Wednesday, November 23, 2016

ಕರ್ಣ.....

ಭಾರತದ ಸಾಹಿತ್ಯ ಇತಿಹಾಸದಲ್ಲಿಯೇ ಅತ್ಯಂತ ಪೂಜಿಸಲ್ಪಟ್ಟಿರುವ, ವಿಮರ್ಶೆಗೊಳಗಾಗಿರುವ ಕೃತಿ ಮಹಾಭಾರತ. ಸುಮಾರು ಒಂದು ಲಕ್ಷಕ್ಕೂ ಮಿಗಿಲಾದ ಶ್ಲೋಕಗಳ ವೇದವ್ಯಾಸ ವಿರಚಿತ ಮಹಾನ್ ಸಂಸ್ಕೃತ ಗ್ರಂಥ. ವೈದಿಕ, ಧಾರ್ಮಿಕರಿಂದ ಹಿಡಿದು ನಾಸ್ತಿಕರವರೆಗೆ ಎಲ್ಲರಿಗೂ ಮಹಾಭಾರತ ಕಥೆಯ ಪರಿಚಯವಿದೆ. ಪರಿಚಯದ ಮಿತಿ ಭಿನ್ನ. ಮಹಾಭಾರತದ ಕುರಿತಾಗಿ ಹಲಾವಾರು ವಿದ್ವಾಂಸರು ಅನುವಾದಗಳನ್ನೂ, ಕಾದಂಬರಿಗಳನ್ನೂ ಬರೆದಿದ್ದಾರೆ. ಅನೇಕರು ತಮಗೆ ಅರ್ಥವಾದ ರೀತಿಯಲ್ಲಿ ವಿಮರ್ಶಿಸಿಯೂ ಇದ್ದಾರೆ. ಕೆಲವರು ಮೂಲಭಾರತದ ಕೆಲವು ಸನ್ನಿವೇಶಗಳನ್ನೋ, ಸಂಭಾಷಣೆಗಳನ್ನೋ, ಪಾತ್ರಗಳನ್ನೋ ತೆಗೆದುಕೊಂಡು ತಮ್ಮ ಸೃಜನಶೀಲತೆಯನ್ನು ಬೆರಸಿ ಅವುಗಳಿಗೆ ತಮ್ಮದೇ ರೀತಿಯಲ್ಲಿ ಜೀವತುಂಬಿದ್ದಾರೆ. ಅವರವರದೇ ದೃಷ್ಟಿಗಳಲ್ಲಿ ವಿವಿಧ ಪಾತ್ರಗಳನ್ನು ನಾಯಕನಾಗಿಯೋ, ನಾಯಕಿಯಾಗಿಯೋ ಬಿಂಬಿಸಿದ್ದಾರೆ. ಅಂತಹ ಅನೇಕ ಪಾತ್ರಗಳಲ್ಲಿ ಎಲ್ಲರ ದೃಷ್ಟಿಯನ್ನೂ ತನ್ನತ್ತ ಸೆಳೆದು, ಪ್ರಶಂಸೆ, ಚರ್ಚೆ, ವಾದ - ವಿವಾದಗಳಿಗೊಳಗಾಗಿರುವ ಪಾತ್ರ “ಕರ್ಣ”. ಕೆಲವರ ದೃಷ್ಟಿಯಲ್ಲಿ ಕರ್ಣನೇ ಮಹಾಭಾರತ ಕಥಾನಾಯಕ.

ಕರ್ಣ ಎಂದಾಕ್ಷಣ ಅನೇಕರ ಮನಸ್ಸಿಗೆ ಬರುವುದು ಒಬ್ಬ ದಾನಿ, ವೀರ, ಸ್ನೇಹಿತ, ತನ್ನ ಕುಲದ ದೆಸೆಯಿಂದ ಅವಮಾನ - ತಿರಸ್ಕಾರಗಳಿಗೆ ಒಳಗಾದ, ಕಾಲನ ಕೈಯಲ್ಲಿ ನಲುಗಿದ ವ್ಯಕ್ತಿಯ ಚಿತ್ರ. ಆದರೆ ನಿಜವಾಗಿಯೂ ಕರ್ಣ ಕರುಣೆಗೆ ಅರ್ಹನಾದವನೇ? ಕಥಾನಾಯಕನೇ? ಇರಬಹುದು. ಕರ್ಣ ಒಬ್ಬ ಮಾಹಾದಾನಿ. ದಾನ ಕೇಳಿದ ಒಬ್ಬ ಬ್ರಾಹ್ಮಣನಿಗೆ ತನ್ನ ಕವಚ - ಕುಂಡಗಳನ್ನೇ ನೀಡಿದವನು. ಆದರೆ ಇದು ಅವನನ್ನು ಮಹಾನ್ ವ್ಯಕ್ತಿಯನ್ನಾಗಿ ಮಾಡುತ್ತದೆಯೇ? 

