Wednesday, November 23, 2016

ಕರ್ಣ.....

ಭಾರತದ ಸಾಹಿತ್ಯ ಇತಿಹಾಸದಲ್ಲಿಯೇ ಅತ್ಯಂತ ಪೂಜಿಸಲ್ಪಟ್ಟಿರುವ, ವಿಮರ್ಶೆಗೊಳಗಾಗಿರುವ ಕೃತಿ ಮಹಾಭಾರತ. ಸುಮಾರು ಒಂದು ಲಕ್ಷಕ್ಕೂ ಮಿಗಿಲಾದ ಶ್ಲೋಕಗಳ ವೇದವ್ಯಾಸ ವಿರಚಿತ ಮಹಾನ್ ಸಂಸ್ಕೃತ ಗ್ರಂಥ. ವೈದಿಕ, ಧಾರ್ಮಿಕರಿಂದ ಹಿಡಿದು ನಾಸ್ತಿಕರವರೆಗೆ ಎಲ್ಲರಿಗೂ ಮಹಾಭಾರತ ಕಥೆಯ ಪರಿಚಯವಿದೆ. ಪರಿಚಯದ ಮಿತಿ ಭಿನ್ನ. ಮಹಾಭಾರತದ ಕುರಿತಾಗಿ ಹಲಾವಾರು ವಿದ್ವಾಂಸರು ಅನುವಾದಗಳನ್ನೂ, ಕಾದಂಬರಿಗಳನ್ನೂ ಬರೆದಿದ್ದಾರೆ. ಅನೇಕರು ತಮಗೆ ಅರ್ಥವಾದ ರೀತಿಯಲ್ಲಿ ವಿಮರ್ಶಿಸಿಯೂ ಇದ್ದಾರೆ. ಕೆಲವರು ಮೂಲಭಾರತದ ಕೆಲವು ಸನ್ನಿವೇಶಗಳನ್ನೋ, ಸಂಭಾಷಣೆಗಳನ್ನೋ, ಪಾತ್ರಗಳನ್ನೋ ತೆಗೆದುಕೊಂಡು ತಮ್ಮ ಸೃಜನಶೀಲತೆಯನ್ನು ಬೆರಸಿ ಅವುಗಳಿಗೆ ತಮ್ಮದೇ ರೀತಿಯಲ್ಲಿ ಜೀವತುಂಬಿದ್ದಾರೆ. ಅವರವರದೇ ದೃಷ್ಟಿಗಳಲ್ಲಿ ವಿವಿಧ ಪಾತ್ರಗಳನ್ನು ನಾಯಕನಾಗಿಯೋ, ನಾಯಕಿಯಾಗಿಯೋ ಬಿಂಬಿಸಿದ್ದಾರೆ. ಅಂತಹ ಅನೇಕ ಪಾತ್ರಗಳಲ್ಲಿ ಎಲ್ಲರ ದೃಷ್ಟಿಯನ್ನೂ ತನ್ನತ್ತ ಸೆಳೆದು, ಪ್ರಶಂಸೆ, ಚರ್ಚೆ, ವಾದ - ವಿವಾದಗಳಿಗೊಳಗಾಗಿರುವ ಪಾತ್ರ “ಕರ್ಣ”. ಕೆಲವರ ದೃಷ್ಟಿಯಲ್ಲಿ ಕರ್ಣನೇ ಮಹಾಭಾರತ ಕಥಾನಾಯಕ.

ಕರ್ಣ ಎಂದಾಕ್ಷಣ ಅನೇಕರ ಮನಸ್ಸಿಗೆ ಬರುವುದು ಒಬ್ಬ ದಾನಿ, ವೀರ, ಸ್ನೇಹಿತ, ತನ್ನ ಕುಲದ ದೆಸೆಯಿಂದ ಅವಮಾನ - ತಿರಸ್ಕಾರಗಳಿಗೆ ಒಳಗಾದ, ಕಾಲನ ಕೈಯಲ್ಲಿ ನಲುಗಿದ ವ್ಯಕ್ತಿಯ ಚಿತ್ರ. ಆದರೆ ನಿಜವಾಗಿಯೂ ಕರ್ಣ ಕರುಣೆಗೆ ಅರ್ಹನಾದವನೇ? ಕಥಾನಾಯಕನೇ? ಇರಬಹುದು. ಕರ್ಣ ಒಬ್ಬ ಮಾಹಾದಾನಿ. ದಾನ ಕೇಳಿದ ಒಬ್ಬ ಬ್ರಾಹ್ಮಣನಿಗೆ ತನ್ನ ಕವಚ - ಕುಂಡಗಳನ್ನೇ ನೀಡಿದವನು. ಆದರೆ ಇದು ಅವನನ್ನು ಮಹಾನ್ ವ್ಯಕ್ತಿಯನ್ನಾಗಿ ಮಾಡುತ್ತದೆಯೇ? 

