ದೃಶ್ಯ ೭
(ಆಕಾಶಮಾರ್ಗದಲ್ಲಿ ರಥಾರೂಢರಾದ ದುಷ್ಯಂತ ಮತ್ತು ಮಾತಲಿಯ ಪ್ರವೇಶ)
ದುಷ್ಯಂತ: ಮಾತಲಿ, ಇಂದ್ರ ಹೇಳಿದ ಕೆಲಸ ಮುಗಿಸಿದ್ದರೂ, ಅವನ ಸತ್ಕಾರವನ್ನು ಪಡೆದಮೇಲೆ, ನಾನು ಅವನಿಗೆ ಉಪಯುಕ್ತನಾದಂತೆ ಅನ್ನಿಸುತ್ತಿಲ್ಲ.
ಮಾತಲಿ: (ನಗುತ್ತಾ) ಆಯುಷ್ಮಾನ್, ನಿಮ್ಮಿಬ್ಬರಿಗೂ ಸಮಾಧಾನವಾಗಿಲ್ಲವೆಂದೆನಿಸುತ್ತದೆ. ನೀನು ನಿನ್ನ ಸಹಾಯವನ್ನು ಕಡಿಮೆಯೆಂದರೆ, ಇಂದ್ರ ಅವನ ಸತ್ಕಾರ ಕಡಿಮೆ ಎನ್ನುತ್ತಾನೆ.
ದುಷ್ಯಂತ: ಹಾಗಲ್ಲ. ಅವನು ನನಗೆ ಮಾಡಿದ ಸತ್ಕಾರ ಭೂಮಿಯಲ್ಲಿ ನಾನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ನನ್ನನ್ನು ದೇವತೆಗಳ ಎದುರು ಅವನ ಸಿಂಹಾಸನದ ಮೇಲೆ ಕೂರಿಸಿಕೊಂಡು ಬಿಟ್ಟ. ಅವನ ಪಕ್ಕದಲ್ಲಿ ಮಗ ಜಯಂತ ಅಸೂಯೆಯಿಂದ ನೋಡುತ್ತಿದ್ದರೂ ಅವನ ಕಡೆಗೆ ಸುಮ್ಮನೆ ನಕ್ಕು, ತನ್ನ ಕೊರಳಿನಲ್ಲಿದ್ದ ಗಂಧಪೂರಿತವಾದ ಮಂದಾರ ಮಾಲೆಯನ್ನು ನನಗೆ ಹಾಕಿದ.
ಮಾತಲಿ: ಇದರಲ್ಲಿ ನಿನಗೆ ಅರ್ಹವಾಗದದ್ದು ಯಾವುದು? ಸುಖಪರನಾದ ಇಂದ್ರನಿಗೆ ಬಂದ ಕಂಟಕವನ್ನು ನೀನು ನಿನ್ನ ಶರಗಳಿಂದ ಹೋಗಲಾಡಿಸಿದೆ. ಈ ಕೆಲಸವನ್ನು ನಿನಗೆ ಮುಂಚೆ ನರಸಿಂಹನ ನಖಗಳು ಮಾತ್ರ ಮಾಡಿದ್ದವಷ್ಟೆ!
ದುಷ್ಯಂತ: ಇಲ್ಲ, ಆದರೂ ಇಂದ್ರನ ಮಹಿಮೆಯೇ ದೊಡ್ಡದು. ನಾಯಕರ ಮಹಿಮೆಯಿಂದಲೇ ಸೇವಕರು ದೊಡ್ಡ ಕೆಲಸಗಳನ್ನು ಮಾಡುತ್ತಾರೆ. ಸೂರ್ಯನ ಸಹಸ್ರಕಿರಣಗಳಿಲ್ಲದಿದ್ದರೆ ಅರುಣ ಕತ್ತಲೆಯನ್ನು ನಾಶಪಡಿಸುತ್ತಿದ್ದನೇ?
ಮಾತಲಿ: ನಿನಗೆ ತಕ್ಕುದಾದನ್ನೇ ಹೇಳಿದೆ. (ಸ್ವಲ್ಪ ಮುಂದೆ ಹೋಗಿ) ಆಯುಷ್ಮಾನ್ ಸ್ವರ್ಗವಾಸಿಗಳಿಗೆ ನೀನು ತಂದ ಸೌಭಾಗ್ಯವನ್ನು ನೋಡು! ಸುರಸುಂದರಿಯರು ಬಣ್ಣಗಳಿಂದ ಎಲೆಗಳ ಮೇಲೆ ನಿನ್ನ ಸಾಹಸವನ್ನು ಕುರಿತು ಗೀತಯೋಗ್ಯವಾದ ಹಾಡುಗಳನ್ನು ಬರೆಯುತ್ತಿದ್ದಾರೆ.
ದುಷ್ಯಂತ: ಮಾತಲಿ, ಅಸುರರನ್ನು ಸಂಹಾರಮಾಡುವ ಉತ್ಸುಕತೆಯಲ್ಲಿ ಇಲ್ಲಿಗೆ ಬರುತ್ತಿದ್ದಾಗ ನಾನು ದಾರಿಯನ್ನು ಗಮನಿಸಲಿಲ್ಲ, ಈಗ ನಾವು ಯಾವ ವಾಯುವಿನ ಸ್ಥಾನದಲ್ಲಿದ್ದೇವೆ?
ಮಾತಲಿ: ಗಂಗೆಯನ್ನು ಸ್ವರ್ಗದಲ್ಲಿ ಪ್ರವಹಿಸುವಂತೆ ಮಾಡುವ, ನಕ್ಷತ್ರಗಳ ರಶ್ಮಿಗಳನ್ನು ಪಸರಿಸುವ, ವಿಷ್ಣು ತನ್ನ ಎರಡನೆಯ ಪಾದವನ್ನು ಇಟ್ಟ ಪರಿವಹ ಎಂಬ ವಾಯುವಿನ ಮಾರ್ಗದಲ್ಲಿದ್ದೇವೆ.
ದುಷ್ಯಂತ: ಆದ್ದರಿಂದಲೇ ನನ್ನ ಬಾಹ್ಯಾಂತಃಕರಣಗಳಿಗೆ ಸಂತೋಷವಾಗುತ್ತಿದೆ.
(ರಥವನ್ನು ನೋಡುತ್ತಾ)
ಮೇಘಗಗಳ ಬಳಿಗೆ ಬಂದಿದ್ದೇವೆ.
ಮಾತಲಿ: ಹೇಗೆ ಗೊತ್ತಾಯಿತು?
ದುಷ್ಯಂತ: ಈ ರಥದ ಅರಗಳ ನಡುವೆ ಜಾತಕ ಪಕ್ಷಿಗಳು ಹಾರಿಹೋಗುತ್ತಿವೆ. ಕುದುರೆಗಳು ಮಿಂಚಿನಿಂದ ಹೊಳೆಯುತ್ತಿವೆ. ನೀರು ತುಂಬಿದ ಮೋಡಗಳಿಂದ ನಿನ್ನ ರಥದ ಮೇಲೆ ನೀರು ಚಿಮ್ಮುತ್ತಿದೆ.
ಮಾತಲಿ: ನಾವು ಇನ್ನು ಸ್ವಲ್ಪ ಹೊತ್ತಿನಲ್ಲಿ ನಿನ್ನ ಭೂಮಿಗೆ ಬಂದುಬಿಡುತ್ತೇವೆ.
ದುಷ್ಯಂತ: (ಕೆಳಗೆ ನೋಡುತ್ತಾ) ನಾವು ಕೆಳಗೆ ಹೋಗುತ್ತಿರುವ ವೇಗದಿಂದ ಮನುಷ್ಯಲೋಕ ತುಂಬಾ ಆಶ್ಚರ್ಯವಾಗಿ ಕಾಣುತ್ತಿದೆ. ಬೆಟ್ಟದಿಂದ ಕೆಳಗೆ ಇಳಿಯುತ್ತಿದೆಯೋ ಎಂಬಂತೆ ಭೂಮಿ ಶಿಖರಗಳ ನಡುವಿನಿಂದ ಉದ್ಭವಿಸುತ್ತಿದೆ. ಇಲ್ಲಿಯವರೆಗೂ ಮರಗಳ ಎಲೆಗಳು ಮಾತ್ರ ಕಾಣುತ್ತಿತ್ತು, ಈಗ ಅವುಗಳ ಕೊಂಬೆಗಳೂ ಕಾಣುತ್ತಿವೆ. ಸಣ್ಣದಾಗಿ ಕಾಣಿಸದಿದ್ದ ನದಿಗಳು ಈಗ ದೂಡ್ಡದಾದ ತೊರೆಗಳಾಗಿ ಕಾಣುತ್ತಿವೆ. ಯಾರೋ ಭೂಮಿಯನ್ನು ನನ್ನ ಕಡೆಗೆ ಎತ್ತಿ ಎಸೆಯುತ್ತಿರುವಂತೆ ಕಾಣುತ್ತಿದೆ.
