಅನೇಕ ಕಡೆ ಹೇಳಿದೆ. ಆದ್ದರಿಂದ ವೇದ ಪಾಠಕ್ರಮದಲ್ಲಿ ಮಂತ್ರಾರ್ಥವೂ ಒಳಗೊಂಡಿದೆ. ಗಾಯತ್ರಿ ಮಂತ್ರಕ್ಕೆ ಸಾಯಣಭಾಷ್ಯಾ ರೀತಿಯಾಗಿ ಅರ್ಥವಿಂತಿದೆ.

ಪದಾರ್ಥ:

ಯಃ - ಯಾವನು । ನಃ - ನಮಗೆ । ಧಿಯಃ - ಕರ್ಮವಿಷಯಕವಾದ ಪ್ರಜ್ಞೆಯನ್ನು। ಪ್ರಚೋದಯಾತ್ - ಪ್ರೇರಿಸುತ್ತಾನೆಯೋ । ತತ್ - ಅಂತಹ । ದೇವಸ್ಯ - ದೇವನ । ಸವಿತುಃ - ಸವಿತೃವಿನ ಅಥವಾ ಸೂರ್ಯನ । ವರೇಣ್ಯಂ - ಸರ್ವರಿಂದಲೂ ಪೂಜಿಸಲ್ಪಡತಕ್ಕವನ । ಭರ್ಗಃ - ಜ್ಯೋತಿಯನ್ನು। ಧೀಮಹಿ - ಧ್ಯಾನಿಸುತ್ತೇವೆ. 

ಭಾವಾರ್ಥ ಮತ್ತು ವಿವರಣೆ:

ಯಾವ ಸವಿತೃದೇವನು ನಮಗೆ ಕರ್ಮ ವಿಷಯಕವಾದ ಜ್ಞಾನವನ್ನು ಅಥವಾ ಪ್ರಜ್ಞೆಯನ್ನು ಪ್ರರಿಸುತ್ತಾನೋ ಅಂತಹ ದೇವನಾದ ಸವಿತೃವಿನ ವಿಶ್ವಪೂಜ್ಯವಾದ ಜ್ಯೋತಿಯನ್ನು ಧ್ಯಾನಿಸುತ್ತೇವೆ. 

ಈ ಮಂತ್ರವು ಸವಿತೃ ದೇವತಾ ಮಂತ್ರವಾಗಿದ್ದರೂ, ಸವಿತೃವಿಗೂ ಇತರ ದೇವತೆಗಳಿಗೂ ಯಾವುದೇ ಭೇದವಿಲ್ಲ ಎಂಬುದನ್ನು ನಾವು 'ಏಕಂ ಸದ್ವಿಪ್ರಾ ಬಹುಧಾ ವದಂತಿ' (ಒಂದೇ ಸತ್ಯವನ್ನು ತಿಳಿದವರು ವಿವಿಧ ರೀತಿಯಲ್ಲಿ ಹೇಳುತ್ತಾರೆ, ಋಗ್ವೇದ ಮೊದಲ ಮಂಡಲ, ೧೬೪ನೇ ಸೂಕ್ತ) ಮುಂತಾದ ವೇದ ಮಂತ್ರಗಳಿಂದಲೇ ತಿಳಿಯಬಹುದು. ಆದ್ದರಿಂದ ಇಲ್ಲಿ ಸವಿತೃ ಅಥವಾ ಸೂರ್ಯನ ಜ್ಯೋತಿ ಎಂದರೆ ಪರತತ್ವ, ಪರಮೇಶ್ವರ ಎಂಬ ಅರ್ಥ ಬರುತ್ತದೆ. ಅಂತೆಯೇ ಜ್ಞಾನಕ್ಕೂ ಅಧ್ಯಾತ್ಮವಾದ 'ಪರತತ್ವ' ಎಂಬ ಅರ್ಥವಿದೆ. ಆಧ್ಯಾತ್ಮಿಕವಾಗಿ ಗಾಯತ್ರೀ ಮಂತ್ರಕ್ಕೆ, 'ಶುದ್ಧ ಜ್ಞಾನವನ್ನು ಕೊಡು ಎಂದು ನಾವು ಪರತತ್ವವನ್ನು ಪ್ರಾರ್ಥಿಸುತ್ತೇವೆ' ಎಂದು ಅರ್ಥೈಸಬಹುದು. ಗಾಯತ್ರಿ ಮಂತ್ರದ ಪೂರ್ಣ ವಿವರಣೆಯನ್ನು ಹೆಚ್.ಪಿ. ವೆಂಕಟರಾಯರ ಋಗ್ವೇದ ಸಂಹಿತೆ ಸಾಯಣ ಭಾಷ್ಯ ಕನ್ನಡ ಅನುವಾದದ ೧೭ನೇ ಪುಸ್ತಕದ ೫೫೫ನೇ ಪುಟದಿಂದ ಮೊದಲಾಗಿ ಸುಮಾರು ೮೦ ಪುಟಗಳಲ್ಲಿ ಕಾಣಬಹುದು.

ಕ್ರಮಪಾಠ:

'ಕ್ರಮೇಣ ಪದದ್ವಯಸ್ಯ ಪಾಠಂ' - ಕ್ರಮ ಪಾಠವೆಂದರೆ ಎರೆಡೆರೆಡು ಪದಗಳನ್ನು ಸ್ವರ ಸಂಧಿ ನಿಯಮಾನುಸಾರವಾಗಿ ಪಠಿಸುವುದು. ಇಲ್ಲಿ ಮೊದಲಿಗೆ ೧ ಮತ್ತು ೨ನೇ ಪದಗಳನ್ನು ಮೊದಲು ಉಚ್ಚರಿಸುತ್ತಾರೆ. ನಂತರ ೨ ಮತ್ತು ೩, ೩ ಮತ್ತು ೪... ಪಾಠ ಹೀಗೆ ಸಾಗುತ್ತದೆ. ಗಾಯತ್ರಿ ಮಂತ್ರದ ಕ್ರಮ ಪಾಠವು ಹೀಗಿದೆ (ಸ್ವರ ನಿಯಮವು ಪದಪಾಠದಲ್ಲಂತೆಯೇ ಇದೆ. ಆದ್ದರಿಂದ ಕೆಳಗೆ ಸ್ವರ ನಿಯಮವನ್ನು ಕೊಡಲಾಗಿಲ್ಲ. ಇದರ ಪಾಠವಿಧಾನವು ಮೇಲೆ ಕೊಟ್ಟಿರುವ ಧ್ವನಿಮುದ್ರಣದಲ್ಲಿದೆ):

ತತ್ಸವಿತುಃ । ಸವಿತುರ್ವರೇಣ್ಯಂ । ವರೇಣ್ಯಂ ಭರ್ಗಃ । ಭರ್ಗೋ ದೇವಸ್ಯ । ದೇವಸ್ಯ ಧೀಮಹಿ । ಧೀಮಹೀತಿ ಧೀಮಹಿ।

ಧಿಯೋ ಯಃ । ಯೋ ನಃ । ನಃ ಪ್ರಚೋದಯಾತ್ । ಪ್ರಚೋದಯಾದಿತಿ ಪ್ರ ಚೋದಯಾತ್ ।

ಕ್ರಮಪಾಠ, ಜಾಟಾಪಾಠ ಮತ್ತು ಘನಪಾಠಗಳಲ್ಲಿನ ಸಾಲುಗಳ ಕೊನೆಯಲ್ಲಿ ಬರುವ 'ಇತಿ' ಪ್ರಯೋಗವು (ಧೀಮಹೀತಿ ಧೀಮಹಿ - ಹೀಗೆ) ಕೆಲವು ಶಾಖೆಗಳಲ್ಲಿ ಇಲ್ಲ. ಕೆಲವು ಶಾಖೆಗಳಲ್ಲಿ ಇದೆ.

ಜಟಾಪಾಟ:

ಜಾಟಾಪಾಠವಾದ ಕ್ರಮ ಹೀಗಿದೆ: 

ಮೊದಲ ಸಾಲು. 
೧ + ೨ + ೨ + ೧ + ೧ + ೨
ಈಗ ಮೊದಲ ಪದವನ್ನು ಬಿಟ್ಟು ಎರಡನೇ ಪದದಿಂದ:
೨ + ೩ + ೩ + ೨ + ೨ + ೩
ಹೀಗೆಯೇ ಮುಂದುವರೆಯುತ್ತದೆ. ಇಲ್ಲಿ ಪದಗಳನ್ನು ಹಿಂದು ಮುಂದಾಗಿ ಉಪಯೋಗಿಸುವುದರಿಂದ ಜಟಾಪಾಠವು ವಿಕೃತಿ.  

ಗಾಯತ್ರಿ ಮಂತ್ರದ ಮೊದಲ ಪಾದದ ಜಟಾಪಾಠದ ಕ್ರಮ:

ತತ್ಸವಿತುಃ ಸವಿತುಃ ತತ್ ತತ್ಸವಿತುಃ ।
ಸವಿತುರ್ವರೇಣ್ಯಂ ವರೇಣ್ಯಗುಂ ಸವಿತುರ್ ಸವಿತುರ್ವರೇಣ್ಯಂ ।
ವರೇಣ್ಯಂ ಭರ್ಗೋ ಭರ್ಗೋ ವರೇಣ್ಯಂ ವರೇಣ್ಯಂ ಭರ್ಗಃ ।
ಭರ್ಗೋ ದೇವಸ್ಯ ದೇವಸ್ಯ ಭರ್ಗೋ ಭರ್ಗೋ ದೇವಸ್ಯ ।
ದೇವಸ್ಯ ಧೀಮಹಿ ಧೀಮಹಿ ದೇವಸ್ಯ ದೇವಸ್ಯ ಧೀಮಹಿ । ಧೀಮಹಿ ಇತಿ ಧೀಮಹಿ ।

ಉತ್ತರಾರ್ಧವನ್ನೂ ಹೀಗೇ ಪಠಿಸಬೇಕು. 

ಘನಪಾಠ:

ಘನಪಾಠವೂ ವಿಕೃತಿ. ಘನಪಾಠವೇ ವೇದ ಪಾಠದ ಕೊನೆಯ ಘಟ್ಟ. ಘನಪಾಠವನ್ನು ತಿಳಿದವರನ್ನು ಘನಪಾಠಿಗಳೆನ್ನುತ್ತಾರೆ. ಇವರು ವೇದಾಧ್ಯಯನದಲ್ಲಿ ಪೂರ್ಣ ಪಾರಂಗತರು. ಇವರು ಆಚಾರ್ಯರೆನಿಸಿಕೊಳ್ಳುತ್ತಾರೆ.

ವಿಕೃತಿಗಳಲ್ಲಿ ಪಂಚಸಂಧಿಗಳೆಂಬ ಐದು ಲಕ್ಷಣಗಳಿವೆ. ಅವುಗಳಿಗೆ ಕ್ರಮ, ಉತ್ಕ್ರಮ, ವ್ಯುತ್ಕ್ರಮ, ಅಭಿಕ್ರಮ, ಸಂಕ್ರಮವೆಂದು ಹೆಸರು.

ಕ್ರಮವೆಂದರೆ ಒಂದು ಪದವನ್ನು ಮತ್ತು ಅದರ ಮುಂದಿನ ಪದವನ್ನು ಪಠಿಸುವುದು. ತತ್ಸವಿತುಃ, ಸವಿತುರ್ವರೇಣ್ಯಂ ಹೀಗೆ (೧ + ೨). 

ಉತ್ಕ್ರಮವೆಂದರೆ ಒಂದೇ ಪದವನ್ನು ಎರೆಡು ಬಾರಿ ಪಠಿಸುವುದು. ಸವಿತುಃ ಸವಿತುಃ, ಭರ್ಗೋ ಭರ್ಗೋ ಹೀಗೆ (೧+೧, ೨+೨). 

ವ್ಯುತ್ಕ್ರಮವೆಂದರೆ ಪದವನ್ನು ಮತ್ತು ಅದರ ಹಿಂದಿನ ಪದವನ್ನು ಪಠಿಸುವುದು. ಸವಿತುಃ ತತ್, ದೇವಸ್ಯ ಭರ್ಗೋ ಹೀಗೆ (೨+೧, ೩+೨).

ಅಭಿಕ್ರಮ (೧+೧), ಸಂಕ್ರಮಗಳು(೨+೧) ಉತ್ಕರ್ಮ, ವ್ಯುತ್ಕರ್ಮಗಳಂತೆಯೇ.  

ಘನಪಾಠದ ಲಕ್ಷಣ ಹೀಗಿದೆ:

ಘನಪಾಠದಲ್ಲಿ ಮೊದಲು ಜಟಾಪಾಠದ ಕ್ರಮವನ್ನು ಪಠಿಸಿ ನಂತರ ೧, ೨, ೩ನೇ ಪದಗಳನ್ನು ಒಟ್ಟಾಗಿ ಪಠಿಸಬೇಕು ಅನಂತರ ಮತ್ತೆ ೩, ೨, ೧ ಹೀಗೆ ಪಠಿಸಬೇಕು.

೧ + ೨ + ೨ + ೧ + ೧ + ೨ + ೩ + ೩ + ೨ + ೧ + ೧ + ೨ + ೩
೨ + ೩ + ೩ + ೨ + ೨ + ೩ + ೪ + ೪ + ೩ + ೨ + ೨ + ೩ + ೪
ಇತ್ಯಾದಿ.

