ದೃಶ್ಯ ೫
(ವಿದೂಷಕ ಮತ್ತು ಆಸನಸ್ಥನಾದ ರಾಜ ದುಷ್ಯಂತನ ಪ್ರವೇಶ)
ವಿದೂಷಕ: (ನೇಪಥ್ಯದ ಕಡೆ ಕಿವಿ ಕೊಡುತ್ತಾ) ರಾಜ, ಸ್ನೇಹಿತ, ಸಂಗೀತಶಾಲೆಯ ಕಡೆ ಕಿವಿ ಕೊಡು. ಲಯಶುದ್ಧವಾದ ಹಾಡಿಗೆ ಸ್ವರಸಂಯೋಜನೆ ಮಾಡುತ್ತಿದ್ದಾರೆ. ಅಲ್ಲಿ ಹಂಸಪದಿಕೆ ವರ್ಣಪರಿಚಯ ಮಾಡುತ್ತಿರಬಹುದು.
ದುಷ್ಯಂತ: ನೀನು ಸ್ವಲ್ಪ ಸುಮ್ಮನಿರು. ಕೇಳಿಸಿಕೊಳ್ಳುತ್ತೇನೆ.
(ಹಾಡು ಕೇಳಿಸುತ್ತದೆ)
ಪೊಸ ಮಧುವಂ ಬಯಸುವ ದುಂಬಿಯೇ, ಪೀರ್ದು
ರಸಮಂ ಮಾವಿನ ಮರದೊಳು
ವಸತಿಯಂ ಮಾಡಿ ತಾವರೆಯೆಸಳುಗಳೊಳು
ಪಿಸುಗುಡುತೆನ್ನಂ ತೊರೆದೆಯೇಂ?
ದುಷ್ಯಂತ: ಆಹಾ! ರಾಗ ಎಷ್ಟು ಮನೋಹರವಾಗಿದೆ!
ವಿದೂಷಕ: ಆ ಹಾಡಿನ ಅರ್ಥವಾಯಿತಾ?
ದುಷ್ಯಂತ: (ನಗುತ್ತಾ) ನಾನು ಪ್ರಣಯಿಸಿದ್ದವಳು. ಈಗ ಅವಳಿಗಿಂತ ಹೆಚ್ಚು ರಾಣಿ ವಸುಮತಿಯೊಡನೆಯೇ ಇರುತ್ತೇನೆ. ಆದ್ದರಿಂದ ಹೀಗೆ ಹಾಡುತ್ತಿದ್ದಾಳೆ. ಮಾಧವ್ಯ, ಹಂಸಪದಿಕೆಗೆ ಹೋಗಿ ನೀನು ಜಾಣತನದಿಂದಲೇ ಬೈದೆ ಎಂದು ಹೇಳು.
ವಿದೂಷಕ: ಆಜ್ಞೆ ಮೀರುವುದಕ್ಕಾಗುತ್ತದೆಯೇ!
(ಎದ್ದು ನಿಂತು)
ಅಯ್ಯಾ ಸ್ನೇಹಿತ, ಅವಳೋ ಅಪ್ಸರೆ. ಈಗ ನಾನು ಹೋಗಿ ಅವಳಿಗೆ ಹೇಳಿದರೆ, ಅವಳು ನನ್ನ ಜುಟ್ಟು ಹಿಡಿದು ಹೊಡೆಯುತ್ತಾಳೆ. ನನಗಿನ್ನೇನು ಮೋಕ್ಷವೋ!
ದುಷ್ಯಂತ: ಇರಲಿ ಹೋಗು. ಪಟ್ಟಣದ ಶಿಷ್ಟಾಚಾರದಿಂದ ಹೇಳು.
ವಿದೂಷಕ: ನನಗಿನ್ನೇನು ಗತಿಯೋ?
(ನಿಷ್ಕ್ರಮಿಸುತ್ತಾನೆ)
ದುಷ್ಯಂತ: (ಸ್ವಗತ) ಇದೇನು, ಈ ಹಾಡನ್ನು ಕೇಳಿದ ಮೇಲೆ ನನಗೆ ಇಷ್ಟಜನರ ವಿರಹವಿಲ್ಲದಿದ್ದರೂ ಮನಸ್ಸಿಗೆ ಒಂದು ರೀತಿಯ ವ್ಯಾಕುಲವುಂಟಾಗುತ್ತಿದೆಯಲ್ಲ! ಇದೇನೋ! ರಮ್ಯವಾದುದನ್ನು ನೋಡಿದಾಗ, ಮಧುರವಾದುದನ್ನು ಕೇಳಿದಾಗ, ಸುಖಿಯಾಗಿದ್ದರೂ ಮನಸ್ಸು ಒಂದು ರೀತಿಯ ವೇದನೆಗೊಳಗಾಗುತ್ತದೆ. ತನಗೆ ಗೊತ್ತಿರದೆಯೇ ಮನಸ್ಸು ಏನನ್ನೋ ಚಿಂತಿಸುತ್ತದೆ. ಇದು ಜನ್ಮಾಂತರದಿಂದ ಬಂದ ಭಾವವೋ ಏನೋ?
(ಒಂದು ರೀತಿಯ ಚಿಂತೆಗೊಳಗಾಗುತ್ತಾನೆ)
(ರಾಜನ ಕಂಚುಕಿಯ ಪ್ರವೇಶ)
ಕಂಚುಕಿ: ಅಯ್ಯೋ! ನಾನು ಈ ಸ್ಥಿತಿಗೆ ಬಂದುಬಿಟ್ಟೆನಲ್ಲ! ಮೊದಲು ಆಚಾರಕ್ಕಾಗಿ ರಾಜನ ಈ ಬೆಳ್ಳಿಯ ಕೋಲನ್ನು ಹಿಡಿಯುತ್ತಿದ್ದೆ, ಈಗ ನನಗೆ ವಯಸ್ಸಾಗಿ ಇದನ್ನೇ ಊರುಗೋಲನ್ನಾಗಿ ಮಾಡಿಕೊಳ್ಳುವಹಾಗಾಯಿತಲ್ಲ!
ಧರ್ಮಕಾರ್ಯ ಮಾಡುವುದು ರಾಜನ ಕೆಲಸವೇನೋ ಸರಿ. ಆದರೆ ಧರ್ಮಾಸನದಿಂದ ಈಗ ತಾನೇ ಎದ್ದು ಹೋಗಿರುವ ಅವನಿಗೆ ಈಗ ಮತ್ತೆ ಕಣ್ವಶಿಷ್ಯರ ಆಗಮನವನ್ನು ಹೇಳುವುದಕ್ಕೆ ನನಗೆ ಇಷ್ಟವಿಲ್ಲ. ಅಥವಾ, ಲೋಕತಂತ್ರದ ಕೆಲಸಗಳಿಗೆ ವಿಶ್ರಮವೇ ಇಲ್ಲವೇನೋ! ಸೂರ್ಯ ತನ್ನ ಕುದುರೆಗಳನ್ನು ಹೂಡಿ ರಾತ್ರಿ ಹಗಲು ತಿರುಗುತ್ತಿರುತ್ತಾನೆ, ಗಾಳಿ ಬೀಸುತ್ತಲೇ ಇರುತ್ತದೆ, ಶೇಷ ಯಾವಾಗಲೂ ಭೂಮಿಭಾರವನ್ನು ಹೊರುತ್ತಲೇ ಇರುತ್ತಾನೆ. ಅಂತೆಯೇ ಈ ರಾಜರ ಧರ್ಮವೂ!
ಇರಲಿ. ನನ್ನ ಕೆಲಸ ನಾನು ಮಾಡೋಣ.
(ಮುಂದೆ ಹೋಗಿ ರಾಜನನ್ನು ನೋಡುತ್ತಾ)
ತನ್ನ ಪ್ರಜೆಗಳನ್ನು ತನ್ನ ಮಕ್ಕಳಂತೆ ಅವರವರ ಕೆಸಲಗಳಿಗೆ ನಿಯಮಿಸಿ, ನಮ್ಮ ರಾಜ, ತಾನು ಬಿಸಿಲಿನಲ್ಲಿ ನಿಂತು ಮರಗಳ ನೆರಳಿನಲ್ಲಿ ಹೋಗುತ್ತಿರುವ ಆನೆಗಳ ಗುಂಪನ್ನು ರಕ್ಷಿಸುವ ಗಜರಾಜನಂತೆ, ವಿಶ್ರಮಿಸುತ್ತಿದ್ದಾನೆ.
(ರಾಜನ ಬಳಿ ಹೋಗಿ)
ಮಹಾರಾಜನಿಗೆ ಜಯವಾಗಲಿ. ಕಣ್ವರ ಸಂದೇಶವನ್ನು ತಂದು ಹಿಮಗಿರಿಯಿಂದ ಸ್ತ್ರೀತಪಸ್ವಿಗಳ ಜೊತೆ ಋಷಿಗಳು ಬಂದಿದ್ದಾರೆ. ಅವರನ್ನು ಕರೆಸುವುದು ತಮ್ಮ ಚಿತ್ತ.
ದುಷ್ಯಂತ: (ಆದರದಿಂದ) ಏನು ಕಣ್ವರ ಸಂದೇಶವೇ?
ಕಂಚುಕಿ: ಹೌದು ಮಹಾರಾಜ.
ದುಷ್ಯಂತ: ಹಾಗಾದರೆ ನಾನು ಹೇಳಿದೆನೆಂದು ಪುರೋಹಿತ ಸೋಮರಾತರಿಗೆ ಅವರೇ ಮುಂದೆ ನಿಂತು ಈ ಆಶ್ರಮವಾಸಿಗಳಿಗೆ ಶ್ರೌತವಿಧಿಗಳಿಂದ ಸತ್ಕರಿಸಲು ಹೇಳು. ನಾನು ತಪಸ್ವಿದರ್ಶನಕ್ಕೆ ಉಚಿತವಾದ ಪ್ರದೇಶದಲ್ಲಿ ಕಾಯುತ್ತಿರುತ್ತೇನೆ.
ಕಂಚುಕಿ: ರಾಜರ ಆಜ್ಞೆ.
(ನಿರ್ಗಮಿಸುತ್ತಾನೆ)
ದುಷ್ಯಂತ: (ನಿಂತು) ವೇತ್ರವತಿ, ಅಗ್ನಿಗೃಹದ ಮಾರ್ಗವನ್ನು ತೋರಿಸು.
ಪ್ರತೀಹಾರಿ: ಇತ್ತ, ಇತ್ತ ಮಹಾರಾಜ.
ದುಷ್ಯಂತ: (ಮುಂದೆ ನಡೆಯುತ್ತಾ, ಅಧಿಕಾರಖೇದವನ್ನು ತೋರಿಸಿ) ಎಲ್ಲರೂ ಬೇಕಾದದ್ದನ್ನು ಪಡೆದಮೇಲೆ ಸುಖಿಯಾಗಿರುತ್ತಾರೆ. ಆದರೆ ರಾಜನಿಗಾದರೋ ದುಃಖ ಇನ್ನೂ ಹೆಚ್ಚಾಗುತ್ತದೆ. ಈ ರಾಜನ ಕೆಲಸ ಉತ್ಸಾಹಿಯನ್ನೂ ಕುಗ್ಗಿಸಿಬಿಡುತ್ತದೆ. ತನ್ನ ಭಾರವಾದ ಕೊಡೆಯನ್ನು ತನ್ನ ಕೈಯಲ್ಲೇ ಹಿಡಿದುಕೊಂಡಂತೆ. ನೆರಳೂ ಇದೆ, ಭಾರವೂ ಇದೆ.
(ನೇಪಥ್ಯದಲ್ಲಿ)
ಹೊಗಳುಭಟರಿಬ್ಬರು : ಮಹಾರಾಜನಿಗೆ ಜಯಯಾಗಲಿ.
ಮೊದಲೆನೆಯವ: ಮಹಾರಾಜ, ನೀನು ನಿನ್ನ ಸುಖವನ್ನು ಬಿಟ್ಟು ಪ್ರಜೆಗಳ ಸುಖಕ್ಕಾಗಿ ಕಷ್ಟಪಡುತ್ತೀಯ. ಬಿಲಿಸಿನ ತಾಪವನ್ನು ತಾನು ತೆಗೆದುಕೊಂಡು ಬಂದವರಿಗೆ ನೆರಳನ್ನು ಕೊಡುವ ಮರದಂತೆ.
ಎರಡನೆಯವ: ಮಹಾರಾಜ, ನಿನ್ನ ಅಧಿಕಾರವನ್ನು ಉಪಯೋಗಿಸಿ ತಪ್ಪಿತಸ್ಥರನ್ನು ಶಿಕ್ಷಿಸುತ್ತೀಯ, ವಿವಾದಗಳನ್ನು ಹೋಗಲಾಡಿಸಿ ಎಲ್ಲರನ್ನೂ ರಕ್ಷಿಸುತ್ತೀಯ. ಸುಖ ಸಮಯದಲ್ಲಿ ಎಷ್ಟೋ ಬಂಧುಗಳಿರಬಹುದು ಆದರೆ ನೀನು ಎಲ್ಲ ಸಮಯದಲ್ಲಿಯೂ ಪ್ರಜೆಗಳಿಗೆ ಬಂಧು.
ದುಷ್ಯಂತ: ವ್ಯಾಕುಲದಿಂದಿದ್ದ ಮನಸ್ಸು ತಿಳಿಯಾಯಿತು.
(ಮುಂದೆ ಹೋಗುತ್ತಾನೆ)
ಪ್ರತೀಹಾರಿ: ಮಹಾರಾಜ, ಇದು ಹೋಮಧೇನುವಿರುವ ಅಗ್ನಿಗೃಹ. ಈ ಮೆಟ್ಟಿಲುಗಳನ್ನು ಹತ್ತಿ ಒಳಗೆ ಬನ್ನಿ.
