ದೃಶ್ಯ ೪
(ಹೂ ಬಿಡಿಸುವಂತೆ ನಟಿಸುತ್ತಾ ಅನಸೂಯೆ, ಪ್ರಿಯಂವದೆಯರ ಪ್ರವೇಶ)
ಅನಸೂಯೆ: ಶಕುಂತಲೆಗೆ ಗಾಂಧರ್ವ ವಿವಾಹವಾಗಿ ಅನುರೂಪನಾದ ಗಂಡನನ್ನು ಪಡೆದದ್ದು ಒಳ್ಳೆಯದಾಯಿತೆಂದು ನನಗೆ ಸಂತೋಷವೇ ಆಗಿದೆ. ಆದರೂ ನನಗೊಂದು ಚಿಂತೆಯಿದೆ.
ಪ್ರಿಯಂವದೆ: ಏಕೆ?
ಅನಸೂಯೆ: ಆ ರಾಜರ್ಷಿ ಯಾಗ ಮುಗಿದ ಮೇಲೆ ಋಷಿಗಳಿಂದ ಬೀಳ್ಕೊಂಡು ನಮ್ಮನ್ನು ಬಿಟ್ಟು ನಗರಕ್ಕೆ ಹೋಗಿದ್ದಾನೆ. ತನ್ನ ಅಂತಃಪುರವನ್ನು ಸೇರಿದ ಮೇಲೆ ಅವನಿಗೆ ಇವಳ ಜ್ಞಾಪಕವಿರುತ್ತದೆಯೋ ಇಲ್ಲವೋ!
ಪ್ರಿಯಂವದೆ: ಯೋಚನೆ ಬೇಡ. ಅವನನ್ನು ನೋಡಿದರೆ ಹಾಗೆನಿಸುವುದಿಲ್ಲ. ಆದರೆ ನನಗೆ ಕಣ್ವರು ವಾಪಸ್ಸು ಬಂದಮೇಲೆ ಇದನ್ನೆಲ್ಲಾ ಕೇಳಿ ಒಪ್ಪುತ್ತಾರೋ ಇಲ್ಲವೋ ಎಂಬುದೇ ಚಿಂತೆ.
ಅನಸೂಯೆ: ನನಗೆ ಗೊತ್ತಿರುವಂತೆ ಅವರು ಒಪ್ಪುತ್ತಾರೆ.
ಪ್ರಿಯಂವದೆ: ಹೇಗೆ?
ಅನಸೂಯೆ: ಗುಣವಂತನಾದ ವರನಿಗೆ ಕೊಡಬೇಕೆಂದು ಅವರ ಸಂಕಲ್ಪವಿತ್ತು. ಈಗ ದೈವ ಪ್ರಯತ್ನದಿಂದ ಅನಾಯಾಸವಾಗಿ ಅದೇ ಆಗಿರುವುದರಿಂದ ಅವರಿಗೆ ಒಪ್ಪಿಗೆ ಆಗುತ್ತದೆ.
ಪ್ರಿಯಂವದೆ: (ಹೂವನ್ನು ನೋಡುತ್ತಾ) ಅನಸೂಯೆ, ಪೂಜೆಗೆ ಇಷ್ಟು ಹೂ ಸಾಕೆನಿಸುತ್ತದೆ.
ಅನಸೂಯೆ: ನಮ್ಮ ಸಖಿ ಶಕುಂತಲೆಯ ಸೌಭಾಗ್ಯಕ್ಕಾಗಿ ಪೂಜೆ ಮಾಡಬೇಕಲ್ಲ?
ಪ್ರಿಯಂವದೆ: ಹೌದು, ಸರಿ.
(ಮತ್ತೆ ಹೊ ಬಿಡಿಸುವಂತೆ ನಟಿಸುತ್ತಾರೆ)
(ನೇಪಥ್ಯದಲ್ಲಿ)
ನಾನಿಲ್ಲಿದ್ದೇನೆ!
ಅನಸೂಯೆ: (ಆ ಕಡೆ ಕಿವಿ ಕೊಡುತ್ತಾ) ಸಖಿ, ಯಾರೋ ಅತಿಥಿ ಬಂದಂತಿದೆ.
ಪ್ರಿಯಂವದೆ: ಆಶ್ರಮದ ಬಳಿ ಶಕುಂತಲೆಯಿದ್ದಾಳೆ.
ಅನಸೂಯೆ: ಆದರೆ ಮನಸ್ಸಿನಿಂದ ಇಲ್ಲ. ಇಷ್ಟು ಹೊ ಸಾಕು, ಹೋಗೋಣ.
(ಹೊರಡಲು ಅಣಿಯಾಗುತ್ತಾರೆ, ಅಷ್ಟರಲ್ಲಿ)
(ನೇಪಥ್ಯದಲ್ಲಿ)
ಒಹ್! ತಪಸ್ವಿ ನಿನ್ನ ಆಶಮದ ಹತ್ತಿರ ಬಂದರೂ ಅತಿಥಿಯನ್ನು ಗಮನಿಸದೆ ನೀನು ಯಾರನ್ನು ಕುರಿತು ಚಿಂತಿಸುತ್ತಿದ್ದೆಯೋ ಅವನಿಗೆ, ಕುಡಿದವನಿಗೆ ಅಮಲು ಇಳಿದ ಮೇಲೆ ಎಲ್ಲ ಮರೆತುಹೋದಂತೆ, ನೀನೂ ಮರೆತುಹೋಗಲಿ.
ಪ್ರಿಯಂವದೆ: ಅಯ್ಯೋ! ಏನೋ ತಪ್ಪಾಗಿದೆ. ಪೂಜಾರ್ಹರಾದವರಲ್ಲಿ ಅನ್ಯಮನಸ್ಕಳಾದ ಶಕುಂತಲೆ ಅಪರಾಧಮಾಡಿದಂತಿದೆ.
(ಮುಂದೆ ಹೋಗಿ ನೋಡುತ್ತಾ)
ಬಂದವರು ಅಂತಿಂಥವರಲ್ಲ! ಈ ದೂರ್ವಾಸರು ಬೇಗ ಕೋಪ ಮಾಡಿಕೊಳ್ಳುವ ಮಹರ್ಷಿ. ಶಾಪ ಕೊಟ್ಟು ಯಾರಿಗೂ ಸಿಗದಂತೆ ಬೇಗ ಬೇಗ ಹೊರಟುಹೋಗುತ್ತಿದ್ದಾರೆ.
ಅನಸೂಯೆ: ಬೆಂಕಿಗೇ ಸುಡುವ ಅಧಿಕಾರ. ನೀನು ಬೇಗ ಹೋಗಿ ಕಾಲಿಗಾದರೂ ಬಿದ್ದು ಅವರನ್ನು ಹಿಂದಕ್ಕೆ ಕರೆ ತಾ. ನಾನು ಅರ್ಘ್ಯಕ್ಕೆ ಸಿದ್ಧಮಾಡುತ್ತೇನೆ.
ಪ್ರಿಯಂವದೆ: ಹಾಗೆ ಆಗಲಿ.. (ಹೊರಡುತ್ತಾಳೆ)
ಅನಸೂಯೆ: (ಎಡವಿ ಬಿದ್ದು) ಹೋ! ಬೇಗ ಓಡಲು ಹೋಗಿ ಕೈಲ್ಲಿದ್ದ ಹೂವೆಲ್ಲಾ ಕೆಳಗೆ ಬಿದ್ದವಲ್ಲ!
(ಹೂ ಆರಿಸುವಂತೆ ನಟಿಸುತ್ತಾಳೆ)
(ಸ್ವಲ್ಪ ಹೊತ್ತಿನಲ್ಲಿ ಪ್ರಿಯಂವದೆಯ ಪ್ರವೇಶ)
ಪ್ರಿಯಂವದೆ: ಅನಸೂಯೆ ಈ ದೂರ್ವಾಸರು ಮೊದಲೇ ಪ್ರಕೃತಿ ವಕ್ರ! ಅವರನ್ನು ಎಲ್ಲಿ ತಡೆಯಲಾಗುತ್ತದೆ. ನಾನು ಹೇಗೋ ಸಮಾಧಾನ ಮಾಡಿ ಬಂದೆ.