ಕರ್ಣನ ವ್ಯಕ್ತಿತ್ವ ನಾಶದ ನಿದರ್ಶನಗಳು ಮಹಾಭಾರತದಲ್ಲಿ ಅನೇಕ ಸಿಗುತ್ತವೆ. ಕರ್ಣನ ವಿದ್ಯೆಯ ಮೂಲವೇ ಸುಳ್ಳು. ವಾಸ್ತವದಲ್ಲಿ ಕರ್ಣ, ದುರ್ಯೋಧನನ ಕೃತ್ಯಗಳಲ್ಲಿ ದುಶ್ಯಾಸನ, ಶಕುನಿಯರ ಜೊತೆ ನಾಲ್ಕನೇ ಒಂದರ ಪಾಲುದಾರ. ಶಕುನಿ, ದುರ್ಯೋಧನರ ಪ್ರತಿಯೊಂದು ಕುತಂತ್ರಗಳಲ್ಲಿಯೂ ಕರ್ಣ ಭಾಗಿಯಾಗುತ್ತಾನೆ. ದುರ್ಯೋಧನನ ಮಾತ್ಸರ್ಯಕ್ಕೆ ಇಂಬುಕೊಟ್ಟು ಪಾಂಡವರಿಗೆ ವಿನಾ ಕಾರಣ ತೊಂದರೆಕೊಟ್ಟವರಲ್ಲಿ ಕರ್ಣನೂ ಒಬ್ಬ. ಮಹಾಭಾರತದ ಕರಾಳ ದಿನವಾದ ದ್ರೌಪದಿ ವಸ್ತ್ರಾಪಹರಣ ಪ್ರಸಂಗ ಇದಕ್ಕೊಂದು ಉದಾಹರಣೆ. ದ್ಯೂತದಲ್ಲಿ ಧರ್ಮರಾಯ ದ್ರೌಪದಿಯನ್ನು ಸೋತಾಗ (ಈ ಸಂದರ್ಭದಲ್ಲಿ ಧರ್ಮರಾಯನ ನಡತೆಯನ್ನು ಪ್ರಶ್ನಿಸುವವರಿದ್ದಾರೆ. ಧರ್ಮರಾಯನ ನಡತೆ ಸರಿಯಾದರೂ ಅದರ ಕಾರಣವನ್ನು ಚರ್ಚಿಸುವುದು ಈ ಲೇಖನದ ವ್ಯಾಪ್ತಿಯಲ್ಲ) ದುಶ್ಶಾಸನ, ದುರ್ಯೋಧನರ ಜತೆಗೂಡಿ ರಜಸ್ವಲೆಯಾದ ದ್ರೌಪದಿಯನ್ನು “ದಾಸಿ, ದಾಸಿ” ಎಂದು ಕೂಗಿ, ಗಹಗಹಿಸಿ ನಗುತ್ತಾ ಕಟುಮಾತುಗಳಿಂದ ಜರೆಯುವ ಪ್ರಸಂಗ ಎಂಥವರಿಗೂ ಮನಕಲುಕುತ್ತದೆ. ದುಶ್ಶಾಸನನಿಗೆ ದ್ರೌಪದಿಯನ್ನು ವಿವಸ್ತ್ರಗೊಳಿಸಲು ಹೇಳುವುದೇ ಕರ್ಣ. ಕರ್ಣನ ಮಾತುಗಳಿವು, 
“ದೇವತೆಗಳು ಒಬ್ಬ ಹೆಂಡತಿಗೆ ಒಬ್ಬನೇ ಗಂಡನೆಂದು ನಿಗದಿ ಮಾಡಿದ್ದಾರೆ. ಇವಳು ಐವರನ್ನು ವರಿಸಿದ್ದಾಳೆ. ಆದ್ದರಿಂದ ಇವಳು ನೀತಿಗೆಟ್ಟ ಹೆಂಗಸು. ಪಾಂಡವರು, ದ್ರೌಪದಿಯ ಸಮೇತ ಅವರ ಸಂಪತ್ತನ್ನನ್ನೆಲ್ಲವನ್ನೂ ಶಕುನಿ ಗೆದ್ದಿದ್ದಾನೆ. ಓ ದುಶ್ಶಾಸನ, ಪಾಂಡವರ ಮೇಲ್ವಸ್ತ್ರವನ್ನೂ, ದ್ರೌಪದಿಯ ಬಟ್ಟೆಗಳನ್ನೂ ತೆಗೆದುಹಾಕು. (ಸಭಾಪರ್ವ, ಅಧ್ಯಾಯ ೬೬)”.
ದ್ರೌಪದಿಯನ್ನು ಕಾಪಾಡುವಂತೆ ಪಾಂಡವರನ್ನು ಪ್ರಚೋದಿಸಲು ಕರ್ಣ ಈ ಮಾತುಗಳನ್ನು ಹೇಳುತ್ತಾನೆ ಎನ್ನುವವರಿದ್ದಾರೆ. ಅದು ಅವರ ಕಲ್ಪನೆಯಷ್ಟೆ. ಒಂದು ವೇಳೆ ಅವರು ಊಹಿಸಿದ ಕರ್ಣನ ಆಂತರ್ಯ ನಿಜವಾಗಿ ಪಾಂಡವರು ದಂಗೆಯೆದ್ದಿದ್ದರೆ ಕರ್ಣ ದುರ್ಯೋಧನನ ಪರ ಹೋರಾಡುತ್ತಿದ್ದನೇ ಹೊರತು ಅವನಿಗೆ ಬುದ್ದಿ ಹೇಳುತ್ತಿರಲಿಲ್ಲ. ಆ ಸಭೆಯಲ್ಲಿ ಕರ್ಣ, ದುಶ್ಶಾಸನ, ದುರ್ಯೋಧನ ಮತ್ತು ಶಕುನಿಯರನ್ನು ಹೊರತುಪಡಿಸಿ ಇನ್ನೆಲ್ಲರೂ ಶೋಕದಲ್ಲಿದ್ದರು ಎಂದು ಕವಿ ವ್ಯಾಸರು ಹೇಳುತ್ತಾರೆ. 

ಕರ್ಣ ಅರ್ಜುನನಿಗೂ ಮಿಗಿಲಾದ ವೀರನೆಂದು ಹಲವರ ಅಭಿಪ್ರಾಯ. ಆದರೆ ಕರ್ಣನ ವೀರತ್ವವನ್ನು ಪ್ರಸ್ತುತ ಪಡಿಸುವ ಸಂದರ್ಭ ಮಹಾಭಾರತದಲ್ಲಿ ಎಲ್ಲಿಯೂ ಕಾಣಸಿಗುವುದಿಲ್ಲ. ಅನೇಕ ಬಾರಿ ಅವನು ಪಾಂಡವರ ವಿರುದ್ಧ ಸೋಲುತ್ತಾನೆ. ದ್ರುಪದನನ್ನು ಸೆರೆಹಿಡಿಯಲು ಕೌರವರ ಜೊತೆ ಹೋದ ಕರ್ಣನಿಗೆ ಸೆರೆಹಿಡಿಯುವುದು ಸಾಧ್ಯವಾಗುವುದಿಲ್ಲ. ಪಾಂಚಾಲಿಯ ಸ್ವಯಂವರದ ಸಂದರ್ಭದಲ್ಲಿ ಕ್ಷತ್ರಿಯರೆಲ್ಲ ಜತೆಗೂಡಿ ಬ್ರಾಹ್ಮಣ ವೇಷದಲ್ಲಿದ್ದ ಭೀಮಾರ್ಜುನರ ವಿರುದ್ಧ ಸೋಲುತ್ತಾರೆ. ಕ್ಷತ್ರಿಯರ ಗುಂಪಿನಲ್ಲಿ ಕರ್ಣನೂ ಇದ್ದನೆಂಬುದನ್ನು ಬೇರೆಯಾಗಿ ಹೇಳಬೇಕಾಗಿಲ್ಲ. ವಿರಾಟನಗರಿಯಲ್ಲಿ ಗೋವುಗಳನ್ನು ಸೆರೆಹಿಡಿದ ಸಮಯದಲ್ಲೂ ಕರ್ಣನಿಗೆ ಅರ್ಜುನನ ವಿರುದ್ದ ಸೋಲುಂಟಾಗುಗತ್ತದೆ. ಚಕ್ರವ್ಯೂಹದ ಸಂದರ್ಭದಲ್ಲಿ ಅಭಿಮನ್ಯುವಿನ ಪ್ರತಾಪವನ್ನು ಎದುರಿಸಲು ಕರ್ಣ ಸಮೇತ ಆರು ಮಂದಿ ಬೇಕಾಯಿತು. 