ಗಾಯತ್ರಿ ಮಂತ್ರದ ಘನಪಾಠವು ಹೀಗಿದೆ:

ತತ್ಸವಿತುಃ ಸವಿತುಃ ತತ್ ತತ್ ಸವಿತುರ್ವರೇಣ್ಯಂ ವರೇಣ್ಯಗುಂ ಸವಿತುಃ ತತ್ತತ್ಸವಿತುರ್ವರೇಣ್ಯಂ। 
೧ + ೨         ೨ + ೧      ೧ + ೨ + ೩                  ೩ + ೨ + ೧                ೧ + ೨ + ೩

ಸವಿತುರ್ವರೇಣ್ಯಂ ವರೇಣ್ಯಗುಂ ಸವಿತುರ್ ಸವಿತುರ್ವರೇಣ್ಯಂ ಭರ್ಗೋ ಭರ್ಗೋ ವರೇಣ್ಯಗುಂ ಸವಿತುರ್ ಸವಿತುರ್ವರೇಣ್ಯಂ ಭರ್ಗಃ ।

ವರೇಣ್ಯಂ ಭರ್ಗೋ ಭರ್ಗೋ ವರೇಣ್ಯಂ ವರೇಣ್ಯಂ ಭರ್ಗೋ ದೇವಸ್ಯ ದೇವಸ್ಯ ಭರ್ಗೋ ವರೇಣ್ಯಂ ವರೇಣ್ಯಂ ಭರ್ಗೋ ದೇವಸ್ಯ ।

ಭರ್ಗೋ ದೇವಸ್ಯ ದೇವಸ್ಯ ಭರ್ಗೋ ಭರ್ಗೋ ದೇವಸ್ಯ ಧೀಮಹಿ ಧೀಮಹಿ ದೇವಸ್ಯ ಭರ್ಗೋ ಭರ್ಗೋ ದೇವಸ್ಯ ಧೀಮಹಿ ।

ದೇವಸ್ಯ ಧೀಮಹಿ ಧೀಮಹಿ ದೇವಸ್ಯ ದೇವಸ್ಯ ಧೀಮಹಿ । ಧೀಮಹಿ ಇತಿ ಧೀಮಹಿ ।

೭. ಸ್ಮೃತಿ ಗ್ರಂಥಗಳು

ಹಿಂದೆಯೇ ಹೇಳಿದಂತೆ ಸ್ಮೃತಿಗಳು ನೆನಪಿಟ್ಟುಕೊಳ್ಳವೆಕಾದ ಗ್ರಂಥಗಳು. ವೇದಾಂಗಗಳು ಸ್ಮೃತಿಗಳು. ವೇದಾಂಗಗಳಲ್ಲದೆ ಕಾವ್ಯ, ಇತಿಹಾಸ, ಪುರಾಣ, ರಾಮಾಯಣ, ಮಹಾಭಾರತ ಮುಂತಾದವುಗಳೆಲ್ಲ ಸ್ಮೃತಿಗಳು. ಇವುಗಳಲ್ಲಿ ಕೆಲವನ್ನು  ಪುರಾಣಗಳಾಗಿ  ವಿಂಗಡಿಸಲಾಗುತ್ತದೆ. ಸ್ಮೃತಿಗಳೆಲ್ಲ ಶ್ರುತಿಗಳ ನಂತರ ರಚಿಸಲ್ಪಟ್ಟವುಗಳು. ಇವಕ್ಕೆಲ್ಲ ಶ್ರುತಿಗಳೇ ಆಧಾರ.

ಸ್ಮೃತಿಗಳಲ್ಲಿ ಮುಖ್ಯವಾದವು ಕಲ್ಪಸೂತ್ರಗ್ರಂಥಗಳು. ಕಲ್ಪಸೂತ್ರಗಳಲ್ಲಿ ಶ್ರೌತ ಮತ್ತು ಶುಲ್ಬಸೂತ್ರಗಳು ವೇದಗಳನ್ನು ತಿಳಿಯಲು ಅನುಕೂಲವಾದದ್ದರಿಂದ ಅವುಗಳನ್ನು ವೇದಾಂಗಗಳಾಗಿ ಪರಿಗಣಿಸಲಾಗಿದೆ. ಧರ್ಮಸೂತ್ರಗಳು ಮತ್ತು ಗೃಹ್ಯಸೂತ್ರಗಳು ವೇದಗಳನ್ನು ಆಧರಿಸಿ ರಚಿಸಲ್ಪಟ್ಟ ಪ್ರತ್ಯೇಕ ಗ್ರಂಥಗಳು.

ಸೂತ್ರಗ್ರಂಥಗಳು ವೇದಕಾಲಕ್ಕಿಂತ ತುಂಬಾ ಈಚಿನವು. ಇವುಗಳ ಕಾಲವನ್ನು ಸುಮಾರು ಕ್ರಿ.ಪೂ. ೫೦೦ರಿಂದ ಕ್ರಿ.ಶ. ೨೦೦ರ ವರೆಗೆ ಎಂದು ಅಂದಾಜಿಸಬಹುದು. ಇವು ವೇದಕಾಲೋತ್ತರ ಸಾಮಾಜಿಕ ಜೀವನವನ್ನು ತಿಳಿಯಲು ಸಹಾಯವಾಗುತ್ತವೆ. 

ಧರ್ಮಸೂತ್ರಗಳಿಗೆ ಸಾಮಯಾಚಾರಿಕ ಸೂತ್ರಗಳೆಂದೂ ಹೆಸರು. ಸಮಾಜದಲ್ಲಿ ಬ್ರಾಹ್ಮಣ, ಕ್ಷತ್ರಿಯ ವೈಶ್ಯ ಮತ್ತು ಶೂದ್ರ ಪಂಗಡಗಳೂ, ಬ್ರಹ್ಮಚಾರಿ, ಗೃಹಸ್ಥ, ವಾನಪ್ರಸ್ಥ, ಸನ್ಯಾಸ ಆಶ್ರಮದವರೂ ಸಮಾಜಗಳಲ್ಲಿ ಹೇಗೆ ನಡೆಯಬೇಕೆಂದು ತಿಳಿಸಿಕೊಡುತ್ತವೆ. ಧರ್ಮಸೂತ್ರಗಳು ವಿವಿಧ ವೇದಗಳಿಗೆ ಬೇರೆ ಬೇರೆಯಾಗಿದ್ದವೆಂದು ತೋರುತ್ತದೆ. ಆದರೆ ನಮಗೆ ಇಂದು ಸಿಕ್ಕಿರುವುದು ಆಪಸ್ಥಂಬ, ಹಿರಣ್ಯಕೇಶೀಯ ಮತ್ತು ಬೋಧಾಯನ ಧರ್ಮಸೂತ್ರಗಳು ಮಾತ್ರ. ಈ ಧರ್ಮಸೂತ್ರಗಳನ್ನು ಅನುಸರಿಸಿ ಮನುಸ್ಮೃತಿ, ಯಾಜ್ಞವಲ್ಕ್ಯ ಸ್ಮೃತಿ ಮುಂತಾದವುಗಳು ರಚಿತವಾಗಿವೆ. 

ಗೃಹ್ಯಸೂತ್ರಗಳು ಸಂಸಾರಿಯೂ ನಿತ್ಯ ಆಚರಿಸಬೇಕಾದ ಕರ್ಮಗಳ ಬಗ್ಗೆ ತಿಳಿಸುತ್ತವೆ. ಗೃಹ್ಯಸೂತ್ರಗಳೂ ಪ್ರತಿ ವೇದಕ್ಕೆ ಬೇರೆ-ಬೇರೆಯಾಗಿವೆ. ಗೃಹ್ಯಸೂತ್ರಗಳ ಸಾಮಾನ್ಯ ವಿಷಯಗಳು ಪಾಕಯಜ್ಞ, ಬಲಿಹರಣ, ನಾಮಕರಣ, ಚೌಲ, ಉಪನಯನ, ವಿವಾಹ ಮುಂತಾದವುಗಳು. ಋಗ್ವೇದದ ಗೃಹ್ಯಸೂತ್ರಗಳು ಅಶ್ವೀಲಾಯನ ಮತ್ತು ಸಾಂಖ್ಯಾಯನ ಗೃಹ್ಯಸೂತ್ರಗಳು. ಕೃಷ್ಣಯಜುರ್ವೇದದ ಆಪಸ್ಥಂಬ, ಬೋಧಾಯನ, ಶುಕ್ಲ ಯಜುರ್ವೇದದ ಪಾರಸ್ಕರ, ಸಾಮವೇದದ ಗೋಭಿಲ, ಅಥರ್ವವೇದದ ಕೌಶಿಕ ಗೃಹ್ಯಸೂತ್ರಗಳು ಪ್ರಸಿದ್ಧಿಯಾಗಿವೆ. 

ರಾಮಾಯಣ ಮಹಾಭಾರತಗಳು ಭಾರತ ಸಾಹಿತ್ಯದ ಅತ್ಯುಷ್ಕೃತ ಗ್ರಂಥಗಳು. ಇವುಗಳನ್ನು ಬರೆದವರು ಕ್ರಮವಾಗಿ ವಾಲ್ಮೀಕಿ ಮತ್ತು ವ್ಯಾಸ ಮಹರ್ಷಿಗಳು. ಈ ಗ್ರಂಥಗಳು ವಿಷ್ಣುವಿನ ಅವತಾರಗಳೆಂದು ಪರಿಗಣಿಸಲಾದ ರಾಮ ಮತ್ತು ಕೃಷ್ಣರ ಕಥೆಗಳು. ವೇದ ಮತ್ತು ಕಲ್ಪಸೂತ್ರಗಳ ಸಂದೇಶವು ಇಲ್ಲಿ ಕಥಾರೂಪದಲ್ಲಿ ವಿವರಿಸಲಾಗಿದೆ. ಇವನ್ನು ಪಂಚಮ ವೇದಗಳೆಂದೂ ಕರೆಯಬಹುದು. ಭಾರತೀಯ ಸನಾತನ ಸಂಸ್ಕೃತಿ ಮತ್ತು ತತ್ವದ ದ್ಯೋತಕಗಳಾದ ಆದಿತ್ಯಹೃದಯ, ವಿದುರನೀತಿ, ಭೀಷ್ಮನೀತಿ, ಭಗವದ್ಗೀತೆ ಮುಂತಾದವುಗಳು ರಾಮಾಯಣ ಮಹಾಭಾರತಗಳಲ್ಲಿ ಬಂದಿವೆ.

ಈ ಗ್ರಂಥಗಳಲ್ಲದೆ ವೇದಗಳನ್ನು ಪ್ರಮಾಣವಾಗಿ ಭಾರತದಲ್ಲಿ ಆರು ತತ್ವಶಾಸ್ತ್ರದ ವಿಭಾಗಗಳಿವೆ. ಅವು: ಸಾಂಖ್ಯ, ಯೋಗ, ವೈಶೇಷಿಕ, ನ್ಯಾಯ, ಮೀಮಾಂಸ ಮತ್ತು ವೇದಾಂತ. ಈ ವಿಷಯಗಳಿಗೆ ಸಂಬಂಧಪಟ್ಟ ಕೆಲವು ಸೂತ್ರ, ಭಾಷ್ಯ, ವಾರ್ತಿಕಗಳೆಂಬ ಗ್ರಂಥಗಳಿವೆ. ಈ ಗ್ರಂಥಗಳು ಸ್ಮೃತಿ ಗ್ರಂಥಗಳಲ್ಲದಿದ್ದರೂ ಭಾರತೀಯ ಸಂಸ್ಕೃತಿಯ ದೃಷ್ಟಿಯಿಂದ ಬಹು ಮುಖ್ಯವಾದವು. ಸಾಂಖ್ಯ ಸೂತ್ರಗಳಲ್ಲಿ ಕಪಿಲ ಮಹರ್ಷಿಯ ಸಾಂಖ್ಯ ಸೂತ್ರಗಳು, ಯೋಗ ತತ್ವದಲ್ಲಿ ಪತಂಜಲಿ ಮಹರ್ಷಿಯ ಯೋಗಸೂತ್ರಗಳು, ವೈಶೇಷಿಕ ತತ್ವದಲ್ಲಿ ಕಣಾದ ಮಹರ್ಷಿಯ ವೈಶೇಷಿಕ ಸೂತ್ರಗಳು, ನ್ಯಾಯಗಳಲ್ಲಿ ಗೌತಮ ಮಹರ್ಷಿಯ ನ್ಯಾಯ ಸೂತ್ರಗಳು, ಮೀಮಾಂಸದಲ್ಲಿ ಜೈಮಿನಿ ಮಹರ್ಷಿಗಳ ಮೀಮಾಂಸಾ ಸೂತ್ರಗಳು ಮತ್ತು ವೇದಾಂತದಲ್ಲಿ ಬಾದರಾಯಣ (ವೇದವ್ಯಾಸರು) ಮಹರ್ಷಿಯ ಬ್ರಹ್ಮಸೂತ್ರಗಳು ಪ್ರಮುಖವಾದವು. ಈ ಸೂತ್ರಗಳಿಗೆ ಅನುಸಾರವಾಗಿ ಈ ತತ್ವಗಳ ಅನುಯಾಯಿಗಳು ಅನೇಕ ಭಾಷ್ಯ, ವಾರ್ತಿಕ ಗ್ರಂಥಗಳನ್ನು ಬರೆದರು.

ಮೇಲೆ ತಿಳಿಸಿದ ಆರು ತತ್ವಗಳಲ್ಲಿ ಮೀಮಾಂಸ ಮತ್ತು ವೇದಾಂತ ತತ್ವಗಳು ಸುಮಾರು ೮-೯ನೇ ಶತಮಾನಗಳವರೆಗೂ ಆಚರಣೆಯಲ್ಲಿದ್ದವು. ವೇದಾಂತವನ್ನು ಉತ್ತರ ಮೀಮಾಂಸೆಯೆಂದೂ ಕರೆಯುತ್ತಾರೆ. ಕುಮಾರಿಲ ಭಟ್ಟರು ಮತ್ತು ಪ್ರಭಾಕರರು ಮುಖ್ಯವಾದ ಮೀಮಾಂಸಾ ಪಂಡಿತರು. ೯ನೇ ಶತಮಾನದ ನಂತರ ವೇದಾಂತ ತತ್ವವು ಪ್ರಸಿದ್ಧವಾಯಿತು. ವೇದಾಂತವು ಮುಖ್ಯವಾಗಿ ಉಪನಿಷತ್ತುಗಳನ್ನು ಆಧರಿಸಿರುವವು. ಇಂದು ನಮ್ಮ ಸಂಪ್ರದಾಯದಲ್ಲಿ ವೇದಾಂತ ಮತವೇ ಮುಖ್ಯವಾಗಿದೆ. ವೇದಾಂತ ತತ್ವದ ಮುಖ್ಯ ಆಚಾರ್ಯರು ಶಂಕರಾಚಾರ್ಯರು, ರಾಮಾನುಜಾಚಾರ್ಯರು ಮತ್ತು ಮಧ್ವಾಚಾರ್ಯರು. ಈ ಮೂವರು ಆಚಾರ್ಯರ ತತ್ವ ಸಂದೇಶಗಳೂ ಬೇರೆ ಬೇರೆಯಾಗಿದ್ದರೂ ಇವರೆಲ್ಲರೂ ವೇದಾಂತ ಮತದ ಅನುಯಾಯಿಗಳು. ಆಚಾರ್ಯರ ತತ್ವಗಳನ್ನು ಕ್ರಮವಾಗಿ ಅದ್ವೈತ, ವಿಶಿಷ್ಟಾದ್ವೈತ ಮತ್ತು ದ್ವೈತವೆಂದು ಕರೆಯುತ್ತಾರೆ. ವೇದಾಂತದ ಮೂರು ಮುಖ್ಯ ಗ್ರಂಥಗಳು ಉಪನಿಷತ್ತುಗಳು, ಬಾದರಾಯಣ ಬ್ರಹ್ಮಸೂತ್ರಗಳು ಮತ್ತು ಮಹಾಭಾರತದ ಭಗವದ್ಗೀತೆ. ಈ ಮೂರು ಗ್ರಂಥಗಳನ್ನು ಪ್ರಸ್ಥಾನತ್ರಯಗಳೆಂದು ಕರೆಯುತ್ತಾರೆ. ಪ್ರಸ್ಥಾನತ್ರಯಗಳಿಗೆ ಮೂರು ಆಚಾರ್ಯರೂ ಭಾಷ್ಯಗಳನ್ನು ಬರೆದಿದ್ದಾರೆ.

