Friday, October 28, 2016

ನದಿ

ಎಲ್ಲೋಮಹಾಟವಿಯ ಮಧ್ಯದಿ
ಜುಳು ಜುಳು ನಾದ 
ಚಿಮ್ಮುತ ಹರಿದಳು
ಹರುಷದ ಉನ್ಮಾದ
ಹೊಳೆ ಝರಿಗಳ ಜೊತೆಗೆ
ಕಣಿವೆ ಹೆಬ್ಬಂಡೆಗಳ ನಡುವೆ
ಚೆಲ್ಲುತ ನಗೆಯ ಬಳುಕುತ ನಡುವ
ಹರಿದಳು ನವವಧುವಿನಂತೆ

ಕಂಡಿತು ಊರು ಕದಡಿತು ಹರುಷ
ಮುಳ್ಳು ಕಂತೆಗಳು ಏಳುಬೀಳುಗಳು
ಕಾಲುವೆ ಅಣೆಕಟ್ಟೆಗಳು
ಸ್ವಛ್ಛಂದ ನಾಗಾಲೋಟವಿಲ್ಲ
ನೈಜ ಸಾರ್ವಭೌಮತ್ವವಿಲ್ಲ
ಒಡಲಲಿ ಸುಳಿಗಳು
ಮೊಗದಲಿ ನಗೆಗಳು
ಹರಿದಳು ಮೌನದಿ ಸರಸ್ವತಿಯಂತೆ

ಬೆಳೆಯಿಸಿ ಸಸಿಯ
ಪೋಷಿಸಿ ತರುವ
ತಣಿಯಿಸಿ ಬಾಯಾರಿಕೆಯ
ಪರರ ಸಂತೋಷಕಾಗಿ
ಊರಿನ ಏಳಿಗೆಗಾಗಿ
ಒಡೆತನದ ಜಂಜಾಟದಲಿ
ಹಗೆತನದ ಕಾದಾಟಗಳಲಿ
ಉರಿದಳು ಪ್ರಜ್ವಲಿಸುವ ದೀಪದಂತೆ

ನಡೆದಳು ಮುನಿದಳು
ಉರಿದಳು ಬಿರಿದಳು
ಓಡುತ ಸಾಗರ ಸೇರಿದಳು
ಬಾಗಿ ನಿಂದಿತ್ತೋಂದು ಲತೆ
ದೂರದ ದಂಡೆಯ ಮೇಲೆ
ತೋರುತ ಕೃತಙ್ನತೆಯ

No comments:

Post a Comment