ಕರ್ಣನ ವ್ಯಕ್ತಿತ್ವ ನಾಶದ ನಿದರ್ಶನಗಳು ಮಹಾಭಾರತದಲ್ಲಿ ಅನೇಕ ಸಿಗುತ್ತವೆ. ಕರ್ಣನ ವಿದ್ಯೆಯ ಮೂಲವೇ ಸುಳ್ಳು. ವಾಸ್ತವದಲ್ಲಿ ಕರ್ಣ, ದುರ್ಯೋಧನನ ಕೃತ್ಯಗಳಲ್ಲಿ ದುಶ್ಯಾಸನ, ಶಕುನಿಯರ ಜೊತೆ ನಾಲ್ಕನೇ ಒಂದರ ಪಾಲುದಾರ. ಶಕುನಿ, ದುರ್ಯೋಧನರ ಪ್ರತಿಯೊಂದು ಕುತಂತ್ರಗಳಲ್ಲಿಯೂ ಕರ್ಣ ಭಾಗಿಯಾಗುತ್ತಾನೆ. ದುರ್ಯೋಧನನ ಮಾತ್ಸರ್ಯಕ್ಕೆ ಇಂಬುಕೊಟ್ಟು ಪಾಂಡವರಿಗೆ ವಿನಾ ಕಾರಣ ತೊಂದರೆಕೊಟ್ಟವರಲ್ಲಿ ಕರ್ಣನೂ ಒಬ್ಬ. ಮಹಾಭಾರತದ ಕರಾಳ ದಿನವಾದ ದ್ರೌಪದಿ ವಸ್ತ್ರಾಪಹರಣ ಪ್ರಸಂಗ ಇದಕ್ಕೊಂದು ಉದಾಹರಣೆ. ದ್ಯೂತದಲ್ಲಿ ಧರ್ಮರಾಯ ದ್ರೌಪದಿಯನ್ನು ಸೋತಾಗ (ಈ ಸಂದರ್ಭದಲ್ಲಿ ಧರ್ಮರಾಯನ ನಡತೆಯನ್ನು ಪ್ರಶ್ನಿಸುವವರಿದ್ದಾರೆ. ಧರ್ಮರಾಯನ ನಡತೆ ಸರಿಯಾದರೂ ಅದರ ಕಾರಣವನ್ನು ಚರ್ಚಿಸುವುದು ಈ ಲೇಖನದ ವ್ಯಾಪ್ತಿಯಲ್ಲ) ದುಶ್ಶಾಸನ, ದುರ್ಯೋಧನರ ಜತೆಗೂಡಿ ರಜಸ್ವಲೆಯಾದ ದ್ರೌಪದಿಯನ್ನು “ದಾಸಿ, ದಾಸಿ” ಎಂದು ಕೂಗಿ, ಗಹಗಹಿಸಿ ನಗುತ್ತಾ ಕಟುಮಾತುಗಳಿಂದ ಜರೆಯುವ ಪ್ರಸಂಗ ಎಂಥವರಿಗೂ ಮನಕಲುಕುತ್ತದೆ. ದುಶ್ಶಾಸನನಿಗೆ ದ್ರೌಪದಿಯನ್ನು ವಿವಸ್ತ್ರಗೊಳಿಸಲು ಹೇಳುವುದೇ ಕರ್ಣ. ಕರ್ಣನ ಮಾತುಗಳಿವು, 
“ದೇವತೆಗಳು ಒಬ್ಬ ಹೆಂಡತಿಗೆ ಒಬ್ಬನೇ ಗಂಡನೆಂದು ನಿಗದಿ ಮಾಡಿದ್ದಾರೆ. ಇವಳು ಐವರನ್ನು ವರಿಸಿದ್ದಾಳೆ. ಆದ್ದರಿಂದ ಇವಳು ನೀತಿಗೆಟ್ಟ ಹೆಂಗಸು. ಪಾಂಡವರು, ದ್ರೌಪದಿಯ ಸಮೇತ ಅವರ ಸಂಪತ್ತನ್ನನ್ನೆಲ್ಲವನ್ನೂ ಶಕುನಿ ಗೆದ್ದಿದ್ದಾನೆ. ಓ ದುಶ್ಶಾಸನ, ಪಾಂಡವರ ಮೇಲ್ವಸ್ತ್ರವನ್ನೂ, ದ್ರೌಪದಿಯ ಬಟ್ಟೆಗಳನ್ನೂ ತೆಗೆದುಹಾಕು. (ಸಭಾಪರ್ವ, ಅಧ್ಯಾಯ ೬೬)”.
ದ್ರೌಪದಿಯನ್ನು ಕಾಪಾಡುವಂತೆ ಪಾಂಡವರನ್ನು ಪ್ರಚೋದಿಸಲು ಕರ್ಣ ಈ ಮಾತುಗಳನ್ನು ಹೇಳುತ್ತಾನೆ ಎನ್ನುವವರಿದ್ದಾರೆ. ಅದು ಅವರ ಕಲ್ಪನೆಯಷ್ಟೆ. ಒಂದು ವೇಳೆ ಅವರು ಊಹಿಸಿದ ಕರ್ಣನ ಆಂತರ್ಯ ನಿಜವಾಗಿ ಪಾಂಡವರು ದಂಗೆಯೆದ್ದಿದ್ದರೆ ಕರ್ಣ ದುರ್ಯೋಧನನ ಪರ ಹೋರಾಡುತ್ತಿದ್ದನೇ ಹೊರತು ಅವನಿಗೆ ಬುದ್ದಿ ಹೇಳುತ್ತಿರಲಿಲ್ಲ. ಆ ಸಭೆಯಲ್ಲಿ ಕರ್ಣ, ದುಶ್ಶಾಸನ, ದುರ್ಯೋಧನ ಮತ್ತು ಶಕುನಿಯರನ್ನು ಹೊರತುಪಡಿಸಿ ಇನ್ನೆಲ್ಲರೂ ಶೋಕದಲ್ಲಿದ್ದರು ಎಂದು ಕವಿ ವ್ಯಾಸರು ಹೇಳುತ್ತಾರೆ. 