೮. ಉಪಸಂಹಾರ

ವೇದಗಳು ಅನಂತ ಗ್ರಂಥ ರಾಶಿ. ಈ ವೇದ ಗ್ರಂಥಗಳ ಪರಿಚಯದ ಒಂದು ಸಣ್ಣ ಪ್ರಯತ್ನ ಈ ಲೇಖನ ಮಾಲೆ. ಇಲ್ಲಿ ನನ್ನ ಯಾವುದೇ ಸ್ವಂತ ಕೆಲಸವಿಲ್ಲ. ಇದು ವಿಷಯಗಳ ಸಂಪಾದನೆ. ಪ್ರಸ್ತುತ ಲೇಖನ ಮಾಲೆಯ ಮುಖ್ಯ ಆಕಾರ ಗ್ರಂಥ ಹೆಚ್.ಪಿ. ವೆಂಕಟರಾಯರ ಋಗ್ವೇದ ಸಾಯಣಭಾಷ್ಯದ ಕನ್ನಡ ಅನುವಾದದ ಪೂರ್ವ ಪೀಠಿಕೆ. ಇದಲ್ಲದೆ ಅವಶ್ಯವಿರುವ ಕಡೆ ಬೇರೆ ಗ್ರಂಥಗಳ ಸಹಾಯ ಪಡೆದಿದ್ದೇನೆ. ಧನ್ಯವಾದಗಳು. 

ಯೋ ವೇದಾದೌ ಸ್ವರಃ ಪ್ರೋಕ್ತೋ ವೆದಾಂತೇನ ಪ್ರತಿಷ್ಠಿತಃ ।
ತಸ್ಯ ಪ್ರಕೃತಿಲೀನಸ್ಯ ಯಃ ಪರಃ ಸ ಮಹೇಶ್ವರಃ ।

ವೇದಃ ಶಿವಃ ಶಿವೋ ವೇದೋ ವೇದಾಧ್ಯಾಯೀ ಸದಾಶಿವಃ ।
ತಸ್ಮಾದ್ ಸರ್ವ ಪ್ರಯತ್ನೇನ ವೇದಮೇವ ಸದಾ ಜಪೇತ್ ।।

ಯದಕ್ಷರ ಪದಭ್ರಷ್ಟಂ ಮಾತ್ರಾಹೀನಂ ತು ಯದ್ಭವೇತ್ ।
ತತ್ಸರ್ವಂ ಕ್ಷಮ್ಯತಾ ದೇವಾ ವಾಗೀಶ್ವರ ನಮೋಸ್ತುತೇ ।।

Tuesday, September 18, 2018

ಸಾಯಣಾಚಾರ್ಯ

ಪ್ರತಿಯೊಂದು ಪ್ರಯೋಗವೂ (practice) ತತ್ವದ (theory) ಮೇಲೆಯೇ ಅವಲಂಬಿತವಾಗಿರುತ್ತದೆ. ಕೆಲವರನ್ನು ಹೊರತುಪಡಿಸಿ, ಬಹುತೇಕ ಜನರು ಪ್ರಯೋಗಕ್ಕೆ ಕೊಡುವ ಪ್ರಾಮುಖ್ಯತೆಯನ್ನು ತತ್ವಕ್ಕೆ ಕೊಡುವುದಿಲ್ಲ. "ತತ್ವ ನಮಗಲ್ಲ" - ಎಂಬ ಮನೋಭಾವವೇ ಹೆಚ್ಚು. ಅಲೌಕಿಕ (ಅಥವಾ ಆಧ್ಯಾತ್ಮಿಕ) ವಿಷಯಗಳಿಗೆ ಇದು ಕೊಂಚ ಹೆಚ್ಚಾಗಿಯೇ ಅನ್ವಯಿಸುತ್ತದೆ. ಮಂತ್ರಗಳಿಗಿಂತ ತಂತ್ರಕ್ಕೆ ಹೆಚ್ಚು ಪ್ರಾಧಾನ್ಯತೆ. 

ಮಾನ್ಯ ಡಿ.ವಿ. ಗುಂಡಪ್ಪನವರು, ತಮ್ಮ ವೇದ-ವೇದಾಂತ ಪುಸ್ತಕದಲ್ಲಿ, ವಿದ್ಯಾರ್ಥಿಗೆ ಶ್ರದ್ದೆ-ತರ್ಕ ಎರೆಡೂ ಇರಬೇಕು ಎಂದು ಬರೆಯುತ್ತಾರೆ. ಶ್ರದ್ಧೆ ಬೇಕೇ ಬೇಕು, ಆದರೆ ತರ್ಕವೂ ಅಷ್ಟೇ ಮುಖ್ಯ. ತರ್ಕವಿಲ್ಲದ ಶ್ರದ್ದೆ ನಿಂತ ನೀರಾಗುತ್ತದೆ. ಅಲೌಕಿಕ ಅಥವಾ ಸಾಮಾಜಿಕ ವಿಷಯಗಳಲ್ಲಿ ನಾವು ಇದನ್ನು ಮನಗಂಡಿದ್ದೇವೆ. ಕೇವಲ ಪುಸ್ತಕ ಓದಿದರೆ ಸಾಲದು. ಓದಿದ್ದರ ಪ್ರಯೋಗವೂ ತಿಳಿದಿರಬೇಕು. ಆದರೆ ಅಲೌಕಿಕ/ಆಧ್ಯಾತ್ಮದ ವಿಷಯಗಳಲ್ಲಿ ಶ್ರದ್ಧೆ ತರ್ಕಕ್ಕೆ ಇಳಿಯುವುದಿಲ್ಲ(ಹಲವಾರು ಬಾರಿ ಶ್ರದ್ಧೆಯೇ ಇರುವುದಿಲ್ಲ. ಅದು ಬೇರೆ ಮಾತು). ತರ್ಕ ಸಂಪ್ರದಾಯವನ್ನು ಹಾಳುಮಾಡಬಹುದು ಎಂಬ ಭಯ. ಈ ಭಯಕ್ಕೆ ಮೂಲ ಕಾರಣವೇನು? ತತ್ವದ ಮೇಲೆ ನಮಗಿರುವ ಅಲಕ್ಷ್ಯ ಎಂಬುದು ನನ್ನ ಅಭಿಮತ. ಮೂಲತತ್ವನ್ನು ಆಮೂಲಾಗ್ರವಾಗಿ ತಿಳಿಯಬೇಕೆಂದು ಇಲ್ಲಿನ ಅಭಿಪ್ರಾಯವಲ್ಲ. ತತ್ವಶಾಸ್ತ್ರ ನಮ್ಮ ಮುಖ್ಯ ವಿಷಯವಾಗಬೇಕಿಲ್ಲ. ನಾವು ಗಣಿತಶಾಸ್ತ್ರಜ್ಞರಾಗದಿದ್ದರೂ ನಮ್ಮ ದೈನಂದಿನ ವ್ಯವಹಾರಕ್ಕೆ ಬೇಕಾಗುವಷ್ಟಾದರೂ ಗಣಿತ ತಿಳಿದಿರಲೇಬೇಕು. ಅಂತಯೇ ಅಧ್ಯಾತ್ಮ ಸಂಸ್ಕೃತಿಯಲ್ಲಿನ ನಮ್ಮ ಶ್ರದ್ದೆ ಅಚಲವಾಗಿಯೂ, ದೀರ್ಘವಾಗಿಯೂ ಇರಬೇಕಾದರೆ, ಅದರ ಹಿಂದಿನ ತತ್ವಗಳ ಸ್ಥೂಲ ಪರಿಚಯ ಅತ್ಯವಶ್ಯಕ. (ಸಂಸ್ಕೃತಿ ದೀರ್ಘವಾಗಿ ಉಳಿಯಬೇಕಾದ ಅವಶ್ಯಕತೆಯೇನು - ಎಂಬ ಪ್ರಶ್ನೆ ಏಳಬಹುದು. ಅದಕ್ಕೆ ಉತ್ತರ ಕೊಡುವುದು ಈ ಲೇಖನದ ಉದ್ದೇಶವಲ್ಲ. ಹೆಚ್ಚಾಗಿ, ಆ ಪ್ರಶ್ನೆಯಿರುವವರಿಗೆ ಈ ಲೇಖನದಿಂದ ಸಮಯ ವ್ಯರ್ಥವಲ್ಲದೆ ಇನ್ನಾವ ಉಪಯೋಗವೂ ಇಲ್ಲ.)

"ವೇದವೆಂದರೆ ಜ್ಞಾನ" - ಭಾರತದಲ್ಲಿ ಏಳನೆಯ ತರಗತಿಲ್ಲಿ ಓದುವ ಬಹುತೇಕ ಎಲ್ಲ ವಿದ್ಯಾರ್ಥಿಗಳಿಗೂ ತಿಳಿದ ವಿಷಯವಿದು. ನಾಲ್ಕು ವೇದಗಳ ಹೆಸರನ್ನು ತಿಳಿದ ಮೇಲೆ ಅದರ ಗೋಜಿಗೆ ನಾವು ಹೋಗುವುದಿಲ್ಲ. ನಾವು ವೇದಗಳ ಗೂಡಾರ್ಥಗಳನ್ನೂ, ಪ್ರಯೋಗಗಳನ್ನೂ ತಿಳಿಯಬೇಕಿಲ್ಲ. ಆದರೆ ಸ್ಥೂಲಾರ್ಥವನ್ನು ತಿಳಿಯಬೇಕು. ಋಷಿಗಳ ಹೆಸರುಗಳು, ವೇದ ಭಾಷ್ಯಕಾರರು, ಬ್ರಾಹ್ಮಣ, ಅರಣ್ಯಕ, ಉಪನಿಷತ್ತು, ಸೂತ್ರ, ಶಾಖೆ, ವೇದಾಂಗ ಮುಂತಾದವುಗಳ ಅರ್ಥಗಳನ್ನು ತಿಳಿಯುವುದು ಅವಶ್ಯಕ. ಭೌತಶಾಸ್ತ್ರಜ್ಞರಾಗದಿದ್ದರೂ ನ್ಯುಟನ್ನು ಮತ್ತು ಅವನ ಸೂತ್ರಗಳನ್ನು ತಿಳಿಯುವಂತೆ. 

ನಮ್ಮ ಪರಂಪರೆಯಲ್ಲಿ ವೇದಗಳಿಗೆ ಭಾಷ್ಯ (ಭಾಷ್ಯ = ಅರ್ಥ, ಸ್ಥೂಲವಾಗಿ) ಬರೆದಿರುವವರು ಬಹಳ ಕಡಿಮೆ ಮಂದಿ. ಆಚಾರ್ಯತ್ರಯರಾದ ಶಂಕರ, ರಾಮಾನುಜ, ಮಧ್ವರು ಉಪನಿಷತ್ತುಗಳಿಗೆ, ಬ್ರಹ್ಮಸೂತ್ರಗಳಿಗೆ ಭಾಷ್ಯಗಳನ್ನು ಬರೆದ್ದಿದ್ದಾರೆ. ನಾಲ್ಕೂ ವೇದಗಳ ಸಂಹಿತೆ, ಬ್ರಾಹ್ಮಣ, ಅರಣ್ಯಕಗಳಿಗೆ ಭಾಷ್ಯವನ್ನು ಬರೆದಿರುವುದು ಬಹುಶಃ ಒಬ್ಬರೇ (ಅಥವಾ ನಮಗೆ ಸಿಕ್ಕಿರುವುದು ಒಬ್ಬರದೇ) - ಆ ಭಾಷ್ಯವೇ ವೇದವಿದ್ಯಾರ್ಥಿಗಳಿಗೆ ದಾರಿದೀಪ - ಆ ಮಹಾನುಭಾವರ ಪರಿಚಯವೇ ಈ ಲೇಖನ.

ಸಾಯಣಾಚಾರ್ಯರು ಹುಟ್ಟಿದ್ದು ಸುಮಾರು ಕ್ರಿ.ಶ. ೧೩೧೫ರಲ್ಲಿ. ೧೨-೧೫ನೇ ಶತಮಾನ ದಕ್ಷಿಣ ಭಾರತದ ವಿಜಯನಗರ ಸಾಮ್ರಾಜ್ಯದಲ್ಲಿ. ತಂದೆ ಮಾಯಣ, ತಾಯಿ ಶ್ರೀಮತಿ. ಭಾರದ್ವಾಜ ಗೋತ್ರ, ಕೃಷ್ಣ ಯಜುರ್ವೇದ, ಬೋಧಾಯನ ಶಾಖೆ. ಸಾಯಣರಿಗೆ ಇಬ್ಬರು ಸಹೋದರರು, ಹಿರಿಯ ಸಹೋದರರು ಮಾಧವರು. ಇವರು ವಿಜಯನಗರ ಸಾಮ್ರಾಜ್ಯ ಸ್ಥಾಪಕರಾದ ಹರಿಹರ-ಬುಕ್ಕರ ಗುರುಗಳು. ವಿದ್ಯಾರಣ್ಯರೆಂಬ ಹೆಸರಿನಿಂದ ಮುಂದೆ ಶೃಂಗೇರಿ ಮಠದ ಪೀಠಾಧಿಪತಿಗಳಾದವರು. ಸಾಯಣರ ತಮ್ಮ ಭೋಗನಾಥರು ಕವಿಗಳು. ಸಾಯಣರಿಗೆ ಮಾಯಣ, ಕಂಪಣ ಮತ್ತು ಸಿಂಗಣರೆಂಬ ಮೂವರು ಪುತ್ರರು. ಅವರ ಪತ್ನಿಯ ಹೆಸರು ತಿಳಿದಿಲ್ಲ.

ಸಾಯಣರು ವಿಜಯನಗರ ಸಾಮ್ರಾಜ್ಯದ ಕಂಪಣ, ಎರಡನೆಯ ಸಂಗಮ, ಒಂದನೆಯ ಬುಕ್ಕ ಮತ್ತು ಎರಡನೆಯ ಹರಿಹರ, ಎಂಬ ನಾಲ್ಕು ರಾಜರಿಗೆ ಮಂತ್ರಿಗಳಾಗಿದ್ದರು. ತರ್ಕ, ನ್ಯಾಯ, ವೇದಾಂತ, ಮೀಮಾಂಸಾ ಶಾಸ್ತ್ರಗಳಲ್ಲಿ ಪಂಡಿತರು. ಅಷ್ಟೇ ಅಲ್ಲದೆ ಸಮರ್ಥ ಯೋಧರೂ ಆಗಿದ್ದರು. ಅಣ್ಣ ಮಾಧವರೊಡನೆ ವಿಜಯನಗರಕ್ಕೆ ಸಾಯಣರ ಕೊಡುಗೆ ಅಪಾರ.

ಭಾರತೀಯ ಶಾಸ್ತ್ರ ಪ್ರಪಂಚಕ್ಕೆ ಸಾಯಣಾಚಾರ್ಯರ ಆಶೀರ್ವಾದವೆಂದರೆ ಅವರ ಚತುರ್ವೇದ ಭಾಷ್ಯಗಳು. ರಾಜ ಹರಿಹರನ ಆಶ್ರಯದಲ್ಲಿ, ಅಣ್ಣ ಮಾಧವರ ಮಾರ್ಗದರ್ಶನದಲ್ಲಿ, ಸಾಯಣರು ವೇದಗಳಿಗೆ ಭಾಷ್ಯಗಳನ್ನು ಬರೆದರು. ಮೊದಲು ಸ್ವಶಾಖೆಯಾದ ತೈತ್ತಿರೀಯ ಸಂಹಿತೆಗೆ ಭಾಷ್ಯ ಬರೆದು ನಂತರ ಋಗ್ವೇದ, ಸಾಮವೇದ ಮತ್ತು ಅಥರ್ವ ವೇದ ಸಂಹಿತೆಗಳಿಗೆ ಭಾಷ್ಯಗಳನ್ನು ಬರೆದಿದ್ದಾರೆ. ಸಂಹಿತೆಗಳಷ್ಟೇ ಅಲ್ಲದೆ, ಋಗ್ವೇದದ ಐತರೇಯ ಬ್ರಾಹ್ಮಣ, ಐತರೇಯ ಅರಣ್ಯಕ, ಕೃಷ್ಣ ಯಜುರ್ವೇದದ ತೈತ್ತಿರೀಯ ಬ್ರಾಹ್ಮಣ ಮತ್ತು ಅರಣ್ಯಕ, ಸಾಮವೇದದ ತಾಂಡ್ಯ, ಷಡ್ವಿಂಶ ಮೊದಲಾದ ೮ ಬ್ರಾಹ್ಮಣಗಳು ಮತ್ತು ಶುಕ್ಲ ಯಜುರ್ವೇದದ ಶತಪಥ ಬ್ರಾಹ್ಮಣಗಳಿಗೂ ಭಾಷ್ಯಗಳನ್ನು ಬರೆದಿದ್ದಾರೆ. ತಮ್ಮ ಭಾಷ್ಯದಲ್ಲಿ ಹಿಂದಿನ ಋಷಿಗಳ ಅಭಿಪ್ರಾಯಗಳನ್ನೂ, ವ್ಯಾಕರಣ ಪ್ರಕ್ರಿಯೆಗಳನ್ನು ಸಾಂಗವಾಗಿ ವಿವರಿಸಿದ್ದಾರೆ. ಸಾಯಣರ ಭಾಷ್ಯಗಳು ಪ್ರತಿಯೊಬ್ಬ ವೇದವಿದ್ಯಾರ್ಥಿಗೂ ಮೂಲ ಪುಸ್ತಕಗಳು. ೧೯-೨೦ ಶತಮಾನಗಳಲ್ಲಿ ವೇದಾರ್ಥ ಯತ್ನ ಮಾಡಿದ ಅನೇಕ ಐರೋಪ್ಯ ವಿದ್ವಾಂಸರಿಗೂ ಸಾಯಣರ ಭಾಷ್ಯಗಳೇ ಮೂಲ.

ಸಾಯಣರು ವೇದಾರ್ಥವನ್ನಷ್ಟೇ ಅಲ್ಲದೆ ಸುಭಾಷಿತ ಸುಧಾನಿಧಿ, ಪ್ರಾಯಶ್ಚಿತ್ತ ಸುಧಾನಿಧಿ, ಧಾತು ವೃತ್ತಿ, ಅಲಂಕಾರ ಸುಧಾನಿಧಿ (ಇವೆರಡು ವ್ಯಾಕರಣ ಪುಸ್ತಕಗಳು), ಆಯುರ್ವೇದ ಸುಧಾನಿಧಿ ಎಂಬ ಪುಸ್ತಕಗಳನ್ನೂ ಬರೆದಿದ್ದಾರೆ. ಸಾಯಣರು ಸುಮಾರು ೧೩೮೭ರಲ್ಲಿ ದೇವೈಕ್ಯರಾದರೆಂದು ತಿಳಿದು ಬರುತ್ತದೆ.

ಭಾರತದ ಆಧ್ಯಾತ್ಮಿಕ ಪ್ರಪಂಚದಲ್ಲಿ ಸಾರಾಯಣರು ಅಗ್ರಪಂಕ್ತಿಯಲ್ಲಿ ನಿಲ್ಲುವವರು. ವೇದ ಸಾಹಿತ್ಯಕ್ಕೆ ಅವರ ಕೊಡುಗೆ ಊಹಾತೀತ. ಸಾಯಣರು ಪ್ರಾತಃಸ್ಮರಣೀಯರು. ನಾವು ಅವರ ಭಾಷ್ಯಗಳನ್ನು ಓದದಿದ್ದರೂ ಅವರ ಹೆಸರನ್ನಾದರೂ ತಿಳಿದುಕೊಳ್ಳುವುದು ಅವಶ್ಯಕ. ನಾವು ಪಠಿಸುವ ಮಂತ್ರಗಳಿಗೆ ಅರ್ಥವನ್ನು ಬರೆದವರಲ್ಲವೆ!

Tuesday, April 10, 2018

ಅಗ್ನಿಪರೀಕ್ಷೆ

ಸಮರ ಮುಗಿಯಲ್ ರಾಮನೆದು-
ರಿಗೆ ಸೀತೆಯನ್ ತಂದಿರಿಸಿದಂ ವಿಭೀಷಣಂ |
ಸೂರ್ಯಕಾಂತಿ ರವಿಯ ನೋಡು-
ವವೊಲರವಿಂದವದನನ ಜಾನಕಿ ನೋಡಿದಳ್ ||

ದೇವ ನೋಡೈ ಶ್ರೀರಾಮ
ವೈದೇಹಿ ಕರುಣಾರ್ದ್ರತೆಯಿಂದೀಕ್ಷಿಸುತಿಹಳ್ |
ಆರಿಗಾಗಿ ಈಯನುವರ-
ವ ಗೈಯ್ದೆವೋ ಆ ತಾಯ್ ನಿಂತಿಹಳೆಮ್ಮೆದುರಿಗೆ ||

ಪನ್ನೆರೆಡು ಮಾಸದಿಂ ಮೈ-
ಥಿಲಿ ದುರ್ಲಭ ಚಿಂತೋದಧಿಯಲ್ ಮಿಂದಿರ್ಪಳ್ |
ಸಂತಸದಿ ಸ್ವೀಕರಿಸೈ
ಪ್ರಭೋ ದಾಶರಥಿಯೆಂದನಂಜನೀಪುತ್ರಂ ||

ಬಾಷ್ಪಗಳುದುರಿದವ್ ಪ್ರಥಮ-
ದಲಿ ಮರುಚಣದೊಳ್ ವದನ ಗಂಭೀರವಾಯ್ತುಂ |
ಲಂಕೇಶ್ವರನ ಮೊಗನೋಡಿ
ರಾಮಂ ಸೀತೆಯನಲಂಕರಿಸಿ ತಾರೆಂದಂ ||

ಲಲನಾವ್ರಜದೊಳಿದ್ದ ಸೀ-
ತೆಯ ಬಳಿಸಾರ್ದು ವಿಭೀಷಣಂ ಕೈಮುಗಿದು ತಾಯ್ |
ನಿನ್ನ ಪ್ರಭು ಸರ್ವಾಲಂಕಾ-
ರಭೂಷಿತೆಯಾಗೀಕ್ಷಿಸಬೇಕೆಂದನೆಂದನ್ ||

ತೊಟ್ಟುಡುಗೆಯೊಳ್ ತಾನ್ ನಾಥ-
ನಂ ನೋಡಬೇಕೈ ರಾಕ್ಷಸಾಧಿಪನೆಂದಳ್ |
ಜಾನಕಿ ಮೇಣ್ ರಾಜಾಜ್ಞೆಗೆ
ತಲೆಬಾಗಿಯೊಪ್ಪಿದೆನೆಂದರಮನೆಗೆಪೋದಳ್ ||

ಪೊಳೆಯುವ ಪಲ್ಲಕ್ಕಿ ರೇಷಿ-
ಮೆಯ ವಸ್ತ್ರ ಫಳಫಳನೆ ಮಿಂಚುವಾಭರಣಗಳ್ |
ಮೊಗದೊಳ್ ಮಂದಹಾಸದಿಂ
ಬಂದಳ್ ವೈದೇಹಿ ರಾಮಚಂದ್ರನ ಕಾಣಲ್ ||

ಪೆರ್ಗಾಳಿ ಬೀಸಲಬ್ಬರಿ-
ಸುವಾಂಬುಧಿಯವೊಲಿದ್ದ  ವಾನರ ಭಲ್ಲೂಕಾ- |
ಸುರ ನಿವಹಂ ಸೀತೆಯ ನೋ-
ಡಲ್ತ್ವರೆಪಡುತ್ತಿರಲವರನ್ ಹರೆಯುತಿರ್ದರ್ ||

ಕಾರ್ಪಣ್ಯದೊಳ್ ಸಮರದೊಳ್
ಪತಿಸಮಕ್ಷದೊಳ್ ವಿವಾಹ ಯಾಗಾದಿಗಳೊಳ್ |
ನಾರಿಯನ್ ನೋಡುವುದನುಚಿ-
ತವಲ್ಲವರಂ ತಡೆಯದಿರೆಂದನಾ ರಾಮಂ ||

ಹಾಸಮೊಗದಿಂದಲ್ ಬೆರಗು
ಸಂಭ್ರಮ ವಾತ್ಸಲ್ಯದಿಂದಲ್ ನಾಥನಂ ಕಾ- |
ಣ್ಬ ಹೆಬ್ಬಯಕೆಯಿಂದಲ್ ಅರ-
ವಿಂದವದನನೆದುರು ಜಾನಕಿ ಬಂದುನಿಂತಳ್ ||

ಭದ್ರೆ ಮಾನುಷ ಯತ್ನದೊಳ್
ಲಂಕೇಶಂ ವಧಿಸಿ ನಿನ್ನಂ ನಾಂ ಗೆಲ್ವಿಹೆಂ |
ಲೋಕವೀಕ್ಷಿಸಿತು ನನ್ನೀ
ಬಾಹುಬಲಮಂ ಫಲಕೊಟ್ಟಿತೀಪರಿಶ್ರಮಂ ||

ಅಮಾನುಷದಿಂದಾದನ-
ರ್ಥವನ್ ಮಾನುಷದಿಂ ಪರಿಹರಿಸಿದೆನೈ ಧರಿ- |
ತ್ರೀಸುತೆ ಹನುಮ ಸುಗ್ರೀವ
ವಿಭೀಷಣ ಕಪಿಭಲ್ಲೂಕಾದಿಳ ನೆರವಿನೊಳ್ ||

ಆನುಡಿಯಕೇಳ್ದಾ ಧರಿ-
ತ್ರೀಸುತೆಯಮುಖಕಮಲವರಳಿತು ಹರಿಣದವೊಲ್ |
ರಾಮನಂತರಂಗವದುರಿ-
ತಿತ್ತಂ ಲೋಕೋಪವಾದದಾಲೋಚನೆಯೊಳ್ ||

ಜನಕರಾಜಪುತ್ರಿ ಕೇಳೆ
ನ್ನಪಮಾನಂ ಕಳೆಯಲೀಯನುವರಮೆಸಗಿದೆನ್ |
ವಂಶದ ಕೀರುತಿಯಂ ಮೆರೆ-
ಯಿಸಲಂ ಲೋಕಶೋಕನಾಶಕಂ ಲಂಕಾವಿನಾಶಂ ||

ಕ್ಷೀಣಾಕ್ಷಿಗಂ ಪರಂಜ್ಯೋ-
ತಿಯೊಪ್ಪದವೊಲ್ ಸತ್ಕುಲಜಾತಗಂ ನೀನೆಂ- |
ತೊಪ್ಪುವೆಯೈ ನೀಂ ಪೋಗುಂ
ನಿನ್ನಿಚ್ಛೆ  ನಿನ್ನಿಂದುಪಕಾರವಿಲ್ಲೆನಗಂ |

ರಾವಣಾಧೀನಳಾದವ-
ಳಿಗಂ ಎನ್ನವಾತ್ಸಲ್ಯವಿಲ್ಲಂ ಪೋಗು ನೀಂ |
ದಶದೆಸೆಯೊಳ್ ಭರತಶತೃ
ಘ್ನ ವಿಭೀಷಣರಬಳಿಗೋ ಲಕ್ಷ್ಮಣನಬಳಿಗೋ ||

ಆಗಂತುಕ ಮಾತುಗಳಿಂ
ಸರ್ವರೆದುರಿಗಾದಪಮಾನದಿಂ ಹೊನಲಿನಂ- |
ತೊರಲಿ ಬರುತಿರ್ಪಶ್ರು ಧಾ-
ರೆಯಿಂ ಸೀತೆ ಮೆಲ್ಲನೆಯಿಂತು ಗದ್ಗದಿಸಿದಳ್ ||

ರಾಕ್ಷಸನಿಗೆ ದೊರಕಿದುದೆನ-
ತಪ್ಪಲ್ಲೆನ್ನ ಮನ ನಿನ್ನನ್ನಗಲಿಲ್ಲ ಎ- |
ನ್ನಲ್ಲವಿಶ್ವಾಸ ನಿನಗುಚಿ-
ತವಲ್ಲ ಕೋಸಲೇಂದ್ರ  ಎಮ್ಮ ದಾಂಪತ್ಯದೊಳ್ ||

ಶೋಕವೇಕೆ ಹನುಮನ ಸಾ
ಗರೋಲ್ಲಂಘನವೇಕೆ ಸಖರ ಕಾರ್ಪಣ್ಯವೇ- |
ಕೆ ಮೇಣೇಕೀ ನಿಷ್ಫಲ
ಪ್ರಾಣಹರಣ ರಾವಣ ಲಂಕಾವಿನಾಶಮಂ ||

ಅಂದೇ ಪ್ರಾಣ ತೊರೆಯುತಿ-
ರ್ದೆನ್ ಹನುಮನಿಂ ಪೇಳ್ಪೊಡೆ ಎನ್ನಭಕ್ತಿಯಲ- |
ಕ್ಷಿಸಲ್ಪಟ್ಟಿತೀಗ ಚಿತೆಯಂ
ಪೇರಿಸು ಸೌಮಿತ್ರಿ ಅಗ್ನಿಗಾಹುತಿಯಾಗೆಪೆನ್ ||

ಹೋಹೋ ಹಾಹಾ ಎಂದಳ-
ಲಿದರ್ ಸುರಾಸುರರ್ ಸೀತೆ ಯಜ್ಞಾಹುತಿಯಾ- |
ಗಲ್ ದೇವ ದಾನವ ಯಕ್ಷ
ಗಂಧರ್ವ ಋಷಿ ಕಿನ್ನರಾದಿ ಸಮಕ್ಷಮದೊಳ್ ||

ಭದ್ರಬಾಹುಗಳೊಳ್ ಜನಕ
ಸುತೆಯಂ ಪಿಡಿದು ಮೂರ್ತನಾದನಗ್ನಿದೇವನ್ |
ಪಾಪರಹಿತಳಿವಳ್ ಸ್ವೀಕ
ರಿಸೈ ರಾಮ ಮನೋವಾಕ್ಕಾಯ ಶುದ್ಧಳಿವಳ್ ||

ಜಾನಕಿ ಪರಿಶುದ್ದಳ್ ಮೇಣ್
ಲೋಗರಲ್ವರ್ ಸ್ವಪ್ನದೊಳಾಗಲ್ ದುಷ್ಟಾತ್ಮನ್ |
ಸೀತೆಯಂ ತಾಕಲಾರನ್
ಹವ್ಯವಾಹನಿವಳನೀಗ ಸ್ವೀಕರಿಸಿಹೆನ್ ||

[ಪುಷ್ಪಗಳುದುರಿದವ್ ವ್ಯೋಮ-
ದೊಳ್ ಕಪಿ ಕೇಕೆಗಳಾದವ್ ಪೃಥ್ವಿಯೊಳ್ ಹಸ- |
ನ್ಮೊಗವಾಯ್ತು ಸಕಲರೊಳ್ಮ-
ತ್ತೊಂದಾದರ್ ಲಂಕೆಯೊಳ್ ಜಾನಕೀರಾಮರ್ ||]

Tuesday, October 31, 2017

ರಾಜ್ಯೋತ್ಸವ ಏಕೆ? ಏನು?

