Monday, February 10, 2020

ಅಭಿಜ್ಞಾನ ಶಾಕುಂತಲ 1

                                                                               ದೃಶ್ಯ ೧
ನಾಂದಿ

ಸೃಷ್ಠಿಯಾದಿಯೊಳುದ್ಭವಿಸಿದುದಕರೂಪಿಯೇ
ಇಷ್ಟಿಕಾರ್ಯದ ಹವಿಯನೊಯ್ಯುವ ಸ್ವಾಮಿಯೇ
ಅಷ್ಟದೆಸೆಯೊಳು ಹರಡಿದ ವ್ಯೋಮ ರೂಪನೇ
ಕಷ್ಟಜೀವಿಗಳಿಗಾಧಾರಳೇ ಭೂಮಿಯೇ

ಸರ್ವಕಾಲಕೆ ಸರ್ವಜೀವಿಗೆ ಪ್ರಾಣವೇ
ಪರ್ವಯಜ್ಞದಧ್ವರ್ಯುವೇ; ಕಾಲ ಸೂಚಕ
ಸರ್ವಪಾತಕಹಾರಕರೇ ರವಿಚಂದ್ರರೇ
ಶರ್ವನೇ ಸಲಹೆಮ್ಮನೀಯಷ್ಟಮೂರ್ತಿಯೇ

(ನಾಂದಿ ಪದ್ಯದ ಕೊನೆಯಲ್ಲಿ ಸೂತ್ರಧಾರನ ಪ್ರವೇಶ)

ಸೂತ್ರಧಾರ: (ನೇಪಥ್ಯದ ಕಡೆಗೆ ನೋಡುತ್ತಾ) ಆರ್ಯೆ, ಅಲಂಕಾರದ ಕೆಲಸಗಳು ಮುಗಿದಿದ್ದರೆ ಬೇಗ ಬಾ.

ನಟಿ: (ಬರುತ್ತಾ) ಆರ್ಯಪುತ್ರ, ಇಗೋ ಬಂದೆ.

ಸೂತ್ರಧಾರ: ಇದು ವಿದ್ವಾಂಸರ ಪರಿಷತ್ತು. ಇಂದು ನಾವು ಕಾಳಿದಾಸನ ಅಭಿಜ್ಞಾನ ಶಾಕುಂತಲ ನಾಟಕವನ್ನು ಆಡೋಣ. ಎಲ್ಲ ಪಾತ್ರಧಾರಿಗಳೂ ಚೆನ್ನಾಗಿ ಆಡುವಂತೆ ಪ್ರಯತ್ನಿಸೋಣ.

ನಟಿ: ನಾಟಕಪ್ರಯೋಗದಲ್ಲಿ ನಿಮಗೆ ಯಾರು ಹೆಸರಿಡುತ್ತಾರೆ?.

ಸೂತ್ರಧಾರ: ಆರ್ಯೆ, ನನ್ನ ಅನುಭವವನ್ನು ಕೇಳು. ಇಲ್ಲಿ ಬಂದವರಿಗೆ ಮೆಚ್ಚುಗೆಯಾಗದೆ ನನ್ನ ಪ್ರಯೋಗ ಸರಿಯಾಗಿದೆ ಎಂದು ನನಗನ್ನಿಸುವುದಿಲ್ಲ. ಅಲ್ಲಿಯವರೆಗೂ ಎಂತಹ ಕಲಾವಿದನಿಗೂ ಅಧೈರ್ಯವಿರುತ್ತದೆ.

ನಟಿ: ಹಾಗೆಯೇ ಆಗಲಿ. ಮುಂದಿನ ಕಾರ್ಯವೇನು?

ಸೂತ್ರಧಾರ: ಪ್ರೇಕ್ಷಕರ ಕಿವಿಯನ್ನು ತಂಪು ಮಾಡೋಣ. ಗ್ರೀಷ್ಮ ಈಗಲೇ ಆರಂಭವಾಗಿದೆ. ಈ ಗ್ರೀಷ್ಮಋತುವಿನ ಬಗ್ಗೆಯೇ ಹಾಡೋಣ. 
(ಹಾಡುತ್ತಾನೆ)

ಸುಭಗಸಲಿಲಾವಗಾಹಾಃ 
ಪಾಟಲಸಂಸರ್ಗಸುರಭಿವನವಾತಾಃ ।
ಪ್ರಚ್ಛಾಯಸುಲಭನಿದ್ರಾ 
ದಿವಸಾಃ ಪರಿಣಾಮರಮಣೀಯಾಃ ||

ಇದು ಶುದ್ಧ ನೀರಿನಲ್ಲಿ ಆರಾಮವಾಗಿ ಮೀಯಬಹುದಾದ ಋತು, ತಂಪಾದ ಗಾಳಿ ಬೀಸುವ ಋತು, ಪಾಟಲ ಪುಷ್ಪಗಳ ಸುವಾಸನೆಯಿಂದ ದಿನಾಂತ್ಯದಲ್ಲಿ ಸುಖವಾಗಿ ನಿದ್ರಿಸಬಹುದಾದ ಋತು. 

ನಟಿ:
(ಹಾಡುತ್ತಾಳೆ)
ಈಷದೀಷಚ್ಚುಮ್ಬಿತಾನಿ 
ಭ್ರಮರೈಃ ಸುಕುಮಾರಕೇಸರಶಿಖಾನಿ ।
ಅವತಂಸಯನ್ತಿ ದಮಮಾನಾಃ 
ಪ್ರಮದಾಃ ಶಿರೀಷಕುಸುಮಾನಿ ||

ಈ ಋತುವಿನ ಶಿರೀಷ ಪುಷ್ಪಗಳು ಎಷ್ಟು ಕೋಮಲವಾಗಿವೆಯೆಂದರೆ ದುಂಬಿಗಳೂ ಅದರ ಮೇಲೆ ಕುಳಿತುಕೊಳ್ಳಲು ಹಿಂಜರಿಯುತ್ತವೆ. ಅಂತಹ ಪುಷ್ಪಗಳನ್ನು ಸುಂದರಿಯರು ಈ ಸಮಯದಲ್ಲಿ ಮುಡಿಯುತ್ತಾರೆ.

ಸೂತ್ರಧಾರ: (ಗಾಯನದಲ್ಲಿ ತಲ್ಲೀನನಾಗಿ) ಆರ್ಯೆ, ಆಹಾ!  ಅದ್ಭುತವಾದ ಗಾಯನ. ಈ ಗಾಯನದಿಂದ ಇಡೀ ಸಭೆಯೇ ಒಂದು ಚಿತ್ರದಂತೆ ಸ್ಥಬ್ದವಾಗಿದೆ. ಇರಲಿ. ಇಂದು ಯಾವ ಪ್ರಕರಣವನ್ನು ಆಡೋಣ?

ನಟಿ: ಅಯ್ಯೋ! ಮರೆತಿರಾ? ಮುಂಚೆಯೇ ಅಭಿಜ್ಞಾನ ಶಾಕುಂತಲ ನಾಟವನ್ನು ಆಡೋಣವೆಂದು ಹೇಳಿದ್ದೀರಲ್ಲ? 

ಸೂತ್ರಧಾರ: ಒಹ್! ಸರಿಯಾಗಿ ಜ್ಞಾಪಿಸಿದೆ. ಈ ದುಷ್ಯಂತ ರಾಜ ಹರಿಣದ ಬೇಟೆಯಲ್ಲಿ ತಲ್ಲೀನನಾದಂತೆ ನಾನು ನಿನ್ನ ಗಾಯನದ ಇಂಪಿನಲ್ಲಿ ತಲ್ಲೀನನಾಗಿ ಮರೆತೇಬಿಟ್ಟಿದ್ದೆ!
(ಇಬ್ಬರೂ ನಿರ್ಗಮಿಸುತ್ತಾರೆ).

(ಜಿಂಕೆಯನ್ನು ಬೆನ್ನತ್ತಿದ್ದ, ಕೈಯಲ್ಲಿ ಬಿಲ್ಲನ್ನು ಹಿಡಿದಿದ್ದ ದುಷ್ಯಂತ ರಾಜನ ಆಗಮನ. ರಾಜ ರಥದಲ್ಲಿ ಕುಳಿತಿದ್ದಾನೆ. ಸಾರಥಿ ರಥವನ್ನು ನಡೆಸುತ್ತಿದ್ದಾನೆ.)

ಸಾರಥಿ: (ರಾಜನನ್ನು ಮತ್ತು ಜಿಂಕೆಯನ್ನು ನೋಡುತ್ತಾ)  ಮಹಾರಾಜ, ಹೆದೆಯೇರಿಸಿ ಈ ಜಿಂಕೆಯನ್ನು ಬೆನ್ನತ್ತಿರುವ ನಿಮ್ಮನ್ನು ನೋಡಿದರೆ ನನಗೆ ಯಜ್ಞಮೃಗವನ್ನು ಬೆನ್ನಟ್ಟಿದ ಶಿವನೇ ನೆನಪಿಗೆ ಬರುತ್ತಿದ್ದಾನೆ.

