ದೃಶ್ಯ ೬
(ಒಬ್ಬ ಅಧಿಕಾರಿ ಮತ್ತು ಇಬ್ಬರು ನಗರ ರಕ್ಷಕರ ಪ್ರವೇಶ. ರಕ್ಷಕರು ಒಬ್ಬನನ್ನು ಹಿಡಿದಿದ್ದಾರೆ)
ರಕ್ಷಕರು: (ಮನುಷ್ಯನನ್ನು ಹೊಡೆಯುತ್ತಾ) ಏ! ಕಳ್ಳ! ರಾಜಮುದ್ರೆಯುರುವ ಈ ಮಣಿಯುಂಗುರ ನಿನ್ನಲ್ಲಿ ಹೇಗೆ ಬಂತು?
ಮನುಷ್ಯ: (ಭಯವನ್ನು ನಟಿಸುತ್ತಾ) ಸ್ವಾಮಿ, ಸಮಾಧಾನ ಮಾಡಿಕೊಳ್ಳಿ. ನಾನು ಕಳ್ಳನಲ್ಲ.
ಮೊದಲ ರಕ್ಷಕ: ಮತ್ತೆ ಏನು? ರಾಜ ನಿನ್ನನ್ನು ಶ್ರೋತ್ರೀಯ ಬ್ರಾಹ್ಮಣ ಎಂದು ಗಣಿಸಿ ಇದನ್ನು ಕೊಟ್ಟನೇ?
ಮನುಷ್ಯ: ಕೇಳಿ, ನಾನು ಶಕ್ರಾವತಾರದ ನಿವಾಸಿ. ನಾನೊಬ್ಬ ಬೆಸ್ತ.
ಎರಡನೆಯ ರಕ್ಷಕ: ಏ! ನಾವೇನು ನಿನ್ನ ಜಾತಿ ಕೇಳಿದೆವಾ?
ಅಧಿಕಾರಿ: ಅವನೇನು ಹೇಳುತ್ತಾನೋ ಕೇಳೋಣ ಬಿಡಿ. ಮಧ್ಯ ಮಾತಾಡಬೇಡಿ.
ರಕ್ಷಕರು: ಅಪ್ಪಣೆ. (ಮನುಷ್ಯನಿಗೆ) ನೀನು ಹೇಳು.
ಮನುಷ್ಯ: ನಾನು ಬಲೇ ಬೀಸಿ ಮೀನು ಹಿಡಿದು ಸಂಸಾರವನ್ನು ಮಾಡುತ್ತಿದ್ದೇನೆ.
ಅಧಿಕಾರಿ: (ವ್ಯಂಗವಾಗಿ ನಗುತ್ತಾ) ಏನು ಶುದ್ಧವಾದ ಜೀವನ!
ಮನುಷ್ಯ: ಸ್ವಾಮಿ ಹಾಗೆನ್ನಬೇಡಿ. ಸ್ವಧರ್ಮವು ನಿಂದಿತವಾದರೂ ಬಿಡಬಾರದು. ಯಜ್ಞಕ್ಕಾಗಿ ಪಶುವಧೆ ಮಾಡುವ ಶ್ರೋತ್ರಿಯನನ್ನೂ ಮೃದು, ಅನುಕಂಪಿ ಎನ್ನುವುದಿಲ್ಲವೇ?
ಅಧಿಕಾರಿ: ಸರಿ ಸರಿ. ಮುಂದೆ ಹೇಳು.
ಮನುಷ್ಯ: ಒಂದು ದಿನ ಕೆಂಪು ಮೀನನ್ನು ಕೊಯ್ಯುತ್ತಿದ್ದೆ. ಅದರ ಹೊಟ್ಟೆಯೊಳಗೆ ಈ ರತ್ನಮಯವಾದ ಉಂಗುರವು ಸಿಕ್ಕಿತು. ಅದನ್ನು ವಿಕ್ರಯ ಮಾಡಲು ತಂದಾಗ ಈ ನಿಮ್ಮ ಸೈನಿಕರು ನೋಡಿದರು. ನೀವು ಹೊಡೆಯಿರಿ, ಬಿಡಿರಿ. ನಡೆದಿದ್ದು ಇಷ್ಟೇ.
ಅಧಿಕಾರಿ: ಈ ಉಂಗುರದ ವಾಸನೆ ನೋಡಿದರೆ ಇದು ಮೀನಿನ ಹೊಟ್ಟೆಯದೇ ಎಂಬುದು ನಿಸ್ಸಂಶಯ. ಇದನ್ನು ವಿಚಾರ ಮಾಡಬೇಕು. ರಾಜನ ಮನೆಗೇ ಹೋಗೋಣ.
ರಕ್ಷಕರು: ಸರಿ. ಮುಂದೆ ನಡೆಯೋ ಮನೆಹಾಳ.
(ಎಲ್ಲರೂ ಮುಂದೆ ಹೋಗುತ್ತಾರೆ)
ಅಧಿಕಾರಿ: ಸೂಚಕ, ಇವನ್ನು ಹಿಡಿದು ಈ ಗೋಪುರದ್ವಾರದಲ್ಲೇ ನಿಂತಿರು. ಈ ಉಂಗುರದ ಕಥೆಯನ್ನು ರಾಜರಿಗೆ ಹೇಳಿ ಅವರ ಆಜ್ಞೆಪಡೆದು ಬರುತ್ತೇನೆ.
ರಕ್ಷಕರು: ಸ್ವಾಮಿಗಳಿಗೆ ರಾಜಪ್ರಸಾದ ಸಿಗಲಿ.
(ಅಧಿಕಾರಿಯ ನಿಷ್ಕ್ರಮನ)
(ಸ್ವಲ್ಪಹೊತ್ತಾದ ಮೇಲೆ)
ಮೊದಲ ರಕ್ಷಕ: ಜಾನುಕ, ಸ್ವಾಮಿ ಎಷ್ಟು ಹೊತ್ತಾದರೂ ಬರಲಿಲ್ಲವಲ್ಲ.
ಎರಡನೆಯವ: ರಾಜರಿಗೆ ಸಮಯವಿದ್ದಾಗ ಮಾತ್ರ ಅವರನ್ನು ನೋಡಬೇಕು.
ಮೊದಲನೆಯವ: ಜಾನುಕ, ಈ ಮನೆಹಾಳನನ್ನು ಕೊಲ್ಲಲು ನನ್ನ ಕೈಗಳು ಕಾಯುತ್ತಿವೆ.
(ಮನುಷ್ಯನನ್ನು ತೋರಿಸುತ್ತಾನೆ)
ಮನುಷ್ಯ: ಅಯ್ಯೋ, ಸ್ವಾಮಿ ಅಕಾರಣವಾಗಿ ನನ್ನನ್ನು ಕೊಲ್ಲಬೇಡಿ.
ಎರಡನೆಯವ: ಏ, ನಮ್ಮ ಅಧಿಕಾರಿಗಳು ರಾಜರ ಆಜ್ಞೆಯನ್ನು ಪಡೆದು ಬರಲಿ. ನೀನು ಹದ್ದುಗಳಿಗೆ ಬಲಿಯಾಗುತ್ತೀಯ, ಇಲ್ಲ ನಿನ್ನನ್ನು ನಾಯಿಗಳಿಗೆ ಹಾಕುತ್ತೀವಿ.
(ಅಧಿಕಾರಿಯ ಪ್ರವೇಶ)
ಅಧಿಕಾರಿ: ಸೂಚಕ, ಈ ಬಡಪಾಯಿಯನ್ನು ಬಿಟ್ಟುಬಿಡಿ. ಈ ಉಂಗುರದ ಕಥೆ ಗೊತ್ತಾಯಿತು.
ಸೂಚಕ: ನಿಮ್ಮ ಅಪ್ಪಣೆ. ಇವನು ಯಮನ ಬಾಗಿಲಿಗೆ ಹೋಗಿ ಹೊರಕ್ಕೆ ಬಂದ.
(ಅವನನ್ನು ಬಿಡುತ್ತಾರೆ)
ಮನುಷ್ಯ: (ಅಧಿಕಾರಿಗೆ ನಮಸ್ಕಾರ ಮಾಡಿ) ಸ್ವಾಮಿ, ನನ್ನ ಜೀವ ನಿಮಗೆ ಋಣಿ.
ಅಧಿಕಾರಿ: ಸ್ವಾಮಿಗಳು ಈ ಉಂಗುರವನ್ನು ಪಡೆದು, ಅದಕ್ಕೆ ಸಮನಾದ ಹಣವನ್ನೂ ಕೊಟ್ಟಿದ್ದಾರೆ. ತೆಗೆದುಕೋ.
(ಅವನಿಗೆ ಕೊಡುತ್ತಾನೆ)
ಮನುಷ್ಯ: (ನಮಸ್ಕಾರ ಮಾಡಿ ಸ್ವೀಕರಿಸಿ) ಅನುಗ್ರಹೀತನಾದೆ.
ಸೂಚಕ: ಇವನನ್ನು ಶೂಲದಿಂದ ತೆಗೆದು ಆನೆಯ ಮೇಲೆ ಕೂರಿಸಿದಂತಾಯಿತು.
ಜಾನುಕ: ಸ್ವಾಮಿ ಈ ಪಾರಿತೋಷಕವನ್ನು ನೋಡಿದರೆ ರಾಜರಿಗೆ ತುಂಬಾ ಸಂತೋಷವಾದಂತಿದೆ.
ಅಧಿಕಾರಿ: ರಾಜರು ಈ ಉಂಗುರದ ಬೆಲೆಯನ್ನು ಗಮನಿಸಿದ್ದಾರೆಂದು ನನಗೆ ಅನಿಸುವುದಿಲ್ಲ. ಇದನನ್ನು ನೋಡಿ ರಾಜರು ಯಾರೋ ಇಷ್ಟವಾದವರನ್ನು ನೆನಪಿಸಿಕೊಂಡರು. ಸ್ವಲ್ಪ ಹೊತ್ತು ಗಂಭೀರವಾಗಿ ಕುಳಿತಿದ್ದರು. ಕಣ್ಣಿನಲ್ಲಿ ನೀರಿತ್ತು.
ಸೂಚಕ: ಸ್ವಾಮಿಗಳು ಶ್ರಮಪಟ್ಟಂತಾಯಿತು.
ಜಾನುಕ: ಹೌದು, ಅದೂ ಇವನ ಕಾರಣದಿಂದ.
(ಬೆಸ್ತನ ಕಡೆ ಅಸೂಯೆಯಿಂದ ನೋಡುತ್ತಾನೆ)
ಮನುಷ್ಯ: ಸ್ವಾಮಿ, ಇದರಲ್ಲಿ ಅರ್ಧಭಾಗ ನಿಮ್ಮ ಹೂವಿನ ಖರ್ಚಿಗೆ ಇರಲಿ.
ಜಾನುಕ: ಇದು ಸರಿಯಾಯಿತು.
ಅಧಿಕಾರಿ: ಬೆಸ್ತ, ಈಗ ನೀನು ನನಗೆ ಎಂಥ ಒಳ್ಳೆ ಸ್ನೇಹಿತನಾಗಿಬಿಟ್ಟೆ. ಹೆಂಡದ ಸಾಕ್ಷಿಯಾಗಿ ನಮ್ಮ ಸ್ನೇಹದ ಮೊದಲ ಸೌಹಾರ್ದವನ್ನು ಮಾಡೋಣ. ನಡಿ, ಅಂಗಡಿಗೆ ಹೋಗೋಣ.
