Monday, November 14, 2016

ಅಳಿದ ಮೇಲೆ

“ಸದಭಿರುಚಿ ಕನ್ನಡ ಓದುಗರ ಸಂಖ್ಯೆ ಕಡಿಮೆಯಾಗುತ್ತಿದೆ”, ಇದು ಬಹುದಿನಗಳಿಂದ ಕೇಳುತ್ತಿರುವ ಸಾಧಾರಣ ವಾಕ್ಯ. ನಾನೇನು ಇದರ ಸತ್ಯಾಸತ್ಯಗಳ ಸಂಶೋಧನೆಯನ್ನು ಮಾಡದಿದ್ದರೂ, ಬಯಲುಸೀಮೆಯ ನಗರ ಮತ್ತು ಗ್ರಾಮೀಣ ಪ್ರದೇಶಗಳೆರಡನ್ನೂ ಕಂಡ ನನ್ನ ಮಟ್ಟಿಗೆ ಇದು ಸತ್ಯ. ಓದುಗರ ಸಂಖ್ಯೆಯೇನು ಕಡಿಮೆಯಿಲ್ಲ. ಆದರೆ ಕನ್ನಡ ಓದುಗರ ಸಂಖ್ಯೆ, ಮುಖ್ಯವಾಗಿ ಯುವ ಓದುಗರ ಸಂಖ್ಯೆ, ಕಡಿಮೆಯಿದೆ. ಸಮಾಜ ಸುಧಾರಣೆ, ಸಂಸ್ಕೃತಿ-ಇತಿಹಾಸಗಳ ಅರಿವು, ವಿವಿಧ ಜನ-ಜೀವನ ಪರಿಚಯ, ಮನರಂಜನೆ ಇವೇ ಮೊದಲಾದುವುಗಳಿಗೆ ಸಾಹಿತ್ಯ ಒಂದು ಅದ್ಭುತ ಸಾಧನ. ಆಂಗ್ಲ ಸಾಹಿತ್ಯವನ್ನು ಬಹುತೇಕ ಮನರಂಜನೆಗೆ ಓದಿದರೂ, ವಿದೇಶ ಸಂಸ್ಕೃತಿ ಇತಿಹಾಸಗಳು ನಮಗೆ ಪರೋಕ್ಷವಾಗಿ ತಿಳಿಯುತ್ತದೆ. ಉದಾಹರಣೆಗೆ, ಡ್ಯಾನ್ ಬ್ರೌನ್ ಅವರ ಸಾಹಿತ್ಯ ಮುಖ್ಯವಾಗಿ ರೋಮಾಂಚಕ ಕಾದಂಬರಿಗಳಾದರೂ ಅವು ಯೂರೋಪಿನ ಇತಿಹಾಸ ಮತ್ತು ಕ್ರೈಸ್ತಧರ್ಮದ ಸ್ಥೂಲ ಪರಿಚಯ ಮಾಡಿಕೊಡುತ್ತವೆ. ಅದೇ ರೀತಿ ನಮ್ಮ ಇತಿಹಾಸ ಸಂಸ್ಕೃತಿಗಳನ್ನು ತಿಳಿಯಲು ಕನ್ನಡ ಸಾಹಿತ್ಯ ಅವಶ್ಯಕ. ಅದು ನಮ್ಮಲ್ಲಿ ಹೇರಳವಾಗಿದೆ. ಆದರೆ ಅದನ್ನು ಉಪಯೋಗಿಸಿಕೊಳ್ಳುವವರ ಸಂಖ್ಯೆ ಕಡಿಮೆ. ಶಾಲಾ ಮಟ್ಟದಿಂದಲೂ ಕನ್ನಡ ಸಾಹಿತ್ಯಕ್ಕೆ ಪ್ರಾಮುಖ್ಯತೆ ಕೊಡದಿರುವುದು ಇದಕ್ಕೆ ಕಾರಣವಿರಬಹುದು. ಎಷ್ಟೊ ಮಂದಿಗೆ ನಮ್ಮ ಲೇಖಕರ ಕನ್ನಡವೇ ಅರ್ಥವಾಗುವುದಿಲ್ಲ. ಕನ್ನಡ ಕಠಿಣವೆಂದಲ್ಲ. ನಮ್ಮ ಕನ್ನಡ ಸಂಸ್ಕಾರ ಕಡಿಮೆ. ಅಷ್ಟೆ. ಇರಲಿ. ಸುಮಾರು ೯೫ ವರ್ಷ ಬಾಳಿ ಬದುಕಿ, ಕರಾವಳಿ - ಮಲೆನಾಡಿನ ಕಲೆ, ಜೀವನ, ಸಂಸ್ಕೃತಿಗಳನ್ನು, ತಮ್ಮ ಜೀವನದ ಅನುಭವಗಳನ್ನು ವಿವಿಧ ಕೃತಿಗಳಲ್ಲಿ ಬರೆದಿಟ್ಟ ಶಿವರಾಮ ಕಾರಂತರ ಒಂದು ಆಣಿಮುತ್ಯವೇ ಈ ಲೇಖನದ ವಸ್ತು.