ದುಷ್ಯಂತ: (ವೇತ್ರವತಿಯನ್ನು ಹಿಡಿದು ಮೆಟ್ಟಿಲು ಹತ್ತಿ) ವೇತ್ರವತಿ, ಕಣ್ವರು ನನಗಾಗಿ ಏಕೆ ಈ ಋಷಿಗಳನ್ನು ಕಳಿಸಿರಬಹುದು? ವ್ರತಿಗಳು ಇರುವ ಸ್ಥಳದಲ್ಲಿ ತಪಸ್ಸಿಗೆ ಯಾರಾದರೂ ವಿಘ್ನವನ್ನು ತಂದೊಡ್ಡಿದ್ದಾರೆಯೇ? ಧರ್ಮಾರಣ್ಯದಲ್ಲಿ ಪ್ರಾಣಿಗಳಿಗೇನಾದರೂ ತೊಂದರೆಯಾಯಿತೇ? ಅಥವಾ ನನ್ನ ತಪ್ಪಿನಿಂದ ಕಾಡಿನಲ್ಲಿ ಮರಗಳು ಹೂ ಹಣ್ಣುಗಳನ್ನು ಬಿಡುವುದನ್ನು ನಿಲ್ಲಿಸಿದವೇ? ಬಹುತರ್ಕಗಳಿಂದ ನನ್ನ ಮನಸ್ಸು ಓಲಾಡುತ್ತಿದೆ.
ಪ್ರತೀಹಾರಿ: ನಿಮ್ಮ ಒಳ್ಳೆಯ ಆಡಳಿತವನ್ನು ನೋಡಿ ಮಹಾರಾಜರನ್ನು ಅಭಿನಂದಿಸಲು ಬಂದ್ದಿದ್ದಾರೆ ಎಂದೆನಿಸುತ್ತಿದೆ.
(ಗೌತಮಿ ಮತ್ತು ಶಕುಂತಲೆಯನ್ನು ಮುಂದೆ ಮಾಡಿಕೊಂಡು ಶಾರ್ಙರವ, ಶಾರದ್ವತರ ಪ್ರವೇಶ. ಅವರ ಮುಂದೆ ಕಂಚುಕಿ ಮತ್ತು ಪುರೋಹಿತರು ಬರುತ್ತಾರೆ)
ಕಂಚುಕಿ: ಋಷಿಗಳೇ, ಇತ್ತ, ಇತ್ತ.
ಶಾರ್ಙರವ: ಶಾರದ್ವತ, ಈ ಮಹಾರಾಜ ಮಹಾಭಾಗನೇ ಸರಿ. ಇವನದು ಅಭಿನ್ನ ಸ್ಥಿತಿ. ಜನರೆಲ್ಲರೂ ತಮ್ಮ ತಮ್ಮ ವರ್ಣಾಶ್ರಮ ಧರ್ಮಗಳನ್ನು ಪಾಲಿಸುತ್ತಿದ್ದಾರೆ. ಆದರೂ ಶಾಂತ ವಾತಾವರಣಕ್ಕೆ ಹೊಂದಿಕೊಂಡ ನನ್ನ ಮನಸ್ಸಿಗೆ ಈ ಜನಾಕೀರ್ಣವಾದ ನಗರ ಬೆಂಕಿಬಿದ್ದ ಮನೆಯಂತಿದೆ.
ಶಾರದ್ವತ: ಈ ನಗರಕ್ಕೆ ಬಂದ ಮೇಲಿಂದಲೂ ನಿನಗೆ ಹಾಗೇ ಅನಿಸುತ್ತಿದೆ. ನನಗೂ ಇಲ್ಲಿನ ಸುಖಪುರುಷರನ್ನು ನೋಡಿದರೆ ಸ್ನಾನ ಮಾಡದಿದ್ದವನನ್ನು ಸ್ನಾನ ಮಾಡಿದವನು, ಅಶುಚಿಯಾಗಿರುವವನನ್ನು ಶುಚಿಯಾಗಿರುವವನು, ನಿದ್ರೆ ಮಾಡಿದವನನ್ನು ಎಚ್ಚೆತ್ತವನು, ಕಟ್ಟಲ್ಪಟ್ಟಿರುವವನನ್ನು ಸ್ವತಂತ್ರನಾಗಿರುವವನೂ ನೋಡಿದಂತಾಗುತ್ತಿದೆ.
ಶಕುಂತಲೆ: (ಶಕುನವನ್ನು ನಟಿಸುತ್ತಾ) ನನ್ನ ಬಲಗಣ್ಣು ಅದರುತ್ತಿದೆಯಲ್ಲ!!
ಗೌತಮಿ: ಮಗಳೇ, ಅಮಂಗಳವನ್ನು ಬಿಡು. ನಿನ್ನ ಗಂಡನ ಕುಲದೈವಗಳು ನಿನಗೆ ಒಳ್ಳೆಯದನ್ನು ಮಾಡಲಿ.
(ಮುಂದೆ ಬರುತ್ತಾರೆ)
ಪುರೋಹಿತ: (ರಾಜನನ್ನು ನಿರ್ದೇಶಿಸಿ) ತಪಸ್ವಿಗಳೆ, ವರ್ಣಾಶ್ರಮಗಳನ್ನು ರಕ್ಷಿಸುವ ಮಹಾರಾಜ ತನ್ನ ಆಸನದಿಂದೆದ್ದು ತಮ್ಮಗಾಗಿ ಕಾಯುತ್ತಿದ್ದಾನೆ. ನೋಡಿ.
ಶಾರ್ಙರವ: ಪುರೋಹಿತ, ಇದು ಅಭಿನಂದನೀಯವೇ, ಆದರೂ ನಾವು ಇದಕ್ಕೆಲ್ಲ ತಟಸ್ಥರೇ! ಹಣ್ಣಿನಿಂದ ತುಂಬಿದ ಮರಗಳು ಬಾಗುತ್ತವೆ, ನೀರಿನಿಂದ ತುಂಬಿದ ಮೋಡ ಮಳೆ ಸುರಿಸುತ್ತದೆ, ಮಹಾತ್ಮರು ಸಮೃದ್ಧಿಯಲ್ಲಿ ಬಾಗುತ್ತಾರೆ, ಅದರಲ್ಲೇನೂ ವಿಶೇಷವಿಲ್ಲ, ಅದು ಅವರ ಸ್ವಭಾವ.
ಪ್ರತೀಹಾರಿ: ಮಹಾರಾಜ, ಋಷಿಗಳು ಪ್ರಸನ್ನ ಮುಖರಾಗಿದ್ದಾರೆ. ಇವರದು ಏನೋ ಕಾರ್ಯವಿದೆಯೆಂದು ಅನಿಸುತ್ತಿದೆ.
ದುಷ್ಯಂತ: (ಶಕುಂತಲೆಯನ್ನು ನೋಡಿ) ಅಲ್ಲಿರುವವಳು ಯಾರು? ಮುಸುಕನ್ನು ಹೊದ್ದಿರುವುದರಿಂದ ಅವಳ ಲಾವಣ್ಯ ಅಸ್ಫುಟವಾಗಿದೆ. ಆದರೂ ಹಣ್ಣೆಲೆಗಳ ನಡುವೆ ಚಿಗುರೆಲೆಯಂತೆ ಶೋಭಾಯಮಾನವಾಗಿದ್ದಾಳೆ.
ಪ್ರತೀಹಾರಿ: ದೇವ, ಕುತೂಹಲದಿಂದ ನನಗೆ ತರ್ಕಿಸಲು ಆಗುತ್ತಿಲ್ಲ. ಆದರೆ ಅವಳನ್ನು ಮತ್ತೆ ಮತ್ತೆ ನೋಡಬೇಕೆನಿಸುತ್ತದೆ.