ಇನ್ನು ಕರ್ಣ-ದುರ್ಯೋಧನರ ಸ್ನೇಹದ ವಿಚಾರ. ಗೆಳೆಯನ ತಪ್ಪುಗಳನ್ನು ಸಮರ್ಥಿಸಿ ಅವನ ಜೊತೆಗೆ ತಾನೂ ತಪ್ಪು ಮಾಡುವುದು ಸ್ನೇಹವೇ? ಅದೇ ನಿಜವಾದರೆ ಸ್ನೈಹದ ವ್ಯಾಖ್ಯಾನವನ್ನು ಪುನರ್ವಿಮರ್ಶಿಸಬೇಕಾಗುತ್ತದೆ. ತನ್ನ ಸ್ನೇಹ ಗಾಢವಾಗಿದ್ದು, ಕರ್ಣ ಸ್ವಾಮಿನಿಷ್ಟೆ ತೋರಿದನೆಂದೇ ಇಟ್ಟುಕೊಳ್ಳೋಣ. ಆದರೆ ಕುರುಕ್ಷೇತ್ರ ಯುದ್ಧದಲ್ಲಿ ಕರ್ಣ ಮಾಡುವುದೇನು? ತನ್ನನ್ನು ಅರ್ಧರಥ ಎಂದ ಭೀಷ್ಮನ ಮೇಲಿನ ದ್ವೇಷಕ್ಕೆ ಭೀಷ್ಮ ಸಾಯುವವರೆಗೂ ತಾನು ಹೋರಾಡುವುದಿಲ್ಲ ಎನ್ನುತ್ತಾನೆ. ದುರ್ಯೋಧನ ಎಷ್ಟು ಕೇಳಿಕೊಂಡರೂ ಒಪ್ಪಿಕೊಳ್ಳುವುದಿಲ್ಲ. ಅವನು ರಂಗಕ್ಕೆ ಬರುವ ಹೊತ್ತಿಗೆ ಕೌರವರ ಅರ್ಧ ಸೈನ್ಯ ನಿರ್ನಾಮವಾಗಿರುತ್ತದೆ. ಸ್ನೇಹಕ್ಕಿಂತಲೂ ತನ್ನ ಅಹಂಕಾರಕ್ಕೆ ಒತ್ತು ಕೊಡುವುದು ಕರ್ಣನ ಕೃತಜ್ಞತೆಯೋ, ಕೃತಘ್ನತೆಯೋ ತಿಳಿಯದು. ಸ್ನೇಹಕ್ಕೆ ಮಹಾಭಾರತದ ಉತ್ತರ ಕರ್ಣ-ದುರ್ಯೋಧನರಲ್ಲ, ಕೃಷ್ಣಾರ್ಜುನರು!

ಮಹಾಭಾರತದ ಕರ್ಣ ಒಬ್ಬ ಹತಾಶ ವ್ಯಕ್ತಿ. ದುರಾಸೆ, ಅಹಂಕಾರ, ಸ್ವಪ್ರತಿಷ್ಠೆಗಳಿಗೆ ತನ್ನನ್ನು ತಾನೇ ನಾಶ ಮಾಡಿಕೊಂಡವನು. ಅವನು ತನ್ನ ಜೀವನದಲ್ಲಿ ಎಷ್ಟೋ ಕಷ್ಟಗಳನ್ನೆದುರಿಸುವುದು ನಿಜ. ಹುಟ್ಟಿನಲ್ಲೇ ತಾಯಿಯ ತಿರಸ್ಕಾರ, ಬೆಳೆಯುತ್ತಾ ತನ್ನ ಜಾತಿಯ ಕುರಿತಾದ ಅವಮಾನ, ಕೃಷ್ಣನಿಂದ ತನ್ನ ಜನ್ಮರಹಸ್ಯವನ್ನು ತಿಳಿಯುವ ಪ್ರಸಂಗ, ನಂತರ ಕುಂತಿಯ ಜೊತೆಗಿನ ಸಂಭಾಷಣೆ, ಜೀವನದಲ್ಲಿ ಎದುರಿಸಿದ ದುರಾದೃಷ್ಟಗಳು, ಪ್ರತಿಕೂಲ ಪರಿಸ್ಥಿತಿಗಳು ಇವೆಲ್ಲಾ ಕರುಣಾಜನಕ ವಿಚಾರಗಳೇ. ಆದರೆ, ಮನುಷ್ಯನ ಹುಟ್ಟು, ಬಡತನ, ತಾನೆದುರಿಸಿರುವ ಕಷ್ಟಗಳು, ದುರಾದೃಷ್ಟಗಳು, ಅವಮಾನ-ತಿರಸ್ಕಾರಗಳಾವುವೂ ತಾನು ಮಾಡುವ ಕರ್ಮಗಳಿಗೆ ಸಮರ್ಥನೆಯಲ್ಲ. ಕಡು ಬಡತನದಲ್ಲಿ ಹುಟ್ಟಿದ ಮಾತ್ರಕ್ಕೆ ಹಣವಿಲ್ಲವೆಂದು ಕಳ್ಳತನ ಮಾಡಿದರೆ ಯಾವುದೇ ಕಾರಣಕ್ಕೂ ಕ್ಷಮಿಸಲಾಗದು. ಕಾಲನ ವಿರುದ್ಧ ಹೋಗಿ ಕಾಲನ ಕೈಯಲ್ಲಿಯೇ ನಾಶವಾದವನು ಕರ್ಣ!

ತನ್ನದಲ್ಲದ ಯಾವುದೇ ವಿಚಾರವನ್ನು ಬರೆಯುವಾಗ ಅದರ ಮೂಲವನ್ನು ನೀಡುವುದು ಅನಿವಾರ್ಯವೆಂದು ನನ್ನ ಅಭಿಪ್ರಾಯ. ಈ ಲೇಖನ ಮಹಾಭಾರತದದ್ದಾದರೂ, ನಾನು ಸಂಸ್ಕೃತ ಭಾರತವನ್ನು ಓದಿಲ್ಲವಾದ ಕಾರಣ ಆಕರಗಳನ್ನು ನೀಡುವುದು ಅನಿವಾರ್ಯ. ಅಂತೆಯೇ ನನ್ನ ಆಕರ ಪುಸ್ತಕಗಳು,
೧. ಕೆ. ಎಸ್. ನಾರಾಯಣಾಚಾರ್ಯರ “ರಾಜಸೂಯದ ರಾಜಕೀಯ”, “ರಾಜಸೂಯ ತಂದ ಅನರ್ಥ”, “ವನದಲ್ಲಿ ಪಾಂಡವರು” ಮತ್ತು “ಆ ಹದಿನೆಂಟು ದಿನಗಳು”.  
೨. ಕೃಷ್ಣ ಮೋಹನ್ ಗಂಗೂಲಿಯವರ “Mahabhaarata of Vyasa”. ಇದು ಸಂಸ್ಕೃತ ಭಾರತದ ಯಥಾತ್ ಆಂಗ್ಲ ಅನುವಾದ. ನಾರಾಯಣಾಚಾರ್ಯರ ಕನ್ನಡ ಅನುವಾದ ಕಾದಂಬರಿ ರೂಪದಲ್ಲಿರುವುದನ್ನು ಬಿಟ್ಟರೆ, ನಾರಾಯಣಾಚಾರ್ಯರ ಪುಸ್ತಕಗಳಿಗೂ ಗಂಗೂಲಿಯವರ ಅನುವಾದಕ್ಕೂ ವ್ಯತ್ಯಾಸಗಳಿಲ್ಲ. 