ಪ್ರತಿವರ್ಷ ನವೆಂಬರ ತಿಂಗಳಿನ ಮೊದಲ ದಿನವನ್ನು ಕರ್ನಾಟಕದಾದ್ಯಂತ ಕನ್ನಡ ರಾಜ್ಯೋತ್ಸವವೆಂದು ಆಚರಿಸುತ್ತೇವೆ. ಈ ದಿನ ಕರ್ನಾಟಕದ ಉದಯವಾಯಿತು ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಕರ್ನಾಟಕ ಉದಯವಾಯಿತು ಎಂದರೇನು? ಅಂದಿನವರೆಗೂ ಅದು ಎಲ್ಲಿತ್ತು? ನಾವು ಇಂದು ಕರ್ನಾಟಕ ಎಂದು ಕರೆಯುತ್ತಿರುವ ರಾಜ್ಯದ ಹಿನ್ನಲೆಯೇನು? ನೋಡೋಣ.

ಕನ್ನಡ ನಾಡಿನ ಭವ್ಯ ಸಾಮ್ರಾಜ್ಯಗಳಲ್ಲೊಂದಾದ ವಿಜಯನಗರದ ಪತನಾನಂತರ ಕನ್ನಡ ಭಾಷಿಕರು ಹಂಚಿಹೋದರು. ಬಿಜಾಪುರದ ಸುಲ್ತಾನರು, ಮರಾಠರು, ಹೈದರಾಬಾದಿನ ನಿಜಾಮರು, ಶ್ರೀರಂಗಪಟ್ಟಣದ ಸುಲ್ತಾನರು, ಕೊಡಗಿನ ನಾಯಕರು ವಿವಿಧ ಭಾಗಗಳ ಕನ್ನಡಿಗರನ್ನು ಆಳಿದರು. ಬ್ರಿಟೀಷರ ಅಗಮನಾನಂತರ ಅವು ಬಾಂಬೆ, ಮದರಾಸು, ಹೈದರಾಬಾದು, ಮೈಸೂರು, ಕೊಡಗುಗಳಾದವು. ಮೈಸೂರು, ಹೈದರಾಬಾದು ಮತ್ತು ಕೊಡಗುಗಳು ಪ್ರತ್ಯೇಕ ಸಂಸ್ಥಾನಗಳಾದರೆ ಬಾಂಬೆ ಮತ್ತು ಮದರಾಸು ಬ್ರಿಟೀಷರ ನೇರ ಆಳ್ವಿಕೆಯಲ್ಲಿದ್ದವು.

೧೯ನೇ ಶತಮಾನದ ಕೊನೆಯ ವರ್ಷಗಳಲ್ಲಿ ಭಾರತದಲ್ಲಿ ಆರಂಭವಾದ ರಾಷ್ಟೀಯ ಪರಿಕಲ್ಪನೆಗಳು ಕನ್ನಡಿಗರಿಗೂ ಹಬ್ಬಿ ಕರ್ನಾಟಕ ಪ್ರಾದೇಶಿಕ ಕಾಂಗ್ರೆಸ್ಸಿನ ಉದಯವಾಯಿತು. ಅದಕ್ಕೂ ಮುಂಚೆ ೧೮೯೦ರಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಗಳನ್ನು ಕಾಪಾಡಲು ರಾವ್ ಬಹುದ್ದೂ್ ದೇಶಪಾಂಡೆಯವರ ಮುಂದಾಳತ್ವದಲ್ಲಿ ಬಾಂಬೆ ಪ್ರಾಂತ್ಯದ ಧಾರವಾಡದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘವು ಸ್ಥಾಪಿಸಲ್ಪಟ್ಟಿತು. ಇದೇ ಸಂಘ ಮುಂದೆ ಕರ್ನಾಟಕ ಏಕೀಕರಣದಲ್ಲಿ ಪ್ರಮುಖ ಪಾತ್ರವನ್ನು ವಹಿಸಿತು.

ಕನ್ನಡಿಗರ ಏಕೀಕರಣ ಚಳುವಳಿಯಲ್ಲಿ ಮೈಸೂರಿಗಿಂತಲೂ ಬಾಂಬೆ ಪ್ರಾಂತ್ಯದ ಕನ್ನಡಿಗರು ಮುಖ್ಯ ಪಾತ್ರ ವಹಿಸಿದರು. ಅವರಲ್ಲಿ ಮುಂಚೂಣಿಯ ಹೆಸರು ಧಾರವಾಡದ ಆಲೂರು ವೆಂಕಟರಾಯರು. ಕನ್ನಡ ವಿದ್ಯಾವರ್ಧಕ ಸಂಘವನ್ನು ಕನ್ನಡ ಏಕೀಕರಣ ಸಮಿತಿಯನ್ನಾಗಿ ಮಾರ್ಪಡಿಸುವಲ್ಲಿ ಆಲೂರರು ವಹಿಸಿದ ಪಾತ್ರ ತುಂಬಾ ಪ್ರಮುಖವಾದುದು. ಕನ್ನಡಿಗರ ಇತಿಹಾಸವನ್ನು ಜನರಿಗೆ ತಿಳಿಸಲು ಆಲೂರರು ೧೯೧೪ರಲ್ಲಿ ‘ಕರ್ನಾಟಕ ಗತವೈಭವ’ ಎಂಬ ಪುಸ್ತಕವನ್ನು ಬರೆದರು. ಅವರು ವಿವಿಧ ಭಾಗಗಳಲ್ಲಿ ಸಂಚರಿಸಿ ಕನ್ನಡಿಗರು ಒಂದಾಗಬೇಕಾದ ಮಹತ್ವವನ್ನು, ಅವಶ್ಯಕತೆಯನ್ನು ಸಾರಿದರು. ಅದೇ ಸಮಯದಲ್ಲಿ ಹುಯಿಲುಗೋಳ ನಾರಾಯಣರಾಯರು ಬರೆದ ‘ಉದಯವಾಗಲಿ ನಮ್ಮ ಚಲುವ ಕನ್ನಡನಾಡು’ ಹಾಡು ಕನ್ನಡಿಗರ ನಾಡಗೀತೆಯಾಯಿತು. ಮೈಸೂರಿನಲ್ಲಿ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರ ಆಸಕ್ತಿಯ ಫಲವಾಗಿ ಕರ್ನಾಟಕ ಸಾಹಿತ್ಯ ಪರಿಷತ್ತು ಆರಂಭವಾಯಿತು. ನಿಧಾನವಾಗಿ ಅದು ಬಾಂಬೆ, ಮದರಾಸು, ಹೈದರಾಬಾದು ಪ್ರಾಂತ್ಯಗಳಿಗೂ ಹರಡಿತು.

ಕರ್ನಾಟಕ ಕಾಂಗ್ರೆಸ್ಸು ಸಮಿತಿ ೧೯೨೪ರ ಅಖಿಲ ಭಾರತ ಕಾಂಗ್ರೆಸ್ಸಿನ ಸಮ್ಮೇಳನವನ್ನು ಬೆಳಗಾವಿಗೆ ತರಲು ಸಫಲವಾಯಿತು. ಮಹಾತ್ಮ ಗಾಂಧಿಯವರು ಆ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದರು. ಅದೇ ಸಮಯದಲ್ಲಿ ಮೊಟ್ಟಮೊದಲ ಬಾರಿಗೆ ಸಿದ್ದಪ್ಪ ಕಾಂಬ್ಳಿಯವರ ಅಧ್ಯಕ್ಷತೆಯಲ್ಲಿ ಕರ್ನಾಟಕ ಏಕೀಕರಣ ಸಮ್ಮೇಳನವೂ ನಡೆಯಿತು. ಈ ಸಮ್ಮೇಳದ ನಂತರ ಕಾಂಗ್ರೆಸ್ಸು ಸಮಿತಿ ಮತ್ತು ಏಕೀಕರಣ ಸಮಿತಿ ಕನ್ನಡ ಭಾಷಿಕರ ಪ್ರತ್ಯೇಕ ರಾಜ್ಯಕ್ಕಾಗಿ ಒಟ್ಟಾಗಿ ಹೋರಾಡಲು ನಿರ್ಧರಿಸಿದವು. ಸ್ವಾತಂತ್ರ್ಯಾನಂತರ ಭಾರತವನ್ನು ಭಾಷಾವಾರು ಪ್ರಾಂತಗಳಾಗಿ ವಿಂಗಡಿಸಲು ಶಿಫಾರಸ್ಸು ಮಾಡಿದ ೧೯೨೮ರ ನೆಹರೂ ಸಮಿತಿಯ ವರದಿಗೆ ಎಲ್ಲ ಕನ್ನಡಿಗರಿಂದಲೂ ಬೆಂಬಲ ವ್ಯಕ್ತವಾಯಿತು. 

ಸ್ವಾತಂತ್ರ್ಯಾ  ಪೂರ್ವದಲ್ಲಿ ಅಖಿಲ ಭಾರತ ಕಾಂಗ್ರೆಸ್ಸು ಕನ್ನಡಿಗರ ಪ್ರತ್ಯೇಕ ರಾಜ್ಯಕ್ಕೆ ಸಮ್ಮತಿಸಿದ್ದರೂ ಸ್ವಾತಂತ್ರ್ಯಾ ನಂತರದ ‘ಜೆ.ವಿ.ಪಿ.’ (ನೆಹರು, ವಲ್ಲಭಭಾಯಿ ಪಟೇಲ್, ಪಟ್ಟಾಭಿ ಸೀತಾರಾಮಯ್ಯ ನಮಿತಿ) ಕಮಿಟಿ ಆಂಧ್ರ ರಾಜ್ಯಕ್ಕೆ ಸಮ್ಮತಿಸಿ, ಕನ್ನಡ ರಾಜ್ಯವನ್ನು ನಿರಾಕರಿಸಿತು. ಇದರಿಂದ ಅಸಮಾಧಾನಗೊಂಡ ಕನ್ನಡಿಗರು ನಿಜಲಿಂಪ್ಪ, ಕೆಂಗಲ್ ಹನುಮಂತಯ್ಯ, ಗುಂಡಪ್ಪ ಹಾಲ್ಕೇರಿ ಮುಂತಾದವರ ಮುಂದಾಳತ್ವದಲ್ಲಿ ಕರ್ನಾಟಕ ಏಕೀಕರಣ ಪಕ್ಷವನ್ನು ಸ್ಥಾಪಿಸಿದರು. ೧೯೫೧ರ ಚುನಾವಣೆಯಲ್ಲಿ ಅನೇಕ ಸ್ಥಳಗಳಲ್ಲಿ ಕರ್ನಾಟಕ ಏಕೀಕರಣ ಪಕ್ಷ ಕಾಂಗ್ರೆಸ್ಸನ್ನು ಸೋಲಿಸಿತು. ಕನ್ನಡ ಸಾಹಿತಿಗಳೂ ಅಖಂಡ ಕರ್ನಾಟಕಕ್ಕಾಗಿ ಒತ್ತಾಯಿಸಿರು. ಏಕೀಕರಣಕ್ಕಾಗಿ ಹೆಚ್ಚಾಗುತ್ತಿದ್ದ ಚಳುವಳಿಗಳಿಗೆ ಮಣಿದು ಕೇಂದ್ರ ಸರ್ಕಾರ ಫಸಲ್ ಅಲಿ ಸಮಿತಿಯನ್ನು ನೇಮಿಸಿತು. ಕೊನೆಗೆ ಫಸಲ್ ಅಲಿ ಸಮಿತಿಯ ಶಿಫಾರಸ್ಸಿನಂತೆ ಮೈಸೂರು, ಹೈದರಾಬಾದು, ಮದರಾಸು, ಕೊಡಗು, ಬಾಂಬೆ ಪ್ರಾಂತ್ಯಗಳ ಕನ್ನಡಿಗರನ್ನು ಒಗ್ಗೂಡಿಸಿ ೧೯೫೬ ನವೆಂಬರಿನ ಮೊದಲನೇ ದಿನ ’ಮೈಸೂರು ರಾಜ್ಯವನ್ನು’ ಸ್ಥಾಪಿಸಲಾಯಿತು. ಅದೇ ದಿನವನ್ನು ನಾವು ಕನ್ನಡ ರಾಜ್ಯೋತ್ಸವವೆಂದು ಇಂದಿಗೂ ಆಚರಿಸುತ್ತೇವೆ. ದೇವರಾಜ ಅರಸರು ಮುಖ್ಯಮಂತ್ರಿಯಾದಾಗ ೧೯೭೨ರಲ್ಲಿ ಮೈಸೂರು ರಾಜ್ಯವನ್ನು ‘ಕರ್ನಾಟಕ’ವೆಂದು ಮರುನಾಮಕರಣ ಮಾಡಿದರು.

ಇಂದು ಕನ್ನಡಕ್ಕೆ ೨ ಭಾರತರತ್ನ ಪ್ರಶಸ್ತಿಗಳು, ೮ ಜ್ಞಾನಪೀಠ ಪ್ರಶಸ್ತಿಗಳು ಸಂದಿವೆ. ಕನ್ನಡವನ್ನು ಶಾಸ್ತ್ರೀಯ ಭಾಷೆಯನ್ನಾಗಿ ಘೋಷಿಸಲಾಗಿದೆ. ಎಷ್ಟೋ ಮಹನೀಯರು ವಿವಿಧ ರಂಗಗಳಲ್ಲಿ ಭಾರತಕ್ಕೆ ತಮ್ಮದೇ ಆದ ಕೊಡುಗೆ ಕೊಟ್ಟಿದ್ದಾರೆ. ಮೋಕ್ಷಗುಂಡಂ ವಿಶ್ವೇಶ್ವರಯ್ಯ, ಬೆನಗಲ್ ನರಸಿಂಗ ರಾವ್ (ಇವರು ಭಾರತ ಸಂವಿಧಾನ ಸಭೆಯ ಮುಖ್ಯ ಕಾರ್ಯದರ್ಶಿಗಳು. ಭಾರತದ ಸಂವಿಧಾನಕ್ಕೆ ಇವರ ಕೊಡುಗೆ ಅಪಾರ), ಬಿ.ಡಿ. ಜತ್ತಿ, ಸಿ.ಎನ್.್ ರಾವ್… ಹೀಗೆ ಪಟ್ಟಿ ಇನ್ನೂ ಮುಂದುವರೆಯುತ್ತದೆ. ಭಾರತದ ರಾಜಕೀಯ, ಆರ್ಥಿಕತೆ, ಸಾಹಿತ್ಯ, ಸಂಸ್ಕೃತಿಗಳಿಗೆ ಕನ್ನಡಿಗರ ಕೊಡುಗೆ ಅಪಾರ. 