ದುಷ್ಯಂತ: ಬಿಡು. ಪರಪತ್ನಿಯರನ್ನು ವರ್ಣಿಸಬಾರದು.
ಶಕುಂತಲೆ: (ಕೈಯನ್ನು ಹೊಟ್ಟೆಯ ಮೇಲಿಟ್ಟುಕೊಂಡು, ಸ್ವಗತ) ಹೃದಯವೇ ಏಕೆ ಭಯಪಡುತ್ತೀಯೆ? ಆರ್ಯಪುತ್ರನನ್ನು ನೋಡಿ ಧೈರ್ಯ ತಂದುಕೊ.
ಪುರೋಹಿತ: (ಮುಂದೆ ಬಂದು, ರಾಜನಿಗೆ) ಋಷಿಗಳನ್ನು ವಿಧಿವತ್ತಾಗಿ ಅರ್ಚಿಸಿದ್ದಾಗಿದೆ. ಕಣ್ವರಿಂದ ಏನೋ ಸಂದೇಶವಿದೆಯಂತೆ. ತಾವು ಆಲಿಸಬೇಕು.
ದುಷ್ಯಂತ: ಹಾಗೆಯೇ ಆಗಲಿ.
ಋಷಿಗಳು: (ಕೈಯೆತ್ತಿ) ರಾಜನಿಗೆ ಜಯವಾಗಲಿ.
ದುಷ್ಯಂತ: ಎಲ್ಲರಿಗೂ ನಮಸ್ಕಾರ.
ಋಷಿಗಳು: ಇಷ್ಟಾರ್ಥ ಸಿದ್ಧಿಯಾಗಲಿ.
ದುಷ್ಯಂತ: ತಪಸ್ವಿಗಳ ತಪಸ್ಸು ನಿರ್ವಿಘ್ನವಾಗಿದೆಯೇ?
ಋಷಿಗಳು: ನೀನು ಕಾಪಾಡುತ್ತಿರುವಾಗ ಧರ್ಮಾಚರಣೆಯಲ್ಲಿ ವಿಘ್ನವೆಲ್ಲಿ? ಸೂರ್ಯನಿರುವಾಗ ಕತ್ತಲೆಗೆ ಜಾಗವೆಲ್ಲಿ!
ದುಷ್ಯಂತ: ನಾನು ರಾಜ ಎನಿಸಿಕೊಂಡಿದ್ದು ಸಾರ್ಥಕವಾಯಿತು. ಲೋಕಾನುಗ್ರಹಕ್ಕಾಗಿ ಕಣ್ವರು ಕುಶಲರೇ?
ಶಾರ್ಙರವ: ಸಿದ್ಧಿಯಿರುವವರು ಸ್ವಾಧೀನ ಕುಶಲರು. ಅವರು ನಿಮ್ಮ ಕ್ಷೇಮವನ್ನು ಕೇಳುತ್ತಿದ್ದಾರೆ.
ದುಷ್ಯಂತ: ಕಣ್ವರ ಆಜ್ಞೆಯೇನು?
ಶಾರ್ಙರವ: ಅವರ ಸಂದೇಶ ಹೀಗಿದೆ: ನೀನು ಮತ್ತು ನನ್ನ ಮಗಳು ಪರಸ್ಪರ ಇಷ್ಟಪಟ್ಟು ಮದುವೆಯಾಗಿರುವುದು ನನಗೆ ನಿಮ್ಮಿಬ್ಬರ ಮೇಲಿರುವ ಪ್ರೀತಿಯಿಂದ ಒಪ್ಪಿಗೆಯಾಗಿದೆ. ನೀನು ಅರ್ಹರಲ್ಲಿ ಮೊದಲನೆಯವನು. ಶಕುಂತಲೆ ಸತ್ಕಾರ್ಯದ ಮೂರ್ತರೂಪಳು. ನಿಮ್ಮಿಬ್ಬರನ್ನೂ ಸೇರಿಸಿ ಪ್ರಜಾಪತಿ ಎಷ್ಟೋ ದಿನವಾದಮೇಲೆ ಅಪವಾದದಿಂದ ತಪ್ಪಿಸಿಕೊಂಡಿದ್ದಾನೆ.
ಆದ್ದರಿಂದ ನೀನು ಗರ್ಭಿಣಿಯಾದ ಇವಳನ್ನು ಸಹಧರ್ಮಿಣಿಯಾಗಿ ಸ್ವೀಕರಿಸಬೇಕೆಂದು ಕಣ್ವರ ಸಂದೇಶ.
ಗೌತಮಿ: ಆರ್ಯ, ನನಗೂ ಏನಾದರೂ ಹೇಳಬೇಕೆನಿಸುತ್ತದೆ. ಆದರೆ ನನ್ನ ಮಾತು ಬೇಕಿಲ್ಲವೆನಿಸುತ್ತದೆ. ನೀನೂ ಗುರುಜನರನ್ನು ಕೇಳಲಿಲ್ಲ, ಇವಳೂ ಬಂಧು ಜನರನ್ನು ಕೇಳಲಿಲ್ಲ, ಇದು ನಿಮ್ಮಬ್ಬರ ನಡುವೆಯೇ ನಡೆದುದರಿಂದ ನಾನು ನಿಮಗೆ ಏನು ಹೇಳಲಿ?
ಶಕುಂತಲೆ: (ಸ್ವಗತ) ಆರ್ಯಪುತ್ರ ಏನು ಹೇಳುತ್ತಾನೋ?
ದುಷ್ಯಂತ: ಏನು ಹೇಳುತ್ತಿದ್ದೀರಿ?
ಶಕುಂತಲೆ: (ಸ್ವಗತ) ಆರ್ಯಪುತ್ರನ ಮಾತಿನಲ್ಲಿ ಕಿಡಿಯಿದೆ!
ಶಾರ್ಙರವ: ಇದೇನು? ನಿನಗೆ ಲೋಕರೂಢಿ ಗೊತ್ತೇ ಇದೆಯಲ್ಲ? ಮದುವೆಯಾಗಿರುವ ಹೆಣ್ಣು ತವರು ಮನೆಯಲ್ಲಿದ್ದರೆ ಅವಳನ್ನು ಜನರು ಅನ್ಯಥಾ ಭಾವಿಸುತ್ತಾರೆ. ಆದ್ದರಿಂದ ಪ್ರಿಯವೋ, ಅಪ್ರಿಯವೋ, ಮನೆಯವರು ಅವಳನ್ನು ಗಂಡನ ಜೊತೆಯೇ ಇರಬೇಕೆಂದು ಬಯಸುತ್ತಾರೆ.
ದುಷ್ಯಂತ: ಈ ಮಹಿಳೆಯನ್ನು ನಾನು ಈ ಮುಂಚೆ ಮದುವೆಯಾಗಿದ್ದೇನೆಯೇ?
ಶಕುಂತಲೆ: (ಸ್ವಗತ) ಹೃದಯವೇ, ನಿನ್ನ ಶಂಕೆ ನಿಜವಾಯಿತು!