(ಎಲ್ಲರೂ ನಿಷ್ಕ್ರಮಿಸುತ್ತಾರೆ)
(ಆಕಾಶದಲ್ಲಿ ಸಾನುಮತಿ ಎಂಬ ಅಪ್ಸರೆಯ ಪ್ರವೇಶ)
ಸಾನುಮತಿ: ಈಗ ಸಾಧುಗಳು ಅಪ್ಸರತೀರ್ಥದಲ್ಲಿ ಪುಣ್ಯಸ್ನಾನ ಮಾಡುವ ಕಾಲ. ಹೇಗೂ ಬಂದಿದ್ದೇನೆ, ಈ ರಾಜರ್ಷಿಯನ್ನು ಒಂದು ಬಾರಿ ನೋಡಿಕೊಂಡು ಹೋಗೋಣ. ಮೇನಕೆಯ ಸಂಬಂಧದಿಂದ ಶಕುಂತಲೆ ನನಗೂ ಆತ್ಮೀಯಳೇ. ಅವಳ ತಾಯಿ ಇವನನ್ನು ನೋಡಲು ಹೇಳಿಯೂ ಇದ್ದಾಳೆ.
(ಸುತ್ತ ನೋಡುತ್ತಾ)
ಇದೇನು ಪರ್ವ ಸಮಯದಲ್ಲಿ ರಾಜಕುಲ ಇನ್ನೂ ಉತ್ಸವವನ್ನು ಆರಂಭಿಸಿದಂತೆ ಕಾಣುವುದಿಲ್ಲವಲ್ಲ. ನನ್ನ ದಿವ್ಯಶಕ್ತಿಯಿಂದ ಎಲ್ಲವನ್ನೂ ತಿಳಿಯಬಹುದು, ಆದರೂ ನನ್ನ ಸಖಿಯ ಮಾತನ್ನು ಗೌರವಿಸಬೇಕು. ನೋಡಿಕೊಂಡೇ ಹೋಗೋಣ. ಮಾಯವಾಗಿ, ಈ ಉದ್ಯಾನಪಾಲಿಕೆಯರ ಪಕ್ಕದಲ್ಲಿ ಕೂತು ಕೇಳಿಸಿಕೊಳ್ಳುತ್ತೇನೆ.
(ಹಾಗೆಯೇ ನಿಂತುಕೊಳ್ಳುತ್ತಾಳೆ)
(ಮಾವಿನ ಚಿಗುರನ್ನು ನೋಡುತ್ತಾ ಚೇಟಿಯ ಪ್ರವೇಶ, ಅವಳ ಹಿಂದೆ ಮತ್ತೊಬ್ಬಳು)
ಮೊದಲನೆಯವಳು: (ಸ್ವಗತ) ಕೋಗಿಲೆಗಳನ್ನು ಸಂತೋಷಗೊಳಿಸುವ ಈ ಮಾವಿನ ಮರದ ಚಿಗುರು ವಸಂತಮಾಸದ ಮೊದಲ ಮಂಗಳಕರವಾದ ಸೂಚನೆ.
ಎರಡನೆಯವಳು: ಪರಭೃತಿಕೆ, ಒಬ್ಬಳೇ ಏನನ್ನು ಯೋಚಿಸುತ್ತಿದ್ದೀಯ?
ಪರಭೃತಿಕೆ: ಮಧುಕರಿಕೆ, ಈ ಮಾವಿನ ಚಿಗುರನ್ನು ನೋಡಿ ಕೋಗಿಲೆ ಎಷ್ಟು ಸಂತೋಷವಾಗಿದೆ.
ಮಧುಕರಿಕೆ: (ಹತ್ತಿರ ಬಂದು) ಒಹೋ! ವಸಂತ ಮಾಸ ಬಂದುಬಿಟ್ಟಿತೇ?
ಪರಭೃತಿಕೆ: ಮಧುಕರಿಕೆ, ಹೌದು, ನಮ್ಮ ಮದವಿಭ್ರಮ ಗೀತೆಗಳಿಗೆ ಇದೇ ಕಾಲ.
ಮಧುಕರಿಕೆ: ನನ್ನನ್ನು ಹಿಡಿದುಕೊ, ಮರಹತ್ತಿ, ಚಿಗುರನ್ನು ಬಿಡಿಸಿ, ಕಾಮದೇವನನ್ನು ಅರ್ಚನೆ ಮಾಡುತ್ತೇನೆ.
ಪರಭೃತಿಕೆ: ನಿನ್ನ ಅರ್ಚನೆಯ ಫಲದಲ್ಲಿ ನನಗೂ ಅರ್ಧ ಕೊಡಬೇಕು.
ಮಧುಕರಿಕೆ: ಅಯ್ಯೋ, ನೀನು ಕೇಳದಿದ್ದರೂ ನಾನು ಕೊಡುತ್ತೇನೆ. ನಮ್ಮಿಬ್ಬರದೂ ಎರಡು ದೇಹವಾದರೂ ಒಂದೇ ಜೀವ.
(ಗೆಳತಿಯನ್ನು ಹಿಡಿದು ಚಿಗುರನ್ನು ಬಿಡಿಸುತ್ತಾಳೆ)
ಒಹ್! ಪೂರ್ಣವಾಗಿ ಅರಳದಿದ್ದರೂ ಈ ಹೂ ಸುವಾಸನೆಯನ್ನು ಬೀಸುತ್ತಿದೆ.
(ಚಿಗುರನ್ನು ಎರೆಡೂ ಕೈಗಳಲ್ಲಿ ಹಿಡಿದು)
ಧನಸ್ಸನ್ನು ಹಿಡಿದ ಮನ್ಮಥನೇ, ನನ್ನಿಂದ ಬಿಡಿಸಿದ ಈ ಮಾವಿನ ಚಿಗುರನ್ನು ಕೊಡುತ್ತಿದ್ದೇನೆ. ಯುವತಿಯರಿಗಾಗಿ ಇರುವ ನಿನ್ನ ಐದು ಬಾಣಗಳ ಜೊತೆ ಇದು ನಿನಗೆ ಆರನೇ ಬಾಣವಾಗಲಿ.
(ಹೀಗೆ ಹೇಳಿ ಚಿಗುರನ್ನು ಅರ್ಘ್ಯ ಕೊಡುವಂತೆ ಕೆಳಗೆ ಹಾಕುತ್ತಾಳೆ)
(ತಕ್ಷಣ ತೆರೆಯನ್ನು ಸರಿಸಿ ಕುಪಿತನಾದ ಕಂಚುಕಿಯ ಪ್ರವೇಶ)
ಕಂಚುಕಿ: ಬುದ್ಧಿಯಿಲ್ಲದವಳೇ, ನಿಲ್ಲಿಸು! ರಾಜರಿಂದ ವಸಂತೋತ್ಸವ ನಿಷಿದ್ಧವಾಗಿರುವಾಗ ಮಾವಿನ ಚಿಗುರನ್ನೇಕೆ ಕೀಳುತ್ತಿದ್ದೀಯ?
ಇಬ್ಬರೂ: (ಭೀತರಾಗಿ) ಆರ್ಯ ಸಮಾಧಾನ ಮಾಡಿಕೊಳ್ಳಿ, ನಮಗೆ ತಿಳಿದಿರಲಿಲ್ಲ.
ಕಂಚುಕಿ: ರಾಜನ ಆಜ್ಞೆಯನ್ನು, ಪಕ್ಷಿಗಳೂ, ತರುಗಳೂ ಅನುಸರಿಸುತ್ತಿರುವಾಗ, ಅದು ನಿಮಗೆ ತಿಳಿದಿಲ್ಲವೇ? ಮಾವಿನ ಮರಗಳು ಇನ್ನೂ ಚಿಗುರಿಲ್ಲ. ಕುರಬಕ ಬಳ್ಳಿಗಳು ಮೊಗ್ಗು ಬಿಟ್ಟಿದ್ದರೂ, ಇನ್ನೂ ಅರಳಿಲ್ಲ. ಕೋಗಿಲೆಗಳು ತಮ್ಮ ಹಾಡನ್ನು ಕಂಠದಲ್ಲೇ ಹುದುಗಿಸಿವೆ. ಮನ್ಮಥನೂ ಶಂಕೆಯಿಂದ ಎತ್ತಿದ ಬಿಲ್ಲನ್ನು ತನ್ನ ಬತ್ತಳಿಕೆಯಲ್ಲಿ ಸೇರಿಸುತ್ತಿದ್ದಾನೆ.
ಸಾನುಮತಿ: ಸಂದೇಹವಿಲ್ಲ. ರಾಜರ್ಷಿ ಮಹಾಪ್ರಭಾವಿಯೇ!
ಪರಭೃತಿಕೆ: ಆರ್ಯ, ನಾವು ಸ್ವಲ್ಪ ದಿನದ ಹಿಂದೆಯಷ್ಟೇ ರಾಜರ ಭಾವಮೈದುನರಾದ ಮಿತ್ರಾವಸುಗಳಿಂದ ಇಲ್ಲಿಗೆ ಕಳುಹಿಸಲ್ಪಟ್ಟೆವು. ಅಂದಿನಿಂದ ನಾವು ಈ ವನವನ್ನು ಪಾಲನೆ ಮಾಡುತ್ತಿದ್ದೇವೆ. ಆದ್ದರಿಂದ ನಮಗೆ ಈ ವೃತ್ತಾಂತ ತಿಳಿದಿಲ್ಲ.
ಕಂಚುಕಿ: ಇರಲಿ. ಇನ್ನು ಮುಂದೆ ಹೀಗೆ ಮಾಡಬೇಡಿ.
ಇಬ್ಬರೂ: ಆರ್ಯ, ನಮಗೆ ಕುತೂಹಲವಾಗಿದೆ. ನಾವು ಕೇಳಬಹುದಾದರೆ ಹೇಳಿ. ರಾಜರಿಂದ ವಸಂತೋತ್ಸವ ಏಕೆ ನಿಷಿದ್ಧವಾಗಿದೆ?
ಸಾನುಮತಿ: ಮನುಷ್ಯರು ಉತ್ಸವಪ್ರಿಯರು. ಏನೋ ಬಲವಾದ ಕಾರಣವಿರಬೇಕು.
ಕಂಚುಕಿ: ಏಕಾಗಬಾರದು? ಇದು ಆಗಲೇ ಎಲ್ಲರಿಗೂ ತಿಳಿದಿದೆ. ಶಕುಂತಲೆಯ ಕಥೆ ನಿಮ್ಮ ಕಿವಿಗೆ ಬಿದ್ದಿಲ್ಲವೇ?
ಇಬ್ಬರೂ: ಮುಖ್ಯರಿಂದ, ಉಂಗುರದ ದರ್ಶನದ ಬಗ್ಗೆ ಕೇಳಿದ್ದೇವೆ.
