ದೃಶ್ಯ ೩
(ದರ್ಭೆಗಳನ್ನು ಹಿಡಿದ ಋಷಿಶಿಷ್ಯನ ಪ್ರವೇಶ)
ಶಿಷ್ಯ: ದುಷ್ಯಂತ ರಾಜ ಮಹಾನುಭಾವನೆ ಸರಿ. ಅವನು ಬಂದ ತಕ್ಷಣ ನಮ್ಮ ಆಶ್ರಮದ ಉಪದ್ರವಗಳೆಲ್ಲ ತೊಲಗಿದವಲ್ಲ! ಬಿಲ್ಲು ಬಿಡುವುದಿರಲಿ, ಅವನ ಧನಸ್ಸಿನ ಹುಂಕಾರದಿಂದಲೇ ರಾಕ್ಷಸರು ಓಡಿಹೋಗುತ್ತಾರೆ.
ಈ ದರ್ಭೆಗಳನ್ನು ಯಜ್ಞವೇದಿಯ ಸುತ್ತ ಹರಡಲು ಋತ್ವಿಕ್ಕುಗಳಿಗೆ ಕೊಡುತ್ತೇನೆ.
(ಮುಂದೆ ಹೋಗಿ ನೋಡುತ್ತಾನೆ)
(ಕೇಳುತ್ತಾನೆ)
ಪ್ರಿಯಂವದೆ ಈ ನಳಿನಪತ್ರಗಳನ್ನು, ಕೆನ್ನೈದಿಲೆಗಳನ್ನೂ ತೆಗೆದುಕೊಂಡು ಎಲ್ಲಿಗೆ ಹೋಗುತ್ತಿದ್ದೀಯ?
(ಆ ಕಡೆಯಿಂದ ಉತ್ತರ ಬಂದಂತೆ ನಟಿಸುತ್ತಾ)
ಏನು ಹೇಳಿದೆ? ಈ ಬಿಸಿಲಿನ ಬೇಗೆಯಿಂದ ಶಕುಂತಲೆ ಅಸ್ವಸ್ಥಳಾಗಿರುವಳೇ? ಸರಿ, ಅವಳನ್ನು ಚೆನ್ನಾಗಿ ಉಪಚರಿಸು. ಅವಳು ನಮ್ಮ ಕುಲಪತಿ ಕಣ್ವರ ಉಸಿರು. ನಾನೂ ಹೋಗಿ ಹೋಮದ ಶಾಂತ್ಯುದಕಗಳನ್ನು ಗೌತಮಿಯ ಜೊತೆ ಕಳಿಸುತ್ತೇನೆ.
(ನಿಷ್ಕ್ರಮಿಸುತ್ತಾನೆ)
(ದುಷ್ಯಂತ ರಾಜನ ಪ್ರವೇಶ)
ದುಷ್ಯಂತ: (ಚೆನ್ನಾಗಿ ಉಸಿರೆಳೆದುಕೊಳ್ಳುತ್ತಾ) ನನಗೆ ತಪಸ್ಸಿನ ಶಕ್ತಿಯೂ ಗೊತ್ತು, ಅವಳು ಪರಾಧೀನಳೆಂದೂ ಗೊತ್ತು. ಆದರೂ ನನ್ನ ಮನಸ್ಸು ಅವಳಿಂದ ಹಿಂದೆ ಬರುತ್ತಿಲ್ಲವಲ್ಲ.
(ಮನ್ಮಥ ಬಾಧೆಯನ್ನು ತೋರಿಸುತ್ತಾ)
ಮನ್ಮಥ, ನಿನ್ನ ಮತ್ತು ಆ ಚಂದ್ರನ ಕಾರಣದಿಂದ ಈ ಪ್ರೇಮಿಗಳು ಮೋಸಹೋಗುತ್ತಿದ್ದೇವೆ. ನಿನ್ನ ಕುಸುಮ ಶರಗಳು, ಚಂದ್ರನ ತಂಪು ಕಿರಣಗಳು ಸುಳ್ಳೆನಿಸುತ್ತದೆ. ನಿನ್ನ ಕುಸುಮಶರಗಳು ತೀಕ್ಷ್ಣವಾಗಿವೆ. ಚಂದ್ರ ತನ್ನ ಕಿರಣಗಳಿಂದ ಬೆಂಕಿಯುಗುಳುತ್ತಿದ್ದಾನೆ.
ಅಥವಾ,
ಮನ್ಮಥ ಇಷ್ಟು ಕಠೋರಿಯಾದರೂ, ಶಕುಂತಲೆಯನ್ನು ನಾನು ಪ್ರೀತಿಸುತ್ತಿರುವುದರಿಂದಲೇ ನನ್ನ ಮೇಲೆ ಬಾಣಗಳನ್ನು ಬಿಡುತ್ತಿದ್ದಾನೆ. ಇದರಿಂದ ನನಗೆ ಅವಳ ಮೇಲಿನ ಪ್ರೀತಿ ಗಟ್ಟಿಯಾಗಿರುವುದು ನಿಜವೇ!
(ಹಿಂದೆ ಮುಂದೆ ನಡೆಯುತ್ತಾ)
ಈಗ ಕೆಲಸಕ್ಕೆ ಸ್ವಲ್ಪ ವಿಶ್ರಾಂತಿ ಸಿಕ್ಕಿದೆ. ಖಿನ್ನವಾದ ಮನಸ್ಸನ್ನು ಸ್ವಲ್ಪ ವಿನೋದಗೊಳಿಸೋಣ.
(ಸೂರ್ಯನನ್ನು ನೋಡುತ್ತಾ)
ಈ ಉಗ್ರವಾದ ಬೇಸಿಗೆಯ ತಾಪದಲ್ಲಿ ಬಹುಶಃ ಶಕುಂತಲೆ ತನ್ನ ಸ್ನೇಹಿತೆಯರ ಜೊತೆ ಲತಾವಲಯವಾದ ಮಾಲಿನೀತೀರದಲ್ಲಿರಬಹುದು. ಅಲ್ಲಿಗೆ ಹೋಗುತ್ತೇನೆ.
(ಮುಂದೆ ನಡೆದು, ಸುಖಸ್ಪರ್ಶವನ್ನು ನಟಿಸುತ್ತಾ)
ಒಹ್, ಇಲ್ಲಿ ಗಾಳಿ ಎಷ್ಟು ತಂಪಾಗಿದೆ. ಮನ್ಮಥ ಬಾಧೆಗೊಳಗಾಗಿರುವ ನನಗೆ ಈ ತಂಪಾದ ಗಾಳಿ, ತಿಳಿಯಾದ ಮಾಲಿನೀ ನೀರೇ ಆಲಂಗಿಸಿಕೊಳ್ಳಲು ಯೋಗ್ಯವಾದುವು!
(ಸುತ್ತ ಮುತ್ತ ನೋಡುತ್ತಾ)
ಈ ಲತಾಮಂಟಪದ ಹತ್ತಿರವೇ ಅವಳು ಇರಬೇಕು. ಈ ಬಿಳಿ ಮರಳಿನಲ್ಲಿ ಹಿಮ್ಮಡಿಯನ್ನು ಒತ್ತಿ ಒತ್ತಿ ಅವಳು ನಡೆದ ಹೆಜ್ಜೆಗುರುತುಗಳು ಕಾಣುತ್ತಿವೆ. ಈ ಮರಗಳ ಮಧ್ಯೆ ನೋಡೋಣ.
(ನೋಡಿ, ಸಂತೋಷದಿಂದ)
ಹಾ, ನನ್ನ ಕಣ್ಣುಗಳಿಗೆ ಮೋಕ್ಷ ಸಿಕ್ಕಿತು! ಕುಸುಮಶಯನದ ಮೇಲೆ ನನ್ನ ಪ್ರಿಯತಮೆ ತನ್ನ ಸಖಿಯರಿಂದ ಸೇವೆ ಮಾಡಿಸಿಕೊಳ್ಳುತ್ತಿದ್ದಾಳೆ. ಏನು ಮಾತಾಡಿಕೊಳ್ಳುವರೋ ಕೇಳಿಸಿಕೊಳ್ಳೋಣ.
(ಅವರನ್ನು ನೋಡುತ್ತಾ ಒಂದು ಬದಿಯಲ್ಲಿ ನಿಲ್ಲುತ್ತಾನೆ)
(ಸಖಿಯರ ಜೊತೆ ಕುಸುಮಶಯನದ ಮೇಲೆ ಕುಳಿತ ಶಕುಂತಲೆಯ ಪ್ರವೇಶ)
ಸಖಿಯರು: (ಗಾಳಿ ಬೀಸುತ್ತಾ, ಸ್ನೇಹದಿಂದ) ಶಕುಂತಲೆ, ಈ ನಳಿನೀಪತ್ರೆಯ ಗಾಳಿ ತಂಪಾಗಿದೆಯೇ?
ಶಕುಂತಲೆ: ಒಹ್, ನೀವು ನನಗೆ ಗಾಳಿ ಬೀಸುತ್ತಿರುವಿರೋ?
(ಸಖಿಯರು ವಿಷಾದದಿಂದ ಒಬ್ಬೊರನ್ನೊಬ್ಬರು ನೋಡಿಕೊಳ್ಳುತ್ತಾರೆ)
ದುಷ್ಯಂತ: (ತನ್ನಲ್ಲೇ ತರ್ಕಿಸುತ್ತ) ಇವಳು ಅಸ್ವಸ್ಥಳಂತೆ ಕಾಣಿಸುತ್ತಿದ್ದಾಳಲ್ಲ? ಇದು ಸೂರ್ಯನ ಬೇಗೆಯಿಂದಲೋ ಅಥವಾ ನನ್ನ ಮೇಲಿನ ಮನಿಸ್ಸಿನಿಂದಲೋ? ನನಗೇನೋ ಸಂದೇಹ. ಬಾಧೆಯಲ್ಲಿದ್ದರೂ ಇವಳ ದೇಹ ಕಾಂತಿಯನ್ನೇನೂ ಕಳೆದುಕೊಂಡಿಲ್ಲ. ಗ್ರೀಷ್ಮದ ತಾಪ, ಮನ್ಮಥನ ತಾಪ ಎರೆಡೂ ಸಮನಾಗಿರುತ್ತವೆ. ಆದರೆ ಗ್ರೀಷ್ಮದ ತಾಪ ಯುವತಿಯರನ್ನು ಇಷ್ಟು ಸುಭಗವಾಗಿರಲು ಬಿಡುವುದಿಲ್ಲ.
ಪ್ರಿಯಂವದೆ: (ಅನಸೂಯೆಗೆ ಗುಟ್ಟಾಗಿ) ಅನಸೂಯೆ, ಆ ರಾಜರ್ಷಿಯನ್ನು ನೋಡಿದಾಗಿನಿಂದ ಇವಳು ವ್ಯಾಕುಲಳಾಗಿದ್ದಾಳೆ. ಇವಳ ಆತಂಕ ಅವನ ಕುರಿತಾಗಿಯೇ ಇರಬಹುದೇ?
