ಸ್ವತಂತ್ರ ಭಾರತದ ಅಮೃತಮಹೋತ್ಸವಕ್ಕೆ ಸಾಮಾನ್ಯವಾಗಿ ಪರಿಚಿತರಲ್ಲದ ಭಾರತದ ಎಪ್ಪತ್ತೈದು ಮಹನೀಯರ ಬಗ್ಗೆ ಲೇಖನಗಳನ್ನು ಬರೆಯಬೇಕೆಂದು ಯೋಜಿಸಿದ್ದೆ. ಆಂತರಿಕ ಮತ್ತು ಬಾಹ್ಯ ಕ್ಷೋಭೆಗಳು ಅದನ್ನು ಸಾಕಾರ ಮಾಡಿಕೊಳ್ಳಲು ಬಿಡಲಿಲ್ಲ. ಎಷ್ಟಾದರಷ್ಟು ಬರೆಯೋಣವೆಂದು ಅದಕ್ಕಿಂತ ಚಿಕ್ಕದೊಂದು ಪಟ್ಟಿ ಮಾಡಿಕೊಂಡೆ, ಅವರು: ಯಾಸ್ಕರು (ವೇದಗಳಿಗೆ ನಿರುಕ್ತವನ್ನು ಬರೆದವರು), ಪಾಣಿನಿ (ವ್ಯಾಕರಣ ಸೂತ್ರಗಳನ್ನು ಬರೆದವನು), ಕಾಳಿದಾಸ (ಮಹಾಕವಿ), ಸಾಯಣರು (ವೇದಗಳಿಗೆ ಭಾಷ್ಯ ಬರೆದವರು), ಆನಂದವರ್ಧನ (ಧ್ವನ್ಯಾಲೋಕವೆಂಬ ಕಾವ್ಯಮೀಮಾಂಸೆಯನ್ನು ಬರೆದವ), ಅಹಲ್ಯಾಬಾಯಿ ಹೋಳ್ಕರ್ (ಮರಾಠರ ರಾಣಿ), ರಾಜಾರಾಮ ಮೋಹನ ರಾಯ್ (ಸಮಾಜ ಸುಧಾರಕ), ಸತ್ಯೇಂದ್ರನಾಥ ಬೋಸ್ (ಭೌತಶಾಸ್ತ್ರ ವಿಜ್ಞಾನಿ), ಪಾಂಡುರಂಗ ವಾಮನ ಕಾಣೆ (ವಿದ್ವಾಂಸರು), ಮತ್ತು ಹಂಸರಾಜ ಖನ್ನಾ (ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರಾಗಿದ್ದವರು). ಇದೂ ಸಾಧ್ಯವಾಗದೆ ಕೊನೆೆಗೆ ಒಬ್ಬ ಮಹಾನುಭಾವನ ಬಗೆಗಾದರೂ ಬರೆಯೋಣವೆಂದು ಹಂಸರಾಜ ಖನ್ನರವರನ್ನು ಆಯ್ದುಕೊಂಡಿದ್ದೇನೆ.