ಅನಸೂಯೆ: (ಸಮಾಧಾನದ ಮುಗುಳ್ನಗೆಯಿಂದ) ಅಷ್ಟಾಗಿದ್ದೇ ಹೆಚ್ಚಾಯಿತು. ಹೇಳು?
ಪ್ರಿಯಂವದೆ: ಅವರು ಹಿಂದೆ ಬರಲಿಕ್ಕೆ ಒಪ್ಪಲಿಲ್ಲ. ಅದಕ್ಕೇ ನಾನು ಅಲ್ಲೇ ವಿಜ್ಞಾಪಿಸಿದೆ: ಭಗವನ್, ನಿಮ್ಮ ಶಕ್ತಿ ಗೊತ್ತಿಲ್ಲದ, ನಿಮ್ಮ ಮಗಳಂಥವಳಾದ ಶಕುಂತಲೆಯ ಈ ಮೊದಲ ಅಪರಾಧವನ್ನು ಕ್ಷಮಿಸಬೇಕು ಎಂದೆ.
ಅನಸೂಯೆ: ಆಮೇಲೆ?
ಪ್ರಿಯಂವದೆ: ನನ್ನ ಮಾತು ಸುಳ್ಳಾಗುವುದಕ್ಕೆ ಸಾಧ್ಯವಿಲ್ಲ. ಆದರೂ ಅವಳು ಯಾವುದಾದರೂ ಒಂದು ಅಭಿಜ್ಞಾವನ್ನು ತೋರಿಸಿದಾಗ ನನ್ನ ಶಾಪ ವಿಮೋಚನೆಯಾಗುತ್ತದೆ ಎಂದು ಹೇಳಿ ಹೊರಟುಹೋಗಿಬಿಟ್ಟರು.
ಅನಸೂಯೆ: ಸ್ವಲ್ಪ ಸಮಾಧಾನ ಮಾಡಿಕೊಳ್ಳಬಹುದು. ಆ ರಾಜರ್ಷಿ ಹೋಗುವಾಗ ಅವರ ಹೆಸರಿರುವ ಒಂದು ಉಂಗುರವನ್ನು ನೆನಪಿಗೆ ಇರಲಿ ಎಂದು ಕೊಟ್ಟು ಹೋಗಿದ್ದಾನೆ. ಶಕುಂತಲೆಗೆ ಅದು ಸಾಕಾಗುತ್ತದೆ.
ಪ್ರಿಯಂವದೆ: ಹೊಂ, ಸರಿ. ನಡಿ, ದೇವತಾಕಾರ್ಯಕ್ಕೆ ತಡವಾಗಿದೆ, ಹೊರಡೋಣ.
(ಮುಂದೆ ಹೋಗುತ್ತಾರೆ)
ಪ್ರಿಯಂವದೆ: (ನೋಡುತ್ತಾ) ಅನಸೂಯೆ, ಅಲ್ಲಿ ನೋಡು. ನಮ್ಮ ಪ್ರಿಯಸಖಿ ಎಡಗೈಯನ್ನು ಕೆನ್ನೆಯ ಮೇಲೆ ಇಟ್ಟುಕೊಂಡು ಕೂತಿದ್ದರೆ ಅದು ಒಂದು ಚಿತ್ರದಂತೆ ಕಾಣಿಸುತ್ತಿದೆ. ಗಂಡನ ಮೇಲೆ ಚಿಂತಿಸುತ್ತಾ ಅವಳಿಗೆ ತನ್ನ ಮೇಲೆಯೇ ಪ್ರಜ್ಞೆಯಿಲ್ಲ. ಇನ್ನು ಆಗಂತುಕನನ್ನು ಎಲ್ಲಿ ಗಮನಿಸಿಯಾಳು?
ಅನಸೂಯೆ: ಪ್ರಿಯಂವದೆ, ಈ ದೂರ್ವಾಸರ ವೃತ್ತಾಂತ ನಮ್ಮಲ್ಲಿಯೇ ಇರಲಿ. ಸ್ವಭಾವದಿಂದಲೇ ಸೌಮ್ಯವಾಗಿರುವವಳಿಗೆ ಈ ವಿಷಯ ತಿಳಿಯುವುದು ಬೇಡ. ಇವಳನ್ನು ನಾವೇ ರಕ್ಷಿಸಿಕೊಳ್ಳೋಣ.
ಪ್ರಿಯಂವದೆ: ಸರಿಯೇ, ನವಮಾಲಿಕಾ ಲತೆಗೆ ಯಾರು ಬಿಸಿನೀರನ್ನು ಹಾಕುತ್ತಾರೆ?
(ನಿಷ್ಕ್ರಮಿಸುತ್ತಾರೆ)
(ಸ್ವಲ್ಪ ತಿಂಗಳುಗಳ ನಂತರ....)
(ಆಗಿಂದ ನಿದ್ದೆಯಿಂದೆದ್ದ ಶಿಷ್ಯನ ಪ್ರವೇಶ)
ಶಿಷ್ಯ: ಸೋಮತೀರ್ಥದಿಂದ ವಾಪಸ್ಸು ಬಂದ ಕಣ್ವರು ಹೊರಗೆ ವೇಳೆ ಎಷ್ಟು ಆಗಿದೆಯೆಂದು ಕೇಳುತ್ತಿದ್ದಾರೆ. ಹೊರಗೆ ಹೋಗಿ ಇನ್ನೂ ಕತ್ತಲು ಇದೆಯೋ ನೋಡೋಣ.
(ಹೊರಗೆ ಬಂದು ನೋಡುತ್ತಾ)
ಒಹ್, ಬೆಳಗಾಗಿಬಿಟ್ಟಿದೆ.
ಒಂದು ಕಡೆ ಚಂದ್ರ ಬೆಟ್ಟಗಳಲ್ಲಿ ಮುಳುಗುತ್ತಿದ್ದಾನೆ, ಇನ್ನೊಂದು ಕಡೆ ಸೂರ್ಯ ಏಳುತ್ತಿದ್ದಾನೆ. ಇವರಿಬ್ಬರ ಏಳು ಬೀಳುಗಳಲ್ಲಿ ಈ ನಮ್ಮ ಲೋಕವೇ ನಿಯಮಿತವಾಗಿದೆ. ನಮ್ಮ ಜೀವನವೂ ಇದರಂತೆಯೇ!
ಚಂದ್ರ ಹೋದ, ಈಗ ನೈದಿಲೆ ದುಃಖದಿಂದ ಮುದುಡುತ್ತಿದೆ. ಆತ್ಮೀಯರು ಪ್ರವಾಸಕ್ಕೆ ಹೋದರೆ ಅವರ ಪತ್ನಿಯರಿಗೆ ದುಃಖವಲ್ಲದೆ ಇನ್ನೇನು?
(ಇನ್ನೊಂದು ಕಡೆಯಿಂದ ಪರದೆಯನ್ನು ತಳ್ಳಿಕೊಂಡು ಅನಸೂಯೆಯ ಪ್ರವೇಶ)
ಅನಸೂಯೆ: ವಿಷಯಪರಾಙ್ಮುಖರಿಗೂ ಇದು ತಿಳಿಯುತ್ತದೆ. ಆ ರಾಜ ಶಕುಂತಲೆಯ ಬಗ್ಗೆ ಅನಾರ್ಯನಾಗಿಯೇ ನಡೆದುಕೊಂಡ.
ಶಿಷ್ಯ: ಹೋಮವೇಳೆಯನ್ನು ಗುರುಗಳಿಗೆ ತಿಳಿಸುತ್ತೇನೆ.