ಮಾತಲಿ: ಚೆನ್ನಾಗಿ ನೋಡುತ್ತಿದ್ದೀಯ.
(ದೀರ್ಘವಾಗಿ ನೋಡಿ)
ಈ ಭೂಮಿ ಎಷ್ಟು ಚೆನ್ನಾಗಿ ಕಾಣುತ್ತಿದೆ.
ದುಷ್ಯಂತ: ಮಾತಲಿ, ಇದೇನು ಪೂರ್ವ ಪಶ್ಚಿಮ ಸಮುದ್ರಗಳವರೆಗೆ ಹರಡಿಕೊಂಡು ದ್ರವಬಂಗಾರವನ್ನು ಹರಡಿದ ಸಂಜೆಯಂತೆ ಮೇಘಗಳಿಂದ ಆವೃತವಾದ ಬೆಟ್ಟದ ಸಾಲು?
ಮಾತಲಿ: ಆಯುಷ್ಮಾನ್, ಇದು ಹೇಮಕೂಟವೆಂಬ ಕಿಂಪುರುಷರ ತಪಃಸಂಸಿದ್ಧಿ ಕ್ಷೇತ್ರ. ಸ್ವಯಂಭುವಾದ ಮರೀಚಿಗಳ ಮಗನಾದ, ಸುರಾಸುರರ ಗುರುವಾದ, ಕಶ್ಯಪ ಪ್ರಜಾಪತಿಯು
ಸಪತ್ನೀಕರಾಗಿ ತಪಸ್ಸು ಮಾಡುತ್ತಿರುವ ಸ್ಥಳ.
ದುಷ್ಯಂತ: ಶ್ರೇಯಸ್ಸನ್ನು ಅತಿಕ್ರಮಿಸಿ ಹೋಗಬಾರದು. ಇಲ್ಲಿ ಇಳಿದು ಪ್ರದಕ್ಷಿಣೆ ಮಾಡಿ ಹೋಗೋಣ.
ಮಾತಲಿ: ಅದೇ ಮೊದಲ ಕೆಲಸ.
(ರಥವನ್ನು ಕೆಳಗೆ ಇಳಿಸುತ್ತಾರೆ)
ದುಷ್ಯಂತ: (ಆಶ್ಚರ್ಯದಿಂದ) ರಥದ ಶಬ್ದ ಕೇಳಿಸುತ್ತಿಲ್ಲ. ಧೂಳು ಕಾಣಿಸುತ್ತಿಲ್ಲ. ಭೂಮಿಯ ಮೇಲೆ ಬಂದಿಲ್ಲವಾಗಿ ನೀನು ಇಳಿಸಿದರೂ ಕೆಳಗಿಳಿದಂತೆ ಅನಿಸುತ್ತಿಲ್ಲ.
ಮಾತಲಿ: ನಿಮಗೂ ಇಂದ್ರನಿಗೂ ಇರುವ ವ್ಯತ್ಯಾಸ ಇದೊಂದೇ!
ದುಷ್ಯಂತ: ಮಾತಲಿ, ಈ ಪ್ರದೇಶದಲ್ಲಿ ಕಶ್ಯಪರ ಆಶ್ರಮ ಎಲ್ಲಿದೆ?
ಮಾತಲಿ: (ಕೈ ತೋರಿಸುತ್ತಾ) ಅಲ್ಲಿ ನೋಡು ಆ ಋಷಿಯ ಮೈಯ ಸುತ್ತಲೂ ಹುತ್ತ ಬೆಳೆದಿದೆ. ಮೈಮೇಲೆ ಹಾವು ಪೊರೆ ಬಿಟ್ಟಿದೆ. ಭುಜಗಳಿಗೆಲ್ಲ ಬಳ್ಳಿಗಳು ಹಬ್ಬಿಕೊಂಡಿವೆ. ಜಟಾಮಂಡಲದಲ್ಲಿ ಹಕ್ಕಿಗಳು ಗೂಡು ಮಾಡಿಕೊಂಡಿವೆ. ಸ್ಥಾಣುವಿನಂತೆ ನಿಂತು ಸೂರ್ಯನನ್ನೇ ನೋಡುತ್ತಾ ತಪಸ್ಸುಮಾಡುತ್ತಿದ್ದಾನೆ.
ದುಷ್ಯಂತ: ಕಷ್ಟತಪಸ್ವಿಗೆ ನಮಸ್ಕಾರ!
ಮಾತಲಿ: (ರಥವನ್ನು ಹಿಡಿದು) ಅಲ್ಲಿ ದೇವಮಾತೆ ಅದಿತಿಯೇ ಬೆಳಸಿದ ಮಂದಾರ ವೃಕ್ಷವಿದೆ. ಅಲ್ಲಿ ಕಶ್ಯಪರ ಆಶ್ರಮವಿದೆ.
ದುಷ್ಯಂತ: ಈ ಸ್ಥಳ ಸ್ವರ್ಗಕ್ಕಿಂತಲೂ ಅಧಿಕವಾಗಿದೆ. ಅಮೃತದಲ್ಲಿ ತೇಲಿದಂತಾಗಿದೆ.
ಮಾತಲಿ: ಆಯುಷ್ಮಾನ್, ರಥದಿಂದ ಇಳಿ.
ದುಷ್ಯಂತ: (ಇಳಿದು) ಮಾತಲಿ ನೀನು?
ಮಾತಲಿ: ನಾನೂ ಕೆಳಗೆ ಇಳಿಯುತ್ತೇನೆ.
(ಇಳಿಯುತ್ತಾನೆ)
(ಇಬ್ಬರೂ ಸ್ವಲ್ಪ ಮುಂದೆ ಹೋಗುತ್ತಾರೆ)
ಋಷಿಗಳ ತಪೋವನವನ್ನು ನೋಡೋಣ.
ದುಷ್ಯಂತ: ನನಗಂತೂ ವಿಸ್ಮಯವಾಗಿದೆ. ಇಷ್ಟೊಂದು ಕಲ್ಪವೃಕ್ಷಗಳಿರುವ ಈ ಕಾಡಿನಲ್ಲಿ ಋಷಿಗಳು ಪ್ರಾಣಾಯಾಮ ಮಾಡುತ್ತಿದ್ದಾರೆ. ಬಂಗಾರದ ತಾವರೆಗಳಿರುವ ಈ ಸರೋವರದಲ್ಲಿ ಪೂಜೆ ಮಾಡುತ್ತಿದ್ದಾರೆ. ರತ್ನಶಿಲೆಗಳ, ಅಪ್ಸರೆಯರ ಸನ್ನಿಧಿಯಲ್ಲಿ ಸಂಯಮದಿಂದ ಧ್ಯಾನಮಾಡುತ್ತಿದ್ದಾರೆ. ಎಲ್ಲರೂ ತಪಸ್ಸು ಮಾಡಿ ಹೋಗಬೇಕೆಂದುಕೊಳ್ಳುವ ಪ್ರದೇಶದಲ್ಲಿ ಇವರು ತಪಸ್ಸು ಮಾಡುತ್ತಿದ್ದಾರೆ!!
ಮಾತಲಿ: ನಿನ್ನ ಪ್ರಾರ್ಥನೆ ತುಂಬಾ ಚೆನ್ನಾಗಿದೆ!
(ಮುಂದೆ ನಡೆಯುತ್ತಾರೆ)
(ಆಕಾಶದಲ್ಲಿ)
ಶಾಕಲ್ಯ, ಕಶ್ಯಪರು ಏನು ಮಾಡುತ್ತಿದ್ದಾರೆ?
ಏನು ಹೇಳೋಣ? ಅವರು, ತಪಸ್ವಿನಿಯರ ಜೊತೆ ಇರುವ ಅದಿತಿಯವರಿಗೆ ಪತಿವ್ರತಾಧರ್ಮದ ಕುರಿತು ಹೇಳುತ್ತಿದ್ದಾರೆ.
ದುಷ್ಯಂತ: (ಆ ಕಡೆ ಕಿವಿ ಕೊಡುತ್ತಾ) ಪ್ರವಚನ ಮುಗಿಯುವವರೆಗೂ ಕಾಯಬೇಕು.