ಪ್ರಜಾಪ್ರಭುತ್ವ
ಇಂದಿನ ಭಾರತದ ಬಹುತೇಕ ಜನರು ಸ್ವಾತಂತ್ರ್ಯಾನಂತರ ಜನಿಸಿದವರು. ನಮಗೆ ಪ್ರಜಾಪ್ರಭುತ್ವ ಒಂದು ರೀತಿಯಲ್ಲಿ ಜನ್ಮಸಿದ್ಧ. ಆದರೆ ಪ್ರಪಂಚದ ಇತಿಹಾಸದಲ್ಲಿ ಪ್ರಜಾಪ್ರಭುತ್ವದ ಕಾಲ ತೀರ ಈಚಿನದು. ಪ್ರಜಾಪಭುತ್ವದ ಮುಖ್ಯವಾದ ಉಪಯೋಗ ದೇಶದ ಜನರ ಸುಭಿಕ್ಷ, ಸ್ವಾತಂತ್ರ್ಯದಲ್ಲಿದೆ. ಬೇರೆಯವರಿಗೆ ತೊಂದರೆ ಕೊಡದ ಹೊರತು ನಾವು ಯಾವುದಕ್ಕೂ ಹೆದರಬೇಕಿಲ್ಲ. ನಮಗಿಷ್ಟಬಂದ ರೀತಿಯಲ್ಲಿ, ಸಮಾಜದ ನೀತಿಗೆ ತೊಂದರೆಯಾಗದಂತೆ, ನಡೆದುಕೊಳ್ಳಬಹುದು. ನಮಗೆ ಅನ್ಯಾಯವಾದರೆ ಕಾನೂನಿನ ಪರಿಧಿಯಲ್ಲಿ ನಿರ್ಭೀತಿಯಿಂದ ನ್ಯಾಯ ದೊರಕಿಸಿಕೊಳ್ಳಬಹುದು. ಪ್ರಚಲಿತದಲ್ಲಿರುವ ನೀತಿ, ಕಾನೂನುಗಳು ನಮಗೆ ಅನುಕೂಲವಾಗಿಲ್ಲದಿದ್ದರೆ ಅವನ್ನು ಬದಲಿಸಿಕೊಳ್ಳಲೂಬಹುದು. ಪ್ರಜಾಪ್ರಭುತ್ವದಲ್ಲಿ ಆಡಳಿತದ ವಿರುದ್ಧ ಭಿನ್ನಾಭಿಪ್ರಾಯಕ್ಕೂ ಸ್ಥಾನವಿದೆ. ಆದರೆ ಈ ವ್ಯಕ್ತಿ ಸ್ವಾತಂತ್ರ್ಯ ನಾವು ಆಯ್ಕೆಮಾಡುವ ಪ್ರತಿನಿಧಿಗಳು ಅದಕ್ಕೆಷ್ಟು ಗೌರವ ಕೊಡುತ್ತಾರೆ ಎಂಬುದರ ಮೇಲೆ ನಿಂತಿದೆ. ದೇಶದ ಸಂವಿಧಾನವು ಏಕವ್ಯಕ್ತಿ ಸರ್ವಾಧಿಕಾರವನ್ನು ತಡೆಯಲು ಎಷ್ಟು ಪ್ರಯತ್ನಿಸಿದರೂ ಸಾಮಾಜಿಕ-ಆರ್ಥಿಕ ಸಂಕಷ್ಟಗಳಲ್ಲಿ ವ್ಯಕ್ತಿಪ್ರಭಾವ ತೀವ್ರವಾಗಿಬಿಡುತ್ತದೆ. ಬೆೇರೆ ದಾರಿ ಕಾಣದೆ ಪ್ರಜೆಗಳು ವ್ಯಕ್ತಿಯನ್ನು ಆರಾಧಿಸಲೂ ಶುರು ಮಾಡಿಬಿಡುತ್ತಾರೆ. ಇದು ಸರ್ವಾಧಿಕಾರಿಗಳನ್ನು ಸೃಷ್ಟಿಮಾಡುತ್ತದೆ. ೧೯೨೯ರ ಅರ್ಥಿಕ ಸಂಕಷ್ಟದಿಂದ ಜರ್ಮನಿ, ಇಟಲಿ, ಜಪಾನುಗಳಂತಹ ರಾಷ್ಟ್ರಗಳು, ಇತ್ತಿಚಿನ ಆಫ್ರಿಕಾ, ಪಶ್ಚಿಮ ಏಷ್ಯಾ, ಮಯನ್ಮಾರ್ ದೇಶಗಳು ಇದಕ್ಕೆ ಉದಾಹರಣೆ. ಇಂತಹ ಸಂದರ್ಭಗಳಲ್ಲಿ ಉನ್ನತ ಸ್ಥಾನದಲ್ಲಿರುವ ವ್ಯಕ್ತಿ ಅಥವಾ ವ್ಯಕ್ತಿಗಳು ಸಂವಿಧಾನದ ಪರಿಧಿಯಲ್ಲಿ, ತಮ್ಮ ವಿರೋಧಿಗಳಿಗೆ ಗೌರವ ಕೊಡುತ್ತಲೇ ಸಂಕಷ್ಟವನ್ನು ಪರಿಹರಿಸಿದರೆ ಮಾತ್ರ ಪ್ರಜಾಪ್ರಭುತ್ವ ಉಳಿಯುತ್ತದೆ. ಆಡಳಿತವು ಸರ್ವಾಧಿಕಾರಿಯಾಗಿ ನಡೆಯುವ ಅಲ್ಪ ಸೂಚನೆಯಿದ್ದರೂ ಸಮಾಜ ಒಕ್ಕೊರಲಾಗಿ ವಿರೋಧಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ನ್ಯಾಯಾಲಯಗಳ ಪಾತ್ರ ಬಹುಮುಖ್ಯವಾದುದು. ನ್ಯಾಯಾಲಯಗಳು ಸಂವಿಧಾನಕ್ಕೆ ಬದ್ಧವಾಗಿ ಆಡಳಿತದ ಪ್ರಭಾವಕ್ಕೆ ಒಳಗಾಗದೆ ಕಾರ್ಯನಿರ್ವಹಿಸುವುದು ಅತಿಮುಖ್ಯವಾಗುತ್ತದೆ. ಇಂತಹ ಸಮಸ್ಯೆಯೊಂದು ಎಪ್ಪತರ ದಶಕದಲ್ಲಿ ಭಾರತಕ್ಕೆ ಬಂದಿತ್ತು. ಆಗ ಭಾರತದ ಸಂವಿಧಾನಕ್ಕೆ ಭದ್ರಬುನಾದಿಯನ್ನು ಹಾಕಿಕೊಟ್ಟ ಮಹಾನುಭಾವರು ಹಂಸರಾಜ ಖನ್ನ.
ಖನ್ನಾರವರು ಹುಟ್ಟಿದ್ದು ೧೯೧೨ರಲ್ಲಿ. ಪಂಜಾಬಿನ ಅಮೃತಸರದಲ್ಲಿ. ಲಾಹೋರಿನ ಕಾಲೇಜಿನಲ್ಲಿ ಲಾ ವ್ಯಾಸಂಗ ಮಾಡಿ ವಕೀಲರಾದರು. ೧೯೫೨ರಲ್ಲಿ ಅವರನ್ನು ಆಗಿನ ಪಂಜಾಬಿನ ಮುಖ್ಯನಾಯಾಧೀಶರು ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರನ್ನಾಗಿ ನೇಮಕ ಮಾಡಿದರು. ಮುಂದೆ ದೆಹಲಿಯ ಉಚ್ಛನ್ಯಾಯಾಲದ ನ್ಯಾಯಾಧಿಶರಾಗಿ, ಅನಂತರ ೧೯೬೯ರಲ್ಲಿ ಅದೇ ನ್ಯಾಯಾಲಯದ ಮುಖ್ಯನ್ಯಾಯಾಧೀಶರಾದರು. ೧೯೭೧ರಲ್ಲಿ ಭಾರತದ ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರಾಗಿ ನೇಮಕಗೊಂಡರು. ಈ ಅಧಿಕಾರಾವಧಿಯಲ್ಲಿ ಖನ್ನಾರವರ ಎರೆಡು ತೀರ್ಮಾನಗಳು ಸ್ವತಂತ್ರಭಾರತದ ಇತಿಹಾಸದಲ್ಲಿಯೇ ಅತಿಮುಖ್ಯವಾಗಿವೆ.