ದುಷ್ಯಂತ: ಈ ಜಿಂಕೆಯ ಕಾರಣದಿಂದ ನಾವು ತುಂಬಾ ದೂರ ಬಂದುಬಿಟ್ಟಿದ್ದೇವೆ. ಈಗಲೂ ಅದನ್ನು ನೋಡು. ಸಲ್ಪ ಹೊತ್ತು ಮುಂದೆ ಸ್ವಲ್ಪ ಹೊತ್ತು ನಮ್ಮನ್ನು ನೋಡುತ್ತಾ, ಭಯದಿಂದ, ಬಾಯಿಂದ ಹುಲ್ಲನ್ನು ಚೆಲ್ಲುತ್ತಾ, ಮುಂಭಾಗದ ದೇಹದಲ್ಲಿ ಹಿಂಭಾವನ್ನು ಅವಿತಿಟ್ಟುಕೊಂಡಂತೆ ಓಡುತ್ತಿದೆ. ಈ ಅಸಮ ನೆಲದ ಕಾರಣದಿಂದ ಅದು ಭೂಮಿಯ ಮೇಲಿಗಿಂತ ಆಕಾಶದಲ್ಲೇ ಹೆಚ್ಚು ಓಡುತ್ತಿದೆ.
(ವಿಸ್ಮಿತನಾಗಿ)
ನಾನೇ ಬೆನ್ನತ್ತಿದ್ದರೂ ಅದನ್ನು ನೋಡಲು ನನಗೇ ಶ್ರಮವಾಗುತ್ತಿದೆಯಲ್ಲ!

ಸಾರಥಿ: ಆಯುಷ್ಮಾನ್, ಈ ಭೂಮಿ ಅಸಮವಾಗಿದೆ. ನಾನು ಕುದುರೆಗಳ ಲಗಾಮನ್ನು ಬಿಗಿ ಮಾಡಿದ್ದೇನೆ. ಆದ್ದರಿಂದಲೇ ನಮ್ಮ ವೇಗ ಕಡಿಮೆಯಾಗಿದೆ. ಭೂಮಿ ಸರಿಯಾದ ತಕ್ಷಣ ಜಿಂಕೆಯನ್ನು ಹಿಡಿಯಲು ಕಷ್ಟವಾಗುವುದಿಲ್ಲ. 

ದುಷ್ಯಂತ: ಇರಲಿ, ಲಗಾಮನ್ನು ಸಡಿಲಿಸು.

ಸಾರಥಿ: ಅಪ್ಪಣೆ ಮಹಾರಾಜ.... ನೋಡಿ. ಲಗಾಮು ಸಡಿಲಗೊಂಡ ಈ ಕುದುರೆಗಳು ತಮ್ಮ ಕಿವಿ ನಿಮಿರಾಗಿಸಿಕೊಂಡು, ತಮ್ಮ ಸಪ್ಪಳದಿಂದಾದ ಧೂಳಿಗಿಂತಲೂ ವೇಗವಾಗಿ ಹೋಗುತ್ತಿವೆ.

ದುಷ್ಯಂತ: ಸರಿಯೇ! ಈ ಅಶ್ವಗಳು ಸೂರ್ಯನ ಕುದುರೆಗಳಿಗಿಂತಲೂ ವೇಗವಾಗಿ ಓಡುತ್ತಿವೆ. ದೂರದಲ್ಲಿ ಚಿಕ್ಕದಾಗಿರುವವು ಈಗ ದೊಡ್ಡದಾಗಿ ಕಾಣಿಸುತ್ತಿದೆ. ತಿರುವುಗಳು ನೇರದಾರಿಯಂತೆ ಗೋಚರಿಸುತ್ತಿದೆ. ಈ ರಥದ ವೇಗದಿಂದ ಯಾವುದೂ ದೂರದಲ್ಲಿಯೂ ಇಲ್ಲ, ಹತ್ತಿರದಲ್ಲಿಯೂ ಇಲ್ಲದಂತಿದೆ....
ಸೂತ! ಇಲ್ಲಿ ನೋಡು ಜಿಂಕೆ!
(ಶರಸಂಧಾನ ಮಾಡುವಂತೆ ತೋರಿಸುತ್ತಾನೆ)
(ಅಷ್ಟರಲ್ಲಿ ನೇಪಥ್ಯದ ಧ್ವನಿ)
ರಾಜ! ನಿಲ್ಲು ನಿಲ್ಲು! ಇದು ಆಶ್ರಮದ ಮೃಗ! ಕೊಲ್ಲತಕ್ಕದ್ದಲ್ಲ, ಕೊಲ್ಲತಕ್ಕದ್ದಲ್ಲ!

ಸಾರಥಿ: (ಧ್ವನಿ ಬಂದ ಕಡೆ ಕಿವಿಯನ್ನು ಕೊಟ್ಟು) ರಾಜ ನಿಲ್ಲು! ಜಿಂಕೆಯ ಮುಂದೆ ತಪಸ್ವಿಗಳು ನಿಂತಿದ್ದಾರೆ.

ದುಷ್ಯಂತ: (ಆಶ್ಚರ್ಯದಿಂದ ) ಒಹ್! ರಥವನ್ನು ನಿಲ್ಲಿಸು.

ಸಾರಥಿ: ಹಾಗೆಯೇ ಆಗಲಿ.
(ರಥವನ್ನು ನಿಲಿಸುತ್ತಾನೆ)
(ಮೂವರು ವೈಖಾನಸ ತಪಸ್ವಿಗಳು ಪ್ರವೇಶಿಸುತ್ತಾರೆ)

ವೈಖಾನಸರು: ರಾಜ, ಇದು ಆಶ್ರಮದ ಮೃಗ, ಕೊಲ್ಲತಕ್ಕದ್ದಲ್ಲ! ನಿನ್ನ ಬಾಣವನ್ನು ಹಿಂತೆಗೆದುಕೊ. ಪುಷ್ಪ ರಾಶಿಗೆ ಬೆಂಕಿಯಿಟ್ಟಂತೆ ಈ ಮೃಗಕ್ಕೆ ಬಾಣ ಬಿಡುವುದು ಸರಿಯಲ್ಲ. ಈ ಸಾಕಿದ ಜಿಂಕೆಯೆಲ್ಲಿ, ನಿನ್ನ ವಜ್ರಸಮವಾದ ಬಾಣವೆಲ್ಲಿ? ಆರ್ತರನ್ನು ರಕ್ಷಣೆ ಮಾಡಲು ನಿನ್ನ ಶಸ್ತ್ರ, ಕೈಲಾಗದವರಿಗೆ ಹಿಂಸೆ ಮಾಡಬೇಡ!

ದುಷ್ಯಂತ: ಹಿಂತೆಗೆದಿದ್ದೇನೆ. (ಹಾಗೆಯೇ ಮಾಡುತ್ತಾನೆ)

ವೈಖಾನಸರು: ಪುರುವಂಶ ಪ್ರದೀಪನಿಗೆ ತಕ್ಕುದಾದ ಕೆಲಸ. ಸಕಲಗುಣ ಸಂಪನ್ನನಾದ, ನಿನ್ನಂತವನೇ ಆದ  ಚಕ್ರವರ್ತಿಯನ್ನು ಮಗನಾಗಿ ಪಡೆ.

ಇತರ ವೈಖಾನಸರು: (ಆಶೀರ್ವಾದಪೂರ್ವಕವಾಗಿ ಕೈಯೆತ್ತಿ) ಚಕ್ರವರ್ತಿಯನ್ನು ಮಗನಾಗಿ ಪಡೆ.

ದುಷ್ಯಂತ: (ನಮಸ್ಕರಿಸುತ್ತಾ) ಮಹಾಶೀರ್ವಾದ.

ವೈಖಾನಸರು: ರಾಜನ್, ನಾವು ಯಜ್ಞಕ್ಕೆ ಸಮಿತ್ತನ್ನು ತರಲು ಹೋಗುತ್ತಿದ್ದೇವೆ. ಇಲ್ಲಿಯೇ ಮಾಲಿನೀ ನದಿಯ ತೀರದಲ್ಲಿ ಕುಲಪತಿ ಕಣ್ವರ ಆಶ್ರಮವಿದೆ. ನಿಮಗೆ ಸಾವಕಾಶವಿದ್ದರೆ ಆಶ್ರಮಕ್ಕೆ ಬಂದು ಅತಿಥಿ ಸತ್ಕಾರವನ್ನು ಸ್ವೀಕರಿಸು. ಆತಂಕಗಳಿಲ್ಲದ ರಮ್ಯವಾದ ತಪೋವನಗಳನ್ನು ನೋಡಿ, ನಿನ್ನ ಆಡಳಿತದ ಸುಭಿಕ್ಷೆಯನ್ನು ಪರಿಲೋಕಿಸು.