೩. ದೇವುಡು ನರಸಿಂಹಶಾಸ್ತ್ರಿಯವರ “ಮಹಾಭಾರತ” - ಇದು ಮಹಾಭಾರತದ ಸಂಕ್ಷಿಪ್ತ ಚಿತ್ರಣ. 

Monday, November 14, 2016

ಅಳಿದ ಮೇಲೆ

“ಸದಭಿರುಚಿ ಕನ್ನಡ ಓದುಗರ ಸಂಖ್ಯೆ ಕಡಿಮೆಯಾಗುತ್ತಿದೆ”, ಇದು ಬಹುದಿನಗಳಿಂದ ಕೇಳುತ್ತಿರುವ ಸಾಧಾರಣ ವಾಕ್ಯ. ನಾನೇನು ಇದರ ಸತ್ಯಾಸತ್ಯಗಳ ಸಂಶೋಧನೆಯನ್ನು ಮಾಡದಿದ್ದರೂ, ಬಯಲುಸೀಮೆಯ ನಗರ ಮತ್ತು ಗ್ರಾಮೀಣ ಪ್ರದೇಶಗಳೆರಡನ್ನೂ ಕಂಡ ನನ್ನ ಮಟ್ಟಿಗೆ ಇದು ಸತ್ಯ. ಓದುಗರ ಸಂಖ್ಯೆಯೇನು ಕಡಿಮೆಯಿಲ್ಲ. ಆದರೆ ಕನ್ನಡ ಓದುಗರ ಸಂಖ್ಯೆ, ಮುಖ್ಯವಾಗಿ ಯುವ ಓದುಗರ ಸಂಖ್ಯೆ, ಕಡಿಮೆಯಿದೆ. ಸಮಾಜ ಸುಧಾರಣೆ, ಸಂಸ್ಕೃತಿ-ಇತಿಹಾಸಗಳ ಅರಿವು, ವಿವಿಧ ಜನ-ಜೀವನ ಪರಿಚಯ, ಮನರಂಜನೆ ಇವೇ ಮೊದಲಾದುವುಗಳಿಗೆ ಸಾಹಿತ್ಯ ಒಂದು ಅದ್ಭುತ ಸಾಧನ. ಆಂಗ್ಲ ಸಾಹಿತ್ಯವನ್ನು ಬಹುತೇಕ ಮನರಂಜನೆಗೆ ಓದಿದರೂ, ವಿದೇಶ ಸಂಸ್ಕೃತಿ ಇತಿಹಾಸಗಳು ನಮಗೆ ಪರೋಕ್ಷವಾಗಿ ತಿಳಿಯುತ್ತದೆ. ಉದಾಹರಣೆಗೆ, ಡ್ಯಾನ್ ಬ್ರೌನ್ ಅವರ ಸಾಹಿತ್ಯ ಮುಖ್ಯವಾಗಿ ರೋಮಾಂಚಕ ಕಾದಂಬರಿಗಳಾದರೂ ಅವು ಯೂರೋಪಿನ ಇತಿಹಾಸ ಮತ್ತು ಕ್ರೈಸ್ತಧರ್ಮದ ಸ್ಥೂಲ ಪರಿಚಯ ಮಾಡಿಕೊಡುತ್ತವೆ. ಅದೇ ರೀತಿ ನಮ್ಮ ಇತಿಹಾಸ ಸಂಸ್ಕೃತಿಗಳನ್ನು ತಿಳಿಯಲು ಕನ್ನಡ ಸಾಹಿತ್ಯ ಅವಶ್ಯಕ. ಅದು ನಮ್ಮಲ್ಲಿ ಹೇರಳವಾಗಿದೆ. ಆದರೆ ಅದನ್ನು ಉಪಯೋಗಿಸಿಕೊಳ್ಳುವವರ ಸಂಖ್ಯೆ ಕಡಿಮೆ. ಶಾಲಾ ಮಟ್ಟದಿಂದಲೂ ಕನ್ನಡ ಸಾಹಿತ್ಯಕ್ಕೆ ಪ್ರಾಮುಖ್ಯತೆ ಕೊಡದಿರುವುದು ಇದಕ್ಕೆ ಕಾರಣವಿರಬಹುದು. ಎಷ್ಟೊ ಮಂದಿಗೆ ನಮ್ಮ ಲೇಖಕರ ಕನ್ನಡವೇ ಅರ್ಥವಾಗುವುದಿಲ್ಲ. ಕನ್ನಡ ಕಠಿಣವೆಂದಲ್ಲ. ನಮ್ಮ ಕನ್ನಡ ಸಂಸ್ಕಾರ ಕಡಿಮೆ. ಅಷ್ಟೆ. ಇರಲಿ. ಸುಮಾರು ೯೫ ವರ್ಷ ಬಾಳಿ ಬದುಕಿ, ಕರಾವಳಿ - ಮಲೆನಾಡಿನ ಕಲೆ, ಜೀವನ, ಸಂಸ್ಕೃತಿಗಳನ್ನು, ತಮ್ಮ ಜೀವನದ ಅನುಭವಗಳನ್ನು ವಿವಿಧ ಕೃತಿಗಳಲ್ಲಿ ಬರೆದಿಟ್ಟ ಶಿವರಾಮ ಕಾರಂತರ ಒಂದು ಆಣಿಮುತ್ಯವೇ ಈ ಲೇಖನದ ವಸ್ತು.

“ಅಳಿದ ಮೇಲೆ”, ಕಾರಂತರ ಅದ್ಭುತ ಕಾದಂಬರಿ. ಕಾರಂತರು ಮನುಷ್ಯ ಜೀವನದ ಸಾರ್ಥಕತೆಯನ್ನು ಯಶವಂತರಾಯರ ಮೂಲಕ ಚಿತ್ರಿಸಿದ್ದಾರೆ. ಕಾರಂತರ ವ್ಯಕ್ತಿತ್ವ ಅವರ ಕೃತಿಗಳಿಂದ ವೇದ್ಯವಾಗುತ್ತದೆ. ಕಾರಂತರು ನಮ್ಮ ಸಂಸ್ಕೃತಿ ಸಂಪ್ರದಾಯಗಳನ್ನು ವಿಶಿಷ್ಟವಾಗಿ ಸ್ವೀಕರಿಸಿದ ವ್ಯಕ್ತಿ. ಅದನ್ನು ಅವರು ತಮ್ಮ ಪಾತ್ರಗಳಿಂದ ತೋರಿಸಿಕೊಡುತ್ತಾರೆ. ವಿಷ್ಣುಕಾಂತ ಘಾಟೆಯವರಿಗೆ ಸನಾತನ ಧರ್ಮದ ಕುರಿತು ಗ್ರಂಥ ಬರೆಯಲು ಅದರ ಮೇಲೆ ನಂಬಿಕೆಯೇ ಇಲ್ಲದ ಯಶವಂತರಾಯರು ಹಣ ಸಹಾಯ ಮಾಡುತ್ತಾರೆ. ಘಾಟೆಯವರು ಈ ಕುರಿತು ಕೇಳಿದಾಗ ಯಶವಂತರಾಯರು,