ಶಾರ್ಙರವ: ಇದೇನು, ಮಾಡಿದುದರ ಬಗ್ಗೆ ಲಜ್ಜೆಯೂ? ಧರ್ಮವಿಮುಖತೆಯೋ ಅಥವಾ ಅವಜ್ಞೆಯೊ?
ದುಷ್ಯಂತ: ಇದೇನು ಅಸಂಬದ್ಧವಾದ ಕಲ್ಪನೆಗಳು?
ಶಾರ್ಙರವ: ಪ್ರಾಯ ಮತ್ತು ಐಶ್ವರ್ಯಗಳಿದ್ದಲ್ಲಿ ಇಂತಹ ವಿಕಾರಗಳು ತಲೆಯೆತ್ತುತ್ತವೆ.
ದುಷ್ಯಂತ: ನನ್ನ ಮೇಲಿನ ಆರೋಪ ತೀವ್ರವಾಯಿತು.
ಗೌತಮಿ: ಮಗಳೇ, ಸ್ವಲ್ಪ ಹೊತ್ತು ಲಜ್ಜೆಯನ್ನು ಬಿಡು. ನಿನ್ನ ಮುಸುಕನ್ನು ತೆಗೆಯುತ್ತೇನೆ. ನಿನ್ನ ಗಂಡ ಗುರುತು ಹಿಡಿಯುತ್ತಾನೆ.
(ಹಾಗೇ ಮಾಡುತ್ತಾಳೆ)
ದುಷ್ಯಂತ: (ಶಕುಂತಲೆಯನ್ನು ನೋಡಿ, ಸ್ವಗತ) ಇದೇನು ಇವಳು ಇಷ್ಟು ಸುಂದರವಾಗಿರುವವಳು? ಇವಳನ್ನು ಮೊದಲು ಮದುವೆಯಾಗಿದ್ದೇನೋ ಇಲ್ಲವೋ ನೆನಪಿಗೆ ಬರುತ್ತಿಲ್ಲ. ಉಷಾಕಾಲದಲ್ಲಿ ಇಬ್ಬನಿ ಬಿದ್ದ ಹೂವಿನ ಮೇಲೆ ಕೂರಬೇಕೋ ಬಿಡಬೇಕೋ ಎಂದು ನಿರ್ಧರಿಸಲಾರದ ಭ್ರಮರದಂತೆ ನಾನೂ ಆಗಿದ್ದೇನೆ.
(ಹೀಗೆ ಯೋಚನೆ ಮಾಡುತ್ತಾ ಕೂರುತ್ತಾನೆ)
ಪ್ರತೀಹಾರಿ: (ಸ್ವಗತ) ನನ್ನ ರಾಜ ಎಷ್ಟು ಧಾರ್ಮಿಕ! ಇಷ್ಟು ಸುಂದರವಾಗಿರುವವಳನ್ನು ನೋಡಿದ ಮೇಲೂ ಯೋಚಿಸುತ್ತಿದ್ದಾನಲ್ಲ!
ಶಾರ್ಙರವ: ರಾಜನ್, ಏಕೆ ಸುಮ್ಮನಿದ್ದೀಯ?
ದುಷ್ಯಂತ: ಮುನಿಗಳೇ, ಎಷ್ಟು ಜ್ಞಾಪಿಸಿಕೊಂಡರೂ ಇವರನ್ನು ಮದುವೆಯಾದ ನೆನಪೇ ನನಗಿಲ್ಲ. ಹಾಗಿದ್ದಲ್ಲಿ, ಗರ್ಭಿಣಿಯಾದ ಇವರನ್ನು ನನ್ನ ಪತ್ನಿ ಎಂದು ಹೇಗೆ ಸ್ವೀಕರಿಸಲಿ?
ಶಕುಂತಲೆ: (ದುಃಖದಿಂದ, ಸ್ವಗತ) ಅಯ್ಯೋ! ಆರ್ಯನಿಗೆ ನನ್ನನ್ನು ಕೈಹಿಡಿರುವುದರಲ್ಲೇ ಸಂದೇಹವಿದೆ. ಇನ್ನು ರಾಣಿಯಾಗುವ ಆಸೆಯೆಲ್ಲಿ!!
ಶಾರ್ಙರವ: ನೀನು ಇನ್ನೇನೂ ಹೇಳಬೇಕಾಗಿಲ್ಲ. ನಿನ್ನಂತಹ ಅಮಾನ್ಯನಿಗೆ ಮುನಿ ತನ್ನ ಮಗಳನ್ನು ಕೊಟ್ಟಿದ್ದಾನಲ್ಲ! ಕಳ್ಳ ಕದ್ದುಕೊಂಡು ಹೋಗಿ ಸಿಕ್ಕಿಬಿದ್ದಮೇಲೆ, ಕಳೆದ ವಸ್ತುವನ್ನು ಅವನಿಗೆ ಕೊಟ್ಟರೂ ಅವನು ಬೇಡವೆಂದ ಪರಿಸ್ಥಿತಿಯಾಗಿದೆ!
ಶಾರದ್ವತ: ಶಾರ್ಙರವ, ಇನ್ನು ನಿಲ್ಲಿಸೋಣ. ಶಕುಂತಲೆ, ನಮ್ಮಿಂದ ಹೇಳಬೇಕಾದದ್ದೆಲ್ಲ ಹೇಳಿಯಾಗಿದೆ. ಮಹಾರಾಜ ಹೀಗೆ ಹೇಳುತ್ತಿದ್ದಾನೆ. ಇನ್ನು ನೀನೆ ಉತ್ತರ ಕೊಡು.
ಶಕುಂತಲೆ: (ಸ್ವಗತ) ಆ ಪ್ರೀತಿಯೇ ಈ ಅವಸ್ಥೆಗೆ ಬಂದಮೇಲೆ ಇನ್ನೇನನ್ನು ನೆನಪಿಸುವುದು! ಇನ್ನು ನನಗೆ ಶೋಕವೇ ಕಟ್ಟಿಟ್ಟ ಬುತ್ತಿ.
(ಪ್ರಕಾಶ)
ಆರ್ಯಪುತ್ರ...
(ಅರ್ಧ ಹೇಳಿ ನಿಲ್ಲಿಸಿ)
ಅನುಮಾನವಿದ್ದಾಗ ಆರ್ಯಪುತ್ರ ಎನ್ನುವುದು ಸರಿಯಲ್ಲ. ಪೌರವ, ಹಿಂದೆ ಆಶ್ರಮಪದದಲ್ಲಿ ನಿನ್ನ ಪ್ರೀತಿಯನ್ನು ಹೃದಯಪೂರ್ವಕವಾಗಿ ನನಗೆ ಕೊಟ್ಟು ಈಗ ನೀನು ಹೀಗೆ ಹೇಳುತ್ತಿರುವುದು ಸರಿಯೇ?
ದುಷ್ಯಂತ: (ಕಿವಿ ಮುಚ್ಚಿಕೊಂಡು) ಶಾಂತಂ ಪಾಪಂ! ನದಿಯ ಪ್ರವಾಹ ನೀರನ್ನು ಕಲುಷಿತ ಮಾಡುವುದಲ್ಲದೆ ದಡವನ್ನೂ, ದಡದ ಮರಗಳನ್ನೂ ಕೊಚ್ಚಿಕೊಂಡು ಹೋಗುವಂತೆ ನೀನು ನನಗಷ್ಟೇ ಅಲ್ಲದೆ ನಮ್ಮ ವಂಶಕ್ಕೂ ಮಸಿ ಬಳಿಯಬೇಕೆಂದಿರುವೆಯಾ?