ಕೇಶವಾನಂದಭಾರತಿ ಮೊಕದ್ದಮೆ
೧೯೭೦ರಲ್ಲಿ ಕೇರಳ ಸರ್ಕಾರ ಭೂಸುಧಾರಣಾ ಕಾಯ್ದೆಗಳನ್ನು ಹೊರಡಿಸಿ ಕಾಸರಗೋಡಿನ ಎಡನೀರು ಶಂಕರಮಠದ ಆಸ್ತಿಗಳನ್ನು ನೋಡಿಕೊಳ್ಳುವ ವಿಚಾರದಲ್ಲಿ ಮೂಗುತೂರಿಸಿತು, ಆಸ್ತಿಯನ್ನು ಕಸಿದುಕೊಳ್ಳಲೂ ನೋಡಿತು. ಮಠದ ಆಚಾರ್ಯರಾದ ಕೇಶವಾನಂದಭಾರತಿಗಳು ಇದು ಧಾರ್ಮಿಕ ಸ್ವಾತಂತ್ರ್ಯಕ್ಕೆ ಮತ್ತು ಆಸ್ತಿಯಹಕ್ಕಿಗೆ ಧಕ್ಕೆ ಎಂದು ಸುಪ್ರೀಂ ಕೋರ್ಟಿನ ಮೊರೆೆಹೋದರು. ಆಗ “ಆಸ್ತಿಯ ಹಕ್ಕು” ಮೂಲಭೂತಹಕ್ಕಾಗಿತ್ತು. ಇದನ್ನು ತೀರ್ಮಾನಿಸಲು ಸರ್ವೋಚ್ಛನ್ಯಾಯಾಲವು ಖನ್ನಾರವರನ್ನು ಒಳಗೊಂಡಂತೆ ೧೩ ನ್ಯಾಯಾಧೀಶರ ಪೀಠವನ್ನು ಸ್ಥಾಪಿಸಿತು. ಈ ಪೀಠವು ಕೇಶವಾನಂದಭಾರತಿಗಳ ಪರವಾಗಿ ತೀರ್ಪು ನೀಡಿತು. ಈ ತೀರ್ಪಿನಲ್ಲಿ ಖನ್ನಾರವರ ಅಭಿಪ್ರಾಯ ಸಂಚಲನವನ್ನೇ ಸೃಷ್ಠಿಸಿತು. ಅವರು ತಮ್ಮ ತೀರ್ಪಿನಲ್ಲಿ, “ಭಾರತದ ಸಂಸತ್ತಿಗೆ ದೇಶದ ಕಾನೂನುಗಳನ್ನು ರೂಪಿಸಲು ಸರ್ವಾಧಿಕಾರವಿದೆ. ಆದರೆ ಅದು ಸಂವಿಧಾನದ ಮೂಲಭೂತ ನೀತಿಗಳನ್ನೇ ಬದಲಿಸುವಂತಿಲ್ಲ” ಎಂದರು. ಸಂವಿಧಾನವು ಪ್ರಜೆಗಳಿಗೆ ಮೂಲಭೂತ ಹಕ್ಕುಗಳನ್ನು ಕೊಟ್ಟಿದೆ. ಸಂಸತ್ತು ಪ್ರಜೆಗಳ ಆ ಮೂಲಭೂತಹಕ್ಕುಗಳನ್ನೇ ಕಸಿದುಕೊಂಡರೆ ಪ್ರಜಾಪ್ರಭುತ್ವಕ್ಕೆ ಬೆಲೆಯೆಂತು? ಅಲ್ಲದೇ ಪ್ರಭಾವಿ ನಾಯಕರು ಸಂಸತ್ತಿನ ಮೇಲೆ ತಮ್ಮ ಪ್ರಭಾವ ಬೀರಿ ತಮಗೆ ಹೆಚ್ಚು ಅಧಿಕಾರಗಳು ಬರುವಂತೆ ಮಾಡಿಕೊಳ್ಳಬಹುದು. ರಾಜ್ಯಗಳ ಅಧಿಕಾರವನ್ನು ಮೊಟಕುಗೊಳಿಸಬಹುದು, ಸಂಸತ್ತಿನ ತೀರ್ಮಾನಗಳನ್ನೇ ನಿಷ್ಫಲವನ್ನಾಗಿ ಮಾಡಿಕೊಳ್ಳಬಹುದು. ಇಂತಹ ಒಂದು ಅರಾಜಕತೆ ಈಗ ಟ್ಯುನೇಶಿಯಾದ ಅಧ್ಯಕ್ಷರಿಂದ ನಡೆಯುತ್ತಿದೆ. ಆದ್ದರಿಂದ ಸಂವಿಧಾನದ ಮೂಲತತ್ವವನ್ನು ಬದಲಿಸಬಾರದು ಎಂಬ ತೀರ್ಮಾನ ಬಹುಮುಖ್ಯವಾಗುತ್ತದೆ. ಈ ತೀರ್ಪಿನಿಂದ ಕುಪಿತಗೊಂಡ ಅಂದಿನ ಸರ್ಕಾರ ತುತ್ತುಪರಿಸ್ಥಿತಿಯಲ್ಲಿ ಸಂವಿಧಾನಕ್ಕೆ ಎರಡು ಮಾರ್ಪಾಡುಗಳನ್ನು ಮಾಡಿತು. ಅವುಗಳಲ್ಲಿ ಒಂದರಿಂದ “ಆಸ್ತಿ ಹಕ್ಕನ್ನು” ಮೂಲಭೂತಹಕ್ಕುಗಳಿಂದ ತೆಗೆಯಿತು. ಆದರೆ ಖನ್ನಾರವರ ಈ ಅಭಿಪ್ರಾಯವನ್ನು ಇಂದಿಗೂ ನ್ಯಾಯಾಲಯಗಳು ತಮ್ಮ ತೀರ್ಪುಗಳನ್ನು ಕೊಡುವ ಮುನ್ನ ಪಾಲಿಸುತ್ತವೆ. ಭಾರತದ ನ್ಯಾಯಾಲಯಗಳೇ ಅಲ್ಲದೆ ಬಾಂಗ್ಲಾದೇಶದ ಸರ್ವೋಚ್ಛ ನ್ಯಾಯಾಲಯವೂ ಖನ್ನಾರವರ “ಸಂವಿಧಾನದ ಮೂಲಭೂತ ನೀತಿಗಳನ್ನು” ಬದಲಿಸಬಾರದು ಎಂಬ ತೀರ್ಮಾನವನ್ನು ಅಳವಡಿಸಿಕೊಂಡಿವೆ.
ಹೇಬಿಯಸ್ ಕಾರ್ಪಸ್
ಭಾರತದ ಸಂವಿಧಾನಕ್ಕೆ ಕೇಶವಾನಂದಭಾರತಿಗಳ ದಾವೆಗಿಂತಲೂ ಮುಖ್ಯವಾದ ಸವಾಲು ಬಂದದ್ದು ೧೯೭೫ರಲ್ಲಿ. ಲೋಕಸಭೆಗೆ ಆಗಿನ ಪ್ರಧಾನಿಗಳ ಚುನಾವಣೆಯನ್ನು ಅಲಹಾಬಾದಿನ ಉಚ್ಛನ್ಯಾಯಾಲಯವು ಅಮಾನ್ಯಗೊಳಿಸಿದ ನಂತರ ಭಾರತದಲ್ಲಿ ತುರ್ತುಪರಿಸ್ಥಿತಿಯನ್ನು ಹೇರಲಾಯಿತು. ರಾಜಕೀಯ ವಿರೋಧಿಗಳನ್ನು ಹೇಳದೆ ಕೇಳದೆ ಜೈಲಿಗೆ ಹಾಕುತ್ತಿದ್ದರು. ಈ ಸಂದರ್ಭದಲ್ಲಿ ಶಿವಕಾಂತ ಶುಕ್ಲ ಎಂಬಾತನನ್ನು ಜಬಲಪುರದ ಪೋಲೀಸರು ವಿಚಾರಣೆಯಿಲ್ಲದೆ ಬಂಧಿಸಿದ್ದರು. ನ್ಯಾಯಾಲಯಕ್ಕೆ ಹಾಜರುಪಡಿಸಿರಲಿಲ್ಲ. ಈ ಮೊಕದ್ದಮೆಯನ್ನು ಇತ್ಯರ್ಥಪಡಿಸಲು ಸರ್ವೋಚ್ಛನ್ಯಾಯಾಲಯವು ಖನ್ನಾರವರನ್ನು ಒಳಗೊಂಡಂತೆ ಐದು ನ್ಯಾಯಾಧೀಶರ ಪೀಠವನ್ನು ಸ್ಥಾಪಿಸಿತು. ಸರ್ಕಾರವು ತುರ್ತುಪರಿಸ್ಥಿತಿಯಲ್ಲಿ ತಾನು ಪ್ರಜೆಗಳ “ಬದುಕುವ ಮೂಲಭೂತ ಹಕ್ಕನ್ನೂ” ಕಸಿದುಕೊಳ್ಳಬಹುದು ಮತ್ತು “ಈ ಸಂದರ್ಭದಲ್ಲಿ ನ್ಯಾಯಾಲಯಗಳು ಏನೂ ಮಾಡುವಂತಿಲ್ಲ ಆದ್ದರಿಂದ ಶಿವಕಾಂತ ಶುಕ್ಲಾ ಎಂಬಾತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಬೇಕಿಲ್ಲ” ಎಂದು ವಾದಿಸಿತು. ಸರ್ಕಾರಕ್ಕೆ ಹೆದರಿದ ನಾಲ್ಕು ನ್ಯಾಯಾಧೀಶರು ಸರ್ಕಾರದ ಪರವಾಗಿಯೇ ತೀರ್ಪಿತ್ತರು. ಖನ್ನಾರವರು ಭಿನ್ನಾಭಿಪ್ರಾಯ ವ್ಯಕ್ತಪಡಿಸಿ, “ಭಾರತದ ಸಂವಿಧಾನವು ಪ್ರಜೆಗಳ ಸ್ವಾತಂತ್ರ್ಯವನ್ನು ಕಾರ್ಯಾಂಗಕ್ಕೆ ಅಧೀನವನ್ನಾಗಿ ಮಾಡಿಲ್ಲ… ವಿಚಾರಣೆಯಿಲ್ಲದೆ ಬಂಧಿಸುವುದು ಪ್ರಜಾಸ್ವಾತಂತ್ರ್ಯಕ್ಕೆ ನೇರವಾಗಿ ಮಾಡುವ ಧಕ್ಕೆ” ಎಂದರು. ಬಂಧಿತನಾಗುವ ವ್ಯಕ್ತಿ ತಾನೇಕೆ ಬಂಧಿಸಲ್ಪಡುತ್ತಿದ್ದೇನೆ ಎಂಬ ಮಾಹಿತಿಯನ್ನು ಪಡೆಯುವುದು ಮತ್ತು ಬಂಧನದ ನಂತರ ನ್ಯಾಯಯುತವಾದ ವಿಚಾರಣೆಯನ್ನು ಪಡೆಯುವುದು ಯಾವುದೇ ದೇಶದ (ಅದರಲ್ಲಿಯೂ ಪ್ರಜಾಪ್ರಭುತ್ವದ) ಮೂಲಭೂತ ಕಾನೂನಾಗಿರಬೇಕು. ಇಲ್ಲದಿದ್ದರೆ ಸರ್ಕಾರ ಯಾವಾಗ ಯಾರನ್ನಾದರೂ ಬಂಧಿಸಹುದು ಮತ್ತು ಇದು ಅರಾಜಕತೆ, ದೌರ್ಜನ್ಯಗಳ ಮತ್ತೊಂದು ಹೆಸರಾಗುತ್ತದೆ. ಸರ್ಕಾರದ ವಿರುದ್ಧದ ಖನ್ನಾರವರ ಭಿನ್ನಾಭಿಪ್ರಾಯದಿಂದ ಅಗಿನ ಸರ್ಕಾರ ಅವರನ್ನು - ಅವರು ಇತರರಿಗಿಂತ ಅನುಭವಿಯಾಗಿದ್ದರೂ - ಮುಖ್ಯನ್ಯಾಯಾಧೀಶರನ್ನಾಗಿ ಮಾಡಲಿಲ್ಲ. ಅನುಭವಿ ನ್ಯಾಯಾಧೀಶರನ್ನು ಮುಖ್ಯನ್ಯಾಯಾಧೀಶರನ್ನಾಗಿ ಮಾಡದಿರುವುದು ಸರ್ವೋಚ್ಛನ್ಯಾಯಾಲಯದ ಇತಿಹಾಸದಲ್ಲೇ ಮೊದಲ ಬಾರಿ. ಇದರಿಂದ ಅವಮಾನಿತರಾದ ಖನ್ನಾರವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಖನ್ನಾರವರ ಈ ಭಿನ್ನಾಭಿಪ್ರಾಯ ಜಗತ್ತಿನ ಅತಿಮುಖ್ಕ ಕಾನೂನಾತ್ಮಕ ಭಿನ್ನಾಭಿಪ್ರಾಯಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ. ಅವರ ಈ ನಿರ್ಭಿಢ ಅಭಿಪ್ರಾಯಕ್ಕೆ ಪ್ರಪಂಚದ ಎಲ್ಲರಿಂದ ಮನ್ನಣೆ ಸಿಕ್ಕಿದೆ.
ಶಿವರುದ್ರಪ್ಪನವರು “ಯುಗಯುಗದಿ ಒಂದೊಂದು ಹಿರಿಯ ಪೊರಕೆಯು ಬಂದು ಗುಡಿಸುವುದು ಮನೆಯ” ಎಂದಂತೆ, ಖನ್ನಾರವರು ಎಪ್ಪತ್ತರ ದಶಕದ ಭಾರತವೆಂಬ ಮನೆಯ ಕಸವನ್ನು ಗುಡಿಸಿದ್ದಾರೆ. ಇಂದು ಭಾರತದ ಸರ್ವೋಚ್ಛ ನ್ಯಾಯಾಲಯದಲ್ಲಿ ಖನ್ನಾರವರ ಪೂರ್ಣ ಭಾವಚಿತ್ರವನ್ನು ಇಡಲಾಗಿದೆ. ಈ ಗೌರವಕ್ಕೆ ಪಾತ್ರರಾದ ನ್ಯಾಯಾಧೀಶರು ಅವರೊಬ್ಬರೇ. ಖನ್ನಾರವರ ಈ ತೀರ್ಪುಗಳು ಭಾರತದ ಪ್ರತಿಯೊಬ್ಬ ಪ್ರಜೆಯೂ ನೆನಪಿನಲ್ಲಿಡಬೇಕಾದವು. ಖನ್ನಾರವರು ಪ್ರಾತಃಸ್ಮರಣೀಯರು. ಸ್ವತಂತ್ರ ಭಾರತದ ಪ್ರಜಾಪ್ರಭುತ್ವಕ್ಕೆ ಅವಿಸ್ಮರಣೀಯ ಕಾಣಿಕೆಯನ್ನು ನೀಡಿದ ಹಂಸರಾಜ ಖನ್ನಾರವರು ಎಂದಿಗೂ ನೂತನರು. ಎಲ್ಲರಿಗೂ ಸ್ವತಂತ್ರಭಾರತದ ಅಮೃತ ಮಹೋತ್ಸವದ ಶುಭಾಶಯಗಳು.
No comments:
Post a Comment