“ನಿಮ್ಮ ನಂಬಿಕೆ ನಿಮಗೆ, ನನ್ನ ನಂಬಿಕೆ ನನಗೆ. ನೀವೇ ಸರಿಯಿರಲೂಬಹುದು. ನಿಮ್ಮ ವಿಚಾರ, ನಿಮ್ಮ ಜೀವನ ನಮ್ಮ ಜನಗಳಿಗೆ ತಲುಪಬೇಕು. ನಾವು ಎಷ್ಟೇ ಬುದ್ಧಿವಂತರಾಗಿದ್ದರೂ, ನಾವು ಎಷ್ಟೇಸರಿಯಿದ್ದರೂ ಒಂದೊಂದು ಜೀವವೂ ತಾನು ಕಂಡುಕೊಂಡ ಬೆಳಕಿನಲ್ಲಿ ನಡೆಯುವುದೇ ನ್ಯಾಯ.ನಮ್ಮೆಲ್ಲರ ಸಮಷ್ಟಿ ಬಾಳ್ವೆಗೆ – ನಾವು ಸಲ್ಲಿಸಬೇಕಾದ ಋಣವೆಂದರೆ ಅದು. ಇದೆ ಖಂಡಿತ, ಅದೇ ಖಂಡಿತ – ಎಂದು ಇನ್ನೊಬ್ಬರ ಗಂಟಲನ್ನು ಹಿಸುಕಿ, ಅವರ ವಾಣಿಯನ್ನು ನಿರ್ಬಂಧಿಸುವುದು ಸಮಾಜಘಾತುಕತನ.”

ಎನ್ನುತ್ತಾರೆ. ಇದು ಕಾರಂತರ ವಿಚಾರ. “ಅಳಿದ ಮೇಲೆ” ಕಾದಂಬರಿಯ ಪ್ರತಿಯೊಂದು ಪಾತ್ರವೂ, ಸಾಮಾನ್ಯ ಜೀವನದ ಪ್ರತಿಬಿಂಬಗಳು. ಯಾವುದೇ ಪಾತ್ರದ ವೈಭವೀಕರಣವಿಲ್ಲ. ಹಿರಿಯರ ಭಾಷೆಗಳಿಗೆ ಕಟ್ಟುಬಿದ್ದ ಶಂಕರ ಹೆಗ್ಗಡೆ, ಅಸಹಾಯಕಿಗೆ ಮೋಸಮಾಡಿದ ಶಂಭು, ರಾಮ ಹೆಗ್ಗಡೆ, ಪಾರ್ವತಮ್ಮ ಇವರೆಲ್ಲ ನಾವು ಒಂದಲ್ಲ ಒಂದು ಕಡೆ ನಿಜ ಜೀವನದಲ್ಲಿ ಎದುರಿಸಿದ ಪಾತ್ರಗಳೇ. ಯಾವುದೇ ಒಂದು ಪುಸ್ತಕವನ್ನು ಓದಿ ಮುಗಿಸಿದಾಗ ಅದರಿಂದ ನಾವೇನಾದರೂ ಪಡೆದಿದ್ದಾದರೆ, ಪುಸ್ತಕ ಓದಿದ್ದಕ್ಕೂ ಒಂದು ಸಾರ್ಥಕ. ಅಂತೆಯೇ “ಅಳಿದ ಮೇಲೆ”ಯ ಮುಖ್ಯ ಸಂದೇಶ ಯಶವಂತರಾಯರೇ ಹೇಳುವಂತೆ,

"ಒಟ್ಟಿನಿಂದ, ನನ್ನ ಮನಸ್ಸನ್ನು ಈ ಕೆಲವು ಸಮಯದಿಂದ ಕಾಡುತ್ತಿದ್ದ ಒಂದೇ ಒಂದು ಸಂಗತಿಯೆಂದರೆ – ಬದುಕಿನ ಲೆಕ್ಕಾಚಾರದಲ್ಲಿ ನಾನು ಕೊಂಡುದಕ್ಕಿಂತಲೂ ಕೊಟ್ಟದ್ದು ಕಡಿಮೆಯಾಗಬಾರದು ಎಂಬ ಭಾವನೆ. ಮನುಷ್ಯ ಸಮಾಜದ ಋಣವನ್ನು ಹೊತ್ತುಕೊಂಡೇ ಬಂದಿದ್ದಾನೆ.  ಅದರ ಋಣದಿಂದಲೇ ಬೆಳೆಯುತ್ತಾನೆ. ನಾಳೆ ದಿನ ಸಾಯುವಾಗ ತಾನು ಪಡೆದುದಕ್ಕಿಂತಲೂ ಹೆಚ್ಚಿನ ಋಣವನ್ನು ಹಿಂದೆ ಸಲ್ಲಿಸಿಹೋದರೆ ಆತ ಹುಟ್ಟಿದ್ದಕ್ಕೊಂದು ಸಾರ್ಥಕ. ಇಲ್ಲವಾದರೆ?  ಅವನ ಜನ್ಮದಿಂದ ಸಮಾಜಕ್ಕೆ ನಷ್ಟ – ಎಂಬ ಭಾವ ನನಗೆ.  ಹಣ ಕಾಸು ಮೊದಲಾದುವು ಈ ದೃಷ್ಟಿಯಿಂದ ಅಲ್ಪ ಪದಾರ್ಥಗಳು. ಆದರೂ ಬಾಳನ್ನು ಸಾಗಿಸಲು ಬೇಕೇ ಆದ ವಸ್ತುಗಳಷ್ಟೇ...."

ಕಾರಂತರ ಭಾಷೆಯೂ ಕೂಡ ಕರಾವಳಿಯ ಭಾಷೆಯಂತೆಯೇ ಮೃದು. ಅಷ್ಟೆಯೇ ಪರಿಣಾಮಕಾರಿ. ಎಂಥವರಿಗೂ ಸುಲಭವಾಗಿ ಅರ್ಥವಾಗುವಂಥದು. ಈ ಕೃತಿಯ ಬಗ್ಗೆ ಇದಕ್ಕಿಂತಲೂ ಹೆಚ್ಚು ಹೇಳಿ ಓದುಗರ ಕುತೂಹಲಕ್ಕೆ ಧಕ್ಕೆ ತರುವುದಿಲ್ಲ. ಹೊಸದಾಗಿ ಕನ್ನಡ ಪುಸ್ತಕ ಓದಲು ಶುರುಮಾಡುವವರಿಗೂ, ಅನಭವಿ ಓದುಗರಿಗೂ “ಅಳಿದ ಮೇಲೆ” ಓದಲೇಬೇಕಾದ ಕೃತಿ. 

