ನದಿ ಹರಿದಿತ್ತು, ಬನ ನಿಂದಿತ್ತು
ಬಾನ್ ನೀಲಿಯ ನಗೆ ಬೀರಿತ್ತು
ನಿರ್ಜನ ದೇಶದ ನೀರವ ಕಾಲಕೆ
ಖಗರವ ಪುಲಕಂ ತೋರಿತ್ತು
ಇವು ಕವಿ ಕುವೆಂಪುರವರ ಸಾಲುಗಳು. ಬಹುಶ: ಮುಳ್ಳಯ್ಯನಗಿರಿಯನ್ನು ನೋಡಿಯೇ ಅವರು ಹೀಗೆ ಹೇಳಿರಬೇಕು. ಮುಳ್ಳಯ್ಯನಗಿರಿ ಕರ್ನಾಟಕದಲ್ಲಿನ ಅತೀ ಎತ್ತರದ ಬೆಟ್ಟ. ಸುಮಾರು ೬೩೧೭ ಅಡಿಗಳಷ್ಟು ಎತ್ತರ (೧೯೩೦ ಮೀ.). ಇದು ಪಶ್ಚಿಮ ಘಟ್ಟಗಳ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಕಂಡುಬರುತ್ತದೆ. ಚಿಕ್ಕಮಗಳೂರಿನಿಂದ ೧೫ ಕಿ.ಮೀ. ಬೆಂಗಳೂರಿನಿಂದಾದರೆ ಸುಮಾರು ೨೭೦ ಕಿ.ಮೀ. ನೆಲಮಂಗಲ - ಕುಣಿಗಲ್ - ಹಾಸನ - ಬೇಲೂರು - ಚಿಕ್ಕಮಗಳೂರು ಮಾರ್ಗವಾಗಿ ತಲುಪಬಹುದು. ರಾಷ್ಟ್ರೀಯ ಹೆದ್ದಾರಿಯಾದ್ದರಿಂದ ರಸ್ತೆ ಚೆನ್ನಾಗಿಯೇ ಇದೆ. ದಾರಿಯಲ್ಲಿ ಊಟೋಪಚಾರಕ್ಕಾಗಿ ಒಳ್ಳೆಯ ಹೋಟೆಲುಗಳೂ ಇವೆ. ಚಿಕ್ಕಮಗಳೂರಿನವರೆಗೂ ಸರ್ಕಾರಿ ಸಾರಿಗೆ ವ್ಯವಸ್ಥೆಯೂ ಚೆನ್ನಾಗಿದೆ. ಆದ್ದರಿಂದ ಮುಳ್ಳಯ್ಯನಗಿರಿ ತಲುಪಲು ಪ್ರಯಾಸ ಪಡಬೇಕಾಗಿಲ್ಲ.
ನಾವು, ೩೯ ಮಂದಿ Rackpackers ತಂಡದವರು ಮುಳ್ಳಯ್ಯನಗಿರಿ - ಬಾಬಾಬುಡನ್ ಗಿರಿ ಟ್ರೆಕ್ಕಿಂಗಿಗಾಗಿ ತೆರಳಿದ್ದೆವು. ಆ ಅನುಭವವೇ ಇಲ್ಲಿನ ವಸ್ತು. ನಾವು ಅಕ್ಟೋಬರ ೨೧ರ ರಾತ್ರಿ ೧೦:೩೦ಕ್ಕೆ ಸರ್ಕಾರಿ ಬಸ್ಸಿನಲ್ಲಿ (ಒಪ್ಪಂದದಿಂದ) ಬೆಂಗಳೂರಿನಿಂದ ಹೊರಟು ಬೆಳಿಗ್ಗೆ ೪:೩೦ರ ಹೊತ್ತಿಗೆ ಚಿಕ್ಕಮಗಳೂರು ಸೇರಿದೆವು. ಬೆಳಿಗ್ಗೆ ೬ರವರೆಗೂ ಬಸ್ಸಿನಲ್ಲಿಯೇ ಮಲಗಿದ್ದು, ನಂತರ ನಿತ್ಯಕರ್ಮಗಳನ್ನು ಮುಗಿಸಿ, ಉಪಹಾರ ಮಾಡಿ, ಬೆಳಿಗ್ಗೆ ೭:೪೦ ಚಿಕ್ಕಮಗಳೂರಿನಿಂದ ಹೊರಟು, ಸುಮಾರು ೮:೨೦ರ ವೇಳೆಗೆ ಸರ್ಪಧಾರಿಗೆ ಬಂದು ಸೇರಿದೆವು. ಸರ್ಪಧಾರಿ ಮುಳ್ಳಯ್ಯನಗಿರಿ ಟ್ರೆಕ್ಕಿಂಗಿನ ಮೂಲ ಸ್ಥಾನ. ಚಿಕ್ಕಮಗಳೂರಿನಿಂದ ೧೫ ಕಿ.ಮೀ. ದಾರಿಯಲ್ಲಿ ಬರುವಾಗ ಅರಣ್ಯ ಇಲಾಖೆಯ ಅನುಮತಿ ಪಡೆದಿದ್ದೆವು. ಇಲ್ಲಿ ಅನುಮತಿಯ ಬಗ್ಗೆ ಸ್ವಲ್ಪ ಹೇಳಬೇಕು. ಟ್ರೆಕ್ಕಿಂಗಿಗೆ ತರಳುವವರಿಗೆ ನನ್ನ ಸಲಹೆಯೆಂದರೆ, ನೀವು ದಯವಿಟ್ಟು ಮುಳ್ಳಯ್ಯನಗಿರಿ ಮತ್ತು ಬಾಬಾಬುಡನ್ ಗಿರಿ ಟ್ರೆಕ್ಕಿಗೆ ಲಿಖಿತ ಅನುಮತಿ ಪಡೆದು ತೆರಳಿ. ಇಲ್ಲದಿದ್ದರೆ ಅನವಶ್ಯಕವಾಗಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಲಂಚ ತೆರಬೇಕಾಗುತ್ತದೆ.
ಕಬ್ಬಿಣದ ಗ್ರಿಲ್ ಹಾಕಿರುವುದರಿಂದ ಸರ್ಪಧಾರಿಯನ್ನು ಗುರುತಿಸುವುದು ಸುಲಭ. ಇಲ್ಲಿಂದ ಮುಳ್ಳಯ್ಯನಗಿರಿ ಶಿಖರಕ್ಕೆ ಸುಮಾರು ೩-೪ ಕಿ.ಮೀ. ಹಾದಿ ಅಷ್ಟೇನು ಕಷ್ಟವಿಲ್ಲ. ಶುರುವಿನಿಂದಲೇ ಎತ್ತರದ ಹಾದಿಯಾದರೂ, ಯುವಕರು ಸರಾಗವಾಗಿ ಹತ್ತಬಹುದು. ಮುದುಕರಿಗೆ ಕಷ್ಟ. ನಾನು ಕಂಡಂತೆ ಚಂದ್ರದ್ರೋಣ ಪರ್ವತಗಳಲ್ಲಿನ ವಿಶೇಷವೆಂದರೆ, ಇಲ್ಲಿ ಬೆಟ್ಟಗಳ ಬುಡದಲ್ಲಿ ಒತ್ತೊತ್ತಾದ ಮರಗಳು. ಮೇಲೇರಿದಂತೆಲ್ಲಾ ಹಸಿರು ಹುಲ್ಲುಗಾವಲು. ಅಲ್ಲೊಂದು ಇಲ್ಲೊಂದು ಮರ ಮಾತ್ರ. ಆದ್ದರಿಂದ ಚಳಿಗಾಲದಲ್ಲಿ ಬೆಟ್ಟ ಹತ್ತುವುದು ಒಳ್ಳೆಯದು. ಬೇಸಿಗೆಯಲ್ಲಿ ಸುಧಾರಿಸಿಕೊಳ್ಳುವುದಕ್ಕೆ ವಿಶ್ರಾಂತಿ ಸ್ಥಳಗಳು ಕಡಿಮೆ.