ಹಾಗಾದರೆ ಇಂದು ನಮ್ಮ ಕರ್ತವ್ಯವೇನು? ‘ನವೆಂಬರ ಕನ್ನಡಿಗರು’ - ಇದು ಕನ್ನಡಿಗರಿಗೆ ಕನ್ನಡ ನವೆಂಬರಿನಲ್ಲಿ ಮಾತ್ರ ಜ್ಞಾಪಕ ಬರುತ್ತದೆಂದು ಟೀಕಿಸುವ ರೀತಿ. ಇದು ಒಂದು ಕಡೆಯ ಸತ್ಯವಾದರೆ, ಮತ್ತೊಂದು ತುದಿಯಲ್ಲಿ ಅತಿಯಾದ ಪ್ರೇಮವೂ ನಮಗೆ ಅಷ್ಟೇ ತೊಂದರೆ ಕೊಡುತ್ತಿದೆ. ಕನ್ನಡ ಇಂಗ್ಲೀಷಿನ ತುಳಿತಕ್ಕೆ ಸಿಗುತ್ತಿದೆ, ಬೆಂಗಳೂರಿನಲ್ಲಿ ಕನ್ನಡಿಗರೇ ಇಲ್ಲ, ಕನ್ನಡಿಗರಿಗೆ ಕನ್ನಡವೇ ಬೇಕಿಲ್ಲ… ಇವು ಎಲ್ಲರೂ ಹೇಳುತ್ತಿರುವ ಮಾತುಗಳು. ಆದರೆ ನಾವು ಕೆಲವು ಮೂಲಭೂತ ಪ್ರಶ್ನೆಗಳ ಬಗ್ಗೆ ಯೋಚಿಸಬೇಕಾಗುತ್ತದೆ. ಒಂದು ಭಾಷೆ ಯಾವಾಗ ಬೆಳೆಯುತ್ತದೆ? ಏಕೆ ಬೆಳೆಯಬೇಕು? ಈ ಪ್ರಶ್ನೆಗಳನ್ನು ನಾವು ನಮಗೇ ಕೇಳಿಕೊಳ್ಳಬೇಕಾಗುತ್ತದೆ. ಇಂದು ಕನ್ನಡಕ್ಕಿರುವ ತೊಂದರೆ ಬೇರೆ ಭಾಷೆಗಳಿಂದಲ್ಲ, ಕನ್ನಡಿಗರಿಂದಲೇ!

ಭಾಷೆಯ ಬೆಳವಣಿಗೆಗೆ ಭಾಷಿಕರಷ್ಟೇ ಮುಖ್ಯವಾದುದು ಆ ಭಾಷೆಯಲ್ಲಿ ನಡೆಯವ ಸಾಹಿತ್ಯ, ಸಂಗೀತ, ಕಲೆ, ಸಂಶೋಧನೆಗಳು, ಚಿಂತನೆಗಳು. ಇಂದು ಕನ್ನಡಕ್ಕಿರುವ ಮುಖ್ಯವಾದ ತೊಂದರೆ ಅದರ ತತ್ವ, ಇತಿಹಾಸ, ಸಾಹಿತ್ಯಗಳ ಅಲಕ್ಷ್ಯ. ಬೆಂಗಳೂರಿನ ಪರಭಾಷಿಕರ ವಿರುದ್ಧ ಮಾತಾಡುವ ಜನರು, ಕನ್ನಡದ ವೈಭವದ ಪ್ರತೀಕಗಳಾದ ’ಕರ್ನಾಟಕ ಗತವೈಭವ’, ‘ಜೀವನಧರ್ಮಯೋಗ’ ಮುಂತಾದ ಪುಸ್ತಕಗಳು ಕರ್ನಾಟಕದ ಎಷ್ಟೋ ಮುಖ್ಯ ಪುಸ್ತಕ ಭಂಡಾರಗಳಲ್ಲಿ, ಮಾರಾಟ ಮಳಿಗೆಗಳಲ್ಲಿ ಸಿಗದಿರುವುದು ನಮ್ಮ ದೌರ್ಭಾಗ್ಯ ಎಂಬುದನ್ನು ಅರ್ಥಮಾಡಿಕೊಳ್ಳುತ್ತಿಲ್ಲ. ಭಾಷೆ ಒತ್ತಾಯದಿಂದ ಅಭಿವೃದ್ಧಿಯಾಗುವುದಿಲ್ಲ, ಕೃಷಿಯಿಂದ ಅಭಿವೃದ್ಧಿಯಾಗುತ್ತದೆ. 


ರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ಆಚರಣೆಯ ಜೊತೆಗೆ, ಇತಿಹಾಸ, ಸಮಸ್ಯೆ, ಪರಿಹಾರಗಳ ಕುರಿತು ಯೋಚಿಸುವುದೂ ಅತ್ಯಂತ ಅವಶ್ಯಕ. ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.

Saturday, December 17, 2016

ವಸುದೈವ ಕುಟುಂಬಕಂ?

ವಸುದೈವ ಕುಟುಂಬಕಂ - ಇಡೀ ವಿಶ್ವವೇ ಒಂದು ಕುಟುಂಬ - ಇದು ಇತ್ತೀಚೆಗೆ ಪ್ರಾಮುಖ್ಯತೆ ಪಡೆದುಕೊಳ್ಳುತ್ತಿರುವ ವಾಕ್ಯ. ಮಹಾ ಉಪನಿಷತ್ತಿನ ಈ ವಾಕ್ಯ, ಭಾರತದ ಸಾಮಾನ್ಯ ಜನತೆಯಿಂದ ಹಿಡಿದು ಅಂತರಾಷ್ಟ್ರೀಯ ಮಟ್ಟದವರೆಗೂ ಪ್ರಚಲಿತದಲ್ಲಿದೆ. ಆರ್ಥಿಕವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಎಲ್ಲರೂ ಒಂದಾಗಿ ಬಾಳೋಣವೆಂದು ದೇಶ-ವಿದೇಶಗಳ ನಾಯಕರು ಅಂತರಾಷ್ಟ್ರಿಯ ಸಭೆಗಳಲ್ಲಿ ಹೇಳುತ್ತಿದ್ದಾರೆ. ಆದರೆ ಆ ಎರಡು ಪದಗಳ ಹಿಂದಿನ ಮತ್ತೆರಡು ಪದಗಳು ಯಾರಿಗೂ ಬೇಕಿಲ್ಲ. “ಉದಾರ ಚರಿತಾನಾಂತು ವಸುದೈವ ಕುಟುಂಬಕಂ” - ಉದಾರ ಮನಸ್ಸಿದ್ದವನಿಗೆ ಇಡೀ ವಿಶ್ವವೇ ಒಂದು ಕುಟುಂಬ - ಇದು ಪೂರ್ಣವಾಕ್ಯ. ಉದಾರತೆಯಿಲ್ಲದಿದ್ದರೆ ೧೦ ಮಂದಿಯ ಗುಂಪು ಕೂಡ ಕುಟುಂಬವಾಗುವುದಿಲ್ಲ. ಇದು ಯಾರಿಗೂ ತೋಚಿದಂತಿಲ್ಲ. ಪ್ರಾಣಿ ಸಂರಕ್ಷಣೆ, ಪರಿಸರ ಸಂರಕ್ಷಣೆಗಳಂತಹ ವಿಷಯಗಳ ಕುರಿತಾಗಿ - ಅವನ್ನು ಪಾಲಿಸದಿದ್ದರೂ - ಅನೇಕ ಒಪ್ಪಂದಗಳನ್ನು ಮಾಡಿಕೊಂಡಿದ್ದೇವೆ. ಮಾನವ ಸಂರಕ್ಷಣೆಗಾಗಿ ವಿಶ್ವಸಂಸ್ಥೆ ಎಂದು ಕರೆಸಿಕೊಳ್ಳುವ ಸಂಘದ ಒಂದು ಮುಖ್ಯ ಅಂಗವೇ ಇದೆ. ಆದರೆ ಸುಮಾರು ೬ ವರ್ಷಗಳಿಂದ ಮಧ್ಯ ಪ್ರಾಚ್ಯ ದೇಶಗಳಲ್ಲಿ ನಡೆದ, ನಡೆಯುತ್ತಿರುವ ನರಮೇಧ ವಿಶ್ವಸಂಸ್ಥೆಯಲ್ಲಿರುವ “ವಿಶ್ವವನ್ನು” ಎತ್ತಿತೋರಿಸುತ್ತಿದೆ. ಟ್ಯುನೇಶಿಯಾ ದೇಶದಲ್ಲಿ ಮಾನವ ಹಕ್ಕು, ಪ್ರಜಾಪ್ರಭುತ್ವ, ಸ್ವಾತಂತ್ರಗಳಿಗಾಗಿ ಅಲ್ಲಿನ ರಾಜನ ವಿರುದ್ಧ ೨೦೧೦ರಲ್ಲಿ ಆರಂಭವಾದ ಪ್ರಜಾದಂಗೆಗಳು, ಇಜಿಪ್ಟ್, ಇರಾಕ್, ಲಿಬಿಯಾ, ಯೆಮೆನ್, ಬಹ್ರೇನ್ ಮುಂತಾದ ದೇಶಗಳಿಗೆ ಹರಡಿ, ಇಂದು ಸಿರಿಯಾದಲ್ಲಿ ಮಾರಣಹೋಮ ಮಾಡುತ್ತಿದೆ. ಅಲ್ಲಿನ ಘಟನೆಗಳನ್ನು ಸ್ಥೂಲವಾಗಿ ನೋಡೋಣ.

ನಿರುದ್ಯೋಗ, ಕಂಗೆಟ್ಟ ಆರ್ಥಿಕ ಪರಿಸ್ಥಿತಿ, ಸರ್ಕಾರದ ಭ್ರಷ್ಟಾಚಾರ, ದುರಾಡಳಿತಗಳ ವಿರುದ್ಧ ೨೦೧೦ರ ಡಿಸೆಂಬರಿನಲ್ಲಿ ಟ್ಯುನೇಶಿಯಾ ದೇಶದಲ್ಲಿನ ಯುವಜನತೆ ದಂಗೆಯೇಳುತ್ತದೆ. ಆ ದಂಗೆಗೆ ಹೆದರಿ ಅಲ್ಲಿನ ರಾಜ ರಾಜೀನಾಮೆ ನಿಡುತ್ತಾನೆ. ಅನಂತರ ಅಲ್ಲಿ ಪ್ರಜಾಪ್ರಭುತ್ವ ವ್ವವಸ್ಥೆ ಶುರುವಾಗುತ್ತದೆ. ಇದನ್ನೇ ಮಾದರಿಯಾಗಿಕೊಂಡು ಸಿರಿಯಾದ ಅಸ್ಸಾದ್, ಇಜಿಪ್ಟ್‌ನ ಹೊಸ್ನಿ ಮುಬಾರಕ್, ಲಿಬಿಯಾದ ಮೊಹಮ್ಮದ್ ಗಡಾಫಿ, ಯೆಮನ್ನಿನ ಅಲಿ ಅಬ್ದುಲ್ಲ ಸಲೇಹ್ ಸರ್ಕಾರಗಳ ವಿರುದ್ಧ ಅಲ್ಲಲ್ಲಿನ ಜನಗಳು ತಿರುಗಿಬೀಳುತ್ತಾರೆ. ಸುಮಾರು ದಿನಗಳ ಪ್ರತಿಭಟನೆಗಳ ನಂತರ ಆ ದೇಶಗಳ ಸರ್ವಾಧಿಕಾರಿಗಳು ರಾಜೀನಾಮೆ ನೀಡುತ್ತಾರಾದರೂ, ನೀಡುವ ಮುನ್ನ ನೂರಾರು ಜನರ ಹತ್ಯೆ ಮಾಡುತ್ತಾರೆ. ಮುಂದೆ ಅದು ಸಿರಿಯಾಕ್ಕೂ ಹರಡುತ್ತದೆ. ಸಿರಿಯಾ ದೇಶದ ನಾಗರೀಕ ಜೀವನ ಸಂಪೂರ್ಣ ಹದಗೆಡುತ್ತದೆ. ೨೦೧೧ನೇ ಮಾರ್ಚ್ ತಿಂಗಳಿನಲ್ಲಿ ಸಿರಿಯಾ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ೧೫ ಮಕ್ಕಳನ್ನು ಆ ಸರ್ಕಾರ ಬಂಧಿಸುವುದೇ ಅಲ್ಲದೆ ಅವರಿಗೆ ಚಿತ್ರಹಿಂಸೆ ನಿಡುತ್ತದೆ. ಇದರ ವಿರುದ್ಧ ಸಿರಿಯಾದ ಅನೇಕ ನಗರಗಳಲ್ಲಿ ಜನ ಪ್ರತಿಭಟನೆಗೆ ಧುಮುಕುತ್ತಾರೆ. ಕೆಲವೇ ದಿನಗಳಲ್ಲಿ ಆ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿ ಅನೇಕ ಜನರ ಪ್ರಾಣಹಾನಿಯಾಗುತ್ತದೆ. ಸಿರಿಯಾ ಸರ್ಕಾರ ಪ್ರತಿಭಟನೆ ಹತ್ತಿಕ್ಕಲು ಸೇನೆ ಬಳಸುತ್ತದೆ. ೨೦೧೨ರ ವೇಳೆಗೆ ವಿಶ್ವಸಂಸ್ಥೆ ಸಿರಿಯಾದಲ್ಲಿನ ಪರಿಸ್ಥಿತಿಯನ್ನು ನಾಗರೀಕ ಕದನವೆಂದು ಘೋಷಿಸುತ್ತದೆ. ಬರುವ ದಿನಗಳಲ್ಲಿ ಸಿರಿಯಾದ ಪರಿಸ್ಥಿತಿ ನಾಗರೀಕ ಕದನದಿಂದ ಸೂಫಿ ಸರ್ಕಾರ ಮತ್ತು ಬಹುಸಂಖ್ಯಾತ ಸನ್ನಿ ಪಂಗಡಗಳ ನಡುವಿನ ಕದನವಾಗಿ ಮಾರ್ಪಡುತ್ತದೆ. ಸನ್ನಿ ಪಂಗಡ ದೇಶಗಳಾದ ಸೌದಿ ಅರೇಬಿಯಾ, ಟರ್ಕಿ ಮತ್ತು ಕತಾರ ದೇಶಗಳ ಜತೆಗೆ ಅಮೇರಿಕ ಸಿರಿಯಾದ ಸನ್ನಿ ಉಗ್ರಗಾಮಿಗಳಿಗೆ ಬೆಂಬಲ ಸೂಚಿಸಿದರೆ, ಇರಾನ್ ಮತ್ತು ರಷ್ಯಾ ದೇಶಗಳು ಸಿರಿಯಾ ಸರ್ಕಾರಕ್ಕೆ ಬೆಂಬಲ ನಿಡುತ್ತವೆ. ಸಿರಿಯಾದ ಪರಿಸ್ಥಿತಿಯನ್ನು ತನ್ನ ಲಾಭಕ್ಕಾಗಿ ಬಳಸಿಕೊಂಡ ಆಲ್ ಖೈದದಂತಹ ಭಯೋತ್ಪಾದಕ ಸಂಘಟನೆಗಳು ಸನ್ನಿ ಪ್ರತ್ಯೇಕ ರಾಷ್ಟ್ರಕ್ಕೆ ಒತ್ತಾಯಿಸಿ ಪ್ರತಿಭಟನೆಯ ನೆಪದಲ್ಲಿ ಜನರ ಮಾರಣ ಹೋಮ ಶುರುಮಾಡುತ್ತದೆ. ಅದೇ ಮುಂದೆ “ಐಸಿಸ್” ಎಂಬ ಪ್ರತ್ಯೇಕ ಸಂಘಟನೆಯಾಗುತ್ತದೆ. ಅಂತರಾಷ್ಟೀಯ ಬೆಂಬಲ ಆಯುಧಗಳ ಪೂರೈಕೆಯನ್ನು ಸುಲಭಮಾಡುತ್ತದೆ. ಅಲ್ಲಿಗೆ ಆಧುನಿಕ ಜಗತ್ತಿನ ಅತ್ಯಂತ ಕ್ರೂರ ದಿನಗಳ ಶಕೆ ಆರಂಭವಾಗುತ್ತದೆ. ಐಸಿಸ್ ಸಂಘಟನೆ ಜನರನ್ನು ಹಿಂಸಿಸಿ ಕೊಲ್ಲವುದೇ ಅಲ್ಲದೆ ಅದರ ವೀಡಿಯೋ ಚಿತ್ರೀಕರಣ ಮಾಡಿ ಸಾಮಾಜಿಕ ತಾಣಗಳಲ್ಲಿ ಹರಿಬಿಡುತ್ತದೆ. ಒಂದು ಕಡೆ ಸರ್ಕಾರ, ಮತ್ತೊಂದು ಕಡೆ ಭಯೋತ್ಪಾದಕರು - ಇವರ ನಡುವೆ ಸಿರಿಯಾ ದೇಶದ ಸಾಮಾನ್ಯ ಜನತೆ ನಲುಗಿಹೋಗುತ್ತದೆ. ಸಿರಿಯಾದ ಅರ್ಧದಷ್ಟು ಜನ ದೇಶದಿಂದ ಹೊರಹೋಗುತ್ತದೆ. ಸಿರಿಯಾದಲ್ಲಿ ಇನ್ನೂ ಅರಾಜಕತೆ ನಡೆಯುತ್ತಲೇ ಇದೆ.