ಮಾತಲಿ: (ರಾಜನನ್ನು ಕುರಿತು) ಆಯುಷ್ಮಾನ್, ಈ ಅಶೋಕವೃಕ್ಷದ ಕೆಳಗೆ ಸ್ವಲ್ಪ ಹೊತ್ತು ನಿಂತಿರು. ನಾನು ನಿನ್ನ ಬರವನ್ನು ಕಶ್ಯಪರಿಗೆ ತಿಳಿಸುವ ಅವಕಾಶವಿದೆಯೋ ಎಂದು ನೋಡಿಕೊಂಡು ಬರುತ್ತೇನೆ.
ದುಷ್ಯಂತ: ನಿನ್ನಿಷ್ಟ.
(ಅಲ್ಲೇ ನಿಲ್ಲುತ್ತಾನೆ)
ಮಾತಲಿ: ಹೋಗಿಬರುತ್ತೇನೆ.
(ಮಾತಲಿಯ ನಿಷ್ಕ್ರಮನ)
ರಾಜ: (ಶುಭನಿಮಿತ್ತವನ್ನು ಅನುಭವಿಸಿ) ಬಲಬಾಹುವೇ ಏಕೆ ಸ್ಪಂದಿಸುತ್ತೀಯ? ಒಳ್ಳೆಯದಾಗುವ ಸೂಚನೆಯಿಲ್ಲ. ಒಂದು ಬಾರಿ ಬಿಟ್ಟ ಶ್ರೇಯಸ್ಸು ದುಃಖವಾಗಿ ಪರಿವರ್ತಿತವಾಗುತ್ತದೆ.
(ನೇಪಥ್ಯದಲ್ಲಿ)
ತುಂಟತನ ಮಾಡಬೇಡ!
ಏನು? ಅವನ ಸ್ವಭಾವವೇ ಅದು.
ದುಷ್ಯಂತ: (ಆ ಕಡೆ ಕಿವಿಕೊಡುತ್ತಾ) ಅವಿನಯಕ್ಕೆ ಇದು ಜಾಗವಲ್ಲವಲ್ಲ. ಇದೆಲ್ಲ ಇಲ್ಲಿ ನಿಷಿದ್ಧವಲ್ಲ?
(ಶಬ್ದ ಬರುವ ಕಡೆ ನೋಡುತ್ತಾ, ಆಶ್ಚರ್ಯದಿಂದ)
ಅರೆ! ಇವನ್ಯಾರು? ತಪಸ್ವಿಗಳಿಗೆ ಅಪರೂಪವಾದ ಧೈರ್ಯನಾದ ಬಾಲಕನನ್ನು ಇಬ್ಬರು ತಪಸ್ವಿನಿಯರು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ. ತಾಯಿಯ ಹಾಲನ್ನು ಅರ್ಧಕುಡಿದ ಸಿಂಹದಮರಿಯನ್ನು ಬಲಾತ್ಕಾರವಾಗಿ ಆಟವಾಡಲು ಎಳೆಯುತ್ತಿದ್ದಾನಲ್ಲ!!
(ಹಾಗೆ ಮಾಡುತ್ತಿದ್ದ ಬಾಲಕನ ಪ್ರವೇಶ, ಅವನ ಜೊತೆ ಇಬ್ಬರು ತಪಸ್ವಿನಿಯರು)
ಬಾಲಕ: ಸಿಂಹದ ಮರಿ, ನಿನ್ನ ಬಾಯನ್ನು ತೆಗಿ, ಹಲ್ಲುಗಳನ್ನು ಎಣಿಸಬೇಕು.
ಮೊದಲ ತಪಸ್ವಿನಿ: ಅವಿನೀತ, ಏಕೆ ಈ ಪ್ರಾಣಿಗಳನ್ನು ಹಿಂಸಿಸುತ್ತೀಯಾ? ನಿನ್ನ ಉತ್ಸಾಹ ಕೊಲ್ಲುತ್ತದೆ. ಈ ಋಷಿಜನರು ನಿನ್ನನ್ನು ಸರ್ವದಮನ ಎಂದು ಕರೆಯುವುದು ಸರಿಯಾಗಿಯೇ ಇದೆ!
ದುಷ್ಯಂತ: ಇದೇನು ಇವನು ನನ್ನ ಔರಸಪುತ್ರನೆಂಬ ಭಾವನೆ ಉಂಟಾಗುತ್ತಿದೆಯಲ್ಲ? ಮಕ್ಕಳಿಲ್ಲದಿದ್ದರಿಂದಲೇ ಈ ವಾತ್ಸಲ್ಯ!
ಎರಡನೆಯ ತಪಸ್ವಿ: ನೀನು ಈ ಸಿಂಹದ ಮರಿಯನ್ನು ಬಿಡದಿದ್ದರೆ, ಅದರ ಅಮ್ಮ ನಿನ್ನನ್ನು ಬಿಡುವುದಿಲ್ಲ.
ಬಾಲಕ: (ನಗುತ್ತಾ) ಓಹೋಹೋ! ನನಗೆ ಭಯವಾಗುತ್ತದೆ.
(ಬೆನ್ನು ತೋರಿಸುತ್ತಾನೆ)
ದುಷ್ಯಂತ: ಇವನು ಯಾರೋ ಮಹಾಬಲಶಾಲಿಯ ಮಗನೇ ಇರಬೇಕು. ಉರಿಯಲು ಸಿದ್ದವಾಗಿರುವ ಬೆಂಕಿಯ ಕಿಡಿಯಂತಿದ್ದಾನೆ.
ಮೊದಲ ತಪಸ್ವಿ: ಮಗು, ಈ ಸಿಂಹವನ್ನು ಬಿಟ್ಟುಬಿಡು. ನಿನಗೆ ಆಟವಾಡಲು ಬೇರೆ ಆಟಿಕೆ ಕೊಡುತ್ತೇನೆ.
ಬಾಲಕ: ಎಲ್ಲಿ ಕೊಡು ನೋಡೋಣ?
(ಕೈಚಾಚುತ್ತಾನೆ)
ದುಷ್ಯಂತ: ಇವನಲ್ಲಿ ಚಕ್ರವರ್ತಿಯ ಲಕ್ಷಣಗಳು ಕಾಣಿಸುತ್ತಿವೆ. ಆಟಿಕೆಯನ್ನು ಪಡೆಯಲು ಕೈ ಚಾಚಿರುವ ಇವನ ಕೈಗಳು ಆಗತಾನೆ ಅರಳಿರುವ ತಾವರೆಯ ಹೂವಿನಂತೆ ಇದೆ.
ಎರಡನೆಯ ತಪಸ್ವಿ: ಇವನು ಸುಮ್ಮನೆ ಬಿಡುವುದಿಲ್ಲ. ನೀನು ಹೋಗು. ನನ್ನ ಆಶ್ರಮದ ಹತ್ತಿರ ಋಷಿಕುಮಾರ ಮಾರ್ಕಂಡೇಯನ ಚಿತ್ರಿತವಾದ ನವಿಲಿನ ಆಟಿಕೆಯಿದೆ, ಅದನ್ನು ತೆಗೆದುಕೊಂಡು ಬಾ.
ಮೊದಲ ತಪಸ್ವಿ: ಸರಿ.
(ನಿಷ್ಕ್ರಮಿಸುತ್ತಾಳೆ)
ಬಾಲಕ: ಅಲ್ಲಿಯವರೆಗೂ ಇದರ ಜೊತೆ ಆಟವಾಡುತ್ತೇನೆ.
(ಅವಳನ್ನು ನೋಡಿ ನಗುತ್ತಾನೆ)
ದುಷ್ಯಂತ: ಈ ಮಗುವಿನ ಬಗೆಗೆ ನನಗೆ ಇಷ್ಟ ಬೆಳೆಯುತ್ತಿದೆ. ಕಾರಣವಿಲ್ಲದೆ ನಗುವ, ತೊದಲು ಮಾತಾದರೂ ರಮಣೀಯವಾಗಿ ಮಾತಾಡುವ, ತೊಡೆಯಮೇಲೆ ಹತ್ತಲು ನುಗ್ಗಿ ಬರುವ ಈ ಮಕ್ಕಳ ಕಾಲಿನ ಧೂಳಿನಿಂದ ತಮ್ಮ ವಸ್ತ್ರವನ್ನು ಮಲಿನ ಮಾಡಿಕೊಳ್ಳುವ ತಂದೆಯರೇ ಧನ್ಯರು!
ತಪಸ್ವಿನಿ: ಇರಲಿ. ನಾನು ಗಮನಿಸುವುದಿಲ್ಲ.
(ಪಕ್ಕಕ್ಕೆ ನೋಡುತ್ತಾಳೆ)
ಋಷಿಕುಮಾರರು ಯಾರಾದರೂ ಇದ್ದಾರಾ?