ಅನಸೂಯೆ: ನನಗೂ ಅದೇ ಅನುಮಾನ. ಇರು. ಕೇಳಿಯೇ ಬಿಡೋಣ.
(ಶಕುಂತಲೆಗೆ)
ಶಕುಂತಲೆ ನಿನ್ನ ಸಂತಾಪ ಬಹಳವಾಗಿದೆ. ಏನೆಂದು ಕೇಳಬಹುದೇ?
ಶಕುಂತಲೆ: (ಮಲಗಿದ್ದವಳು ಮೇಲಕ್ಕೆದ್ದು) ಏನು ಕೇಳು?
ಅನಸೂಯೆ: ನಮಗೆ ಮದನವಿಕಾರದ ಬಗ್ಗೆ ಅಷ್ಟು ಗೊತ್ತಿಲ್ಲ. ಆದರೂ ಇತಿಹಾಸಗಳಲ್ಲಿ ಕಾಮಮಯರ ಬಗ್ಗೆ ನಾನು ಕೇಳಿರುವಂತೆಯೇ ನಿನ್ನ ಅವಸ್ಥೆಯೂ ಇದೆ. ಹೇಳು, ನಿನ್ನ ಸಂತಾಪದ ಕಾರಣವೇನು? ರೋಗವನ್ನು ತಿಳಿಯದೆ ಪರಿಹಾರವು ಹೇಗೆ?
ದುಷ್ಯಂತ: ನನ್ನ ತರ್ಕವೂ ಅನಸೂಯೆಯ ತರ್ಕವನ್ನೇ ಅನುಸರಿಸುತ್ತಿದೆ.
ಶಕುಂತಲೆ: (ಸ್ವಗತ) ನನ್ನ ಬಯಕೆಯೇನೋ ಬಲಾವಾಗಿಯೇ ಇದೆ. ಆದರೂ, ಅದನ್ನು ಇವರಿಗೆ ಹೇಳಲು ಆಗುತ್ತಿಲ್ಲ.
ಪ್ರಿಯಂವದೆ: ಶಕುಂತಲೆ, ಅನಸೂಯೆ ಸರಿಯಾಗಿಯೇ ಹೇಳುತ್ತಿದ್ದಾಳೆ. ಏನಾಗಿದೆ ನಿನಗೆ? ಏಕೆ ಆತಂಕ? ದಿನೇ ದಿನೇ ನೀನು ಸೊರಗಿಹೋಗುತ್ತಿದ್ದೀಯ. ನಿನ್ನ ಲಾವಣ್ಯವು ಮಾತ್ರ ನೆರಳಿನಂತೆಯೇ ನಿನ್ನ ಹಿಂದಿದೆ.
ದುಷ್ಯಂತ: ಪ್ರಿಯಂವದೆ ಸರಿಯಾಗಿಯೇ ಹೇಳಿದಳು. ಮಾಧವೀ ಲತೆಗಳು ಬಾಡಿದರೂ ನೋಡಲು ಚೆನ್ನಾಗಿರುವಂತೆ, ಮುಖ ಬಾಡಿದ್ದರೂ, ತೋಳುಗಳು ಜಗ್ಗಿದ್ದರೂ, ನಡು ತಗ್ಗಿದ್ದರೂ ಇವಳೂ ಸುಂದರವಾಗಿಯೇ ಇದ್ದಾಳೆ.
ಶಕುಂತಲೆ: ನಿಮಗೆ ಬಿಟ್ಟು ಇನ್ನು ಯಾರಿಗೆ ಹೇಳಲಿ? ಆದರೆ ಹೇಳಿದರೆ ನಿಮಗೇ ತೊಂದರೆ ಕೊಟ್ಟಂತೆ.
ಇಬ್ಬರೂ: ಅದಕ್ಕೇ ಕೇಳುತ್ತಿದ್ದೇವೆ. ಆತ್ಮೀಯರಲ್ಲಿ ಹೇಳಿಕೊಂಡ ದುಃಖ ಸಹ್ಯವಾಗುತ್ತದೆ.
ದುಷ್ಯಂತ: ಸ್ನೇಹಿತೆಯರು ಕೇಳುತ್ತಿರುವುದರಿಂದ ಇವಳು ತನ್ನ ಮನೋಗತವನ್ನು ಹೇಳಿಯೇ ಹೇಳುತ್ತಾಳೆ. ಹಿಂದೆ ಅವಳು ನನ್ನನ್ನು ಎಷ್ಟೋ ಬಾರಿ ಒಂದು ರೀತಿಯ ಆಸೆಯಿಂದ ನೋಡಿದ್ದರೂ ಈಗ ಅವಳ ಮಾತುಗಳನ್ನು ಕೇಳಲು ಕಾತರನಾಗಿದ್ದೇನೆ.
ಶಕುಂತಲೆ: ಯಾವಾಗ ನಾನು ನಮ್ಮ ತಪೋವನವನ್ನು ರಕ್ಷಿಸಲು ಬಂದ ಆ ರಾಜರ್ಷಿಯನ್ನು ನೋಡಿದೆನೋ...
(ಅಷ್ಟು ಹೇಳಿ ನಾಚಿಕೆಯನ್ನು ತೋರಿಸುತ್ತಾಳೆ)
ಇಬ್ಬರೂ: (ಪ್ರೀತಿಯಿಂದ) ಮುಂದೆ ಹೇಳು.