ಕರ್ಣ ಅರ್ಜುನನಿಗೂ ಮಿಗಿಲಾದ ವೀರನೆಂದು ಹಲವರ ಅಭಿಪ್ರಾಯ. ಆದರೆ ಕರ್ಣನ ವೀರತ್ವವನ್ನು ಪ್ರಸ್ತುತ ಪಡಿಸುವ ಸಂದರ್ಭ ಮಹಾಭಾರತದಲ್ಲಿ ಎಲ್ಲಿಯೂ ಕಾಣಸಿಗುವುದಿಲ್ಲ. ಅನೇಕ ಬಾರಿ ಅವನು ಪಾಂಡವರ ವಿರುದ್ಧ ಸೋಲುತ್ತಾನೆ. ದ್ರುಪದನನ್ನು ಸೆರೆಹಿಡಿಯಲು ಕೌರವರ ಜೊತೆ ಹೋದ ಕರ್ಣನಿಗೆ ಸೆರೆಹಿಡಿಯುವುದು ಸಾಧ್ಯವಾಗುವುದಿಲ್ಲ. ಪಾಂಚಾಲಿಯ ಸ್ವಯಂವರದ ಸಂದರ್ಭದಲ್ಲಿ ಕ್ಷತ್ರಿಯರೆಲ್ಲ ಜತೆಗೂಡಿ ಬ್ರಾಹ್ಮಣ ವೇಷದಲ್ಲಿದ್ದ ಭೀಮಾರ್ಜುನರ ವಿರುದ್ಧ ಸೋಲುತ್ತಾರೆ. ಕ್ಷತ್ರಿಯರ ಗುಂಪಿನಲ್ಲಿ ಕರ್ಣನೂ ಇದ್ದನೆಂಬುದನ್ನು ಬೇರೆಯಾಗಿ ಹೇಳಬೇಕಾಗಿಲ್ಲ. ವಿರಾಟನಗರಿಯಲ್ಲಿ ಗೋವುಗಳನ್ನು ಸೆರೆಹಿಡಿದ ಸಮಯದಲ್ಲೂ ಕರ್ಣನಿಗೆ ಅರ್ಜುನನ ವಿರುದ್ದ ಸೋಲುಂಟಾಗುಗತ್ತದೆ. ಚಕ್ರವ್ಯೂಹದ ಸಂದರ್ಭದಲ್ಲಿ ಅಭಿಮನ್ಯುವಿನ ಪ್ರತಾಪವನ್ನು ಎದುರಿಸಲು ಕರ್ಣ ಸಮೇತ ಆರು ಮಂದಿ ಬೇಕಾಯಿತು. 