ಕಂಚುಕಿ: ಹಾಗಾದರೆ ನೀವು ಕೇಳುವುದು ಇನ್ನೂ ಸ್ವಲ್ಪ ಇದೆ. ಆ ಉಂಗುರವನ್ನು ನೋಡಿದ ಕೂಡಲೇ ನಮ್ಮ ರಾಜರಿಗೆ ಸತ್ಯವತಿಯಾದ ಶಕುಂತಲೆಯನ್ನು ಪೂರ್ವದಲ್ಲಿ ರಹಸ್ಯವಾಗಿ ಮದುವೆಯಾದದ್ದು ಜ್ಞಾಪಕಕ್ಕೆ ಬಂದಿತು. ಆಗಿನಿಂದ ರಾಜರು ಪಶ್ಚಾತ್ತಾಪ ಪಡುತ್ತಿದ್ದಾರೆ. ಅಂದಿನಿಂದ ಅವರಿಗೆ ಪ್ರಕೃತಿಯ ಮೇಲೆ ಆಸೆಯಿಲ್ಲ. ಪ್ರಜೆಗಳ ಮೇಲೆ ಮನಸ್ಸಿಲ್ಲ. ಹಾಸಿಗೆಯ ಮೇಲೆ ಹೊರಳಾಡುತ್ತಲೇ ತನ್ನ ರಾತ್ರಿಯನ್ನು ಕಳೆಯುತ್ತಿದ್ದಾರೆ. ಅಂತಃಪುರದ ಸ್ತ್ರೀಯರು ಮಾತನಾಡಿಸಿದರೆ ದಾಕ್ಷಿಣ್ಯದಿಂದಲೇ ಮಾತಾಡಿಸುತ್ತಿದ್ದಾರೆ. ಅವರ ಹೆಸರುಗಳನ್ನೂ ತಪ್ಪಾಗಿ ಹೇಳಿ ಮತ್ತೆ ಅದಕ್ಕೆ ಪಶ್ಚಾತ್ತಾಪ ಪಡುತ್ತಿದ್ದಾರೆ.
ಸಾನುಮತಿ: ನನಗೆ ಪ್ರಿಯವಾಗಿದೆ.
ಕಂಚುಕಿ: ಆದ್ದರಿಂದಲೇ ಪ್ರಭುಗಳ ವೈಮನಸ್ಸಿನಿಂದ ಉತ್ಸವಗಳನ್ನು ನಿಲ್ಲಿಸಲಾಗಿದೆ.
ಇಬ್ಬರೂ: ಸರಿಯಾಗಿದೆ.
(ನೇಪಥ್ಯದಲ್ಲಿ)
ಇಲ್ಲಿ, ಇಲ್ಲಿ, ಭಗವನ್!
ಕಂಚುಕಿ: (ಆ ಕಡೆ ಕಿವಿಕೊಡುತ್ತಾ) ಒಹ್! ರಾಜರು ಬರುತ್ತಿದ್ದರೆ. ನಿಮ್ಮ ನಿಮ್ಮ ಕೆಲಸದಲ್ಲಿ ತೊಡಗಿ.
ಇಬ್ಬರೂ: ಹಾಗೆಯೇ ಆಗಲಿ.
(ನಿಷ್ಕ್ರಮಿಸುತ್ತಾರೆ)
(ಪ್ರತೀಹಾರಿ, ವಿದೂಷಕರ ಜೊತೆ ಪಶ್ಚಾತ್ತಾಪದಿಂದಿರುವ ರಾಜನ ಪ್ರವೇಶ)
ಕಂಚುಕಿ: (ರಾಜನನ್ನು ನೋಡಿ) ಒಹ್! ಸರ್ವಾವಸ್ಥೆಯಲ್ಲಿಯೂ ಕೆಲವರು ರಮಣೀಯವಾಗಿರುತ್ತಾರೆ. ಉತ್ಸುಕನಾಗಿದ್ದರೂ ನಮ್ಮ ಮಹಾರಾಜ ಪ್ರಿಯದರ್ಶನನಾಗಿದ್ದಾನೆ. ತನ್ನ ಸಹಜವಾದ ರಾಜ ಪೋಷಾಕನ್ನು ಬಿಟ್ಟು, ತನ್ನ ಎಡಗೈಗೆ ಕೇವಲ ಒಂದು ಬಂಗಾರದ ಆಭರಣವನ್ನು ಹಾಕಿಕೊಂಡಿದ್ದಾನೆ. ನಿಟ್ಟುಸಿರು ಬಿಡುತ್ತಾ ಕಣ್ಣುಗಳು ನಿದ್ದೆಯಿಲ್ಲದೆ ಸ್ವಲ್ಪ ಕಾಂತಿಯನ್ನು ಕಳೆದುಕೊಂಡಿವೆ. ಆದರೂ ಸಂಸ್ಕಾರ ಮಾಡಿದ ವಜ್ರದಂತೆ ಅದು ಎದ್ದು ಕಾಣುತ್ತಿಲ್ಲ.
ಸಾನುಮತಿ: (ರಾಜನನ್ನು ನೋಡಿ) ತಿರಸ್ಕರಿಸಲ್ಪಟ್ಟರೂ, ಇಂಥವನಿಗಾಗಿ ಶಕುಂತಲೆ ವ್ಯಥೆಪಡುತ್ತಿರುವುದು ಸರಿಯಾಗಿಯೇ ಇದೆ!
ದುಷ್ಯಂತ: (ನಿಧಾನವಾಗಿ ನಡೆಯುತ್ತಾ, ಧ್ಯಾನಾಸಕ್ತನಾಗಿ) ಮೊದಲು ಅವಳು ಎಚ್ಚರಿಸಿದರೂ ಸುಪ್ತವಾಗಿದ್ದ ನನ್ನ ಮನಸ್ಸು ಇಂದು ಅವಳ ವಿರಹದಿಂದ ಎಚ್ಚರವಾಗಿದೆ!
ಸಾನುಮತಿ: ನಮ್ಮ ಶಕುಂತಲೆಗೆ ಭಾಗ್ಯದ ದಿನಗಳು ಬಂದಂತಿದೆ.
ವಿದೂಷಕ: (ಪಕ್ಕದಲ್ಲಿ) ನಮ್ಮ ರಾಜನಿಗೆ ಶಕುಂತಲೆಯ ಖಾಯಿಲೆ ಬಂದುಬಿಟ್ಟಿದೆ. ಇದು ಇನ್ನು ಯಾವಾಗ ವಾಸಿಯಾಗುತ್ತದೆಯೋ ನನಗೆ ಗೊತ್ತಿಲ್ಲ!
ಕಂಚುಕಿ: (ಹತ್ತಿರ ಬಂದು) ಮಹಾರಾಜರಿಗೆ ಜಯವಾಗಲಿ. ಮಹಾರಾಜ, ಈ ಪ್ರಮದಾವನವನ್ನು ಸಿಂಗರಿಸಲಾಗಿದೆ. ತಾವು ಇಷ್ಟ ಬಂದಷ್ಟು ಹೊತ್ತು ಇಲ್ಲಿ ಕಾಲ ಕಳೆಯಬಹುದು.
ದುಷ್ಯಂತ: ವೇತ್ರವತಿ, ನಾನು ಹೇಳಿದೆನೆಂದು ಅಮಾತ್ಯ ಆರ್ಯಾಪಿಶುಣರಿಗೆ ಹೇಳು: ಮನಸ್ಸು ಸರಿಯಾಗಿಲ್ಲದ ಕಾರಣ ನಾನು ಇಂದು ಧರ್ಮಾಸನವನ್ನು ಏರಲು ಸಾಧ್ಯವಿಲ್ಲ. ಯಾವುದಾದರೂ ಪೌರಕಾರ್ಯವಿದ್ದರೆ ಅದನ್ನು ಪತ್ರದ ಮೂಲಕ ನನಗೆ ತಿಳಿಸಲಿ.
ಪ್ರತೀಹಾರಿ: ಅಪ್ಪಣೆ.
(ನಿಷ್ಕ್ರಮಿಸುತ್ತಾಳೆ)
ದುಷ್ಯಂತ: (ಕಂಚುಕಿಗೆ) ನೀನೂ ನಿನ್ನ ಕೆಲಸವನ್ನು ನೋಡಿಕೋ.
ಕಂಚುಕಿ: ಅಪ್ಪಣೆ ಸ್ವಾಮಿ.
(ನಿಷ್ಕ್ರಮಿಸುತ್ತಾನೆ)
ವಿದೂಷಕ: ಎಲ್ಲ ಸೊಳ್ಳೆಗಳನ್ನೂ ಓಡಿಸಿದ್ದಾಯಿತು. ಬಿಸಿಲನ್ನು ಓಡಿಸಿ ತಂಪಾಗಿರುವ ಈ ಪ್ರಮದಾವನದಲ್ಲಿ ಮನಸ್ಸನ್ನು ಹದಮಾಡಿಕೊ.
ದುಷ್ಯಂತ: ಮಾಧವ್ಯ, ಅನರ್ಥಗಳು ದುರ್ಬಲ ಸ್ಥಳಗಳಲ್ಲೇ ನುಗ್ಗುತ್ತವೆ ಎಂದು ಹೇಳುತ್ತಾರೆ. ಶಕುಂತಲೆಯ ಮರೆವಿನಿಂದ ನನಗೆ ಬಿಡುಗಡೆ ಸಿಕ್ಕಿದೆ. ಆದರೆ, ಈಗ ಮನ್ಮಥ ತನ್ನ ಬಿಲ್ಲಿಗೆ ಈ ಮಾವಿನ ಮರದ ಚಿಗುರಿನ ಬಾಣವನ್ನು ಹೂಡಿದ್ದಾನೆ.
ವಿದೂಷಕ: ಸ್ವಲ್ಪ ಇರು. ಈ ಕೋಲಿನಿಂದ ಮನ್ಮಥನ ಬಾಣವನ್ನು ಮುರಿಯುತ್ತೇನೆ.
(ಎದ್ದು ಕೋಲು ಹಿಡಿದು ಮಾವಿನ ಚಿಗುರನ್ನು ಕೀಳಲು ಯತ್ನಿಸುತ್ತಾನೆ)
ದುಷ್ಯಂತ: (ನಗುತ್ತಾ) ಇರಲಿ ಬಿಡು. ನಿನ್ನ ಬ್ರಹ್ಮವರ್ಚಸ್ಸನ್ನು ನೋಡಿದ್ದೇನೆ. ಮಾಧವ್ಯ, ಎಲ್ಲಿ ಕೂರೋಣ? ಶಕುಂತಲೆಯನ್ನು ಜ್ಞಾಪಿಸಿ ಅಣಕಿಸುವಂತಿರುವ ಈ ಮರಗಳಿಂದ ನನ್ನ ದೃಷ್ಟಿಯನ್ನು ಬೇರೆ ಕಡೆ ತಿರುಗಿಸಬೇಕು.
ವಿದೂಷಕ: ನಾನು ಈ ಸಮಯದಲ್ಲಿ ಮಾಧವೀ ಮಂಟಪದ ಬಳಿ ಇರುತ್ತೇನೆ, ಅಲ್ಲಿಗೆ ನನ್ನ ಕೈಯಿಂದಲೇ ಬರೆದ ಶಕುಂತಲೆಯ ಚಿತ್ರವನ್ನು ತೆಗೆದುಕೊಂಡು ಬಾ ಎಂದು ನಿನ್ನ ಪರಿಚಾರಿಕೆ ಚತುರಿಕೆಗೆ ಹೇಳಿದ್ದೆಯಲ್ಲ. ಅಲ್ಲಿಗೆ ಹೋಗೋಣ.
ದುಷ್ಯಂತ: ಅದೇ ನನ್ನ ಹೃದಯವಿನೋದ ಸ್ಥಾನ. ಅದರ ದಾರಿಯೆಲ್ಲಿ?
ವಿದೂಷಕ: (ದಾರಿ ತೋರಿಸುತ್ತಾ) ಇತ್ತ, ಇತ್ತ.
(ಇಬ್ಬರೂ ಮುಂದೆ ಹೋಗುತ್ತಾರೆ. ಸಾನುಮತಿ ಅವರನ್ನು ಹಿಂಬಾಲಿಸುತ್ತಾಳೆ.)