(ನಿಷ್ಕ್ರಮಿಸುತ್ತಾನೆ)
ಅನಸೂಯೆ: ನನಗೆ ಮುಂಚೆ ಗೊತ್ತಿದ್ದರೂ ಏನು ಮಾಡಬಹುದಾಗಿತ್ತು? ದಿನಗೆಲಸ ಮಾಡಲೂ ನನ್ನ ಕೈಕಾಲು ಆಡುತ್ತಿಲ್ಲ. ಈಗ ಮನ್ಮಥನಿಗೆ ಸಂತೋಷವಾಗಿರಬಹುದು. ಶುದ್ಧ ಹೃದಯಾಳಾದ ನನ್ನ ಸಖಿ ಮೋಸಗಾರನ ಮೇಲೆ ಮನಸ್ಸಿಡುವಂತೆ ಮಾಡಿದನವನು. ಅಥವಾ ದೂರ್ವಾಸರ ಶಾಪ ಹೀಗೆ ಮಾಡಿಸುತ್ತಿದೆ. ಇಲ್ಲದಿದ್ದರೆ ಅಂದು ಅಷ್ಟು ಚೆನ್ನಾಗಿ ಮಾತಾಡಿವನು, ಅಂದಿನಿಂದ ಒಂದು ಕಾಗದವನ್ನೂ ಬರೆದಿಲ್ಲ. ಅವನಿಗೆ ಒಂದು ಅಭಿಜ್ಞಾನವನ್ನಾದರೂ ಕಳಿಸಲೇ? ದುಃಖಿತರಾದ ತಪಸ್ವಿ ಜನರಲ್ಲಿ ನಾನು ಯಾರು? ಇದು ಖಂಡಿತವಾಗಿ ಸಖಿಯರಾದ ನಮ್ಮ ದೋಷವೇ! ಈಗ ಸೋಮತೀರ್ಥದಿಂದ ವಾಪಸ್ಸು ಬಂದಿರುವ ಕಣ್ವರ ಬಳಿ ಇವಳು ದುಷ್ಯಂತನನ್ನು ಮದುವೆಯಾಗಿ, ಈಗ ಗರ್ಭಿಣಿಯೆಂದು ಹೇಗೆ ಹೇಳುವುದು? ಈ ಸಂದರ್ಭದಲ್ಲಿ ನಾವೇನು ಮಾಡುವುದು?
(ಪ್ರಿಯಂವದೆಯ ಪ್ರವೇಶ)
ಪ್ರಿಯಂವದೆ: (ಸಂತೋಷದಿಂದ) ಅನಸೂಯೆ, ಬೇಗ ತ್ವರೆಮಾಡು. ಶಕುಂತಲೆಯನ್ನು ಅವಳ ಗಂಡನ ಮನೆಗೆ ಕಳಿಸಬೇಕು.
ಅನಸೂಯೆ: ಏನಾಯಿತು?
ಪ್ರಿಯಂವದೆ: ಕೇಳು. ನಾನು ಈಗ ಮಾತ್ರ ಶಕುಂತಲೆಯನ್ನು ವಿಚಾರಿಸಲು ಹೋಗಿದ್ದೆ.
ಅನಸೂಯೆ: ಸರಿ?
ಪ್ರಿಯಂವದೆ: ಆಗಲೇ ಕಣ್ವರು ಬಂದು ಲಜ್ಜೆಯಿಂದ ನಮಸ್ಕರಿಸಿದ ಅವಳನ್ನು ತಬ್ಬಿಕೊಂಡು, "ಮಗಳೇ, ಯಜ್ಞದ ಹೊಗೆಯಿಂದ ಯಜಮಾನನ ಕಣ್ಣು ಮಬ್ಬಾಗಿದ್ದರೂ, ಆಹುತಿ ಅಗ್ನಿಯಲ್ಲಿಯೇ ಬಿತ್ತು. ವತ್ಸೇ, ಯೋಗ್ಯನಾದ ಶಿಷ್ಯನಿಗೆ ಕೊಟ್ಟ ವಿದ್ಯೆಯಂತೆ ನೀನು ನನ್ನನ್ನು ಶೋಕರಹಿತನಾಗಿ ಮಾಡಿಬಿಟ್ಟೆ. ಇಂದೇ ನಿನ್ನನ್ನು ಋಷಿರಕ್ಷಣೆಯಲ್ಲಿ ನಿನ್ನ ಗಂಡನ ಮನೆಗೆ ಕಳುಹಿಸುತ್ತೇನೆ" ಎಂದರು.
ಅನಸೂಯೆ: ಕಣ್ವರಿಗೆ ಈ ವಿಷಯವನ್ನು ಯಾರು ಹೇಳಿದರು?
ಪ್ರಿಯಂವದೆ: ಅವರು ಅಗ್ನಿಗೇಹವನ್ನು ಪ್ರವೇಶಿಸಿದಾಗ ಅವರಿಗೆ ಅಶರೀರವಾಣಿ ಆರ್ಷ ಛಂದಸ್ಸಿನಲ್ಲಿ ಹೇಳಿತು.
ಅನಸೂಯೆ: (ಆಶ್ಚರ್ಯದಿಂದ) ಏನು?
ಪ್ರಿಯಂವದೆ: ಅದು ಹೇಳಿತು:
ದುಷ್ಯನ್ತೇನಾಹಿತಂ ತೇಜೋ ದಧಾನಾಂ ಭೂತಯೇ ಭುವಃ
ಅವೇಹಿ ತನಯಾಂ ಬ್ರಹ್ಮನ್ನಗ್ನಿಗರ್ಭಾಂ ಶಮೀಮಿವ
(ಬ್ರಹ್ಮನ್, ಶಮೀ ವೃಕ್ಷದಲ್ಲಿರುವ ಅಗ್ನಿಯಂತೆ ನಿನ್ನ ಮಗಳು ಭೂಮಿಯ ಸಂತೋಷಕ್ಕಾಗಿ ದುಷ್ಯಂತನ ತೇಜಸ್ಸನ್ನು ಧರಿಸಿದ್ದಾಳೆ)
ಅನಸೂಯೆ: (ಪ್ರಿಯಂವದೆಯನ್ನು ತಬ್ಬಿಕೊಂಡು) ಪ್ರಿಯಂವದೇ, ನನಗೆ ತುಂಬಾ ಸಂತೋಷವಾಯಿತು. ಶಕುಂತಲೆ ಹೊರಟುಹೋಗುತ್ತಾಳೆ ಎಂಬ ದುಃಖವಾದರೂ ಅದನ್ನು ಮೀರಿ ಸಂತೋಷವಾಗುತ್ತಿದೆ.
ಪ್ರಿಯಂವದೆ: ಅನಸೂಯೆ, ನಮ್ಮ ದುಃಖವನ್ನು ಬದಿಗಿಡೋಣ. ಅವಳಿಗೆ ಸಮಾಧಾನವಾಗಲಿ.
ಅನಸೂಯೆ: ಈ ಸಂದರ್ಭಕ್ಕೆಂದೇ ಈ ಮಾವಿನ ಕೊಂಬೆಗೆ ತೆಂಗಿನ ಗರಿಯಲ್ಲಿ ಮಾಡಿದ ಬುಟ್ಟಿಯಲ್ಲಿ ಬಾಡದ ಕೇಸರ ವೃಕ್ಷದ ಹೂಗಳನ್ನು ಇಟ್ಟಿದ್ದೆ. ಅದನ್ನು ಸಿದ್ದ ಮಾಡಿಕೊಂಡಿರು. ಅವಳು ಹೋಗುವ ಹೊತ್ತಿಗೆ ಅವಳಿಗಾಗಿ, ಮೃತ್ತಿಕಾತೀರ್ಥ, ಗರಿಕೆ ಮುಂತಾದವುಗಳನ್ನು ಸಿದ್ದ ಮಾಡುತ್ತೇನೆ.
ಪ್ರಿಯಂವದೆ: ಹಾಗೇ ಮಾಡೋಣ.
(ಅನಸೂಯೆಯ ನಿರ್ಗಮನ. ಪ್ರಿಯಂವದೆ ಹೂಗಳನ್ನು ತೆಗೆದುಕೊಳ್ಳುವಂತೆ ನಟಿಸುತ್ತಾಳೆ.)
(ನೇಪಥ್ಯದಲ್ಲಿ)
ಗೌತಮಿ, ಶಾರ್ಙರವ ಮತ್ತು ಅವನ ಜೊತೆಯವನನ್ನು ಶಕುಂತಲೆಯನ್ನು ಕರೆದುಕೊಂಡು ಹೋಗಲು ಕರೆದುಕೊಂಡು ಬಾ.
ಪ್ರಿಯಂವದೆ: (ಆ ಕಡೆ ಕಿವಿ ಕೊಟ್ಟು) ಅನಸೂಯೆ ಬೇಗ, ಬೇಗ. ಹಸ್ತಿನಾಪುರಕ್ಕೆ ಹೋಗುವ ಋಷಿಗಳು ಬರುತ್ತಿದ್ದಾರೆ.
(ಪರಿಕರಗಳನ್ನು ತೆಗೆದುಕೊಂಡು ಅನಸೂಯೆಯ ಪ್ರವೇಶ)
ಅನಸೂಯೆ: ಸರಿ ಸರಿ. ನಡಿ ಹೋಗೋಣ.
(ಹೊರಡಲು ಅಣಿಯಾಗುತ್ತಾರೆ)
ಪ್ರಿಯಂವದೆ: (ಆ ಕಡೆ ನೋಡುತ್ತಾ) ಇಲ್ಲಿ ನೋಡು ಶಕುಂತಲೆ, ಬೆಳಿಗ್ಗೆ ಬೆಳಿಗ್ಗೆಯೇ ತಲೆಸ್ನಾನ ಮಾಡಿಕೊಂಡು ಸಿದ್ಧವಾಗಿದ್ದಾಳೆ. ಸ್ವಸ್ತಿವಚನಕ್ಕಾಗಿ ನೀವಾರ ಧಾನ್ಯಗಳನ್ನು ಹಿಡಿದು ತಪಸ್ವಿಗಳು ಬಂದಿದ್ದಾರೆ. ಹೋಗೋಣ ನಡಿ.
(ಆ ಕಡೆ ಹೋಗುತ್ತಾರೆ)
(ತಪಸ್ವಿಗಳ ಜೊತೆ ಶಕುಂತಲೆಯ ಪ್ರವೇಶ)
(ಶಕುಂತಲೆ ಕುಳಿತಿದ್ದಾಳೆ)
(ತಪಸ್ವಿಗಳು ಆಶೀರ್ವಾದ ಮಾಡುತ್ತಿದ್ದಾರೆ)
ಮೊದಲ ತಪಸ್ವಿ: (ಶಕುಂತಲೆಗೆ) ಮಗಳೇ, ಗಂಡನ ಬಹುಮಾನಸೂಚಕವಾಗಿ ಮಹಾರಾಣಿಯಾಗು.
ಎರಡನೆಯವರು: ಮಗಳೇ, ವೀರನಿಗೆ ಜನ್ಮ ಕೊಡುವವಳಾಗು.
ಮೂರನೆಯವರು: ವತ್ಸೇ, ಗಂಡನಿಗೆ ಆರಾಧ್ಯಳಾಗು.
(ಆಶೀರ್ವಾದ ಮಾಡಿ, ಗೌತಮಿಯನ್ನು ಬಿಟ್ಟು ಮಿಕ್ಕೆಲ್ಲ ಋಷಿಗಳ ನಿರ್ಗಮನ)
ಸಖಿಯರು: (ಹತ್ತಿರ ಬಂದು) ಸುಖ ಮಜ್ಜನವಾಯಿತೇ?
ಶಕುಂತಲೆ: ಸ್ನೇಹಿತೆಯರಿಗೆ ಸ್ವಾಗತ, ಬನ್ನಿ ಕುಳಿತುಕೊಳ್ಳಿ.
ಇಬ್ಬರೂ: (ಮಂಗಳ ಪಾತ್ರೆಗಳನ್ನು ಹಿಡಿದು) ಸಿದ್ಧಳಾಗು, ನಾವು ನಿನಗೆ ಅಲಂಕಾರ ಮಾಡುತ್ತೇವೆ.
ಶಕುಂತಲೆ: ಈಗ ನನಗೆ ಸಂತೋಷವಾಯಿತು. ಇನ್ನು ಮುಂದೆ ನಿಮ್ಮ ಜೊತೆ ಅಲಂಕಾರ ಮಾಡಿಸಿಕೊಳ್ಳುವುದು ದುರ್ಲಭವಾಗುತ್ತದೆ.
(ಶಕುಂತಲೆಯ ಕಣ್ಣಲ್ಲಿ ನೀರು ಒಸರುತ್ತದೆ)
ಇಬ್ಬರೂ: ಸಖಿ, ಮಂಗಳ ಸಮಯಗಳಲ್ಲಿ ಕಣ್ಣೀರು ಸುರಿಸುವುದು ಉಚಿತವಲ್ಲ.
(ಇಬ್ಬರೂ ಕಣ್ಣೊರೆಸಿಕೊಳ್ಳುತ್ತಾರೆ)
ಪ್ರಿಯಂವದೆ: ಆಭರಣಗಳಿಗೆ ಉಚಿತವಾದ ನಿನ್ನ ದೇಹಕ್ಕೆ ಆಶ್ರಮದಲ್ಲಿ ಸಿಗುವ ಪದಾರ್ಥಗಳಿಂದ ಅಲಂಕಾರ ಮಾಡಬೇಕಿದೆ.
(ಕೈಯಲ್ಲಿ ಉಪಾಯನಗಳನ್ನು ಹಿಡಿದ ಇಬ್ಬರೂ ಋಷಿಕುಮಾರರ ಪ್ರವೇಶ)
ಕುಮಾರರು: ಈ ಆಭರಣಗಳಿಂದ ಶಕುಂತಲೆಯನ್ನು ಅಲಂಕರಿಸಿ.
(ಎಲ್ಲರೂ ಅದನ್ನು ನೋಡಿ ವಿಸ್ಮಯದಿಂದ)
ಗೌತಮಿ: ಮಗನೇ, ನಾರದ, ಇವೆಲ್ಲಿಯವು?
ನಾರದ: ಕಣ್ವರ ಪ್ರಭಾವದಿಂದ.
ಗೌತಮಿ: ಏನು? ಮನಸ್ಸಿನಿಂದಲೇ ಸೃಷ್ಟಿಸಿದ್ದೇ?
ಎರಡನೆಯ ಕುಮಾರ: ಇಲ್ಲ ಕೇಳಿ. ಕಣ್ವರು ನಮಗೆ ಶಕುಂತಲೆಗಾಗಿ ಹೂಗಳನ್ನು ತರಲು ಹೇಳಿದರು. ಆಗ, ಹೂಗಳನ್ನು ಕೀಳುವಾಗ ಒಂದೊಂದು ಮರವೂ ಒಂದು ರೀತಿಯ ಆಭರಣಗಳನ್ನು ಕೊಟ್ಟವು.
ಪ್ರಿಯಂವದೆ: (ಶಕುಂತಲೆಯನ್ನು ನೋಡುತ್ತಾ) ಶಕುಂತಲೆ, ಇದು ನೀನು ನಿನ್ನ ಗಂಡನ ಮನೆಯಲ್ಲಿ ರಾಜಲಕ್ಷ್ಮಿಯಾಗಿರುತ್ತೀಯ ಎಂಬುದರ ಸಂಕೇತ.
(ಶಕುಂತಲೆ ಆಶ್ಚರ್ಯವನ್ನು ತೋರಿಸುತ್ತಾಳೆ)
ನಾರದ: ಗೌತಮ, ಬೇಗ ಬಾ. ಕಣ್ವರ ಸ್ನಾನ ಮುಗಿದಿರುತ್ತದೆ. ಈ ಮರಗಳ ದಾನಗಳನ್ನು ಅವರಿಗೆ ತಿಳಿಸೋಣ.
ಎರಡನೆಯ ಕುಮಾರ: ಸರಿ.
(ಇಬ್ಬರ ನಿರ್ಗಮನ)
ಸಖಿಯರು: ಅಯ್ಯೋ, ನಮಗೆ ಈ ಆಭರಣಗಳನ್ನು ಉಪಯೋಗಿಸಿಯೇ ಅಭ್ಯಾಸವಿಲ್ಲ. ಆದರೂ ಚಿತ್ರಗಳಲ್ಲಿ ನೋಡಿರುವಂತೆ ಅಲಂಕರಿಸೋಣ.
ಶಕುಂತಲೆ: ನಿಮ್ಮ ನೈಪುಣ್ಯ ನನಗೆ ಗೊತ್ತು.