ಕಾರಂತರ ಕಿರುಪರಿಚಯವನ್ನು ಇಲ್ಲಿ ಕಾಣಬಹುದು https://kn.wikipedia.org/wiki/%E0%B2%B6%E0%B2%BF%E0%B2%B5%E0%B2%B0%E0%B2%BE%E0%B2%AE_%E0%B2%95%E0%B2%BE%E0%B2%B0%E0%B2%82%E0%B2%A4

Saturday, November 5, 2016

ಮುಳ್ಳಯ್ಯನಗಿರಿ - Mullainagiri Trek

ನದಿ ಹರಿದಿತ್ತು, ಬನ ನಿಂದಿತ್ತು
ಬಾನ್ ನೀಲಿಯ ನಗೆ ಬೀರಿತ್ತು 
ನಿರ್ಜನ ದೇಶದ ನೀರವ ಕಾಲಕೆ
ಖಗರವ ಪುಲಕಂ ತೋರಿತ್ತು

ಇವು ಕವಿ ಕುವೆಂಪುರವರ ಸಾಲುಗಳು. ಬಹುಶ: ಮುಳ್ಳಯ್ಯನಗಿರಿಯನ್ನು ನೋಡಿಯೇ ಅವರು ಹೀಗೆ ಹೇಳಿರಬೇಕು. ಮುಳ್ಳಯ್ಯನಗಿರಿ ಕರ್ನಾಟಕದಲ್ಲಿನ ಅತೀ ಎತ್ತರದ ಬೆಟ್ಟ.  ಸುಮಾರು ೬೩೧೭ ಅಡಿಗಳಷ್ಟು ಎತ್ತರ (೧೯೩೦ ಮೀ.). ಇದು ಪಶ್ಚಿಮ ಘಟ್ಟಗಳ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಕಂಡುಬರುತ್ತದೆ. ಚಿಕ್ಕಮಗಳೂರಿನಿಂದ ೧೫ ಕಿ.ಮೀ. ಬೆಂಗಳೂರಿನಿಂದಾದರೆ ಸುಮಾರು ೨೭೦ ಕಿ.ಮೀ. ನೆಲಮಂಗಲ - ಕುಣಿಗಲ್ - ಹಾಸನ - ಬೇಲೂರು - ಚಿಕ್ಕಮಗಳೂರು ಮಾರ್ಗವಾಗಿ ತಲುಪಬಹುದು. ರಾಷ್ಟ್ರೀಯ ಹೆದ್ದಾರಿಯಾದ್ದರಿಂದ ರಸ್ತೆ ಚೆನ್ನಾಗಿಯೇ ಇದೆ.  ದಾರಿಯಲ್ಲಿ ಊಟೋಪಚಾರಕ್ಕಾಗಿ ಒಳ್ಳೆಯ ಹೋಟೆಲುಗಳೂ ಇವೆ. ಚಿಕ್ಕಮಗಳೂರಿನವರೆಗೂ ಸರ್ಕಾರಿ ಸಾರಿಗೆ ವ್ಯವಸ್ಥೆಯೂ ಚೆನ್ನಾಗಿದೆ. ಆದ್ದರಿಂದ ಮುಳ್ಳಯ್ಯನಗಿರಿ ತಲುಪಲು ಪ್ರಯಾಸ ಪಡಬೇಕಾಗಿಲ್ಲ.

ನಾವು, ೩೯ ಮಂದಿ Rackpackers ತಂಡದವರು ಮುಳ್ಳಯ್ಯನಗಿರಿ - ಬಾಬಾಬುಡನ್ ಗಿರಿ ಟ್ರೆಕ್ಕಿಂಗಿಗಾಗಿ ತೆರಳಿದ್ದೆವು. ಆ ಅನುಭವವೇ ಇಲ್ಲಿನ ವಸ್ತು. ನಾವು ಅಕ್ಟೋಬರ ೨೧ರ ರಾತ್ರಿ ೧೦:೩೦ಕ್ಕೆ ಸರ್ಕಾರಿ ಬಸ್ಸಿನಲ್ಲಿ (ಒಪ್ಪಂದದಿಂದ) ಬೆಂಗಳೂರಿನಿಂದ ಹೊರಟು ಬೆಳಿಗ್ಗೆ ೪:೩೦ರ ಹೊತ್ತಿಗೆ ಚಿಕ್ಕಮಗಳೂರು ಸೇರಿದೆವು. ಬೆಳಿಗ್ಗೆ ೬ರವರೆಗೂ ಬಸ್ಸಿನಲ್ಲಿಯೇ ಮಲಗಿದ್ದು, ನಂತರ ನಿತ್ಯಕರ್ಮಗಳನ್ನು ಮುಗಿಸಿ, ಉಪಹಾರ ಮಾಡಿ, ಬೆಳಿಗ್ಗೆ ೭:೪೦ ಚಿಕ್ಕಮಗಳೂರಿನಿಂದ ಹೊರಟು, ಸುಮಾರು ೮:೨೦ರ ವೇಳೆಗೆ ಸರ್ಪಧಾರಿಗೆ ಬಂದು ಸೇರಿದೆವು. ಸರ್ಪಧಾರಿ ಮುಳ್ಳಯ್ಯನಗಿರಿ ಟ್ರೆಕ್ಕಿಂಗಿನ ಮೂಲ ಸ್ಥಾನ. ಚಿಕ್ಕಮಗಳೂರಿನಿಂದ ೧೫ ಕಿ.ಮೀ. ದಾರಿಯಲ್ಲಿ ಬರುವಾಗ ಅರಣ್ಯ ಇಲಾಖೆಯ ಅನುಮತಿ ಪಡೆದಿದ್ದೆವು. ಇಲ್ಲಿ ಅನುಮತಿಯ ಬಗ್ಗೆ ಸ್ವಲ್ಪ ಹೇಳಬೇಕು. ಟ್ರೆಕ್ಕಿಂಗಿಗೆ ತರಳುವವರಿಗೆ ನನ್ನ ಸಲಹೆಯೆಂದರೆ, ನೀವು ದಯವಿಟ್ಟು ಮುಳ್ಳಯ್ಯನಗಿರಿ ಮತ್ತು ಬಾಬಾಬುಡನ್ ಗಿರಿ  ಟ್ರೆಕ್ಕಿಗೆ ಲಿಖಿತ ಅನುಮತಿ ಪಡೆದು ತೆರಳಿ. ಇಲ್ಲದಿದ್ದರೆ ಅನವಶ್ಯಕವಾಗಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಲಂಚ ತೆರಬೇಕಾಗುತ್ತದೆ. 

ಕಬ್ಬಿಣದ ಗ್ರಿಲ್ ಹಾಕಿರುವುದರಿಂದ ಸರ್ಪಧಾರಿಯನ್ನು ಗುರುತಿಸುವುದು ಸುಲಭ. ಇಲ್ಲಿಂದ ಮುಳ್ಳಯ್ಯನಗಿರಿ ಶಿಖರಕ್ಕೆ ಸುಮಾರು ೩-೪ ಕಿ.ಮೀ. ಹಾದಿ ಅಷ್ಟೇನು ಕಷ್ಟವಿಲ್ಲ. ಶುರುವಿನಿಂದಲೇ ಎತ್ತರದ ಹಾದಿಯಾದರೂ, ಯುವಕರು ಸರಾಗವಾಗಿ ಹತ್ತಬಹುದು. ಮುದುಕರಿಗೆ ಕಷ್ಟ. ನಾನು ಕಂಡಂತೆ ಚಂದ್ರದ್ರೋಣ ಪರ್ವತಗಳಲ್ಲಿನ ವಿಶೇಷವೆಂದರೆ, ಇಲ್ಲಿ ಬೆಟ್ಟಗಳ ಬುಡದಲ್ಲಿ ಒತ್ತೊತ್ತಾದ ಮರಗಳು. ಮೇಲೇರಿದಂತೆಲ್ಲಾ ಹಸಿರು ಹುಲ್ಲುಗಾವಲು. ಅಲ್ಲೊಂದು ಇಲ್ಲೊಂದು ಮರ ಮಾತ್ರ. ಆದ್ದರಿಂದ ಚಳಿಗಾಲದಲ್ಲಿ ಬೆಟ್ಟ ಹತ್ತುವುದು ಒಳ್ಳೆಯದು. ಬೇಸಿಗೆಯಲ್ಲಿ ಸುಧಾರಿಸಿಕೊಳ್ಳುವುದಕ್ಕೆ ವಿಶ್ರಾಂತಿ ಸ್ಥಳಗಳು ಕಡಿಮೆ. 