ಈ ಮಾಧವೀ ಮಂಟಪ ಮಣಿಶಿಲೆಯ ಆಸನದಿಂದ ನಮ್ಮನ್ನೇ ಆದರದಿಂದ ಕಾಯುತ್ತಿರುವಂತಿದೆ. ಒಳಗೆ ಬಂದು ಇಲ್ಲಿ ಕುಳಿತುಕೋ.
(ಇಬ್ಬರೂ ಒಳಗೆ ಬಂದು ಕೂರುತ್ತಾರೆ)
ಸಾನುಮತಿ: ಈ ಬಳ್ಳಿಗಳ ನಡುವೆ ಅವಿತುಕೊಂಡು ಶಕುಂತಲೆಯ ಚಿತ್ರವನ್ನು ನೋಡಿ, ಅವಳಿಗೆ ತನ್ನ ಗಂಡನ ಬಹುಮುಖವಾದ ಅನುರಾಗವನ್ನು ತಿಳಿಸುತ್ತೇನೆ.
(ಅವಿತು ನಿಲ್ಲುತ್ತಾಳೆ)
ದುಷ್ಯಂತ: ಮಾಧವ್ಯ, ಶಕುಂತಲೆಯ ಪ್ರಥಮ ವೃತ್ತಾಂತ ನೆನಪಿಗೆ ಬರುತ್ತಿದೆ. ಅದನ್ನು ನಿನಗೂ ಹೇಳಿದ್ದೇನೆ. ನಾನು ಅವಳನ್ನು ವಾಪಸ್ಸು ಕಳಿಸಿದಾಗ ನೀನು ಇರಲಿಲ್ಲ. ಹಿಂದೆ ಯಾವಾಗಲೂ ನೀನೂ ಅವಳ ಹೆಸರನ್ನೂ ಎತ್ತಲಿಲ್ಲ. ನಿನಗೂ ಮರೆತುಹೋಯಿತೇ?
ವಿದೂಷಕ: ಮರೆತಿಲ್ಲ. ಆದರೆ ನೀನು ಅಂದು ಎಲ್ಲ ಹೇಳಿ, "ಇದು ತಮಾಷೆಗಾಗಿ ಹೇಳಿದ್ದು, ಇದರಲ್ಲಿ ನಿಜವಿಲ್ಲ" ಎಂದೆ. ನನ್ನ ಮಂಕುಬುದ್ಧಿಯಿಂದ ನಾನು ಅದನ್ನೇ ನಂಬಿದೆ. ಅಥವಾ ವಿಧಿ ಬಲವಾದುದೇ!
ಸಾನುಮತಿ: ವಿಧಿ ಬಲವಾದುದೇ!
ದುಷ್ಯಂತ: (ಸ್ವಲ್ಪ ಹೊತ್ತು ಧ್ಯಾನ ಮಾಡಿ, ಶೋಕಿತನಾಗುತ್ತಾನೆ) ಮಾಧವ್ಯಾ, ನನ್ನನ್ನು ಕಾಪಾಡು!
ವಿದೂಷಕ: ಇದೇನಾಯಿತು? ನಿನಗೆ ಈ ಶೋಕ ಸರಿಯಲ್ಲ. ಸತ್ಪುರುಷರು ಬಿರುಗಾಳಿಗೂ ಅಲ್ಲಾಡದ ಬೆಟ್ಟಗಳಂತೆ ಎಂದಿಗೂ ಶೋಕವ್ಯಸನರಾಗುವುದಿಲ್ಲ.
ದುಷ್ಯಂತ: ಮಾಧವ್ಯ, ನನ್ನಿಂದ ನಿರಾಕರಿಸಲ್ಪಟ್ಟ ಶಕುಂತಲೆಯ ಅವಸ್ಥೆಯನ್ನು ನೆನಪಿಸಿಕೊಂಡು ನನಗೆ ಶೋಕ ಉಮ್ಮಳಿಸುತ್ತಿದೆ. ಅಂದು ನಾನು ಅವಳನ್ನು ನಿರಾಕರಿಸಿದಾಗ, ಅವಳು ಗುರುಸಮರಾದ ಗುರುಶಿಷ್ಯರೊಡನೆ ವಾಪಸ್ಸು ಹೋಗಲು ಅವರನ್ನು ಜೋರಾಗಿ ಕೂಗಿ ನಿಲ್ಲಲು ಹೇಳಿ, ಮತ್ತೆ ನನ್ನನ್ನು ನೀರು ತುಂಬಿದ ಕಣ್ಣುಗಳಿಂದ ಹಿಂತಿರುಗಿ ನೋಡುತ್ತಿದ್ದಳು. ಅದೆಲ್ಲವನ್ನೂ ನೆನಪಿಸಿಕೊಂಡರೆ ಕ್ರೂರನಾದ ನನಗೆ ವಿಷ ಸೋಂಕಿದ ಶಲ್ಯದಿಂದ ಇರಿದಂತಾಗುತ್ತಿದೆ.
ಸಾನುಮತಿ: ಒಹ್! ಇದೆಲ್ಲಿಯ ಸ್ವಾರ್ಥ! ಇವನ ಸಂತಾಪವನ್ನು ನೋಡಿ ನನಗೆ ಸಂತೋಷವಾಗುತ್ತಿದೆ.
ವಿದೂಷಕ: ರಾಜ, ಯಾರೋ ಆಕಾಶದಲ್ಲಿ ಓಡಾಡುವವರು ಶಕುಂತಲೆಯನ್ನು ಕರೆದುಕೊಂಡು ಹೋಗಿದ್ದಾರೆಂದು ನನ್ನ ತರ್ಕ.
ದುಷ್ಯಂತ: ಗಂಡನು ತಿರಸ್ಕರಿಸಿದ ಅವಳನ್ನು ಇನ್ನು ಯಾರು ಕರೆದುಕೊಂಡು ಹೋಗಲು ಇಷ್ಟಪಡುತ್ತಾರೆ? ಅವಳ ಸಖಿಯರಿಂದ ಮೇನಕೆಯೇ ಅವಳ ತಾಯಿಯೆಂದು ಕೇಳಿದ್ದೆ. ಮೇನಕೆಯ ಸಖಿಯರೇ ಅವಳನ್ನು ಕರೆದುಕೊಂಡು ಹೋಗಿದ್ದಾರೆ ಎಂದು ನನ್ನ ಮನಸ್ಸು ಶಂಕಿಸುತ್ತಿದೆ.
ಸಾನುಮತಿ: ಇವನು ಜ್ಞಾಪಿಸಿಕೊಂಡದ್ದು ಆಶ್ಚರ್ಯವಲ್ಲ, ಮರೆತದ್ದೇ ಆಶ್ಚರ್ಯ!
ವಿದೂಷಕ: ಹಾಗಾದರೆ ಇನ್ನು ಸ್ವಲ್ಪಕಾಲದಲ್ಲಿ ನಿಮ್ಮ ಸಮಾಗಮವಾಗುತ್ತದೆ.
ದುಷ್ಯಂತ: ಹೇಗೆ?
ವಿದೂಷಕ: ಯಾವ ತಂದೆತಾಯಿಯರೂ ಗಂಡನಿಂದ ವಿಯೋಗವಾದ ಮಗಳನ್ನು ಕೊನೆಯವರೆಗೂ ಹಾಗೇ ನೋಡಲು ಇಷ್ಟಪಡುವುದಿಲ್ಲ.
ದುಷ್ಯಂತ: ಸ್ವಪ್ನವೋ, ಮಾಯೆಯೋ, ಮತಿಭ್ರಮಣೆಯೋ ಹೀಗೆ ಮಾಡಿಬಿಟ್ಟಿತು. ಕಾಲ ಸರಿದಿದೆ ಎನ್ನಿಸುತ್ತಿದೆ. ನನ್ನ ಮನೋರಥಗಳೆಲ್ಲ ನೀರಮೇಲಿನ ಗುಳ್ಳೆಗಳೇ!
ವಿದೂಷಕ: ಹಾಗಲ್ಲ. ನಿನಗೆ ಈ ಉಂಗುರ ಸಿಕ್ಕಿರುವುದೇ ನೀವಿಬ್ಬರೂ ಮತ್ತೆ ಖಂಡಿತ ಸೇರುತ್ತೀರ ಎನ್ನುವುದಕ್ಕೆ ನಿದರ್ಶನ.
ದುಷ್ಯಂತ: (ಉಂಗುರವನ್ನು ನೋಡುತ್ತಾ) ಪಡೆಯಲು ಕಷ್ಟವಾದ ಸ್ಥಾನದಿಂದಲೇ ಇದು ಕೆಳಗೆ ಬಿದ್ದಿದ್ದು ಶೋಚನೀಯ. ಉಂಗುರವೇ! ನಿನ್ನ ಫಲವನ್ನು ನೋಡಿದರೆ ನಿನ್ನ ಅದೃಷ್ಟವೂ ನನ್ನಂತೆಯೇ! ಅವಳ ಮನೋಹರವಾದ ಕೆಂಪು ಬೆರಳುಗಳಲ್ಲಿ ಸ್ಥಾನ ಪಡೆದೂ ಅದರಿಂದ ಕೆಳಗೆ ಬಿದ್ದುಬಿಟ್ಟೆಯಲ್ಲ!
ಸಾನುಮತಿ: ಅದು ಬೇರೆಯವರ ಕೈಗೆ ಹೋಗಿದ್ದರೆ ಇನ್ನೂ ಶೋಚನೀಯವಾಗುತ್ತಿತ್ತು.
ವಿದೂಷಕ: ಮಹಾರಾಜ, ಮೊದಲಿಗೆ ಈ ಉಂಗುರ ಯಾವ ಕಾರಣದಿಂದ ಶಕುಂತಲೆಯ ಕೈಗೆ ಬಂತು?
ಸಾನುಮತಿ: ಇದು ನನಗೂ ಕುತೂಹಲವಾದ ವಿಷಯ.
ದುಷ್ಯಂತ: ನಾನು ನಗರಕ್ಕೆ ಬರುವ ಮುಂಚೆ ಅವಳು ಕಣ್ಣಲ್ಲಿ ನೀರು ಸುರಿಸುತ್ತ, ಯಾವುದಾರೂ ಒಂದು ಅಭಿಜ್ಞಾನವನ್ನು ಕೊಡು ಎಂದು ಕೇಳಿದಳು.
ವಿದೂಷಕ: ಸರಿ.
ದುಷ್ಯಂತ: ಆಗ ನಾನು ಈ ಉಂಗುರವನ್ನು ಅವಳ ಬೆರಳಿಗೆ ತೊಡಿಸಿ, ಪ್ರಿಯೆ, ಈ ಉಂಗುರದ ಮೇಲಿರುವ ನನ್ನ ಹೆಸರಿನ ಅಕ್ಷರಗಳನ್ನು ದಿನ ದಿನವೂ ಒಂದೊಂದರಂತೆ ಎಣಿಸುತ್ತಿರು. ಅದು ಕೊನೆಯಾಗುವಷ್ಟರಲ್ಲಿ ನಿನ್ನನ್ನು ನನ್ನ ಅಂತಃಪುರಕ್ಕೆ ಕರೆದುಕೊಂಡು ಹೋಗುವ ಜನ ನಿನ್ನ ಹತ್ತಿರಕ್ಕೆ ಬಂದಿರುತ್ತಾರೆ, ಎಂದಿದ್ದೆ. ಆದರೆ ದಾರುಣನಾದ ನಾನು ಆ ಮಾತನ್ನು ನಡೆಸಿಕೊಡಲೇ ಇಲ್ಲ!