(ರಾಜನನ್ನು ನೋಡಿ)
ನೀವು ಇಲ್ಲಿ ಬನ್ನಿ. ಗಟ್ಟಿಯಾಗಿ ಹಿಡಿದು ಹಿಂಸೆಮಾಡುತ್ತಿರುವ ಈ ತುಂಟನಿಂದ ಸಿಂಹದಮರಿಯನ್ನು ಬಿಡಿಸಿರಿ.
ದುಷ್ಯಂತ: (ನಗುತ್ತಾ ಹತ್ತಿರಬಂದು) ಮಹರ್ಷಿಪುತ್ರ! ಆಶ್ರಮ ವಿರುದ್ಧವಾದ ಈ ವೃತ್ತಿಯೇನು? ಚಂದನದ ಮರದಲ್ಲಿ ಘಟಸರ್ಪ ಬಂದಂತೆ, ಈ ಶಾಂತವಾದ ವನದಲ್ಲಿ ಪ್ರಾಣಿಹಿಂಸೆ ಮಾಡುತ್ತಿದ್ದೀಯ?
ತಪಸ್ವಿ: ಭದ್ರಮುಖ, ಇವನು ಋಷಿಕುಮಾರನಲ್ಲ.
ದುಷ್ಯಂತ: ಇವನ ಚಹರೆಯೇ ಅದನ್ನು ಹೇಳುತ್ತದೆ. ಆದರೂ ಆಶ್ರಮವೆಂದು ಹಾಗೇ ಹೇಳಿದೆ.
(ಸಿಂಹವನ್ನು ಬಿಡಿಸುತ್ತಾ, ಬಾಲಕನ ಸ್ಪರ್ಶದ ಅನುಭವವನ್ನು ಅನುಭವಿಸಿ, ಸ್ವಗತ)
ಯಾರೋ ಬೇರೆಯವರ ಮಗುವಾದ ಇವನು ನನ್ನ ತೊಡೆಯ ಮೇಲೆ ಕುಳಿತುಕೊಂಡಾಗ, ನನಗೇ ಇಷ್ಟು ಸಂತೋಷವಾದರೆ, ಇನ್ನು ಅವನ ತಂದೆಗೆ ಇನ್ನೆಷ್ಟು ಸಂತೋಷವಾಗಬಹುದು?
ತಪಸ್ವಿನಿ: (ಇಬ್ಬರನ್ನೂ ನೋಡಿ) ಆಶ್ಚರ್ಯ! ಆಶ್ಚರ್ಯ!
ದುಷ್ಯಂತ: ಏಕೆ? ಏನಾಯಿತು?
ತಪಸ್ವಿನಿ: ಬಾಲಕನ ಮತ್ತು ನಿಮ್ಮ ಮುಖದಲ್ಲಿ ಎಷ್ಟು ಹೋಲಿಕೆಗಳಿವೆ? ಇವನು ನಿಮ್ಮ ಹತ್ತಿರ ಎಷ್ಟು ಚೆನ್ನಾಗಿ ಹೊಂದಿಕೊಂಡಿದ್ದಾನೆ!
ದುಷ್ಯಂತ: (ಬಾಲಕನನ್ನು ಆಟವಾಡಿಸುತ್ತಾ) ಇವನು ಮುನಿಕುಮಾರನಲ್ಲದಿದ್ದರೆ, ಯಾವ ದೇಶದವನು?
ತಪಸ್ವಿನಿ: ಪುರುವಂಶದವನು.
ದುಷ್ಯಂತ: (ಸ್ವಗತ) ಇವನು ನಮ್ಮ ವಂಶದವನೇ! ಆದ್ದರಿಂದಲೇ ಇವರಿಗೆ ನಮ್ಮಿಬ್ಬರಲ್ಲಿ ಹೋಲಿಕೆ ಕಂಡುಬಂದದ್ದು. ಆದರೆ ಇದು ಹೇಗೆ? ನಮ್ಮ ವಂಶದವರು ಅಂತ್ಯದಲ್ಲಿ ವನವಾಸ ಮಾಡುತ್ತಾರೆ. ದೊಡ್ಡ ಭವನಗಳಲ್ಲಿ ಭೂಮಿಯ ರಕ್ಷಣಾರ್ಥವಾಗಿ ವಾಸಮಾಡಿ ಕೊನೆಯಲ್ಲಿ ಏಕಪತ್ನೀವ್ರತರಾಗಿ ತರುಮೂಲದಲ್ಲಿ ವಾನಪ್ರಸ್ಥರಾಗುತ್ತಾರೆ.
(ಪ್ರಕಾಶ)
ಈ ಸ್ಥಳ ಮನುಷ್ಯರಿಗೆ ಸಿಕ್ಕತಕ್ಕದ್ದಲ್ಲವಲ್ಲ.
ತಪಸ್ವಿನಿ: ನೀವು ಹೇಳಿದ ಹಾಗೆ, ಇವನ ತಾಯಿ ಅಪ್ಸರೆಯ ಸಂಬಂಧಿ. ಅವಳು ಈ ಆಶ್ರಮದಲ್ಲಿಯೇ ಇವನಿಗೆ ಜನ್ಮ ಕೊಟ್ಟಳು.
ದುಷ್ಯಂತ: (ಸ್ವಗತ) ಒಹ್! ಇದು ನನಗೇ ಎರಡನೇ ಭರವಸೆ!
(ಪ್ರಕಾಶ)
ಇವನ ತಾಯಿ ಯಾವ ರಾಜರ್ಷಿಯ ಪತ್ನಿ?
ತಪಸ್ವಿನಿ: ಧಾರ್ಮಿಕಳಾದ ಪತ್ನಿಯನ್ನು ತ್ಯಜಿಸಿದವನನ್ನು ಯಾರು ನೆನಸಿಕೊಳ್ಳುತ್ತಾರೆ?
ದುಷ್ಯಂತ: (ಸ್ವಗತ) ಇದು ನನ್ನ ಕಥೆಯನ್ನೇ ಹೋಲುತ್ತಿದೆ. ಇವನ ತಾಯಿಯ ಹೆಸರನ್ನು ಕೇಳುತ್ತೇನೆ. ಆದರೆ ಬೇರೆಯವರ ಮನೆಯವರ ಬಗ್ಗೆ ಕೇಳುವುದು ಅನಾರ್ಯವಾಗುತ್ತದೆ.
(ನವಿಲಿನ ಆಟಿಕೆಯನ್ನು ಹಿಡಿದ ತಪಸ್ವಿನಿಯ ಪ್ರವೇಶ)
ತಪಸ್ವಿನಿ: ಸರ್ವದಮನ ಶಕುಂತಲಾವಣ್ಣವನ್ನ ನೋಡು.
(ಶಕುಂತಲಾವಣ್ಣ [ಪ್ರಾಕೃತ] - ಇದಕ್ಕೆ ಎರಡು ಅರ್ಥ, ೧. ಶಕುಂತಲೆಯ ವರ್ಣ, ೨. ಪಕ್ಷಿಯ ಸುಕುಮಾರತೆ)
ಬಾಲಕ: (ನೋಡುತ್ತಾ)
ನನ್ನ ತಾಯಿಯೆಲ್ಲಿ?
ಇಬ್ಬರೂ ತಪಸ್ವಿನಿಯರು: ನಾಮಸಾದೃಶ್ಯದಿಂದ ಮೋಸ ಹೋಗಿದ್ದಾನೆ ಇವನು!
ಎರಡನೇ ತಪಸ್ವಿನಿ: ಮಗನೇ, ಈ ಮಣ್ಣಿನ ನವಿಲನ್ನು ನೋಡು ಎಂದು ನಾನು ಹೇಳಿದ್ದು.
ದುಷ್ಯಂತ: (ಸ್ವಗತ) ಇವನ ತಾಯಿಯ ಹೆಸರು ಶಕುಂತಲೆಯೇ!? ಒಂದೇ ಹೆಸರಿನವರು ಅನೇಕರಿರಬಹುದು. ಇದೂ ಮರೀಚಿಕೆಯಂತೆಯೇ? ಹೆಸರಿನ ಪ್ರಸ್ತಾವದಿಂದಲೇ ನನಗೇ ದುಃಖವಾಗುತ್ತಿದೆ.
ಬಾಲಕ: ನನಗೇ ಈ ನವಿಲು ಬೇಕು.