ಶಕುಂತಲೆ: ಆಯಿತು, ನಿನಗೆ ನನ್ನನ್ನು ಸ್ವೀಕರಿಸಲು ನಿಜವಾಗಿಯೂ ಶಂಕೆಯಿದ್ದರೆ, ಅದನ್ನು ಒಂದು ಅಭಿಜ್ಞಾನವನ್ನು ತೋರಿಸಿ ಅದನ್ನು ಹೋಗಲಾಡಿಸುತ್ತೇನೆ.
ದುಷ್ಯಂತ: ಅದೇ ಸರಿ.
ಶಕುಂತಲೆ: (ಕೈ ಬೆರಳನ್ನು ನೋಡಿಕೊಂಡು) ಹಾ ಧಿಕ್, ಹಾ ಧಿಕ್!! ನನ್ನ ಬೆರಳಿನಲ್ಲಿ ಉಂಗುರವೇ ಇಲ್ಲ!!
(ವಿಷಾದದಿಂದ ಗೌತಮಿಯನ್ನು ನೋಡುತ್ತಾಳೆ)
ಗೌತಮಿ: ನೀನು ಶಕ್ರಾವತಾರದ ಶಚೀತೀರ್ಥದಲ್ಲಿ ಅರ್ಘ್ಯ ಕೊಡುವಾಗ ಜಾರಿ ಬಿದ್ದಿರಬೇಕು.
ದುಷ್ಯಂತ: (ನಗುತ್ತಾ) ಇಂತಹವುಗಳನ್ನು ನೋಡಿಯೇ ಸ್ತ್ರೀಯರನ್ನು ಬೇಕಾದ ಕ್ಷಣದಲ್ಲೇ ಕಥೆಕಟ್ಟುತ್ತಾರೆಂದು ಹೇಳುವುದು.
ಶಕುಂತಲೆ: ಅಯ್ಯೋ! ವಿಧಿ ತನ್ನ ಪ್ರಭುತ್ವವನ್ನು ತೋರಿಸಿಬಿಟ್ಟಿತಲ್ಲ! ಆದರೂ ಒಂದು ಮಾತು ಹೇಳುತ್ತೇನೆ.
ದುಷ್ಯಂತ: ಕೇಳುವುದಕ್ಕೆ ಸಿದ್ಧನಾಗಿದ್ದೇನೆ.
ಶಕುಂತಲೆ: ಒಂದು ದಿನ ನವಮಾಲಿಕಾ ಮಂಟಪದಲ್ಲಿ ಕೂತಿದ್ದಾಗ ತಾವರೆಯೆಲೆಯಲ್ಲಿ ನೀನು ನೀರನ್ನು ಹಿಡಿದಿದ್ದೆ....
ದುಷ್ಯಂತ: ಮುಂದೆ...
ಶಕುಂತಲೆ: ಅಲ್ಲಿಗೆ ನನ್ನ ಪುತ್ರಸಮಾನವಾದ ದೀರ್ಘಾಪಾಂಗವೆಂಬ ಜಿಂಕೆಯ ಮರಿ ಬಂತು. ಆಗ ನೀನು ಮೊದಲು ಅದಕ್ಕೆ ನೀರನ್ನು ಕುಡಿಸಲು ಹೋದೆ. ಆದರೆ ಅದು ನಿನ್ನ ಕೈಯಿಂದ ಕುಡಿಯಲಿಲ್ಲ. ಆದರೆ ನಾನು ಕುಡಿಸಿದಾಗ ಕುಡಿಯಿತು. ಆಗ ನೀನು ನನ್ನನ್ನು ಒಂದೇ ರೀತಿಯಿರುವವರಲ್ಲಿ ವಿಶ್ವಾಸ ಹೆಚ್ಚು ಎಂದು ಗೇಲಿ ಮಾಡಿದೆ. ನೆನಪಿದೆಯೇ?
ದುಷ್ಯಂತ: ಇದು ತಮ್ಮ ಕೆಲಸ ಮಾಡಿಸಿಕೊಳ್ಳಬೇಕೆಂದಿರುವ ಹೆಂಗಸರಲ್ಲಿ ಮಧುರವಾದ ಮಾತುಗಳಲ್ಲಿ ಸುಳ್ಳು ಹೇಳುವ ಪರಿಪಾಠ.
ಗೌತಮಿ: ಮಹಾಭಾಗ ಈ ಮಾತುಗಳು ನಿನಗೆ ಉಚಿತವಲ್ಲ. ತಪೋವನದಲ್ಲಿ ಬೆಳೆದ ಜನಕ್ಕೆ ಮೋಸದ ಬಗ್ಗೆಯೇ ಗೊತ್ತಿರುವುದಿಲ್ಲ.
ದುಷ್ಯಂತ: ತಾಪಸವೃದ್ದೆಯೇ, ಸ್ತ್ರೀಯರಿಗೆ ಹೇಳಿಕೊಡದೆಯೂ ಇಂತಹ ಪಟುತ್ವ ಇರುತ್ತದೆ. ಅಂತಹುದರಲ್ಲಿ ನಿಮ್ಮಂತಹ ತಿಳಿದಿರುವವರಿಗೆ ಇನ್ನೇನು? ಕೋಗಿಲೆಗಳು ಆಕಾಶಕ್ಕೆ ಹಾರಿ ಹೋಗುವಾಗ ತಮ್ಮ ಮರಿಗಳನ್ನು ಬೇರೆ ಪಕ್ಷಿಗಳ ಗೊಡಿನಲ್ಲಿಟ್ಟು ಹೋಗುತ್ತವೆಯಂತೆ.
ಶಕುಂತಲೆ: (ಕೋಪದಿಂದ) ಅನಾರ್ಯ! ನೀನು ಯೋಚನೆ ಮಾಡುತ್ತಿರುವುದು ನಿನ್ನ ವ್ಯಕ್ತಿತ್ವವನ್ನು ತೋರಿಸುತ್ತದೆ. ಧರ್ಮ ಕವಚದೊಳಗೆ ಸೇರಿಕೊಂಡು ಹುಲ್ಲು ಮುಚ್ಚಿದ ಹಾಳುಬಾವಿಯಂತೆ ಇದ್ದೀಯ! ನಿನ್ನಂತೆಯೇ ಎಲ್ಲರೂ ಎಂದುಕೊಂಡೆಯಾ!?
ದುಷ್ಯಂತ: (ಸ್ವಗತ) ನನ್ನನ್ನು ಸಂದಿಗ್ಧದಲ್ಲಿ ಸಿಕ್ಕಿಸಿದ್ದರೂ ಇವಳ ಕೋಪದಿಂದ ಇಲ್ಲಿ ಮೋಸವಿಲ್ಲವೆಂದು ತೋರುತ್ತದೆ. ಇವಳು ಹುಬ್ಬು ಗಂಟಿಕ್ಕಿರುವುದು ಮನ್ಮಥನ ಬಿಲ್ಲೇ ಮುರಿದಂತಿದೆ.