ಸುಮಾರು ಅರ್ಧ ಕಿ.ಮೀ. ಮೇಲೇರಿದ ನಂತರ ನಮಗೆ ಪಶ್ಚಿಮ ಘಟ್ಟಗಳ ವಿರಾಟ್ ದರ್ಶನ ಶುರುವಾಗುತ್ತದೆ. ಎಲ್ಲಿ ನೋಡಿದರೂ ಹಸಿರು ಸೀರೆಯುಟ್ಟ ವನಸಿರಿ. ನಿರ್ಜನ ಪ್ರದೇಶ. ಬೆಂಗಳೂರಿನ ಜನಸಂದಣಿಯ ವಿರುದ್ಧರೂಪ. ಹಾದಿಯಲ್ಲಿ ಒಮ್ಮೆಗೆ ಒಬ್ಬರು ನಡೆಯಲು ಮಾತ್ರ ಅನುಕೂಲ. ನಾವು ೩೯ಮಂದಿಯಾದ್ದರಿಂದ ಹಿಂದೆಯಿರುವವರಿಗೆ ನಮ್ಮ ಪಯಣ ಸಾಲು ಇರುವೆಗಳಂತೆ ಕಾಣುತ್ತಿತ್ತು.  ಒಂದು ಮೈಲಿ ಹತ್ತಿದ ನಂತರ ನಂದಿ ವಿಗ್ರಹ ಸಿಗುತ್ತದೆ. ಇಲ್ಲಿ ಮರಗಳಿದ್ದು ವಿಶ್ರಾಂತಿ ಪಡೆಯಲು ಅನುಕೂಲವಾಗಿದೆ. ನಂತರ ೨ ಮೈಲಿ ನಡೆದರೆ ಶಿಖರ ತಲುಪುತ್ತೇವೆ. ನಾವು ತಲುಪಿದಾಗ ಬೆಳಿಗ್ಗೆ ೧೧:೩೦ ಗಂಟೆ. ಅಲ್ಲೊಂದು ಗುಹೆಯಿದೆ. ಧೈರ್ಯವಿದ್ದವರು ಅದರೊಳಗೆ ಹೋಗಿ ಬರಬಹುದು. ಗುಹೆಯ ಮೇಲೆ ಶಿವನ ದೇವಾಲಯ. ಶಿಖರಕ್ಕೆ ಕಾರಿನಿಂದಲೂ ತಲುಪಬಹುದು. ಆದ್ದರಿಂದ ಇಲ್ಲಿ ಜನರು ಕಾಣಸಿಗುತ್ತಾರೆ. ದೇವಾಲಯದ ಹೊರಗೆ ನಿಂತು ಸುತ್ತಲೂ ಕಣ್ಣಾಡಿಸಿದರೆ, ಯಾರಿಗೂ ನಿಲುಕದ ಎತ್ತರದ ಪರ್ವತಗಳು. ವಿಶಾಲವಾದ ಹುಲ್ಲುಗಾವಲುಗಳು. ಬುಡಗಳಲ್ಲಿ ಮರಗಳ ಗುಚ್ಛಗಳು. ಆಳವಾದ ಪ್ರಪಾತಗಳು. ಕಣಿವೆಗಳು. ದೂರದಲ್ಲಿ ನೀರಿನ ಕೊಳ. ಮೈ ಜಮ್ಮೆನಿಸುತ್ತದೆ. ನಾವು ಇಲ್ಲಿ ಕೆಲಹೊತ್ತು ತಂಗಿದ್ದು, ಫೋಟೊ, ಸೆಲ್ಫಿಗಳನ್ನು ತೆಗೆದುಕೊಂಡೆವು. 

ನಂತರ ಬಾಬಾಬುಡನ್ ಗಿರಿ ಪಯಣ. ಶಿವನ ದೇವಾಯದ ಹಿಂದಿನಿಂದಿರುವ ದಾರಿಯಲ್ಲಿ ನಡೆಯಬೇಕು. ಈ ದಾರಿಯೂ ಆಷ್ಟೇನು ಕಷ್ಟವಿಲ್ಲ. ಆದರೆ ಕ್ರಮಿಸಬೇಕಾದ ದೊರ ಹೆಚ್ಚು. ನಡೆಯಲು ಶುರುಮಾಡಿದರೆ ಸುತ್ತಲಿನ ಪ್ರಕೃತಿ ಸೌಂದರ್ಯಕ್ಕೆ ವೇಳೆ ತಿಳಿಯುವುದಿಲ್ಲ. ೩ ಗಂಟೆ ನಡೆದ ನಂತರ ನಾವು ಒಂದು ಚೆಕ್ ಪೋಸ್ಟ್ ತಲುಪಿದೆವು. ನಮ್ಮ ಅನುಮತಿ ಮುಳ್ಳಯ್ಯನಗಿರಿಗೆ ಮಾತ್ರವಾದ್ದರಿಂದ ಅಲ್ಲಿನ ಅಧಿಕಾರಿ ನಮ್ಮನ್ನು ಮುಂದೆ ತೆರಳಲು ಬಿಡಲಿಲ್ಲ. ತೆಪ್ಪೆ ಮೋರೆ ಹಾಕಿಕೊಂಡು ನಾವು ಬಸ್ಸಿನಲ್ಲಿಯೇ ಬಾಬಾಬುಡನ್ ಗಿರಿ ತಲುಪುವ ಹೊತ್ತಿಗೆ ೩ ಗಂಟೆ. 