ಶಕುಂತಲೆ: ಆಗಿನಿಂದ ಆ ರಾಜರ್ಷಿಯಲ್ಲಿ ನನಗೆ ಅಭಿಲಾಷೆಯುಂಟಾಗಿ ನಾನು ಈ ಸ್ಥಿತಿಗೆ ಬಂದಿದ್ದೇನೆ.
ದುಷ್ಯಂತ: (ಸಂತೋಷನಾಗಿ) ಕೇಳಬೇಕಾಗಿರುವುದನ್ನು ಕೇಳಿಬಿಟ್ಟೆ! ಇಷ್ಟು ದಿನ ನನ್ನ ನೋವಿಗೆ ಕಾರಣವಾಗಿದ್ದ ಪ್ರೀತಿಯೇ ಈಗ ಸಂತೋಷಕ್ಕೆ ಕಾರಣವಾಯಿತು!
ಶಕುಂತಲೆ: ಈಗ ನಿಮಗೆ ಒಪ್ಪಿಗೆಯಾದರೆ ಆ ರಾಜರ್ಷಿಗೆ ನನ್ನ ಮೇಲೆ ಅನುಕಂಪ ಬರುವಂತೆ ಏನಾದರೂ ಮಾಡಿ. ಇಲ್ಲದಿದ್ದರೆ ನೀವು ನನಗೆ ಎಳ್ಳುನೀರು ಬಿಟ್ಟಂತೆಯೇ!
ದುಷ್ಯಂತ: ಇನ್ನು ಅನುಮಾನವೇ ಇಲ್ಲ.
ಪ್ರಿಯಂವದೆ: (ಅನಸೂಯೆಗೆ ಗುಟ್ಟಾಗಿ) ಇದು ತುಂಬಾ ದೂರ ಬಂದುಬಿಟ್ಟಿದೆ. ಇನ್ನು ಕಾಲಹರಣ ಮಾಡುವಂತಿಲ್ಲ. ಇವಳ ಅಭಿಲಾಷೆ ಪೌರವಲಲಾಮನ ಮೇಲಿದೆ. ಅಭಿನಂದನೀಯವೇ!
ಅನಸೂಯೆ: ಹೌದು!
ಪ್ರಿಯಂವದೆ: (ಪ್ರಕಾಶವಾಗಿ ಶಕುಂತಲೆಗೆ) ಶಕುಂತಲೆ, ನಿನ್ನ ಮನಸ್ಸು ಯೋಗ್ಯನ ಮೇಲೆಯೇ ಇದೆ. ಸಮುದ್ರವನ್ನು ಬಿಟ್ಟು ನದಿಗಳು ಎಲ್ಲಿ ಹೋಗುತ್ತವೆ? ಮಾವಿನ ಮರವನ್ನು ಬಿಟ್ಟು ಮಾಧವೀ ಲತೆ ಇನ್ನೆಲ್ಲಿ ಸುತ್ತಿಕೊಳ್ಳುತ್ತದೆ?
ದುಷ್ಯಂತ: ವಿಶಾಖನಕ್ಷತ್ರ ಪುಂಜ ಚಂದ್ರನನ್ನೇ ಅನುಸರಿಸಿದಂತಿದೆ.
ಅನಸೂಯೆ: ಈಗ ಏನು ಉಪಾಯ ಮಾಡುವುದು? ಇವಳ ಮನೋರಥವನ್ನು ಗುಟ್ಟಾಗಿ ಬೇಗ ಹೇಗೆ ತಿಳಿಸುವುದು?
ಪ್ರಿಯಂವದೆ: ಗುಟ್ಟು ಅಂದರೆ ಚಿಂತೆ ಹೆಚ್ಚು. ಬೇಗವಾದಷ್ಟು ಒಳ್ಳೆಯದು.
ಅನಸೂಯೆ: ಹೇಗೆ?
ಪ್ರಿಯಂವದೆ: ಆ ರಾಜರ್ಷಿಗೂ ಇವಳ ಮೇಲೆ ಇಷ್ಟವಿದ್ದಂತಿದೆ. ಇತ್ತೀಚಿಗೆ ದಿನವೆಲ್ಲವೂ ಅವನ ದೃಷ್ಟಿ ಇವಳ ಮೇಲೆಯೇ ಇದೆ. ನಿದ್ದೆಯಿಲ್ಲದೆ ಸಣ್ಣಗಾದಂತೆ ಕಾಣಿಸುತ್ತಿದ್ದಾನೆ.
ದುಷ್ಯಂತ: ಸರಿಯಾಗಿ! ನನಗೆ ಹಾಗೆಯೇ ಆಗಿದೆ.
ಪ್ರಿಯಂವದೆ: (ಸ್ವಲ್ಪ ಕಾಲ ಯೋಚಿಸಿ) ಶಕುಂತಲೆ, ಒಂದು ಪ್ರೇಮಪತ್ರವನ್ನು ಬರೆ. ಅದನ್ನು ಹೂವಿನಲ್ಲಿ ಸುತ್ತಿ ದೇವರ ಪ್ರಸಾದದ ನೆಪದಲ್ಲಿ ಅವನಿಗೆ ತಲುಪಿಸುತ್ತೇನೆ.
ಅನಸೂಯೆ: ಈ ಉಪಾಯ ಸುಕುಮಾರವಾಗಿದೆ. ಶಕುಂತಲೆಯ ಅಭಿಪ್ರಾಯವೇನು?
ಶಕುಂತಲೆ: ನಿನ್ನ ನಿಯೋಗ ವಿಫಲವಾದರೆ?