(ಪ್ರಕಾಶ, ಸ್ವಲ್ಪ ಶಾಂತನಾಗಿ)
ದುಷ್ಯಂತನ ಚರಿತೆ ಎಲ್ಲರಿಗೂ ಗೊತ್ತಿರುವಂಥದು. ನನ್ನನ್ನು ಯಾರೂ ಹೀಗೆ ನೋಡಿಲ್ಲ.
ಶಕುಂತಲೆ: ಅಯ್ಯೋ! ಈಗ ಕೀಳಾದ ಹೆಂಗಸಾದಂತೆನಾದೆನಲ್ಲ. ಈ ಪುರುವಂಶದವನಿಗೆ, ಹೃದಯದಲ್ಲಿ ವಿಷವಿಟ್ಟುಕೊಂಡು ಮಧುರವಾಗಿ ಮಾತಾಡುವವನಿಗೆ ಮರುಳಾಗಿ ಮೋಸ ಹೋಗಿಬಿಟ್ಟೆನಲ್ಲ!
(ಸೆರಗಿನಿಂದ ಮುಖ ಮುಚ್ಚಿಕೊಂಡು ಅಳುತ್ತಾಳೆ)
ಶಾರ್ಙರವ: ಆತ್ಮಕೃತವಾದ ಚಾಪಲ್ಯ ಸುಡುವುದು ಹೀಗೆಯೇ.... ಮೊದಲೇ ಪರೀಕ್ಷೆಮಾಡುವುದು ಉತ್ತಮ. ಅದರಲ್ಲೂ ಇಂತಹ ಗುಪ್ತ ಕೆಲಸಗಳಲ್ಲಿ. ಅಜ್ಞಾತರಲ್ಲಿ ಸೌಹಾರ್ದ ವೈರತನವಾಗಿ ಪರ್ಯವಸಾನವಾಗುತ್ತದೆ.
ದುಷ್ಯಂತ: ಋಷಿಗಳೇ, ಈ ಹೆಂಗಸಿನಲ್ಲಿ ನಂಬಿಕೆಯಿಟ್ಟು ನನ್ನ ಮೇಲೆ ಏಕೆ ಆರೋಪ ಹೊರಸುತ್ತೀರ?
ಶಾರ್ಙರವ: (ವ್ಯಂಗ್ಯವಾಗಿ) ಒಹೋ ನಿಮಗೆ ಅವಮಾನವಾಯಿತೋ! ಮೋಸದ ಕೊನೆಯನ್ನೂ ತಿಳಿಯದ ಇವಳ ಪ್ರಮಾಣ ಅಮಾನ್ಯ, ಯಾವಾಗಲೂ ಮೋಸವನ್ನೇ ಚಿಂತಿಸುವ ನಿಮ್ಮಂತಹ ರಾಜರ ಮಾತು ಮಾನ್ಯವೇ?
ದುಷ್ಯಂತ: ಒಹೋ, ಸತ್ಯವಾದಿಗಳೇ, ನಿಮ್ಮ ಮಾತನ್ನೇ ಒಪ್ಪೋಣ. ಆದರೆ ಇವಳಿಗೆ ಮೋಸ ಮಾಡಿ ನಮಗೆ ಸಿಗುವುದಾದರೂ ಏನು?
ಶಾರ್ಙರವ: ಅಧಃಪತನ.
ದುಷ್ಯಂತ: ಅಧಃಪತನವಾಗುವುದು ಪೌರವರಿಗೆ ಸಾಧ್ಯವೇ ಇಲ್ಲ. ಅದರಲ್ಲಿ ನನಗೆ ನಂಬಿಕೆಯೂ ಇಲ್ಲ.
ಶಾರದ್ವತ: ಶಾರ್ಙರವ, ಇವನಿಗೇನು ಉತ್ತರ ಕೊಡುವುದು? ಗುರುಗಳ ಸಂದೇಶವನ್ನು ಕೊಟ್ಟಾಯಿತು. ಹೊರಡೋಣ ನಡಿ.
(ರಾಜನಿಗೆ)
ಅಯ್ಯಾ ರಾಜ, ನಿನ್ನ ಹೆಂಡತಿ ಇಲ್ಲಿದ್ದಾಳೆ. ಒಪ್ಪಿಕೊ, ಇಲ್ಲ ಬಿಡು. ಹೆಂಡತಿಯರಲ್ಲಿ ಗಂಡನಿಗೆ ಎಲ್ಲ ಅಧಿಕಾರವಿದೆ.
ಗೌತಮಿ ನಡಿ ಹೋಗೋಣ.
ಶಕುಂತಲೆ: ಈ ಮೋಸಗಾರನಿಂದ ಬಿಟ್ಟವಳಾದೆ. ಈಗ ನೀವೂ ನನ್ನನ್ನು ಬಿಟ್ಟರೆ ಹೇಗೆ?
(ಅವರ ಹಿಂದೆ ಹೋಗಲು ಪ್ರಯತ್ನಿಸುತ್ತಾಳೆ)
ಗೌತಮಿ: (ನಿಂತು) ಮಗನೆ ಶಾರ್ಙರವ, ಶಕುಂತಲೆಯೂ ಅಳುತ್ತಾ ನಮ್ಮ ಜೊತೆಯೇ ಬರುತ್ತಿದ್ದಾಳೆ. ಗಂಡ ಮೋಸಮಾಡಿದರೆ ಪಾಪ, ನನ್ನ ಮಗಳು, ಇವಳೇನು ಮಾಡುತ್ತಾಳೆ?
ಶಾರ್ಙರವ: (ಕೋಪದಿಂದ ಹಿಂದೆ ಬಂದು) ಭಯವಿಲ್ಲದವಳೇ? ಏನು ಸ್ವಾತಂತ್ರ್ಯ ಬೇಕೇನು?
(ಶಕುಂತಲೆ ಭಯದಿಂದ ನಡುಗುತ್ತಾಳೆ)
ಶಕುಂತಲೆ, ನೀನು ರಾಜ ಹೇಳಿದಂತೆಯೇ ಆದರೆ, ತಂದೆಯ ಮನೆಗೆ ನಿನ್ನಿಂದೇನಾಗಬೇಕು? ನೀನು ಶುಚಿವಂತಳೇ ಆಗಿದ್ದರೆ ದಾಸಿಯಾದರೂ ನಿನಗೆ ಗಂಡನ ಮನೆಯೇ ಮೇಲು.
ಇಲ್ಲೇ ನಿಲ್ಲು. ನಾವು ಹೊರಡುತ್ತೇವೆ.
ದುಷ್ಯಂತ: ತಪಸ್ವಿಗಳೇ, ಇವರನ್ನು ಇಲ್ಲೇ ಏಕೆ ಬಿಟ್ಟು ಹೋಗುತ್ತಿದ್ದೀರಿ? ಚಂದ್ರ ನೈದಿಲೆಯನ್ನೇ ಅರಳಿಸುತ್ತಾನೆ, ಸೂರ್ಯ ಕಮಲವನ್ನೇ ಅರಳಿಸುತ್ತಾನೆ. ಸಂಯಮಿಗಳು ಬೇರೆಯವರ ವಸ್ತುವನ್ನು ಎಂದೂ ಬಯಸುವುದಿಲ್ಲ.