ಸುಮಾರು ಅರ್ಧ ಕಿ.ಮೀ. ಮೇಲೇರಿದ ನಂತರ ನಮಗೆ ಪಶ್ಚಿಮ ಘಟ್ಟಗಳ ವಿರಾಟ್ ದರ್ಶನ ಶುರುವಾಗುತ್ತದೆ. ಎಲ್ಲಿ ನೋಡಿದರೂ ಹಸಿರು ಸೀರೆಯುಟ್ಟ ವನಸಿರಿ. ನಿರ್ಜನ ಪ್ರದೇಶ. ಬೆಂಗಳೂರಿನ ಜನಸಂದಣಿಯ ವಿರುದ್ಧರೂಪ. ಹಾದಿಯಲ್ಲಿ ಒಮ್ಮೆಗೆ ಒಬ್ಬರು ನಡೆಯಲು ಮಾತ್ರ ಅನುಕೂಲ. ನಾವು ೩೯ಮಂದಿಯಾದ್ದರಿಂದ ಹಿಂದೆಯಿರುವವರಿಗೆ ನಮ್ಮ ಪಯಣ ಸಾಲು ಇರುವೆಗಳಂತೆ ಕಾಣುತ್ತಿತ್ತು. ಒಂದು ಮೈಲಿ ಹತ್ತಿದ ನಂತರ ನಂದಿ ವಿಗ್ರಹ ಸಿಗುತ್ತದೆ. ಇಲ್ಲಿ ಮರಗಳಿದ್ದು ವಿಶ್ರಾಂತಿ ಪಡೆಯಲು ಅನುಕೂಲವಾಗಿದೆ. ನಂತರ ೨ ಮೈಲಿ ನಡೆದರೆ ಶಿಖರ ತಲುಪುತ್ತೇವೆ. ನಾವು ತಲುಪಿದಾಗ ಬೆಳಿಗ್ಗೆ ೧೧:೩೦ ಗಂಟೆ. ಅಲ್ಲೊಂದು ಗುಹೆಯಿದೆ. ಧೈರ್ಯವಿದ್ದವರು ಅದರೊಳಗೆ ಹೋಗಿ ಬರಬಹುದು. ಗುಹೆಯ ಮೇಲೆ ಶಿವನ ದೇವಾಲಯ. ಶಿಖರಕ್ಕೆ ಕಾರಿನಿಂದಲೂ ತಲುಪಬಹುದು. ಆದ್ದರಿಂದ ಇಲ್ಲಿ ಜನರು ಕಾಣಸಿಗುತ್ತಾರೆ. ದೇವಾಲಯದ ಹೊರಗೆ ನಿಂತು ಸುತ್ತಲೂ ಕಣ್ಣಾಡಿಸಿದರೆ, ಯಾರಿಗೂ ನಿಲುಕದ ಎತ್ತರದ ಪರ್ವತಗಳು. ವಿಶಾಲವಾದ ಹುಲ್ಲುಗಾವಲುಗಳು. ಬುಡಗಳಲ್ಲಿ ಮರಗಳ ಗುಚ್ಛಗಳು. ಆಳವಾದ ಪ್ರಪಾತಗಳು. ಕಣಿವೆಗಳು. ದೂರದಲ್ಲಿ ನೀರಿನ ಕೊಳ. ಮೈ ಜಮ್ಮೆನಿಸುತ್ತದೆ. ನಾವು ಇಲ್ಲಿ ಕೆಲಹೊತ್ತು ತಂಗಿದ್ದು, ಫೋಟೊ, ಸೆಲ್ಫಿಗಳನ್ನು ತೆಗೆದುಕೊಂಡೆವು.
ನಂತರ ಬಾಬಾಬುಡನ್ ಗಿರಿ ಪಯಣ. ಶಿವನ ದೇವಾಯದ ಹಿಂದಿನಿಂದಿರುವ ದಾರಿಯಲ್ಲಿ ನಡೆಯಬೇಕು. ಈ ದಾರಿಯೂ ಆಷ್ಟೇನು ಕಷ್ಟವಿಲ್ಲ. ಆದರೆ ಕ್ರಮಿಸಬೇಕಾದ ದೊರ ಹೆಚ್ಚು. ನಡೆಯಲು ಶುರುಮಾಡಿದರೆ ಸುತ್ತಲಿನ ಪ್ರಕೃತಿ ಸೌಂದರ್ಯಕ್ಕೆ ವೇಳೆ ತಿಳಿಯುವುದಿಲ್ಲ. ೩ ಗಂಟೆ ನಡೆದ ನಂತರ ನಾವು ಒಂದು ಚೆಕ್ ಪೋಸ್ಟ್ ತಲುಪಿದೆವು. ನಮ್ಮ ಅನುಮತಿ ಮುಳ್ಳಯ್ಯನಗಿರಿಗೆ ಮಾತ್ರವಾದ್ದರಿಂದ ಅಲ್ಲಿನ ಅಧಿಕಾರಿ ನಮ್ಮನ್ನು ಮುಂದೆ ತೆರಳಲು ಬಿಡಲಿಲ್ಲ. ತೆಪ್ಪೆ ಮೋರೆ ಹಾಕಿಕೊಂಡು ನಾವು ಬಸ್ಸಿನಲ್ಲಿಯೇ ಬಾಬಾಬುಡನ್ ಗಿರಿ ತಲುಪುವ ಹೊತ್ತಿಗೆ ೩ ಗಂಟೆ.