ಪ್ರಿಯಂವದೆ: ಚೆನ್ನಾಗಿ ಯೋಚನೆಮಾಡಿ ಸರಿಯಾದ ಪದಗಳ ಪ್ರಯೋಗ ಮಾಡು, ವಿಫಲವಾಗುವುದಿಲ್ಲ.
ಶಕುಂತಲೆ: ಯೋಚನೆ ಮಾಡುತ್ತೇನೆ. ತಿರಸ್ಕೃತಳಾಗುತ್ತೇನೋ ಎಂಬ ಭಯದಿಂದ ನನ್ನ ಹೃದಯ ತಳಮಳಿಸುತ್ತಿದೆ.
ದುಷ್ಯಂತ: (ಸಂತೋಷದಿಂದ) ಅಯ್ಯೋ, ನಿನ್ನನ್ನೇ ಬಯಸುತಿದ್ದ ನಾನು, ನೀನು ತೀರಸ್ಕರಿಸುವೆಯೋ ಎಂದು ಹೆದರಿದ್ದೆ. ಸಿರಿಗಾಗಿ ಪ್ರಾರ್ಥಿಸುವವನಿಗೆ ಅದು ದೊರೆಯದಿರಬಹುದು. ಆದರೆ ಸಿರಿಯನ್ನೇ ಬಯಸುತ್ತಿರುವವನಿಗೆ ಅದಾಗಿಯೇ ತನ್ನೆಡೆಗೆ ಬಂದರೆ ಬೇಡವೆಂದಾನೇ?
ಸಖಿಯರಿಬ್ಬರೂ: ಆತ್ಮವಿಶ್ವಾಸವಿಲ್ಲದಿರುವವಳೇ! ದೇಹವನ್ನು ತಂಪುಮಾಡುವ ಶರತ್ಕಾಲದ ಬೆಳದಿಂಗಳನ್ನು ಯಾರಾದರೂ ಪಟಹಾಕಿ ತಡೆಯುತ್ತಾರೆಯೇ?
ಶಕುಂತಲೆ: (ಸಂತೋಷದಿಂದ) ಸರಿ ಬರೆಯುತ್ತೇನೆ.
(ಕುಳಿತು ಚಿಂತಿಸಲು ಶುರು ಮಾಡುತ್ತಾಳೆ)
ದುಷ್ಯಂತ: ಕಣ್ಣು ಮಿಟುಕಿಸದೆ ಇವಳನ್ನು ನೋಡುತ್ತೇನೆ. ಹುಬ್ಬೇರಿಸಿ ಪದಗಳನ್ನು ಯೋಚಿಸುತ್ತಾ ಬರಿಯುವ ಇವಳ ಮುಖವನ್ನು ನೋಡಿದರೆ ನನ್ನ ಮೇಲಿನ ಅವಳ ಪ್ರೀತಿ ತಿಳಿಯುತ್ತದೆ.
ಶಕುಂತಲೆ: ಹಾಡಿನ ಸಂದೇಶ ಸಿದ್ಧವಾಗಿದೆ. ಆದರೆ ಬರೆಯುವ ಸಾಮಗ್ರಿಗಳಿಲ್ಲವಲ್ಲ.
ಪ್ರಿಯಂವದೆ: ಗಿಳಿಯ ಹೊಟ್ಟೆಯಷ್ಟು ಸುಕುಮಾರವಾದ ಈ ತಾವರೆಯ ಎಲೆಯ ಮೇಲೆ ನಿನ್ನ ಉಗುರುಗಳಿಂದ ನಿನ್ನ ಸಂದೇಶವನ್ನು ಕೆತ್ತಿಬಿಡು.
ಶಕುಂತಲೆ: (ಹಾಗೆಯೇ ಮಾಡಿ) ಇದನ್ನು ಕೇಳಿ ಸರಿಯಾಗಿಯೋ ಇಲ್ಲವೋ ಹೇಳಿ.
ಇಬ್ಬರೂ: ಕೇಳುತ್ತಿದ್ದೇವೆ.
ಶಕುಂತಲೆ: (ಹಾಡುತ್ತಾಳೆ)
ತಿಳಿಯದು ನಿನಗೆನ್ನ ಹೃದಯವೀ ನಿರ್ಘೃಣ
ಸುಲಿಯುವನೆನ್ನನೀ ಕಾಮಂ
ಬಲಿಯುವುದು ಮನೋರಥಮಿರುಳಿನೊಳ್ ಮೇಣ್ ಪ-
ಗಲು ವೇಳೆಯೊಳ್ ಬಿಡದೆನ್ನಂ
ದುಷ್ಯಂತ: (ತಕ್ಷಣ ಹೊರಬಂದು)
ಮನದನ್ನೆ ನಿನ್ನಂ ಕೇವಲ ಸುಲಿವನವಂ; ನ-
ನ್ನನವನ ತಾಪದಲಿ ಕೊಲ್ವಮ್
ದಿನಪಂ ಶಶಾಂಕನಂ ಮರೆಪಂತೆ ಮರೆಪನೇ
ವನಲತೆಯಂ ಕುಮುದ್ವತಿಯಂ?
ಸಖಿಯರಿಬ್ಬರು: (ಅವನನ್ನು ನೋಡಿ ಸಂತಸದಿಂದ ವಿಸ್ಮಿತರಾಗಿ) ನೆನೆದ ತಕ್ಷಣ ಬಂದ ರಾಜರಿಗೆ ಸ್ವಾಗತ!