(ಇಬ್ಬರೂ ಅಲಂಕಾರ ಮಾಡಲು ಶುರು ಮಾಡುತ್ತಾರೆ)
(ಸ್ನಾನ ಮುಗಿಸಿ ಬಂದ ಕಣ್ವರ ಪ್ರವೇಶ)
ಕಣ್ವರು: ಶಕುಂತಲೆ ಇಂದು ಹೊರಡುತ್ತಾಳೆ ಎಂದು ನನ್ನ ಮನಸ್ಸು ಉತ್ಕಂಠವಾಗಿದೆ. ಕಂಠ ಹಿಡಿದು ಮಾತೇ ಹೊರಬರುತ್ತಿಲ್ಲ. ಕಣ್ಣೀರಿನಿಂದ ಕಣ್ಣು ಮಬ್ಬಾಗಿದೆ. ಕಾಡಿನ ಮನುಷ್ಯನಾದ ನನಗೇ ಇಷ್ಟು ವೈಕ್ಲವ್ಯವಾದರೆ, ಇನ್ನು ಹೊಸದಾಗಿ ಮದುವೆಯಾದ ತಮ್ಮ ಮಗಳನ್ನು ಗಂಡನ ಮನೆಗೆ ಕಳಿಸುವಾಗ ಗೃಹಸ್ಥನಿಗೆ ಎಷ್ಟು ದುಃಖವಾಗುತ್ತದೋ!!
(ಮುಂದೆ ನಡೆಯುತ್ತಾರೆ)
ಸ್ನೇಹಿತೆಯರು: ಶಕುಂತಲೆ, ನಿನ್ನ ಅಲಂಕಾರ ಮುಗಿಯಿತು. ಈ ರೇಷ್ಮೆ ವಸ್ತ್ರವನ್ನು ಧರಿಸು.
(ಶಕುಂತಲೆ ಹಾಗೇ ಮಾಡುತ್ತಾಳೆ)
ಗೌತಮಿ: ಶಕುಂತಲೆ, ಆನಂದ ಬಾಷ್ಪಗಳಿಂದ ನಿನ್ನನ್ನು ಅಪ್ಪಿಕೊಳ್ಳಲು ಕಣ್ವರು ಬಂದಿದ್ದಾರೆ. ಅವರಿಗೆ ನಮಸ್ಕಾರ ಮಾಡು.
ಶಕುಂತಲೆ: (ನಾಚಿಕೆಯಿಂದ) ಅಪ್ಪನಿಗೆ ನಮಸ್ಕಾರಗಳು.
(ನಮಸ್ಕರಿಸುತ್ತಾಳೆ)
ಕಣ್ವರು: ಮಗಳೇ, ಯಯಾತಿಗೆ ಶರ್ಮಿಷ್ಠೆ ಪ್ರಿಯಳಾದಂತೆ, ನೀನೂ ನಿನ್ನ ಗಂಡನಿಗೆ ಪ್ರಿಯಳಾಗು. ಅವಳ ಮಗ ಪುರು ಸಾಮ್ರಾಟನಾದಂತೆ ನಿನ್ನ ಮಗನೂ ಸಾಮ್ರಾಟನಾಗಲಿ.
ಗೌತಮಿ: ಭಗವಾನ್, ಇದು ವರ, ಆಶೀರ್ವಾದವಲ್ಲ.
ಕಣ್ವರು: ಮಗಳೇ, ಈಗಷ್ಟೇ ಆಹುತಿ ಕೊಟ್ಟಿರುವ ಈ ಅಗ್ನಿಯನ್ನು ಪ್ರದಕ್ಷಿಣೆ ಮಾಡು.
(ಎಲ್ಲರೂ ಪ್ರದಕ್ಷಿಣೆ ಮಾಡುತ್ತಾರೆ)
ಕಣ್ವರು: (ಆಶೀರ್ವದಿಸುತ್ತಾರೆ)
(ಋಕ್ಛಂದಸ್ಸಿನಲ್ಲಿ)
ಅಮೀ ವೇದಿಂ ಪರಿತಃ ಕೢಪ್ತಧಿಷ್ಣ್ಯಾಃ ಸಮಿದ್ವನ್ತಃ ಪ್ರಾನ್ತಸಂಸ್ತೀರ್ಣದರ್ಭಾಃ ।
ಅಪಘ್ನತೋ ದುರಿತಂ ಹವ್ಯಗನ್ಧೈರ್ವೈತಾನಾಸ್ತ್ವಾಂ ವಹ್ನಯಃ ಪಾವಯಂತು ||
(ಇದು ಋಗ್ವೇದದ ಮುಖ್ಯ ಛಂದಸ್ಸಾದ ತ್ರಿಷ್ಟುಪ್ ಛಂದಸ್ಸಿನಲ್ಲಿದೆ, ವೇದಗಳ ಹೊರತಾಗಿ ಈ ಛಂದಸ್ಸಿನ ಪ್ರಯೋಗ ಭಾರತೀಯ ಕಾವ್ಯ ಪ್ರಪಂಚದಲ್ಲಿ ಇಲ್ಲಿ ಮಾತ್ರ ಬರುತ್ತದೆ.
ಅರ್ಥ -
ಈ ವೇದಿಯನ್ನು ಆವರಿಸಿರುವ ತ್ರೇತಾಗ್ನಿಗಳು ಸಮಿತ್ತು ಕುಶಾದಿಗಳಿಂದ ಜಾಜ್ವಲ್ಯವಾಗಿವೆ. ಅವು ತಮ್ಮ ದಿವ್ಯ ಗಂಧದಿಂದ ನಿಮ್ಮನ್ನು ಪಾವನಗೊಳಿಸಲಿ.)
(ಸುತ್ತಲೂ ನೋಡಿ)
ಶಾರ್ಙರವರೆಲ್ಲಿ?
(ಅವರ ಆಗಮನ)
ಶಾರ್ಙರವ: ಭಗವನ್ ಇಲ್ಲಿದ್ದೇವೆ.
ಕಣ್ವರು: ನಿಮ್ಮ ತಂಗಿ ಶಕುಂತಲೆಗೆ ದಾರಿ ತೋರಿಸಿ.
ಶಾರ್ಙರವ: ಶಕುಂತಲೆ, ಇಲ್ಲಿ, ಇಲ್ಲಿ.
(ಎಲ್ಲರೂ ಮುಂದೆ ನಡೆಯುತ್ತಾರೆ)
ಕಣ್ವರು: ಒಹ್! ತಪೋವನದ ತರುಗಳು ಬಂದವು.... ತಪೋವನದ ತರುಗಳೇ, ಇವಳು ತಾನು ನೀರು ಕುಡಿಯುವ ಮುನ್ನ ನಿಮಗೇ ಮೊದಲು ನೀರು ಹಾಕುತ್ತಿದ್ದಳು, ಅವಳಿಗೆ ಅಲಂಕಾರ ಮಾಡಿಕೊಳ್ಳುವುದು ಇಷ್ಟವಾಗಿದ್ದರೂ ಅದಕ್ಕಾಗಿ ನಿಮ್ಮ ಒಂದು ಚಿಗುರನ್ನೂ ಕೊಯ್ಯುತ್ತಿರಲಿಲ್ಲ, ನಿಮಗೆ ಹೊಸದಾಗಿ ಹಣ್ಣು, ಹೂ, ಚಿಗುರು ಏನೇ ಬಿಟ್ಟರೂ ಅವಳು ಹಬ್ಬ ಮಾಡುತ್ತಿದ್ದಳು. ಇಂದು ಅವಳು ತನ್ನ ಗಂಡನ ಮನೆಗೆ ಹೋಗುತ್ತಿದ್ದಾಳೆ. ನೀವೆಲ್ಲರೂ ಅನುಜ್ಞೆಯನ್ನು ಕೊಡಿ.
(ಕೋಕಿಲರವದ ಸೂಚನೆ)
ಶಕುಂತಲೆಗೆ ತನ್ನ ವನಬಂಧುಗಳಿಂದ ಅನುಜ್ಞೆ ಸಿಕ್ಕಿಬಿಟ್ಟಿತು. ಅಂತೆಯೇ ಈ ಕೋಗಿಲೆಯಿಂದಲೂ ಅನುಜ್ಞೆ ಸಿಕ್ಕಿತು.