ಸಾನುಮತಿ: ರಮಣೀಯವಾದ ಅವಧಿಯನ್ನು ವಿಧಿ ಅಸಂಗತಮಾಡಿಬಿಟ್ಟಿತು.
ವಿದೂಷಕ: ಆದರೆ ಇದು ಆ ಬೆಸ್ತ ಕೊಯ್ಯುತ್ತಿದ್ದ ಮೀನಿನ ಹೊಟ್ಟೆಯೊಳಕ್ಕೆ ಹೇಗೆ ಹೋಯಿತು?
ದುಷ್ಯಂತ: ಶಚೀತೀರ್ಥದಲ್ಲಿ ಶಕುಂತಲೆ ಅರ್ಘ್ಯಕೊಡುತ್ತಿದ್ದಾಗ ಇದು ಜಾರಿ ಗಂಗಾ ಪ್ರವಾಹದಲ್ಲಿ ಬಿದ್ದುಹೋಯಿತು.
ವಿದೂಷಕ: ಒಹೋ!
ಸಾನುಮತಿ: ಆದ್ದರಿಂದಲೇ ಈ ರಾಜರ್ಷಿಗೆ ಧರ್ಮಿಷ್ಟೆಯಾದ ಶಕುಂತಲೆಯ ಮೇಲೆ ಸಂದೇಹವುಂಟಾಗಿದ್ದು.... ಆದರೆ ಇಂತಹ ಪ್ರೀತಿಗೂ ಅಭಿಜ್ಞಾನ ಬೇಕೇ? ಇದು ಏನೋ!
ದುಷ್ಯಂತ: ಈ ಉಂಗುರವನ್ನು ನಾನೇ ಇಟ್ಟುಕೊಳ್ಳುತ್ತೇನೆ.
ವಿದೂಷಕ: (ಸ್ವಗತ) ನಮ್ಮ ರಾಜ ಉನ್ಮತ್ತತೆಯ ದಾರಿ ಹಿಡಿದಿಡಿದ್ದಾನೆ!
ದುಷ್ಯಂತ: ಈ ಉಂಗುರ ಅವಳ ಕೋಮಲವಾದ ಬೆರಳನ್ನು ಬಿಟ್ಟು ನೀರಿಗೆ ಹೇಗೆ ಬಿತ್ತು? ಈ ಉಂಗುರವಾದರೋ ಜಡವಸ್ತು. ಆದರೆ ನಾನೇಕೆ ಅವಳನ್ನು ತಿರಸ್ಕರಿಸಿದೆ!
ವಿದೂಷಕ: (ಸ್ವಗತ) ನನಗೇಕೆ ಹಸಿವಿನಿಂದ ಊಟ ಮಾಡಬೇಕೆನಿಸುತ್ತಿದೆ!!
ದುಷ್ಯಂತ: ಪ್ರಿಯೇ! ಅಕಾರಣವಾಗಿ ನಿನ್ನನ್ನು ಬಿಟ್ಟು, ಹೃದಯವೇದನೆಯಿಂದ ಬಳಲಿತ್ತಿರುವ ನನಗೆ ನಿನ್ನ ದರ್ಶನದಿಂದ ಅನುಕಂಪವನ್ನು ತೋರಿಸು....
(ತೆರೆಯನ್ನು ಸರಿಸಿ, ಚಿತ್ರಪಟವನ್ನು ಕೈಯಲ್ಲಿ ಹಿಡಿದ ಚತುರಿಕೆಯ ಪ್ರವೇಶ)
ಚತುರಿಕೆ: ಮಹಾರಾಜ, ಇಲ್ಲಿ, ಶಕುಂತಲೆಯ ಚಿತ್ರ.
(ಚಿತ್ರವನ್ನು ತೋರಿಸುತ್ತಾಳೆ)
ವಿದೂಷಕ: ಗೆಳೆಯ ಮಹಾರಾಜ, ಚಿತ್ರ ತುಂಬಾ ಚೆನ್ನಾಗಿದೆ. ಚಿತ್ರದಲ್ಲಿ ಭಾವಪ್ರವೇಶವಾದಂತಿದೆ. ಚಿತ್ರದ ಏರಿಳಿತಗಳಲ್ಲಿ ನನ್ನ ದೃಷ್ಟಿ ಮುಗ್ಗರಿಸುತ್ತಿದೆ!
ಸಾನುಮತಿ: ಈ ರಾಜ ನಿಪುಣನೇ! ಶಕುಂತಲೆಯೇ ನನ್ನ ಕಣ್ಣ ಮುಂದೆ ಬಂದಂತಿದೆ!
ದುಷ್ಯಂತ: ಲೋಕದಲ್ಲಿ ಸರಿಯಾಗಿಲ್ಲದಿರುವುದನ್ನು ಸರಿಮಾಡಿ ಚಿತ್ರದಲ್ಲಿ ಬರೆಯುತ್ತೇವೆ, ಆದರೆ ಇಲ್ಲಿ ಇವಳ ಲಾವಣ್ಯವೇ ಪೂರ್ಣವಾಗಿ ಚಿತ್ರಿತವಾಗಿಲ್ಲವೆನಿಸುತ್ತಿದೆ.
ಸಾನುಮತಿ: ರಾಜನ ಸ್ನೇಹಪೂರ್ವಕವಾದ ನಿರ್ಮಲವಾದ ಪಶ್ಚಾತ್ತಾಪ ಕಾಣಿಸುತ್ತಿದೆ.
ವಿದೂಷಕ: ಮಹಾರಾಜ, ಈ ಚಿತ್ರದಲ್ಲಿ ಮೂವರು ಯುವತಿಯರಿದ್ದಾರೆ. ಎಲ್ಲರೂ ಸುಂದರಿಯರೇ. ಅವರಲ್ಲಿ ಶಕುಂತಲೆ ಯಾರು?
ಸಾನುಮತಿ: ಈ ಸೌಂದರ್ಯವನ್ನು ತಿಳಿಯದ ಇವನ ಕಣ್ಣುಗಳು ನಿರರ್ಥಕವೇ!
ದುಷ್ಯಂತ: ನೀನು ನೋಡಿ ಹೇಳು.
ವಿದೂಷಕ: ಇಲ್ಲಿ ಇವಳ ತಲೆಗೂದಲು ಸ್ವಲ್ಪ ಚದುರಿ, ಮುಡಿದ ಹೂಗೊಂಚಲು ಶಿಥಿಲವಾಗಿ, ಮುಖದಲ್ಲಿ ಬೆವರು ಮೂಡಿದೆ. ದಣಿವಾಗಿ, ಕೈ ಚಾಚಿ, ಈ ಚಿಕ್ಕ ಮಾವಿನ ಗಿಡಕ್ಕೆ ನೀರು ಹಾಕುತ್ತಿದ್ದಾಳೆ. ಇವಳೇ ಶಕುಂತಲೆ ಎಂದು ನನ್ನ ತರ್ಕ. ಮಿಕ್ಕವರು ಅವಳ ಸಖಿಯರು.
ದುಷ್ಯಂತ: ನೀನು ನಿಪುಣ. ಅಲ್ಲಿ ನನ್ನ ಭಾವಚಿಹ್ನೆಯೂ ಇದೆ. ನನ್ನ ಕೈ ಸ್ವಲ್ಪ ಬೆವರಾಗಿ ಅಲ್ಲಲ್ಲಿ ಮಲಿನವಾಗಿದೆ. ನನ್ನ ಕಣ್ಣೀರು ಅವಳ ಕೆನ್ನೆಯ ಮೇಲೆ ಬಿದ್ದಿದೆ. ಏನು ಮಾಡಿದರೂ ಅದು ಹೋಗುತ್ತಿಲ್ಲ. ಚತುರಿಕೆ, ನನ್ನ ಕುಂಚವನ್ನು ತೆಗೆದುಕೊಂಡು ಬಾ, ಇಲ್ಲಿ ಚಿತ್ರ ಅರ್ಧ ಹಾಗೇ ಉಳಿದುಬಿಟ್ಟಿದೆ.
ಚತುರಿಕೆ: ಆರ್ಯ, ಮಾಧವ್ಯ, ಈ ಚಿತ್ರವನ್ನು ಸ್ವಲ್ಪ ಹಿಡಿಯಿರಿ. ನಾನು ಹೋಗಿ ಕುಂಚವನ್ನು ತೆಗೆದುಕೊಂಡು ಬರುತ್ತೇನೆ.
ದುಷ್ಯಂತ: ನಾನೇ ಹಿಡಿಯುವೆನಲ್ಲ.
(ಹಿಡಿಯುತ್ತಾನೆ)
(ಚತುರಿಕೆಯ ನಿಷ್ಕ್ರಮನ)
ದುಷ್ಯಂತ: (ನಿಟ್ಟುಸಿರು ಬಿಡುತ್ತಾ) ಮಾಧವ್ಯ, ಹರಿಯುತ್ತಿರುವ ನದಿಯ ನೀರನ್ನು ಕುಡಿಯುವುದು ಬಿಟ್ಟು, ನಂತರ ಮರೀಚಿಕೆಯನ್ನು ನೋಡಿ ವ್ಯಥೆಪಡುವಂತೆ, ಕಣ್ಣ ಮುಂದೆ ಬಂದವಳನ್ನು ಬಿಟ್ಟು ಈ ಚಿತ್ರದಲ್ಲಿರುವವಳನ್ನು ನೋಡುವಂತಾಗಿದೆ.
ವಿದೂಷಕ: (ಸ್ವಗತ) ಇಲ್ಲಿ ನಮ್ಮ ರಾಜ ನದಿಯನ್ನು ಬಿಟ್ಟು ಮರೀಚಿಕೆಗೆ ಬಂದಿದ್ದಾನೆ.
(ಪ್ರಕಾಶ)
ಮಹಾರಾಜ ಇಲ್ಲಿ ಇನ್ನೂ ಏನನ್ನು ಬರೆಯಬೇಕು?
ಸಾನುಮತಿ: ಇವನಿಗೆ ಶಕುಂತಲೆಗೆ ಇಷ್ಟವಾದ ಸ್ಥಳಗಳನ್ನೆಲ್ಲಾ ಬರೆಯುವುದಕ್ಕೆ ಇಷ್ಟವಿರಬೇಕು.
ದುಷ್ಯಂತ: ಮಾಲಿನೀ ತೀರದಲ್ಲಿ ಮೈಮರೆತ ಹಂಸಗಳನ್ನು ಚಿತ್ರಿಸಬೇಕು.. ಹಿಮಾಲಯದ ತಪ್ಪಲುಗಳಲ್ಲಿ ಕುಳಿತ ಹರಿಣಗಳನ್ನು ಚಿತ್ರಿಸಬೇಕು.. ನಾರುಮಡಿಗಳನ್ನು ಒಣಹಾಕಿದ ಮರಗಳು, ನವೆಯನ್ನು ಹೋಗಲಾಡಿಸಲು ಕೃಷ್ಣಮೃಗದ ಕೊಂಬಿಗೆ ತನ್ನ ಕಣ್ಣುಗಳನ್ನು ಉಜ್ಜುತ್ತಿರುವ ಜಿಂಕೆ.. ಇವೆಲ್ಲವನ್ನೂ ಚಿತ್ರಿಸಬೇಕು...
ವಿದೂಷಕ: (ಸ್ವಗತ) ಇವನು ಈ ಚಿತ್ರಪಟವನ್ನು ಉದ್ದಗಡ್ಡಗಳ ತಪಸ್ವಿಗಳಿಂದ ತುಂಬಿಸುತ್ತಾನೆನ್ನಿಸುತ್ತಿದೆ.