ಈ ೫-೬ ವರ್ಷಗಳ ಮಧ್ಯ ಪ್ರಾಚ್ಯದ ಪರಿಸ್ಥಿತಿ ನಮ್ಮ ವಸುದೈವ ಕುಟುಂಬದ ಕ್ರೂರ ಮುಖದ ಪರಿಚಯ ಮಾಡಿಕೊಡುತ್ತದೆ. ಸುಮಾರು ೪,೫೦,೦೦೦ ಕ್ಕಿಂತಲೂ ಹೆಚ್ಚು ಜನರನ್ನು ಬಲಿ ಪಡೆದ ಈ ಘಟನೆಗಳಿಗೆ ಕಾರಣ ಯಾರು? ೯೯ರಷ್ಟು ದೇಶಗಳು ಅನುಕಂಪ ಸೂಚಿಸಿ ಕಳಚಿಕೊಂಡರೆ, ಅಮೇರಿಕಾ, ರಷ್ಯಾ, ಸೌದಿ ಅರೇಬಿಯಾ, ಫ್ರಾನ್ಸ್ ನಂತಹ ರಾಷ್ಟ್ರಗಳು ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ಬೆಂಬಲ ಸೊಚಿಸುತ್ತವೆ. ಕದನಕ್ಕೆ ಬೆಂಬಲ ಸೂಚಿಸುವ ಬದಲು ತಮ್ಮ ಶಕ್ತಿಯನ್ನು ಉಪಯೋಗಿಸಿ ಶಾಂತಿಗೆ ಒತ್ತುಕೊಟ್ಟಿದ್ದರೆ ಅದೆಷ್ಟು ಜನರ ಪ್ರಾಣ ಉಳಿಯುತ್ತಿತ್ತೋ. ಒಂದು ಉಗ್ರಗಾಮಿ ಸಂಘಟನೆಯ ಉಗಮವೇ ನಿಲ್ಲುತ್ತಿತ್ತು. ಆದರೆ ಆ ದೇಶಗಳು ಆರ್ಥಿಕ ಲಾಭವಿಲ್ಲದ ಸಿರಿಯಾ, ಲಿಬಿಯಾದಂತಹ ದೇಶಗಳಲ್ಲಿ ತಮ್ಮ ಪ್ರಭುತ್ವ ಸ್ಥಾಪಿಸುವುದಕಷ್ಟೇ ಪ್ರಯತ್ನ ಪಟ್ಟವು. ನೋಬೆಲ್ ಶಾಂತಿ ಪುರಸ್ಕಾರ ಕೊಡುವ ಅಧಿಕಾರ ಪಡೆದ ನಾರ್ವೆ, ಅಮೇರಿಕಾದ ಅಧ್ಯಕ್ಷರಿಗೆ ಆ ಪ್ರಶಸ್ತಿ ನೀಡುತ್ತದೆ. ನಾರ್ವೆ ಪ್ರಜೆಯೊಬ್ಬ ಈ ಘಟನೆಯನ್ನು ತನ್ನ ದೇಶದ ಕರಾಳ ಘಟನೆಯೆಂದು ಬರೆಯುತ್ತಾನೆ. ಲಕ್ಷಾಂತರ ನಿರಾಶ್ರಿತರಿಗೆ ಅಷ್ಟೇನು ಸದೃಢವಲ್ಲದ ದೇಶಗಳಾದ ಜೋರ್ಡಾನ್, ಟರ್ಕಿಗಳು ಆಶ್ರಯ ನೀಡಿದರೆ, ಯೂರೋಪಿನ ಬಲಾಢ್ಯ ದೇಶಗಳು ಅವರನ್ನು ಹೊರದಬ್ಬುತ್ತವೆ. 

ಈ ಎಲ್ಲಾ ಘಟನೆಗಳು ಪ್ರಸ್ತುತ ಪ್ರಪಂಚದ ತೊಟ್ಟಿಲು ತೂಗಿ ಮಗು ಜಿಗುಟುವ ವ್ಯಕ್ತಿತ್ವದ ಪರಿಚಯ ಮಾಡಿಕೊಡುತ್ತವೆ. ವಿಜ್ಞಾನ ತಂತ್ರಜ್ಞಾನಗಳು ಎಷ್ಟೇ ಮುಂದುವರಿದಿದ್ದರೂ ರಾಜಕೀಯದ ಪ್ರಾಬಲ್ಯವೇ ನಿರ್ಣಾಯಕ ಎಂಬುದನ್ನು ಎತ್ತಿ ತೋರಿಸುತ್ತದೆ. ರಾಷ್ಟ್ರಗಳಿಗೆ ಹಣ, ಅಧಿಕಾರಗಳೇ ಮುಖ್ಯ; ಶಾಂತಿ, ಸುವ್ಯವಸ್ಥೆ, ಅಭಿವೃದ್ಧಿಗಳಲ್ಲ ಎಂಬುದಕ್ಕೆ ಮಧ್ಯ ಪ್ರಾಚ್ಯದ ಘಟನೆಗಳೇ ಸಾಕ್ಷಿ.


ಇದು ಕೇವಲ ರಾಷ್ಟ್ರಗಳಿಗಷ್ಟೇ ಅಲ್ಲ, ಮನುಷ್ಯರಿಗೂ ಅನ್ವಯವಾಗುತ್ತದೆ. ಒಂದು ಜನ ಜೀವನದ ಅಭಿವೃದ್ಧಿ ಆ ಜನರ ಕಠಿಣ ಪರಿಶ್ರಮದ ಜತೆಗೆ ಅವರ ನೈತಿಕತೆಯ ಮೇಲೂ ಅವಲಂಬಿತವಾಗುತ್ತದೆ. ಭ್ರಷ್ಟಾಚಾರ ನಿರ್ಮೂಲನೆಗಾಗಿ ಸರ್ಕಾರ ಯೋಜನೆ ತಂದರೆ, ಅದನ್ನು ತಮ್ಮ ಸ್ವಂತ ಲಾಭಕ್ಕಾಗಿ ಉಪಯೋಗಿಸುವ ಜನರಿರುವವರೆಗೂ ಅಭಿವೃದ್ಧಿ ಸಾಧ್ಯವಿಲ್ಲ!

Wednesday, November 23, 2016

ಕರ್ಣ.....

ಭಾರತದ ಸಾಹಿತ್ಯ ಇತಿಹಾಸದಲ್ಲಿಯೇ ಅತ್ಯಂತ ಪೂಜಿಸಲ್ಪಟ್ಟಿರುವ, ವಿಮರ್ಶೆಗೊಳಗಾಗಿರುವ ಕೃತಿ ಮಹಾಭಾರತ. ಸುಮಾರು ಒಂದು ಲಕ್ಷಕ್ಕೂ ಮಿಗಿಲಾದ ಶ್ಲೋಕಗಳ ವೇದವ್ಯಾಸ ವಿರಚಿತ ಮಹಾನ್ ಸಂಸ್ಕೃತ ಗ್ರಂಥ. ವೈದಿಕ, ಧಾರ್ಮಿಕರಿಂದ ಹಿಡಿದು ನಾಸ್ತಿಕರವರೆಗೆ ಎಲ್ಲರಿಗೂ ಮಹಾಭಾರತ ಕಥೆಯ ಪರಿಚಯವಿದೆ. ಪರಿಚಯದ ಮಿತಿ ಭಿನ್ನ. ಮಹಾಭಾರತದ ಕುರಿತಾಗಿ ಹಲಾವಾರು ವಿದ್ವಾಂಸರು ಅನುವಾದಗಳನ್ನೂ, ಕಾದಂಬರಿಗಳನ್ನೂ ಬರೆದಿದ್ದಾರೆ. ಅನೇಕರು ತಮಗೆ ಅರ್ಥವಾದ ರೀತಿಯಲ್ಲಿ ವಿಮರ್ಶಿಸಿಯೂ ಇದ್ದಾರೆ. ಕೆಲವರು ಮೂಲಭಾರತದ ಕೆಲವು ಸನ್ನಿವೇಶಗಳನ್ನೋ, ಸಂಭಾಷಣೆಗಳನ್ನೋ, ಪಾತ್ರಗಳನ್ನೋ ತೆಗೆದುಕೊಂಡು ತಮ್ಮ ಸೃಜನಶೀಲತೆಯನ್ನು ಬೆರಸಿ ಅವುಗಳಿಗೆ ತಮ್ಮದೇ ರೀತಿಯಲ್ಲಿ ಜೀವತುಂಬಿದ್ದಾರೆ. ಅವರವರದೇ ದೃಷ್ಟಿಗಳಲ್ಲಿ ವಿವಿಧ ಪಾತ್ರಗಳನ್ನು ನಾಯಕನಾಗಿಯೋ, ನಾಯಕಿಯಾಗಿಯೋ ಬಿಂಬಿಸಿದ್ದಾರೆ. ಅಂತಹ ಅನೇಕ ಪಾತ್ರಗಳಲ್ಲಿ ಎಲ್ಲರ ದೃಷ್ಟಿಯನ್ನೂ ತನ್ನತ್ತ ಸೆಳೆದು, ಪ್ರಶಂಸೆ, ಚರ್ಚೆ, ವಾದ - ವಿವಾದಗಳಿಗೊಳಗಾಗಿರುವ ಪಾತ್ರ “ಕರ್ಣ”. ಕೆಲವರ ದೃಷ್ಟಿಯಲ್ಲಿ ಕರ್ಣನೇ ಮಹಾಭಾರತ ಕಥಾನಾಯಕ.

ಕರ್ಣ ಎಂದಾಕ್ಷಣ ಅನೇಕರ ಮನಸ್ಸಿಗೆ ಬರುವುದು ಒಬ್ಬ ದಾನಿ, ವೀರ, ಸ್ನೇಹಿತ, ತನ್ನ ಕುಲದ ದೆಸೆಯಿಂದ ಅವಮಾನ - ತಿರಸ್ಕಾರಗಳಿಗೆ ಒಳಗಾದ, ಕಾಲನ ಕೈಯಲ್ಲಿ ನಲುಗಿದ ವ್ಯಕ್ತಿಯ ಚಿತ್ರ. ಆದರೆ ನಿಜವಾಗಿಯೂ ಕರ್ಣ ಕರುಣೆಗೆ ಅರ್ಹನಾದವನೇ? ಕಥಾನಾಯಕನೇ? ಇರಬಹುದು. ಕರ್ಣ ಒಬ್ಬ ಮಾಹಾದಾನಿ. ದಾನ ಕೇಳಿದ ಒಬ್ಬ ಬ್ರಾಹ್ಮಣನಿಗೆ ತನ್ನ ಕವಚ - ಕುಂಡಗಳನ್ನೇ ನೀಡಿದವನು. ಆದರೆ ಇದು ಅವನನ್ನು ಮಹಾನ್ ವ್ಯಕ್ತಿಯನ್ನಾಗಿ ಮಾಡುತ್ತದೆಯೇ? 