ದುಷ್ಯಂತ: ಆಶ್ರಮದಲ್ಲಿ ಕುಲಪತಿಗಳಿದ್ದಾರಾ?

ವೈಖಾನಸರು: ಇಲ್ಲ. ಅವರು ತಮ್ಮ ಮಗಳು ಶಕುಂತಲೆಯನ್ನು ಆಶ್ರಮವನ್ನು ನೋಡಿಕೊಳ್ಳಲು ನಿಯೋಜಿಸಿ, ಅವಳಿಗಿರುವ ಯಾವುದೋ ಪ್ರತಿಕೂಲವನ್ನು ಹೋಗಲಾಡಿಸಲು ಸೋಮತೀರ್ಥಕ್ಕೆ ಹೋಗಿದ್ದಾರೆ.

ದುಷ್ಯಂತ: ಸರಿ. ಅವರನ್ನೇ ನೋಡುತ್ತೇನೆ. ಅವರು ನನ್ನ ಭಕ್ತಿಯನ್ನು ಕಣ್ವರಿಗೆ ನಿವೇದಿಸಲಿ.

ವೈಖಾನಸರು: ಸಾಧು, ಹಾಗೆಯೇ ಆಗಲಿ.
(ವೈಖಾನಸರು ಮತ್ತು ಅವರ ಜೊತೆ ಬಂದವರು ನಿರ್ಗಮಿಸುತ್ತಾರೆ)

ದುಷ್ಯಂತ: (ಸಾರಥಿಗೆ) ಸೂತ, ರಥವನ್ನು ಆಶ್ರಮದ ಕಡೆ ನಡೆಸು. ಪುಣ್ಯವಾದ ಆಶ್ರಮದ ದರ್ಶನದಿಂದ ನಮ್ಮನ್ನು ಪುನೀತರನ್ನಾಗಿ ಮಾಡಿಕೊಳ್ಳೋಣ.

ಸಾರಥಿ: ಹಾಗೆಯೇ ಆಗಲಿ ಮಹಾರಾಜ.

ದುಷ್ಯಂತ: (ಸುತ್ತಲೂ ನೋಡುತ್ತಾ) ಸೂತ, ಅವರು ಹೇಳದಿದ್ದರೂ ಇದು ಆಶ್ರಮವೇ ಎಂಬುದು ಸುಲಭವಾಗಿ ಗೊತ್ತಾಗುತ್ತದೆ.

ಸಾರಥಿ: ಅದು ಹೇಗೆ?

ದುಷ್ಯಂತ: ಕಾಣಿಸುತ್ತಿಲ್ಲವೇ? ನವಣೆ ಕಾಳುಗಳು ಆಶ್ರಮದ ಗಿಳಿಗಳು ತಿನ್ನುವಾಗ ಮರದ ಬುಡಗಳಲ್ಲಿ ಬಿದ್ದಿವೆ. ಇಂಗುದೀ ಬೀಜಗಳನ್ನು ನುಜ್ಜುವಾಗ ಉಪಯೋಗಿಸಿರುವ ಕಲ್ಲುಗಳು ಜಿಡ್ಡಾಗಿ ಅಲ್ಲಲ್ಲಿ ಕಾಣಿಸುತ್ತಿವೆ. ಮಾಲಿನೀ ನದಿಯಲ್ಲಿ ಮಿಂದು ಆಶ್ರಮಕ್ಕೆ ಹೋಗುವಾಗ ಆಶ್ರಮವಾಸಿಗಳ ನಾರುಮಡಿಯಿಂದ ಜಿನುಗಿದ ನೀರು ಒಂದು ರೀತಿಯ ಪಥವನ್ನಾಗಿ ಮಾಡಿದೆ. ಮನುಷ್ಯರ ಧ್ವನಿ ಕೇಳಿದರೂ ಹರಿಣಗಳು ಸ್ವಚ್ಛಂದವಾಗಿ ತಿರುಗಾಡುತ್ತಿವೆ.

ಸಾರಥಿ: ಎಲ್ಲವೂ ಸರಿಯಾಗಿದೆ.

(ಸ್ವಲ್ಪ ದೂರ ಸಾಗಿದ ಮೇಲೆ)
ದುಷ್ಯಂತ: ತಪೋವನ ವಾಸಿಗಳಿಗೆ ತೊಂದರೆ ಮಾಡುವುದು ಬೇಡ. ರಥವನ್ನು ಇಲ್ಲಿಯೇ ನಿಲ್ಲಿಸು. ಇಳಿಯುತ್ತೇನೆ..

ಸಾರಥಿ: (ರಥವನ್ನು ನಿಲ್ಲಿಸಿ) ರಥ ನಿಂತಿದೆ. ತಾವು ಇಳಿಯಬಹುದು.

ದುಷ್ಯಂತ: (ಇಳಿದು) ಆಶ್ರಮಕ್ಕೆ ವಿನೀತವೇಷಿಗಳಾಗಿಯೇ ಹೋಗಬೇಕು. ಇವನ್ನು ತೆಗೆದುಕೋ.
(ತನ್ನ ಒಡವೆ, ಕಿರೀಟ, ಧನಸ್ಸು ಮುಂತಾದವುಗಳನ್ನು ತೆಗೆದು ಕೊಡುತ್ತಾನೆ).
ಸಾರಥಿ, ನಾನು ಆಶ್ರವನ್ನು ನೋಡಿ, ಆಶ್ರಮವಾಸಿಗಳನ್ನು ಮಾತನಾಡಿಸಿ ಬರುವಷ್ಟರಲ್ಲಿ ಕುದುರೆಗಳಿಗೆ ನೀರು ಕುಡಿಸಿ ಸ್ನಾನ ಮಾಡಿಸು.

ಸಾರಥಿ: ಅಪ್ಪಣೆ.
(ಸಾರಥಿಯ ನಿಷ್ಕ್ರಮನ)

ದುಷ್ಯಂತ: (ಮುಂದೆ ನೋಡುತ್ತಾ) ಇದು ಆಶ್ರಮ ದ್ವಾರ. ಒಳಗೆ ಹೋಗುತ್ತೇನೆ.
(ಒಳಗೆ ಹೋಗುತ್ತಾನೆ, ಶುಭ ಶಕುನಗಳಾಗುತ್ತವೆ)
ನನ್ನ ಬಲಗಣ್ಣು ಅದುರುತ್ತಿವೆ. ಈ ಆಶ್ರಮದಲ್ಲಿ ನನಗೆ ಯಾವ ರೀತಿಯ ಲಾಭವಾಗುತ್ತದೆ? ಇರಲಿ. ಶುಭವಾಗಬೇಕೆಂದಿದ್ದರೆ ಯಾವಾಗಲಾದರೂ ಎಲ್ಲಿಯಾದರೂ ಆಗುತ್ತದೆ.

(ನೇಪಥ್ಯದಲ್ಲಿ)
ಇಲ್ಲಿ, ಇಲ್ಲಿ ಸ್ನೇಹಿತೆಯರೇ...

ದುಷ್ಯಂತ: (ಕಿವಿಯನ್ನು ಆ ಕಡೆ ಆಲಿಸಿ) ಈ ಬಲಭಾಗದ ಮರಗಳ ಕಡೆಯಿಂದ ಧ್ವನಿ ಬರುವಂತಿದೆ. ಅಲ್ಲಿಗೆ ಹೋಗುತ್ತೇನೆ.
(ಸ್ವಲ್ಪ ದೂರ ಹೋಗಿ ನೋಡುತ್ತಾನೆ)
ಆಶ್ರಮ ಕನ್ಯೆಯರು ಬಿಂದಿಗೆಗಳಲ್ಲಿ ನೀರು ತುಂಬಿ, ಇಲ್ಲಿನ ಗಿಡಗಳಿಗೆ ನೀರು ಹಾಕುತ್ತಿರುವಂತಿದೆ.
(ಇನ್ನೂ ಚೆನ್ನಾಗಿ ಗಮನಿಸಿ)
ಒಹ್, ಮಧುರವಾಗಿದೆ ಇವರ ದರ್ಶನ. ಈ ವನಲತೆಗಳ ಮುಂದೆ ಉದ್ಯಾನದ ಲತೆಗಳು ಯಾವುದಕ್ಕೂ ಸಮನಲ್ಲ! ಇವರು ಆಶ್ರಮವಾಸಿಗಳಿಗೆ ದುರ್ಲಭವಾದ ಸೌಂದರ್ಯದಿಂದಿದ್ದಾರಲ್ಲ! ಈ ಮರದ ನೆರಳಿನಲ್ಲಿಯೇ ನಿಂತು ನೋಡುತ್ತೇನೆ.
(ಪಕ್ಕಕ್ಕೆ ಬಂದು ನಿಲ್ಲುತ್ತಾನೆ)

(ಸಖಿಯರಿಬ್ಬರ ಜೊತೆ ಶಕುಂತಲೆ ಬರುತ್ತಾಳೆ)
ಶಕುಂತಲೆ: ಇಲ್ಲಿ ಇಲ್ಲಿ ಗೆಳತಿಯರೆ!