“ಅಳಿದ ಮೇಲೆ”, ಕಾರಂತರ ಅದ್ಭುತ ಕಾದಂಬರಿ. ಕಾರಂತರು ಮನುಷ್ಯ ಜೀವನದ ಸಾರ್ಥಕತೆಯನ್ನು ಯಶವಂತರಾಯರ ಮೂಲಕ ಚಿತ್ರಿಸಿದ್ದಾರೆ. ಕಾರಂತರ ವ್ಯಕ್ತಿತ್ವ ಅವರ ಕೃತಿಗಳಿಂದ ವೇದ್ಯವಾಗುತ್ತದೆ. ಕಾರಂತರು ನಮ್ಮ ಸಂಸ್ಕೃತಿ ಸಂಪ್ರದಾಯಗಳನ್ನು ವಿಶಿಷ್ಟವಾಗಿ ಸ್ವೀಕರಿಸಿದ ವ್ಯಕ್ತಿ. ಅದನ್ನು ಅವರು ತಮ್ಮ ಪಾತ್ರಗಳಿಂದ ತೋರಿಸಿಕೊಡುತ್ತಾರೆ. ವಿಷ್ಣುಕಾಂತ ಘಾಟೆಯವರಿಗೆ ಸನಾತನ ಧರ್ಮದ ಕುರಿತು ಗ್ರಂಥ ಬರೆಯಲು ಅದರ ಮೇಲೆ ನಂಬಿಕೆಯೇ ಇಲ್ಲದ ಯಶವಂತರಾಯರು ಹಣ ಸಹಾಯ ಮಾಡುತ್ತಾರೆ. ಘಾಟೆಯವರು ಈ ಕುರಿತು ಕೇಳಿದಾಗ ಯಶವಂತರಾಯರು,

“ನಿಮ್ಮ ನಂಬಿಕೆ ನಿಮಗೆ, ನನ್ನ ನಂಬಿಕೆ ನನಗೆ. ನೀವೇ ಸರಿಯಿರಲೂಬಹುದು. ನಿಮ್ಮ ವಿಚಾರ, ನಿಮ್ಮ ಜೀವನ ನಮ್ಮ ಜನಗಳಿಗೆ ತಲುಪಬೇಕು. ನಾವು ಎಷ್ಟೇ ಬುದ್ಧಿವಂತರಾಗಿದ್ದರೂ, ನಾವು ಎಷ್ಟೇಸರಿಯಿದ್ದರೂ ಒಂದೊಂದು ಜೀವವೂ ತಾನು ಕಂಡುಕೊಂಡ ಬೆಳಕಿನಲ್ಲಿ ನಡೆಯುವುದೇ ನ್ಯಾಯ.ನಮ್ಮೆಲ್ಲರ ಸಮಷ್ಟಿ ಬಾಳ್ವೆಗೆ – ನಾವು ಸಲ್ಲಿಸಬೇಕಾದ ಋಣವೆಂದರೆ ಅದು. ಇದೆ ಖಂಡಿತ, ಅದೇ ಖಂಡಿತ – ಎಂದು ಇನ್ನೊಬ್ಬರ ಗಂಟಲನ್ನು ಹಿಸುಕಿ, ಅವರ ವಾಣಿಯನ್ನು ನಿರ್ಬಂಧಿಸುವುದು ಸಮಾಜಘಾತುಕತನ.”