(ಆಕಾಶದಿಂದ ಅಶರೀರ ಧ್ವನಿ)
ಶಕುಂತಲೆ ಹೋಗುವಾಗ ದಾರಿಯಲ್ಲಿ ರಮ್ಯವಾದ ತಾವರೆಗಳಿರುವ ಸರೋವರಗಳು ಸಿಗಲಿ. ತಂಪಾದ ನೆರಳು ಕೊಡುವ ದೊಡ್ಡ ದೊಡ್ಡ ಮರಗಳಿರಲಿ. ದಾರಿಯಲ್ಲಿ ಧೂಳಿಲ್ಲದಿರಲಿ. ಇವರಿಗೆ ಅನುಕೂಲವಾಗಿ ಗಾಳಿ ಬೀಸಲಿ. ದಾರಿ ಮಂಗಳಕರವಾಗಿರಲಿ.
(ಎಲ್ಲರೂ ಕೇಳಿಸಿಕೊಂಡು ವಿಸ್ಮಯರಾಗುತ್ತಾರೆ)
ಗೌತಮಿ: ಮಗಳೇ ನಿನ್ನ ತಪೋವನದ ಬಂಧುಗಳಿಂದ ಅನುಜ್ಞೆ ಸಿಕ್ಕಿತು. ಅವುಗಳಿಗೆ ನಮಸ್ಕಾರ ಮಾಡು.
ಶಾಕುಂತಲ: (ಅವುಗಳಿಗೆ ನಮಸ್ಕಾರ ಮಾಡಿ, ಪ್ರಿಯಂವದೆಗೆ ಗುಟ್ಟಾಗಿ)
ದುಷ್ಯಂತನನ್ನು ನೋಡಲು ಉತ್ಸುಕಳಾಗಿದ್ದರೂ ಈ ಆಶ್ರಮವನ್ನು ಬಿಟ್ಟು ಕಾಲು ಮುಂದೆ ನಡೆಯುತ್ತಲೇ ಇಲ್ಲ.
ಪ್ರಿಯಂವದೆ: ದುಃಖ ನಿನಗಷ್ಟೇ ಅಲ್ಲ. ನಿನ್ನ ವಿಯೋಗದಿಂದ ತಪೋವನವೂ ದುಃಖವಾಗಿಯೇ ಕಾಣುತ್ತದೆ. ಜಿಂಕೆಗಳು ಹುಲ್ಲನ್ನು ಬಿಟ್ಟಿವೆ. ನವಿಲುಗಳು ನಾಟ್ಯವಾಡುತ್ತಿಲ್ಲ. ಲತೆಗಳಿಂದ ಕಣ್ಣೀರು ಸುರಿಸುವಂತೆ ಎಲೆಗಳು ಕೆಳಗೆ ಬೀಳುತ್ತಿವೆ.
ಶಕುಂತಲೆ: (ಜ್ಞಾಪಿಸಿಕೊಂಡು) ಅಪ್ಪ, ನನ್ನ ತಂಗಿ ವನಜ್ಯೋತ್ಸ್ನೆಯನ್ನು ಮಾತಾಡಿಸಿ ಬರುತ್ತೇನೆ.
ಕಣ್ವರು: ನಿನಗೆ ಅವಳಲ್ಲಿ ಸೋದರ ಸ್ನೇಹವಿರುವುದು ನನಗೇ ಗೊತ್ತು. ಹೋಗಿ ಬಾ.
ಶಕುಂತಲೆ: (ಲತೆಯನ್ನು ತಬ್ಬಿಕೊಂಡು) ವನಜ್ಯೋತ್ಸ್ನೆ, ನೀನು ಈ ಮಾವಿನಮರವನ್ನು ಅಪ್ಪಿಕೊಂಡಂತೆಯೇ ನನ್ನನ್ನೂ ಅಪ್ಪಿಕೋ. ಇಂದಿನಿಂದ ನಾನು ನಿನಗೆ ದೂರವಾಗುತ್ತೇನೆ.
ಕಣ್ವರು: ಅಮ್ಮ, ನಿನ್ನನ್ನು ಅನುರೂಪನಾದ ವರನಿಗೆ ಕೊಡಬೇಕೆಂದು ನನ್ನ ಸಂಕಲ್ಪವಾಗಿತ್ತು. ನಿನಗೆ ಅಂಥವನು ಸಿಕ್ಕಿದ್ದಾನೆ. ನವಮಾಲಿಕಾ ಲತೆಗೂ ಈ ಮಾವಿನ ಮರ ಸಿಕ್ಕಿದೆ. ಇನ್ನು ನಿಮ್ಮಿಬ್ಬರ ವಿಷಯದಲ್ಲಿ ನನಗೆ ಯೋಚನೆಯಿಲ್ಲ!
ಈ ಕಡೆ ನಡೆ.
ಶಕುಂತಲೆ: (ತನ್ನ ಸಖಿಯರಿಗೆ) ಈ ನವಮಾಲಿಕೆಯನ್ನೂ, ಮಾವಿನಮರವನ್ನೂ ನಿಮ್ಮ ಕೈಲಿಡುತ್ತನೆ.
ಸಖಿಯರು: ನಮ್ಮನ್ನು ಯಾರ ಕೈಲಿಡುತ್ತೀಯ? (ಕಣ್ಣೀರು ಸುರಿಸುತ್ತಾರೆ)
ಕಣ್ವರು: ಅನಸೂಯೆ, ಅಳಬೇಡ. ನೀವೇ ಶಕುಂತಲೆಯನ್ನು ಸಮಾಧಾನ ಮಾಡಬೇಕು.
(ಎಲ್ಲರೂ ಮುಂದೆ ನಡೆಯುತ್ತಾರೆ)
ಶಕುಂತಲೆ: ಅಪ್ಪ, ಆಶ್ರಮದಲ್ಲಿ ನಿಧಾನವಾಗಿ ಓಡಾಡುತ್ತಿರುವ ಆ ಗರ್ಭಿಣಿ ಜಿಂಕೆಗೆ ಸುಖಪ್ರಸವವಾದೊಡನೆ ನೀವು ನನಗೆ ಹೇಗಾದರೂ ತಿಳಿಸಲೇಬೇಕು.
ಕಣ್ವರು: ಖಂಡಿತ ಮರೆಯುವುದಿಲ್ಲವಮ್ಮ.
ಶಕುಂತಲೆ: (ನಡೆಯುವುವಾಗ ತೊಡಕಾದಂತೆ ನಟಿಸುತ್ತಾ) ಯಾರು ನನಗೆ ಅಡ್ಡ ಬರುತ್ತಿರುವುದು?
(ಹಿಂತಿರುಗಿ ನೋಡುತ್ತಾಳೆ)
ಕಣ್ವರು: ಶಕುಂತಲೆ, ತನ್ನ ಮುಖಕ್ಕೆ ಗಾಯವಾದಾಗ ಅದಕ್ಕೇ ಇಂಗುದೀ ತೈಲವನ್ನು ಹಚ್ಚಿ ಗಾಯವನ್ನು ಗುಣಮಾಡಿ, ಒಳ್ಳೆಯ ಹುಲ್ಲನ್ನು ಕೊಟ್ಟ ಬೆಳಸಿದ ಈ ಮರಿಜಿಂಕೆ ನಿನ್ನನ್ನು ಅನುಸರಿಸುತ್ತಿದೆ.
ಶಕುಂತಲೆ: ಮಗುವೇ, ಬಿಟ್ಟು ಹೋಗುತ್ತಿರುವ ನನ್ನನ್ನೇಕೆ ಅನುಸರಿಸುತ್ತಿರುವೆ? ಹುಟ್ಟಿದ ತಕ್ಷಣ ನೀನು ನಿನ್ನ ತಾಯಿಯನ್ನು ಕಳೆದುಕೊಂಡಾಗ ನಾನೇ ನಿನ್ನನ್ನು ಬೆಳಸಿದೆ. ಈಗ ನಾನಿಲ್ಲದಿದ್ದರೂ ನನ್ನ ತಂದೆ ನಿನ್ನನ್ನು ನೋಡಿಕೊಳ್ಳುತ್ತಾರೆ. ದೂರ ಹೋಗು.
(ಅಳಲು ಶುರುಮಾಡುತ್ತಾಳೆ)
ಕಣ್ವರು: ಅಮ್ಮ, ಕಣ್ಣೀರಿನಿಂದ ನಿನ್ನ ಕಣ್ಣುಗಳು ಮಬ್ಬಾಗಿ ದಾರಿ ಕಾಣಿಸುವುದಿಲ್ಲ. ದಾರಿಯಲ್ಲಿ ಏರಿಳಿತಗಳಿವೆ. ಅಲಕ್ಷ್ಯ ಮಾಡಿದರೆ ಕಾಲುಗಳಿಗೆ ತೊಂದರೆಯಾಗುತ್ತದೆ.