(ನವಿಲನ್ನು ತೆಗೆದುಕೊಳ್ಳುತ್ತಾನೆ)
ಮೊದಲ ತಪಸ್ವಿ: (ಅವನನ್ನು ನೋಡಿ, ಉದ್ವೇಗದಿಂದ) ಹೋ! ನಿನ್ನ ಮಣಿಬದ್ದವಾದ ರಕ್ಷಾದಾರ ಕಾಣಿಸುತ್ತಿಲ್ಲವಲ್ಲ!
ದುಷ್ಯಂತ: ಗಾಬರಿ ಬೇಡ. ಸಿಂಹದ ಜೊತೆ ಆಟವಾಡುತ್ತಿದ್ದಾಗ ಕೈಯಿಂದ ಬಿದ್ದುಹೋಗಿರಬಹುದು. ತೆಗೆದುಕೊಳ್ಳಿ.
(ತೆಗೆದುಕೊಳ್ಳಲು ಹೋಗುತ್ತಾನೆ)
ಇಬ್ಬರೂ ತಪಸ್ವಿನಿಯರು: ಅದನ್ನು ಮುಟ್ಟಬೇಡಿ. ಒಹ್! ಮುಟ್ಟಿಯೇಬಿಟ್ಟರಲ್ಲ!
(ಇಬ್ಬರೂ ವಿಸ್ಮಯದಿಂದ ತಮ್ಮ ಎದೆಯ ಮೇಲೆ ಕೈಯಿಟ್ಟುಕೊಂಡು ಒಬ್ಬರನ್ನೊಬ್ಬರು ನೋಡಿಕೊಳ್ಳುತ್ತಾರೆ)
ದುಷ್ಯಂತ: ನನ್ನನ್ನೇಕೆ ತಡೆದಿರಿ?
ಮೊದಲ ತಪಸ್ವಿ: ಮಹಾರಾಜ ಕೇಳಿ, ಇದು ಇವನ ಜಾತಕರ್ಮದ ಸಮಯದಲ್ಲಿ ಕಶ್ಯಪರು ಕೊಟ್ಟ ಅಪರಾಜಿತಾ ಎಂಬ ಔಷಧಿ. ಇದು ಕೆಳಗೆ ಬಿದ್ದಾಗ, ಅವನು ಅಥವಾ ಅವನ ತಂದೆತಾಯಿಯರು ಮಾತ್ರ ತೆಗೆದುಕೊಳ್ಳಬೇಕು. ಬೇರೆಯವರು ಮುಟ್ಟಬಾರದು.
ದುಷ್ಯಂತ: ತೆಗೆದುಕೊಂಡರೆ?
ಮೊದಲ ತಪಸ್ವಿ: ಅದು ಸರ್ಪವಾಗಿ ಕಚ್ಚಿಬಿಡುತ್ತದೆ.
ದುಷ್ಯಂತ: ಇದನ್ನು ತಾವು ಯಾವಾಗಲಾದರೂ ನೋಡಿದ್ದೀರಾ?
ಇಬ್ಬರೂ: ಅನೇಕಬಾರಿ.
ದುಷ್ಯಂತ: (ಸಂತೋಷವಾಗಿ, ಸ್ವಗತ) ನನ್ನ ಮನೋರಥ ಈಡೇರಿದ್ದಕ್ಕಾಗಿ ಸಂತೋಷಪಡದೆ ಹೇಗಿರಲು ಸಾಧ್ಯ!?
(ಬಾಲಕನನ್ನು ಅಪ್ಪಿಕೊಳ್ಳುತ್ತಾನೆ)
ಎರಡನೆಯ ತಪಸ್ವಿನಿ: ಸುವ್ರತೆ ಬಾ, ಈ ವೃತ್ತಾಂತವನ್ನು ವ್ರತದಲ್ಲಿರುವ ಶಕುಂತಲೆಗೆ ಹೇಳೋಣ.
(ನಿಷ್ಕ್ರಮಿಸುತ್ತಾರೆ)
ಬಾಲಕ: ನನ್ನನ್ನು ಬಿಡು. ನಾನೂ ಅಮ್ಮನ ಹತ್ತಿರ ಹೋಗುತ್ತೇನೆ.
ದುಷ್ಯಂತ: ಮಗನೇ, ನನ್ನ ಜೊತೆಯೇ ನಿನ್ನ ಅಮ್ಮನನ್ನು ನೋಡು.
ಬಾಲಕ: ನನ್ನ ಅಪ್ಪ ದುಷ್ಯಂತ. ನೀನಲ್ಲ.
ದುಷ್ಯಂತ: (ನಗುತ್ತಾ) ಈ ವಿವಾದವೇ ನಮಗೆ ಪ್ರಮಾಣವಾಗುತ್ತಿದೆ.
(ಶಕುಂತಲೆಯ ಪ್ರವೇಶ)
ಶಕುಂತಲೆ: ಸರ್ವದಮನನ ಔಷಧಿ ಕೆಳಗೆ ಬಿದ್ದಮೇಲೂ, ಅದು ಸರಿಯಾಗಿದೆಯೆಂದು ಕೇಳಿದಮೇಲೂ ನನಗೆ ಭಾಗ್ಯದ ಮೇಲೆ ಭರವಸೆ ಇಲ್ಲ. ಆದರೆ ಸಾನುಮತಿಯೂ ಹೇಳಿದ್ದಾಳೆ. ನಿಜವಿದ್ದರೂ ಇರಬಹುದು.
ದುಷ್ಯಂತ: (ಶಕುಂತಲೆಯನ್ನು ನೋಡಿ) ಒಹ್! ಅವಳು ಶಕುಂತಲೆಯೇ! ಧೂಳಿಡಿದ ವಸ್ತ್ರ, ವ್ರತಗಳಿಂದ ಕುಗ್ಗಿದ ಮುಖ, ಏಕವೇಣಿ, ನಿಷ್ಕರುಣನಾದ ನನ್ನ ಕಾರಣದಿಂದ ಶುದ್ಧಶೀಲೆಯಾದ ಇವಳು ವಿರಹವ್ರತವನ್ನು ಅನುಭವಿಸುತ್ತಿದ್ದಾಳೆ.
ಶಕುಂತಲೆ: (ಪಶ್ಚಾತ್ತಾಪದಿಂದ ವಿವರ್ಣನಾದ ರಾಜನನ್ನು ನೋಡಿ) ಇವರು ಆರ್ಯಪುತ್ರರಲ್ಲ ಅನಿಸುತ್ತಿದೆ. ಮತ್ತೆ ಇವನು ಯಾರು, ನನ್ನ ಮಗನ ರಕ್ಷಾಕವಚವನ್ನು ಮುಟ್ಟಿ ಅವನನ್ನು ಅಶುದ್ಧನನ್ನಾಗಿ ಮಾಡುತ್ತಿದ್ದಾನೆ?
ಬಾಲಕ: (ತನ್ನ ತಾಯಿಯ ಬಳಿ ಓಡಿಬಂದು) ಅಮ್ಮ, ಇವನ್ಯಾರೋ ಬಂದು ನೀನು ನನ್ನ ಮಗ ಎಂದು ಅಪ್ಪಿಕೊಳ್ಳುತ್ತಿದ್ದಾನೆ.
ದುಷ್ಯಂತ: ಪ್ರಿಯೇ, ನಾನು ನಿನ್ನ ಮೇಲೆ ತೋರಿಸಿದ ಕ್ರೌರ್ಯ ಇಂದು ನಾನು ನಿನ್ನ ಮುಂದೆ ಬಂದರೂ ನೀನು ನನ್ನನ್ನು ಗುರುತುಹಿಡಿಯದಂತೆ ಮಾಡುತ್ತಿದೆ.
ಶಕುಂತಲೆ: (ಸ್ವಗತ) ಹೃದಯವೇ, ಸಮಾಧಾನದಿಂದಿರು. ದೈವ ನನ್ನ ಕಡೆ ಅನುಕಂಪ ತೋರಿಸಿದೆ. ಇವರು ಆರ್ಯಪುತ್ರರೇ!
ದುಷ್ಯಂತ: ಪ್ರಿಯೇ, ನನಗೆ ಜ್ಞಾಪಕ ಬಂದಮೇಲೆ, ಗ್ರಹಣದ ನಂತರ ಚಂದ್ರನ ಬಳಿ ರೋಹಿಣಿ ಬಂದಂತೆ, ನೀನು ಬಂದು ನಿಂತಿದ್ದೀಯ.
ಶಕುಂತಲೆ: ಆರ್ಯಪುತ್ರನಿಗೆ ಜಯವಾಗಲಿ.