ಅನಸೂಯೆ: ಶಕುಂತಲೆ, ಕಾಶ್ಯಪರಿಗೆ ನಿನಗಿಂತಲೂ ಈ ಆಶ್ರಮವೃಕ್ಷಗಳೇ ಹೆಚ್ಚು ಇಷ್ಟವಾದಂತಿದೆ. ಅವರು ನವಮಾಲಿಕೆಯಂತೆ ಕೋಮಲವಾದ ನಿನ್ನನ್ನು ವೃಕ್ಷಗಳಿಗೆ ನೀರುಹಾಕಲು ನಿಯಮಿಸಿದ್ದಾರೆ.

ಶಕುಂತಲೆ: ಕೇವಲ ತಂದೆಯ ನಿಯುಕ್ತವಷ್ಟೇ ಅಲ್ಲ. ಇವುಗಳ ಮೇಲೆ ನನಗೆ ಸೋದರ ಸ್ನೇಹವಿದೆ.
(ಗಿಡಗಳಿಗೆ ನೀರು ಹಾಕುತ್ತಾಳೆ)

ದುಷ್ಯಂತ: ಇವಳು ಕಣ್ವಪುತ್ರಿಯೇ!? ಇಷ್ಟು ಸುಂದರಿಯಾದ ಇವಳನ್ನು ಕಣ್ವರು ಆಶ್ರಮದಕೆಲಸದಲ್ಲಿ ನಿಯುಕ್ತಗೊಳಿಸಿರುವುದು ನನಗೆ ಅಸಾಧುವೆಂದೇ ಕಾಣುತ್ತದೆ! ಇಷ್ಟು ಕೋಮಲವಾದ ಇವಳನ್ನು ಆಶ್ರಮದ ತಪಸ್ವಿನಿಯನ್ನಾಗಿ ಮಾಡುವುದು ಕೆನ್ನೈದಿಲೆಯ ದಳಗಳಿಂದ ಸಮಿತ್ತನ್ನು ಕತ್ತರಿಸಿದಂತೆಯೇ!
ಇರಲಿ. ಈ ಗಿಡದ ಹಿಂದೆ ಅವಿತು ಇವಳನ್ನು ನೋಡುತ್ತೇನೆ.
(ಗಿಡದ ಹಿಂದೆ ಅವಿತುಕೊಳ್ಳುತ್ತಾನೆ)

ಶಕುಂತಲೆ: ಸಖಿ ಅನಸೂಯೆ, ನನ್ನ ಎದೆಯವಸ್ತ್ರವನ್ನು ಈ ಪ್ರಿಯಂವದೆ ಗಟ್ಟಿಯಾಗಿ ಕಟ್ಟುಬಿಟ್ಟಿದ್ದಾಳೆ. ಸ್ವಲ್ಪ ಸಡಿಲಿಸು.

ಅನಸೂಯೆ: ಸರಿ.
(ಸರಿಪಡಿಸುತ್ತಾಳೆ)

ಪ್ರಿಯಂವದೆ: (ವಿನೋದವಾಗಿ) ಇದಕ್ಕೆ ನನ್ನನ್ನೇಕೆ ದೂಷಿಸುವೆ! ನಿನ್ನ ಯೌವನವನ್ನು ದೂಷಿಸು.

ದುಷ್ಯಂತ: ಇಷ್ಟು ಸುಂದರವಾದ ತರುಣಿ ನಾರು ಬಟ್ಟೆಯನ್ನುಟ್ಟಿದ್ದಾಳಲ್ಲ! ಕೇಸರಿನಲ್ಲಿದ್ದರೂ ಕಮಲದ ಹೂ ತನ್ನ ಸೌರಭವನ್ನು ಕಳೆದುಕೊಳ್ಳುವುದಿಲ್ಲ, ತನ್ನ ಕಲೆಯಿಂದ ಚಂದ್ರನ ಕಾಂತಿ ತಗ್ಗುವುದಿಲ್ಲ, ಅಂತೆಯೇ ನಾರುಮಡಿಯಲ್ಲಿಯೂ ಈ ತರುಣಿ ಎಷ್ಟು ಸುಂದರವಾಗಿದ್ದಾಳೆ. ಇವಳಿಗೆ ಅಲಂಕಾರವೇಕೆ!?

ಶಕುಂತಲೆ: (ಮುಂದೆ ನೋಡುತ್ತಾ) ಈ ಕೆಸರವೃಕ್ಷ ಗಾಳಿಗೆ ಅಲ್ಲಾಡುತ್ತಿರುವ ತನ್ನ ಚಿಗುರೆಲೆಗಳಿಂದ ನನ್ನನ್ನೇ ಕರೆದಂತೆ ತೋರುತ್ತಿದೆ. ಅಲ್ಲಿಗೆ ಹೋಗುತ್ತೇನೆ.
(ಹೋಗುತ್ತಾಳೆ)

ಪ್ರಿಯಂವದೆ: ಶಕುಂತಲೆ ಸ್ವಲ್ಪ ಹೊತ್ತು ಅಲ್ಲೇ ನಿಲ್ಲು. ನೀನು ಕೇಸರವೃಕ್ಷದ ಪಕ್ಕ ನಿಂತಿದ್ದರೆ, ಅದರ ಬಳ್ಳಿಯಂತೆ ಕಾಣುತ್ತೀಯೆ!

ಶಕುಂತಲೆ: ಇದರಿಂದಲೇ ನಿನ್ನನ್ನು ಪ್ರಿಯಂವದೆ ಎಂದು ಕರೆಯುವುದು.

ದುಷ್ಯಂತ: ಅವಳು ಕೇವಲ ಪ್ರಿಯವಾಗಿ ಮಾತಾಡುತ್ತಿಲ್ಲ. ಅವಳು ಹೇಳುತ್ತಿರುವುದು ನಿಜವೇ! ಇವಳ ತುಟಿ ಕಾಂತಿಯನ್ನು ಬೀರುತ್ತಿದೆ. ಇವಳ ಕೈಗಳು ಬಳ್ಳಿಯಂತೆ ತೋರುತ್ತಿದೆ, ಕುಸುಮದಂತೆ ಲೋಭನೀಯವಾದ ಇವಳ ಅಂಗಗಳಲ್ಲಿ ಯೌವನವು ಸನ್ನದ್ಧವಾಗಿದೆ.

ಅನಸೂಯೆ: ಶಕುಂತಲೆ, ಈ ಮಾವಿನ ಮರಕ್ಕೆ, ನೀನೇ ಹೆಸರಿಟ್ಟು ಆರಿಸಿದ ವಧುವಾದ ಮಲ್ಲಿಗೆ ಬಳ್ಳಿ, ವನಜ್ಯೋತ್ಸ್ನೆಯನ್ನೇ ಮರತೆಯಲ್ಲ!

ಶಕುಂತಲೆ: ಅದನ್ನು ನೋಡಿದರೆ ನನ್ನನ್ನು ನಾನೇ ಮರೆತುಬಿಡುತ್ತೇನೆ.
(ಮಲ್ಲಿಗೆ ಬಳ್ಳಿಯನ್ನು ನೋಡುತ್ತಾ)
ಈ ಮಾವಿನ ಮರಕ್ಕೂ ವನಜ್ಯೋತ್ಸ್ನೆಗೂ ಸರಿಯಾದ ಸಮಯದಲ್ಲೇ ಮದುವೆಯಾಗಿದೆ. ವನಜ್ಯೋತ್ಸ್ನೆಯು ಬಳ್ಳಿಯ ತುಂಬಾ ಹೂ ಬಿಟ್ಟಿದ್ದಾಳೆ. ಮಾವಿನ ಮರವೂ ತನ್ನ ತುಂಬಾ ಹಣ್ಣು ಬಿಟ್ಟಿದೆ. ಈ ದಾಂಪತ್ಯಕ್ಕೆ ಫಲ ಸಿಕ್ಕಂತಿದೆ.
(ಅದನ್ನು ನೋಡುತ್ತಾ ಕೆಲಕಾಲ ನಿಲ್ಲುತ್ತಾಳೆ)

ಪ್ರಿಯಂವದೆ: ಅನಸೂಯೆ, ಈ ಶಕುಂತಲೆ ಈ ಮರವನ್ನೇ ನೋಡುತ್ತಾ ಏಕೆ ನಿಂತಿದ್ದಾಳೆ ಗೊತ್ತೇ?

ಅನಸೂಯೆ: ಗೊತ್ತಾಗುತ್ತಿಲ್ಲ, ನೀನೇ ಹೇಳು.