ಶಾರ್ಙರವ: ಭಗವನ್, ನೀರಿನ ಸೆಲೆ ಬರುವವರೆಗು ಮಾತ್ರ ಆತ್ಮೀಯರು ಬಂದು ಬೀಳ್ಕೊಡಬೇಕೆಂದು ಶಾಸ್ತ್ರ. ಸರೋವರ ಬಂದಿತು. ಅಲ್ಲಿವರೆಗೂ ಬಂದು ಸಂದೇಶ ಕೊಟ್ಟು ನೀವು ವಾಪಸ್ಸು ಹೊರಡಬೇಕು.
ಕಣ್ವರು: ಹಾಗಾದರೆ ಈ ಮರದ ನೆರಳಿಗೆ ಹೋಗೋಣ.
(ಎಲ್ಲರೂ ಮುಂದೆ ಹೋಗಿ ನಿಲ್ಲುತ್ತಾರೆ)
ಕಣ್ವರು: (ಸ್ವಗತ) ದುಷ್ಯಂತನಿಗೆ ಯುಕ್ತವಾದ ಯಾವ ಸಂದೇಶವನ್ನು ಕೊಡೋಣ?
(ಚಿಂತಿಸುತ್ತಾರೆ)
ಶಕುಂತಲೆ: (ತನ್ನ ಸಖಿಯರಿಗೆ ತಮ್ಮತಮ್ಮಲ್ಲೇ) ಇಲ್ಲಿ ನೋಡಿ, ಸರೋವರದ ತಾವರೆಯೆಲೆಗಳ ಮಧ್ಯದಲ್ಲಿ ತನ್ನ ಸಖಿಯನ್ನು ಕಾಣದೆ ಚಕ್ರವಾಕ ಪಕ್ಷಿ ಗೋಳಾಡುತ್ತಿದೆ. ನಾನೂ ಹೀಗಾಗಿಬಿಡುತ್ತೇನೋ ಎನಿಸುತ್ತಿದೆ.
ಅನಸೂಯೆ: ಇಲ್ಲ, ಇಲ್ಲ, ಹಾಗೆ ಹೇಳಬೇಡ. ಅದು ವಿರಹದಿಂದಲೇ ದೀರ್ಘವಾದ ತನ್ನ ರಾತ್ರಿಯನ್ನು ಕಳೆಯುತ್ತದೆ. ಆದರೂ ತನಗಿರುವ ಆಶಾಭಾವದಿಂದ ಅದನ್ನು ತಡೆದು ಹಗಲಿನವರೆಗೂ ಕಾಯುತ್ತದೆ.
ಕಣ್ವರು: ಶಾರ್ಙರವ, ನನ್ನ ಮಾತಾಗಿ ಇವಳನ್ನು ಮುಂದೆಯಿಟ್ಟುಕೊಂಡು ರಾಜ ದುಷ್ಯಂತನಿಗೆ ಹೀಗೆ ಹೇಳು.
ಶಾರ್ಙರವ: ಭಗವನ್, ಆಜ್ಞೆಯಾಗಲಿ.
ಕಣ್ವರು: "ರಾಜ, ನಮ್ಮನ್ನೂ, ನಿನ್ನ ಉತ್ತಮಕುಲವನ್ನೂ, ನಾವಿರದಿದ್ದಾಗ ಈ ನಮ್ಮ ಶಕುಂತಲೆಯ ಮೇಲೆ ತೋರಿಸಿದ ಸ್ನೇಹವನ್ನೂ ಕುರಿತು ಯೋಚಿಸಿ, ಇವಳನ್ನು ನಿನ್ನ ರಾಣಿಯರಲ್ಲಿ ಒಬ್ಬಳನ್ನಾಗಿ ಮಾಡಿಕೊಂಡು ಚೆನ್ನಾಗಿ ನೋಡಿಕೋ. ಮಿಕ್ಕದ್ದು ಅವಳ ಭಾಗ್ಯದೈವಕ್ಕೆ ಬಿಟ್ಟಿದ್ದು. ಇದಕ್ಕಿಂತಲೂ ಹೆಚ್ಚಿನದನ್ನು ವಧೂ ಬಂಧುಗಳು ಹೇಳಬಾರದು."
ಶಾರ್ಙರವ: ಸಂದೇಶ ಗೃಹೀತವಾಗಿದೆ.
ಕಣ್ವರು: ಮಗಳೇ, ಇನ್ನು ನಿನಗೆ ಸಂದೇಶ. ಸಂತರು ವನವಾಸಿಗಳಾದರೂ ಲೌಕಿಜ್ಞರು.
ಶಾರ್ಙರವ: ತಿಳಿದವರಿಗೆ ಅಜ್ಞಾತವಿಷಯವೇ ಇಲ್ಲ.
ಕಣ್ವರು: ಮಗಳೇ, ನೀನು ಗಂಡನ ಮನೆಗೆ ಹೋದ ಮೇಲೆ ಗುರುಜನರ ಶುಶ್ರೂಷೆ ಮಾಡು. ಸಪತ್ನಿಯರಲ್ಲಿ ಸ್ನೇಹದಿಂದಿರು. ಗಂಡ ಕೋಪಿಸಿಕೊಂಡರೂ, ನೀನು ಅವನಿಗೆ ವಿರೋಧಿಯಾಗಬೇಡ. ನಿನ್ನ ಸೇವಕರಿಗೆ ಉದಾರಿಯಾಗಿರು. ನಿನಗೆ ಒಳ್ಳೆಯದಾದಾಗ ಹೆಚ್ಚು ಉತ್ಸುಕಳಾಗಬೇಡ. ಹೀಗಿದ್ದರೆ ಯುವತಿಯರು ಗೃಹಿಣಿಯಾಗುತ್ತಾರೆ, ಇಲ್ಲದಿದ್ದರೆ, ಮನೆಗೆ ಕೆಟ್ಟಹೆಸರು ತರುತ್ತಾರೆ.
ಗೌತಮಿಗೆ ಏನನ್ನಿಸುತ್ತದೆ?
ಗೌತಮಿ: ನೀವು ಹೇಳಿದಕ್ಕಿಂತ ಇನ್ನೂ ಹೆಚ್ಚು ಹೇಳಲು ಏನಿದೆ? ಮಗಳೇ, ಅವರು ಹೇಳಿದ್ದೆಲ್ಲವನ್ನೂ ಅನುಸರಿಸು.
ಕಣ್ವರು: ಮಗಳೇ, ನಿನ್ನ ಸ್ನೇಹಿತೆಯರನ್ನೂ, ನನ್ನನ್ನೂ ಆಲಂಗಿಸಿ ಬೀಳ್ಕೊಡು.
ಶಕುಂತಲೆ: ಅಪ್ಪ, ಪ್ರಿಯಂವದೆ ಮತ್ತು ಅನಸೂಯೆಯರೂ ಇಲ್ಲಿಂದ ನಿಮ್ಮ ಜೊತೆ ಹಿಂದೆ ಹೋಗುತ್ತಾರಾ?
ಕಣ್ವರು: ಮಗಳೇ, ಹೌದು ಅವರು ನಮ್ಮ ಜೊತೆ ಹಿಂದಕ್ಕೆ ಬರಲೇಬೇಕು. ಅವರು ಅಲ್ಲಿಗೆ ಬರುವುದು ಯುಕ್ತವಲ್ಲ. ನಿನ್ನ ಜೊತೆ ಗೌತಮಿ ಬರುತ್ತಾಳೆ.
ಶಕುಂತಲೆ: (ತಂದೆಯನ್ನು ಆಲಂಗಿಸಿ) ಅಪ್ಪ, ಮಲಯ ಪರ್ವತದಿಂದ ಚಂದನಲತೆ ಬೇರು ಸಮೇತ ಕಿತ್ತುಬಂದಂತೆ ತಂದೆಯ ತೋಳಿನಿಂದ ತಪ್ಪಿಸಿಕೊಂಡು ದೇಶವಲ್ಲದ ದೇಶದಲ್ಲಿ ಹೇಗೆ ಬಾಳಲಿ?