ನಾವು ಊಟಮುಗಿಸಿ ಅಲ್ಲಿಯೇ ತಂಗಲು ನಿರ್ಧರಿಸಿದ್ದರಿಂದ ಡೇರೆಗಳನ್ನು ಹಾಕಿಕೊಂಡೆವು. ಬಾಬಾಬುಡನ್ ಗಿರಿ ಯಾತ್ರಾಸ್ಥಳವೂ ಹೌದು. ಇಲ್ಲಿ ಸೂಫಿ ಸಂತರೊಬ್ಬರ ದರ್ಗವಿದೆ. ಬಾಬಾಬುಡನ್ ಗಿರಿಯ ಸೌಂದರ್ಯ ಅದ್ಭುತವಾಗಿದ್ದರೂ, ಹಸಿರಿನ ಸಿರಿಯ ಮೇಲೆ ಬಿಳಿಯ ಮಚ್ಚೆಗಳಂತೆ ಸುತ್ತಮುತ್ತಲೂ ಕಾಣುವ ಪ್ಲಾಸ್ಟಿಕ್ ಮನಸ್ಸಿಗೆ ಬೇಸರ ತರಿಸುತ್ತದೆ. ಯಾತ್ರೆಗೆ ಬಂದ ಜನರೇ ಯಾತ್ರಾಸ್ಥಳವನ್ನು ಮಲಿನಗೊಳಿಸಿರುವುದು ವಿಪರ್ಯಾಸ. ನಮಗೆ ಎಲ್ಲವನ್ನೂ ನೀಡುವುದು ಪ್ರಕೃತಿ. ಅದೆಷ್ಟೋ ಕಡೆ ನಾವು ಅದರ ಗರ್ಭವನ್ನೇ ಅಗೆದಿದ್ದೇವೆ. ತನ್ನ ಸೌಂದರ್ಯವನ್ನು ತೋರಿಸಿಕೊಳ್ಳಲು, ಪ್ರಶಾಂತವಾಗಿ ನಿದ್ರಿಸಲು ಪ್ರಕೃತಿ ಆರಿಸಿಕೊಂಡ ಜಾಗಗಳು ಕೆಲವೇ ಕೆಲವು. ಅದನ್ನೂ ನಾವು ಆಕ್ರಮಿಸಿಬಿಟ್ಟರೆ ಹೇಗೆ? ಸೌಂದರ್ಯವನ್ನು ಸವಿಯಲು ಹೋಗುವುದು ಸರಿ. ತಾನು ಸವಿದು ಅದರ ಪಾಡಿಗೆ ಅದನ್ನು ಬಿಟ್ಟು ಬರಬೇಕು. ಆದರೆ ಅದರ ಅಂದವನ್ನು ಕೆಡಿಸುವ ನಮ್ಮ ಧಾರ್ಷ್ಟ್ರ ಗುಣ ಎಂದು ಕೊನೆಗಾಣುವುದೊ. ಪೋಲಿಸ್ ಠಾಣೆಯಿದ್ದರೂ ಅಲ್ಲಿನ ಪರಿಸ್ಥಿತಿ ಮನಸ್ಸಿಗೆ ಕಸಿವಿಸಿ ಉಂಟುಮಾಡುತ್ತದೆ.