ದುಷ್ಯಂತ: ಮಾಧವ್ಯ, ಇಲ್ಲಿನ ನೋಡು, ಶಕುಂತಲೆಗೆ ಇಷ್ಟವಾದ ಆಭರಣವನ್ನೇ ನಾನು ಮರೆತಂತಿದೆ.
ವಿದೂಷಕ: ಏನು?
ಸಾನುಮತಿ: ವನವಾಸದ ವಿನಯದ ಸೌಕುಮಾರ್ಯವಾಗಿರಬೇಕು..
ದುಷ್ಯಂತ: ಶಿರೀಷ ಕುಸುಮದ ಒಂದು ತುದಿ ಅವಳ ಕಿವಿಗೆ ಬರುವಂತೆ ಬರೆದು, ಹೂವು ಅವಳ ಕೆನ್ನೆಯ ಮೇಲೆ ಇಳಿಬರುವಂತೆ ಮಾಡಬೇಕು. ಶರತ್ಕಾಲದ ತಂಪಿನಂತಿರುವ ಕಮಲದ ಹೂವು ಅವಳ ಎದೆಯ ಮೇಲೆ ಬರಬೇಕು.
ವಿದೂಷಕ: ಮಹಾರಾಜ, ಶಕುಂತಲೆ ತನ್ನ ಮುಖದ ಮೇಲೆ ಕೆಂಪಾದ ತನ್ನ ಕೈಯನ್ನು ಮುಚ್ಚಿಹಿಡಿದಂತಿದೆಯಲ್ಲ.. ಮುಖವೂ ಚಕಿತವಾದಂತಿದೆಯಲ್ಲ?
(ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿ)
ಒಹೋ, ಈ ಹಾಳು ದುಂಬಿ ಅವರ ಮುಖಕಮಲದ ಮೇಲೆ ಹಾರುತ್ತಿದೆ.
ದುಷ್ಯಂತ: ಹೌದು, ಅದನ್ನು ಓಡಿಸಬೇಕು.
ವಿದೂಷಕ: ಅವಿನೀತರನ್ನು ಶಿಕ್ಷಿಸುವ ನಿಮಗೆ ಅದು ಸಾಧ್ಯ.
ದುಷ್ಯಂತ: ಇವರಿಗೆ ನನ್ನ ಆಜ್ಞೆ ಸೇರುವುದಿಲ್ಲ. ಆದರೂ ಇರಲಿ! ಹೇ ದುಂಬಿ, ನಿನಗೆ ಹೂಗಳು ಇಷ್ಟ. ಅದನ್ನು ಬಿಟ್ಟು ಇವಳ ಹತ್ತಿರವೇಕೆ ಬರುತ್ತೀಯ? ಒಹೋ! ಇರಬಹುದು... ನಿನಗೆ ಹೂಗಳ ಮಕರಂದ ಹೀರಲು ಉತ್ಸುಕವಾಗಿದ್ದರೂ, ನಿನ್ನ ಪ್ರಿಯೆಯನ್ನು ಬಿಟ್ಟು ಸವಿಯಲು ಇಷ್ಟವಿಲ್ಲ.
ಸಾನುಮತಿ: ಸರಿಯಾಗಿಯೇ ನಿಯಂತ್ರಿಸಿದ್ದಾನೆ!
ವಿದೂಷಕ: ಇದು ಪೋಲಿ ದುಂಬಿಯೇ!!
ದುಷ್ಯಂತ: ಮಾಧವ್ಯ, ನನ್ನ ಕೆಲಸದಲ್ಲಿ ಅಡ್ಡ ಬರಬೇಡ! ಈಗ ನಾನು ಹೇಳುವುದು ಕೇಳು... ಏ ದುಂಬಿಯೇ, ನಾನು ಮುತ್ತಿಟ್ಟ ಆ ತುಟಿಗಳನ್ನು ನೀನೇದಾರೂ ಮುಟ್ಟಿದರೆ, ನಿನ್ನನ್ನು ಕಮಲದ ದಳಗಳಲ್ಲಿ ಬಂಧಿಸಿಬಿಡುತ್ತೇನೆ..
ವಿದೂಷಕ: ಇಷ್ಟು ತೀಕ್ಷ್ಣವಾದ ದಂಡಹಾಕಿದರೆ ಯಾರು ಹೆದರುವುದಿಲ್ಲ?
(ನಗುತ್ತಾ, ಸ್ವಗತ) ಇವನು ಉನ್ಮತ್ತನಾಗಿದ್ದಾನೆ. ಇವನ ಸಹವಾಸದಿಂದ ನನಗೂ ಹಾಗೆ ಆಗಿದೆ.
(ಪ್ರಕಾಶ)
ಮಹಾರಾಜ, ಇದು ಚಿತ್ರವಷ್ಟೇ!
ದುಷ್ಯಂತ: ಇದು ಚಿತ್ರವೇ?
ಸಾನುಮತಿ: ನನಗೇ ಗೊತ್ತಾಗುತ್ತಿಲ್ಲ. ಪಾಪ, ಅದನ್ನು ಬರೆದವನು. ಅವನಿಗೆ ಹೇಗೆ ಗೊತ್ತಾಗಬೇಕು?
ದುಷ್ಯಂತ: ಮಾಧವ್ಯ, ಇದೇನು ಮಾಡಿದೆ ನೀನು? ಇದನ್ನು ನಿಜವೆಂದು ದರ್ಶನಸುಖವನ್ನು ಅನುಭವಿಸುತ್ತಿದ್ದ ನನಗೆ ಇದು ಕೇವಲ ಚಿತ್ರವೆಂದು ನೆನಪಿಸಿಬಿಟ್ಟೆಯಲ್ಲ?
(ಕಣ್ಣೀರು ಸುರಿಸಿತ್ತಾನೆ)
ಸಾನುಮತಿ: ಈ ವಿರಹಮಾರ್ಗ ಪೂರ್ವಾಪರವಿರೋಧಿ.
ದುಷ್ಯಂತ: ಮಾಧವ್ಯ, ನಿಲ್ಲದ ದುಃಖವನ್ನು ಅನುಭವಿಸುತ್ತಿದ್ದೇನಲ್ಲ! ಕನಸ್ಸಿನಲ್ಲಾದ ಸಮಾಗಮವನ್ನು ಎಚ್ಚರಿಕೆ ಹಾಳುಮಾಡಿದರೆ, ಈ ಚಿತ್ರದಲ್ಲಿ ನೋಡುವುದನ್ನು ಕಣ್ಣೀರು ಹಾಳುಮಾಡುತ್ತಿದೆಯಲ್ಲ!
ಸಾನುಮತಿ: ತಿರಸ್ಕರಿಸಲ್ಪಟ್ಟ ದುಃಖವು ಶಕುಂತಲೆಗೆ ಸಂಪೂರ್ಣವಾಗಿ ನಿವಾರಣೆಯಾಯಿತು.
(ಚತುರಿಕೆಯ ಪ್ರವೇಶ)
ಚತುರಿಕೆ: ಮಹಾರಾಜರಿಗೆ ಜಯವಾಗಲಿ. ಕುಂಚವನ್ನು ತೆಗೆದುಕೊಂಡು ಬರುತ್ತಿದ್ದೆ...
ದುಷ್ಯಂತ: ಮತ್ತೆ?
ಚತುರಿಕೆ: ತರಲಿಕೆಯ ಜೊತೆ ಇದ್ದ ರಾಣಿ ವಸುಮತಿಯವರು ಅದನ್ನು ನನ್ನಿಂದ ತೆಗೆದುಕೊಂಡು ನಾನೇ ರಾಜನಿಗೆ ಕೊಡುತ್ತೇನೆಂದು ಹೇಳಿದರು.
ವಿದೂಷಕ: ನಿನ್ನನ್ನು ಬಿಟ್ಟುಬಿಟ್ಟಿದ್ದಾರೆ?
ಚತುರಿಕೆ: ರಾಣಿಯವರ ಸೆರಗು ಮರಕ್ಕೆ ಸಿಕ್ಕಿಹಾಕಿಕೊಂಡಿತ್ತು. ಅದನ್ನು ತರಲಿಕೆ ಬಿಡಿಸುವಷ್ಟರಲ್ಲಿ ನಾನು ತಪ್ಪಿಸಿಕೊಂಡು ನಿಮಗೆ ಹೇಳುವುದಕ್ಕೆ ಬಂದೆ.
ದುಷ್ಯಂತ: ಮಾಧವ್ಯ, ದೇವಿಗೆ ಇದು ಇಷ್ಟವಾಗುವುದಿಲ್ಲ. ಈ ಚಿತ್ರವನ್ನು ತೆಗೆದುಕೊಂಡು ಹೋಗು.
ವಿದೂಷಕ: ಸರಿ.
(ಚಿತ್ರವನ್ನು ಎತ್ತಿಕೊಂಡು ನಿಲ್ಲುತ್ತಾನೆ)
ನಾನು ಮೇಘಪ್ರತಿಚ್ಛಂದದಲ್ಲಿ ಇರುತ್ತೇನೆ. ನೀವು ಅಂತಃಪುರದ ಕೆಲಸವಾದಮೇಲೆ ಕರೆಯಿರಿ, ಬರುತ್ತೇನೆ.
(ಆತುರವಾಗಿ ಹೊರಡುತ್ತಾನೆ)
ಸಾನುಮತಿ: ಬೇರೆಯವರ ಮೇಲೆ ಮನಸ್ಸಿದ್ದರೂ, ಮೊದಲ ಹೆಂಡತಿಯನ್ನು ಉಪೇಕ್ಷಿಸುತ್ತಿಲ್ಲ.. ಇವನ ಸೌಹಾರ್ದ ಚೆನ್ನಾಗಿದೆ.
(ವೇತ್ರವತಿಯ ಪ್ರವೇಶ)
ಪ್ರತೀಹಾರಿ: ಮಹಾರಾಜನಿಗೆ ಜಯವಾಗಲಿ.
ದುಷ್ಯಂತ: ವೇತ್ರವತಿ, ನೀನು ದೇವಿಯನ್ನು ನೋಡಲಿಲ್ಲವೇ?
ಪ್ರತೀಹಾರಿ: ನೋಡಿದೆ. ಅವರು ನನ್ನನ್ನು ನೋಡಿ ಒಂದು ಪತ್ರವನ್ನು ಕೊಟ್ಟು ಹಿಂತಿರುಗಿದರು.
ದುಷ್ಯಂತ: ಅವಳು ಕಾರ್ಯಜ್ಞೆ. ನನ್ನ ಕೆಲಸಗಳಿಗೆ ಅಡ್ಡ ಬರುವುದಿಲ್ಲ.
ಪ್ರತೀಹಾರಿ: ಮಹಾರಾಜ, ಅಮಾತ್ಯರು ವಿಜ್ಞಾಪಿಸುತ್ತಿದ್ದಾರೆ: ಮಹಾರಾಜ ಬೇರೆ ಕೆಲಸಗಳು ಹೆಚ್ಚಾದ್ದರಿಂದ, ಒಂದೇ ಒಂದು ಪೌರಕಾರ್ಯವನ್ನು ಮಾತ್ರ ನೋಡುವುದಾಯಿತು. ಅದರ ವಿವರಗಳು ಈ ಪತ್ರದಲ್ಲಿವೆ. ನೋಡಬೇಕು.
ದುಷ್ಯಂತ: ಪತ್ರವನ್ನು ತೋರಿಸು.