(ಅರ್ಧ ಹೇಳಿ, ಗದ್ಗದಿತಳಾಗಿ ಸುಮ್ಮನಾಗುತ್ತಾಳೆ)
ದುಷ್ಯಂತ: ಸುಂದರಿ, ನಿನ್ನ ಮಾತು ಕಣ್ಣೀರಿನಿಂದ ತೊದಲಿದರೂ, ನಿನ್ನ ಜಯ ಶಬ್ದದಿಂದ, ನಿನ್ನ ಕೆಂಪಾದ ಸುಂದರ ಮುಖದಿಂದ ನಾನು ಗೆದ್ದಿದ್ದೇನೆ.
ಬಾಲಕ: ಅಮ್ಮ, ಇವರು ಯಾರು?
ಶಕುಂತಲೆ: ವತ್ಸ, ನಿನ್ನ ಭಾಗ್ಯವನ್ನು ಕೇಳು.
ದುಷ್ಯಂತ: (ಶಕುಂತಲೆಯ ಕಾಲಿಗೆ ನಮಸ್ಕಾರ ಮಾಡುತ್ತಾ) ಶಕುಂತಲೆ, ನಿನ್ನ ಹೃದಯದಿಂದ ನಾನು ನಿನ್ನನ್ನು ಹೊರಹಾಕಿದ ಘಟನೆಯನ್ನು ಹೊರಹಾಕು. ಆಗ ನನ್ನ ಮನಸ್ಸು ಯಾವುದೊ ಮೋಹಕ್ಕೆ ಸಿಕ್ಕಿಕೊಂಡಿತ್ತು. ಕುರುಡನು ತನ್ನ ಕೊರಳಿಗೆ ಹಾಕಿದ ಹೂಮಾಲೆಯನ್ನು ಹಾವೆಂದು ಭ್ರಮಿಸಿ ಬಿಸಾಕುವಂತೆ ನಾನು ಪ್ರಬಲವಾದ ಅಂಧಕಾರದಿಂದ ನಿನ್ನನ್ನು ತಿರಸ್ಕರಿಸಿಬಿಟ್ಟೆ.
ಶಕುಂತಲೆ: ಆರ್ಯಪುತ್ರ, ಎದ್ದೇಳು. ಆ ದಿನಗಳಲ್ಲಿ ನಾನು ಮಾಡಿದ ಯಾವುದೋ ಅಪರಾಧದ ಪರಿಣಾಮವಾಗಿ ಹೀಗೆ ಆಯಿತು. ಇಂದು ಅದು ನಿವಾರಣೆಯಾಗಿ ಕರುಣೆಯಿಟ್ಟು ನೀವು ಇಲ್ಲಿಗೆ ಬಂದಿದ್ದೀರ.
(ದುಷ್ಯಂತ ಮೇಲೆ ಏಳುತ್ತಾನೆ)
ಈ ದುಃಖಿತೆಯು ನಿಮಗೆ ಹೇಗೆ ನೆನಪಾದಳು?
ದುಷ್ಯಂತ: ಮೊದಲು ನನ್ನ ದುಃಖವನ್ನು ಪರಿಹರಿಸಿಕೊಂಡು ನಂತರ ಹೇಳುತ್ತೇನೆ. ಮೋಹದಿಂದ ಅಂದು ಉಪೇಕ್ಷಿಸಿದಾಗ ಕಣ್ಣೀರು ನಿನ್ನ ತುಟಿಯವರೆಗೂ ಬಂದಿತ್ತು. ಇಂದು ಆ ಕಣ್ಣೀರನ್ನು ಒರೆಸಿ ಶೋಕಮುಕ್ತನಾಗುತ್ತೇನೆ.
(ಕಣ್ಣೀರು ಒರೆಸುತ್ತಾನೆ)
ಶಕುಂತಲೆ: (ಬೆರಳಿನ ಉಂಗುರವನ್ನು ನೋಡುತ್ತಾ) ಇದು ಆ ಉಂಗುರವೇ!
ದುಷ್ಯಂತ: ಈ ಉಂಗುರವನ್ನು ಕಳೆದುಕೊಂಡದ್ದರಿಂದಲೇ ನನಗೆ ಮರೆತುಹೋದದ್ದು.
ಶಕುಂತಲೆ: ನೀವು ಗುರುತು ಹಿಡಿಯುವ ಕಾಲದಲ್ಲಿ ಇದು ತಪ್ಪಿಸಿಕೊಂಡು ಹೋಗಿ ನನಗೆ ಅನ್ಯಾಯ ಮಾಡಿಬಿಟ್ಟಿತು.
ದುಷ್ಯಂತ: ವಸಂತ ಬಂದ ಗುರುತಾಗಿ ಬಳ್ಳಿಯ ಮೇಲೆ ಹೂ ಕುಳಿತುಕೊಳ್ಳಲಿ.
ಶಕುಂತಲೆ: ಅದರಲ್ಲಿ ನನಗೆ ನಂಬಿಕೆಯಿಲ್ಲ. ಅದನ್ನು ನೀವೇ ಧರಿಸಿ.
(ಮಾತಲಿಯ ಪ್ರವೇಶ)
ಮಾತಲಿ: ಮಹಾರಾಜ ಧರ್ಮಪತ್ನೀ ಸಮಾಗಮನದಿಂದ, ಮಗನ ದರ್ಶನದಿಂದ ವರ್ಧಿಸುತ್ತಿದ್ದಾನೆ.
ದುಷ್ಯಂತ: ನನ್ನ ಮನೋರಥ ಸಿದ್ಧಿಯಾಗಿದೆ. ಈ ವಿಷಯ ಇಂದ್ರನಿಗೆ ತಿಳಿದಿಲ್ಲವೆನಿಸುತ್ತದೆ.
ಮಾತಲಿ: (ನಗುತ್ತಾ) ದೇವತೆಗಳಿಗೆ ತಿಳಿಯದುದು ಯಾವುದು? ನಡಿ, ಕಶ್ಯಪರು ನಿನಗೆ ದರ್ಶನವನ್ನು ಕೊಟ್ಟಿದ್ದಾರೆ.
ದುಷ್ಯಂತ: ಶಕುಂತಲೆ, ಮಗನನ್ನು ಹಿಡಿದುಕೊ. ನಿನ್ನನ್ನು ಮುಂದು ಮಾಡಿಕೊಂಡು ಕಶ್ಯಪರ ದರ್ಶನಕ್ಕೆ ಹೋಗುತ್ತೇನೆ.
ಶಕುಂತಲೆ: ನಿಮ್ಮ ಜೊತೆ ಗುರುಸಮೀಪಕ್ಕೆ ಹೋಗಲು ನನಗೆ ಲಜ್ಜೆಯಾಗುತ್ತದೆ.
ದುಷ್ಯಂತ: ಸಂತೋಷ ಕಾಲದಲ್ಲಿ ಇದು ಸರಿಯೇ! ನಡಿ, ನಡಿ.
(ಎಲ್ಲರೂ ಮುಂದೆ ಹೋಗುತ್ತಾರೆ)
(ಅದಿತಿಯ ಜೊತೆ ಆಸನಸ್ಥರಾದ ಕಶ್ಯಪರ ಪ್ರವೇಶ)
ಕಶ್ಯಪರು: (ದುಷ್ಯಂತನನ್ನು ತೋರಿಸಿ) ಅದಿತಿ, ನಿನ್ನ ಮಗನ ಯುದ್ಧಗಳಲ್ಲಿ ಮುಂದೆ ಹೋಗುವವನು ಇವನೇ! ಇವನ ಹೆಸರು ದುಷ್ಯಂತ, ಭೂಮಿಯ ರಾಜ. ಇವನ ಬಿಲ್ಲಿನ ಕಾರಣದಿಂದ ಇಂದ್ರನ ವಜ್ರಾಯುಧವು ಅವನಿಗೆ ಆಯುಧವಲ್ಲದೆ ಆಭರಣವಾಯಿತು.
ಅದಿತಿ: ಆಕೃತಿ ಗೌರವನೀಯವಾಗಿದೆ.
ಮಾತಲಿ: ಆಯುಷ್ಮನ್, ಇವರು ದೇವತೆಗಳ ತಂದೆ ತಾಯಿಯರು. ನಿನ್ನನ್ನು ಪುತ್ರಪ್ರೇಮದಿಂದ ನೋಡುತ್ತಿದ್ದಾರೆ. ಹತ್ತಿರ ಹೋಗು.