(ಶಕುಂತಲೆಯೂ ಏಳಲೆತ್ನಿಸುತ್ತಾಳೆ)
ದುಷ್ಯಂತ: ಆಯಾಸಬೇಡ. ಸೊರಗಿನಿಂದ ಹೂವಿನ ಹಾಸಿಗೆಯಲ್ಲಿ ಹುದುಗಿರುವ ನಿನ್ನ ಕಾಲುಗಳು ಎದ್ದು ಉಪಚರಿಸಬೇಕಿಲ್ಲ.
ಅನಸೂಯೆ: ರಾಜರು ಈ ಕಲ್ಲಿನ ಮೇಲೆ ಕುಳಿತುಕೊಳ್ಳಬೇಕು.
(ದುಷ್ಯಂತ ಕುಳಿತುಕೊಳ್ಳುತ್ತಾನೆ. ಶಕುಂತಲಯೂ ನಾಚಿಕೆಯಿಂದ ಕುಳಿತುಕೊಳ್ಳುತ್ತಾಳೆ.)
ಪ್ರಿಯಂವದೆ: ನಿಮ್ಮಬ್ಬರ ನಡುವಿನ ಅನುರಾಗ ಪ್ರತ್ಯಕ್ಷವಾಗಿದೆ. ಆದರೂ ನಮ್ಮ ಸಖಿಯ ವಿಷಯವಾದ್ದರಿಂದ ನಮ್ಮನ್ನು ಪುರುಕ್ತಿಯಾಡುವಂತೆ ಮಾಡುತ್ತಿದೆ.
ದುಷ್ಯಂತ: ತಡೆಯಬೇಕಿಲ್ಲ. ಹೇಳಬೇಕೆಂದಿರುವುದನ್ನು ತಡೆದರೆ ಅದು ಬಹುಕಾಲ ಅನುತಾಪವನ್ನುಂಟು ಮಾಡುತ್ತದೆ.
ಪ್ರಿಯಂವದೆ: ಪ್ರಜೆಗಳಿಗೆ ಕಷ್ಟ ಬಂದಾಗ ಕಾಪಾಡುವುದು ರಾಜನ ಧರ್ಮ....
ದುಷ್ಯಂತ: ಅದಕ್ಕಿಂತ ಮುಖ್ಯವಾದುದು ಬೇರೆಯಿಲ್ಲ.
ಪ್ರಿಯಂವದೆ: ಈ ನಮ್ಮ ಸಖಿ ನಿಮ್ಮ ಕಾರಣವಾಗಿ ಮದನಮೋಹಿತಳಾಗಿ ಈ ಅವಸ್ಥೆಯಲ್ಲಿದ್ದಾಳೆ. ಅವಳನ್ನು ನೀವೇ ಕಾಪಾಡಬೇಕು.
ದುಷ್ಯಂತ: ಈ ಕಡೆಯಿಂದಲೂ ಅಷ್ಟೇ ಪ್ರೀತಿಯಿದೆ. ಅನುಗ್ರಹೀತರಾದೆವು.
ಶಕುಂತಲೆ: (ಪ್ರಿಯಂವದೆಯ ಕಡೆ ನೋಡುತ್ತಾ) ಪ್ರಿಯಂವದೆ ಅಂತಃಪುರದ ಯೋಚನೆಯಲ್ಲಿರುವ ರಾಜರಿಗೆ ಏಕೆ ತೊಂದರೆ ಕೊಡುತ್ತೀಯೆ?
ದುಷ್ಯಂತ: ಸುಂದರಿ, ನೀನೇ ನನ್ನ ಮನಸ್ಸನ್ನೆಲ್ಲಾ ತುಂಬಿರುವೆ. ನಿನ್ನ ಕಾರಣದಿಂದಲೇ ನಾನ್ನು ಮದನನಿಂದ ಮತ್ತೆ ಮತ್ತೆ ಹತನಾಗುತ್ತಿದ್ದೇನೆ.
ಅನಸೂಯೆ: ದುಷ್ಯಂತ, "ರಾಜ ಬಹುವಲ್ಲಭಾ" ಎಂದು ಕೇಳಿಯೇ ಇದ್ದೇವೆ. ನಮ್ಮ ಪ್ರಿಯಸಖಿ ತನ್ನ ಬಂಧುಗಳಿಂದ ತೊಂದರೆಗೊಳಗಾಗದಂತೆ ನೋಡಿಕೊಳ್ಳಬೇಕು.
ದುಷ್ಯಂತ: ಹೇಳಲೇಬೇಕಿಲ್ಲ. ನನಗೆ ಅನೇಕ ಪತ್ನಿಯರಿದ್ದರೂ ನನ್ನ ಕುಲಕ್ಕೆ ಎರಡೇ ಪ್ರತಿಷ್ಠೆ. ಒಂದು ಈ ಭೂಮಿ, ಇನ್ನೊಂದು ಈ ನಿಮ್ಮ ಸಖಿ.
ಇಬ್ಬರೂ: ನಮಗೆ ಸಂತೋಷವಾಗಿದೆ.
ಪ್ರಿಯಂವದೆ: (ಅನಸೂಯೆಯ ಕಡೆ) ಅನಸೂಯೆ, ಈ ಜಿಂಕೆ ತನ್ನ ಅಮ್ಮನನ್ನು ಹುಡುಕುತ್ತಾ ಆಕಡೆ ಈಕಡೆ ಓಡಾಡುತ್ತಿದೆ. ಅದನ್ನು ಅದರ ಅಮ್ಮನ ಕಡೆ ಕರೆದೊಯ್ಯೋಣ ಬಾ.