ಇನ್ನು ಕರ್ಣ-ದುರ್ಯೋಧನರ ಸ್ನೇಹದ ವಿಚಾರ. ಗೆಳೆಯನ ತಪ್ಪುಗಳನ್ನು ಸಮರ್ಥಿಸಿ ಅವನ ಜೊತೆಗೆ ತಾನೂ ತಪ್ಪು ಮಾಡುವುದು ಸ್ನೇಹವೇ? ಅದೇ ನಿಜವಾದರೆ ಸ್ನೈಹದ ವ್ಯಾಖ್ಯಾನವನ್ನು ಪುನರ್ವಿಮರ್ಶಿಸಬೇಕಾಗುತ್ತದೆ. ತನ್ನ ಸ್ನೇಹ ಗಾಢವಾಗಿದ್ದು, ಕರ್ಣ ಸ್ವಾಮಿನಿಷ್ಟೆ ತೋರಿದನೆಂದೇ ಇಟ್ಟುಕೊಳ್ಳೋಣ. ಆದರೆ ಕುರುಕ್ಷೇತ್ರ ಯುದ್ಧದಲ್ಲಿ ಕರ್ಣ ಮಾಡುವುದೇನು? ತನ್ನನ್ನು ಅರ್ಧರಥ ಎಂದ ಭೀಷ್ಮನ ಮೇಲಿನ ದ್ವೇಷಕ್ಕೆ ಭೀಷ್ಮ ಸಾಯುವವರೆಗೂ ತಾನು ಹೋರಾಡುವುದಿಲ್ಲ ಎನ್ನುತ್ತಾನೆ. ದುರ್ಯೋಧನ ಎಷ್ಟು ಕೇಳಿಕೊಂಡರೂ ಒಪ್ಪಿಕೊಳ್ಳುವುದಿಲ್ಲ. ಅವನು ರಂಗಕ್ಕೆ ಬರುವ ಹೊತ್ತಿಗೆ ಕೌರವರ ಅರ್ಧ ಸೈನ್ಯ ನಿರ್ನಾಮವಾಗಿರುತ್ತದೆ. ಸ್ನೇಹಕ್ಕಿಂತಲೂ ತನ್ನ ಅಹಂಕಾರಕ್ಕೆ ಒತ್ತು ಕೊಡುವುದು ಕರ್ಣನ ಕೃತಜ್ಞತೆಯೋ, ಕೃತಘ್ನತೆಯೋ ತಿಳಿಯದು. ಸ್ನೇಹಕ್ಕೆ ಮಹಾಭಾರತದ ಉತ್ತರ ಕರ್ಣ-ದುರ್ಯೋಧನರಲ್ಲ, ಕೃಷ್ಣಾರ್ಜುನರು!