ಪ್ರಿಯಂವದೆ: ಈ ವನಜ್ಯೋತ್ಸ್ನೆಯಂತೆಯೇ ತನಗೂ ಅನುರೂಪನಾದ ವರ ಸಿಗಲಿ ಎಂಬ ಅಭಿಲಾಷೆಯಿಂದ.

ಶಕುಂತಲೆ: ಇದು ಖಂಡಿತವಾಗಿ ಇವಳ ಮನೋರಥ.
(ಕೈಲಿರುವ ಬಿಂದಿಗೆಯಿಂದ ನೀರನ್ನು ಮರಕ್ಕೆ ಹಾಕಿ ಮುಂದೆ ಹೋಗುತ್ತಾಳೆ.)

ದುಷ್ಯಂತ: ಇವಳು ಕಣ್ವರ ಆಸವರ್ಣ ಕ್ಷೇತ್ರದ್ರಲ್ಲಿ ಜನಿಸಿದವಳಿರಬಹುದೇ? ನನಗೆ ಸಂದೇಹವಾಗಿದೆ. ಏಕೆಂದರೆ ನನ್ನ ಮನಸ್ಸು ಇವಳನ್ನೇ ಬಯಸುತ್ತಿದೆ. ಇವಳು ಋಷಿಕನ್ಯೆಯೇ ಆಗಿದ್ದರೆ ಹೀಗಾಗಬಾರದಿತ್ತು. ಆದರೂ ಸತಾಂ ಹಿ ಸಂದೇಹಪದೇಷು ವಸ್ತುಷು ಪ್ರಮಾಣಮನ್ತಃಕರಣ ಪ್ರವೃತ್ತಯಃ... ಸಜ್ಜನಿರಿಗೆ ಸಂದೇಹಾಸ್ಪದ ವಿಷಯಗಳಲ್ಲಿ ತಮ್ಮ ಅಂತಃಸಾಕ್ಷಿಯೇ ಪ್ರಮಾಣ.
ಇದರ ಬಗ್ಗೆ ನಿಜ ತಿಳಿಯಬೇಕು.

ಶಕುಂತಲೆ: (ಗಾಬರಿಯಿಂದ) ಅಮ್ಮಾ!! ನೀರು ಹಾಕಿದ್ದರಿಂದ ಈ ಮಲ್ಲಿಗೆ ಬಳ್ಳಿಯಲ್ಲಿದ್ದ ದುಂಬಿ ಹಾರಿ ನನ್ನ ಮುಖವನ್ನು ಮುತ್ತುತ್ತಿದೆ!
(ತಪ್ಪಿಸಿಕೊಳ್ಳಲು ಯತ್ನಿಸುತ್ತಾಳೆ)

ದುಷ್ಯಂತ: ಓ ದುಂಬಿ! ನೀನೇ ಅದೃಷ್ಟಶಾಲಿ! ನಾವು ತತ್ವಾನ್ವೇಷಣೆಗಳನ್ನು ಮಾಡುತ್ತಿದ್ದರೆ ನೀನು ಅವಳ ದೃಷಿಯನ್ನು ಸ್ಪರ್ಶಿಸುತ್ತೀಯೆ! ಕಿವಿಯಲ್ಲಿ ಗುಟ್ಟು ಹೇಳುವಂತೆ ಹತ್ತಿರ ಹೋಗಿ ಕಿವಿಯಲ್ಲಿ ಏನೋ ಹೇಳುತ್ತಿದ್ದೀಯೆ! ಅವಳು ಕೈಗಳನ್ನು ಕೊಡುವುತ್ತಿದ್ದಾರೆ, ನೀನು ಅವಳ ತುಟಿಯ ಹತ್ತಿರಕ್ಕೆ ಹೋಗಿ ಮುತ್ತಿಡುತ್ತಿದ್ದೀಯೆ! ನೀನೇ ಕೃತಾರ್ಥನು!!

ಶಕುಂತಲೆ: ಈ ದುಂಬಿ ನನ್ನನ್ನು ಬಿಡುವಂತಿಲ್ಲ. ನಾನು ಇಲ್ಲಿಂದ ಬೇರೆಕಡೆಗೆ ಹೋಗುತ್ತೇನೆ. ಅಯ್ಯೋ! ಅದು ಇಲ್ಲಿಗೂ ಬರುತ್ತಿದೆಯಲ್ಲ. ಈ ದುರ್ಜೇನಿನ ಹುಳುವಿನಿಂದ ನನ್ನನು ಯಾರಾದರೂ ಕಾಪಾಡಿ!

ಇಬ್ಬರೂ ಸ್ನೇಹಿತೆಯರು: (ಮುಗುಳ್ನಗೆಯಿಂದ) ನಮ್ಮನೇಕೆ ಕೇಳುತ್ತೀಯೆ! ಈ ತಪೋವನಗಳೆಲ್ಲವೂ ರಾಜನಿಂದ ರಕ್ಷಿಸಲ್ಪಡುವುವು. ಆ ರಾಜ ದುಷ್ಯಂತನನ್ನೇ ಕಾಪಾಡಲು ಕರೆ!

ದುಷ್ಯಂತ: ನನ್ನನ್ನು ನಾನು ತೋರಿಸಿಕೊಳ್ಳಲು ಇದು ಸರಿಯಾದ ಕಾಲ. ತೋರಿಸಿಕೊಂಡರೆ ನಾನು ರಾಜನೆಂದು ತಿಳಿಯಬಹುದು. ಆದರೂ ಪರವಾಗಿಲ್ಲ.

ಶಕುಂತಲೆ: ಎಲ್ಲಿಗೆ ಹೋದರೂ ಈ ದುಂಬಿ ನನ್ನ ಹಿಂದೆಯೇ ಬರುತ್ತಿದೆಯಲ್ಲ!

ದುಷ್ಯಂತ: (ಮರೆಯಲ್ಲಿದ್ದವನು ಓಡಿ ಬರುತ್ತಾ) ಹೆದರಬೇಡಿ! ಹೆಡಬೇಡಿ! ಪೌರವನು ರಾಜ್ಯವಾಳುತ್ತಾ ದುರ್ವಿನೀತರನ್ನು ದಂಡಿಸುತ್ತಿರುವಾಗ, ಈ ತಪಸ್ವಿ ಕನ್ಯೆಯರ ಬಳಿ ಉದ್ದಟತನ ಮಾಡುತ್ತಿರುವವರು ಯಾರು?

(ಮೂವರೂ ರಾಜನನ್ನು ನೋಡಿ ಭ್ರಾಂತರಾಗುತ್ತಾರೆ, ನಂತರ...)

ಅನಸೂಯೆ: ಆರ್ಯ, ಇಲ್ಲೇನೂ ತೊಂದರೆಯಾಗಿಲ್ಲ. ಇಲ್ಲಿ ನಮ್ಮ ಸಖಿ ದುಂಬಿಯಂದ ಸಲ್ಪ ತೊಂದರೆಪಟ್ಟಳಷ್ಟೇ...
(ಶಕುಂತಲೆಯನ್ನು ತೋರಿಸುತ್ತಾಳೆ)

ದುಷ್ಯಂತ: (ಶಕುಂತಲೆಯನ್ನು ನೋಡುತ್ತಾ) ನಿಮ್ಮ ತಪಸ್ಸು ವರ್ಧಿಸುತ್ತಿದೆಯೇ?

(ಶಕುಂತಲೆ ಸುಮ್ಮನೆ ನಿಲ್ಲುತ್ತಾಳೆ)

ಅನಸೂಯೆ: ನೀವು ಅತಿಥಿಯಾಗಿ ತಕ್ಷಣ ಬಂದದ್ದರಿಂದ ಸುಮ್ಮನಿದ್ದಾಳೆ.. ಶಕುಂತಲೆ ಆಶ್ರಮಕ್ಕೆ ಹೋಗಿ ಕುಡಿಯಲು ನೀರು, ತಿನ್ನಲು ಹಣ್ಣುಗಳನ್ನು ತಾ. ಇಲ್ಲಿರುವ ನೀರು ಪಾದ್ಯಕ್ಕೆ ಸಾಕಾಗುತ್ತದೆ.

ದುಷ್ಯಂತ: ಭವತಿಯರ ಒಳ್ಳೆಯ ಮಾತುಗಳಿಂದಲೇ ಆತಿಥ್ಯವಾಯಿತು.

ಪ್ರಿಯಂವದೆ: ಆರ್ಯ, ಈ ಸಪ್ತಪರ್ಣ ಮರದ ವಿಶಾಲವಾದ ನೆರಳಿನಲ್ಲಿ ಸ್ವಲ್ಪಹೊತ್ತು ಕುಳಿತು ವಿಶ್ರಮಿಸಿ.

ದುಷ್ಯಂತ: ನೀವೂ ಸಹ ದಣಿದಿದ್ದೀರ, ವಿಶ್ರಮಿಸಿ.