ಶಾರ್ಙರವ: ಒಂದು ಪಕ್ಷದಲ್ಲಿ ಇವಳನ್ನು ನೀನು ಪರಿಗ್ರಹಿಸಿರುವುದು ಮರೆತಿದ್ದರೂ, ನೀನು ಹೆಂಡತಿಯನ್ನು ಬಿಡುವುದು ಅಧರ್ಮವಲ್ಲವೇ?
ದುಷ್ಯಂತ: (ತನ್ನ ಪುರೋಹಿತನಿಗೆ) ನಾನು ನಿಮ್ಮನ್ನೇ ನ್ಯಾಯ ಕೇಳುತ್ತೇನೆ. ಈಗ ನಾನು ಮೋಸಮಾಡಿರಬೇಕು ಅಥವಾ ಇವರು ಸುಳ್ಳು ಹೇಳುತ್ತಿರಬೇಕು. ನಾನು ಮರೆತು ಹೆಂಡತಿಯನ್ನು ಬಿಡುವುದು ಸರಿಯೋ ಅಥವಾ ಪರಪತ್ನಿಯನ್ನು ಪರಿಗ್ರಹಿಸುವುದು ಸರಿಯೋ?
ಪುರೋಹಿತ: (ಯೋಚನೆಮಾಡಿ) ಹೀಗೆ ಮಾಡೋಣ.
ದುಷ್ಯಂತ: ಹೇಳಿ ಭಗವನ್.
ಪುರೋಹಿತ: ಭಗವತಿಯವರು ನನ್ನ ಮನೆಯಲ್ಲಿರಲಿ. ನಾನೇಕೆ ಹೀಗೆ ಹೇಳುತ್ತಿದ್ದೇನೆಂದರೆ, ನಿನಗೆ ಚಕ್ರವರ್ತಿಯಾಗುವ ಮಗ ಹುಟ್ಟುತ್ತಾನೆಂದು ಸಾಧುಗಳ ಭವಿಷ್ಯವಿದೆ. ಇವರಿಗೆ ನಿನಗೆ ಅನುರೂಪನಾದ ಮಗ ಹುಟ್ಟಿದ ಪಕ್ಷದಲ್ಲಿ ನೀನು ಇವರನ್ನು ಗೌರವದಿಂದ ಸತ್ಕರಿಸಿ ಪರಿಗ್ರಹಿಸು. ಇಲ್ಲದೆ ಇದ್ದರೆ ಅವರನ್ನು ಅವರ ತಂದೆಯ ಮನೆಗೆ ಕಳುಹಿಸೋಣ.
ದುಷ್ಯಂತ: ಗುರುಗಳು ಹೇಳಿದಂತೆ ಆಗಲಿ.
ಪುರೋಹಿತ: ಮಗಳೇ, ನನ್ನ ಜೊತೆ ಬಾ.
ಶಕುಂತಲೆ: ಅಮ್ಮ ಭೂಮಿ ನನಗೆ ಜಾಗ ಕೊಡು!
(ಜೋರಾಗಿ ಅಳುತ್ತಾ ಶಕುಂತಲೆ ಪುರೋಹಿತನ ಹಿಂದೆ ಹೋಗುತ್ತಾಳೆ)
(ಋಷಿಗಳು ಗೌತಮಿಯ ಜೊತೆ ನಿಷ್ಕ್ರಮಿಸುತ್ತಾರೆ)
(ದುಷ್ಯಂತ ಶಾಪಗ್ರಸ್ತನ ಸ್ಥಿತಿಯಲ್ಲಿ ಯೋಚನೆ ಮಾಡುತ್ತಾ ಕೂರುತ್ತಾನೆ)
(ನೇಪಥ್ಯದಲ್ಲಿ)
ಆಶ್ಚರ್ಯ!! ಆಶ್ಚರ್ಯ!!!
ದುಷ್ಯಂತ: (ಆ ಕಡೆ ಕಿವಿ ಕೊಡುತ್ತಾ) ಈಗೇನಾಯಿತು?
(ಮತ್ತೆ ಪುರೋಹಿತನ ಪ್ರವೇಶ)
ಪುರೋಹಿತ: (ಆಶ್ಚರ್ಯದಿಂದ) ಮಹಾರಾಜ ಅದ್ಭುತವೊಂದು ನಡೆಯಿತು.
ದುಷ್ಯಂತ: ಏನಾಯಿತು?
ಪುರೋಹಿತ: ಕಣ್ವಶಿಷ್ಯರು ಹೋದಮೇಲೆ ಆ ಬಾಲೆ ತನ್ನ ಭಾಗ್ಯವನ್ನು ನೆನಸಿಕೊಂಡು ಕೈಯೆತ್ತಿ ಜೋರಾಗಿ ಅಳಲು ಶುರು ಮಾಡಿದಳು.....
ದುಷ್ಯಂತ: ಆಮೇಲೆ?
ಪುರೋಹಿತ: ಆಗ ಅಪ್ಸರತೀರ್ಥದ ಹತ್ತಿರ ಒಂದು ಜ್ಯೋತಿ ಶಕುಂತಲೆಯನ್ನು ಎತ್ತಿಕೊಂಡು ಹೋಯಿತು.
(ಎಲ್ಲರೂ ವಿಸ್ಮಯರಾಗುತ್ತಾರೆ)
ದುಷ್ಯಂತ: ಭಗವನ್, ಇದರ ಬಗ್ಗೆ ಸಾಕಷ್ಟು ಚರ್ಚೆಮಾಡಿ ತೀರ್ಮಾನಿಸಿದ್ದೇವೆ. ಮತ್ತೆ ತರ್ಕವೇಕೆ? ವಿಶ್ರಮಿಸಿರಿ.
ಪುರೋಹಿತ: ಮಹಾರಾಜನಿಗೆ ಜಯವಾಗಲಿ.
(ನಿಷ್ಕ್ರಮಿಸುತ್ತಾನೆ)
ದುಷ್ಯಂತ: (ಪ್ರತೀಹಾರಿ ವೇತ್ರವತಿಗೆ) ವೇತ್ರವತಿ, ವಿಷಣ್ಣನಾಗಿದ್ದೇನೆ. ಶಯನದ ಮನೆಗೆ ಕರೆದೊಯ್ಯಿ.
ಪ್ರತೀಹಾರಿ: ಇತ್ತ, ಇತ್ತ ಮಹಾರಾಜ.
(ಮುಂದೆ ನಡೆಯುತ್ತಾ)
ದುಷ್ಯಂತ: (ಸ್ವಗತ) ಈ ಮುನಿತನಯಳನ್ನು ನಾನು ಎಂದೂ ಪರಿಗ್ರಹಿಸಿದ ನೆನಪೇ ಆಗುತ್ತಿಲ್ಲ. ಆದರೂ ಇವಳ ದುಃಖವನ್ನು ನೋಡಿದರೆ ಏನೋ ನೆನಪಾಗುತ್ತಿರುವಂತಿದೆ.
(ಎಲ್ಲರ ನಿರ್ಗಮನ)
(ಐದನೆಯ ದೃಶ್ಯವು ಸಮಾಪ್ತವಾದುದು)
No comments:
Post a Comment