ದುಷ್ಯಂತ: ಮಾತಲಿ, ಇವರು ದ್ವಾದಶಾದಿತ್ಯರಿಗೆ ಮಾತಾಪಿತೃಗಳೂ, ಬ್ರಹ್ಮನಿಗಿಂತಲೂ ದೊಡ್ಡವನಾದ, ತ್ರಿಲೋಕಗಳಿಗೂ ಒಡೆಯನಾದ ವಿಷ್ಣುವಿಗೆ ವಾಮನಾವತಾರದಲ್ಲಿ ಜನ್ಮ ಕೊಟ್ಟವರೂ, ಎಲ್ಲ ಯಜ್ಞಗಳ ಭಾಗದೇಶ್ವರರೂ, ಮರೀಚಿ ಮತ್ತು ದಕ್ಷನ ಮಕ್ಕಳೂ ಆದ ಕಶ್ಯಪ ಮತ್ತು ಅದಿತಿಯರೇ?
ಮಾತಲಿ: ಹೌದು.
ದುಷ್ಯಂತ: (ಹತ್ತಿರ ಬಂದು) ನಿಮ್ಮಿಬ್ಬರಿಗೂ ಇಂದ್ರನ ಸೇವಕನಾದ ದುಷ್ಯಂತನ ನಮಸ್ಕಾರಗಳು.
ಕಶ್ಯಪರು: ವತ್ಸ, ಚಿರಂಜೀವಿಯಾಗಿ ಭೂಮಿಯನ್ನು ಪಾಲಿಸು.
ಅದಿತಿ: ಮಗನೇ, ಶತ್ರುವಿಲ್ಲದವನಾಗು.
ಶಕುಂತಲೆ: ನನ್ನ ಮಗನ ಸಮೇತ ನಮಸ್ಕಾರಮಾಡುತ್ತೇನೆ.
ಕಶ್ಯಪರು: ಮಗಳೇ, ನಿನ್ನ ಪತಿ ಇಂದ್ರನ ಸಮನಾದವನು. ಜಯಂತನ ಸಮನಾದ ಮಗನನ್ನು ಪಡೆದಿದ್ದೀಯ. ನಿನಗೆ ಬೇರೆ ಯಾವ ಆಶೀರ್ವಾದ ತಾನೇ ಯೋಗ್ಯ? ಶಚಿಸದೃಶಳಾಗಿರು.
ಅದಿತಿ: ಮಗಳೇ, ಪತಿಗೆ ಅನುರಕ್ತಳಾಗಿರು. ನಿನ್ನ ಮಗ ದೀರ್ಘಾಯುಷ್ಯವಂತನಾಗಿ ಉಭಯಕುಲಗಳಿಗೂ ಹೆಸರು ತರಲಿ. ಎಲ್ಲರೂ ಕುಳಿತುಕೊಳ್ಳಿ.
(ಎಲ್ಲರೂ ಕಶ್ಯಪರ ಸುತ್ತ ಕುಳಿತುಕೊಳ್ಳುತ್ತಾರೆ)
ಕಶ್ಯಪರು: (ಒಬ್ಬೊಬ್ಬರನ್ನೇ ನಿರ್ದೇಶಿಸುತ್ತಾ) ಶ್ರದ್ದೆ, ವಿತ್ತ ಮತ್ತು ವಿಧಿಗಳು ಒಟ್ಟಿಗೆ ಸೇರಿದಂತೆ ಅದೃಷ್ಟದಿಂದ ಶಕುಂತಲೆ, ನಿನ್ನ ಮಗ ಮತ್ತು ನೀನು ಒಟ್ಟಿಗೆ ಸೇರಿದ್ದೀರ.
ದುಷ್ಯಂತ: ಭಗವಾನ್, ಮೊದಲು ಅಭೀಷ್ಟ ಸಿದ್ದಿ. ನಂತರ ನಿಮ್ಮ ದರ್ಶನ. ಇದಕ್ಕಿಂತಲೂ ಹೆಚ್ಚಾದ ಅನುಗ್ರಹವೆಲ್ಲಿ? ಮೊದಲು ಹೂ ಬಂದು ಆಮೇಲೆ ಹಣ್ಣುಬರುತ್ತದೆ. ಮೋಡ ಬಂದಮೇಲೆ ಮಳೆ ಬರುತ್ತದೆ. ಮೊದಲು ಕಾರಣ, ಆಮೇಲೆ ಕಾರ್ಯ. ಆದರೆ ನಿಮ್ಮ ಅನುಗ್ರಹದಿಂದ ಕಾರ್ಯವಾದಮೇಲೆ ಕಾರಣಬಂದಂತಾಯಿತು.
ಮಾತಲಿ: ವಿಧಾತರ ಆಶೀರ್ವಾದ ಹೀಗೆಯೇ!
ದುಷ್ಯಂತ: ಭಗವನ್, ನಿಮ್ಮ ಗೋತ್ರದವರೇ ಆದ ಕಣ್ವರ ಮಗಳಾದ ಶಕುಂತಲೆಯನ್ನು ನಾನು ಗಾಂಧರ್ವ ವಿಧಿಯಿಂದ ಮದುವೆಯಾದೆ. ಸ್ವಲ್ಪ ದಿನವಾದ ಮೇಲೆ ಇವಳ ಬಂಧುಗಳು ನನ್ನ ಹತ್ತಿರ ಕರೆದುಕೊಂಡು ಬಂದಾಗ ಸ್ಮೃತಿಶೈಥಿಲ್ಯದಿಂದ ಇವಳನ್ನು ತಿರಸ್ಕರಿಸಿ ಅಪರಾಧ ಮಾಡಿದೆ. ಈ ಉಂಗುರವನ್ನು ನೋಡಿದ ತಕ್ಷಣ ಎಲ್ಲವೂ ಜ್ಞಾಪಕಕ್ಕೆ ಬಂದಿತು. ಇದೆಲ್ಲವೂ ವಿಚಿತ್ರವಾಗಿ ಕಾಣಿಸುತ್ತಿದೆ. ಎದುರಿಗೆ ಆನೆ ಬಂದಾಗ ಸಂಶಯಬಂದು, ಅದು ಹೋದಮೇಲೆ ಅದರ ಹೆಜ್ಜೆ ಗುರುತುಗಳನ್ನು ನೋಡಿ ಜ್ಞಾಪಕಬಂದಂತೆ ನನ್ನ ಮನಸ್ಸೂ ವಿಕಾರವಾಯಿತು.
ಕಶ್ಯಪರು: ವತ್ಸ, ಅಪರಾಧ ಶಂಕೆ ಬೇಡ. ಇದು ನಿನ್ನ ಮೋಹದಿಂದ ಆಗಿದ್ದಲ್ಲ. ಹೇಳುತ್ತೇನೆ ಕೇಳು.
ದುಷ್ಯಂತ: ಹೇಳಿ.
ಕಶ್ಯಪರು: ಶಕುಂತಲೆಯನ್ನು ಅಪ್ಸರತೀರ್ಥದಿಂದ ಮೇನಕೆ ಕರೆದುಕೊಂಡು ಅದಿತಿಯ ಬಳಿಗೆ ಬಂದಾಗಲೇ ನನಗೆ ಧ್ಯಾನದಿಂದ ಗೊತ್ತಾಯಿತು. ದೂರ್ವಾಸರ ಶಾಪದಿಂದ ಈ ಧರ್ಮಚಾರಿಣಿಗೆ ಹೀಗಾಯಿತು, ಬೇರೆ ಏನೂ ಅಲ್ಲ. ಈ ಉಂಗುರ ದರ್ಶನದಿಂದ ಎಲ್ಲವೂ ಸರಿಹೋಯಿತು.
ದುಷ್ಯಂತ: (ನಿಟ್ಟುಸಿರು ಬಿಡುತ್ತಾ) ಈ ಮಾತುಗಳಿಂದ ನನಗೆ ಬಿಡುಗಡೆಯಾಯಿತು.
ಶಕುಂತಲೆ: (ಸ್ವಗತ) ಕಾರಣವಿಲ್ಲದೆ ಇವರು ನನ್ನನ್ನು ತಿರಸ್ಕರಿಸಿಲ್ಲ. ಆದರೆ ನನಗೆ ಶಾಪದ ಬಗ್ಗೆ ನೆನಪಿಲ್ಲ. ಅಥವಾ ಶಾಪ ಬಂದಿದ್ದರೂ ವಿರಹದಿಂದಿದ್ದ ನನಗೆ ತಿಳಿಯಲಿಲ್ಲವೇನೋ. ಸಖಿಯರು ನನಗೆ ಉಂಗುರವನ್ನು ತೋರಿಸಲು ಹೇಳಿದ್ದರು.