ನಾವು ಊಟಮುಗಿಸಿ ಅಲ್ಲಿಯೇ ತಂಗಲು ನಿರ್ಧರಿಸಿದ್ದರಿಂದ ಡೇರೆಗಳನ್ನು ಹಾಕಿಕೊಂಡೆವು. ಬಾಬಾಬುಡನ್ ಗಿರಿ ಯಾತ್ರಾಸ್ಥಳವೂ ಹೌದು. ಇಲ್ಲಿ ಸೂಫಿ ಸಂತರೊಬ್ಬರ ದರ್ಗವಿದೆ. ಬಾಬಾಬುಡನ್ ಗಿರಿಯ ಸೌಂದರ್ಯ ಅದ್ಭುತವಾಗಿದ್ದರೂ, ಹಸಿರಿನ ಸಿರಿಯ ಮೇಲೆ ಬಿಳಿಯ ಮಚ್ಚೆಗಳಂತೆ ಸುತ್ತಮುತ್ತಲೂ ಕಾಣುವ ಪ್ಲಾಸ್ಟಿಕ್ ಮನಸ್ಸಿಗೆ ಬೇಸರ ತರಿಸುತ್ತದೆ. ಯಾತ್ರೆಗೆ ಬಂದ ಜನರೇ ಯಾತ್ರಾಸ್ಥಳವನ್ನು ಮಲಿನಗೊಳಿಸಿರುವುದು ವಿಪರ್ಯಾಸ. ನಮಗೆ ಎಲ್ಲವನ್ನೂ ನೀಡುವುದು ಪ್ರಕೃತಿ. ಅದೆಷ್ಟೋ ಕಡೆ ನಾವು ಅದರ ಗರ್ಭವನ್ನೇ ಅಗೆದಿದ್ದೇವೆ. ತನ್ನ ಸೌಂದರ್ಯವನ್ನು ತೋರಿಸಿಕೊಳ್ಳಲು, ಪ್ರಶಾಂತವಾಗಿ ನಿದ್ರಿಸಲು ಪ್ರಕೃತಿ ಆರಿಸಿಕೊಂಡ ಜಾಗಗಳು ಕೆಲವೇ ಕೆಲವು. ಅದನ್ನೂ ನಾವು ಆಕ್ರಮಿಸಿಬಿಟ್ಟರೆ ಹೇಗೆ? ಸೌಂದರ್ಯವನ್ನು ಸವಿಯಲು ಹೋಗುವುದು ಸರಿ. ತಾನು ಸವಿದು ಅದರ ಪಾಡಿಗೆ ಅದನ್ನು ಬಿಟ್ಟು ಬರಬೇಕು. ಆದರೆ ಅದರ ಅಂದವನ್ನು ಕೆಡಿಸುವ ನಮ್ಮ ಧಾರ್ಷ್ಟ್ರ ಗುಣ ಎಂದು ಕೊನೆಗಾಣುವುದೊ. ಪೋಲಿಸ್ ಠಾಣೆಯಿದ್ದರೂ ಅಲ್ಲಿನ ಪರಿಸ್ಥಿತಿ ಮನಸ್ಸಿಗೆ ಕಸಿವಿಸಿ ಉಂಟುಮಾಡುತ್ತದೆ.

ರಾತ್ರಿ ಬಾಬಾಬುಡನ್ ಗಿರಿಯಲ್ಲಿಯೇ ತಂಗಿದ್ದು, ಬೆಳಿಗ್ಗೆ ನಾವೇ ತಯಾರಿಸಿದ ಉಪಹಾರ ಮುಗಿಸಿ, ಬಟರ್ಮಿಲ್ಕ್ ಜಲಪಾತ ವೀಕ್ಷಣೆಗೆ ಹೊರಟೆವು. ಬಟರ್ಮಿಲ್ಕ್ ಜಲಪಾತ ಬಾಬಾಬುಡನ್ ಗಿರಿಯಿಂದ ಸುಮಾರು ೧೦ ಕಿಮೀ. ದೂರದಲ್ಲಿದೆ. ಜಲಪಾತಕ್ಕೆ ಹತ್ತಿರದ ಸ್ಥಳ ಅತ್ತಿಗುಂಡಿ. ಆದ್ದರಿಂದ ಇದನ್ನು ಅತ್ತಿಗುಂಡಿ ಜಲಪಾತವೆಂದೂ ಕರೆಯುತ್ತಾರೆ. ಅತ್ತಿಗುಂಡಿಗೆ ಹೋಗಿ ಅಲ್ಲಿಂದ ಜೀಪಿನಲ್ಲಿ ಬಟರ್ಮಿಲ್ಕ್ ಜಲಪಾತ ಸೇರಬೇಕು. ಮಳೆಗಾಲದಲ್ಲಿ ಪ್ರಯಾಣ ಕಷ್ಟವಾಗಬಹುದು. ಹೆಸರಿಗೆ ತಕ್ಕಂತೆ ಸುಮಾರು ೩೦ - ೪೦ ಮೀ. ಎತ್ತರದಿಂದ ಬೀಳುವ ಹಾಲ್ಬಿಳುಪಿನ ಜಲಪಾತ ನಯನ ಮನೋಹರವಾಗಿದೆ. ನೀರು ಅಷ್ಟೇನು ರಭಸವಾಗಿರದಿದ್ದ ಕಾರಣ ಕೆಲಹೊತ್ತು ಆಟವಾಡಿದೆವು. ತಣ್ಣಗಿನ ನೀರಿನ ಝರಿಯ ಕೆಳಗೆ ನೆನೆಯುವ ಅನುಭವ ಅದ್ಭುತ. ಮಧ್ಯಾಹ್ನದ ಊಟಮುಗಿಸಿ ೩:೩೦ ಗಂಟೆಗೆ ಚಿಕ್ಕಮಗಳೂರನ್ನು ಬಿಟ್ಟು ಬೆಂಗಳೂರು ಸೇರುವ ಹೊತ್ತಿಗೆ ೨೩ರ ರಾತ್ರಿ ೯:೩೦ ಗಂಟೆ.

ಇಂತಹ ಅದ್ಭುತ ಪ್ರವಾಸದ ಅನುಭವ ನೀಡಿದ Rackpackers ತಂಡಕ್ಕೆ ಅನಂತಾನಂತ ಧನ್ಯವಾದಗಳು. ಮುಳ್ಳಯ್ಯನಗಿರಿ ತಲುಪಲು ನೆರವಾಗುವ ಕೆಲವು ಲಿಂಕುಗಳನ್ನು ಕೆಳಗೆ ಕೊಟ್ಟಿದ್ದೇನೆ. ನಿಮ್ಮ ಪ್ರಯಾಣ ಶುಭಕರವಾಗಿರಲಿ. ಪ್ರಕೃತಿ ಸೌಂದರ್ಯವನ್ನು ಸವೆದು ನೀವು ಅಲ್ಲಿಗೆ ಹೋದ ನೆರಳನ್ನೂ ಬಿಡದೆ, ಅದರ ಪಾಡಿಗೆ ಅದನ್ನು ಬಿಟ್ಟು ಬಂದುಬಿಡಿ.

ಬೆಂಗಳೂರು - ಸರ್ಪಧಾರಿ ದಾರಿ - http://bit.ly/2fi5LXH
ಬೆಂಗಳೂರು - ಮುಳ್ಳಯ್ಯನಗಿರಿ ದಾರಿ - http://bit.ly/2f4yIp0
Rackpackers ಜಾಲತಾಣ - www.rackpackers.com
ಮುಳ್ಳಯ್ಯನಗಿರಿ - ಬಾಬಾಬುಡನ್ ಗಿರಿ ದಾರಿ - http://bit.ly/2ffO2j4