ರಾತ್ರಿ ಬಾಬಾಬುಡನ್ ಗಿರಿಯಲ್ಲಿಯೇ ತಂಗಿದ್ದು, ಬೆಳಿಗ್ಗೆ ನಾವೇ ತಯಾರಿಸಿದ ಉಪಹಾರ ಮುಗಿಸಿ, ಬಟರ್ಮಿಲ್ಕ್ ಜಲಪಾತ ವೀಕ್ಷಣೆಗೆ ಹೊರಟೆವು. ಬಟರ್ಮಿಲ್ಕ್ ಜಲಪಾತ ಬಾಬಾಬುಡನ್ ಗಿರಿಯಿಂದ ಸುಮಾರು ೧೦ ಕಿಮೀ. ದೂರದಲ್ಲಿದೆ. ಜಲಪಾತಕ್ಕೆ ಹತ್ತಿರದ ಸ್ಥಳ ಅತ್ತಿಗುಂಡಿ. ಆದ್ದರಿಂದ ಇದನ್ನು ಅತ್ತಿಗುಂಡಿ ಜಲಪಾತವೆಂದೂ ಕರೆಯುತ್ತಾರೆ. ಅತ್ತಿಗುಂಡಿಗೆ ಹೋಗಿ ಅಲ್ಲಿಂದ ಜೀಪಿನಲ್ಲಿ ಬಟರ್ಮಿಲ್ಕ್ ಜಲಪಾತ ಸೇರಬೇಕು. ಮಳೆಗಾಲದಲ್ಲಿ ಪ್ರಯಾಣ ಕಷ್ಟವಾಗಬಹುದು. ಹೆಸರಿಗೆ ತಕ್ಕಂತೆ ಸುಮಾರು ೩೦ - ೪೦ ಮೀ. ಎತ್ತರದಿಂದ ಬೀಳುವ ಹಾಲ್ಬಿಳುಪಿನ ಜಲಪಾತ ನಯನ ಮನೋಹರವಾಗಿದೆ. ನೀರು ಅಷ್ಟೇನು ರಭಸವಾಗಿರದಿದ್ದ ಕಾರಣ ಕೆಲಹೊತ್ತು ಆಟವಾಡಿದೆವು. ತಣ್ಣಗಿನ ನೀರಿನ ಝರಿಯ ಕೆಳಗೆ ನೆನೆಯುವ ಅನುಭವ ಅದ್ಭುತ. ಮಧ್ಯಾಹ್ನದ ಊಟಮುಗಿಸಿ ೩:೩೦ ಗಂಟೆಗೆ ಚಿಕ್ಕಮಗಳೂರನ್ನು ಬಿಟ್ಟು ಬೆಂಗಳೂರು ಸೇರುವ ಹೊತ್ತಿಗೆ ೨೩ರ ರಾತ್ರಿ ೯:೩೦ ಗಂಟೆ.
ಇಂತಹ ಅದ್ಭುತ ಪ್ರವಾಸದ ಅನುಭವ ನೀಡಿದ Rackpackers ತಂಡಕ್ಕೆ ಅನಂತಾನಂತ ಧನ್ಯವಾದಗಳು. ಮುಳ್ಳಯ್ಯನಗಿರಿ ತಲುಪಲು ನೆರವಾಗುವ ಕೆಲವು ಲಿಂಕುಗಳನ್ನು ಕೆಳಗೆ ಕೊಟ್ಟಿದ್ದೇನೆ. ನಿಮ್ಮ ಪ್ರಯಾಣ ಶುಭಕರವಾಗಿರಲಿ. ಪ್ರಕೃತಿ ಸೌಂದರ್ಯವನ್ನು ಸವೆದು ನೀವು ಅಲ್ಲಿಗೆ ಹೋದ ನೆರಳನ್ನೂ ಬಿಡದೆ, ಅದರ ಪಾಡಿಗೆ ಅದನ್ನು ಬಿಟ್ಟು ಬಂದುಬಿಡಿ.
ಬೆಂಗಳೂರು - ಸರ್ಪಧಾರಿ ದಾರಿ - http://bit.ly/2fi5LXH
ಬೆಂಗಳೂರು - ಮುಳ್ಳಯ್ಯನಗಿರಿ ದಾರಿ - http://bit.ly/2f4yIp0
Rackpackers ಜಾಲತಾಣ - www.rackpackers.com
ಮುಳ್ಳಯ್ಯನಗಿರಿ - ಬಾಬಾಬುಡನ್ ಗಿರಿ ದಾರಿ - http://bit.ly/2ffO2j4
No comments:
Post a Comment