ಕಣ್ವರು: ಮಗಳೇ, ಭಯ ಬೇಡ. ಒಳ್ಳೆಯ ಮನೆತನದಲ್ಲಿ, ಒಳ್ಳೆಯ ಗಂಡನ ಜೊತೆ ಗರತಿಯಂತೆ ಬಾಳುತ್ತೀಯ, ರಾಣಿಯ ಕೆಲಸಗಳಲ್ಲಿ ತಲ್ಲೀನಳಾಗಿ, ಸೂರ್ಯನಿಗೆ ಸಮನಾದ ಮಗನನ್ನು ಪಡೆಯುತ್ತೀಯ.. ಇವೆಲ್ಲವುಗಳಲ್ಲಿ ನಿನಗೆ ನನ್ನ ನೆನಪೇ ಅಷ್ಟು ಕಾಡುವುದಿಲ್ಲ.
(ಶಕುಂತಲೆ ಕಣ್ವರ ಪಾದಗಳಿಗೆ ನಮಸ್ಕಾರ ಮಾಡುತ್ತಾಳೆ)
ಕಣ್ವರು: (ಆಶೀರ್ವದಿಸುತ್ತಾರೆ) ನಾನು ಬಯಸಿದ್ದು ನಿನಗೆ ದೊರೆಯಲಿ.
ಶಕುಂತಲೆ: (ತನ್ನ ಸ್ನೇಹಿತೆಯ ಬಳಿ ಬಂದು) ನಿಮ್ಮಿಬ್ಬರನ್ನೂ ಒಟ್ಟಿಗೆ ಅಪ್ಪಿಕೊಳ್ಳುತ್ತೇನೆ.
(ಅಪ್ಪಿಕೊಳ್ಳುತ್ತಾಳೆ)
ಸಖಿಯರು: ಶಕುಂತಲೆ, ಅಕಸ್ಮಾತ್ ರಾಜ ನಿನ್ನನ್ನು ಗುರುತು ಹಿಡಿಯುವುದಕ್ಕೆ ತಡ ಮಾಡಿದರೆ, ಅವನ ಹೆಸರಿರುವ ಈ ಮುದ್ರೆಯುಂಗುರವನ್ನು ತೋರಿಸು.
ಶಕುಂತಲೆ: ನಿಮ್ಮ ಸಂದೇಹದಿಂದ ನನಗೆ ಭಯವಾಗುತ್ತಿದೆ.
ಸಖಿಯರು: ಸಖಿ, ಭಯ ಪಡಬೇಡ. ಅತಿಸ್ನೇಹ ಪಾಪಶಂಕಿ!
ಶಾರ್ಙರವ: ಸೂರ್ಯ ಮುಳುಗುತ್ತಿದ್ದಾನೆ, ಬೇಗ ಹೊರಡೋಣ.
ಶಕುಂತಲೆ: (ಆಶ್ರಮದ ಕಡೆ ನೋಡುತ್ತಾ) ಅಪ್ಪ, ಮತ್ತೆ ಈ ತಪೋವನವನ್ನು ನೋಡುವುದು ಯಾವಾಗ?
ಕಣ್ವರು: ಮಗಳೇ ಕೇಳು, ಸಾಮ್ರಾಟನ ಪತ್ನಿಯಾಗಿ ಬಾಳಿ, ಅಪ್ರತಿರಥನಾದ ಮಗನನ್ನು ಪಡೆದು, ಅವನಿಗೆ ಸಮಗ್ರ ರಾಜ್ಯದ ಪಟ್ಟ ಕಟ್ಟಿ, ಅನಂತರ ಕೊನೆಯಲ್ಲಿ ಶಾಂತಿಗಾಗಿ ಮತ್ತೆ ಈ ಆಶ್ರಮಕ್ಕೆ ಬರುತ್ತೀಯ.
ಗೌತಮಿ: ಮಗಳೇ ತುಂಬಾ ಹೊತ್ತಾಯಿತು. ಅಪ್ಪನನ್ನು ಹಿಂದೆ ಕಳುಹಿಸು. ಅಥವಾ ಭಗವನ್, ಇವಳು ನಿಮ್ಮ ಜೊತೆ ಮಾತಾಡುತ್ತಲೇ ಇರುತ್ತಾಳೆ. ನೀವು ವಾಪಸ್ಸು ಹೋಗಿ.
ಕಣ್ವರು: ಮಗಳೇ, ತಪೋನುಷ್ಠಾನಕ್ಕೆ ವೇಳೆಯಾಗುತ್ತಿದೆ.
ಶಕುಂತಲೆ: (ಮತ್ತೆ ಕಣ್ವರನ್ನು ಅಪ್ಪಿಕೊಂಡು) ಅಪ್ಪ ನಿಮ್ಮ ಶರೀರ ತಪಸ್ಸಿನಿಂದ ಈಗಲೇ ಜೀರ್ಣವಾಗಿದೆ. ಇನ್ನು ನನಗಾಗಿ ಯೋಚನೆಮಾಡಬೇಡಿ.
ಕಣ್ವರು: (ಉಸಿರೆಳೆದುಕೊಳ್ಳುತ್ತಾ) ಅಮ್ಮಾ, ನಿನ್ನ ಅಗಲಿಕೆಯಿಂದ ಉಂಟಾಗುವ ಶೋಕವನ್ನು ತಡೆವುದಾದರೂ ಹೇಗೆ? ಆಶ್ರಮದ ಹೊರಗೆ ನೀನು ಹಾಕಿದ ನೀವಾರ ಧಾನ್ಯ ಬೆಳೆಯುವುದನ್ನು ನೋಡಿದರೂ ನೀನೇ ನನಗೆ ನೆನಪಿಗೆ ಬರುತ್ತೀಯ.
ಸರಿ, ಇನ್ನು ನೀನು ಹೊರಡು. ಹಾದಿ ಮಂಗಳಕರವಾಗಿರಲಿ.
(ಶಕುಂತಲೆಯ ಮತ್ತು ಅವಳ ಜೊತೆ ಹೋಗುವವರ ನಿರ್ಗಮನ)
ಸಖಿಯರು: (ಶಕುಂತಲೆಯನ್ನು ನೋಡುತ್ತಾ) ಹಾ ಧಿಕ್! ಶಕುಂತಲೆ ವನದ ಮಧ್ಯದಲ್ಲಿ ಮರೆಯಾಗಿಬಿಟ್ಟಳಲ್ಲ!
ಕಣ್ವರು: (ಉಸಿರೆಳೆದುಕೊಳ್ಳುತ್ತಾ) ಅನಸೂಯೆ, ನಿಮ್ಮ ಸ್ನೇಹಿತೆ ಹೊರಟಳು. ನೀವೂ ಬನ್ನಿ ಹೊರಡೋಣ.
ಸಖಿಯರು: ಶಕುಂತಲೆಯಿಲ್ಲದೆ ಶೂನ್ಯವಾದ ತಪೋವನವಕ್ಕೆ ಹೇಗೆ ಹೋಗೋಣ!
ಕಣ್ವರು: ಸ್ನೇಹ ಪ್ರವೃತ್ತಿ ಹೀಗೆಯೇ ನೋಡುವುದು!
(ಮುಂದೆ ನಡೆಯುತ್ತಾ)
ಶಕುಂತಲೆಯನ್ನು ಗಂಡನ ಮನೆಗೆ ಕಳುಹಿಸಿದ ಮೇಲೆ ಮಸಸ್ಸಿಗೆ ನೆಮ್ಮದಿಯಾಯಿತು. ಕನ್ಯೆ ಎಂದೂ ಪರಕೀಯ ಸೊತ್ತೇ! ಅವಳನ್ನು ಕಳಿಸಿದ ಮೇಲೆ, ಅಡವಿಟ್ಟ ಸಂಪತ್ತನ್ನು ಕೊಟ್ಟವರಿಗೆ ಹಿಂತಿರುಗಿಸಿದಷ್ಟು ಸಮಾಧಾನವಾಗಿದೆ.
(ಎಲ್ಲರೂ ನಿರ್ಗಮಿಸುತ್ತಾರೆ)
(ನಾಲ್ಕನೇ ದೃಶ್ಯ ಸಮಾಪ್ತವಾದುದು)

No comments:
Post a Comment