(ತೋರಿಸುತ್ತಾಳೆ)
ದುಷ್ಯಂತ: (ನೋಡುತ್ತಾ) ಏನಾಯಿತು? ಒಹ್! ಸಮುದ್ರವ್ಯಾಪಾರಿ, ಸಾರ್ಥವಾಹ ಧನಮಿತ್ರರು ನೌಕಾಪಘಾತದಲ್ಲಿ ಮೃತರಾಗಿದ್ದಾರೆ. ಒಳ್ಳೆಯವರು. ಪಾಪ, ಅವರಿಗೆ ಮಕ್ಕಳಿರಲಿಲ್ಲ. ಅವರ ಆಸ್ತಿಯೆಲ್ಲ ರಾಜ್ಯಕ್ಕೆ ಸೇರಬೇಕು ಎಂದು ಅಮಾತ್ಯರು ಬರೆದಿದ್ದಾರೆ. ವೇತ್ರವತಿ, ಅವರು ಶ್ರೀಮಂತರು. ಅವರಿಗೆ ಬಹುಪತ್ನಿಯರಿರಬೇಕು. ಅವರಲ್ಲಿ ಯಾರಾದರೂ ಗರ್ಭಣಿಯರಿದ್ದಾರೋ ವಿಚಾರಿಸುವಂತಾಗಲಿ.
ಪ್ರತೀಹಾರಿ: ಮಹಾರಾಜ, ಈಗಷ್ಟೇ ಈ ವ್ಯಾಪಾರಿಯ ಹೆಂಡತಿಗೆ - ಸಾಕೇತದ ವ್ಯಾಪಾರಿಯ ಮಗಳಿಗೆ - ಪುಂಸವನವಾಗಿದೆಯೆಂದು ವರ್ತಮಾನ.
ದುಷ್ಯಂತ: ಹಾಗಾದರೆ ಆ ಗರ್ಭಕ್ಕೆ ಆಸ್ತಿ ಸೇರಬೇಕಲ್ಲವೇ? ಹೋಗು, ಅಮಾತ್ಯರಿಗೆ ಹೇಳು.
ಪ್ರತೀಹಾರಿ: ಆಜ್ಞೆ.
(ಹೋಗಲು ಅಣಿಯಾಗುತ್ತಾಳೆ, ತಕ್ಷಣ)
ದುಷ್ಯಂತ: ಸ್ವಲ್ಪ ನಿಲ್ಲು.
ಪ್ರತೀಹಾರಿ: ಇಲ್ಲಿಯೇ ಇದ್ದೇನೆ.
ದುಷ್ಯಂತ: ಇದನ್ನೂ ಸೇರಿಸು. ಮಗು ಇದೆಯೋ ಇಲ್ಲವೋ ಪ್ರಶ್ನೆಯೇಕೆ? ಯಾರು, ಯಾವ ಯಾವ ಕಾರಣಕ್ಕೆ ಬಂಧುಗಳನ್ನು ಕಳೆದುಕೊಂಡರೂ ಅವರಿಗೆ ಧರ್ಮಕ್ಕೆ ವಿರೋಧವಲ್ಲದ ರೀತಿಯಲ್ಲಿ ದುಷ್ಯಂತ ಇದ್ದಾನೆ ಎಂದು ಡಂಗೂರ ಸಾರಿಸಿ.
ಪ್ರತೀಹಾರಿ: ಇದನ್ನು ಘೋಷಣೆ ಮಾಡಲೇಬೇಕು.
(ನಿಷ್ಕ್ರಮಿಸಿ ಪುನಾ ವಾಪಸ್ಸು ಬರುತ್ತಾಳೆ)
ಪ್ರತೀಹಾರಿ: ನಿಮ್ಮ ಆಜ್ಞೆಯನ್ನು ಕೇಳಿ ಸಕಾಲದಲ್ಲಿ ಮಳೆಬಂದಂತೆ ಜನರೆಲ್ಲಾ ಸಂತೋಷಪಟ್ಟರು.
ದುಷ್ಯಂತ: (ದೀರ್ಘವಾಗಿ ಉಸಿರೆಳೆದುಕೊಳ್ಳುತ್ತಾ) ಸಂತತಿಯಿಲ್ಲದೆ ವಂಶದ ಮೂಲಪುರುಷ ಮರಣ ಹೊಂದಿದರೆ ಅವನ ಆಸ್ತಿಯೆಲ್ಲವೂ ಬೇರೆ ಯಾರಿಗೋ ಸೇರುತ್ತದೆ. ಅಂತೆಯೇ ನಾನು ಸತ್ತ ಮೇಲೆ ಈ ಪುರುವಂಶದ ಆಸ್ತಿಯು ಕೂಡ.
ಪ್ರತೀಹಾರಿ: ಅಮಂಗಳವನ್ನು ನುಡಿಯಬೇಡಿ.
ದುಷ್ಯಂತ: ತಾನಾಗಿಯೇ ಬಂದ ವರವನ್ನು ಬೇಡವೆಂದು ವಾಪಸ್ಸು ಕಳಿಸಿದ ನನಗೆ ಧಿಕ್ಕಾರವಿರಲಿ.
ಸಾನುಮತಿ: ಶಕುಂತಲೆಯನ್ನೇ ನೆನಸಿಕೊಂಡು ದುಃಖಿಸುತ್ತಿದ್ದಾನೆ.
ದುಷ್ಯಂತ: ಫಲವನ್ನು ಕಲ್ಪಿಸಿಕೊಂಡು ಭೂಮಿಯಲ್ಲಿ ಬೀಜವನ್ನು ಬಿತ್ತುವಂತೆ(?) ನನ್ನ ವಂಶದ ಬೀಜವೇ ಅವಳ ಗರ್ಭದಲ್ಲಿದ್ದರೂ ಅವಳನ್ನು ತೊರೆದುಬಿಟ್ಟೆ.
ಸಾನುಮತಿ: ನಿನ್ನ ಸಂತತಿ ಅಪರಿಚ್ಛಿನ್ನವಾಗಿ ಮುಂದುವರೆಯುತ್ತದೆ.
ಚತುರಿಕೆ: (ಪ್ರತೀಹಾರಿಗೆ ಗುಪ್ತವಾಗಿ) ಈ ಸಾರ್ಥವಾಹನ ಘಟನೆಯಿಂದ ಮಹಾರಾಜರ ಮನಸ್ಸು ಇನ್ನೂ ವ್ಯಾಕುಲವಾಗಿದೆ. ಇವರನ್ನು ಸಮಾಧಾನ ಮಾಡಲು ಮೇಘಪ್ರತಿಚ್ಛಂದಕ್ಕೆ ಹೋಗಿ ಮಾಧವ್ಯರನ್ನು ಕರೆದುಕೊಂಡು ಬಾ.
ಪ್ರತೀಹಾರಿ: ಅದು ಸರಿಯೇ.
(ನಿಷ್ಕ್ರಮಿಸುತ್ತಾಳೆ)
ದುಷ್ಯಂತ: ಅಯ್ಯೋ! ದುಷ್ಯಂತನ ಸಂತಾನವೇ ಸಂಶಯಕ್ಕೀಡಾಯಿತಲ್ಲ! ಇನ್ನು ಮುಂದೆ ಶ್ರುತಿವಿಧಾನವಾಗಿ ಇನ್ನು ಯಾರು ನಮ್ಮ ಕುಲದವರಿಗೆ ಸಂಸ್ಕಾರ ಮಾಡುತ್ತಾರೆ. ಮಕ್ಕಳಿಲ್ಲದ ನನ್ನ ಕಾರಣದಿಂದ ನಮ್ಮ ಪೂರ್ವಿಕರು ಕಣ್ಣೀರಿನ ಉದಕವನ್ನೇ ಕುಡಿಯಬೇಕಾಗುತ್ತದಲ್ಲ!
(ಅತೀವ ದುಃಖಿತನಾಗುತ್ತಾನೆ)
ಚತುರಿಕೆ: (ಆತಂಕದಿಂದ) ಆರ್ಯ, ಸಮಾಧಾನ ಮಾಡಿಕೊಳ್ಳಿ.
ಸಾನುಮತಿ: ಹಾ ಧಿಕ್! ಹಾ ಧಿಕ್! ಬೆಳಕಿದ್ದರೂ ವ್ಯವಧಾನವಿಲ್ಲದೆ ಇವನು ಕತ್ತಲಿನ ದುಃಖವನ್ನು ಅನುಭವಿಸುತ್ತಿದ್ದಾನೆ. ನಾನು ಈಗಲೇ ಹೊರಡುತ್ತೇನೆ... ಇಲ್ಲ... ಅದಿತಿಯು ಶಕುಂತಲೆಯನ್ನು ಸಮಾಧಾನ ಮಾಡುವಾಗ ಕೇಳಿದ್ದೆ. ದುಷ್ಯಂತನೇ ಶಕುಂತಲೆಯನ್ನು ಧರ್ಮಪತ್ನಿಯನ್ನಾಗಿ ಮಾಡಿಕೊಳ್ಳುವಂತೆ ದೇವತೆಗಳೇ ಏರ್ಪಡಿಸುತ್ತಾರಂತೆ. ಅಲ್ಲಿಯವರೆಗೂ ಕಾಯಲೇಬೇಕು. ಆದರೆ ಈ ವೃತ್ತಾಂತವನ್ನು ಶಕುಂತಲೆಗೆ ಹೇಳುತ್ತೇನೆ.
(ಹೇಗೆ ಹೇಳಿ ಆಕಾಶಮಾರ್ಗದಲ್ಲಿ ನಿಷ್ಕ್ರಮಿಸುತ್ತಾಳೆ)
(ನೇಪಥ್ಯದಲ್ಲಿ)
ಹೋ! ಬ್ರಾಹ್ಮಣನ ಆಕ್ರಮಣವಾಯಿತು!!
ದುಷ್ಯಂತ: (ಸಮಾಧಾನ ಮಾಡಿಕೊಂಡು, ಆ ಕಡೆ ಕಿವಿ ಕೊಡುತ್ತಾ) ಒಹ್! ಇದು ಮಾಧವ್ಯನ ಆರ್ತಸ್ವರ! ಯಾರಲ್ಲಿ?
(ವೇತ್ರವತಿಯ ಪ್ರವೇಶ)
ಪ್ರತೀಹಾರಿ: (ಗಾಬರಿಯಿಂದ) ಮಹಾರಾಜ, ನಿಮ್ಮ ಸ್ನೇಹಿತ ಆಪತ್ತಿನಲ್ಲಿದ್ದಾರೆ. ನೀವೇ ಕಾಪಾಡಬೇಕು.
ದುಷ್ಯಂತ: ಯಾರಿಂದ ಆಪತ್ತು?
ಪ್ರತೀಹಾರಿ: ಮಹಾರಾಜ, ಯಾವುದೋ ಕಣ್ಣಿಗೆ ಕಾಣದ ಶಕ್ತಿ ಅವರನ್ನು ಮೇಘಪ್ರತಿಚ್ಛನ್ದದ ಪ್ರಾಸಾದದ ಮೇಲೆ ಎತ್ತಿಕೊಂಡು ಹೋಗಿದೆ.
ದುಷ್ಯಂತ: (ಎದ್ದು ನಿಂತು) ಹಾಗಿರಲಾರದು. ಕಾಣದ ಶಕ್ತಿ ನನ್ನ ಅರಮನೆಯನ್ನೂ ಆಕ್ರಮಿಸಿತೇ? ಅಥವಾ ದಿನದಿನವೂ ಆಗುವ ಪ್ರಮಾದಗಳನ್ನು ತಿಳಿಯುವುದು ಸಾಧ್ಯವಿಲ್ಲ. ಪ್ರಜೆಗಳಲ್ಲಿ ಯಾರು ಯಾವ ದಾರಿಯನ್ನು ಹಿಡಿದಿದ್ದಾರೋ ತಿಳಿಯುವ ಶಕ್ತಿ ನನಗೆಲ್ಲಿದೆ?