ಮಹಾಭಾರತದ ಕರ್ಣ ಒಬ್ಬ ಹತಾಶ ವ್ಯಕ್ತಿ. ದುರಾಸೆ, ಅಹಂಕಾರ, ಸ್ವಪ್ರತಿಷ್ಠೆಗಳಿಗೆ ತನ್ನನ್ನು ತಾನೇ ನಾಶ ಮಾಡಿಕೊಂಡವನು. ಅವನು ತನ್ನ ಜೀವನದಲ್ಲಿ ಎಷ್ಟೋ ಕಷ್ಟಗಳನ್ನೆದುರಿಸುವುದು ನಿಜ. ಹುಟ್ಟಿನಲ್ಲೇ ತಾಯಿಯ ತಿರಸ್ಕಾರ, ಬೆಳೆಯುತ್ತಾ ತನ್ನ ಜಾತಿಯ ಕುರಿತಾದ ಅವಮಾನ, ಕೃಷ್ಣನಿಂದ ತನ್ನ ಜನ್ಮರಹಸ್ಯವನ್ನು ತಿಳಿಯುವ ಪ್ರಸಂಗ, ನಂತರ ಕುಂತಿಯ ಜೊತೆಗಿನ ಸಂಭಾಷಣೆ, ಜೀವನದಲ್ಲಿ ಎದುರಿಸಿದ ದುರಾದೃಷ್ಟಗಳು, ಪ್ರತಿಕೂಲ ಪರಿಸ್ಥಿತಿಗಳು ಇವೆಲ್ಲಾ ಕರುಣಾಜನಕ ವಿಚಾರಗಳೇ. ಆದರೆ, ಮನುಷ್ಯನ ಹುಟ್ಟು, ಬಡತನ, ತಾನೆದುರಿಸಿರುವ ಕಷ್ಟಗಳು, ದುರಾದೃಷ್ಟಗಳು, ಅವಮಾನ-ತಿರಸ್ಕಾರಗಳಾವುವೂ ತಾನು ಮಾಡುವ ಕರ್ಮಗಳಿಗೆ ಸಮರ್ಥನೆಯಲ್ಲ. ಕಡು ಬಡತನದಲ್ಲಿ ಹುಟ್ಟಿದ ಮಾತ್ರಕ್ಕೆ ಹಣವಿಲ್ಲವೆಂದು ಕಳ್ಳತನ ಮಾಡಿದರೆ ಯಾವುದೇ ಕಾರಣಕ್ಕೂ ಕ್ಷಮಿಸಲಾಗದು. ಕಾಲನ ವಿರುದ್ಧ ಹೋಗಿ ಕಾಲನ ಕೈಯಲ್ಲಿಯೇ ನಾಶವಾದವನು ಕರ್ಣ!

ತನ್ನದಲ್ಲದ ಯಾವುದೇ ವಿಚಾರವನ್ನು ಬರೆಯುವಾಗ ಅದರ ಮೂಲವನ್ನು ನೀಡುವುದು ಅನಿವಾರ್ಯವೆಂದು ನನ್ನ ಅಭಿಪ್ರಾಯ. ಈ ಲೇಖನ ಮಹಾಭಾರತದದ್ದಾದರೂ, ನಾನು ಸಂಸ್ಕೃತ ಭಾರತವನ್ನು ಓದಿಲ್ಲವಾದ ಕಾರಣ ಆಕರಗಳನ್ನು ನೀಡುವುದು ಅನಿವಾರ್ಯ. ಅಂತೆಯೇ ನನ್ನ ಆಕರ ಪುಸ್ತಕಗಳು,
೧. ಕೆ. ಎಸ್. ನಾರಾಯಣಾಚಾರ್ಯರ “ರಾಜಸೂಯದ ರಾಜಕೀಯ”, “ರಾಜಸೂಯ ತಂದ ಅನರ್ಥ”, “ವನದಲ್ಲಿ ಪಾಂಡವರು” ಮತ್ತು “ಆ ಹದಿನೆಂಟು ದಿನಗಳು”.  
೨. ಕೃಷ್ಣ ಮೋಹನ್ ಗಂಗೂಲಿಯವರ “Mahabhaarata of Vyasa”. ಇದು ಸಂಸ್ಕೃತ ಭಾರತದ ಯಥಾತ್ ಆಂಗ್ಲ ಅನುವಾದ. ನಾರಾಯಣಾಚಾರ್ಯರ ಕನ್ನಡ ಅನುವಾದ ಕಾದಂಬರಿ ರೂಪದಲ್ಲಿರುವುದನ್ನು ಬಿಟ್ಟರೆ, ನಾರಾಯಣಾಚಾರ್ಯರ ಪುಸ್ತಕಗಳಿಗೂ ಗಂಗೂಲಿಯವರ ಅನುವಾದಕ್ಕೂ ವ್ಯತ್ಯಾಸಗಳಿಲ್ಲ. 

೩. ದೇವುಡು ನರಸಿಂಹಶಾಸ್ತ್ರಿಯವರ “ಮಹಾಭಾರತ” - ಇದು ಮಹಾಭಾರತದ ಸಂಕ್ಷಿಪ್ತ ಚಿತ್ರಣ. 

No comments:

Post a Comment