ಕರ್ಣನ ವ್ಯಕ್ತಿತ್ವ ನಾಶದ ನಿದರ್ಶನಗಳು ಮಹಾಭಾರತದಲ್ಲಿ ಅನೇಕ ಸಿಗುತ್ತವೆ. ಕರ್ಣನ ವಿದ್ಯೆಯ ಮೂಲವೇ ಸುಳ್ಳು. ವಾಸ್ತವದಲ್ಲಿ ಕರ್ಣ, ದುರ್ಯೋಧನನ ಕೃತ್ಯಗಳಲ್ಲಿ ದುಶ್ಯಾಸನ, ಶಕುನಿಯರ ಜೊತೆ ನಾಲ್ಕನೇ ಒಂದರ ಪಾಲುದಾರ. ಶಕುನಿ, ದುರ್ಯೋಧನರ ಪ್ರತಿಯೊಂದು ಕುತಂತ್ರಗಳಲ್ಲಿಯೂ ಕರ್ಣ ಭಾಗಿಯಾಗುತ್ತಾನೆ. ದುರ್ಯೋಧನನ ಮಾತ್ಸರ್ಯಕ್ಕೆ ಇಂಬುಕೊಟ್ಟು ಪಾಂಡವರಿಗೆ ವಿನಾ ಕಾರಣ ತೊಂದರೆಕೊಟ್ಟವರಲ್ಲಿ ಕರ್ಣನೂ ಒಬ್ಬ. ಮಹಾಭಾರತದ ಕರಾಳ ದಿನವಾದ ದ್ರೌಪದಿ ವಸ್ತ್ರಾಪಹರಣ ಪ್ರಸಂಗ ಇದಕ್ಕೊಂದು ಉದಾಹರಣೆ. ದ್ಯೂತದಲ್ಲಿ ಧರ್ಮರಾಯ ದ್ರೌಪದಿಯನ್ನು ಸೋತಾಗ (ಈ ಸಂದರ್ಭದಲ್ಲಿ ಧರ್ಮರಾಯನ ನಡತೆಯನ್ನು ಪ್ರಶ್ನಿಸುವವರಿದ್ದಾರೆ. ಧರ್ಮರಾಯನ ನಡತೆ ಸರಿಯಾದರೂ ಅದರ ಕಾರಣವನ್ನು ಚರ್ಚಿಸುವುದು ಈ ಲೇಖನದ ವ್ಯಾಪ್ತಿಯಲ್ಲ) ದುಶ್ಶಾಸನ, ದುರ್ಯೋಧನರ ಜತೆಗೂಡಿ ರಜಸ್ವಲೆಯಾದ ದ್ರೌಪದಿಯನ್ನು “ದಾಸಿ, ದಾಸಿ” ಎಂದು ಕೂಗಿ, ಗಹಗಹಿಸಿ ನಗುತ್ತಾ ಕಟುಮಾತುಗಳಿಂದ ಜರೆಯುವ ಪ್ರಸಂಗ ಎಂಥವರಿಗೂ ಮನಕಲುಕುತ್ತದೆ. ದುಶ್ಶಾಸನನಿಗೆ ದ್ರೌಪದಿಯನ್ನು ವಿವಸ್ತ್ರಗೊಳಿಸಲು ಹೇಳುವುದೇ ಕರ್ಣ. ಕರ್ಣನ ಮಾತುಗಳಿವು, 
“ದೇವತೆಗಳು ಒಬ್ಬ ಹೆಂಡತಿಗೆ ಒಬ್ಬನೇ ಗಂಡನೆಂದು ನಿಗದಿ ಮಾಡಿದ್ದಾರೆ. ಇವಳು ಐವರನ್ನು ವರಿಸಿದ್ದಾಳೆ. ಆದ್ದರಿಂದ ಇವಳು ನೀತಿಗೆಟ್ಟ ಹೆಂಗಸು. ಪಾಂಡವರು, ದ್ರೌಪದಿಯ ಸಮೇತ ಅವರ ಸಂಪತ್ತನ್ನನ್ನೆಲ್ಲವನ್ನೂ ಶಕುನಿ ಗೆದ್ದಿದ್ದಾನೆ. ಓ ದುಶ್ಶಾಸನ, ಪಾಂಡವರ ಮೇಲ್ವಸ್ತ್ರವನ್ನೂ, ದ್ರೌಪದಿಯ ಬಟ್ಟೆಗಳನ್ನೂ ತೆಗೆದುಹಾಕು. (ಸಭಾಪರ್ವ, ಅಧ್ಯಾಯ ೬೬)”.
ದ್ರೌಪದಿಯನ್ನು ಕಾಪಾಡುವಂತೆ ಪಾಂಡವರನ್ನು ಪ್ರಚೋದಿಸಲು ಕರ್ಣ ಈ ಮಾತುಗಳನ್ನು ಹೇಳುತ್ತಾನೆ ಎನ್ನುವವರಿದ್ದಾರೆ. ಅದು ಅವರ ಕಲ್ಪನೆಯಷ್ಟೆ. ಒಂದು ವೇಳೆ ಅವರು ಊಹಿಸಿದ ಕರ್ಣನ ಆಂತರ್ಯ ನಿಜವಾಗಿ ಪಾಂಡವರು ದಂಗೆಯೆದ್ದಿದ್ದರೆ ಕರ್ಣ ದುರ್ಯೋಧನನ ಪರ ಹೋರಾಡುತ್ತಿದ್ದನೇ ಹೊರತು ಅವನಿಗೆ ಬುದ್ದಿ ಹೇಳುತ್ತಿರಲಿಲ್ಲ. ಆ ಸಭೆಯಲ್ಲಿ ಕರ್ಣ, ದುಶ್ಶಾಸನ, ದುರ್ಯೋಧನ ಮತ್ತು ಶಕುನಿಯರನ್ನು ಹೊರತುಪಡಿಸಿ ಇನ್ನೆಲ್ಲರೂ ಶೋಕದಲ್ಲಿದ್ದರು ಎಂದು ಕವಿ ವ್ಯಾಸರು ಹೇಳುತ್ತಾರೆ. 

ಕರ್ಣ ಅರ್ಜುನನಿಗೂ ಮಿಗಿಲಾದ ವೀರನೆಂದು ಹಲವರ ಅಭಿಪ್ರಾಯ. ಆದರೆ ಕರ್ಣನ ವೀರತ್ವವನ್ನು ಪ್ರಸ್ತುತ ಪಡಿಸುವ ಸಂದರ್ಭ ಮಹಾಭಾರತದಲ್ಲಿ ಎಲ್ಲಿಯೂ ಕಾಣಸಿಗುವುದಿಲ್ಲ. ಅನೇಕ ಬಾರಿ ಅವನು ಪಾಂಡವರ ವಿರುದ್ಧ ಸೋಲುತ್ತಾನೆ. ದ್ರುಪದನನ್ನು ಸೆರೆಹಿಡಿಯಲು ಕೌರವರ ಜೊತೆ ಹೋದ ಕರ್ಣನಿಗೆ ಸೆರೆಹಿಡಿಯುವುದು ಸಾಧ್ಯವಾಗುವುದಿಲ್ಲ. ಪಾಂಚಾಲಿಯ ಸ್ವಯಂವರದ ಸಂದರ್ಭದಲ್ಲಿ ಕ್ಷತ್ರಿಯರೆಲ್ಲ ಜತೆಗೂಡಿ ಬ್ರಾಹ್ಮಣ ವೇಷದಲ್ಲಿದ್ದ ಭೀಮಾರ್ಜುನರ ವಿರುದ್ಧ ಸೋಲುತ್ತಾರೆ. ಕ್ಷತ್ರಿಯರ ಗುಂಪಿನಲ್ಲಿ ಕರ್ಣನೂ ಇದ್ದನೆಂಬುದನ್ನು ಬೇರೆಯಾಗಿ ಹೇಳಬೇಕಾಗಿಲ್ಲ. ವಿರಾಟನಗರಿಯಲ್ಲಿ ಗೋವುಗಳನ್ನು ಸೆರೆಹಿಡಿದ ಸಮಯದಲ್ಲೂ ಕರ್ಣನಿಗೆ ಅರ್ಜುನನ ವಿರುದ್ದ ಸೋಲುಂಟಾಗುಗತ್ತದೆ. ಚಕ್ರವ್ಯೂಹದ ಸಂದರ್ಭದಲ್ಲಿ ಅಭಿಮನ್ಯುವಿನ ಪ್ರತಾಪವನ್ನು ಎದುರಿಸಲು ಕರ್ಣ ಸಮೇತ ಆರು ಮಂದಿ ಬೇಕಾಯಿತು. 

ಇನ್ನು ಕರ್ಣ-ದುರ್ಯೋಧನರ ಸ್ನೇಹದ ವಿಚಾರ. ಗೆಳೆಯನ ತಪ್ಪುಗಳನ್ನು ಸಮರ್ಥಿಸಿ ಅವನ ಜೊತೆಗೆ ತಾನೂ ತಪ್ಪು ಮಾಡುವುದು ಸ್ನೇಹವೇ? ಅದೇ ನಿಜವಾದರೆ ಸ್ನೈಹದ ವ್ಯಾಖ್ಯಾನವನ್ನು ಪುನರ್ವಿಮರ್ಶಿಸಬೇಕಾಗುತ್ತದೆ. ತನ್ನ ಸ್ನೇಹ ಗಾಢವಾಗಿದ್ದು, ಕರ್ಣ ಸ್ವಾಮಿನಿಷ್ಟೆ ತೋರಿದನೆಂದೇ ಇಟ್ಟುಕೊಳ್ಳೋಣ. ಆದರೆ ಕುರುಕ್ಷೇತ್ರ ಯುದ್ಧದಲ್ಲಿ ಕರ್ಣ ಮಾಡುವುದೇನು? ತನ್ನನ್ನು ಅರ್ಧರಥ ಎಂದ ಭೀಷ್ಮನ ಮೇಲಿನ ದ್ವೇಷಕ್ಕೆ ಭೀಷ್ಮ ಸಾಯುವವರೆಗೂ ತಾನು ಹೋರಾಡುವುದಿಲ್ಲ ಎನ್ನುತ್ತಾನೆ. ದುರ್ಯೋಧನ ಎಷ್ಟು ಕೇಳಿಕೊಂಡರೂ ಒಪ್ಪಿಕೊಳ್ಳುವುದಿಲ್ಲ. ಅವನು ರಂಗಕ್ಕೆ ಬರುವ ಹೊತ್ತಿಗೆ ಕೌರವರ ಅರ್ಧ ಸೈನ್ಯ ನಿರ್ನಾಮವಾಗಿರುತ್ತದೆ. ಸ್ನೇಹಕ್ಕಿಂತಲೂ ತನ್ನ ಅಹಂಕಾರಕ್ಕೆ ಒತ್ತು ಕೊಡುವುದು ಕರ್ಣನ ಕೃತಜ್ಞತೆಯೋ, ಕೃತಘ್ನತೆಯೋ ತಿಳಿಯದು. ಸ್ನೇಹಕ್ಕೆ ಮಹಾಭಾರತದ ಉತ್ತರ ಕರ್ಣ-ದುರ್ಯೋಧನರಲ್ಲ, ಕೃಷ್ಣಾರ್ಜುನರು!

ಮಹಾಭಾರತದ ಕರ್ಣ ಒಬ್ಬ ಹತಾಶ ವ್ಯಕ್ತಿ. ದುರಾಸೆ, ಅಹಂಕಾರ, ಸ್ವಪ್ರತಿಷ್ಠೆಗಳಿಗೆ ತನ್ನನ್ನು ತಾನೇ ನಾಶ ಮಾಡಿಕೊಂಡವನು. ಅವನು ತನ್ನ ಜೀವನದಲ್ಲಿ ಎಷ್ಟೋ ಕಷ್ಟಗಳನ್ನೆದುರಿಸುವುದು ನಿಜ. ಹುಟ್ಟಿನಲ್ಲೇ ತಾಯಿಯ ತಿರಸ್ಕಾರ, ಬೆಳೆಯುತ್ತಾ ತನ್ನ ಜಾತಿಯ ಕುರಿತಾದ ಅವಮಾನ, ಕೃಷ್ಣನಿಂದ ತನ್ನ ಜನ್ಮರಹಸ್ಯವನ್ನು ತಿಳಿಯುವ ಪ್ರಸಂಗ, ನಂತರ ಕುಂತಿಯ ಜೊತೆಗಿನ ಸಂಭಾಷಣೆ, ಜೀವನದಲ್ಲಿ ಎದುರಿಸಿದ ದುರಾದೃಷ್ಟಗಳು, ಪ್ರತಿಕೂಲ ಪರಿಸ್ಥಿತಿಗಳು ಇವೆಲ್ಲಾ ಕರುಣಾಜನಕ ವಿಚಾರಗಳೇ. ಆದರೆ, ಮನುಷ್ಯನ ಹುಟ್ಟು, ಬಡತನ, ತಾನೆದುರಿಸಿರುವ ಕಷ್ಟಗಳು, ದುರಾದೃಷ್ಟಗಳು, ಅವಮಾನ-ತಿರಸ್ಕಾರಗಳಾವುವೂ ತಾನು ಮಾಡುವ ಕರ್ಮಗಳಿಗೆ ಸಮರ್ಥನೆಯಲ್ಲ. ಕಡು ಬಡತನದಲ್ಲಿ ಹುಟ್ಟಿದ ಮಾತ್ರಕ್ಕೆ ಹಣವಿಲ್ಲವೆಂದು ಕಳ್ಳತನ ಮಾಡಿದರೆ ಯಾವುದೇ ಕಾರಣಕ್ಕೂ ಕ್ಷಮಿಸಲಾಗದು. ಕಾಲನ ವಿರುದ್ಧ ಹೋಗಿ ಕಾಲನ ಕೈಯಲ್ಲಿಯೇ ನಾಶವಾದವನು ಕರ್ಣ!

ತನ್ನದಲ್ಲದ ಯಾವುದೇ ವಿಚಾರವನ್ನು ಬರೆಯುವಾಗ ಅದರ ಮೂಲವನ್ನು ನೀಡುವುದು ಅನಿವಾರ್ಯವೆಂದು ನನ್ನ ಅಭಿಪ್ರಾಯ. ಈ ಲೇಖನ ಮಹಾಭಾರತದದ್ದಾದರೂ, ನಾನು ಸಂಸ್ಕೃತ ಭಾರತವನ್ನು ಓದಿಲ್ಲವಾದ ಕಾರಣ ಆಕರಗಳನ್ನು ನೀಡುವುದು ಅನಿವಾರ್ಯ. ಅಂತೆಯೇ ನನ್ನ ಆಕರ ಪುಸ್ತಕಗಳು,
೧. ಕೆ. ಎಸ್. ನಾರಾಯಣಾಚಾರ್ಯರ “ರಾಜಸೂಯದ ರಾಜಕೀಯ”, “ರಾಜಸೂಯ ತಂದ ಅನರ್ಥ”, “ವನದಲ್ಲಿ ಪಾಂಡವರು” ಮತ್ತು “ಆ ಹದಿನೆಂಟು ದಿನಗಳು”.  
೨. ಕೃಷ್ಣ ಮೋಹನ್ ಗಂಗೂಲಿಯವರ “Mahabhaarata of Vyasa”. ಇದು ಸಂಸ್ಕೃತ ಭಾರತದ ಯಥಾತ್ ಆಂಗ್ಲ ಅನುವಾದ. ನಾರಾಯಣಾಚಾರ್ಯರ ಕನ್ನಡ ಅನುವಾದ ಕಾದಂಬರಿ ರೂಪದಲ್ಲಿರುವುದನ್ನು ಬಿಟ್ಟರೆ, ನಾರಾಯಣಾಚಾರ್ಯರ ಪುಸ್ತಕಗಳಿಗೂ ಗಂಗೂಲಿಯವರ ಅನುವಾದಕ್ಕೂ ವ್ಯತ್ಯಾಸಗಳಿಲ್ಲ. 

೩. ದೇವುಡು ನರಸಿಂಹಶಾಸ್ತ್ರಿಯವರ “ಮಹಾಭಾರತ” - ಇದು ಮಹಾಭಾರತದ ಸಂಕ್ಷಿಪ್ತ ಚಿತ್ರಣ.