ಅನಸೂಯೆ: ಶಕುಂತಲೆ, ಅತಿಥಿಗಳನ್ನು ವಿಚಾರಿಸುವುದು ಉಚಿತ. ಇಲ್ಲೇ ಕುಳಿತುಕೊಳ್ಳೋಣ.

ಶಕುಂತಲೆ: (ಸ್ವಗತ) ಇವರನ್ನು ನೋಡಿದರೆ ನನಗೆ ತಪೋವನ ವಾಸಿಗಳಿಗೆ ವಿರೋಧವಾದ ಭಾವನೆಗಳಾಗುತ್ತಿವೆಯಲ್ಲ!

ದುಷ್ಯಂತ: (ಎಲ್ಲರನ್ನೂ ನೋಡುತ್ತಾ) ಸಮವಯಸ್ಸಿನವರಾದ ನಿಮ್ಮ ಸೌಹಾರ್ದವು ರಮಣೀಯವಾಗಿದೆ.

ಪ್ರಿಯಂವದೆ: (ಅನಸೂಯೆಗೆ ಗೌಪ್ಯವಾಗಿ) ಅನಸೂಯೆ ಯಾರಿವನು? ಗಂಭೀರವಾಗಿ, ಮಧುರವಾಗಿ ಮಾತನಾಡುತ್ತಿರುವನಲ್ಲಾ? ದೊಡ್ಡ ಮನುಷ್ಯನಂತೆ ಕಾಣುತ್ತಿದ್ದಾನೆ?

ಅನಸೂಯೆ: ನನಗೂ ಕುತೂಹಲವಿದೆ. ಕೇಳುತ್ತೇನೆ ಇರು.
(ಪ್ರಕಟವಾಗಿ)
ಆರ್ಯರೇ, ನಿಮ್ಮ ಮಧುರವಚನಗಳು ನಿಮ್ಮನ್ನು ಮಾತಾನಾಡಿಸುವಂತೆ ಮಾಡುತ್ತಿದೆ? ತಮ್ಮನ್ನು ಯಾವ ರಾಜರ್ಷಿವಂಶವು ಅಲಂಕರಿಸಿದೆ? ಯಾವ ದೇಶದ ಜನ ನಿಮ್ಮ ವಿರಹದಿಂದಿದ್ದಾರೆ? ಇಷ್ಟು ಸುಕುಮಾರರಾದ ತಾವು ಯಾವ ಕೆಲಸದ ಮೇಲೆ ಈ ತಪೋವನಕ್ಕೆ ಬರುವ ಶ್ರಮ ತೆಗೆದುಕೊಂಡಿರಿ?

ಶಕುಂತಲೆ: (ಸ್ವಗತ)
ಚಿಂತಿಸಬೇಡ ಹೃದಯ! ನೀನು ಕೇಳಬೇಕೆಂದಿರುವ ಪ್ರಶ್ನೆಗಳನ್ನು ಅನಸೂಯೆಯೇ ಕೇಳುತ್ತಿದ್ದಾಳೆ!

ದುಷ್ಯಂತ: (ಸ್ವಗತ) ಏನು ಹೇಳಲಿ? ನನ್ನ ಪರಿಚಯ ಹೇಗೆ ಮಾಡಿಕೊಳ್ಳಲಿ? ಇರಲಿ. ಇದನ್ನು ಹೇಳುತ್ತೇನೆ.
(ಪ್ರಕಾಶವಾಗಿ)
ಭವತಿ, ನಾನು ಪೌರವನಿಂದ ನಿಯುಕ್ತನಾಗಿ, ಈ ವನದಲ್ಲಿ ಎಲ್ಲವೂ ನಿರ್ವಿಘ್ನವಾಗಿದೆಯೇ ಎಂಬುದನ್ನು ನೋಡಲು ಬಂದಿದ್ದೇನೆ.

ಅನಸೂಯೆ: ಧಾರ್ಮಿಕರಿಗೆ ಸನಾಥರಾಗಿ ಬಂದಿದ್ದೀರ.

(ಶಕುಂತಲೆ ಲಜ್ಜಿತಳಾಗುತ್ತಾಳೆ)

ಅನಸೂಯೆ: (ಶಕುಂತಲೆ ಮತ್ತು ದುಷ್ಯಂತನ ಭಾವಗಳನ್ನು ಗಮನಿಸಿ, ತಮ್ಮೊಳಗೆ) ಶಕುಂತಲೆ, ಈಗೇನಾದರೂ ಕಣ್ವರು ಇದ್ದಿದ್ದರೇ....

ಶಕುಂತಲೆ: ಏನಾಗುತ್ತಿತ್ತು?

ಉಭಯ ಸಖಿಯರು: ತಮ್ಮ ಜೀವಿತ ಸರ್ವಸ್ವವನ್ನೇ ಕೊಟ್ಟು ಅತಿಥಿಗಳಿಗೆ ಸತ್ಕಾರ ಮಾಡುತ್ತಿದ್ದರು.

ಶಕುಂತಲೆ: ದೂರ ಹೋಗಿ. ನೀವು ಮನಸ್ಸಿನಲ್ಲೇನೋ ಇಟ್ಟುಕೊಂಡು ಮಾತನಾಡುತ್ತಿದ್ದೀರ. ನನಗೆ ನಿಮ್ಮ ಮಾತು ಕೇಳಲು ಇಷ್ಟವಿಲ್ಲ.

ದುಷ್ಯಂತ: (ಅನಸೂಯೆ, ಪ್ರಿಯಂವದೆಯರಿಗೆ) ನಾವು ಕೂಡ ನಿಮ್ಮ ಸಖಿಯ ಬಗ್ಗೆ ಕೇಳಬಹುದೇ?

ಅನಸೂಯೆ: ಆರ್ಯ, ನಿಮ್ಮ ಪ್ರಶ್ನೆ ನಮಗೆ ಅನುಗ್ರಹ.

ದುಷ್ಯಂತ: ಭಗವಾನ್ ಕಾಶ್ಯಪರು ಆಜನ್ಮ ಬ್ರಹ್ಮಚಾರಿಗಳೆಂದು ಎಲ್ಲರಿಗೂ ತಿಳಿದಿದೆ. ತಮ್ಮ ಸಖಿ ಹೇಗೆ ಅವರ ಮಗಳಾದಳು?

ಅನಸೂಯೆ: ಕೇಳಿ. ಮಹಾಪ್ರಭಾವಿಯಾದ ಗೋತ್ರಪ್ರವರ್ತಕನಾದ ಕೌಶಿಕನೆಂಬ ರಾಜರ್ಷಿಯ ಬಗ್ಗೆ ಗೊತ್ತಲ್ಲವೇ?

ದುಷ್ಯಂತ:  ಹೌದು. ಕೇಳಿದ್ದೇನೆ.

ಅನಸೂಯೆ: ನಮ್ಮ ಪ್ರಿಯಸಖಿ ಅವರ ಮಗಳು. ಅವರಿಂದ ತಿರಸ್ಕರಿಸಲ್ಪಟ್ಟ ಇವಳನ್ನು ಬೆಳಸಿದ್ದರಿಂದ ಕಣ್ವರು ಇವಳ ತಂದೆ.

ದುಷ್ಯಂತ: ತಿರಸ್ಕರಿಸಲ್ಪಟ್ಟಳು ಎಂಬ ಪದ ನನಗೆ ಕುತೂಹಲವನ್ನುಂಟು ಮಾಡುತ್ತಿದೆ. ವಿವರವಾಗಿ ತಿಳಿಯಬೇಕೆನಿಸುತ್ತಿದೆ.

ಅನಸೂಯೆ: ಕೇಳಿ. ಹಿಂದೆ ಆ ರಾಜರ್ಷಿ ತಪಸ್ಸು ಮಾಡುತ್ತಿರಬೇಕಾದರೆ ದೇವತೆಗಳು ಆ ತಪಸ್ಸಿಗೆ ವಿಘ್ನ ತರಲು ಮೇನಕೆ ಎನ್ನುವ ಅಪ್ಸರೆಯನ್ನು ಕಳುಹಿಸಿದರು.

ದುಷ್ಯಂತ: ದೇವತೆಗಳಿಗೆ ತಪಸ್ಸಿನ ಬಗ್ಗೆ ಭಯವಿದ್ದೇ ಇದೆ.

ಅನಸೂಯೆ: ಆಗ ವಸಂತ ಸಮಯ. ಆಗ ಕೌಶಿಕರು ಮೇನಕೆಯ ಉನ್ಮಾದರೂಪವನ್ನು ನೋಡಿ.....
(ಲಜ್ಜೆಯಿಂದ ನಿಲ್ಲಿಸುತ್ತಾಳೆ)

ದುಷ್ಯಂತ: ತಿಳಿಯಿತು ಬಿಡಿ. ನಿಮ್ಮ ಸಖಿ ಅಪ್ಸರೆಯ ಮಗಳೇ ಸರಿ.