ಕಶ್ಯಪರು: ಮಗಳೇ, ನಿನಗೆ ಗೊತ್ತಾಯಿತು. ನಿನ್ನ ಪತಿಯ ಬಗ್ಗೆ ಕೋಪ ಬೇಡ. ವಸ್ತು ಸರಿಯಾಗಿದ್ದರೂ ಕಲುಷಿತಗೊಂಡ ಕನ್ನಡಿಯಲ್ಲಿ ಅದು ಸರಿಯಾಗಿ ಕಾಣದಿರುವಂತೆ, ಶಾಪದ ಕಾರಣದಿಂದ ಮರೆತುಹೋಗಿದ್ದ ಇವನಿಗೆ ನಿನ್ನ ಧಾರ್ಮಿಕತೆ ಕಾಣಲಿಲ್ಲ.
ದುಷ್ಯಂತ: ಋಷಿಗಳು ಹೇಳಿದಂತೆ.
ಕಶ್ಯಪರು: ವತ್ಸ, ನಮ್ಮಿಂದ ವಿಧಿವತ್ತಾಗಿ ಜಾತಕರ್ಮಗಳನ್ನು ಮಾಡಿಸಿಕೊಂಡ ನಿನ್ನ ಈ ಮಗ ನಿನಗೆ ಅಭಿನಂದನೀಯವಾದನೇ?
ದುಷ್ಯಂತ: ಇವನೇ ಅಲ್ಲವೇ ನಮ್ಮ ವಂಶದ ಪ್ರತಿಷ್ಠೆ!
(ಮಗನನ್ನು ಕೈಯಿಂದ ಹಿಡಿದುಕೊಳ್ಳುತ್ತಾನೆ)
ಕಶ್ಯಪರು: ಇವನನ್ನು ಮುಂದಿನ ಚಕ್ರವರ್ತಿಯೆಂದು ಸ್ವೀಕರಿಸು. ಸ್ಥಿಮಿತಗತಿಯಿಂದ ಓದುವ ಅಶ್ವಗಳ ರಥದ ಮೇಲೆ ಹೋಗುತ್ತಾ ಇವನು ಏಳು ದ್ವೀಪಗಳನ್ನೂ ಗೆಲ್ಲುತ್ತಾನೆ. ಇಲ್ಲಿ ಎಲ್ಲ ಪ್ರಾಣಿಗಳನ್ನೂ ಕಟ್ಟಿಹಾಕುತ್ತಿದ್ದರಿಂದ ಇವನು ಸರ್ವದಮನನಾದ. ಇನ್ನು ಮುಂದೆ ಲೋಕದ ಭಾರವನ್ನು ಹೊರುವುದರಿಂದ ಭರತ ಎಂದು ಪ್ರಸಿದ್ಧನಾಗುತ್ತಾನೆ.
ದುಷ್ಯಂತ: ನಿಮ್ಮಿಂದ ಸಂಸ್ಕಾರಿತನಾದ ಇವನ ಮೇಲೆ ನಮಗೆ ಎಲ್ಲ ವಿಶ್ವಾಸವಿದೆ.
ಅದಿತಿ: ಭಗವನ್, ಮಗಳ ಮನೋರಥ ಸಿದ್ಧಿಸಿದ ವಿಷಯವನ್ನು ಶಕುಂತಲೆಯ ತಂದೆ ಕಣ್ವರಿಗೂ ತಿಳಿಯುವಂತಾಗಲಿ. ಮೇನಕೆಯೇನೋ ಸೇವೆಮಾಡುತ್ತಾ ಇಲ್ಲೇ ಇದ್ದಾಳೆ.
ಶಕುಂತಲೆ: (ಸ್ವಗತ) ನನ್ನ ಆಸೆಯನ್ನೇ ಭಗವತಿಯವರು ಹೇಳಿದರು.
ಕಶ್ಯಪರು: ತಪಸ್ಸಿನ ಮೂಲಕ ಎಲ್ಲವೂ ಅವರಿಗೆ ಪ್ರತ್ಯಕ್ಷವಾಗಿದೆ.
ದುಷ್ಯಂತ: (ಸ್ವಗತ) ಆದ್ದರಿಂದಲೇ ಕಣ್ವರಿಗೆ ನನ್ನ ಮೇಲೆ ಕೋಪ ಬಂದಿಲ್ಲ.
ಕಶ್ಯಪರು: ಆದರೂ ಈ ಪ್ರಿಯವಿಷಯವನ್ನು ಅವರಿಗೆ ಹೇಳಲೇಬೇಕು. ಯಾರಲ್ಲಿ?
(ಶಿಷ್ಯನ ಪ್ರವೇಶ)
ಶಿಷ್ಯ: ಭಗವನ್, ಇಲ್ಲಿದ್ದೇನೆ.
ಕಶ್ಯಪರು: ಗಾಲವ, ಈಗಲೇ ಹೊರಟು ಮಹರ್ಷಿ ಕಣ್ವರಿಗೆ ನನ್ನ ಸಂದೇಶವೆಂದು, ದುಷ್ಯಂತ ಮರೆತದ್ದನ್ನು ಜ್ಞಾಪಿಸಿಕೊಂಡು ಶಕುಂತಲೆಯನ್ನು ಪರಿಗ್ರಹಸಿದ ಎಂದು ಹೇಳು.
ಶಿಷ್ಯ: ಅಪ್ಪಣೆ.
(ನಿಷ್ಕ್ರಮಿಸುತ್ತಾನೆ)
ಕಶ್ಯಪರು: ವತ್ಸ, ನೀನೂ ಪತ್ನೀ ಪುತ್ರ ಸಮೇತನಾಗಿ ರಥವನ್ನು ಹತ್ತಿ ನಿನ್ನ ರಾಜಧಾನಿಗೆ ಹಿಂತಿರುಗು.
ದುಷ್ಯಂತ: ಅಪ್ಪಣೆ.
ಕಶ್ಯಪರು: ಇಂದ್ರ ನಿನ್ನ ಪ್ರಜೆಗಳ ಮೇಲೆ ಒಳ್ಳೆಯ ಮಳೆ ಸುರಿಸಲಿ. ನೀನೂ ಯಜ್ಞಮುಖದಿಂದ ಅವನನ್ನು ತೃಪ್ತಿಪಡಿಸು. ಹೀಗೆ ನೀವಿಬ್ಬರೂ ಎರೆಡೂ ಲೋಕಗಳಿಗೂ ಅನುಕೂಲವಾಗುವಂತೆ ಅನ್ಯೋನ್ಯವಾಗಿ ಅನೇಕ ಯುಗಗಳ ಕಾಲ ಸೌಖ್ಯದಿಂದಿರಿ.
ದುಷ್ಯಂತ: ಭಗವನ್, ನಾನು ಯಥಾಶಕ್ತಿ ಪ್ರಯತ್ನಿಸುತ್ತೇನೆ.
ಕಶ್ಯಪರು: ವತ್ಸ, ನಿನಗಿನ್ನೇನು ಅನುಗ್ರಹಮಾಡಲಿ?
ದುಷ್ಯಂತ: ಇದಕ್ಕಿಂತಲೂ ಅನುಗ್ರಹ ಇನ್ನೇನಿದೆ? ನಿಮಗೆ ಅನುಗ್ರಹ ಮಾಡಬೇಕೆನಿಸಿದರೆ ಇದಿರಲಿ:
(ಭರತವಾಕ್ಯ)
ಪ್ರವರ್ತತಾಂ ಪ್ರಕೃತಿಹಿತಾಯ ಪಾರ್ಥಿವಃ
ಸರಸ್ವತೀ ಶ್ರುತಮಹತಾಂ ಮಹೀಯತಾಮ್ ।
ಮಮಾಪಿ ಚ ಕ್ಷಪಯತು ನೀಲಲೋಹಿತಃ
ಪುನರ್ಭವಂ ಪರಿಗತಶಕ್ತಿರಾತ್ಮಭೂಃ॥35॥
(ನೃಪರೆಲ್ಲರೂ ಪ್ರಜಾಹಿತಕ್ಕಾಗಿಯೇ ಬಾಳಲಿ. ವಿದ್ವಾಂಸರ ಮಾತಿಗೆ ಎಲ್ಲ ಕಡೆ ಬೆಲೆ ಬರಲಿ. ನೀಲಲೋಹಿತನಾದ ಶಿವನು ನನಗೂ ಪುನರ್ಜನ್ಮವಿರದಂತೆ ಮಾಡಲಿ)
(ಎಲ್ಲರೂ ನಿಷ್ಕ್ರಮಿಸುತ್ತಾರೆ)
(ಸಪ್ತಮಾಂಕವು ಸಮಾಪ್ತವಾದುದು)
ಅಭಿಜ್ಞಾನ ಶಾಕುಂತಲ ನಾಟಕವು ಸಮಾಪ್ತವಾದುದು.