(ನೇಪಥ್ಯದಲ್ಲಿ)
ಅಯ್ಯೋ ಸ್ನೇಹಿತಾ! ಅಯ್ಯೋ ಅಯ್ಯೋ!
ದುಷ್ಯಂತ: (ಜೋರಾಗಿ ನಡೆಯುತ್ತಾ) ಮಾಧವ್ಯ ಭಯ ಬೇಡ, ಭಯ ಬೇಡ!
(ನೇಪಥ್ಯದಲ್ಲಿ)
(ಮತ್ತೆ ಅದೇ ಶಬ್ದ)
ಹೇಗೆ ಭಯಪಡದೆ ಇರಲಿ? ಇಲ್ಲಿ ಯಾವನೋ ನನ್ನ ಕುತ್ತಿಗೆಯನ್ನು ಕಬ್ಬನ್ನು ಕಿವುಚಿದಂತೆ ಕಿವುಚುತ್ತಿದ್ದಾನೆ!
ದುಷ್ಯಂತ: (ಆ ಕಡೆ ನೋಡುತ್ತಾ) ನನ್ನ ಧನಸ್ಸೆಲ್ಲಿ?
(ಕೈಯಲ್ಲಿ ಬಿಲ್ಲು ಹಿಡಿದು ಯವನಿಯ ಪ್ರವೇಶ)
ಯವನಿ: ಮಹಾರಾಜ, ಇಲ್ಲಿ ನಿಮ್ಮ ಧನಸ್ಸು ಮತ್ತು ಕೈವಸ್ತ್ರ.
(ನೇಪಥ್ಯದಲ್ಲಿ)
ಸಿಂಹ ಹಸುವಿನ ಕತ್ತನ್ನು ಹಿಡಿದು ರಕ್ತ ಕುಡಿಯುವಂತೆ ನಾನು ನಿನ್ನ ಕತ್ತನ್ನು ಸೀಳಿ ರಕ್ತ ಕುಡಿಯುತ್ತೇನೆ. ಆರ್ತ ರಕ್ಷಣೆ ಮಾಡುವ ನಿನ್ನ ರಾಜ ದುಷ್ಯಂತನನ್ನು ಬಿಲ್ಲು ಹಿಡಿದು ಬಂದು ನಿನ್ನನ್ನು ಕಾಪಾಡಲು ಕರೆ.
ದುಷ್ಯಂತ: (ಕೋಪದಿಂದ) ಇವನು ನನ್ನನೇ ಕರೆಯುತ್ತಿದ್ದಾನಲ್ಲ! ನಿಲ್ಲು ರಾಕ್ಷಸ. ನಿನ್ನನ್ನು ಇಲ್ಲದಂತೆ ಮಾಡುತ್ತೇನೆ.
(ಬಿಲ್ಲಿಗೆ ಹೆದೆಯೇರಿಸಿ)
ವೇತ್ರವತಿ ಮೆಟ್ಟಿಲುಗಳ ದಾರಿ ತೋರಿಸು.
ಪ್ರತೀಹಾರಿ: ಇತ್ತ, ಇತ್ತ ಮಹಾರಾಜ.
(ಎಲ್ಲರೂ ಬೇಗ ಮೆಟ್ಟಿಲು ಹತ್ತಿ ಹೋಗುತ್ತಾರೆ)
ದುಷ್ಯಂತ: (ಸುತ್ತ ನೋಡಿ) ಇದೇನು ಇಲ್ಲೆಲ್ಲಾ ಖಾಲಿಯಿದೆಯಲ್ಲ?
(ನೇಪಥ್ಯದಲ್ಲಿ)
ಅಯ್ಯೋ ಅಯ್ಯೋ! ನಾನು ನಿನ್ನನ್ನು ನೋಡುತ್ತಿದ್ದೇನೆ, ಆದರೆ ನಿನಗೆ ನಾನು ಕಾಣಿಸುತ್ತಿಲ್ಲ! ಬೆಕ್ಕು ಹಿಡಿದ ಇಲಿಯಂತೆ ನಾನು ಪ್ರಾಣಕ್ಕಾಗಿ ಒದ್ದಾಡುತ್ತಿದ್ದೇನೆ.
ದುಷ್ಯಂತ: ಯಾರದು, ಮರೆಯಲ್ಲಿದ್ದು ಗರ್ವಪಡುವವನೇ! ಈಗ ನೀನು ನನ್ನ ಬಾಣವನ್ನು ನೋಡುತ್ತೀಯ. ಇಗೋ ಬಾಣವನ್ನು ಬಿಟ್ಟೆ. ಬಾಣವೇ, ಹಂಸ ಹಾಲನ್ನು ಕುಡಿದು ನೀರನ್ನು ಬಿಡುವಂತೆ ಕೊಲ್ಲುವುದನ್ನು ಮಾತ್ರ ಕೊಂದು ರಕ್ಷಿತನಾದ ಬ್ರಾಹ್ಮಣನನ್ನು ಬಿಟ್ಟುಬಿಡು!
(ಹೆದೆಯೇರಿಸುತ್ತಾನೆ)
(ಅಷ್ಟರಲ್ಲಿ ವಿದೂಷಕನನ್ನು ಬಿಟ್ಟು ಮಾತಲಿಯ ಪ್ರವೇಶ)
ಮಾತಲಿ: ದುಷ್ಯಂತ, ಇಂದ್ರ ನಿನ್ನ ಶರಗಳಿಗಾಗಿ ರಾಕ್ಷಸರನ್ನು ಮೀಸಲಿಟ್ಟಿದ್ದಾನೆ. ನಿನ್ನ ಬಾಣಗಳು ಅವರ ಮೇಲೆ ಬೀಳಲಿ. ಸ್ನೇಹಿತರ ಮೇಲೆ ಸೌಮ್ಯವಾದ ಕಣ್ಣುಗಳು ಬೀಳಬೇಕು ಬಾಣಗಳಲ್ಲ.
ದುಷ್ಯಂತ: (ಆಶ್ಚರ್ಯದಿಂದ ಬಿಲ್ಲನ್ನು ಕೆಳಗಿಳಿಸಿ) ಹೋ! ಮಾತಲಿ! ಇಂದ್ರನ ಸಾರಥಿಗೆ ನಮಸ್ಕಾರಪೂರ್ವಕ ಸ್ವಾಗತ!
ವಿದೂಷಕ: ಇವನು ನನ್ನನ್ನು ಯಜ್ಞ ಪಶುವಿನಂತೆ ಕೊಲ್ಲಲು ಬಂದಿದ್ದ. ಇವನಿಗೆ ಸ್ವಾಗತವೇ?
ಮಾತಲಿ: (ನಗುತ್ತಾ) ಆಯುಷ್ಮಾನ್, ಇಂದ್ರ ನನ್ನನ್ನು ಏಕೆ ಕಳಿಸಿದನೆಂದು ಕೇಳು.
ದುಷ್ಯಂತ: ಕೇಳುತ್ತಿದ್ದೇನೆ.
ಮಾತಲಿ: ಕಾಲನೇಮಿವಂಶದವರಾದ ದುರ್ಜಯರೆಂಬ ರಾಕ್ಷಸರಿದ್ದಾರೆ.
ದುಷ್ಯಂತ: ಇದ್ದಾರೆ. ಅವರ ಬಗ್ಗೆ ನಾರದರಿಂದ ಕೇಳಿದ್ದೇನೆ.
ಮಾತಲಿ: ಅವರು ಇಂದ್ರನಿಗೆ ತೊಂದರೆಕೊಡುವುದು ನಿನಗೆ ತಿಳಿದೇ ಇದೆ. ಅವರನ್ನು ರಣದಲ್ಲಿ ನೀನೇ ಸೋಲಿಸಬೇಕು. ಸೂರ್ಯ ಹಗಲಿನ ಕತ್ತಲನ್ನು ನಿವಾರಿಸುತ್ತಾನೆ, ರಾತ್ರಿಯ ಕತ್ತಲನ್ನು ಚಂದ್ರನೇ ಹೋಗಲಾಡಿಸಬೇಕು.
ನೀನು ನಿನ್ನ ಶಸ್ತ್ರಗಳನ್ನು ತೆಗೆದುಕೊಂಡು ಈ ಇಂದ್ರರಥವನ್ನು ಹತ್ತು. ವಿಜಯಕ್ಕಾಗಿ ಹೊರಡೋಣ.
ದುಷ್ಯಂತ: ಇಂದ್ರನ ಕರೆಯಿಂದ ಅನುಗ್ರಹೀತನಾದೆ. ಆದರೆ ಈ ಮಾಧವ್ಯನಿಗೆ ಹೀಗೇಕೆ ಮಾಡಿದೆ?
ಮಾತಲಿ: ಅದನ್ನೂ ಹೇಳುತ್ತೀನಿ. ಯಾವುದೋ ಕಾರಣದಿಂದ ನೀನು ಅನ್ಯಮನಸ್ಕನಾಗಿದ್ದೆ. ಆದ್ದರಿಂದ ನಿನಗೆ ಕೋಪಬರುವಂತೆ ಮಾಡಲು ಇವನನ್ನು ಹಿಡಿದೆ. ಇಂಧನವನ್ನು ಹಾಕಿದರೇ ಅಗ್ನಿ ಪ್ರಜ್ವಲಿಸುವುದು. ಪ್ರಚೋದಿಸಿದರೇ ಹಾವು ಹೆಡೆ ಬಿಚ್ಚುತ್ತದೆ. ಕೋಪಗೊಳಿಸಿದರೆ ಮಾತ್ರ ಮನುಷ್ಯರು ತಮ್ಮ ಶಕ್ತಿ ತಿಳಿಯುತ್ತಾರೆ.
ದುಷ್ಯಂತ: (ತಮ್ಮಲ್ಲೇ, ವಿದೂಷಕನಿಗೆ) ಮಾಧವ್ಯ, ದೇವಪತಿಯ ಆಜ್ಞೆ ಅನುಲ್ಲಂಘನೀಯ. ಇದನ್ನು ಅಮಾತ್ಯರಿಗೆ ಹೇಳಿ ನನ್ನ ಈ ಮಾತುಗಳನ್ನು ತಿಳಿಸು: ಕೇವಲ ನಿಮ್ಮ ಮತಿಯಿಂದ ಪ್ರಜೆಗಳನ್ನು ಪಾಲಿಸಿರಿ. ನನ್ನ ಧನಸ್ಸು ಈಗ ಬೇರೆ ಕಾರ್ಯದಲ್ಲಿದೆ.
ವಿದೂಷಕ: ಮಹಾರಾಜರ ಆಜ್ಞೆ.
(ನಿಷ್ಕ್ರಮಿಸುತ್ತಾನೆ)
ಮಾತಲಿ: ಆಯುಷ್ಮಾನ್, ರಥವನ್ನು ಹತ್ತು.
(ರಥವನ್ನು ಹತ್ತುವಂತೆ ನಟಿಸುತ್ತಾನೆ)
(ಎಲ್ಲರ ನಿಷ್ಕ್ರಮನ)
(ಆರನೆಯ ದೃಶ್ಯವು ಸಮಾಪ್ತವಾದುದು)
No comments:
Post a Comment