(ಇಬ್ಬರೂ ಹೊರಡಲು ಅಣಿಯಾಗುತ್ತಾರೆ)
ಶಕುಂತಲೆ: ನಾನೊಬ್ಬಳೇ ಆಗಿಬಿಡುತ್ತೇನೆ. ಯಾರಾದರೂ ಒಬ್ಬರು ಇಲ್ಲೇ ಇರಿ.
ಪ್ರಿಯಂವದೆ: ಈ ಭೂಮಿಗೇ ಶರಣ್ಯನಾದ ರಾಜ ನಿನ್ನ ಸಮೀಪದಲ್ಲೇ ಇರುವನಲ್ಲ!
(ಇಬ್ಬರೂ ಹೊರಡುತ್ತಾರೆ)
ಶಕುಂತಲೆ: ಹೊರಟೇಬಿಟ್ಟರಲ್ಲ!
ದುಷ್ಯಂತ: ಆತಂಕಬೇಡ, ನಿನ್ನ ಸೇವೆ ಮಾಡುವವನು ಸಮೀಪದಲ್ಲೇ ಇದ್ದೇನೆ. ಪ್ರಿಯೆ, ಈ ಶೀತಲವಾದ ತಾವರೆಯ ಕಾಂಡವನ್ನು ಹಿಡಿದು ನಿನಗೆ ಗಾಳಿ ಬೀಸಲೇ? ನಿನ್ನನ್ನು ನನ್ನ ಮಡಿಲೊಳು ಕೂರಿಸಿಕೊಂಡು ನಿನ್ನ ಪದ್ಮದಂತಹ ಕಾಲುಗಳನ್ನು ಒತ್ತಲೇ?
ಶಕುಂತಲೆ: ಗೌರವಿಸಲು ಅರ್ಹರಾದವರ ವಿಷಯದಲ್ಲಿ ನಾನು ಅನಾದರ ತೋರಿಸುವುದಿಲ್ಲ.
(ಹೊರಡಲು ಸಿದ್ಧಳಾಗುತ್ತಾಳೆ)
ದುಷ್ಯಂತ: ಸುಂದರಿ, ಬಿಸಿಲು ಇನ್ನೂ ತಗ್ಗಿಲ್ಲ. ನಿನ್ನ ಪರಿಸ್ಥಿತಿಯೂ ಹಾಗೆಯೇ ಇದೆ. ನಿನ್ನ ಕಾಲುಗಳು ಇನ್ನೂ ನೋಯುತ್ತಿರುವಾಗ, ಈ ಕುಸುಮ ಶಯನವನ್ನು ಬಿಟ್ಟು ಎಲ್ಲಿಗೆ ಹೋಗುತ್ತೀಯೆ?
(ಕೈ ಹಿಡಿಯುತ್ತಾನೆ)
ಶಕುಂತಲೆ: ಪೌರವ, ವಿನಯವನ್ನು ಬಿಡುವುದು ಬೇಡ. ಮದನಬಾಧೆಯಿಂದ ತಪ್ತಳಾಗಿದ್ದರೂ ನಾನು ಸ್ವೇಚ್ಛೆಯಿಂದ ನಡೆಯುವವಳಲ್ಲ.
ದುಷ್ಯಂತ: ಭೀರು, ಗುರುಜನರ ಭಯಬೇಡ. ನಮ್ಮನ್ನು ನೋಡಿದರೂ ಧಾರ್ಮಿಕರಾದ ಕುಲಪತಿಗಳು ದೋಷವನ್ನು ಕಾಣುವುದಿಲ್ಲ. ಹಿಂದೆ ಎಷ್ಟೋ ಜನ ರಾಜಪುತ್ರಿಯರು ಗಾಂಧರ್ವ ವಿವಾಹವಾಗಿದ್ದಾರೆ. ಅದು ಅವರವರ ತಂದೆಯರಿಂದ ಅಂಗೀಕೃತವಾಗಿದೆ.
ಶಕುಂತಲೆ: ನನ್ನನು ಬಿಟ್ಟುಬಿಡಿ. ನಾನು ನನ್ನ ಸಖಿಯರನ್ನು ನೋಡಬೇಕು.
ದುಷ್ಯಂತ: ಸರಿ ಬಿಡುತ್ತೇನೆ.
ಶಕುಂತಲೆ: ಯಾವಾಗ?
ದುಷ್ಯಂತ: ಹೊಸ ಹೂವಿನ ಮಕರಂದವನ್ನು ದುಂಬಿ ಸೇವಿಸಿದಂತೆ, ನಿನ್ನ ಕೋಮಲವಾದ ತುಟಿಗಳ ರಸವನ್ನು ಸೇವಿಸಿದ ನಂತರ...
(ದುಷ್ಯಂತ ಅವಳ ಮುಖವನ್ನು ಮೇಲಕ್ಕೆತ್ತಲು ಪ್ರಯತ್ನಿಸುತ್ತಾನೆ, ಆದರೆ ಶಕುಂತಲೆ ಜಾರಿಕೊಳ್ಳುತ್ತಾಳೆ)
(ನೇಪಥ್ಯದಲ್ಲಿ)
ಚಕ್ರವಾಕ ವಧು, ರಾತ್ರಿಯಾಗುತ್ತಿದೆ, ನಿನ್ನ ಪ್ರಿಯಕರನನ್ನು ಬೀಳ್ಕೊಡು.
ಶಕುಂತಲೆ: (ಗಾಬರಿಯಿಂದ) ಪೌರವ ಖಂಡಿತವಾಗಿ ನನ್ನ ಆರೋಗ್ಯ ವಿಚಾರಿಸಲು ಗೌತಮಿ ಬಂದಂತಿದೆ. ಪೊದೆಯಲ್ಲಿ ಅಡಗಿಕೋ.