ಎನ್ನುತ್ತಾರೆ. ಇದು ಕಾರಂತರ ವಿಚಾರ. “ಅಳಿದ ಮೇಲೆ” ಕಾದಂಬರಿಯ ಪ್ರತಿಯೊಂದು ಪಾತ್ರವೂ, ಸಾಮಾನ್ಯ ಜೀವನದ ಪ್ರತಿಬಿಂಬಗಳು. ಯಾವುದೇ ಪಾತ್ರದ ವೈಭವೀಕರಣವಿಲ್ಲ. ಹಿರಿಯರ ಭಾಷೆಗಳಿಗೆ ಕಟ್ಟುಬಿದ್ದ ಶಂಕರ ಹೆಗ್ಗಡೆ, ಅಸಹಾಯಕಿಗೆ ಮೋಸಮಾಡಿದ ಶಂಭು, ರಾಮ ಹೆಗ್ಗಡೆ, ಪಾರ್ವತಮ್ಮ ಇವರೆಲ್ಲ ನಾವು ಒಂದಲ್ಲ ಒಂದು ಕಡೆ ನಿಜ ಜೀವನದಲ್ಲಿ ಎದುರಿಸಿದ ಪಾತ್ರಗಳೇ. ಯಾವುದೇ ಒಂದು ಪುಸ್ತಕವನ್ನು ಓದಿ ಮುಗಿಸಿದಾಗ ಅದರಿಂದ ನಾವೇನಾದರೂ ಪಡೆದಿದ್ದಾದರೆ, ಪುಸ್ತಕ ಓದಿದ್ದಕ್ಕೂ ಒಂದು ಸಾರ್ಥಕ. ಅಂತೆಯೇ “ಅಳಿದ ಮೇಲೆ”ಯ ಮುಖ್ಯ ಸಂದೇಶ ಯಶವಂತರಾಯರೇ ಹೇಳುವಂತೆ,

"ಒಟ್ಟಿನಿಂದ, ನನ್ನ ಮನಸ್ಸನ್ನು ಈ ಕೆಲವು ಸಮಯದಿಂದ ಕಾಡುತ್ತಿದ್ದ ಒಂದೇ ಒಂದು ಸಂಗತಿಯೆಂದರೆ – ಬದುಕಿನ ಲೆಕ್ಕಾಚಾರದಲ್ಲಿ ನಾನು ಕೊಂಡುದಕ್ಕಿಂತಲೂ ಕೊಟ್ಟದ್ದು ಕಡಿಮೆಯಾಗಬಾರದು ಎಂಬ ಭಾವನೆ. ಮನುಷ್ಯ ಸಮಾಜದ ಋಣವನ್ನು ಹೊತ್ತುಕೊಂಡೇ ಬಂದಿದ್ದಾನೆ.  ಅದರ ಋಣದಿಂದಲೇ ಬೆಳೆಯುತ್ತಾನೆ. ನಾಳೆ ದಿನ ಸಾಯುವಾಗ ತಾನು ಪಡೆದುದಕ್ಕಿಂತಲೂ ಹೆಚ್ಚಿನ ಋಣವನ್ನು ಹಿಂದೆ ಸಲ್ಲಿಸಿಹೋದರೆ ಆತ ಹುಟ್ಟಿದ್ದಕ್ಕೊಂದು ಸಾರ್ಥಕ. ಇಲ್ಲವಾದರೆ?  ಅವನ ಜನ್ಮದಿಂದ ಸಮಾಜಕ್ಕೆ ನಷ್ಟ – ಎಂಬ ಭಾವ ನನಗೆ.  ಹಣ ಕಾಸು ಮೊದಲಾದುವು ಈ ದೃಷ್ಟಿಯಿಂದ ಅಲ್ಪ ಪದಾರ್ಥಗಳು. ಆದರೂ ಬಾಳನ್ನು ಸಾಗಿಸಲು ಬೇಕೇ ಆದ ವಸ್ತುಗಳಷ್ಟೇ...."

ಕಾರಂತರ ಭಾಷೆಯೂ ಕೂಡ ಕರಾವಳಿಯ ಭಾಷೆಯಂತೆಯೇ ಮೃದು. ಅಷ್ಟೆಯೇ ಪರಿಣಾಮಕಾರಿ. ಎಂಥವರಿಗೂ ಸುಲಭವಾಗಿ ಅರ್ಥವಾಗುವಂಥದು. ಈ ಕೃತಿಯ ಬಗ್ಗೆ ಇದಕ್ಕಿಂತಲೂ ಹೆಚ್ಚು ಹೇಳಿ ಓದುಗರ ಕುತೂಹಲಕ್ಕೆ ಧಕ್ಕೆ ತರುವುದಿಲ್ಲ. ಹೊಸದಾಗಿ ಕನ್ನಡ ಪುಸ್ತಕ ಓದಲು ಶುರುಮಾಡುವವರಿಗೂ, ಅನಭವಿ ಓದುಗರಿಗೂ “ಅಳಿದ ಮೇಲೆ” ಓದಲೇಬೇಕಾದ ಕೃತಿ. 

ಕಾರಂತರ ಕಿರುಪರಿಚಯವನ್ನು ಇಲ್ಲಿ ಕಾಣಬಹುದು https://kn.wikipedia.org/wiki/%E0%B2%B6%E0%B2%BF%E0%B2%B5%E0%B2%B0%E0%B2%BE%E0%B2%AE_%E0%B2%95%E0%B2%BE%E0%B2%B0%E0%B2%82%E0%B2%A4

No comments:

Post a Comment