ಅನಸೂಯೆ: ಹಾ?

ದುಷ್ಯಂತ: ಭೂಮಿಯೊಳಗಿಂದ ಮಿಂಚು ಹೊರಕ್ಕೆ  ಬರಲು ಸಾಧ್ಯವಿಲ್ಲ. ಮಾನುಷಿಯರಿಗೆ ಇಂತಹ ಸೌಂದರ್ಯವಿರುವ ಸಂಭವವೆಲ್ಲಿ?

(ಶಕುಂತಲೆ ತಲೆ ತಗ್ಗಿಸಿರುತ್ತಾಳೆ)

ದುಷ್ಯಂತ: (ಸ್ವಗತ) ಹಾಗಾದರೆ ನನ್ನ ಮನೋರಥಕ್ಕೆ ಅವಕಾಶವಿದೆ. ಆದರೂ ಇವಳ ಸಖಿಯರ ಪರಿಹಾಸವಾದ ವರಪ್ರಾರ್ಥನೆಯನ್ನು ಕೇಳಿ ನನ್ನ ಮನಸ್ಸು ಕಾತರವಾಗಿದೆ.

ಪ್ರಿಯಂವದೆ: (ಶಕುಂತಲೆಯ ಕಡೆ ಮುಗುಳ್ನಗೆಯಿಂದ ನೋಡಿ ನಂತರ ದುಷ್ಯಂತನಿಗೆ) ನೀವೇನೋ ಹೇಳಬೇಕಿಂದಿರುವಂತಿದೆ...
(ಶಕುಂತಲೆ ಅವಳ ಕಡೆ ಬೆರಳು ತೋರಿಸಿ ಕೋಪವನ್ನು ನಟಿಸುತ್ತಾಳೆ)

ದುಷ್ಯಂತ: ಸರಿಯಾಗಿ ಊಹಿಸಿದಿರಿ. ನಮಗೆ ಈ ಸಚ್ಚರಿತರ ಬಗ್ಗೆ ಇನ್ನೂ ಕೇಳುವಾಸೆ.

ಪ್ರಿಯಂವದೆ: ಸಂದೇಹ ಬೇಡ. ತಪಸ್ವಿಗಳನ್ನು ಏನು ಬೇಕಾದರೂ ಕೇಳಬಹುದು.

ದುಷ್ಯಂತ: ನಿಮ್ಮ ಸ್ನೇಹಿತೆಯ ಬಗ್ಗೆಯೇ ಕೇಳಬೇಕೆಂದಿದ್ದೇನೆ! ಇವರ ಆಶ್ರಮವ್ರತ ಮದುವೆಯಾಗುವವರೆಗೆ ಮಾತ್ರವೋ ಅಥವಾ ತಪಸ್ವಿನಿಯಾಗಿ ಆಶ್ರಮದಲ್ಲೇ ಇರುವರೋ?

ಪ್ರಿಯಂವದೆ: ಆರ್ಯ, ನಾವು ಧರ್ಮಾಚರಣೆಯಲ್ಲಿ ಸ್ವತಂತ್ರರಲ್ಲ. ಕುಲಪತಿಗಳಿಗೆ ಇವಳನ್ನು ಅನುರೂಪನಾದ ವರನಿಗೆ ಕೊಟ್ಟು ಮದುವೆ ಮಾಡಬೇಕೆಂಬ ಸಂಕಲ್ಪವಿದೆ.

ದುಷ್ಯಂತ: (ಸ್ವಗತ) ಹಾಗಾದರೆ ಇದು ದೂರದ ಆಸೆಯೇನಲ್ಲ. ಹೃದಯವೇ ನಿನ್ನ ಅಭಿಲಾಷೆ ಸರಿಯಾಗಿಯೇ ಇದೆ. ಸಂದೇಹ ನಿವಾರಣೆಯಾಯಿತು. ನೀನು ಅಗ್ನಿಯೆಂದು ತಿಳಿದದ್ದು ಈಗ ಇದು ಸ್ಪರ್ಶಿಸಬಹುದಾದ ರತ್ನವೆಂದು ತಿಳಿಯಿತು.

ಶಕುಂತಲೆ: (ಕೋಪವನ್ನು ನಟಿಸಿ) ಅನಸೂಯೆ, ನಾನು ಹೊರಡುತ್ತೇನೆ.

ಅನಸೂಯೆ: ಏಕೆ?

ಶಕುಂತಲೆ: ಹೀಗೆ ಅಸಂಬದ್ಧವಾಗಿ ಪ್ರಲಾಪ ಮಾಡುತ್ತಿರುವ ಪ್ರಿಯಂವದೆಯ ಬಗ್ಗೆ ಗೌತಮಿಗೆ ಹೇಳಲು.

ಅನಸೂಯೆ: ಶಕುಂತಲೆ, ಅತಿಥಿ ಸತ್ಕಾರವನ್ನು ಬಿಟ್ಟು ಹಾಗೇ ಹೋಗುವುದು ಯುಕ್ತವಲ್ಲ.

(ಶಕುಂತಲೆ ಅವಳ ಮಾತು ಕೇಳದೆ ಹೊರಡುತ್ತಾಳೆ)

ದುಷ್ಯಂತ: (ಅವಳ ಹಿಂದೆಯೇ ಹೋಗಬೇಕೆನ್ನಿಸಿ ನಂತರ ತಡೆದುಕೊಂಡು)
(ಸ್ವಗತ) ಅವಳ ಹಿಂದೆಯೇ ಹೋಗಬೇಕೆನ್ನಿಸಿದರೂ ಹೋಗಲಾಗುತ್ತಿಲ್ಲ. ಕುಳಿತವನು ಏಳದೆಯೇ ಅಲ್ಲಿಗೆ ಹೋಗಿ ಬಂದಂತಿದೆ.

ಪ್ರಿಯಂವದೆ: (ಶಕುಂತಲೆಯನ್ನು ತಡೆಯುತ್ತಾ) ನೀನು ಹೋಗುವುದು ಯುಕ್ತವಲ್ಲ.

ಶಕುಂತಲೆ: (ಹುಬ್ಬು ಗಂಟಿಕ್ಕಿ) ಏಕೆ?

ಪ್ರಿಯಂವದೆ:  ನಿನ್ನ ಎರೆಡು ಗಿಡಗಳಿಗೆ ನಾನು ನೀರು ಹಾಕಿದ್ದೇನೆ. ಆ ಸಾಲವನ್ನು ತೀರಿಸಿ ನೀನು ಹೋಗಬಹುದು.
(ಅವಳನ್ನು ಹಿಂದೆ ತಿರುಗಿಸುತ್ತಾಳೆ)

ದುಷ್ಯಂತ: ನಿಮ್ಮ ಸಖಿ ಗಿಡಗಳಿಗೆ ನೀರು ಹಾಕಿ ಆಗಲೇ ದಣಿದಿದ್ದಾರೆ. ಇವರ ಕೈಗಳು ಕೆಂಪಾಗಿಬಿಟ್ಟಿವೆ. ತೋಳುಗಳು ದಣಿದಿವೆ. ನೀರು ಹಾಕಲು ಬಿಂದಿಗಳನ್ನು ಎತ್ತಿ ಎತ್ತಿ ಏದುಸಿರು ಬರುತ್ತಾ ಎದೆ ಓಲಾಡುತ್ತಿದೆ. ಕಿವಿಯಲ್ಲಿನ ಶಿರೀಷ ಪುಷ್ಪ ಜಾರುವಂತೆ ಬೆವರು ತೊಟ್ಟಿಕ್ಕುತ್ತಿದೆ. ಕೆಲಸ ಮಾಡಿ ಕೆದರಿದ ಕೂದಲನ್ನು ಒಂದು ಕೈಯಲ್ಲಿ ಬಿಂದಿಗೆ ಹಿಡಿದೇ ಸರಿಮಾಡಿಕೊಳ್ಳುತ್ತಿದ್ದಾರೆ. ಇವರಿಗೆ ಇನ್ನೂ ಶ್ರಮ ಕೊಡುವುದು ಬೇಡ. ಇವರ ಸಾಲವನ್ನು ನಾನು ತೀರಿಸುತ್ತೇನೆ..
(ಉಂಗುರವನ್ನು ಕೊಡಲು ಮುಂದಾಗುತ್ತಾನೆ)
(ಇಬ್ಬರೂ ಆ ಉಂಗುರುದ ಮೇಲಿನ ನಾಮಮುದ್ರೆಯನ್ನು ನೋಡಿ ಆಶ್ಚರ್ಯದಿಂದ ಒಬ್ಬರ ಮುಖ ಒಬ್ಬರು ನೋಡಿಕೊಳ್ಳುತ್ತಾರೆ)

ದುಷ್ಯಂತ: ಅನ್ಯಥಾ ತಿಳಿಯಬೇಡಿ. ರಾಜರೇ ಇದನ್ನು ರಾಜಪುರುಷನಾದ ನನಗೆ ಕೊಟ್ಟಿದ್ದಾರೆ.