ದುಷ್ಯಂತ: ಹಾಗೆಯೇ ಆಗಲಿ.
(ಅಡಗಿಕೊಳ್ಳುತ್ತಾನೆ)
(ಅನಸೂಯೆ ಪ್ರಿಯಂವದೆಯರ ಜೊತೆ ಗೌತಮಿಯ ಪ್ರವೇಶ)
ಸಖಿಯರು: ಇಲ್ಲಿ ಇಲ್ಲಿ, ಆರ್ಯೆ.
ಗೌತಮಿ: (ಶಕುಂತಲೆಯನ್ನು ನೋಡಿ) ಮಗಳೇ ನಿನ್ನ ಕಾಲುನೋವು ಹೇಗಿದೆ?
ಶಕುಂತಲೆ: ಸ್ವಲ್ಪ ಪರವಾಗಿಲ್ಲ.
ಗೌತಮಿ: ಈ ದರ್ಭೋದಕದಿಂದ ನಿನ್ನ ಶರೀರ ನಿರಾಬಾಧವಾಗುತ್ತದೆ.
(ಶಕುಂತಲೆಯ ತಲೆಯ ಮೇಲೆ ಪ್ರೋಕ್ಷಿಸಿ)
ಮಗಳೇ ಸಂಜೆಯಾಗುತ್ತಿದೆ. ಆಶ್ರಮಕ್ಕೆ ಹೋಗೋಣ.
(ಹೊರಡುತ್ತಾರೆ)
ಶಕುಂತಲೆ: (ಸ್ವಗತ) ಹೃದಯವೇ, ನಿನ್ನ ಕನಸು ನನಸಾಗುವ ಅವಕಾಶ ಬಂದಾಗ ಹೇಡಿತನವನ್ನು ಬಿಡಲಿಲ್ಲ. ಈಗ ಏನು ಮಾಡುವುದು?
(ಸ್ವಲ್ಪ ಮುಂದೆ ಹೋಗಿ ನಿಂತು, ಪ್ರಕಾಶವಾಗಿ)
ಲತಾಮಂಟಪವೇ, ಮತ್ತೆ ಇಲ್ಲಿಯೇ ನಿನ್ನನ್ನು ನೋಡುವಂತಾಗಲಿ.
(ದುಃಖಿತಳಾಗಿ ನಿಷ್ಕ್ರಮಿಸುತ್ತಾಳೆ)
ದುಷ್ಯಂತ: (ಮೊದಲು ತಾನಿದ್ದ ಕಡೆ ಹೋಗಿ, ಉಸಿರೆಳೆದುಕೊಂಡು) ಫಲ ಬರುವಷ್ಟರಲ್ಲಿ ವಿಘ್ನ ಬಂತು. ಅವಳ ಮುಖವನ್ನು ಮೇಲಕ್ಕೆತ್ತಲಾಯಿತು, ಆದರೆ ಚುಂಬಿಸಲಾಗಲಿಲ್ಲ.
ಈಗ ಎಲ್ಲಿಗೆ ಹೋಗಲಿ? ಸ್ವಲ್ಪ ಹೊತ್ತು ನನ್ನ ಪ್ರಿಯತಮೆಯಿದ್ದ ಈ ಲತಾಮಂಡಲದಲ್ಲಿಯೇ ಇರುತ್ತೇನೆ.
(ಸುತ್ತಲೂ ನೋಡುತ್ತಾ)
ಇವಳ ಹೂವಿನ ಹಾಸಿಗೆ ಈ ಶಿಲಾತಲದಲ್ಲಿ ಹೀಗೆಯೇ ಇದೆ. ಅವಳು ಪತ್ರ ಬರೆದ ತಾವರೆಯ ಹೊ ಇಲ್ಲೇ ಬಾಡಿ ಬಿದ್ದಿದೆ. ಅವಳು ನನ್ನ ಕೈಯಿಂದ ಜಾರಿಕೊಂಡು ಹೋಗುವಾಗ ಕೆಳಗೆ ಬಿದ್ದ ಹೂವಿನ ಆಭರಣ ಕೆಳಗೆ ಬಿದ್ದಿದೆ. ಖಾಲಿಯಾಗಿದ್ದರೂ ಅವಳ ನೆನಪಿನಿಂದ ಈ ಲತಾಮಂಟಪವನ್ನು ಬಿಟ್ಟು ಹೋಗಲು ಸಾಧ್ಯವಾಗುತ್ತಿಲ್ಲ.
(ಆಕಾಶದ ಧ್ವನಿ)
ರಾಜ, ಸಾಯಂಕಾಲದ ಸವನದ ಸಮಯ ಹತ್ತಿರ ಬರುತ್ತಿದೆ. ಹೋಮದ ವೇದಿಯ ಸುತ್ತಲೂ ಮೋಡ ಕವಿದಂತೆ ರಾಕ್ಷಸರು ಕಾಟ ಕೊಡಲು ಸಿದ್ಧವಾಗಿದ್ದಾರೆ. ಬೇಗ ಬಾ.
ದುಷ್ಯಂತ: ತಪಸ್ವಿಗಳೆ ಭಯಬೇಡ. ನಾನಿದ್ದೇನೆ. ಬರುತ್ತಿದ್ದೇನೆ.
(ನಿರ್ಗಮಿಸುತ್ತಾನೆ)
(ಮೂರನೇ ದೃಶ್ಯವು ಮುಗಿದುದು)
No comments:
Post a Comment