ಪ್ರಿಯಂವದೆ: ನಿಮ್ಮ ಬೆರಳಿನಿಂದ ಈ ಉಂಗುರ ಬೇರ್ಪಡುವುದು ಸರಿಯಲ್ಲ. ಆದರೂ ನೀವೇ ಹೇಳಿದಂತೆ ಇವಳು ಈಗ ಋಣಮುಕ್ತೆ.
(ಮಂದಸ್ಮಿತವಾಗಿ)
ಹೇ ಶಕುಂತಲೆ ಈ ಆರ್ಯರ ದೆಸೆಯಿಂದ, ಅಥವಾ ಮಹಾರಾಜರಿಂದ, ಈಗ ನೀನು ಸಾಲದಿಂದ ಮುಕ್ತೆ. ಈಗ ಬೇಕಾದರೆ ಹೋಗು.

ಶಕುಂತಲೆ: (ಸ್ವಗತ)  ಅದು ಅಷ್ಟು ಸುಲಭವಾಗಿದ್ದರೆ....
(ಕೇಳಿಸುವಂತೆ)
ನನ್ನನ್ನು ಹಿಡಿಯುವುದಕ್ಕಾದರೂ, ಬಿಡುವುದಕ್ಕಾದರೂ ನೀನು ಯಾರು?

ದುಷ್ಯಂತ: (ಶಕುಂತಲೆಯನ್ನು ನೋಡುತ್ತಾ ಸ್ವಗತ)
ನಮ್ಮಂತೆಯೇ ಇವಳಿಗೂ ನನ್ನ ಮೇಲೆ ಮೋಹವಾಗಿದೆಯೇ? ಅಥವಾ ನನ್ನ ಪ್ರಾರ್ಥನೆಗೆ ಅವಕಾಶವಿದೆ. ಇವಳು ನನ್ನ ಜೊತೆ ಮಾತಾಡದಿದ್ದಾರೂ ಇವಳ ಕಿವಿಯೆಲ್ಲಾ ನನ್ನ ಕಡೆಗೇ ಇದೆ. ನನ್ನ ಕಡೆ ನೋಡದಿದ್ದರೂ ಅವಳ ಕಣ್ಣು ಬೇರೆ ಯಾವುದರ ಮೇಲೂ ಇಲ್ಲ.

(ನೇಪಥ್ಯದಲ್ಲಿ)
ತಪಸ್ವಿಗಳೇ, ತಪಸ್ವಿಗಳೇ, ಎಚ್ಚರ! ಆಶ್ರಮದ ಮೃಗಗಳ ರಕ್ಷಣೆಗೆ ಸಿದ್ದರಾಗಿ. ಬೇಟೆಯಾಡಲು ರಾಜ ದುಷ್ಯಂತ ಕಾಡಿಗೆ ಬಂದಿದ್ದಾನೆ. ಅವನ ಕುದುರೆಗಳ ಸಪ್ಪಳದಿಂದ ಎದ್ದ ಧೂಳು ನಮ್ಮ ಒದ್ದೆಯಾದ ವಲ್ಕಲಗಳ ಮೇಲೆ ಕೂತಿದೆ. ಅದು ನಮ್ಮ ಆಶ್ರಮದ ವೃಕ್ಷಗಳ ಮೇಲೆ ಮಿಡತೆಗಳಂತೆ ಆವರಿಸಿದೆ.
ದುಷ್ಯಂತನ ರಥದ ವೇಗದಿಂದ ಭಯಗೊಂಡ ಆನೆ ಹುಚ್ಚಾಗಿ ಓದುತ್ತ ಮರಗಳಿಗೆ ಬಡಿದುಕೊಂಡು ತನ್ನ ಒಂದು ದಂತವನ್ನು ಮುರಿದುಕೊಂಡಿದೆ. ತಪಸ್ಸಿನ ವಿಘ್ನವು ಮೂರ್ತೀಭವಿಸಿದಂತೆ ಅದು ಜಿಂಕೆಗಳನ್ನೆಲ್ಲ ಹೆದರಿಸಿ ರಥಗಳಿಂದ ಭೀತವಾಗಿ ಈ ಧರ್ಮಾರಣ್ಯಕ್ಕೆ ಬರುತ್ತಿದೆ.

(ಸಖಿಯರು, ಶಕುಂತಲ, ರಾಜ ಎಲ್ಲರೂ ಸಂಭ್ರಾನ್ತರಾಗಿ ಆ ಕಡೆ ಕಿವಿ ಕೊಡುತ್ತಾರೆ)

ದುಷ್ಯಂತ: (ಸ್ವಗತ) ಅಯ್ಯೋ ಏನಾಯಿತು!! ನನ್ನನ್ನು ಹುಡುಕಿಕೊಂಡು ನನ್ನ ಪರಿವಾರವೇ ಬಂದಂತಿದೆ. ಇರಲಿ, ಇದನ್ನು ತಡೆಯಲು ನಾನೀಗ ಹೊರಡಬೇಕು.

ಅನಸೂಯೆ ಪ್ರಿಯಂವದೆಯರು: ಆರ್ಯ, ಈ ವೃತ್ತಾಂತದಿಂದ ನಮಗೆ ಹೆದರಿಕೆಯಾಗುತ್ತಿದೆ. ನಮ್ಮನು ನಮ್ಮ ಕುಟೀರದವರೆಗೂ ಬಿಡುತ್ತೀರಾ?

ದುಷ್ಯಂತ: (ಆತುರದಲ್ಲಿ) ಬೇಗ ನಡೆಯಿರಿ. ಆಶ್ರಮಕ್ಕೆ ಯಾವುದೇ ತೊಂದರೆಯಾಗದಂತೆ ಮಾಡುವ ದಾರಿಯಲ್ಲೇ ಹೋಗೋಣ.
(ಎಲ್ಲರೂ ಏಳುತ್ತಾರೆ)

ಅನಸೂಯೆ ಪ್ರಿಯಂವದೆಯರು: ಆರ್ಯ, ನಿಮಗೆ ಈಗ ಅತಿಥಿ ಸತ್ಕಾರ ಮಾಡದೆಯೇ ಮತ್ತೆ ನಿಮ್ಮ ದರ್ಶನದ ಆಕಾಂಕ್ಷಿಗಳಾಗಿದ್ದೇವೆ.

ದುಷ್ಯಂತ: ನಿಮ್ಮ ದರ್ಶನದಿಂದಲೇ ನನಗೆ ಸಂತೋಷವಾಗಿದೆ.

ಶಕುಂತಲೆ:
ಅಯ್ಯೋ ಅನುಸೂಯೇ ನನ್ನ ಕಾಲು ಜಾರಿತು..... ನನ್ನ ಬಟ್ಟೆ ಮುಳ್ಳಿಗೆ ಸಿಕ್ಕಿಕೊಂಡಿತು, ಇರು ಅದನ್ನು ಬಿಡಿಸಿಕೊಳ್ಳುತ್ತೇನೆ...
(ಹೀಗೆ ಹೇಳುತ್ತಾ ದುಷ್ಯಂತನನ್ನು ಮತ್ತೆ ಮತ್ತೆ ನೋಡುತ್ತಲೇ, ತನ್ನ ಸಖಿಯ ಜೊತೆ ವೇದಿಕೆಯಿಂದ ನಿಷ್ಕ್ರಾಂತಳಾಗುತ್ತಾಳೆ)

ದುಷ್ಯಂತ: ನನಗೆ ನಗರಕ್ಕೆ ಹೋಗಲು ಮನಸ್ಸೇ ಇಲ್ಲ. ನನ್ನ ಪರಿವಾರವನ್ನು ಈ ಆಶ್ರಮಕ್ಕೆ ಸಮೀಪದಲ್ಲೇ ಇರುವಂತೆ ಮಾಡುತ್ತೇನೆ. ಈ ಶಕುಂತಲೆಯನ್ನು ಬಿಟ್ಟು ಹೋಗಲು ಸಾಧ್ಯವಾಗುತ್ತಿಲ್ಲ. ರಥ ಎಷ್ಟು ಜೋರಾಗಿ ಮುಂದೆ ಹೋದರೂ ಅದರ ಧ್ವಜ ಹಿಂದೆಯೇ ಉಳಿಯುವಂತೆ ನಾನು ಮುಂದೆ ಹೋಗುತ್ತಿದ್ದರೂ ನನ್ನ ಮನಸ್ಸು ಹಿಂದೆಯೇ ಉಳಿಯುತ್ತಿದೆ...

(ನಿರ್ಗಮಿಸುತ್ತಾನೆ)
(ಪ್ರಥಮ ದೃಶ್ಯ ಮುಗಿದುದು)


No comments:

Post a Comment